ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸಾಂತ್ವನ| ಓಡಾಟ ನಿಲ್ಲಿಸದಿದ್ದರೆ ಅಪಾಯ: ಡಾ.ಸಿ.ಎನ್. ಮಂಜುನಾಥ್

Last Updated 20 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ಎರಡನೇ ಅಲೆಯಲ್ಲಿ ಸೋಂಕು ದೃಢ ಪ್ರಮಾಣ ಶೇ 20ರಷ್ಟು ವರದಿಯಾಗುತ್ತಿದೆ. ಇದರ ಪ್ರಕಾರ ರಾಜ್ಯದಲ್ಲಿ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಸುಮಾರು 1.5 ಕೋಟಿ ಮಂದಿಗೆ ಸೋಂಕು ತಗುಲಿದೆ. ಕಾಯಿಲೆ ತೀವ್ರತೆಯೂ ಜಾಸ್ತಿಯಾಗುತ್ತಿದೆ. ಜನರು ಹೊರಗಡೆ ಓಡಾಡುವುದನ್ನು ನಿಲ್ಲಿಸಬೇಕು.’

‘ಸದ್ಯದ ಪರಿಸ್ಥಿತಿಯಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಬಾರದು. ವಾರಾಂತ್ಯದ ಪ್ರಯಾಣ, ದೇವಸ್ಥಾನಗಳಿಗೆ ಹೋಗುವುದು ಸೇರಿ ಎಲ್ಲ ರೀತಿಯ ಪ್ರಯಾಣ ಮತ್ತು ಓಡಾಟಕ್ಕೆ ಮುಂದಿನ ಕೆಲ ದಿನಗಳು ಕಡಿವಾಣ ಹಾಕಿಕೊಳ್ಳಬೇಕಿದೆ. ಮುಖಗವಸನ್ನು ಕಡ್ಡಾಯವಾಗಿ ಬಾಯಿ, ಮೂಗು ಮುಚ್ಚುವಂತೆ ಧರಿಸಬೇಕು. ಹೆಚ್ಚಿನವರು ಬಟ್ಟೆ ಮುಖಗವಸನ್ನು ಧರಿಸುತ್ತಿದ್ದಾರೆ. ಬಹುತೇಕರು ಅದನ್ನು ಸೋಪಿನ ನೀರಿನಿಂದಪ್ರತಿನಿತ್ಯ ಸ್ವಚ್ಛಪಡಿಸಿಕೊಳ್ಳುತ್ತಿಲ್ಲ. ಇದರಿಂದಲೂ ವೈರಾಣು ತಗುಲುವ ಸಾಧ್ಯತೆ ಇರುತ್ತದೆ. ಹಾಗಾಗಿ, ಪ್ರತಿನಿತ್ಯ ಸ್ವಚ್ಛಗೊಳಿಸಿ, ಬಿಸಿಲಿನಲ್ಲಿ ಸರಿಯಾದ ರೀತಿಯಲ್ಲಿ ಒಣಗಿಸಬೇಕು. ಬಳಿಕ ಇಸ್ತ್ರಿ (ಐರನ್) ಮಾಡಿ, ಬಳಸಬೇಕು.’

‘ಜ್ವರ, ಕೆಮ್ಮು ಸೇರಿಂದತೆ ವಿವಿಧ ಅನಾರೋಗ್ಯ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ದೃಢಪಟ್ಟು, ಲಕ್ಷಣಗಳು ಅಷ್ಟಾಗಿ ಗೋಚರಿಸದಿದ್ದಲ್ಲಿ ನಿಗದಿತ ಅವಧಿಯವರೆಗೆ ಮನೆ ಆರೈಕೆಗೆ ಒಳಗಾಗಬೇಕು. ಸೋಂಕು ದೃಢಪಟ್ಟಲ್ಲಿ ಭಯಕ್ಕೆ ಒಳಗಾಗಬೇಕಿಲ್ಲ. ವೈದ್ಯರನ್ನು ಸಂಪರ್ಕಿಸಿ, ಅಗತ್ಯ ಮಾರ್ಗದರ್ಶನ ಪಡೆದುಕೊಳ್ಳಬೇಕು. ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಪರೀಕ್ಷೆಗೆ ಪಲ್ಸ್‌ ಆಕ್ಸಿಮೀಟರ್ ಇಟ್ಟುಕೊಳ್ಳಬೇಕು. 94 ಅಥವಾ 93ಕ್ಕೆ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಇಳಿದರೆ ತಡ ಮಾಡದೆಯೇ ಆಸ್ಪತ್ರೆಗೆ ಹೋಗಬೇಕು.’

‘ರಕ್ತದಲ್ಲಿನ ಆಮ್ಲಜನಕ ಪ್ರಮಾಣ 70ಕ್ಕೆ ಇಳಿಕೆಯಾದಲ್ಲಿ ಏನು ಮಾಡಲು ಸಾಧ್ಯವಾಗುವುದಿಲ್ಲ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕೊಡಬೇಕು ಎಂದು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಲಸಿಕೆ ಸುರಕ್ಷಿತವಾಗಿದ್ದು, ರಕ್ಷಣೆ ಒದಗಿಸಲಿದೆ. ಕೆಲವರಿಗೆ ಸಣ್ಣ ಪ್ರಮಾಣದಲ್ಲಿ ನೋವು, ಜ್ವರದ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದು ಲಸಿಕೆಯ ಅಡ್ಡ ಪರಿಣಾಮವಲ್ಲ. ಬದಲಾಗಿ ಲಸಿಕೆ ಕಾರ್ಯನಿರ್ವಹಿಸುತ್ತಿರುವುದರ ಪರಿಣಾಮ. ಲಸಿಕೆ ಪಡೆದ ಬಳಿಕ ಸೋಂಕು ತಗುಲಿದಲ್ಲಿ ಅದರ ತೀವ್ರತೆ ಕಡಿಮೆ ಇರುತ್ತದೆ. ಆದರೆ, ಲಸಿಕೆ ಪಡೆದ ಬಳಿಕ ಕೂಡ ಮುಖಗವಸು ಧರಿಸುವಿಕೆ ಸೇರಿದಂತೆ ವಿವಿಧ ನಿಯಮಗಳನ್ನು ಪಾಲಿಸಬೇಕು.’

‘ಬ್ಲಡ್ ಥಿನ್ನರ್ಸ್‌ ತೆಗೆದುಕೊಳ್ಳುವವರು ಕೂಡ ಲಸಿಕೆ ಪಡೆದುಕೊಳ್ಳಬಹುದು. ಒಮ್ಮೆ ಕೋವಿಡ್‌ ಪೀಡಿತರಾದವರಿಗೆ ಮತ್ತೆ ಸೋಂಕು ತಗುಲಿದಲ್ಲಿ ಹೆಚ್ಚಿನ ತೀವ್ರತೆ ಇರಲಿದೆ ಎಂದು ಹೇಳಲಾಗದು. ಅವರಲ್ಲಿನ ರೋಗನಿರೋಧಕ ಶಕ್ತಿ ಆಧರಿಸಿ ಪರಿಣಾಮ ಬೀರುತ್ತದೆ. ಮೇ ಅಥವಾ ಜೂನ್‌ ತಿಂಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರುವ ಸಂಭವವಿದೆ. ಆದರೆ, ಇನ್ನೂ 6ರಿಂದ 9 ತಿಂಗಳು ಮುಖಗವಸು ಧರಿಸುವಿಕೆ ಸೇರಿದಂತೆ ವಿವಿಧ ನಿಯಮಗಳನ್ನು ಪಾಲಿಸಬೇಕು.’

- ಡಾ.ಸಿ.ಎನ್. ಮಂಜುನಾಥ್,ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT