7
ಹಿಂದುತ್ವದ ಭುಜಕೀರ್ತಿಯನ್ನು ಎದ್ದು ಕಾಣುವಂತೆ ಧರಿಸಲು ಮುಂದಾಗಿದೆ ಬಿಜೆಪಿ

ಅವಕಾಶವಾದದಲ್ಲಿ ಹುಟ್ಟಿ ಸತ್ತ ಒಂದು ಮೈತ್ರಿಯ ಕತೆ

ಡಿ.ಉಮಾಪತಿ
Published:
Updated:

ರಾಷ್ಟ್ರವಾದವನ್ನು ಬೋಧಿಸುತ್ತಿದ್ದ ಬಿಜೆಪಿ ಮತ್ತು ಪ್ರತ್ಯೇಕತಾವಾದಕ್ಕೆ ಮಿಡಿದು ಮರುಗುತ್ತಿದ್ದ ಪಿಡಿಪಿ 38 ತಿಂಗಳ ಹಿಂದೆ ಜಮ್ಮು- ಕಾಶ್ಮೀರದಲ್ಲಿ ಕೈಜೋಡಿಸಿ ಸರ್ಕಾರ ರಚಿಸಿದ್ದವು. ಸೈದ್ಧಾಂತಿಕವಾಗಿ ಪರಸ್ಪರ ಕಡು ವಿರೋಧಿಗಳಾಗಿದ್ದ ಈ ಪಕ್ಷಗಳು ರಚಿಸಿದ ಮೈತ್ರಿ ಸರ್ಕಾರ ರಾಜಕೀಯ ಅವಕಾಶವಾದದಲ್ಲಿ ಹುಟ್ಟಿ ಮೊನ್ನೆ ಮೊನ್ನೆ ಅವಕಾಶವಾದದಲ್ಲೇ ಅಸುನೀಗಿತು.

ಪಾಕಿಸ್ತಾನದ ಗಡಿಗೆ ಅಂಟಿಕೊಂಡಂತಿರುವ ಈ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಘೋಷಿಸಲಾಗಿದೆ. ಹಾಗೆ ನೋಡಿದರೆ ರಾಜ್ಯಪಾಲರ ಆಡಳಿತ ಈ ರಾಜ್ಯಕ್ಕೆ ಹೊಸದೇನೂ ಅಲ್ಲ. ಕೇವಲ 15 ದಿನಗಳ ಅಲ್ಪಾವಧಿಯಿಂದ ಆರು ವರ್ಷಗಳ ದೀರ್ಘಾವಧಿಯ ರಾಜ್ಯಪಾಲರ ಆಡಳಿತಗಳನ್ನು ಇಲ್ಲಿನ ಜನ ಕಂಡಿದ್ದಾರೆ.

ಆದರೆ ಪ್ರತಿ ಬಾರಿ ರಾಜ್ಯಪಾಲರ ಆಡಳಿತ ಹೇರಿದ ನಂತರ ಕಣಿವೆ ರಾಜ್ಯದ ಜನಜೀವನ ಬಾಣಲೆಯಿಂದ ಬೆಂಕಿಗೆ ಬಿದ್ದಿರುವುದು ಹೌದು. ಈ ಮಾತು ಈ ಸಲವೂ ನಿಜ. ಅಲ್ಲಿನ ಜನ ಭಾರತದಿಂದ ಇನ್ನಷ್ಟು ದೂರವಾಗುತ್ತಾರೆ. ಜನತಂತ್ರ ವ್ಯವಸ್ಥೆ ಕುರಿತ ನಂಬಿಕೆಗೆ ಮತ್ತಷ್ಟು ಪೆಟ್ಟು ಬೀಳುತ್ತದೆ. ಸಂಸ್ಥೆಗಳು ಶಿಥಿಲಗೊಳ್ಳುತ್ತವೆ. ಈ ಹಿಂದೆ ಕಾಂಗ್ರೆಸ್ ಮಾಡುತ್ತ ಬಂದಿದ್ದ ಪ್ರಯೋಗವನ್ನೇ ಬಿಜೆಪಿ ಕೂಡ ಇಲ್ಲಿ ಮುಂದುವರೆಸಿದೆ. ಕಳೆದ ಎರಡು ದಶಕಗಳಲ್ಲಿ ದೂಳಿನಿಂದ ಎದ್ದು ನಿಂತ ಜನತಂತ್ರ ವ್ಯವಸ್ಥೆ ಪುನಃ ದೊಡ್ಡ ಹಿನ್ನಡೆ ಎದುರಿಸಿದೆ. ಕಾಶ್ಮೀರಿ ಮುಸ್ಲಿಮರು ಮತ್ತು ಜಮ್ಮುವಿನ ಹಿಂದೂಗಳ ನಡುವಣ  ಅವಿಶ್ವಾಸದ ಕಂದಕ ಇನ್ನಷ್ಟು ಹಿರಿದಾಗಿದೆ.

ಮೈತ್ರಿಯಿಂದ ಹಠಾತ್ತನೆ ಹೊರನಡೆದ ಬಿಜೆಪಿಯ ಚರ್ಯೆ ಕಠಿಣ ಒಗಟೇನೂ ಅಲ್ಲ. ರಾಜಕೀಯ ಹಗೆಯೊಂದಿಗೆ ಕೈ ಕಲೆಸುವ ಮೂಲಕ ಬಿಜೆಪಿಯು ಮುಸ್ಲಿಮರೇ ದೊಡ್ಡ ಸಂಖ್ಯೆಯಲ್ಲಿರುವ ದೇಶದ ಏಕೈಕ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಅಧಿಕಾರ ಹಂಚಿಕೊಂಡಿತು. ಪಿಡಿಪಿಯನ್ನು ಬಳಸಿ ಬಿಸಾಡಿದೆ ಬಿಜೆಪಿ. ತಾನೇ ಮೊದಲು ಮೈತ್ರಿ ಮುರಿದು ತನ್ನ ಬೆಂಬಲಿಗ ನೆಲೆಯ ಸದಭಿಪ್ರಾಯ ಗಳಿಸಿದೆ. ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೆಯ ಕಲಮಿನ ಪ್ರಕಾರ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ದಾಗಬೇಕು ಎಂಬ ತನ್ನ ಮೂಲ ಕಾರ್ಯಸೂಚಿಯನ್ನು ಪುನಃ ಮುನ್ನೆಲೆಗೆ ತಂದು ಹಿಂದೂಗಳನ್ನು ಒಲಿಸಿಕೊಳ್ಳಲಿದೆ. 2019ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಪ್ರಬಲ ತೋಳ್ಬಲದ ಏಕೈಕ
ಹಿಂದುತ್ವವಾದಿ ಪಕ್ಷ ಎಂಬ ತನ್ನ ಭುಜಕೀರ್ತಿಗಳನ್ನು ಮರಳಿ ದೇಶದ ಮತದಾರರಿಗೆ ಎದ್ದು ಕಾಣಿಸುವಂತೆ ಧರಿಸತೊಡಗಿದೆ.

2015ರ ಚುನಾವಣೆಗಳಲ್ಲಿ ಹಿಂದೂ ಬಹುಸಂಖ್ಯಾತ ಜಮ್ಮುವಿನ ಎಲ್ಲ 25 ಸೀಟುಗಳನ್ನು ಗುಡಿಸಿ ಗುಡ್ಡೆ ಹಾಕಿಕೊಂಡಿರುವ ಬಿಜೆಪಿ, ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರ ಕಣಿವೆಯಲ್ಲಿ ಠೇವಣಿಯನ್ನೂ ಉಳಿಸಿಕೊಂಡಿಲ್ಲ. ಜಮ್ಮು- ಕಾಶ್ಮೀರದಲ್ಲಿ ಬಿಜೆಪಿ ಹೂಡಿದ ತಂತ್ರ ಒಡೆದು ಆಳುವುದು. ತಾನೇ ಖಂಡಿಸುತ್ತಿದ್ದ ಪ್ರತ್ಯೇಕತಾವಾದಿ ಸಜ್ಜಾದ್ ಲೋನ್ ಜೊತೆ ಕೈಜೋಡಿಸಿತ್ತು. ಜಮ್ಮುವಿನ ಹಿಂದೂಗಳನ್ನು ಕಾಶ್ಮೀರದ ಮುಸ್ಲಿಮರ ವಿರುದ್ಧ ಒಳಗೊಳಗೇ ಎತ್ತಿ ಕಟ್ಟಿತ್ತು. 2015ರಲ್ಲಿ ಪಿಡಿಪಿ- ಬಿಜೆಪಿಯಂತಹ ಉತ್ತರ ಮತ್ತು ದಕ್ಷಿಣ ಧ್ರುವಗಳು ಒಂದಾಗಿ ಸರ್ಕಾರ ರಚಿಸಿದ ನಡೆಯಲ್ಲೇ ವಿಚ್ಛೇದದ ಬೀಜಗಳು ಅಡಗಿದ್ದವು. ಪಿಡಿಪಿ, ಪ್ರತ್ಯೇಕತಾವಾದಿಗಳ ಕುರಿತು ಮೆದು ಧೋರಣೆ ಹೊಂದಿರುವ ಪಕ್ಷವೆಂಬುದು 2015ರಲ್ಲಿ ಮುಚ್ಚುಮರೆಯ ಸಂಗತಿಯೇನೂ ಆಗಿರಲಿಲ್ಲ.

ಚುನಾವಣಾ ಪ್ರಕ್ರಿಯೆಯಿಂದ ಬಹುಕಾಲದಿಂದ ದೂರ ಉಳಿದಿದ್ದ ಕಾಶ್ಮೀರಿಗಳು ಪುನಃ ಮತಗಟ್ಟೆಯತ್ತ ದೊಡ್ಡ ಸಂಖ್ಯೆಯಲ್ಲಿ ತಲೆ ಹಾಕುವಂತೆ ರಾಜಕೀಯ ಸಂವಾದವನ್ನು ಕಟ್ಟಿದ ಕೀರ್ತಿಯ ಗಣನೀಯ ಪಾಲು ಬಿಜೆಪಿಗೆ ಸಲ್ಲಬೇಕು. ಅಷ್ಟೇ ಅಲ್ಲ, ಠೇವಣಿ ಕಳೆದುಕೊಂಡಿದ್ದರೂ ಕಾಶ್ಮೀರ ಕಣಿವೆಯಲ್ಲಿ ಮೊದಲ ಬಾರಿಗೆ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದು ಬಿಜೆಪಿಯ ಸಾಧನೆಯೇ ಸರಿ. ಆದರೆ ಇದೀಗ ತನ್ನ ಈ ಸಾಧನೆ ತಿರುವು ಮುರುವಾಗುವಂತೆ ನಡೆದುಕೊಂಡಿದೆ.

ಬಿಜೆಪಿ ಉದ್ದಂಡ ದಂಡ ಪ್ರಯೋಗಕ್ಕೆ ಮುಂದಾಗಿರುವ ಇಂದಿನ ಸನ್ನಿವೇಶದಲ್ಲಿ ಹಿಂಸೆಯ ಹೊಸ ಹೆದ್ದೆರೆಗಳಿಗೆ ಕಾಶ್ಮೀರ ಸಾಕ್ಷಿಯಾಗುವ ದುಃಸ್ಥಿತಿ ಗೋಚರಿಸಿದೆ. ಸುರಕ್ಷತೆ ಬಿಗಿಯಾಗುತ್ತಿದ್ದಂತೆ, ಪ್ರತ್ಯೇಕತಾವಾದಿಗಳಿಂದ ಅದಕ್ಕೆ ರಕ್ತಸಿಕ್ತ ಪ್ರತಿಕ್ರಿಯೆಯೂ ಭುಗಿಲೇಳುತ್ತ ಬಂದಿರುವುದು ಐತಿಹಾಸಿಕ ವಾಸ್ತವ. ಸ್ಥಳೀಯ ಉಗ್ರವಾದಿಗಳ ಭರ್ತಿ ಪ್ರಕ್ರಿಯೆ ಹೊಸ ಉಮೇದಿನಿಂದ ನಡೆಯಲಿದೆ ಎನ್ನುತ್ತಿವೆ ರಕ್ಷಣಾ ಇಲಾಖೆಯ ಮೂಲಗಳು.

ಸ್ವತಂತ್ರ ಭಾರತದ ಮೊದಲ ಭಯೋತ್ಪಾದನೆ ಸರಣಿಗೆ ಚಾಲನೆ ನೀಡಿದ್ದು ಸ್ವಾತಂತ್ರ್ಯದೊಂದಿಗೇ ಅಂಟಿಕೊಂಡು ಬಂದ ಕಾಶ್ಮೀರ ವಿವಾದ. ಮುಸ್ಲಿಂ ಜನಬಾಹುಳ್ಯದ ಪ್ರದೇಶಗಳ ಆಧಾರದ ಮೇಲೆ ಪಾಕಿಸ್ತಾನವನ್ನು ಪಡೆದರು ಜಿನ್ನಾ. ಈ ಸೂತ್ರದ ಮೇರೆಗೆ ಶೇ 60ರಷ್ಟು ಮುಸಲ್ಮಾನ ಜನಸಂಖ್ಯೆ ಹೊಂದಿದ್ದು ತನ್ನ ಗಡಿಗೆ ಅಂಟಿದಂತಿರುವ ಕಾಶ್ಮೀರ ಇಡಿಯಾಗಿ ತನಗೇ ಸೇರಬೇಕೆಂಬುದು ಪಾಕಿಸ್ತಾನದ ಜಿದ್ದು.

ಬಾಬ್ರಿ ಮಸೀದಿ ಧ್ವಂಸ, ಗುಜರಾತ್ ದಂಗೆಗಳು ಹಾಗೂ ಕಾಶ್ಮೀರದಲ್ಲಿ ಸೇನಾ ಪಡೆಗಳಿಂದ ನಡೆಯುತ್ತಿರುವ ದೌರ್ಜನ್ಯದ ವಿಡಿಯೊಗಳನ್ನು ತೋರಿಸಿ ಮುಸಲ್ಮಾನ ಯುವಕರನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂದು ಸೆರೆ ಸಿಕ್ಕಿರುವ ಭಯೋತ್ಪಾದಕರು ಹೇಳಿರುವುದುಂಟು.

ಭಾರತ ಇಲ್ಲವೇ ಪಾಕಿಸ್ತಾನದ ಜೊತೆ ವಿಲೀನಗೊಳ್ಳುವ ಆಯ್ಕೆಯನ್ನು 1947ರಲ್ಲಿ ಕಾಶ್ಮೀರಕ್ಕೆ ನೀಡಲಾಗಿತ್ತು. ಆದರೆ ಸ್ವತಂತ್ರವಾಗಿ ಉಳಿಯುವುದು ಕಾಶ್ಮೀರದ ಮಹಾರಾಜ ಹರಿಸಿಂಗ್ ಬಯಕೆ ಆಗಿತ್ತು.

ಮಹಾರಾಜನನ್ನು ಮಣಿಸಿ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಹಂಚಿಕೆಯನ್ನು ಹಾಕಿಕೊಂಡಿತ್ತು ಪಾಕಿಸ್ತಾನ. 1947ರ ಅಕ್ಟೋಬರ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಕಾಶ್ಮೀರದ ಮೇಲೆ ದಾಳಿ ನಡೆಸಿತು. ಪಾಕಿಸ್ತಾನ ಸಜ್ಜು ಮಾಡಿ ಕಳಿಸಿದ್ದ ಕ್ರೂರ ಜಿಹಾದಿಗಳು ಕಾಶ್ಮೀರಿಗಳ ಮಾನ ಪ್ರಾಣ ಹರಣ ಮತ್ತು ಆಸ್ತಿಪಾಸ್ತಿ ನಾಶಕ್ಕೆ ತೊಡಗಿದ್ದರು. ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಅವರ ತಾತ ಶೇಖ್ ಅಬ್ದುಲ್ಲಾ ಈ ದಾಳಿಯ ಬಣ್ಣನೆಯನ್ನು ದಾಖಲಿಸಿದ್ದಾರೆ. ‘ಇಸ್ಲಾಮಿನ ಸೇವಕರೆಂದು ನಂಬಿಸಲು ಪಾಕಿಸ್ತಾನದ ಹೆಸರಿನಲ್ಲಿ ಬಂದ ಆಕ್ರಮಣಕಾರರು ನಮ್ಮ ಭೂಮಿಗೆ ಬೆಂಕಿ ಇಟ್ಟರು, ನಮ್ಮ ಮನೆಗಳನ್ನು ಹಳ್ಳಿಗಳನ್ನು ನಾಶ ಮಾಡಿದರು, ನಮ್ಮ ಹೆಣ್ಣುಮಕ್ಕಳ ಮಾನಭಂಗ ಮಾಡಿದರು... ’

ಮಹಾರಾಜ ಹರಿಸಿಂಗ್ ಅಕ್ಟೋಬರ್ 24ರಂದು ಭಾರತದ ನೆರವು ಕೋರಿದರು. ತಮ್ಮ ರಾಜ್ಯವನ್ನು ಭಾರತದೊಂದಿಗೆ ಷರತ್ತುಗಳ ಮೇರೆಗೆ ವಿಲೀನಗೊಳಿಸಲು ತಯಾರಿರುವುದಾಗಿ ಸಾರಿದ್ದರು. ಪ್ರತಿಯಾಗಿ ಸ್ವತಂತ್ರ ಸಂವಿಧಾನ, ಸ್ವಾಯತ್ತತೆ, ವಿಶೇಷ ಸ್ಥಾನಮಾನವನ್ನು (ಸಂವಿಧಾನದ 370ನೆಯ ಕಲಮು) ಭಾರತ ಸರ್ಕಾರ ನೀಡಿತು. ಮಹಾರಾಜನ ನೆರವಿಗೆ ಅಂದು ಭಾರತ ಧಾವಿಸದೆ ಹೋಗಿದ್ದಲ್ಲಿ ಜಮ್ಮು ಕಾಶ್ಮೀರ ರಾಜ್ಯ ಪಾಕಿಸ್ತಾನಕ್ಕೆ ಶರಣಾಗತ ಆಗಿರುತ್ತಿತ್ತು.

ಜಮ್ಮು- ಕಾಶ್ಮೀರದ ಶೇ 60ರಷ್ಟು ಜನಸಂಖ್ಯೆ ಮುಸ್ಲಿಮರದು. ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಪ್ರತಿಪಾದಿಸಿ ಮುಸ್ಲಿಂ ಜನಬಾಹುಳ್ಯದ ಸೀಮೆಗಳನ್ನು ಒಳಗೊಂಡ ಪಾಕಿಸ್ತಾನವನ್ನು ಪಡೆದುಕೊಂಡಿದ್ದರು ಜಿನ್ನಾ. ಈ ಸಿದ್ಧಾಂತದ ಪ್ರಕಾರ ಪಾಕಿಸ್ತಾನಕ್ಕೆ ಅಂಟಿದಂತೆಯೇ ಇರುವ ಮುಸ್ಲಿಂ ಬಾಹುಳ್ಯದ ಜಮ್ಮು-ಕಾಶ್ಮೀರ ಸ್ವಾಭಾವಿಕವಾಗಿ ತನಗೇ ಸೇರಬೇಕಾದ ಭೂಭಾಗ ಎಂಬುದು ಪಾಕಿಸ್ತಾನದ ಅಚಲ ನಂಬಿಕೆ.

ಈ ವಿವಾದಕ್ಕೆ ಕೂಟನೀತಿ ಪರಿಹಾರ ಆರು ದಶಕಗಳ ನಂತರವೂ ಸಿಕ್ಕಿಲ್ಲ. ಉಭಯ ದೇಶಗಳಲ್ಲಿನ ರಾಜಕೀಯ ಮತೀಯವಾದಿ ‘ಗಿಡುಗ’ ಗುಂಪುಗಳು ಭಂಗಗೊಳಿಸಲು ತುದಿಗಾಲಲ್ಲಿ ನಿಂತಿವೆ. ಹೀಗಾಗಿ ಕೊಂಚ ಹಿಂದೆ ಸರಿದು ಕೊಡುಕೊಳುವ ಮೂಲಕ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಲು ಎರಡೂ ದೇಶಗಳು ತಯಾರಿಲ್ಲ.

ಜಮ್ಮು-ಕಾಶ್ಮೀರ ಯಾರಿಗೆ ಸೇರಬೇಕೆಂಬ ಕುರಿತು ಆ ರಾಜ್ಯದಲ್ಲಿ ಜನಮತಗಣನೆ ಜರುಗಲಿ ಎಂಬ ಪಾಕಿಸ್ತಾನದ ವಾದವನ್ನು ಭಾರತ ಪುರಸ್ಕರಿಸಿಲ್ಲ. ಈ ರಾಜ್ಯದಲ್ಲಿ ಈವರೆಗೆ ನಡೆಯುತ್ತ ಬಂದಿರುವ ಚುನಾವಣೆಗಳ ಫಲಿತಾಂಶಗಳು ಭಾರತದೊಂದಿಗೆ ಆಗಿರುವ ವಿಲೀನವನ್ನು ಪುಷ್ಟೀಕರಿಸಿವೆ. ವಿಶ್ವಸಂಸ್ಥೆಯೇ ಇಂತಹ ಜನಮತಗಣನೆ ನಡೆಸಲಿ ಎಂಬ ಪಾಕಿಸ್ತಾನದ ಹಟಮಾರಿತನಕ್ಕೆ ಶಿಮ್ಲಾ ಒಪ್ಪಂದವನ್ನು ಗೌರವಿಸಿ ಎಂಬುದು ಭಾರತದ ಉತ್ತರ. 1972ರ ಶಿಮ್ಲಾ ಒಪ್ಪಂದದ ಪ್ರಕಾರ ಎರಡೂ ರಾಜ್ಯಗಳು ಕಾಶ್ಮೀರ ಸಮಸ್ಯೆಯನ್ನು ಮೂರನೆಯವರ ಹಸ್ತಕ್ಷೇಪ ಇಲ್ಲದೆ ಪರಸ್ಪರ ತಮ್ಮೊಳಗೇ ಬಗೆಹರಿಸಿಕೊಳ್ಳಬೇಕು.

ಪಾಕಿಸ್ತಾನಿ ಸೇನೆ ಮತ್ತು ಆ ದೇಶದ ಐಎಸ್‌ಐ ಎಂಬ ಬೇಹುಗಾರಿಕೆ ಸಂಸ್ಥೆ ಕಾಶ್ಮೀರವನ್ನು ಮರಳಿ ಪಡೆಯುವ ಪ್ರಯತ್ನವನ್ನು ಕೈಬಿಟ್ಟಿಲ್ಲ. ಜಿಹಾದಿಗಳ ರಕ್ತಬೀಜಾಸುರ ಪಡೆಯನ್ನು ತಯಾರು ಮಾಡಿ ಭಾರತದ ಮೈಮೇಲೆ ಸಾವಿರ ಗಾಯಗಳನ್ನು ಮಾಡಿ ಸತತ ರಕ್ತಸ್ರವಿಸುವ ಉದ್ದೇಶ ಈ ಸಂಘಟನೆಗಳದು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಭಯೋತ್ಪಾದನೆ ಸೃಷ್ಟಿಸುವ ದೊಡ್ಡ ಪ್ರಯತ್ನದ ನೆಲೆ-ಸೆಲೆ ಪಾಕಿಸ್ತಾನವೇ. ಕಾಶ್ಮೀರವನ್ನು ‘ಸುಂದರ ಸೆರೆಮನೆ’ ಎಂದು 2004ರಲ್ಲಿ ಅಲ್ಲಿಗೆ ಭೇಟಿ ನೀಡಿದ್ದ ಯುರೋಪಿಯನ್ ಒಕ್ಕೂಟದ ನಿಯೋಗ ಬಣ್ಣಿಸಿತ್ತು.

ಇಸ್ಲಾಮೀ ಬಂಡುಕೋರ ಶಕ್ತಿಗಳನ್ನು ಹತ್ತಿಕ್ಕಲು ಜಮ್ಮು ಕಾಶ್ಮೀರದಲ್ಲಿ ಸೇನೆಯನ್ನು ನಿಯುಕ್ತಿ ಮಾಡಿ ಅದಕ್ಕೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯ ಪ್ರಕಾರ ವಿಶೇಷಾಧಿಕಾರವನ್ನೂ ನೀಡಿತು ಭಾರತ ಸರ್ಕಾರ. ಈ ಅಧಿಕಾರವು ಸ್ಥಳೀಯರ ನಾಗರಿಕ ಹಕ್ಕುಗಳನ್ನು ದಮನ ಮಾಡಿದೆ ಎಂಬ ವ್ಯಾಪಕ ಭಾವನೆ ನೆಲೆಸಿದ್ದು ಕಣಿವೆಯಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣ ಆಗಿದೆ. ಪಾಕಿಸ್ತಾನ ಪರ ಮತ್ತು ಸ್ವತಂತ್ರ ಕಾಶ್ಮೀರದ ಪರ ಜನಪ್ರತಿಭಟನೆಗಳು ಜರುಗಿವೆ.

ಪಂಜಾಬ್, ಈಶಾನ್ಯ ರಾಜ್ಯಗಳಲ್ಲಿ ಭುಗಿಲೆದ್ದ ಪ್ರತ್ಯೇಕತಾವಾದ ದಾರಿ ಮಾಡಿದ ಭಯೋತ್ಪಾದನೆಗಳು ಏಳು ಬೀಳುಗಳನ್ನು ಕಂಡಿವೆ. ಆದರೆ ಗಡಿಯಾಚೆಯಿಂದ ಸತತ ಪುಷ್ಟಿ ಪಡೆಯುತ್ತಿರುವ ಕಾಶ್ಮೀರ ವಿವಾದ ಮತ್ತು ಆನಂತರದ ತೀವ್ರ ಬಲಪಂಥೀಯ ಚಟುವಟಿಕೆಗಳು ಜಿಹಾದಿ ಭಯೋತ್ಪಾದನೆಯು ಜೀವಂತ ಉಳಿಯಲು ನೀರೆರೆದಿವೆ.

ಎರಡೂ ಪಕ್ಷಗಳು ಒಂದನ್ನೊಂದು ತೊರೆದು ತಮ್ಮ ಮೂಲ ಕ್ಷೇತ್ರಗಳಿಗೆ ಮರಳಲು ಹೊಂಚು ಹಾಕುತ್ತಿದ್ದವು. ಈ ಮೇಲಾಟದಲ್ಲಿ ಬಿಜೆಪಿ ಗೆದ್ದಿತು. ಅಧಿಕಾರದ ಆಸೆಯಿಂದ ನಂಟನ್ನು ಇನ್ನಷ್ಟು ಕಾಲ ತಳ್ಳಲು ಮುಂದಾದ ಪಿಡಿಪಿ ಸೋತಿತು. 2019ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಈ ಸಂಬಂಧವನ್ನು ಕಡಿದುಕೊಳ್ಳಲು ಬಯಸಿತ್ತು ಬಿಜೆಪಿ. ಇಲ್ಲವಾದರೆ ಜಮ್ಮುವಿನ ತನ್ನ ಹಿಂದೂ ಮತದಾರರಷ್ಟೇ ಅಲ್ಲದೆ ಇಡೀ ದೇಶದಲ್ಲಿನ ತನ್ನ ‘ಹಿಂದುತ್ವವಾದಿ ಮತಕ್ಷೇತ್ರ’ಕ್ಕೆ ಮುಖ ತೋರಿಸುವಂತಿರಲಿಲ್ಲ.

ಬೌದ್ಧ ಮತಾವಲಂಬಿಗಳೇ ಬಹುಸಂಖ್ಯೆಯಲ್ಲಿರುವ ಲಡಾಖ್‌ನ ಜನರು ಕಾಶ್ಮೀರದೊಂದಿಗೆ ಸೌಹಾರ್ದ ಸಂಬಂಧವನ್ನೇನೂ ಹೊಂದಿಲ್ಲ. ತಮ್ಮ ಮನೆಗಳ ಹೆಣ್ಣುಮಕ್ಕಳನ್ನು ಕಾಶ್ಮೀರದ ಮುಸಲ್ಮಾನ ಪುರುಷರು ಅಪಹರಿಸಿ ಮತಾಂತರಿಸುತ್ತಾರೆ ಎಂಬುದು ಲಡಾಖಿನ ಬೌದ್ಧರ ಬಹುಕಾಲದ ಆತಂಕ. ಲಡಾಖ್‌ ಅನ್ನು ಶ್ರೀನಗರದ ಹಿಡಿತದಿಂದ ಪಾರು ಮಾಡುವ ಬಿಜೆಪಿಯ ಆಶ್ವಾಸನೆ ಈಡೇರುವ ಸೂಚನೆ ಕಾಣುತ್ತಿಲ್ಲ. ಬೌದ್ಧರಲ್ಲಿ ಬಿಜೆಪಿ ಕುರಿತು ಭ್ರಮನಿರಸನ ಹೆಚ್ಚತೊಡಗಿದೆ.

ಜಮ್ಮು- ಕಾಶ್ಮೀರ ನೇರ ದೆಹಲಿಯ ಆಡಳಿತದಡಿ ಬಂದ ನಂತರ ದೇಶದಾದ್ಯಂತ ತನ್ನ ಹಿಂದುತ್ವ ಮತಕ್ಷೇತ್ರದಲ್ಲಿ ಮುಕ್ಕಾಗಿರುವ ತನ್ನ ಅಲ್ಪಸಂಖ್ಯಾತ ವಿರೋಧಿ ಕಾರ್ಯಸೂಚಿಗೆ ಮುಂಬರುವ ದಿನಗಳಲ್ಲಿ ಬಿಜೆಪಿ ಮರುಜೀವ ನೀಡಲಿದೆ. ಪಾಕಿಸ್ತಾನದೊಂದಿಗೆ ಸಣ್ಣಪುಟ್ಟ ಯುದ್ಧಗಳಾದರೆ ಆಶ್ಚರ್ಯಪಡಬೇಕಿಲ್ಲ. ಬಿಜೆಪಿ ಒಂದು ರಾಜಕೀಯ ಪಕ್ಷ. ಇಡೀ ಸನ್ನಿವೇಶವನ್ನು ಚುನಾವಣಾ ಲಾಭಗಳಿಗೆ ಬಳಸಿಕೊ
ಳ್ಳಲು ಕೊಂಚವೂ ಅಳುಕುವುದಿಲ್ಲ. ಬಿಜೆಪಿಯ ಸಹವಾಸ ಮಾಡಿ ಪ್ರತ್ಯೇಕತಾವಾದ ಮತ್ತು ಪ್ರತ್ಯೇಕತಾವಾದಿಗಳ ಸಹಾನುಭೂತಿಯನ್ನು ಕಳೆದುಕೊಂಡಿರುವ ಪಿಡಿಪಿ ನಿರ್ನಾಮದ ತುದಿಗೆ ತಲುಪಿದೆ. ಹೊಸ ಹುಟ್ಟು ಕಂಡುಕೊಳ್ಳುವ ಅಗಾಧ ಸವಾಲು ಎದುರಾಗಿದೆ.

ಹುರಿಯತ್ ನಾಯಕರನ್ನು ಸೆರೆಗೆ ನೂಕುವುದು ನಿಶ್ಚಿತ. ಪಾಕಿಸ್ತಾನ ಮತ್ತು ಪ್ರತ್ಯೇಕತಾವಾದಿಗಳ ಜೊತೆ ಯಾವ ಮಾತುಕತೆಯೂ ಇರುವುದಿಲ್ಲ. ಸಾವುನೋವುಗಳು, ದಮನ ದಬ್ಬಾಳಿಕೆ ಹೆಚ್ಚಲಿದೆ. ಆಗ ಕಾಶ್ಮೀರದ ಜನ ಪುನಃ ತಮ್ಮನ್ನು ನಂಬುವ ದಿನಗಳು ಬಂದಾವು ಎಂಬುದು ಪಿಡಿಪಿ
ನಾಯಕರ ಆಶಾಭಾವ. ದಕ್ಷಿಣ ಕಾಶ್ಮೀರವು ಪಿಡಿಪಿಯ ಭದ್ರ ನೆಲೆ. ಹೊಸ ಹಿಂಸಾತ್ಮಕ ಸಂವತ್ಸರಗಳ ನಂತರ ದಕ್ಷಿಣ ಕಾಶ್ಮೀರ ಭಯೋತ್ಪಾದಕರ ತವರೇ ಆಗಿಹೋಯಿತು. ಗಡಿಯಾಚೆಯಿಂದ ಭಯೋತ್ಪಾದನೆಯನ್ನು ಭಾರತದೊಳಕ್ಕೆ ರಫ್ತು ಮಾಡುತ್ತಿರುವ ಪಾಕಿಸ್ತಾನ, 2015ರ ಬಿಜೆಪಿ-ಪಿಡಿಪಿ ಮೈತ್ರಿಯನ್ನು ಬಹುಕಾಲದ ತನಕ ಅರಗಿಸಿಕೊಂಡಿರಲಿಲ್ಲ. ಇದೀಗ ಅದರ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗಿದೆ.

ಬರಹ ಇಷ್ಟವಾಯಿತೆ?

 • 17

  Happy
 • 2

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !