ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಮರಾಜ್ಯ’ದಲಿ ಚಂದ್ರಶೇಖರನೆಂಬ ಒಬ್ಬ ‘ರಾವಣ’

‘ಮಾಯಾವತಿ ಚಿಕ್ಕಮ್ಮನನ್ನು ಬೆಂಬಲಿಸದಿದ್ದರೆ ಭೀಮ್ ಆರ್ಮಿಗೆ ಅರ್ಥವೇ ಇಲ್ಲ’
Last Updated 16 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ದೇಶದ ಭದ್ರತೆಗೆ ಅಪಾಯಕಾರಿ ಎಂದು ಹಣೆಪಟ್ಟಿ ಹಚ್ಚಿ ಹದಿನೈದು ತಿಂಗಳ ಹಿಂದೆ ಜೈಲಿಗೆ ತಳ್ಳಿದ್ದ ಯುವ ದಲಿತ ತಲೆಯಾಳುವನ್ನು ಉತ್ತರಪ್ರದೇಶ ಸರ್ಕಾರ ಮೊನ್ನೆ ಮಧ್ಯರಾತ್ರಿಯ ನಂತರ ಬಿಡುಗಡೆ ಮಾಡಿತು. ಆತನ ಹೆಸರು ಚಂದ್ರಶೇಖರ ಆಜಾದ್ ಅಲಿಯಾಸ್ ರಾವಣ. ಈತನ ತಮ್ಮನ ಹೆಸರು ಭಗತ್ ಸಿಂಗ್. ಪಶ್ಚಿಮೀ ಉತ್ತರಪ್ರದೇಶದ ಭೀಮ್ ಆರ್ಮಿ- ಭಾರತ್ ಏಕತಾ ಮಿಷನ್ ಎಂಬ ದಲಿತ ಸಂಘಟನೆಯ ಸ್ಥಾಪಕ. ಮಹಾರಾಷ್ಟ್ರದ ಕೋರೆಗಾಂವ್ ಭೀಮಾ ಗಲಭೆಗಳಲ್ಲಿ ದಲಿತರ ವಿರುದ್ಧ ಸವರ್ಣೀಯರನ್ನು ಹುರಿದುಂಬಿಸಿ ಹಿಂಸಾಚಾರವನ್ನು ಹರಿಯಬಿಟ್ಟರೆಂದು ಹಿಂದೂ ಸಂಘಟನೆಗಳ ಮುಖ್ಯಸ್ಥರಾದ ಭಿಡೆ ಗುರೂಜಿ ಮತ್ತು ಮಿಲಿಂದ ಏಕಬೋಟೆ ಎಂಬ ನಾಯಕರ ವಿರುದ್ಧ ಗ್ರಾಮೀಣ ಪುಣೆಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಚಂದ್ರಶೇಖರ ಆಜಾದ್ ಹೆಸರಿನ ಹಳ್ಳಿಗಾಡಿನ ದಲಿತ ಯುವಕನೊಬ್ಬ ದೇಶದ ಭದ್ರತೆಗೆ ಅಪಾಯಕಾರಿ ಎನಿಸುತ್ತಾನೆ. ಜಾಮೀನು, ಕಾರಣ, ವಿಚಾರಣೆ, ಆರೋಪಪಟ್ಟಿ ಯಾವುದರ ಅಗತ್ಯವೂ ಇಲ್ಲದ ಕರಾಳ
ಕಾಯಿದೆಯಡಿ ಆತನನ್ನು ಬಂಧಿಸಿ ಇಡಲಾಗುತ್ತದೆ. ಆದರೆ ಮಹಾರಾಷ್ಟ್ರದ ತಲೆಯಾಳುಗಳ ಕೂದಲೂ ಕೊಂಕುವುದಿಲ್ಲ. ಕಾನೂನು ಕಾಯಿದೆಯ ಮಜಬೂತಾದ ಉದ್ದುದ್ದ ಬಾಹುಗಳು ಇವರ ಮುಂದೆ ಸೋತು ಜೋತು ಬೀಳುತ್ತವೆ.

ಚಂದ್ರಶೇಖರ್ ಬಿಡುಗಡೆಗೆ ಆಗ್ರಹಿಸಿ ಮಾನವ ಹಕ್ಕು ಮತ್ತು ದಲಿತ– ಪ್ರಗತಿಪರ ಸಂಘಟನೆಗಳು ಈ ಹಿಂದೆ ಸರ್ಕಾರದ ಮೇಲೆ ಒತ್ತಡ ಹೇರಿದ್ದುಂಟು. ಆದರೆ ಯೋಗಿ ನೇತೃತ್ವದ ಸರ್ಕಾರ ಜಗ್ಗಿರಲಿಲ್ಲ. ಈಗ ಹಠಾತ್ತನೆ ಮನಸು ಬದಲಾಯಿಸಿದ್ದಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ಆಜಾದ್ ಅವರಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಆತ ಜೈಲಿನಿಂದ ಹೊರಬರುವುದು ಉತ್ತರಪ್ರದೇಶ ಸರ್ಕಾರಕ್ಕೆ ಸಮ್ಮತವಿರಲಿಲ್ಲ. ಹೀಗಾಗಿ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಿತು. ಈ ಬಂಧನ ಕುರಿತು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಸುವ ವಿಶ್ವಾಸ ಯೋಗಿ ನೇತೃತ್ವದ ಸರ್ಕಾರಕ್ಕೆ ಇಲ್ಲ. ಕಪಾಳಮೋಕ್ಷ ಆದೀತೆಂಬ ಆತಂಕದಿಂದ ಆತನ ಬಿಡುಗಡೆಗೆ ಮುಂದಾಯಿತು. ಮಾಯಾವತಿ ಮತ್ತು ಆಜಾದ್ ನಡುವೆ ಆಳದ ವೈಮನಸ್ಯವೊಂದು ಮತ್ತೆ ಭಗ್ಗೆಂದು ಹೊತ್ತಿಕೊಂಡರೆ ದಲಿತ ಮತಗಳು ಚೆದುರಿ 2019ರ ಲೋಕಸಭಾ ಚುನಾವಣೆಗಳಲ್ಲಿ ತನಗೆ ಅನುಕೂಲ ಆದೀತು ಎಂಬ ದೂರದ ರಾಜಕೀಯ ಲೆಕ್ಕಾಚಾರವೂ ಈ ಬಿಡುಗಡೆಯ ಹಿಂದೆ ಕೆಲಸ ಮಾಡಿದೆ.

ಜೈಲಿನಿಂದ ಹೊರಬಿದ್ದ ಮರುದಿನ ದೆಹಲಿಯ ಇಂಗ್ಲಿಷ್ ಪತ್ರಿಕೆ ‘ಇಂಡಿಯನ್ ಎಕ್ಸ್‌ಪ್ರೆಸ್’ ಜೊತೆ ನಡೆಸಿದ ಮಾತುಕತೆಯಲ್ಲಿ ಆಜಾದ್ ವೈಚಾರಿಕ ಸ್ಪಷ್ಟತೆ ನಿಗಿನಿಗಿಸಿದೆ.

‘ಕ್ರಾಂತಿಕಾರಿಯೊಬ್ಬ ನೋವುಗಳಿಗೆ ಹೆದರಿದರೆ ಕ್ರಾಂತಿ ಅಸಾಧ್ಯ. ಅವರು ನಮ್ಮ ವಿರುದ್ಧ ನಿಂತಿದ್ದಾರೆ, ನಮ್ಮನ್ನು ಚಿತ್ರಹಿಂಸೆಗೆ ಗುರಿ ಮಾಡುವುದು ಸ್ವಾಭಾವಿಕ. ಆದರೆ ಒಂದು ಮಾತು ಹೇಳಬಯಸುವೆ. ಜೈಲು ಎಂಬುದು ಬದುಕಿದ್ದವರನ್ನು ಜೀವಂತ ಹುಗಿದು ತೆಗೆದು ಮತ್ತೆ ಹುಗಿಯುವ ಮತ್ತೆ ತೆಗೆಯುವ ಕ್ರಿಯೆ. ನಿತ್ಯ ಜರುಗುವ ಸ್ಮಶಾನ. ಅಲ್ಲಿ ಕೊಡುವ ಕೂಳನ್ನು ಪಶುವೂ ತಿನ್ನದು. ನನ್ನ ಹೊಟ್ಟೆ ಮತ್ತು ಮೂತ್ರಜನಕಾಂಗಗಳ ಸಮಸ್ಯೆಗೆ ತುರ್ತು ಚಿಕಿತ್ಸೆ ಬೇಕಿತ್ತು. ಆದರೆ ಔಷಧ ಕೊಟ್ಟದ್ದು ಎಂಟು ತಿಂಗಳ ನಂತರ. ನನ್ನ ಚೈತನ್ಯವನ್ನು ಮುರಿಯುವ ಎಲ್ಲ ತಂತ್ರಗಳು ನಡೆದವು. ಆದರೆ ಕ್ರಾಂತಿಕಾರಿಯೊಬ್ಬನ ಚೈತನ್ಯವನ್ನು ನಷ್ಟಗೊಳಿಸುವುದು ಅಷ್ಟು ಸುಲಭ ಅಲ್ಲ. ಆತ ಅಷ್ಟು ಸಲೀಸಾಗಿ ಸಾಯುವವನಲ್ಲ’.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲೆ ದೌರ್ಜನ್ಯ ವಿರೋಧಿ ಕಾಯಿದೆಯನ್ನು ಸಡಿಲಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ನಡೆದ ದಲಿತ ಆಂದೋಲನಕ್ಕೆ ಬೆಂಬಲವಾಗಿ ಚಂದ್ರಶೇಖರ್ ಜೈಲಿನಲ್ಲಿ ಎಂಟು ದಿನ ಉಪವಾಸ ಇದ್ದರು. ಹಿಂಸೆಯ ದಾರಿ ತುಳಿದವನೆಂದು ತಮಗೆ ಹಣೆಪಟ್ಟಿ ಹಚ್ಚಿದ ಕಾರಣ ಗಾಂಧೀಜಿಯವರ ಉಪವಾಸ ಸತ್ಯಾಗ್ರಹ ಮಾಡಿದರಂತೆ. ಬಲವಂತವಾಗಿ ತಿನ್ನಿಸಿ ಅವರ ಉಪವಾಸ ಮುರಿಯುವ ತಂತ್ರ ಸಾಗಲಿಲ್ಲ. ನಿತ್ಯ ಒಂದು ಹೊತ್ತು ಊಟ ಮಾಡುತ್ತಿದ್ದಾರೆಂದು ಹೊರಗೆ ಸುಳ್ಳು ಪ್ರಚಾರ ಮಾಡಲಾಯಿತು. ಹಾರ್ದಿಕ್ ಪಟೇಲ್ ಮೊನ್ನೆ ಉಪವಾಸ ಮಾಡಿ ಸಾವಿನಂಚಿಗೆ ಸಾಗಿದ್ದರು. ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಗಾಂಧಿ ತತ್ವ ಆಚರಣೆಯಿಂದ ಏನೂ ಸಾಧನೆ ಆಗದು ಎನ್ನುತ್ತಾರೆ.

ಚುನಾವಣಾ ರಾಜಕಾರಣವು ಸೈದ್ಧಾಂತಿಕ ಸಾರವನ್ನು ಕುಂದಿಸಿ ನೀರು ನೀರಾಗಿಸುತ್ತದೆ. ಭ್ರಷ್ಟಗೊಳಿಸುವ ರಾಜಕಾರಣದ ಗುಣ ನನ್ನನ್ನು ಭಯಪಡಿಸುತ್ತದೆ. ರಾಜಕಾರಣದಿಂದ ದೂರ ಉಳಿದರೆ ನನ್ನ ಸಮುದಾಯದ ಒಳಿತಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲೆ. ಖುದ್ದು ಚುನಾವಣೆಗೆ ನಿಲ್ಲಲಾರೆ. ಸರಿಯಾದ ಜನರನ್ನು ಬೆಂಬಲಿಸುತ್ತೇವೆ.

2019ರ ಲೋಕಸಭಾ ಚುನಾವಣೆಗಳಲ್ಲಿ ಮಹಾ ಮೈತ್ರಿಗೇ ನಮ್ಮ ಬೆಂಬಲ. ಮಹಾಮೈತ್ರಿಗಳು ಮಾತ್ರವೇ ಬಿಜೆಪಿಯನ್ನು ಕಿತ್ತು ಹಾಕಬಲ್ಲವು. ಗೆಲ್ಲಲು ಬಿಜೆಪಿ ಕೋಮು ಹಿಂಸಾಚಾರವನ್ನು ಅವಲಂಬಿಸಲಿದೆ. ಸಾಮಾಜಿಕ ಧ್ರುವೀಕ
ರಣ, ಕೋಮು ದಂಗೆಗಳು ಜರುಗಲಿವೆ. ನಮ್ಮ ಜನರನ್ನು ಒಟ್ಟುಗೂಡಿಸಿ ಕೋಮುವಾದಿ ರಾಜಕಾರಣದಿಂದ ದೂರ ಇರಿಸಬೇಕಿದೆ ಎನ್ನುತ್ತಾರೆ.

ಮಾಯಾವತಿ, ಚಂದ್ರಶೇಖರ್ ಮತ್ತು ಭೀಮ್ ಆರ್ಮಿಯನ್ನು ‘ಬಿಜೆಪಿಯ ಬಿ ಟೀಮ್’ ಎಂದು ಜರೆದದ್ದು ಉಂಟು. ಈ ಟೀಕೆಯಿಂದ ಚಂದ್ರಶೇಖರ್ ವಿಚಲಿತರಾಗಿಲ್ಲ. ಕಾಲ ಕೆಳಗಿನ ಹಾದಿಯ ನಿಜನೋಟವನ್ನು ಕಳೆದುಕೊಂಡಿಲ್ಲ. ಬುವಾಜಿಯನ್ನು (ತಂದೆ ಅಥವಾ ತಾಯಿಯ ಸೋದರಿಯನ್ನು ಹಿಂದಿಯಲ್ಲಿ ಬುವಾ ಅಥವಾ ಬುವಾಜಿ ಎಂದು ಕರೆಯುತ್ತಾರೆ) ಬೆಂಬಲಿಸದೆ ಹೋದರೆ ಭೀಮ್ ಆರ್ಮಿಗೆ ಅರ್ಥವೇ ಇಲ್ಲ. ಕಾನ್ಶೀರಾಮ್ ಸಾಹೇಬರೊಂದಿಗೆ ಮತ್ತು ಅವರು ತೀರಿಕೊಂಡ ನಂತರವೂ ಆಕೆ ದಲಿತ ಸಮುದಾಯಗಳಿಗಾಗಿ ಬಹುವಾಗಿ ಕಷ್ಟಪಟ್ಟಿದ್ದಾರೆ.

ಜನರ ನೈತಿಕಸ್ಥೈರ್ಯವನ್ನು ಹೆಚ್ಚಿಸಲು, ಅವರಿಗೆ ಓದು ಬರೆಹ ಕಲಿಸಿ ಸಬಲರಾಗಿಸಲು, ಸಮಾಜವನ್ನು ಕಟ್ಟಲು ಶ್ರಮಿಸುವುದು ಇದೀಗ ನಮ್ಮ ಸರದಿ. ಆಕೆ ಚುನಾವಣಾ ರಾಜಕಾರಣ ಮುಂದುವರೆಸಲಿ. ನಮ್ಮಿಬ್ಬರದು ಒಂದೇ ರಕ್ತ. ಆಕೆಗೆ ನನ್ನ ಮೇಲೆ ದೂರುಗಳಿದ್ದಾವು. ಆದರೆ ನನಗೆ ಯಾವ ಮುನಿಸೂ ಇಲ್ಲ. ನನ್ನ ‘ಬುವಾ’ ಕುರಿತು ಕೆಟ್ಟ ಮಾತಾಡುವ ಸಂಸ್ಕಾರ ನನ್ನದಲ್ಲ. ಬಿಜೆಪಿಯ ಸೋಲು ನಮ್ಮ ಸಮಾನ ಗುರಿ. ಬಿಜೆಪಿಯನ್ನು ಸೋಲಿಸಿದ ನಂತರ ಭೀಮ್ ಆರ್ಮಿ ಮತ್ತು ಬಿ.ಎಸ್.ಪಿ. ಒಂದಾಗಲಿವೆಯೇ ಎಂಬ ಪ್ರಶ್ನೆಗೆ ಅವರ ಉತ್ತರ ಸ್ಪಷ್ಟ- ನನ್ನ ದಾರಿ ಬಹುಜನರದು. ಸರ್ವಜನರ ರಾಜಕಾರಣಕ್ಕೆ (ದಲಿತರಲ್ಲದ ಇತರೆಲ್ಲ ಸಾಮಾನ್ಯ ವರ್ಗಗಳನ್ನು ಒಳಗೊಂಡ ರಾಜಕಾರಣ) ಬುವಾಜಿ ಧುಮುಕಬಹುದು. ಆದರೆ ನನ್ನ ಹಾದಿ ಬದಲಾಗದು.

ತಮ್ಮ ಬಿಡುಗಡೆಗೆ ಮಾಯಾವತಿ ರಾಜಕೀಯ ಒತ್ತಡ ಹೇರಲಿಲ್ಲ ಎಂಬ ಕುರಿತು ಬೇಸರ ಇದೆಯೇ ಎಂಬ ಪ್ರಶ್ನೆಯ ಸಿಕ್ಕಿಗೂ ಚಂದ್ರಶೇಖರ್ ಸುಲಭವಾಗಿ ಬೀಳುವವರಲ್ಲ- ‘ಸಾಮಾಜಿಕ ಒತ್ತಡವನ್ನು ಮಾತ್ರವೇ ನಾನು ಬಲ್ಲೆ. ರಾಜಕೀಯ ಒತ್ತಡ ನನಗೆ ಗೊತ್ತಿಲ್ಲ’. ಒಂದು ವೇಳೆ ಮಾಯಾವತಿಯವರು ವಿರೋಧಪಕ್ಷಗಳ ಮೈತ್ರಿಕೂಟ ಸೇರದಿದ್ದರೆ? ‘ಸೇರುವಂತೆ ಒತ್ತಾಯ ಹೇರುತ್ತೇವೆ. ದೇಶದಾದ್ಯಂತ ರ್‍ಯಾಲಿಗಳನ್ನು ನಡೆಸಿ ಸಾಮಾಜಿಕ ಒತ್ತಡ ತರುತ್ತೇವೆ. ಬಿ.ಎಸ್.ಪಿ. ಕೂಡ ತನ್ನ ಬಲವನ್ನು ಗಳಿಸುವುದು ಅದೇ ಸಮಾಜದಿಂದ ಅಲ್ಲವೇ. ಕೇವಲ ಅಖಿಲೇಶ್ (ಸಮಾಜವಾದಿ ಪಾರ್ಟಿ) ಮತ್ತು ಕಾಂಗ್ರೆಸ್ ಮಾತ್ರವೇ ಬಿಜೆಪಿಯನ್ನು ಸೋಲಿಸುವುದು ಸಾಧ್ಯವಿಲ್ಲ’. ಬಿಜೆಪಿ ಕೂಡ ದಲಿತರನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸಿದೆ, ಅಂಬೇಡ್ಕರ್ ಅವರನ್ನು ಹೊಗಳತೊಡಗಿದೆ ಎಂಬ ಮತ್ತೊಂದು ಪ್ರಶ್ನೆಗೆ ಆಜಾದ್ ಸಮಜಾಯಿಷಿ- ಮೋದಿಯವರ ಲಗಾಮು ನಾಗಪುರದಲ್ಲಿದೆ. ತಾವು ದಲಿತ ಹಿತೈಷಿ ಎಂಬ ಮೋದಿಯವರ ಮಾತು ನಿಜವಲ್ಲ.

ದಲಿತರನ್ನು ನಿರಂತರ ಗುಲಾಮರನ್ನಾಗಿಯೇ ಇಡಬಯಸುವ ವ್ಯವಸ್ಥೆ ಇದೆಯಲ್ಲ, ಅದೇ ನಿಜವಾಗಿಯೂ ಅವರ ಬಹುದೊಡ್ಡ ಶತ್ರು. ಈ ದಿಸೆಯಲ್ಲಿ ಒಂದು ನಿರ್ದಿಷ್ಟ ಸಾಮಾಜಿಕ ಗುಂಪಿನ ದೊಡ್ಡ ಕೊಡುಗೆ ಇದೆ. ಈ ಗುಂಪು ಮನಸ್ಸು ಮಾಡಿದರೆ ಸಮಾಜವನ್ನೇ ಬದಲಿಸಬಲ್ಲದು. ಈ ಗುಂಪಿನ ಮಾತಿಗೆ ಜನ ಬೆಲೆ ಕೊಡುತ್ತಾರೆ, ಧರ್ಮದ ಹೆಸರಿನಲ್ಲಿ ಸಮಾಜವನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಈ ಧಾರ್ಮಿಕ ಕಥಾನಕದ ಬಲೆಗೆ ಬೀಳದೆ ಹೋಗಿದ್ದರೆ, ದಲಿತರಿಗೆ ತಮ್ಮ ಶಕ್ತಿಯ ಅರಿವು ಆಗಿರುತ್ತಿತ್ತು

ಆಂದೋಲನಗಳು ನಾಯಕರನ್ನು ಹುಟ್ಟಿಸುತ್ತವೆ ಅಷ್ಟೇ. ಆದರೆ ನಮ್ಮ ಗುರಿ ಶೋಷಿತ ಜನರಿಗೆ ಶಕ್ತಿ ತುಂಬುವುದು ಎನ್ನುವ ಆಜಾದ್ ಉತ್ತರದಲ್ಲಿ ಹೊಸ ಚಿಂತನೆಯನ್ನು ಗುರುತಿಸಬಹುದು.

ಹದಿನೈದು ತಿಂಗಳ ಹಿಂದೆ ಬಂಧಿಸಿದಾಗ ಸಹಾರನಪುರ ಸೀಮೆಯಲ್ಲಿ ದಲಿತರ ಮೇಲೆ ರಜಪೂತರು ನಡೆಸಿದ ದಾಳಿಯ ವಿರುದ್ಧದ ಆಂದೋಲನದ ನಾಯಕತ್ವವನ್ನು ಚಂದ್ರಶೇಖರ್ ವಹಿಸಿದ್ದರು. ‘ಜೈ ಗ್ರೇಟ್ ರಜಪುತಾನಾ’ ಘೋಷಣೆಗೆ ಪ್ರತಿಯಾಗಿ‘ಜೈ ಗ್ರೇಟ್ ಚಮಾರ್’ ಪ್ರತಿರೋಧ ಎದ್ದಿತ್ತು.

ಸಹಾರನಪುರ ಸನಿಹದ ಶಬ್ಬೀರಪುರ್ ಗ್ರಾಮದ ರಜಪೂತರು ರಾಣಾಪ್ರತಾಪ ಉತ್ಸವದ ಮೆರವಣಿಗೆ ತೆಗೆದಿದ್ದರು. ಮೆರವಣಿಗೆ ದಲಿತ ವಸತಿ ಪ್ರದೇಶಗಳನ್ನು ಹಾಯುತ್ತಲಿತ್ತು. ಕಿವಿಗಡಚಿಕ್ಕುವ ಡಿ.ಜೆ. ಸಂಗೀತದ ಅಬ್ಬರವನ್ನು ತಗ್ಗಿಸಬೇಕೆಂಬ ದಲಿತರ ಮನವಿಗೆ ಬೆಲೆ ಸಿಗಲಿಲ್ಲ. ಪೊಲೀಸರ ಮಧ್ಯಪ್ರವೇಶದ ನಂತರ ಸಂಗೀತದ ಅಬ್ಬರ ಅಡಗಿತು. ಅವಮಾನವೆಂದು ಬಗೆದ ರಜಪೂತರು ತಲವಾರುಗಳು, ಬಂದೂಕುಗಳು, ಕಲ್ಲುಗಳನ್ನು ಹಿಡಿದು ದಲಿತರ ಮನೆಗಳ ಮೇಲೆ ದಾಳಿ ನಡೆಸಿದರು. ಅಂಬೇಡ್ಕರ್ ಪ್ರತಿಮೆ ಭಗ್ನವಾಯಿತು. ಸಂತ ರವಿದಾಸರ ದೇವಾಲಯಕ್ಕೆ ನುಗ್ಗಿ ಪ್ರತಿಮೆ ಉರುಳಿಸಿ ಮೂತ್ರ ವಿಸರ್ಜಿಸಿದರು. ಮನೆಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟರು. ಅಂಬೇಡ್ಕರ್ ಪಟಗಳು, ಪುಸ್ತಕಗಳು, ಒಲೆ ಮೇಲಿನ ಅಡುಗೆ, ಕಾಳು ಕಡ್ಡಿಗಳು, ಮೋಟರ್ ಸೈಕಲ್, ಟೀವಿ ಸೆಟ್ಟುಗಳನ್ನು ಸುಟ್ಟು ಹಾಕಿದರು. ನಗನಾಣ್ಯ ದೋಚಿದರು. ಪಾತ್ರೆ ಪಡಗಗಳನ್ನೂ ಬಿಡದೆ ಕೊಚ್ಚಿ ಹಾಕಿದರು. ಅಡ್ಡ ಬಂದವರ ಮೇಲೆ ತಲವಾರುಗಳ ಬೀಸಿದರು.

ಬಂದೂಕಿನ ಗುಂಡುಗಳು ಸಿಡಿದವು ಕೂಡ. ಮೂಕ ಜಾನುವಾರುಗಳನ್ನೂ ಬಿಡದೆ ಥಳಿಸಿದರು. ಹೆಣ್ಣುಮಕ್ಕಳ ಬಟ್ಟೆ ಹರಿದರು. ಸ್ತನ ಕತ್ತರಿಸುವ ಪ್ರಯತ್ನಗಳಲ್ಲಿ ಗಾಯಗೊಂಡವರ ಗಾಯಗಳು ಇನ್ನೂ ಹಸಿ ಹಸಿ. ಹಲ್ಲೆಕೋರರಿಂದ ರಕ್ಷಿಸಲು ಮಕ್ಕಳನ್ನು ಮಂಚಗಳೊಳಗೆ ಮುಚ್ಚಿಡಲಾಯಿತು. ಮುಖ್ಯಮಂತ್ರಿ ಆದಿತ್ಯನಾಥ ಖುದ್ದು ರಜಪೂತ ಕುಲಕ್ಕೆ ಸೇರಿದವರು. ಹೀಗಾಗಿ ದಾಳಿಕೋರರಿಗೆ ಪೊಲೀಸರ ಸಂಪೂರ್ಣ‘ಸಹಕಾರ’ವಿತ್ತು. ಅಂಬೇಡ್ಕರ್‌ಗೆ ಧಿಕ್ಕಾರ, ಜೈ ಶ್ರೀರಾಮ್, ಜೈ ರಾಣಾ ಪ್ರತಾಪ್ ಘೋಷಣೆಗಳು ಮೊಳಗಿದವು. ದಲಿತ ಹೆಣ್ಣುಮಕ್ಕಳನ್ನು ಬೆದರಿಸಿ ಅವರಿಂದ ‘ಜೈ ಬೋಲೋ ರಾಜಪುತಾನಾ’ ಘೋಷಣೆ ಕೂಗಿಸಲಾಯಿತು. ಕೊಳವೆ ಬಾವಿಗಳ ಹ್ಯಾಂಡ್ ಪಂಪುಗಳನ್ನು ಕಡಿದು ಹಾಕಲಾಯಿತು. ಹಲ್ಲೆಕೋರರ ಮೇಲೆ ಎಫ್.ಐ.ಆರ್. ದಾಖಲಿಸಿ ಕ್ರಮ ಜರುಗಿಸಬೇಕೆಂಬ ದಲಿತರ ಆಗ್ರಹಕ್ಕೆ ಜಿಲ್ಲಾಡಳಿತ ಕಿವುಡಾಯಿತು. ‘ಭೀಮ್ ಆರ್ಮಿ’ ಎಂಬ ಯುವ ದಲಿತ ಸಂಘಟನೆಯ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ರಜಪೂತ– ದಲಿತ ಯುವಕರಿಬ್ಬರು ಮಡಿದರು.

ಅತ್ಯಂತ ಪ್ರಭಾವಿಯಾಗಿ ಹೊರಹೊಮ್ಮಿದರೂ ಅಲ್ಪಾಯು ಆಗಿದ್ದ ಮಹಾರಾಷ್ಟ್ರದ ದಲಿತ ಪ್ಯಾಂಥರ್ ಪಕ್ಷದ ನಂತರ ದಲಿತ ರಾಜಕಾರಣ ಮತ್ತೊಂದು ಆಕ್ರಮಣಕಾರಿ ಸಂಘಟನೆಯನ್ನು ಇತ್ತೀಚೆಗೆ ಭೀಮ್ ಆರ್ಮಿಯ ಹುಟ್ಟಿನ ತನಕ ಕಂಡಿರಲಿಲ್ಲ.

2012 ಮತ್ತು 2017ರ ವಿಧಾನಸಭಾ ಚುನಾವಣೆಗಳು ಮತ್ತು 2014ರ ಲೋಕಸಭಾ ಚುನಾವಣೆಯ ಹೀನಾಯ ಪರಾಭವ ಮಾಯಾವತಿಯವರನ್ನು ಹಣ್ಣು ಮಾಡಿತು. ಹೊಸ ರಾಜಕೀಯ ಸಮೀಕರಣಗಳು ಮತ್ತು ದಲಿತ ಮೋಹಭಂಗದ ಆಚೆಗೆ ಬಿ.ಎಸ್.ಪಿ.ಯನ್ನು ಒಯ್ದು ಮರಳಿ ಕಟ್ಟುವ ಕಠಿಣ ಸವಾಲು ಅವರೆದುರು ನಿಂತಿದೆ. ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಜೊತೆಗಿನ ಮಹಾಮೈತ್ರಿ ಅವರಿಗೆ ಮರು ಜೀವ ನೀಡುವ ಸೂಚನೆಗಳಿವೆ

ಈ ನಡುವೆ ಅಂಬೇಡ್ಕರ್‌‌‌ವಾದಿ ರಾಜಕಾರಣ ಮಾಯಾವತಿಯವರ ಆಚೆಗೂ ವಿಸ್ತರಿಸಿ ಸಾಗತೊಡಗಿದೆ. ಉತ್ತರಪ್ರದೇಶದ ಭೀಮ್ ಆರ್ಮಿಯ ಚಂದ್ರಶೇಖರ ಆಜಾದ್ ಮತ್ತು ಗುಜರಾತಿನ ಅಸ್ಮಿತೆ- ಭೂ ಹೋರಾಟದ ಜಿಗ್ನೇಶ್ ಮೆವಾನಿ ಎಂಬ ಹೊಸ ತಾರೆಗಳು ದಲಿತ ದಿಗಂತದಲ್ಲಿ ಮಿನುಗಿವೆ. ಹಳೆಯ ಬೇರು ಹೊಸ ಚಿಗುರನ್ನು ಪಲ್ಲವಿಸತೊಡಗಿದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT