ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಕ್ಕೆ ಒಂದಾದರೂ ಒಳಿತು ಮಾಡಿ

Last Updated 14 ಜುಲೈ 2018, 19:30 IST
ಅಕ್ಷರ ಗಾತ್ರ

ಮೂರೂವರೆ ದಶಕಗಳ ಹಿಂದಿನ ಕಥೆ. ಬೀದರ್‌ಗೆ ಉಪವಿಭಾಗಾಧಿಕಾರಿಯಾಗಿ (ಎ.ಸಿ) ನೇಮಕವಾದ ಹೊಸತು. ಬೀದರ್‌ ಹೈದರಾಬಾದ್‌ಗೆ ಸಮೀಪ ಎನ್ನುವುದೇ ನನಗೆ ಪ್ರಿಯ ವಿಷಯವಾಗಿತ್ತು. ಅಲ್ಲಿಯವರಿಗೆ ಎಸಿ ‘ಸಾಬ್‌’ ಗೊತ್ತಿತ್ತು. ಎಸಿ ‘ಮೇಮ್‌ ಸಾಬ್‌’ ಗೊತ್ತಿರಲಿಲ್ಲ. ‘ಎಸಿ ಸಾಬ್‌ಜಿ’ಯನ್ನು ನೋಡಲೆಂದೇ ಬಹಳ ಜನ ಬರ್ತಿದ್ದರು.

ಕೆಲಸಕ್ಕೆ ಸೇರಿದ ಒಂದು ವಾರದೊಳಗೆ ನನ್ನ ಕ್ವಾರ್ಟರ್ಸ್‌ ಮುಂದೆ ಜನಜಂಗುಳಿ. ನನಗೋ ಒಳಗೊಳಗೇ ಭಯ. ಎಲ್ಲಿ ಯಾವ ಗಲಾಟೆಗಳಾದವೋ, ಏನು ಜಗಳಗಳಾದವೋ... ಅದ್ಯಾಕೆ ಇಷ್ಟು ಜನರು ಎಂದು. ವಿಷಯವೆಂದರೆ, ಹೆಣ್ಣುಮಗಳೊಬ್ಬಳು ಅಧಿಕಾರಿಯಾಗಿರುವುದನ್ನು ನೋಡಲು ಅಷ್ಟೆಲ್ಲ ಜನ ಬರುತ್ತಿದ್ದರು. ಅವರಿಗೆಲ್ಲ ಅದು ಅಚ್ಚರಿಯ ವಿಷಯವಾಗಿತ್ತು. ಆ ವರೆಗೆ ಬೀದರ್‌ ಜಿಲ್ಲೆಗೆ ಯುವ ಅಧಿಕಾರಿಗಳೇ ಕಾಲಿಟ್ಟಿರಲಿಲ್ಲ. ಹೀಗಿರುವಾಗ, ಯುವ ಮಹಿಳಾ ಅಧಿಕಾರಿ ಬಂದಿರುವುದು ಅವರಲ್ಲಿ ಕುತೂಹಲ ಮೂಡಿಸಿತ್ತು.

ಬೀದರ್‌ ಪುಟ್ಟ ಜಿಲ್ಲೆ. ಐದು ತಾಲ್ಲೂಕುಗಳು. ಒಂದಕ್ಕೂ ರಸ್ತೆ ಸಂಪರ್ಕವಿರಲಿಲ್ಲ. ನನಗೂ ತರಬೇತಿ ಅಷ್ಟಕ್ಕಷ್ಟೆ ಆಗಿತ್ತು. ಕಾರ್ಯಕ್ಷೇತ್ರಕ್ಕೆ ಇಳಿದ ನಂತರ ಕಲಿತಿದ್ದೇ ಹೆಚ್ಚು. ಒಂದು ದಿನ ರಾಠೋಡ್‌ ಎಂಬ ಒಬ್ಬ ತರುಣ ಬಂದು ‘ನಮ್ಮೂರಿಗೆ ನೀವು ಬರಲೇಬೇಕು’ ಎಂದು ಒತ್ತಾಯಿಸಿದ. ಹೆಚ್ಚೂಕಡಿಮೆ ಪ್ರತಿ ಸೋಮವಾರವೂ ಇದು ಪುನರಾವರ್ತನೆಯಾಗುತ್ತಿತ್ತು. ಒಂದಿನವಂತೂ ಅವನ ಹಟ ನೋಡಿ, ಅವನನ್ನು ಹೊರದಬ್ಬಲು ಹೇಳಿದೆ. ನನ್ನ ಕಚೇರಿಯ ಗುಮಾಸ್ತ, ಅಕ್ಷರಶಃ ಅವನನ್ನು ಹೊರಗೆಳೆದು ಹಾಕಿದ್ದ.

ಮನಸಿನೊಳಗೊಂದು ಇರಸುಮುರಸು... ಏನೋ ಮಾಡಬಾರದ್ದು ಮಾಡಿದೆ ಎಂಬಂಥ ಅಳುಕು. ಆ ವಾರದಲ್ಲಿ ನನಗೊಂದು ಪತ್ರ ಬಂದಿತು. ಅದರಲ್ಲಿ, ‘ಬ್ರಿಟಿಷರೇನೋ ಭಾರತ ಬಿಟ್ಟು ಹೋದರು, ಅವರ ಅಧಿಕಾರಶಾಹಿ ದರ್ಪವನ್ನು ನಿಮ್ಮಂಥ ಅಧಿಕಾರಿಗಳಲ್ಲಿಯೇ ಬಿಟ್ಟು ಹೋದರು’ ಎಂಬ ಒಕ್ಕಣಿಕೆ ಇತ್ತು.

ಆ ಪತ್ರ ಬಂದ ವಾರವೇ ಜನಸಂಪರ್ಕ ಸಭೆ ಮಾಡಬೇಕು ಎಂಬ ಸುತ್ತೋಲೆಯೂ ಕರ್ನಾಟಕ ಸರ್ಕಾರದಿಂದ ಬಂದಿತು. ರಾಠೋಡ್‌ನ ಗ್ರಾಮ ವಡಗಾಂವ್‌ ಅನ್ನೇ ಜನ ಸಂಪರ್ಕಕ್ಕಾಗಿ ನಾನು ಆಯ್ಕೆ ಮಾಡಿಕೊಂಡೆ. ಅಲ್ಲಿಗೆ ಹೋಗಿ, ಒಂದಷ್ಟು ಪ್ರಕರಣಗಳನ್ನು ಬಗೆಹರಿಸಿಯೂ ಬಂದೆ.

ಆ ವಾರ ಇನ್ನೊಂದು ಅಂತರ್ದೇಶೀಯ ಪತ್ರ. ‘ನೀವು ನಮ್ಮ ಗ್ರಾಮಕ್ಕೆ ಬಂದಿದ್ದು ಸಂತೋಷವಾಯಿತು. ಜನರ ಸಮಸ್ಯೆಗಳನ್ನರಿಯಲು ಜನರ ಬಳಿಗೇ ಹೋಗಬೇಕು’ ಎಂಬ ಒಕ್ಕಣಿಕೆ ಇತ್ತು.

ಆ ಪತ್ರ ನನ್ನಮೇಲೆ ಬೀರಿದ ಪ್ರಭಾವ ಅಷ್ಟಿಷ್ಟಲ್ಲ. ಇನ್ನುಮುಂದೆ ದಿನಕ್ಕೆ, ವಾರಕ್ಕೆ ಒಂದಾದರೂ ಜನರಿಗೆ ಒಳಿತಾಗುವಂಥ ಕಾರ್ಯಕ್ರಮ ಮಾಡಲೇಬೇಕು ಎಂದು ನಿಶ್ಚಯಿಸಿಕೊಂಡೆ.

ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ. ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಕರ್ತವ್ಯನಿಮಿತ್ತ ನವದೆಹಲಿಗೆ ಪಯಣಿಸಬೇಕಿತ್ತು. ಆಗ ಅತಿಗಣ್ಯರನ್ನು ವಿಮಾನದವರೆಗೆ ತಲುಪಿಸಲು ಒಬ್ಬೊಬ್ಬ ವ್ಯಕ್ತಿಯನ್ನು ನಿಯಮಿಸಲಾಗುತ್ತಿತ್ತು. ಅಂದು ನನ್ನೊಟ್ಟಿಗೆ ಬಂದಿದ್ದು ರಾಮಚಂದ್ರಪ್ಪ ಎಲ್‌.ಜಿ.ಎನ್ನುವ ಯುವಕ. ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಎಂದೊಡನೆ ಆ ಯುವಕನಿಗೆ ತನ್ನೂರಿನ ಸೆಳೆತ ಹುಟ್ಟಿತು. ಆ ಸೆಳೆತವೇ ನನ್ನೊಂದಿಗೆ ಮಾತಿಗಿಳಿಯಲು ಪ್ರೇರೇಪಿಸಿತು ಎನ್ನಬಹುದು.

ರಾಮಚಂದ್ರಪ್ಪ ಚಿಕ್ಕಮಗಳೂರಿನ ಲಕ್ಯ ಗ್ರಾಮಕ್ಕೆ ಸೇರಿದವನು. ‘ಮನೆಯಲ್ಲಿ ಆರ್ಥಿಕ ತೊಂದರೆ ಇದೆ. ಡಿಪ್ಲೊಮಾ ಓದಿಕೊಂಡಿರುವೆ. ಮನೆಯ ಜವಾಬ್ದಾರಿ ಇರುವುದರಿಂದ ಕೆಲಸ ಸಿಗಬಹುದು ಎನ್ನುವ ಕಾರಣಕ್ಕೆ ಹೆಚ್ಚು ಓದದೆ ಡಿಪ್ಲೊಮಾ ಮಾಡಿಕೊಂಡೆ. ಆದರೆ ಓದಿಗೆ ತಕ್ಕ ಕೆಲಸ ಸಿಕ್ಕಿಲ್ಲ. ಆರ್ಥಿಕ ಸಹಾಯವಾಗಲಿ ಎಂದು ಗುತ್ತಿಗೆ ಆಧಾರದ ಮೇಲೆ ಈ ಕೆಲಸಕ್ಕೆ ಸೇರಿಕೊಂಡಿರುವೆ’ ಎಂದು ತಿಳಿಸಿದ.

‘ಓದಿಗೆ ತಕ್ಕ ಕೆಲಸ ಸಿಕ್ಕರೆ ಅನುಕೂಲವಾಗುವುದು’ ಎಂದು ಹೇಳಿದ ಆ ಯುವಕನಲ್ಲಿ ನೆರವು ಕೇಳುವ ಗುಣವೊಂದೇ ಕಾಣಲಿಲ್ಲ. ಜೊತೆಗೆ ಒಂದಷ್ಟು ಆತ್ಮವಿಶ್ವಾಸವೂ... ತನ್ನ ಕೌಶಲಕ್ಕೆ ತಕ್ಕಂತೆ ದುಡಿಯಬೇಕು ಎಂಬ ಹುಕಿಯೂ ಇರುವುದನ್ನು ಗಮನಿಸಿದೆ. ವಿಮಾನ ಹತ್ತಿದ ನನಗೆ ಆ ಯುವಕನ ಮಾತು ಮನಸಿನಲ್ಲಿ ಅಚ್ಚೊತ್ತಿತ್ತು. ಕೆಲಸಗಳ ನಡುವೆಯೇ ಪರಿಚಿತರೊಬ್ಬರಿಗೆ ಫೋನು ಮಾಡಿದೆ. ಆ ಹುಡುಗನ ಬಗ್ಗೆ ಶಿಫಾರಸು ಮಾಡಿದೆ. ಬೆಂಗಳೂರಿನ ಎಚ್‌ಎಂಟಿ ಕಾರ್ಖಾನೆಯಲ್ಲಿ ರಾಮಚಂದ್ರಪ್ಪಗೆ ಕೆಲಸ ದೊರೆಯಿತು. ಮಾಸಿಕ ₹ 800 ಸಂಬಳ ನಿಗದಿಪಡಿಸಲಾಯಿತು. ಉತ್ಸಾಹಿ ರಾಮಚಂದ್ರಪ್ಪ ಕೆಲಸ ಮಾಡುತ್ತಲೇ ಸಂಜೆ ಕಾಲೇಜಿಗೆ ಸೇರಿದ.

ಏನಾದರೂ ಮಾಡಲೇಬೇಕೆಂದು ಛಲ ತೊಟ್ಟಿದ್ದ ಆತ ಎಂಜಿನಿಯರಿಂಗ್ ಮುಗಿಸಿದ. 1992ರಲ್ಲಿ ಭಾರತ್‌ ಎಲೆಕ್ಟ್ರಾನಿಕ್ಸ್‌ ಸಂಸ್ಥೆಯಲ್ಲಿ ಕೆಲಸ ದೊರೆಯಿತು. ತನ್ನ ಕುಟುಂಬವನ್ನು ಬೆಂಗಳೂರಿಗೆ ಕರೆಸಿಕೊಂಡ. ಅವರ ಓದಿಗೂ ಪ್ರೋತ್ಸಾಹ ನೀಡಿದ. ತಮ್ಮಂದಿರಲ್ಲಿ ಒಬ್ಬರು ಫೊರ್ಟಿಸ್‌ನಲ್ಲಿ, ಇನ್ನೊಬ್ಬರು ಭಾರತ್‌ ಎಲೆಕ್ಟ್ರಾನಿಕ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಂಗಿಯ ಮದುವೆಯಾಗಿದೆ. ರಾಮಚಂದ್ರಪ್ಪನ ಇಬ್ಬರು ಹೆಣ್ಣುಮಕ್ಕಳೂ ಓದುತ್ತಿದ್ದಾರೆ. ಒಬ್ಬಳು ಎಂಜಿನಿಯರಿಂಗ್‌ ಇನ್ನೊಬ್ಬಳು ಬಿಕಾಂ. ಆತ ತನ್ನ ಬದುಕು ಕಟ್ಟಿಕೊಂಡಿದ್ದು, ತನ್ನ ಸಾಮರ್ಥ್ಯದಿಂದ. ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡಿದ್ದರಿಂದ.

ಒಮ್ಮೊಮ್ಮೆ ಅನಿಸುತ್ತದೆ... ಅವೊತ್ತು ವಿಮಾನ ಹತ್ತುವಾಗ ಅತಿಗಣ್ಯರನ್ನು ಉಪಚರಿಸುತ್ತಿದ್ದ ಸಾಮಾನ್ಯ ಯುವಕನೊಬ್ಬ ಆ ಕ್ಷಣದಲ್ಲಿ ಅತಿ ವಿಧೇಯನಾಗಿ ಮಾತೇ ಆಡಿರದಿದ್ದಲ್ಲಿ... ನೆರವು ಯಾಚಿಸಿದ್ದನ್ನು ನಾನು ಮರೆತೇ ಹೋಗಿದ್ದಲ್ಲಿ... ಎಚ್‌ಎಂಟಿಯಲ್ಲಿರುವವರೂ ಆ ಸಣ್ಣ ಕೆಲಸ ಕೊಟ್ಟಿರದಿದ್ದಲ್ಲಿ...

ಒಂದು ಸಣ್ಣ ಸಹಾಯ, ಇಡೀ ಕುಟುಂಬವನ್ನೇ ಎತ್ತಿಹಿಡಿಯಿತು. ಅಧಿಕಾರದಲ್ಲಿದ್ದವರು ದಿನಕ್ಕೆ ಒಂದು ಸಹಾಯವನ್ನಾದರೂ, ಒಳ್ಳೆಯ ಕೆಲಸವನ್ನಾದರೂ ಮಾಡಲೇಬೇಕು ಎಂದು ಬಲವಾಗಿ ಎನಿಸಲು ಈ ಪ್ರಕರಣವೂ ಕಾರಣವೇ!

ಅಧಿಕಾರ ಇದ್ದಾಗ ಜನರಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಅಸಹಾಯಕರನ್ನು ಮೇಲೆತ್ತುವ ಕೆಲಸ ಮಾಡಬೇಕು. ನಿಜವಾಗಿಯೂ ಅಗತ್ಯವಿದ್ದವರು ಸಕಾಲಿಕ ಸಹಾಯವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಯುವಜನರೂ ಅಷ್ಟೆ, ವಿಧಿ ಅಥವಾ ಹಣೆಬರಹವನ್ನು ದೂರದೇ, ದೂಷಿಸದೇ ಪ್ರಯತ್ನವನ್ನು ಮಾಡುತ್ತ ಶ್ರಮಪಟ್ಟರೆ ಹೆಜ್ಜೆ ಇಟ್ಟಲ್ಲೆಲ್ಲ ಯಶಸ್ಸಿನ ಮಾರ್ಗವೇ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT