ಶನಿವಾರ, ಜೂನ್ 6, 2020
27 °C
ವೈದ್ಯಲೋಕದ ನೋವು ನಮ್ಮ ಜನರ ಹೃದಯಗಳಿಗೆ ತಲುಪಬೇಕು, ತಟ್ಟಬೇಕು

ವಿಶ್ಲೇಷಣೆ | ಜವರಾಯನ ಕಟ್ಟಿಕೊಂಡವರು!

ಡಾ. ಬಸವರಾಜ ಸಾದರ Updated:

ಅಕ್ಷರ ಗಾತ್ರ : | |

Prajavani

ಹೃದಯದ ತೀವ್ರ ತೊಂದರೆಯಿದ್ದ ರೋಗಿಯನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ತಂದ ಮಾಹಿತಿ ಸಿಕ್ಕ ಕೂಡಲೇ ಆ ಹೆಸರಾಂತ ವೈದ್ಯರು ತಾವಿದ್ದಲ್ಲಿಂದಲೇ ಸಹಾಯಕರಿಗೆ ಫೋನ್ ಮಾಡಿ, ‘ಇಲ್ಲಿ ಒಂದು ತುಂಬಾ ಎಮರ್ಜೆನ್ಸಿ ಕೇಸ್ ಅಟೆಂಡ್ ಮಾಡುವುದಿದೆ, ನೀವು ಆ ವ್ಯಕ್ತಿಯ ಬಗ್ಗೆ ಸರಿಯಾಗಿ ನಿಗಾ ವಹಿಸಿರಿ. ನಾನು ಅರ್ಧ ಗಂಟೆಯೊಳಗೆ ಅಲ್ಲಿಗೆ ಬಂದು ಶಸ್ತ್ರಚಿಕಿತ್ಸೆ ಮಾಡುತ್ತೇನೆ. ನೀವು ಶಸ್ತ್ರಚಿಕಿತ್ಸೆಗೆ ಎಲ್ಲ ತಯಾರಿ ಮಾಡಿಕೊಳ್ಳಿ, ನಿರ್ಲಕ್ಷ್ಯ ಮಾಡಬೇಡಿ’ ಎಂದು ಧೈರ್ಯ ಹೇಳಿ, ತಕ್ಷಣದ ಔಷಧೋಪಚಾರದ ಸೂಚನೆ ಕೊಟ್ಟು, ತಮ್ಮ ಎಮರ್ಜೆನ್ಸಿ ಕೆಲಸದಲ್ಲಿ ತೊಡಗುತ್ತಾರೆ.

ಅಲ್ಲಿದ್ದ ಸಹಾಯಕರು ರೋಗಿಯ ಸಂಬಂಧಿಕರಿಗೆ, ‘ಇವರಿಗೆ ಏನೂ ತೊಂದರೆ ಆಗುವುದಿಲ್ಲ, ಡಾಕ್ಟರ್ ಇನ್ನೇನು ಬಂದುಬಿಡುತ್ತಾರೆ, ನೀವೇನೂ ಚಿಂತಿಸಬೇಡಿ. ಔಷಧಿಗಳನ್ನು ಕೊಡಲು ಹೇಳಿದ್ದಾರೆ. ಬಂದ ಕೂಡಲೇ ಆಪರೇಶನ್ ಮಾಡುತ್ತಾರೆ...’ ಎಂದೆಲ್ಲ ಸಮಾಧಾನ ಹೇಳುತ್ತಾರೆ. ಆದರೂ ಸಂಬಂಧಿಕರಿಗೆ ತಾಳ್ಮೆಯಿಲ್ಲ, ಸಹನೆ ಇಲ್ಲ. ‘ಅವನೆಂಥ ವೈದ್ಯ? ಜೀವ ಹೋಗೋ ಇಂಥ ಹೊತ್ತಲ್ಲೂ ಬೇಗನೇ ಬಂದು ಚಿಕಿತ್ಸೆ ಮಾಡಲಾಗದ ಅವನೇನು ಮನುಷ್ಯನೋ, ರಾಕ್ಷಸನೋ? ಹೆಚ್ಚು ಹಣ ಸಿಗುತ್ತದೆಯೆಂದು ರೊಕ್ಕದ ಮುಖ ನೋಡಿ ಬೇರೆ ಆಸ್ಪತ್ರೆಗೆ ಹೋಗಿದ್ದಾನೆ. ಆತನಿಗೆ ಎಷ್ಟು ಹಣ ಬೇಕು ಅಂತ ಮೊದ್ಲೇ ಹೇಳಿದ್ರೆ ಬಿಸಾಡಿಬಿಡ್ತಿದ್ವಿ. ಇಲ್ಲಿ ಸೇರಿಸಿ ತಪ್ಪು ಮಾಡಿದ್ವಿ, ನಡೀರಿ ಬೇರೆ ಆಸ್ಪತ್ರೆಗೆ ಹೋಗೋಣ...’ ಹೀಗೆಲ್ಲ ಕಿರುಚಾಡುತ್ತ, ಕುರ್ಚಿ, ಟೇಬಲ್, ಹೂಕುಂಡಗಳನ್ನೆಲ್ಲ ಎತ್ತಿ ಬಿಸಾಡುತ್ತ ರಂಪಾಟವನ್ನೇ ಮಾಡುತ್ತಾರೆ.

ಇವೆಲ್ಲ ನಡೆಯುತ್ತಿರುವಾಗಲೇ ಆ ವೈದ್ಯರು ಆಸ್ಪತ್ರೆಯ ಬಾಗಿಲಲ್ಲಿ ಏಕಾಏಕಿ ಪ್ರತ್ಯಕ್ಷರಾಗುತ್ತಾರೆ! ಮನಸ್ಸಿನಲ್ಲಿ ಗಾಢವಾದ ನೋವು, ಯಾತನೆ ತುಂಬಿದ್ದರೂ ಯಾರಲ್ಲೂ ತೋರಿಸಿಕೊಳ್ಳದೆ, ನೇರವಾಗಿ ಡ್ರೆಸ್ಸಿಂಗ್ ರೂಮ್‍ಗೆ ನಡೆದು, ವೈದ್ಯರಕ್ಷಕ ಗೌನು-ಗವಸು ಹಾಕಿಕೊಂಡು, ಆಪರೇಶನ್ ಥಿಯೇಟರ್‌ ಪ್ರವೇಶಿಸಿ, ಅರ್ಧ ತಾಸಿನಲ್ಲಿ ಆ ರೋಗಿಗೆ ಸೂಕ್ತ ಶಸ್ತ್ರಚಿಕಿತ್ಸೆ ಮಾಡಿ ಮುಗಿಸಿ, ಮುಂದಿನ ಎಲ್ಲ ಕ್ರಮಗಳನ್ನೂ ಕೈಗೊಳ್ಳಲು ಸಹಾಯಕರಿಗೆ ತಿಳಿಸಿ, ಬಂದ ವೇಗದಲ್ಲೇ ಆಸ್ಪತ್ರೆಯಿಂದ ಹೊರನಡೆದು ಬಿಡುತ್ತಾರೆ!

ವೈದ್ಯರ ಆ ವರ್ತನೆ ಅಲ್ಲಿದ್ದವರಿಗೆಲ್ಲ ವಿಚಿತ್ರವಾಗಿ ತೋರುತ್ತದೆ. ಆಪ್ತಸಹಾಯಕ ಸತ್ಯವನ್ನು ಬಿಚ್ಚಿಟ್ಟಾಗ, ಎಲ್ಲರ ಕಣ್ಣಲ್ಲೂ ನೀರು! ಎಲ್ಲರ ಬಾಯಲ್ಲೂ ‘ಎಂಥಾ ವೈದ್ಯ ಈ ಪುಣ್ಯಾತ್ಮ! ಏನು ತ್ಯಾಗ ಅವರದು? ತಮ್ಮ ಮಗ ಮತ್ತೊಂದು ಆಸ್ಪತ್ರೆಯಲ್ಲಿ ಸತ್ತಿದ್ದರೂ, ಅದನ್ನು ಲೆಕ್ಕಿಸದೆ ಬಂದು ಶಸ್ತ್ರಚಿಕಿತ್ಸೆ ಮಾಡಿ ರೋಗಿಯನ್ನು ಉಳಿಸಿದರಲ್ಲ! ಈ ಮಹಾತ್ಮ ದೇವರೇ ಅಲ್ಲವೆ?’ ಎಂಬ ಮಾತುಗಳೇ.

ನಿಜಕ್ಕೂ ಪಕ್ಕದ ಆಸ್ಪತ್ರೆಯಲ್ಲಿ ನಡೆದದ್ದು, ಕಾರು ಅಪಘಾತಕ್ಕೆ ಒಳಗಾಗಿದ್ದ ಅವರ ಖಾಸಾ ಮಗನ ಶಸ್ತ್ರಚಿಕಿತ್ಸೆ. ಅದು ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಮಗನ ಶವವನ್ನು ಮನೆಗೆ ಸಾಗಿಸಲು ಸೂಚಿಸಿ, ‘ಈ ಆಸ್ಪತ್ರೆಯಲ್ಲಿರುವ ಪೇಶೆಂಟ್‍ಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿ ಬರುತ್ತೇನೆ, ಅಷ್ಟರಲ್ಲಿ ಶವಸಂಸ್ಕಾರದ ಸಿದ್ಧತೆ ಮಾಡಿ’ ಎಂದು ಹೇಳಿ ಬಂದಿದ್ದರು ಆ ವೈದ್ಯರು! ಅವರ ಈ ತ್ಯಾಗ ಎಂಥ ಕಲ್ಲುಹೃದಯಗಳನ್ನೂ ಕರಗಿಸುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಒಂದು ವಾಸ್ತವ ಘಟನೆಯಿದು. ವೈದ್ಯರು ಕೇವಲ ಹಣಕ್ಕಾಗಿ ವೃತ್ತಿ ಮಾಡುವವರೆಂದು ಸರಳವಾಗಿ ಷರಾ ಬರೆಯುವ ಮನೋಭಾವ ನಮ್ಮ ಜನರಲ್ಲಿ ಬಂದುಬಿಟ್ಟಿದೆ. ಅಂಥವರಿಗೆ ಈ ಘಟನೆ ಕಣ್ಣು ತೆರೆಸಬೇಕು. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಇಲ್ಲಿಯೂ ಕೆಲವು ಧನಪಿಶಾಚಿಗಳು ಇರಬಹುದು. ಆದರೆ ಇಡೀ ವೈದ್ಯಸಂಕುಲವೇ ಹಾಗಿದೆ ಎನ್ನುವುದು ಮಹಾಪರಾಧ. ತಮ್ಮ ಜೀವವನ್ನೇ ಪಣಕ್ಕಿಟ್ಟು ರೋಗಿಗಳ ಶುಶ್ರೂಷೆಗೆ ನಿಲ್ಲುವ ವೈದ್ಯರ ಬದುಕು ಯಾವಾಗಲೂ ಸಾವನ್ನು ಬೆನ್ನ ಹಿಂದೆಯೇ ಕಟ್ಟಿಕೊಂಡಿರುತ್ತದೆ. ಜಗತ್ತಿಗೆಲ್ಲ ಬರಬಾರದ ರೋಗಗಳು ಬಂದಾಗಲೂ, ಪ್ರಾಣಾಪಾಯವನ್ನು ಲೆಕ್ಕಿಸದೇ ಅವರು ಚಿಕಿತ್ಸೆ ಮಾಡುತ್ತಾರೆ. ಇದಕ್ಕೆ ಪ್ರತಿಫಲವಾಗಿ ಅವರಿಗೆ ಹಣ ಸಿಗುವುದೇನೋ ನಿಜ, ಆದರೆ ಆ ಹಣ ಅವರ ಬದುಕನ್ನೇ ಪಣಕ್ಕಿಟ್ಟಿರುತ್ತದೆ.

ಇಡೀ ಜಗತ್ತೀಗ ಕೊರೊನಾ ವೈರಸ್ಸಿನ ಭಯದಿಂದ ತತ್ತರಿಸುತ್ತಿದೆ. ಅದರಿಂದ ರಕ್ಷಣೆ ಪಡೆಯಲು ಜನರೆಲ್ಲರೂ ಮನೆಯೊಳಗೆ ಬೆಚ್ಚಗೆ ಇದ್ದಾರೆ. ಆದರೆ ವೈದ್ಯರು ಮಾತ್ರ ವೈರಾಣುಪೀಡಿತರ ಹತ್ತಿರವೇ ನಿಂತು, ಜೀವದ ಹಂಗು ತೊರೆದು ಆರೈಕೆ ಮಾಡುತ್ತಿದ್ದಾರೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದ್ದರೂ ಜಗತ್ತಿನಾದ್ಯಂತ, ನೂರಾರು ವೈದ್ಯರುಗಳಿಗೇ ಕೊರೊನಾ ವೈರಸ್‌ ತಗುಲಿ ಮರಣ ಹೊಂದಿದ ಘಟನೆಗಳು ವರದಿಯಾಗಿವೆ. ವೈದ್ಯರದು ತೂಗುಕತ್ತಿಯ ಮೇಲೆ ನಿಂತು ಮಾಡುವ ಕೆಲಸವೆಂಬುದು ಇದರಿಂದ ಅರಿವಾಗುತ್ತದೆ. ಸೇವಾ ಮನೋಭಾವದಿಂದ ಮಾತ್ರ ಇದು ಸಾಧ್ಯ.

ಇಷ್ಟೆಲ್ಲ ಹೇಳಲು ಒಂದು ಮುಖ್ಯ ಕಾರಣವಿದೆ. ನನ್ನನ್ನು ಅಣ್ಣನೆಂದೇ ಕರೆಯುವ ಡಾ. ಉಮೇಶ್ ನಾಗಲೋಟಿಮಠ ಎಂಬ ‘ಸೇವಾ ಹೃದಯದ ವೈದ್ಯ’ರೊಬ್ಬರು ಇಂಗ್ಲೆಂಡ್‍ನಲ್ಲಿ ಇ.ಎನ್.ಟಿ. ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಆಸ್ಪತ್ರೆಗೆ ಈಗ ನಿತ್ಯವೂ ಕೊರೊನಾಪೀಡಿತರು ದಾಖಲಾಗುತ್ತಿದ್ದಾರೆ. ಆ ಮನುಷ್ಯ ತಮ್ಮ ಮಡದಿ, ಮಗನನ್ನೂ ಮರೆತು, ಸಂಪೂರ್ಣವಾಗಿ ಕೊರೊನಾಪೀಡಿತ ರೋಗಿಗಳ ಆರೈಕೆಗೆ ನಿಂತಿದ್ದಾರೆ. ಒಂದು ವಾರದ ಹಿಂದೆ ಅವರು ಕಳಿಸಿದ ಧ್ವನಿಸಂದೇಶದಲ್ಲಿ ಏನೋ ಒಂದು ನೋವಿತ್ತು, ನಿರಾಸೆಯಿತ್ತು. ‘ಯಾಕೆ ಡಾಕ್ಟರ್?’ ಎಂದು ಕೇಳಿದಾಗ ಅವರು ಬಿಚ್ಚಿಟ್ಟ ಸತ್ಯ ಇದು-

‘ಸರ್, ಇಂಡಿಯಾನೇ ಇರಲಿ, ಇಂಗ್ಲೆಂಡೇ ಇರಲಿ, ವೈದ್ಯರ ಬಗೆಗೆ ಜನ ಇಟ್ಟುಕೊಂಡಿರುವ ಮನೋಭಾವದಲ್ಲಿ ವ್ಯತ್ಯಾಸವಿಲ್ಲ. ಮಾಧ್ಯಮಗಳಲ್ಲಿ ನಮ್ಮನ್ನು ದೇವರೆಂದು ಹೊಗಳುತ್ತಾರೆ. ಮತ್ತೊಂದೆಡೆ ‘ಇವರೇನು ಪುಗಸಟ್ಟೆ ಕೆಲಸ ಮಾಡುತ್ತಾರೆಯೇ? ಹಣಕ್ಕಾಗಿ ತಾನೇ ಇದನ್ನೆಲ್ಲ ಮಾಡೋದು?’ ಎನ್ನುತ್ತಾರೆ. ವೈದ್ಯಲೋಕ ಹಿಂದೆಂದೂ ಕಂಡರಿಯದ ಭಯಾನಕ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದೆ. ಈ ಪ್ರಾಣಾಂತಿಕ ವೈರಾಣು ಎಲ್ಲಿ ತಮಗೂ ತಮ್ಮ ಮೂಲಕ ಕುಟುಂಬದವರಿಗೂ ತಗುಲುತ್ತದೆಯೋ ಎಂಬ ಭಯ ಅವರನ್ನೂ ಒಳಗೆ ಕಾಡುತ್ತಿದ್ದರೆ, ಹೊರಗಡೆ ಜನರ ಕುಹಕದ ಮಾತುಗಳು! ತಮ್ಮ ಸಂಬಂಧಿಕರಿಗೆ ಬೇಗನೇ ಶುಶ್ರೂಷೆ ಮಾಡಲಿಲ್ಲವೆಂದು ಒಬ್ಬ ರಾಜಕೀಯ ಮುಖಂಡ, ವೈದ್ಯರನ್ನೇ ಹೊಡೆದ ಘಟನೆ ನಡೆದಿದೆ’.

‘ಭಾರತದ ರಾಜ್ಯವೊಂದರಲ್ಲಿ ವೈದ್ಯರು ಮತ್ತು ನರ್ಸುಗಳನ್ನು ಬಾಡಿಗೆಗಿದ್ದ ಮನೆಗಳಿಂದ ಮಾಲೀಕ ಖಾಲಿ ಮಾಡಿಸಿದ್ದಾನಂತೆ. ಅವರಿಂದ ತಮ್ಮ ಮನೆಯವರಿಗೂ ಕೊರೊನಾ ಸೋಂಕು ತಗುಲಿಬಿಡುತ್ತದೆ ಎಂದು ಭಯಪಟ್ಟದ್ದೇ ಇದಕ್ಕೆ ಕಾರಣವಂತೆ! ಇಂಥದ್ದನ್ನೆಲ್ಲನೋಡಿ-ಕೇಳಿ ವೈದ್ಯರ ಮನೋಸ್ಥೈರ್ಯ, ನೆಮ್ಮದಿಯೇ ಹಾಳಾಗಿ ಹೋಗುತ್ತಿವೆ’- ಡಾ. ನಾಗಲೋಟಿಮಠ ಅವರ ಈ ಮಾತುಗಳಲ್ಲಿರುವ ನೋವು ಮತ್ತು ಯಾತನೆ ನಮ್ಮ ಜನರ ಹೃದಯಗಳಿಗೆ ತಲುಪಬೇಕು, ತಟ್ಟಬೇಕು.

ವೈದ್ಯರನ್ನು ದೇವರೆಂದು ಕರೆಯುವುದು, ಬಿಡುವುದು ಅವರವರ ‘ವೈಯಕ್ತಿಕ ಅನುಭವಗಳ ಆಧಾರದ’ ನಿರ್ಧಾರ. ಆದರೆ ಅವರೂ ನಮ್ಮ ಹಾಗೆ ಮನುಷ್ರು ಎಂಬುದನ್ನು ಮೊದಲು ತಿಳಿಯುವುದು ಅತ್ಯಗತ್ಯ. ಕೊರೊನಾ ವಿರುದ್ಧದ ಯುದ್ಧದಲ್ಲಿ ವೈದ್ಯರು ಮೊದಲ ಸಾಲಿನ ಸೈನಿಕರಾಗಿ ನಿಂತು ಹೋರಾಡುತ್ತಿದ್ದಾರೆ. ಅನೇಕ ವೈದ್ಯರಿಗೆ ಸೋಂಕು ತಗುಲಿ ನಿಧನ ಹೊಂದಿದ್ದರೂ ವೈದ್ಯಲೋಕವು ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿಲ್ಲ. ಇಂಥಲ್ಲಿ ಅವರ ನೈತಿಕತೆಯನ್ನು ಪ್ರಶ್ನಿಸುವ ಹಕ್ಕು ಈಗ ಯಾರಿಗೂ ಉಳಿದಿಲ್ಲ. ಇಷ್ಟಾಗಿ, ವೈದ್ಯರೂ ‘ಚರಕ ಸಂಹಿತೆ’ಯ ‘ವಾಮನ ಸ್ಥಾನ’ದಲ್ಲಿರುವ ವೈದ್ಯಸ್ನಾತಕೋಪದೇಶವನ್ನು ಆಗಾಗ ಓದಿಕೊಳ್ಳುವ ಅಗತ್ಯ ಖಂಡಿತ ಇದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು