ಬುಧವಾರ, ಸೆಪ್ಟೆಂಬರ್ 23, 2020
20 °C
ಸಾಮಾಜಿಕ ಜಾಲತಾಣಗಳು ಸ್ವತಂತ್ರವೂ ಅಲ್ಲ ತಟಸ್ಥವೂ ಅಲ್ಲ

ಬಿಜೆಪಿಯ ಫೇಸ್‌ಬುಕ್‌ ಗೆಳೆತನದ ಮರ್ಮ

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

Deccan Herald

ಫೇಸ್‌ಬುಕ್‌ನಿಂದ ಸೋರಿಕೆಯಾದ ದತ್ತಾಂಶ ಅಮೆರಿಕದ ಚುನಾವಣೆಗಳ ಮೇಲೆ ಬೀರಿದ ಪರಿಣಾಮದ ಚರ್ಚೆ ಹೊಸ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿರುವಾಗಲೇ ಭಾರತದಿಂದಲೂ ಅಂಥದ್ದೊಂದು ಸುದ್ದಿ ಹೊರಬಿದ್ದಿದೆ. ಫೇಸ್‌ಬುಕ್ ಪ್ರಜ್ಞಾಪೂರ್ವಕವಾಗಿ ಆಡಳಿತಾರೂಢ ಬಿಜೆಪಿಯ ಪರವಾಗಿ ನಿಲ್ಲುತ್ತಿದೆ ಎಂಬ ತರ್ಕವೊಂದನ್ನು ಪರೊಂಜಯ್ ಗುಹಾ ಥಾಕುರ್ತ ಮತ್ತು ಸಿರಿಲ್ ಸ್ಯಾಮ್ ತಮ್ಮ ಇತ್ತೀಚಿನ ತನಿಖಾ ವರದಿಯಲ್ಲಿ ಮುಂದಿಟ್ಟಿದ್ದಾರೆ. ‘ನ್ಯೂಸ್‌ಕ್ಲಿಕ್ ಡಾಟ್ ಇನ್’ ಜಾಲತಾಣದಲ್ಲಿ ಐದು ಭಾಗದಲ್ಲಿ ಪ್ರಕಟವಾಗಿರುವ ಸರಣಿ ವರದಿಗಳು ಬಿಜೆಪಿ ಮತ್ತು ಫೇಸ್‌ಬುಕ್ ಸಂಬಂಧವನ್ನು ಬಿಡಿಸಿಡಲು ಪ್ರಯತ್ನಿಸಿವೆ.

ಕಾರ್ಪೊರೇಟ್ ಹಗರಣಗಳ ಕುರಿತ ವರದಿಗಳಿಗಾಗಿಯೇ ಪ್ರಸಿದ್ಧರಾಗಿರುವ ಪರೊಂಜಯ್ ಗುಹಾ ಥಾಕುರ್ತ 2 ಜಿ ಹಗರಣ, ನೈಸರ್ಗಿಕ ಅನಿಲದ ಗುತ್ತಿಗೆಯಲ್ಲಿ ಅಂಬಾನಿ ಕುಟುಂಬದ ಪಾತ್ರ ಇತ್ಯಾದಿಗಳ ಬಗ್ಗೆ ವಿವರವಾದ ತನಿಖಾ ವರದಿಗಳನ್ನು ಪ್ರಕಟಿಸಿದವರು. ಸಿರಿಲ್ ಸ್ಯಾಮ್ ಕೂಡಾ ವಾಣಿಜ್ಯ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಪತ್ರಕರ್ತ.

ನವ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರಲ್ಲಿ ಬಿಜೆಪಿ ಆರಂಭದಿಂದಲೂ ಮುಂಚೂಣಿಯಲ್ಲಿದೆ. 2002ರ ಗುಜರಾತ್ ಗಲಭೆಗಳ ನಂತರದ ಅವಧಿಯಲ್ಲಿ ನರೇಂದ್ರ ಮೋದಿಯವರ ಇಮೇಜ್ ಬದಲಾಯಿಸುವ ಪ್ರಕ್ರಿಯೆಯಲ್ಲಿಯೂ ನವ ಮಾಧ್ಯಮಗಳು ಬಹುಮುಖ್ಯ ಪಾತ್ರ ವಹಿಸಿದವು. ಇದರ ಹಿಂದೆ ಕೆಲಸ ಮಾಡಿದ್ದು ಮುಂಬೈ ಮೂಲದ ತಂತ್ರಜ್ಞಾನೋದ್ಯಮಿ ರಾಜೇಶ್ ಜೈನ್. ಮುಕ್ತವಾಗಿ ಲಭ್ಯವಿರುವ ಅನೇಕ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಅವರು ರೂಪಿಸಿದ ಮತದಾರರ ದತ್ತ ಸಂಚಯ 2014ರ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಅಲ್ಲಿಂದಾಚೆಗೆ ಬಿಜೆಪಿ ಸೈಬರ್ ಲೋಕದಲ್ಲಿ ತನ್ನನ್ನು ಸ್ಥಾಪಿಸಿಕೊಂಡ ಬಗೆ ಅನನ್ಯ. ನ್ಯೂಸ್ ಕ್ಲಿಕ್ ಪ್ರಕಟಿಸಿರುವ ವರದಿ ಈ ಎಲ್ಲಾ ವಿಚಾರಗಳನ್ನೂ ವಿವರವಾಗಿ ಚರ್ಚಿಸುತ್ತದೆ.

ಬಿಜೆಪಿ ನವ ಮಾಧ್ಯಮವನ್ನು ಯಶಸ್ವಿಯಾಗಿ ಬಳಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಯಾರೆಲ್ಲಾ ಮತ್ತು ಅದನ್ನು ಹೇಗೆ ಮಾಡಿದರು ಎಂಬುದರ ಕುರಿತು ಈ ವರದಿ ಅನೇಕ ಒಳನೋಟಗಳನ್ನು ನೀಡುತ್ತದೆ. ಭಾರತದ ಚುನಾವಣೆಗಳು ಮತ್ತು ಅದರಲ್ಲಿ ಸಾಮಾಜಿಕ ಮಾಧ್ಯಮಗಳು ವಹಿಸಿದ ಪಾತ್ರವನ್ನು ಗಮನಿಸುತ್ತಾ ಬಂದವರಿಗೆ ಈ ವಿಚಾರಗಳೇನೂ ಹೊಸತಲ್ಲ. ಇವೆಲ್ಲವನ್ನೂ ನಿರ್ದಿಷ್ಟ ಸಂದರ್ಭಗಳ ವಿಶ್ಲೇಷಣೆಯ ಜೊತೆಗೆ ಒಂದೆಡೆ ತಾರ್ಕಿಕವಾಗಿ ಕಟ್ಟಿಕೊಡುವಲ್ಲಿ ಈ ವರದಿ ಯಶಸ್ವಿಯಾಗಿದೆ. ಈ ವಿಶ್ಲೇಷಣೆಯ ಭಾಗದಲ್ಲಿರುವ ಬಹುಮುಖ್ಯ ಅಂಶವೆಂದರೆ ಫೇಸ್‌ಬುಕ್ ಮತ್ತು ಬಿಜೆಪಿ ತಮ್ಮ ಬೆಳವಣಿಗೆಗಳಿಗೆ ಹೇಗೆ ಪರಸ್ಪರ ಪೂರಕವಾಗಿ ಕೆಲಸ ಮಾಡಿದವು ಎಂಬುದು. 2011ರಲ್ಲಿ ಭಾರತದಲ್ಲಿ ತನ್ನ ಕಚೇರಿಯನ್ನು ಆರಂಭಿಸುವ ಫೇಸ್‌ಬುಕ್ ಮುಂದಿನ ಒಂದೆರಡು ವರ್ಷಗಳಲ್ಲಿ ಭಾರತ ವಿಶ್ವದ ಅತಿದೊಡ್ಡ ‘ಫೇಸ್‌ಬುಕ್ ದೇಶ’ಗಳಲ್ಲಿ ಒಂದಾದ್ದರ ಹಿಂದೆ ಬಿಜೆಪಿಯ ತಂತ್ರಗಾರಿಕೆಯ ಪಾತ್ರವೂ ಬಹಳ ದೊಡ್ಡದು ಎಂಬುದನ್ನು ವರದಿ ಪ್ರತಿಪಾದಿಸುತ್ತದೆ.

ಈ ವಿವರಗಳು ಅತ್ಯಂತ ಕುತೂಹಲಕಾರಿಯಾಗಿವೆ. ಬಿಜೆಪಿಯ ಸಾಮಾಜಿಕ ಮಾಧ್ಯಮ ತಂತ್ರ ರೂಪಿಸುತ್ತಿದ್ದವರಿಗೆ ಸ್ವತಃ ಫೇಸ್‌ಬುಕ್‌ನ ತಜ್ಞರೇ ತರಬೇತಿ ನೀಡಿದ್ದರು. ಈ ವಿಷಯವನ್ನು ಫೇಸ್‌ಬುಕ್ ಕೂಡಾ ಅಲ್ಲಗಳೆದಿಲ್ಲ. ಅದು ನೀಡಿರುವ ಸ್ಪಷ್ಟೀಕರಣದಂತೆ ‘ನೀತಿ ನಿರೂಪಕರು, ರಾಜಕಾರಣಿಗಳು, ಮಾಧ್ಯಮಗಳಿಗೆ ತರಬೇತಿ ನೀಡುವುದು ಸಂಸ್ಥೆಯ ನೀತಿಯ ಭಾಗ’. ಆದರೆ ಇದೇ ಫೇಸ್‌ಬುಕ್ ಇತರ ಪಕ್ಷಗಳಿಗೆ ಇದೇ ಬಗೆಯ ತರಬೇತಿ ನೀಡಿರುವ ಯಾವ ವಿವರಗಳನ್ನೂ ನೀಡುವುದಿಲ್ಲ.

ಈಗ ಫೇಸ್‌ಬುಕ್‌ನ ಭಾರತ ಮತ್ತು ದಕ್ಷಿಣ ಏಷ್ಯಾದ ಪಾಲಿಸಿ ಡೈರೆಕ್ಟರ್ ಆಗಿರುವ ಶಿವನಾಥ್ ತುಕ್ರಾಲ್ ಅವರು 2012ರಿಂದ 2014ರ ನಡುವಣ ಅವಧಿಯಲ್ಲಿ ಬಿಜೆಪಿಯ ಜೊತೆ ಸೇರಿ ಕೆಲಸ ಮಾಡುತ್ತಿದ್ದರು ಎಂಬ ಅಂಶವೂ ಈ ವರದಿ ತೆರೆದಿಟ್ಟಿದೆ. ನರೇಂದ್ರ ಮೋದಿಯವರ ಇಮೇಜ್ ಬದಲಾಯಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ ಡಾ. ಹಿರೇನ್ ಜೋಷಿಯವರು ಈ ಅವಧಿಯಲ್ಲಿ ಆರಂಭಿಸಿದ ಹಲವು ವೆಬ್‌ಸೈಟ್‌ಗಳಿಗೆ ನೆರವು ನೀಡಿದ್ದು ಇದೇ ತುಕ್ರಾಲ್. ಇವರು ಫೇಸ್‌ಬುಕ್‌ನ ನೀತಿ ನಿರೂಪಣೆಯ ಸ್ಥಾನಕ್ಕೆ ಏರಿದ ಮೇಲೂ ಮೋದಿಯವರ ಬಲಗೈ ಎಂದು ಗುರುತಿಸಲಾಗುವ ಹಿರೇನ್ ಅವರನ್ನು ನಿಯತವಾಗಿ ಭೇಟಿ ಮಾಡುತ್ತಾರೆ ಎಂಬ ಅಂಶವೂ ಈ ವರದಿಯಲ್ಲಿದೆ.

ಈ ವರದಿಯಲ್ಲಿರುವ ವಿವರಗಳನ್ನು ಒಟ್ಟಂದದಲ್ಲಿ ಗ್ರಹಿಸಿದರೆ ಫೇಸ್‌ಬುಕ್ ಮತ್ತು ಅದರದ್ದೇ ಮಾಲೀಕತ್ವದಲ್ಲಿರುವ ವಾಟ್ಸ್‌ಆ್ಯಪ್‌ಗಳು ಬಿಜೆಪಿ ಮತ್ತು ಸಂಘಪರಿವಾರದ ಬಹುಮುಖ್ಯ ಸಂವಹನ ಸಾಧನಗಳಾಗಿರುವುದಕ್ಕೆ ಬೇರೆಯೇ ಅರ್ಥ ಬರುತ್ತದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮತ್ತು ಬ್ರೆಕ್ಸಿಟ್‌ಗಳಲ್ಲಿ ಬಳಕೆಯಾದದ್ದು ಫೇಸ್‌ಬುಕ್‌ನಿಂದ ಸೋರಿಕೆಯಾದ ವಿವರಗಳು ಮಾತ್ರ. ಒಂದು ವೇಳೆ ಇಂಥದ್ದು ಭಾರತದ ಚುನಾವಣೆಯಲ್ಲಿಯೂ ಸಂಭವಿಸಿದ್ದರೆ ಸ್ವತಃ ಫೇಸ್‌ಬುಕ್ ಒಂದು ಸಂಸ್ಥೆಯಾಗಿ ಬಿಜೆಪಿಯ ಪರವಾಗಿ ನಿಂತಿತ್ತು ಎಂದು ಭಾವಿಸಬೇಕಾಗುತ್ತದೆ. 2014ರ ಚುನಾವಣೆಯಲ್ಲಿ ಇದು ನಿಜವಾಗಿಯೂ ಸಂಭವಿಸಿತು ಎಂದು ಹೇಳುವುದಕ್ಕೆ ಬೇಕಿರುವ ಅಂಶಗಳೇನೂ ಈ ವರದಿಯಲ್ಲಿ ಇಲ್ಲ. ಆದರೆ 2014ರ ನಂತರ ನಡೆದ ಅನೇಕ ಘಟನೆಗಳ ಸಂದರ್ಭದಲ್ಲಿ ಫೇಸ್‌ಬುಕ್ ಆಡಳಿತಾರೂಢರ ಪರವಾಗಿ ನಿಂತಿರುವುದಕ್ಕೆ ಸಾಕ್ಷ್ಯಗಳಿವೆ.

ಈ ವರ್ಷದ ಆಗಸ್ಟ್‌ನಲ್ಲಿ ‘ಕ್ಯಾರವಾನ್’ ಎಂಬ ಮಾಸಪತ್ರಿಕೆಯು ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ತಮ್ಮ ಚುನಾವಣಾ ಪ್ರಮಾಣ ಪತ್ರದಲ್ಲಿ ಆಸ್ತಿ ವಿವರಗಳನ್ನು ತಪ್ಪಾಗಿ ನೀಡಿದ್ದನ್ನು ವಿವರಿಸುವ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಫೇಸ್‌ಬುಕ್ ಜಾಹೀರಾತಿನ ಮೂಲಕ ಹೆಚ್ಚು ಜನರಿಗೆ ತಲುಪಿಸುವ ಪತ್ರಿಕೆಯ ಪ್ರಯತ್ನ ವಿಫಲವಾಗಿತ್ತು. ಫೇಸ್‌ಬುಕ್‌ನ ಶಿಷ್ಟತೆಯನ್ನು ಪಾಲಿಸುವ ಜಾಹೀರಾತುಗಳಿಗೆ ಕೆಲವು ನಿಮಿಷ ಹೆಚ್ಚೆಂದರೆ ಒಂದೆರಡು ಗಂಟೆಯೊಳಗೆ ಪ್ರಕಟಣೆಯ ಅನುಮತಿ ದೊರೆಯುತ್ತದೆ. ಆದರೆ ಈ ವರದಿಗೆ ಪ್ರಕಟಣೆ ಅನುಮತಿ ದೊರೆಯುವ ವೇಳೆಗೆ ಹನ್ನೊಂದು ದಿನಗಳು ಕಳೆದಿದ್ದವು.

2017ರಲ್ಲಿ ರಫೇಲ್ ವ್ಯವಹಾರದ ಕುರಿತು ಪ್ರಕಟಿಸಿದ್ದ ವರದಿಯನ್ನು ಹಂಚಿಕೊಂಡದ್ದಕ್ಕೆ ‘ಜನತಾ ಕಾ ರಿಪೋರ್ಟರ್’‌ನ ಫೇಸ್‌ಬುಕ್ ಪುಟವೂ ಅಮಾನತಾಗಿತ್ತು. ಕೇರಳದ ‘ಇಂಜಿ ಪೆಣ್ಣು’, ಕರ್ನಾಟಕದ ಚೇತನಾ ತೀರ್ಥಹಳ್ಳಿ ಅವರ ಫೇಸ್‌ಬುಕ್ ಖಾತೆಗಳೂ ಇದೇ ಬಗೆಯಲ್ಲಿ ಅಮಾನತಾಗಿದ್ದವು. ಇವರಾರೂ ಅಸಭ್ಯ ಅಥವಾ ಅಶ್ಲೀಲ ಪೋಸ್ಟ್‌ಗಳನ್ನು ಪ್ರಕಟಿಸಿರಲಿಲ್ಲ. ಆದರೆ ನಿರಂತರವಾಗಿ ಆಡಳಿತಾರೂಢರನ್ನು ಮತ್ತು ಸಂಘಪರಿವಾರವನ್ನು ಟೀಕಿಸುವ ಪೋಸ್ಟ್‌ಗಳನ್ನು ಪ್ರಕಟಿಸುತ್ತಿದ್ದರು. ಎನ್‌ಡಿಟಿವಿ ಹಿಂದಿಯ ರವೀಶ್‌ಕುಮಾರ್ ಅವರ ಕಾರ್ಯಕ್ರಮ ಬಹಳ ಜನಪ್ರಿಯ ಆದರೆ ಕೆಲವು ವಿಡಿಯೊಗಳು ಹೆಚ್ಚಿನ ಜನರನ್ನು ತಲುಪದೇ ಇರುವ ಮ್ಯಾಜಿಕ್‌ ಆಗಾಗ ಸಂಭವಿಸುತ್ತಿರುತ್ತದೆ ಎಂದು ಎನ್‌ಡಿಟಿವಿಯ ಪತ್ರಕರ್ತರು ಹೇಳುತ್ತಾರೆ. ಈ ಎಲ್ಲಾ ಆರೋಪಗಳಿಗೆ ಫೇಸ್‌ಬುಕ್ ‘ಇದು ಅಲ್ಗಾರಿದಮ್‌ನ ಲೋಪ’ ಎಂದು ತಿಪ್ಪೆ ಸಾರಿಸುತ್ತದೆ. ಆದರೆ ಈ ‘ಲೋಪ’ ಕೇಂದ್ರದ ಆಡಳಿತಾರೂಢರನ್ನು ಟೀಕಿಸಿದಾಗ ಅಥವಾ ಸಂಘಪರಿವಾರದ ನಿಲುವುಗಳಿಗೆ ವಿರುದ್ಧವಾದ ಬರಹಗಳು ಮತ್ತು ವಿಡಿಯೊಗಳಿಗೆ ಮಾತ್ರ ಅನ್ವಯಿಸುವುದೇಕೆ ಎಂಬುದಕ್ಕೆ ಅವರಲ್ಲಿ ಉತ್ತರವಿಲ್ಲ.

‘ಫೇಸ್‌ಬುಕ್‌’ನ ಈ ಬಗೆಯ ವರ್ತನೆಗಳ ಹಿಂದಿನ ಕಾರಣ ಸುಲಭ. ‘ಸಾಮಾಜಿಕ ಮಾಧ್ಯಮ’ಗಳ ವ್ಯಾಪಾರ ಮಾದರಿಯಿರುವುದೇ ಅಲ್ಲಿ ನಡೆಯುವ ಭಾವುಕ ಚರ್ಚೆಗಳನ್ನು ಆಧಾರವಾಗಿಟ್ಟುಕೊಂಡು. ಭಾವನೆಗಳನ್ನು ಕೆರಳಿಸುವುದು ರಾಜಕೀಯ ಪಕ್ಷಗಳಿಗೆ ವೋಟು ಗಳಿಸುವ ತಂತ್ರವಾದರೆ ಅಂಥದ್ದಕ್ಕೆ ವೇದಿಕೆ ಒದಗಿಸುವುದು ಫೇಸ್‌ಬುಕ್ ತರಹದ ಕಂಪೆನಿಗಳಿಗೆ ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳುವ ಮಾರ್ಗ. ಇವುಗಳನ್ನು ‘ಸ್ವತಂತ್ರ’ ಅಥವಾ ‘ತಟಸ್ಥ’ ಎಂದು ಭಾವಿಸುವುದರಲ್ಲಿ ಅರ್ಥವಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು