ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಿಂದ ಚೊಕ್ಕಾಡಿ ಅಂಕಣ| ಶಿಕ್ಷಣ, ಆರ್ಥಿಕತೆ, ಸಮುದಾಯದ ಜವಾಬ್ದಾರಿ

ಆರ್ಥಿಕತೆಯ ಮಗ್ಗುಲು ಬದಲಿಸುವ ಉದ್ದೇಶದ ಶಿಕ್ಷಣ ನೀತಿಯ ಸಾಧಕ–ಬಾಧಕ
Last Updated 22 ಜುಲೈ 2021, 19:31 IST
ಅಕ್ಷರ ಗಾತ್ರ

ಶಿಕ್ಷಣವು ಆರ್ಥಿಕತೆಯನ್ನು ಬದಲಿಸಬಲ್ಲುದು. ನಿರ್ದಿಷ್ಟ ಪದವಿ ಪಡೆದು ನಿರ್ದಿಷ್ಟ ಉದ್ಯೋಗಕ್ಕೆ ಸೇರಿ ಅದರಲ್ಲೇ ಜೀವನ ಕಳೆದು ನಿವೃತ್ತಿ ಪಡೆಯುವುದು ಒಂದು ಮಾದರಿಯ ಔದ್ಯೋಗಿಕ ಸ್ವರೂಪ. ಬಹುಮಟ್ಟಿಗೆ ಇದು ಮಾರ್ಕ್ಸ್‌ವಾದಿ ದೃಷ್ಟಿಕೋನದ ಬೇರೆ ಬೇರೆ ಆಯಾಮಗಳಿಂದ ಪ್ರಭಾವಿತವಾದ ಆರ್ಥಿಕ ರಚನೆಯಾಗಿದೆ. ಇದನ್ನು ಒಂದು ಮಾದರಿಯಾಗಿರಿಸಿ
ಕೊಂಡು ಖಾಸಗಿ ಘಟಕಗಳ ಆರ್ಥಿಕತೆ ನಡೆಯುತ್ತಾ ಬಂದಿದೆ.

ಅರವಿಂದ ಚೊಕ್ಕಾಡಿ
ಅರವಿಂದ ಚೊಕ್ಕಾಡಿ

2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಉನ್ನತ ಶಿಕ್ಷಣದ ಪರಿಕಲ್ಪನೆಗಳು ಆರ್ಥಿಕತೆಯ ಸ್ವರೂಪದಲ್ಲೇ ಬದಲಾವಣೆ ಉಂಟು ಮಾಡುವ ರೂಪದ್ದಾಗಿವೆ. 5 ವರ್ಷ ಒಂದು ಕ್ಷೇತ್ರದ ಉದ್ಯೋಗ, 10 ವರ್ಷ ಮತ್ತೊಂದು ಕ್ಷೇತ್ರದ ಉದ್ಯೋಗ, ಇನ್ನೊಂದು ನಾಲ್ಕು ವರ್ಷ ಮತ್ತೊಂದು ಕ್ಷೇತ್ರ ಹೀಗೆ ಚಲಿಸಲು ಬೇಕಾದ ಬಹುಶಿಸ್ತೀಯ ಕಲಿಕೆಗೆ 2020ರ ನೀತಿಯಲ್ಲಿ ಆದ್ಯತೆ ಇದೆ. ಆರ್ಥಿಕತೆ ಈ ಮಾದರಿಯಲ್ಲಿ ರಚನೆಯಾದಾಗ ಕೆಲಸ ಮಾಡುವಾಗ ಆದಾಯ ಜಾಸ್ತಿ ಬರುತ್ತದೆ. ನಡುವೆ ಒಂದೆರಡು ವರ್ಷ ಕೆಲಸ ಇಲ್ಲದೆ ನಿರಾಳವಾಗಿದ್ದು ಮತ್ತೆ ಬೇರೊಂದು ಕೆಲಸಕ್ಕೆ ಸೇರುವ ಸ್ವಾತಂತ್ರ್ಯವೆಲ್ಲ ಇರುತ್ತದೆ. ಆದರೆ ಉದ್ಯೋಗ ಸ್ಥಿರತೆ ಕಡಿಮೆಯಾಗುತ್ತದೆ.

ಬಹುಶಿಸ್ತೀಯ ಅಧ್ಯಯನದ ಉದ್ದೇಶವು ಸ್ವಾಭಾವಿಕವಾಗಿ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಳ್ಳು ವಿಕೆಗೆ ಪೂರಕವಾಗಿರುತ್ತದೆ. ಶಿಕ್ಷಣ ಮತ್ತು ಉದ್ಯೋಗದ ನಡುವೆ ಸಂಬಂಧಗಳು ಏರ್ಪಡುತ್ತವೆ. ಬದಲಾಗಿರುವ ಆರ್ಥಿಕತೆಯಲ್ಲಿ ಖಾಸಗಿ ಘಟಕಗಳಿಗೆ ಮಹತ್ವ ಜಾಸ್ತಿ ಇರುವುದರಿಂದ ಈ ಘಟಕಗಳು ಕ್ಷೇತ್ರ ಪರಿಣತಿಗೆ ಮಹತ್ವವನ್ನು ಕೊಡುತ್ತವೆ. ಆಗ ಸಾಮಾನ್ಯ ಶಿಕ್ಷಣಕ್ಕೆ ಉದ್ಯೋಗವನ್ನು ಒದಗಿಸುವ ಶಕ್ತಿ ಇರುವುದಿಲ್ಲ.

ಸಾಮಾನ್ಯ ಶಿಕ್ಷಣಕ್ಕೂ ಹಳೆಯ ಮಾದರಿಯ ಆರ್ಥಿಕತೆಗೂ ಸಂಬಂಧವಿದೆ. ಸಾಮಾನ್ಯ ಶಿಕ್ಷಣವೆಂದರೆ ಎಲ್ಲದರ ಬಗ್ಗೆಯೂ ಇರುವ ಸಾಮಾನ್ಯ ಜ್ಞಾನ.‌ ಸರ್ಕಾರಿ ಉದ್ಯೋಗಗಳಲ್ಲಿ ಈ ಮಾದರಿಗೆ ಪ್ರಾಮುಖ್ಯತೆ ಇದೆ. ಶಿಕ್ಷಕರು, ಎಂಜಿನಿಯರುಗಳು, ವೈದ್ಯರುಗಳಂತಹ ಕೆಲವು ಉದ್ಯೋಗಗಳನ್ನು ಬಿಟ್ಟರೆ, ಉಳಿದಂತೆ ಸರ್ಕಾರಿ ಉದ್ಯೋಗಗಳಲ್ಲಿ ಕೆಲಸವನ್ನು ಹೇಗೆ ಮಾಡಬೇಕು ಎನ್ನುವ ವೃತ್ತಿ ತರಬೇತಿಯು ಅಧಿಕೃತ ಅಥವಾ ಅನಧಿಕೃತ ರೀತಿಯಲ್ಲಿ ಉದ್ಯೋಗಕ್ಕೆ ಸೇರಿದ ಮೇಲೆ ಸಿಗುತ್ತದೆ. ಸೇರ್ಪಡೆಗೊಳ್ಳಲು ಸಾಮಾನ್ಯ ಶಿಕ್ಷಣದ ಅರ್ಹತೆ ಮಾನದಂಡವಾಗಿರುತ್ತದೆ.

ಈ ಪದ್ಧತಿಯ ಅನುಕೂಲ ಎಂದರೆ ಶಿಕ್ಷಣವು ಸರಳವಾಗಿರುತ್ತದೆ. ಬಿ.ಎ., ಬಿ.ಎಸ್ಸಿ., ಬಿ.ಕಾಂ. ಎಂಬ ಸಾಂಪ್ರದಾಯಿಕ ಕಲಿಕಾ ಪದ್ಧತಿ ಬಹಳ ಸರಳವಾದದ್ದು. ಅದರಲ್ಲೂ ಬಿ.ಎ. ಎಂದರೆ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ- ಹೀಗೆ ಕೆಲವೇ ವಿಷಯಗಳ ಕಲಿಕೆಯಲ್ಲಿ ಪದವಿ ಪಡೆಯುವುದು ಸರಳ ವಿಧಾನವಾಗಿದೆ. ಕೆಲಸ ಮಾಡುವ ಸ್ಥಳದಲ್ಲೇ ಕೆಲಸವನ್ನು ಕಲಿಯುವುದರಿಂದ ಶಿಕ್ಷಣಕ್ಕೂ ಕೆಲಸಕ್ಕೂ ಸಂಬಂಧ ಇರುವುದಿಲ್ಲ. ಆದರೆ, ಕೆಲಸದ ಸ್ಥಳದಲ್ಲಿಯೇ ಕೆಲಸವನ್ನು ಕಲಿಯುವುದು ವಾಸ್ತವದಲ್ಲಿ ಉದ್ಯೋಗಿಯನ್ನು ಹೆಚ್ಚು ಯಶಸ್ವಿಗೊಳಿಸುವ ವಿಧಾನವಾಗಿದೆ. ಜನರ ಬಹು ವ್ಯಕ್ತಿತ್ವ ಗಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ವ್ಯವಹಾರ ಜ್ಞಾನವು ಕ್ಷೇತ್ರದಲ್ಲೇ ಸಿಗುತ್ತದೆ.

ಈ ಪದ್ಧತಿಯ ಬದಲಿಗೆ ಶೈಕ್ಷಣಿಕ ವ್ಯವಸ್ಥೆಯೇ ವಿವಿಧ ರಂಗಗಳ ಕೌಶಲಗಳ ಕಲಿಕೆಯನ್ನೂ ಮಾಡಿಸಿದಾಗ ಕಲಿಕೆಗೂ ಉದ್ಯೋಗಕ್ಕೂ ಸಂಬಂಧ ಇರುತ್ತದೆ. ಆದರೆ, ಜನರಲ್ಲಿ ಬಹುರೂಪಿ ವ್ಯಕ್ತಿತ್ವಗಳಿರುತ್ತವೆ. ಆ ವ್ಯಕ್ತಿತ್ವಗಳಿಗೆ ಅನುಗುಣವಾಗಿವ್ಯವಸ್ಥಿತ ಕಲಿಕಾ ಸಂಸ್ಥೆಯಲ್ಲಿ ಎಷ್ಟು ಕಲಿತರೂ ಅದು ಅಪರಿಪೂರ್ಣವೇ ಆಗಿರುತ್ತದೆ. ಕೆಲಸಕ್ಕೆ ತೊಡಗಿದಾಗ ಬರುವ ಅನುಭವಗಳೇ ನಿಜವಾದ ಅರ್ಥದಲ್ಲಿ ಕಲಿಕೆಯಾಗಿರುತ್ತೆದೆ. ಆದ್ದರಿಂದ ಬಹುಶಿಸ್ತೀಯ ಕಲಿಕೆಗಳ ಶಿಕ್ಷಣ ವ್ಯವಸ್ಥೆಯು ಕೊನೆಗೂ ಪರಿಪೂರ್ಣತೆಯನ್ನು ಕಲಿಕೆಯಿಂದ ಹೊರಗೇ ಇಟ್ಟಿರುತ್ತದೆ.

ಆದರೆ ಬಹುಶಿಸ್ತೀಯ ಕಲಿಕೆಗಳ ಶಿಕ್ಷಣ ವ್ಯವಸ್ಥೆಯು ಖಾಸಗಿ ಘಟಕಗಳಿಗೆ ಅನುಕೂಲಕಾರಿಯಾಗಿರುತ್ತದೆ. ಏಕೆಂದರೆ ಖಾಸಗಿ ಘಟಕಗಳ ಮೇಲೆ ಸರ್ಕಾರದ ಒಡೆತನ ಇರುವುದಿಲ್ಲ. ತನಗೆ ಬೇಕಾದ ರೀತಿಯ ಔದ್ಯೋಗಿಕ ಪರಿಸರವನ್ನು ನಿರ್ಮಿಸಲು ಖಾಸಗಿ ಘಟಕಕ್ಕೆ ಸಾಧ್ಯವಾಗುತ್ತದೆ. ಅಂತಹ ಪರಿಸರದಲ್ಲಿ ಉದ್ಯೋಗಿ ತನ್ನ ಕೆಲಸವನ್ನು ತಾನು ಮಾಡಿದರಾಯಿತು. ಇನ್ನೊಬ್ಬನ ಕೆಲಸವನ್ನೂ ತಾನೇ ಮಾಡಬೇಕಾದ ಅನಿವಾರ್ಯ ಇರುವುದಿಲ್ಲ. ಈ ಸ್ವರೂಪದ ನಿರ್ವಹಣಾ ವ್ಯವಸ್ಥೆಗೆ ಅನುಕೂಲಕಾರಿಯಾದ ಶಿಕ್ಷಣವು 2002ರಿಂದಲೂ ರೂಪಿಸಲ್ಪಡುತ್ತಾ ಬಂದಿದೆ. ಈಗ ಅದು ಹೆಚ್ಚು ಸ್ಪಷ್ಟವಾಗಿದೆ.

ಖಾಸಗಿ ಘಟಕಗಳಾದ ಮಾತ್ರಕ್ಕೆ ಕಡಿಮೆ ವೇತನ ಎಂಬ ಪ್ರಶ್ನೆ ಬರುವುದಿಲ್ಲ. ಪ್ರಶ್ನೆ ಬರುವುದು ಪ್ರತಿಭೆಯದ್ದು. ಖಾಸಗಿ ಘಟಕಗಳಲ್ಲಿ ಪರಿಣತರು ಪ್ರತಿಭಾ ವಂತರಾಗಿದ್ದಷ್ಟೂ ಬೇಡಿಕೆ ಜಾಸ್ತಿ ಇರುತ್ತದೆ. ಸರ್ಕಾರಿ ಘಟಕಗಳಲ್ಲೂ ಪ್ರತಿಭೆಗೇ ಮಹತ್ವ ಇರುವುದು. ಆದರೆ ಅಲ್ಲಿ ಸಾರ್ವಜನಿಕ ಉತ್ತರದಾಯಿತ್ವ ಇರುವುದರಿಂದ ಖಾಸಗಿ ಘಟಕಕ್ಕಿರುವ ನಿಖರ ಪರಿಶ್ರಮ ಮತ್ತು ಪ್ರತಿಭೆಯ ಮಾನದಂಡವು ಅದೇ ರೀತಿಯಲ್ಲಿ ಇರುವುದಿಲ್ಲ. ತಾನು ಪದವಿಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದಿದ್ದೇನೆ ಎನ್ನುವುದು ಸಾಲುವುದಿಲ್ಲ. ಅಂಕಗಳು ಸೂಚಿಸುವ ಪ್ರತಿಭೆಯು ಕಾರ್ಯ ನಿರ್ವಹಣೆಯಲ್ಲಿ
ಕಾಣಬೇಕಾಗುತ್ತದೆ.

ಪ್ರತಿಭೆಯ ವಿಚಾರ ಬಂದ ತಕ್ಷಣ ಶೋಷಿತ ಸಮುದಾಯಗಳಿಗೆ ತೊಂದರೆಯೇ ಆಗುತ್ತದೆ ಎಂಬ ಸ್ಥಾಪಿತ ಭಯದ ಅಗತ್ಯ ಇಲ್ಲ. ಶೋಷಿತ ಸಮುದಾಯಗಳ ಬಳಿಯೂ ಕೌಶಲಗಳಿವೆ. ಆ ಕೌಶಲಗಳಲ್ಲಿಯೂ ಪ್ರತಿಭಾ ವಂತರಾಗಿ ಬೆಳೆಯಲು ಅವಕಾಶವಿದೆ. ಆಗ ಹೆಚ್ಚು ಬಹುರೂಪಿ ಸರಕು ಮತ್ತು ಸೇವೆಗಳು ಮಾರುಕಟ್ಟೆಗೆ ಬರುತ್ತವೆ. ಆದರೆ ಶಿಕ್ಷಣ ಮತ್ತು ಆರ್ಥಿಕತೆಯನ್ನು ಆ ರೀತಿಯಲ್ಲಿ ಸಂಯೋಜಿಸಲು ಏನು ಮಾಡಬೇಕು ಎನ್ನುವುದು ವರ್ತಮಾನದ ಸವಾಲಾಗಿದೆ. ಬಹುಶಃ ಈ ಕ್ಷಣಕ್ಕೆ ಇದಕ್ಕೆ ಸೂಕ್ತವಾದ ಮಾದರಿ ದೊರೆಯಲಾರದು. ಗಾಂಧಿವಾದಿ ಧರ್ಮಪಾಲ್ ಅವರು ‘ಬ್ಯೂಟಿಫುಲ್ ಟ್ರೀ’ ಕೃತಿಯಲ್ಲಿ ಕೊಡುವ ಬ್ರಿಟಿಷ್ ಪೂರ್ವಕಾಲದ ಭಾರತೀಯ ಶಾಲಾ ಪದ್ಧತಿಗಳ ಯುಗ ಕಳೆದ ಮೇಲೆ ಶಿಕ್ಷಣದ ಪರಿಕಲ್ಪನೆಯು ಎರಡು ಶತಮಾನಗಳ ಸ್ಥಾಪಿತ ಕಲ್ಪನೆಯೊಂದನ್ನು ಹುಟ್ಟುಹಾಕಿದೆ. ಗಣಿತದಲ್ಲಿ ಅಂಕಗಳನ್ನು ಪಡೆದವನು ಬುದ್ಧಿವಂತ; ಚೆನ್ನಾಗಿ ಜೇನುಕೃಷಿ ಮಾಡಬಲ್ಲವನು ಬುದ್ಧಿವಂತ
ನಲ್ಲ, ಅವನ ಆ ಕೌಶಲವು ಔಪಚಾರಿಕ ಶಿಕ್ಷಣವು ಕೊಡುವ ಅಂಕಗಳಿಗೆ ಪರಿಗಣನೆ ಇಲ್ಲ ಎನ್ನುವುದು ಸದ್ಯದ ಚಿಂತನೆ. ಆದರೆ ಬದಲಾಗಲಿರುವ ಆರ್ಥಿಕ ರಚನೆಗಳು ಇವೆಲ್ಲವನ್ನೂ ಶಿಕ್ಷಣದ ವ್ಯಾಪ್ತಿಗೆ ತರಬೇಕಾದ ಸ್ಥಿತಿಯನ್ನು ಬಹುದೂರದಲ್ಲಿ ಹೊಂದಿವೆ. ಆಗ ಈ ರೀತಿಯ ಶಿಕ್ಷಣಕ್ಕೊಂದು ಮಾದರಿ ಸಿಗಲಿದೆ. ಆಗ ಸ್ವ ಉದ್ಯೋಗಗಳು ಜಾಸ್ತಿಯಾಗುತ್ತವೆ. ಅಂತೂ ಸರ್ಕಾರದ ಪಾಲುದಾರಿಕೆ ಗಣನೀಯವಾಗಿ ಹೊರಟು ಹೋಗುತ್ತದೆ.

ಆರ್ಥಿಕತೆಯಲ್ಲಿ ಸರ್ಕಾರದ ಪಾಲುದಾರಿಕೆ ಏನಿದ್ದರೂ ತಾತ್ಕಾಲಿಕ ಪರಿಹಾರವಾಗಿಯಷ್ಟೆ ಇರುತ್ತದೆ. ಇತಿಹಾಸವನ್ನು ನೋಡಿದರೆ ಪ್ರಭುತ್ವವೇ ಸಮಗ್ರವಾಗಿ ಆರ್ಥಿಕತೆಯಲ್ಲಿ ಪ್ರಧಾನ ಪಾತ್ರಧಾರಿಯಾಗಿ ಇದ್ದ ಅವಧಿ ತೀರಾ ಕಡಿಮೆಯೇ ಆಗಿದೆ. ಸಾರ್ವಕಾಲಿಕವಾಗಿ ಪ್ರಭುತ್ವಕ್ಕೆ ಆರ್ಥಿಕತೆಯ ಹೊಣೆ ಬಲು ಭಾರವಾಗುತ್ತದೆ. ಆದ್ದರಿಂದ ಸರ್ಕಾರವು ಆರ್ಥಿಕತೆಯಿಂದ ಕಳಚಿ ಕೊಳ್ಳುತ್ತಾ ಹೋಗುವುದು ಸಹಜ ಪ್ರಕ್ರಿಯೆಯಾಗಿದೆ.

ಆದರೆ ಈ ಪ್ರಕ್ರಿಯೆಯನ್ನು ಜನಸಮುದಾಯ ಗಳು ಹೇಗೆ ಸ್ವೀಕರಿಸುತ್ತವೆ ಎಂಬ ಆಧಾರದಲ್ಲಿ ನಾವು ಗೆಲ್ಲುತ್ತೇವೆಯೋ ಸೋಲುತ್ತೇವೆಯೋ ಎನ್ನುವುದು ನಿರ್ಧಾರವಾಗುತ್ತದೆ. ಜನಸಮುದಾಯಗಳು ಉದ್ಯಮಶೀಲತೆ ರೂಢಿಸಿಕೊಂಡಾಗ ಶಿಕ್ಷಣವನ್ನು ಸಮುದಾಯಗಳ ಹಿತಾಸಕ್ತಿಗನುಗುಣ ವಾಗಿ ರೂಪಿಸಲು ಆಗುತ್ತದೆ.‌ ಸಮುದಾಯಗಳು ಆರ್ಥಿಕತೆಯನ್ನು ಸರ್ಕಾರದ ಜವಾಬ್ದಾರಿಯಾಗಿ ಅಥವಾ ತಮಗೆ ಅನುಕೂಲ ಮಾಡಿಕೊಡುವುದು ಉಳ್ಳವರ ಜವಾಬ್ದಾರಿ ಎಂಬ ಹಳಹಳಿಕೆಯ ಕ್ರಮದಲ್ಲೇ ಉಳಿದುಕೊಂಡರೆ ಆಗ ಶಿಕ್ಷಣವು ಬೃಹತ್ ಕಂಪನಿಗಳಿಗೆ ಅನುಕೂಲವಾಗುವ ವಿನ್ಯಾಸದಲ್ಲಿ ಸಂಘಟಿಸಲ್ಪಟ್ಟು ಸಮುದಾಯಗಳಿಗೆ ಸೋಲಾಗುತ್ತದೆ. ತಾವೇ ಜವಾಬ್ದಾರಿಯನ್ನು ತೆಗೆದುಕೊಂಡು ಉದ್ಯಮ ಸಾಹಸದ ಪ್ರವೃತ್ತಿಯನ್ನು ತೋರಿಸದೇ ಇರುವುದು ಭಾರತದ ಸಮುದಾಯಗಳ ಸಾಮಾನ್ಯ ಲಕ್ಷಣವಾದ್ದರಿಂದ ಸೋಲುವ ಸಂಭವನೀಯತೆ ಜಾಸ್ತಿ ಇದೆ. ಆದ್ದರಿಂದ ಈ ಕುರಿತು ವ್ಯಾಪಕವಾಗಿ ಸಮಾಜದಲ್ಲಿ ಅರಿವು ಮೂಡಿಸುವ ಚಿಂತನೆಗಳು ಮತ್ತು ಚರ್ಚೆಗಳು ನಡೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT