ಮಂಗಳವಾರ, ನವೆಂಬರ್ 30, 2021
22 °C

ಹಣಕಾಸು ಸಾಕ್ಷರತೆ | ವಿಮೆ : ಬಡವರಾಗುವುದನ್ನು ತಡೆಯುತ್ತದೆ!

ಪ್ರಮೋದ್ ಬಿ.ಪಿ. Updated:

ಅಕ್ಷರ ಗಾತ್ರ : | |

ವಿಮಾ ಕಂಪನಿಗಳು ಮೇಲಿಂದ ಮೇಲೆ ಕರೆ ಮಾಡಿ, ‘ಈ ಇನ್ಶೂರೆನ್ಸ್ ತಗೊಳ್ಳಿ, ಆ ಪಾಲಿಸಿ ಖರೀದಿ ಮಾಡಿ’ ಅಂತ ನಿಮ್ಮನ್ನು ಒತ್ತಾಯಿಸುವುದರಿಂದ ಕಿರಿಕಿರಿ ಆಗಬಹುದು. ಆದರೆ ನೆನಪಿಡಿ, ಜೀವ ವಿಮೆ ಮತ್ತು ಆರೋಗ್ಯ ವಿಮೆ ನೀವು ಬಡವರಾಗುವುದನ್ನು ತಡೆಯುತ್ತವೆ.

ಆರೋಗ್ಯ ವಿಮೆ, ಜೀವ ವಿಮೆ ಮುಖ್ಯ: ಮನೆಗೆ ಆಧಾರವಾಗಿ ನೀವು ದುಡಿಯುತ್ತಿರುತ್ತೀರಿ ಎಂದು ಭಾವಿಸಿ. ಆಕಸ್ಮಿಕವಾಗಿ ನಿಮ್ಮ ಜೀವಕ್ಕೆ ತೊಂದರೆಯಾದರೆ ಪರಿಣಾಮ ಏನು, ಪರಿಹಾರ ಏನು? ನೀವು ಮಾಡಿರುವ ಸಾಲಗಳನ್ನು ತೀರಿಸುವುದು ಹೇಗೆ? ಇಂತಹ ಪ್ರಶ್ನೆಗೆ ಉತ್ತರ ಅವಧಿ ಜೀವ ವಿಮೆ. ಪಾಲಿಸಿದಾರರು ಆಕಸ್ಮಿಕ ಸಾವಿಗೆ ಪ್ರತಿಯಾಗಿ ಪಡೆಯುವ ವಿಮೆ ರಕ್ಷಣೆ ಸೌಲಭ್ಯವನ್ನು ‘ಟರ್ಮ್‌ ಇನ್ಶುರನ್ಸ್‌’ (ಅವಧಿ ವಿಮೆ) ಒಳಗೊಂಡಿರುತ್ತದೆ.

ಅವಧಿಯ ವಿಮೆಯ ಕವರೇಜ್ ಮೊತ್ತವು ನಿಮ್ಮ ವಾರ್ಷಿಕ ಆದಾಯದ 15ರಿಂದ 20 ಪಟ್ಟು ಇರಬೇಕು ಎನ್ನುವುದು ಒಂದು ಮಾನದಂಡ. ಆದರೆ, ಕುಟುಂಬದ ಜವಾಬ್ದಾರಿ ಹೊತ್ತಿರುವವರು, ಮದುವೆಯಾಗಿರು
ವವರು, ಸಾಲ ಮಾಡಿರುವವರು ಹಾಗೂ ಹೆಚ್ಚಿನ ಆರ್ಥಿಕ ಹೊಣೆಗಾರಿಕೆ ಇರುವವರು ಅಗತ್ಯಕ್ಕೆ ತಕ್ಕಂತೆ ವಿಮಾ ಕವರೇಜ್ ಮೊತ್ತ ಹೆಚ್ಚಿಸಿಕೊಳ್ಳಬೇಕು. 30 ವರ್ಷ ವಯಸ್ಸಿನ ವ್ಯಕ್ತಿ ವಾರ್ಷಿಕವಾಗಿ ಸುಮಾರು ₹ 12 ಸಾವಿರದಿಂದ ₹ 13 ಸಾವಿರ ಪ್ರೀಮಿಯಂ ಪಾವತಿಸಿದರೆ, ₹ 1 ಕೋಟಿ ಮೊತ್ತದ ಅವಧಿ ವಿಮೆ ಸಿಗುತ್ತದೆ. ವಿಮೆ ಪಡೆದಿರುವ ವ್ಯಕ್ತಿ ಆಕಸ್ಮಿಕವಾಗಿ ಸಾವನ್ನಪ್ಪಿದರೆ ₹ 1 ಕೋಟಿ ಅವನ ಕುಟುಂಬಕ್ಕೆ ಸಿಗುತ್ತದೆ.

ಆರೋಗ್ಯ ವಿಮೆ ಸಹ ಪ್ರತಿ ವ್ಯಕ್ತಿಗೂ ಬಹಳ ಮುಖ್ಯ. ಅನಾರೋಗ್ಯ ಉಂಟಾದಾಗ, ಕಷ್ಟಪಟ್ಟು ದುಡಿದ ದುಡ್ಡನ್ನೆಲ್ಲ ಆಸ್ಪತ್ರೆಗೆ ಸುರಿಯುವ ಬದಲು, ಗಳಿಸಿದ ಹಣದಲ್ಲಿ ಸಣ್ಣ ಪ್ರಮಾಣದ ಹಣವನ್ನು ಆರೋಗ್ಯ ವಿಮೆಗೆ ವ್ಯಯಿಸುವುದು ಜಾಣತನ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಫ್ಯಾಮಿಲಿ ಫ್ಲೋಟರ್ ಅಥವಾ ವೈಯಕ್ತಿಕ ಜೀವ ವಿಮೆ ಖರೀದಿಸಿ. ಫ್ಯಾಮಿಲಿ ಫ್ಲೋಟರ್ ಆರೋಗ್ಯ ವಿಮೆಯಲ್ಲಿ ಒಂದೇ ಪಾಲಿಸಿಯಲ್ಲಿ ಕುಟುಂಬದ ಎಲ್ಲ ಸದಸ್ಯರಿಗೂ ವಿಮೆ ಸಿಗುತ್ತದೆ. ₹ 5 ಲಕ್ಷ ಕವರೇಜ್ ಇರುವ ಆರೋಗ್ಯ ವಿಮೆ ಪ್ರೀಮಿಯಂ ₹ 12 ಸಾವಿರದಿಂದ ₹ 14 ಸಾವಿರಕ್ಕೆ ಲಭ್ಯ.

ಇನ್ಶೂರೆನ್ಸ್ ಖರೀದಿಗೆ ಯಾವ ಕಂಪನಿ ಸೂಕ್ತ?: ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಯಾಗಲಿ ಖಾಸಗಿ ವಿಮಾ ಕಂಪನಿಯಾಗಲಿ, ಅವುಗಳನ್ನು ನಿಯಂತ್ರಿಸುವ ಸಂಸ್ಥೆ, ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ). ಐಆರ್‌ಡಿಎಐ ನಿಯಮಗಳಿಗೆ ಅನುಗುಣವಾಗಿ ಯಾವುದೇ ವಿಮಾ ಕಂಪನಿ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ವಿಮಾ ಕಂಪನಿ ಆಯ್ಕೆ ಮಾಡುವಾಗ, ಅದು ಸರ್ಕಾರಿ ಸ್ವಾಮ್ಯದ್ದೋ ಅಥವಾ ಖಾಸಗಿಯವರ ಒಡೆತನದ್ದೋ ಎಂಬುದು ಮುಖ್ಯವಲ್ಲ. ವಿಮೆ ಆಯ್ಕೆ ಮಾಡುವಾಗ ಕ್ಲೇಮ್ ಅನುಪಾತ, ವಾರ್ಷಿಕ ಪ್ರೀಮಿಯಂ ಮೊತ್ತ, ಕವರೇಜ್ ವ್ಯಾಪ್ತಿ, ಕವರೇಜ್ ಮೊತ್ತದಂತಹ ಅಂಶಗಳು ಬಹಳ ಮುಖ್ಯವಾಗುತ್ತವೆ.

ಅದರಲ್ಲೂ, ಯಾವುದೇ ವಿಮೆ ಕೊಳ್ಳುವಾಗ ಕ್ಲೇಮ್ ಅನುಪಾತ ಬಹಳ ಮುಖ್ಯವಾಗುತ್ತದೆ. ವಿಮೆ ಕ್ಲೇಮ್‌ಗಾಗಿ ಅರ್ಜಿ ಸಲ್ಲಿಸಿರುವವರ ಪೈಕಿ ಎಷ್ಟು ಜನರ ಕ್ಲೇಮ್ ಅರ್ಜಿಗಳನ್ನು ವಿಮಾ ಕಂಪನಿ ಪುರಸ್ಕರಿಸಿದೆ ಎನ್ನುವುದನ್ನು ಕ್ಲೇಮ್ ಅನುಪಾತ ಎಂದು ಕರೆಯಲಾಗುತ್ತದೆ. ಇದು ಶೇ 90ಕ್ಕಿಂತ ಕಡಿಮೆ ಇದ್ದಲ್ಲಿ ಅಂತಹ ಕಂಪನಿಗಳ ವಿಮೆ ಪಡೆದುಕೊಳ್ಳುವುದು ಅಷ್ಟು ಸುರಕ್ಷಿತವಲ್ಲ. ಅನುಪಾತವು ಶೇ 90ಕ್ಕಿಂತ
ಹೆಚ್ಚು ಇರುವ ವಿಮಾ ಕಂಪನಿಗಳ ಪಾಲಿಸಿ ಪಡೆದರೆ ನಿಮಗೆ ಹೆಚ್ಚು ಸುರಕ್ಷತೆ ಇರುತ್ತದೆ. ಐಆರ್‌ಡಿಎಐ ಪ್ರತಿ ವರ್ಷವೂ ವಿಮಾ ಕಂಪನಿಗಳ ಕ್ಲೇಮ್ ಅನುಪಾತವನ್ನು ಪ್ರಕಟಿಸುತ್ತದೆ. ಐಆರ್‌ಡಿಎಐ ವೆಬ್‌ಸೈಟ್‌ನಲ್ಲಿ ಇದರ ಸಂಪೂರ್ಣ ಮಾಹಿತಿ ಸಿಗುತ್ತದೆ. (ವೆಬ್‌ಸೈಟ್ ವಿಳಾಸ: www.irdai.gov.in)

ಗ್ರೇಸ್ ಪೀರಿಯಡ್‌ನಲ್ಲಿ ವಿಮೆ ಮಾನ್ಯವಾಗುವುದೇ?: ವಿಮೆ ಪ್ರೀಮಿಯಂ ಕಂತು ಪಾವತಿಗೆ ಕಂಪನಿ ನೀಡುವ ಹೆಚ್ಚುವರಿ ಅವಧಿಯನ್ನು ಗ್ರೇಸ್ ಪೀರಿಯಡ್ ಎಂದು ಕರೆಯಲಾಗುತ್ತದೆ. ವ್ಯಕ್ತಿಯೊಬ್ಬ ಅವಧಿ ವಿಮೆ ತೆಗೆದುಕೊಂಡ ನಂತರ, ಗ್ರೇಸ್ ಪೀರಿಯಡ್‌ನಲ್ಲಿ ಸಾವನ್ನಪ್ಪಿದರೆ ಆಗ ಖಂಡಿತವಾಗಿಯೂ ವಿಮಾ ಕವರೇಜ್ ಅನ್ವಯಿಸುತ್ತದೆ. ಗ್ರೇಸ್ ಪೀರಿಯಡ್‌ಅನ್ನು ವಿಮೆ ಹೊಂದಿರುವ ವ್ಯಕ್ತಿಗೆ ವಿಮಾ ಕಂಪನಿಯೇ ನೀಡುವ ಕಾರಣ ಈ ಅವಧಿಯಲ್ಲಿ ವ್ಯಕ್ತಿ ಸಾವನ್ನಪ್ಪಿದ ಎನ್ನುವ ಕಾರಣಕ್ಕೆ ಕ್ಲೇಮ್ ನೀಡದೆ ಇರಲು ಅವಕಾಶವಿಲ್ಲ. ವಿಮಾ ಪಾಲಿಸಿಯು, ಗ್ರೇಸ್ ಪೀರಿಯಡ್‌ನಲ್ಲಿರುವಾಗ ವ್ಯಕ್ತಿ ಸಾವನ್ನಪ್ಪಿದರೆ, ಪಾವತಿಸಬೇಕಿದ್ದ ಪ್ರೀಮಿಯಂನ ಮೊತ್ತವನ್ನು ಕಡಿತ ಮಾಡಿಕೊಂಡು ಇನ್ನುಳಿದ ಕವರೇಜ್ ಮೊತ್ತವನ್ನು ಕಂಪನಿಯು ನಾಮ ನಿರ್ದೇಶನ ಆಗಿರುವ ವ್ಯಕ್ತಿಗೆ ನೀಡುತ್ತದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ., ನ ಸಂಶೋಧನಾ ವಿಭಾಗದ ಮುಖ್ಯಸ್ಥ)

***

ಗೂಳಿ ಹಿಡಿತದಲ್ಲಿ ಷೇರುಪೇಟೆ ಸೂಚ್ಯಂಕಗಳು

ಷೇರುಪೇಟೆ ಸೂಚ್ಯಂಕಗಳು ಈಗ ಗೂಳಿಯ ಹಿಡಿತದಲ್ಲಿವೆ. ಅಕ್ಟೋಬರ್ 14ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಕ್ರಮವಾಗಿ 61,305 ಮತ್ತು 18,300 ಅಂಶಗಳ ಗಡಿ ದಾಟಿ ಹೊಸ ದಾಖಲೆ ಸೃಷ್ಟಿಸಿವೆ. ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 2.07ರಷ್ಟು ಮತ್ತು ನಿಫ್ಟಿ ಶೇ 2.47ರಷ್ಟು ಜಿಗಿದಿವೆ. ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಪನಿಗಳ ಉತ್ತಮ ಸಾಧನೆ, ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಚೇತರಿಕೆ, ಕೈಗಾರಿಕಾ ಉತ್ಪಾದನೆ ಹೆಚ್ಚಳ ಸೇರಿ ಹಲವು ಅಂಶಗಳು ಷೇರುಪೇಟೆ ಓಟಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ, ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮತ್ತು ವಾಹನ ಉತ್ಪಾದನಾ ವಲಯ ಶೇ 6.5ರಷ್ಟು ಗಳಿಸಿವೆ. ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 1ರಷ್ಟು ಕುಸಿತ ದಾಖಲಿಸಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,037.37 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 3,296.81 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಏರಿಕೆ-ಇಳಿಕೆ: ಬಿಎಸ್‌ಇ ಲಾರ್ಜ್ ಕ್ಯಾಪ್ ಸೂಚ್ಯಂಕದಲ್ಲಿ ಟಾಟಾ ಮೋಟರ್ಸ್, ಅವೆನ್ಯೂ ಸೂಪರ್ ಮಾರ್ಕೆಟ್ಸ್, ವೇದಾಂತ, ಐಟಿಸಿ ಶೇ 10ರಿಂದ ಶೇ 30ರಷ್ಟು ಹೆಚ್ಚಳ ಕಂಡಿವೆ. ಟಿಸಿಎಸ್, ಬಂಧನ್ ಬ್ಯಾಂಕ್, ಎಚ್‌ಸಿಎಲ್ ಶೇ 8ರಷ್ಟು ಕುಸಿದಿವೆ.

ಮುನ್ನೋಟ: ಷೇರುಪೇಟೆ ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ. ಸದ್ಯದ ಸ್ಥಿತಿಯಲ್ಲಿ ಅಲ್ಪ ಪ್ರಮಾಣದ ಏರಿಳಿತ ನಿರೀಕ್ಷಿಸಬಹುದು. ಜಾಗತಿಕವಾಗಿ ಪ್ರಮುಖ ದೇಶಗಳ ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಳ ಮಾಡಿದರೆ ಷೇರುಪೇಟೆಯಿಂದ ಹಣದ ಹೊರ ಹರಿವು ಶುರುವಾಗಲಿದೆ. ಆಗ ಸೂಚ್ಯಂಕಗಳು ಕುಸಿತ ಕಾಣುವ ಸಾಧ್ಯತೆಯಿದೆ.

ಈ ವಾರ ಹಿಂದೂಸ್ಥಾನ್ ಯುನಿಲಿವರ್, ನೆಸ್ಲೆ ಇಂಡಿಯಾ, ಹ್ಯಾಟ್‌ಸನ್, ಫೆಡರಲ್ ಬ್ಯಾಂಕ್, ರಿಲಯನ್ಸ್, ಪಾಲಿ ಕ್ಯಾಬ್, ಎಚ್‌ಡಿಎಫ್‌ಸಿ ಲೈಫ್, ಟಾಟಾ ಕನ್ಸ್ಯೂಮರ್, ಯೆಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಏಂಜಲ್ ಬ್ರೋಕಿಂಗ್, ಬಯೋಕಾನ್, ಐಡಿಬಿಐ, ಜೆಎಸ್‌ಡಬ್ಲ್ಯು ಸ್ಟೀಲ್, ಟಿವಿಎಸ್ ಮೋಟರ್ಸ್, ಹ್ಯಾವೆಲ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು