ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆ: ಷೇರುಪೇಟೆಯೋ, ಇಲ್ಲ ಮ್ಯೂಚುಯಲ್ ಫಂಡ್?

Last Updated 8 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿ ನೇರವಾಗಿ ಹಣ ಹೂಡಿಕೆ ಮಾಡುವುದು ಒಳಿತೋ, ಇಲ್ಲ ಮ್ಯೂಚುಯಲ್ ಫಂಡ್ ಮೂಲಕ ಹೂಡಿಕೆ ಮಾಡುವುದು ಸೂಕ್ತವೋ? ಒಂದಲ್ಲ ಒಂದು ಹಂತದಲ್ಲಿ ಪ್ರತಿಯೊಬ್ಬ ಹೂಡಿಕೆದಾರನಿಗೂ ಕಾಡುವ ಪ್ರಶ್ನೆ ಇದು. ಅಸಲಿಗೆ ಷೇರು ಮಾರುಕಟ್ಟೆ ಅಥವಾ ಮ್ಯೂಚುಯಲ್ ಫಂಡ್ ಈ ಎರಡೂ ಕೂಡ ನಿಮ್ಮ ಹಣವನ್ನು ನಿಮಗಾಗಿ ದುಡಿಯುವಂತೆ ಮಾಡಲು ಒಳ್ಳೆಯ ಹೂಡಿಕೆಗಳೇ. ಆದರೆ ಹಣಕಾಸು ನಿರ್ವಹಣೆಯಲ್ಲಿ ನೀವು ಎಷ್ಟು ಪಳಗಿದ್ದೀರಿ ಎನ್ನುವುದರ ಆಧಾರದ ಮೇಲೆ ಎಲ್ಲಿ ಹೂಡಬೇಕು ಎನ್ನುವ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ.

1.ಷೇರು ಮಾರುಕಟ್ಟೆ ಹೂಡಿಕೆಗೆ ಒಂದಿಷ್ಟು ಪರಿಣಿತಿ ಬೇಕು: ಷೇರುಪೇಟೆಯಲ್ಲಿ 7,400 ಕ್ಕೂ ಹೆಚ್ಚು ಕಂಪನಿಗಳಿವೆ. ಈ ಪೈಕಿ ಯಾವ ಕಂಪನಿಯಲ್ಲಿ ಹೂಡಿಕೆ ಮಾಡಬೇಕು ಎಂದು ನಿರ್ಣಯಿಸಬೇಕಾದರೆ ಷೇರುಪೇಟೆಯ ಬಗ್ಗೆ ಒಂದಿಷ್ಟು ಪರಿಣತಿ ಬೇಕು. ಯಾವ ಕಂಪನಿ ಹೇಗೆ ಲಾಭ ಗಳಿಸುತ್ತಿದೆ, ನಿರ್ದಿಷ್ಟ ಕಂಪನಿಯು ಭವಿಷ್ಯದಲ್ಲಿ ಯಾವ ರೀತಿ ಪ್ರಗತಿ ಸಾಧಿಸಬಹುದು, ಕಂಪನಿಯ ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ, ಅವರ ಹಿನ್ನೆಲೆಯೇನು, ಆ ಸಂಸ್ಥೆಯ ಮೇಲೆ ಏನಾದರೂ ಕಾನೂನು ವ್ಯಾಜ್ಯಗಳಿವೆಯಾ ಹೀಗೆ ಹತ್ತು ಹಲವು ವಿಚಾರಗಳನ್ನು ಗಮನಿಸಿಕೊಂಡ ಬಳಿಕ ನಿರ್ದಿಷ್ಟ ಕಂಪನಿಯೊಂದರ ಷೇರನ್ನು ಖರೀದಿಸಬೇಕಾಗುತ್ತದೆ. ಆದರೆ ಮ್ಯೂಚುಯಲ್ ಫಂಡ್‌ನಲ್ಲಿ ನಿಮಗೆ ಹೆಚ್ಚು ಪರಿಣತಿ ಬೇಕಿಲ್ಲ. ಯಾವ ಫಂಡ್ ಉತ್ತಮವಾಗಿ ಲಾಭಾಂಶ ನೀಡುತ್ತಿದೆ ಎನ್ನುವುದನ್ನು ಅರಿತು ಆ ನಿರ್ದಿಷ್ಟ ಫಂಡ್‌ನಲ್ಲಿ ಸಣ್ಣ ಮೊತ್ತಗಳಲ್ಲಿ ಹೂಡಿಕೆ ಮಾಡುತ್ತಾ ಹೋದರೆ ಸಾಕು, ಆ ಹಣವನ್ನು ಎಲ್ಲಿ ಹೂಡಬೇಕು ಎನ್ನುವ ನಿರ್ಧಾರವನ್ನು ಪರಿಣಿತ ಫಂಡ್ ಮ್ಯಾನೇಜರ್ ತೆಗೆದುಕೊಳ್ಳುತ್ತಾರೆ. ಮ್ಯೂಚುವಲ್ ಫಂಡ್‌ನಲ್ಲಿ ಮಾರುಕಟ್ಟೆಯ ದಿಢೀರ್ ಏರಿಳಿತಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಎಲ್ಲಾ ತಲೆಬಿಸಿಯನ್ನು ಫಂಡ್ ಮ್ಯಾನೇಜರ್‌ಗಳು ತೆಗೆದುಕೊಳ್ಳುತ್ತಾರೆ.

2. ಮ್ಯೂಚುವಲ್ ಫಂಡ್‌ಗಿಂತ ಷೇರು ಹೂಡಿಕೆಯಲ್ಲಿ ರಿಸ್ಕ್ ಜಾಸ್ತಿ: ಉದಾಹರಣೆಗೆ ನೀವು ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ₹ 2 ಸಾವಿರ ಕೊಟ್ಟು ಒಂದು ಕಂಪನಿಯ ಷೇರು ಖರೀದಿಸುತ್ತೀರಿ ಎಂದಿಟ್ಟುಕೊಳ್ಳಿ. ಆ ಕಂಪನಿಯ ಷೇರು ಮಾತ್ರ ನಿಮ್ಮದಾಗುತ್ತದೆ. ಆದರೆ ಅದೇ
₹ 2 ಸಾವಿರವನ್ನು ನೀವು ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸಿದರೆ ಫಂಡ್ ಮ್ಯಾನೇಜರ್ ನಿಮ್ಮ ಹಣವನ್ನು ಹತ್ತಾರು ಕಂಪನಿಗಳಲ್ಲಿ ತೊಡಗಿಸುತ್ತಾರೆ. ಎಲ್ಲಿ ಹಣ ತೊಡಗಿಸಿದರೆ ಉತ್ತಮವಾದ ಬೆಳವಣಿಗೆ ಸಾಧ್ಯವಿದೆ ಎನ್ನುವುದನ್ನು ಅಧ್ಯಯನ ಮಾಡುವುದಕ್ಕೆ ಫಂಡ್ ಮ್ಯಾನೇಜರ್ ಜತೆ ಒಂದು ತಜ್ಞ ತಂಡವಿರುತ್ತದೆ. ಆ ತಂಡ ಮಾಡುವ ಅಧ್ಯಯನಗಳನ್ನು ಆಧರಿಸಿ ಫಂಡ್ ಮ್ಯಾನೇಜರ್‌ಗಳು ಹೂಡಿಕೆ ನಿರ್ಧಾರ ಮಾಡುತ್ತಾರೆ. ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವಾಗ ಈ ರೀತಿಯ ಅಧ್ಯಯನ ಮಾಡಲು ಪರಿಣಿತಿ ಬೇಕಾಗುತ್ತದೆ. ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಮ್ಯೂಚುವಲ್ ಫಂಡ್‌ನಲ್ಲಿ ಷೇರು ಹೂಡಿಕೆಗಿಂತ ರಿಸ್ಕ್ ಕಡಿಮೆ ಎನ್ನಬಹುದು.

3. ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ವೈವಿಧ್ಯತೆಗೆ ಹೆಚ್ಚು ಅವಕಾಶ: ಅಗತ್ಯಕ್ಕೆ ತಕ್ಕಂತಹ ಹೂಡಿಕೆ ಆಯ್ಕೆ ಮ್ಯೂಚುಯಲ್ ಫಂಡ್‌ನಲ್ಲಿವೆ. ಹೆಚ್ಚು ರಿಸ್ಕ್‌ಗೆ ಹೆಚ್ಚು ಲಾಭ ಕೊಡುವ ಈಕ್ವಿಟಿ ಫಂಡ್ ಮತ್ತು ಕಡಿಮೆ ರಿಸ್ಕ್ ಇರುವ ಡೆಟ್ ಫಂಡ್‌ಗಳು ಮ್ಯೂಚುಯಲ್ ಫಂಡ್‌ನಲ್ಲಿವೆ. ನಿಮಗೆ ಲಿಕ್ವಿಡಿಟಿ ಅಂದ್ರೆ ಬೇಕಾದಾಗ ಹಣ ಸಿಗುವಂತೆ ಇರಬೇಕು ಅಂದ್ರೆ ಲಿಕ್ವಿಡ್ ಫಂಡ್ ಆಯ್ಕೆ ಇದೆ. ಆದರೆ ಷೇರು ಹೂಡಿಕೆಯಲ್ಲಿ ವ್ಯವಸ್ಥಿತವಾಗಿ ಇಷ್ಟು ಆಯ್ಕೆಗಳನ್ನು ಸುಲಭವಾಗಿ ಮಾಡಿಕೊಳ್ಳುವುದು ಸಾಧ್ಯವಿಲ್ಲ.

4.ಷೇರು ಹೂಡಿಕೆಗೆ ಹೆಚ್ಚು ಸಮಯ ಮೀಸಲಿಡಬೇಕು: ನೇರವಾಗಿ ಷೇರು ಮಾರುಕಟ್ಟೆ ಹೂಡಿಕೆ ಮಾಡುವಾಗ ಮಾರುಕಟ್ಟೆಯ ಏರಿಳಿತಗಳನ್ನು ಗಮನಿಸಿಕೊಂಡು ಹೂಡಿಕೆ ನಿರ್ಧಾರಗಳನ್ನು ಮಾಡಲು ಸಮಯ ಮೀಸಲಿಡಬೇಕು. ಆದರೆ ಮ್ಯೂಚುಯಲ್ ಫಂಡ್ ಹೂಡಿಕೆಗೆ ಹೆಚ್ಚು ಸಮಯ ಅಗತ್ಯವಿಲ್ಲ. ಒಳ್ಳೆಯ ಫಂಡ್ ಆಯ್ಕೆ ಮಾಡಿ ಹೂಡಿಕೆ ಮಾಡುತ್ತಾ ಸಾಗಿದರೆ ಅಧ್ಯಯನ ಮಾಡಿ ಮುನ್ನಡೆಯುವ ಕೆಲಸವನ್ನು ಫಂಡ್ ಮ್ಯಾನೇಜರ್‌ಗಳು ಮಾಡುತ್ತಾರೆ.

5. ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಶಿಸ್ತು ಸುಲಭ: ಮ್ಯೂಚುಯಲ್ ಫಂಡ್‌ನಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ ( ಎಸ್ ಐಪಿ) ಮೂಲಕ ಹೂಡಿಕೆ ಸುಲಭ. ಸಣ್ಣ ಮೊತ್ತಗಳಲ್ಲಿ ಅಂದರೆ ₹ 100 , ₹ 500 ಅನ್ನು ಕೂಡ ಪ್ರತಿ ತಿಂಗಳು ಹೂಡಿಕೆ ಮಾಡುತ್ತಾ ಹೋಗಬಹುದು. ಷೇರುಗಳಲ್ಲೂ ಎಸ್ ಐಪಿ ವ್ಯವಸ್ಥೆ ಇದೆ. ಆದರೆ ಅದು ಮ್ಯೂಚುಯಲ್ ಫಂಡ್ ಎಸ್ ಐಪಿಯಷ್ಟು ಸರಳವಾಗಿಲ್ಲ.

6. ತೆರಿಗೆ ಅನುಕೂಲ: ಇಎಲ್‌ಎಸ್‌ಎಸ್ (ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಂ) ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದರೆ ಸೆಕ್ಷನ್ 80 ಸಿ ಅಡಿಯಲ್ಲಿ ₹ 1.5 ಲಕ್ಷದ ವರೆಗೆ ತೆರಿಗೆ ಅನುಕೂಲ ಸಿಗುತ್ತದೆ. ಆದರೆ ಷೇರು ಹೂಡಿಕೆಗೆ ಈ ರೀತಿಯ ತೆರಿಗೆ ಲಾಭ ಸಿಗುವುದಿಲ್ಲ.

ಹೊಸ ದಾಖಲೆ ಬರೆದ ಸೂಚ್ಯಂಕಗಳು

ಷೇರುಪೇಟೆ ಸೂಚ್ಯಂಕಗಳು ಹೊಸ ದಾಖಲೆ ಬರೆದಿವೆ. ಆಗಸ್ಟ್ 5 ರಂದು ಸೆನ್ಸೆಕ್ಸ್ 54,717 ಮತ್ತು ನಿಫ್ಟಿ 16,349 ಅಂಶಗಳಿಗೆ ತಲುಪಿ ಇತಿಹಾಸ ಸೃಷ್ಟಿಸಿವೆ. ಜಾಗತಿಕ ವಿದ್ಯಮಾನಗಳ ಜತೆಗೆ ದೇಶಿಯ ಬೆಳವಣಿಗೆಗಳು ಸೂಚ್ಯಂಕಗಳ ಜಿಗಿತಕ್ಕೆ ಕೊಡುಗೆ ನೀಡಿವೆ. ಇನ್ನು ವಾರದ ಅವಧಿಯ ಲೆಕ್ಕಾಚಾರಕ್ಕೆ ಬಂದರೆ, 54,277 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇ 3.21 ರಷ್ಟು ಜಿಗಿದಿದೆ. 16, 238 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 3 ರಷ್ಟು ಏರಿಕೆ ಕಂಡಿದೆ.

ಸೆನ್ಸೆಕ್ಸ್ ಲಾರ್ಜ್ ಕ್ಯಾಪ್ ಸೂಚ್ಯಂಕ ಶೇ 3 ರಷ್ಟು ಏರಿಕೆಯಾಗಿದ್ದರೆ, ಮಿಡ್ ಕ್ಯಾಪ್ ಶೇ 0.5 ರಷ್ಟು ಹೆಚ್ಚಳವಾಗಿದೆ. ಸ್ಮಾಲ್ ಕ್ಯಾಪ್ ಸೂಚ್ಯಂಕ ಯಥಾಸ್ಥಿತಿ ಕಾಯ್ದುಕೊಂಡಿದೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 3.5 ರಷ್ಟು ಗಳಿಕೆ ಕಂಡಿದೆ. ಮಾಹಿತಿ ತಂತ್ರಜ್ಞಾನ ಮತ್ತು ಎನರ್ಜಿ ಸೂಚ್ಯಂಕ ತಲಾ ಶೇ 2.5 ರಷ್ಟು ಹೆಚ್ಚಳವಾಗಿವೆ. ಮಾಧ್ಯಮ ವಲಯ ಶೇ 4 ರಷ್ಟು ಇಳಿಕೆಯಾಗಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ರೂ. 2,616.04 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ರೂ. 896.84 ಕೋಟಿ ಮೌಲ್ಯದ ಷೇರುಗಳಲ್ಲಿ ಹೂಡಿದ್ದಾರೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಐಷರ್ ಮೋಟರ್ಸ್ ಶೇ 8.58, ಏರ್ ಟೆಲ್ ಶೇ 8.23, ಎಚ್ ಡಿಎಫ್ ಸಿ ಶೇ 7.66, ಕೋಟಕ್ ಬ್ಯಾಂಕ್ ಶೇ 7.40, ಅದಾನಿ ಪೋರ್ಟ್ಸ್ ಶೇ 5.37 ರಷ್ಟು ಜಿಗಿದಿವೆ. ಯುಪಿಎಲ್ ಶೇ 3.86, ಬಜಾಜ್ ಫಿನ್ ಸರ್ವ್ ಶೇ 1.52, ಗ್ರಾಸಿಮ್ ಶೇ 1.31, ಅಲ್ಟ್ರಾಟೆಕ್ ಸಿಮೆಂಟ್ ಶೇ 1.20 ಮತ್ತು ಸಿಪ್ಲಾ ಶೇ 0.95 ರಷ್ಟು ಕುಸಿದಿವೆ.

ಮುನ್ನೋಟ: ಈ ವಾರ ಎಂಆರ್‌ಎಫ್, ಎಂಡೂರೆನ್ಸ್ ಟೆಕ್ನಾಲಜೀಸ್, ಸೆಂಚುರಿ ಪ್ಲೈ, ಜಿಂದಾಲ್ ಸ್ಟೀಲ್, ಪವರ್ ಗ್ರಿಡ್, ಪ್ರೆಸ್ಟೀಜ್, ಕೋಲ್ ಇಂಡಿಯಾ, ಜೊಮ್ಯಾಟೊ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ತ್ರೈಮಾಸಿಕ ಫಲಿತಾಂಶಗಳ ಜತೆ ಜಾಗತಿಕ ಮತ್ತು ದೇಶಿಯ ವಿದ್ಯಮಾನಗಳು , ಅಮೆರಿಕದ ಉದ್ಯೋಗ ಸೃಷ್ಟಿ ದತ್ತಾಂಶ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಲಿವೆ. ಕಾರ್ಡ್ ಟ್ರೇಡ್, ನೂವೋಕೋ ವಿಸ್ತಾಸ್ ಐಪಿಒ ಸೇರಿ ಹಲವು ಕಂಪನಿಗಳ ಐಪಿಒಗಳು ನಡೆಯುತ್ತಿವೆ. ಉತ್ತಮ ಕಂಪನಿಗಳನ್ನು ಮಾತ್ರ ಐಪಿಒ ಹೂಡಿಕೆಗೆ ಪರಿಗಣಿಸಿ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ., ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT