ಗುರುವಾರ , ಡಿಸೆಂಬರ್ 3, 2020
23 °C

ಹಣಕಾಸು ಸಾಕ್ಷರತೆ: ಮಕ್ಕಳ ಹೆಸರಲ್ಲಿ ಎಂ.ಎಫ್. ಹೂಡಿಕೆ ಸಾಧ್ಯವೇ?

ಪ್ರಮೋದ್ ಬಿ.ಪಿ. Updated:

ಅಕ್ಷರ ಗಾತ್ರ : | |

Prajavani

ಮಕ್ಕಳ ಹೆಸರಿನಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ (ಎಂ.ಎಫ್.) ಹೂಡಿಕೆ ಮಾಡಬಹುದೇ? ಅದಕ್ಕೆ ಬೇಕಿರುವ ದಾಖಲೆಗಳೇನು? ಇರುವ ನಿಯಮಗಳೇನು? ಮಕ್ಕಳು ದೊಡ್ಡವರಾದ ನಂತರದಲ್ಲಿ, ಅಪ್ರಾಪ್ತ ವಯಸ್ಸಿನವರ ಖಾತೆಯನ್ನು ವಯಸ್ಕ ಖಾತೆಯಾಗಿ ಬದಲಾಯಿಸುವುದು ಹೇಗೆ? ಹೀಗೆ ಮಕ್ಕಳ ಹೆಸರಿನಲ್ಲಿ ಮ್ಯೂಚುವಲ್ ಫಂಡ್ ಮೂಲಕ ಹೂಡಿಕೆ ಮಾಡುವಾಗ ಮೂಡುವ ಸಂದೇಹಗಳಿಗೆ ಉತ್ತರ ಇಲ್ಲಿದೆ.

ಮಕ್ಕಳ ಹೆಸರಲ್ಲಿ ಹೂಡಿಕೆಗೆ ಬೇಕು ಪೋಷಕರ ಬೆಂಬಲ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪೋಷಕರು, ಪಾಲಕರ ನೆರವಿನೊಂದಿಗೆ ಮ್ಯೂಚುವಲ್ ಫಂಡ್‌ಗಳ ಮೂಲಕ ಹೂಡಿಕೆ ಮಾಡಬಹುದು. ಅಪ್ರಾಪ್ತ ವಯಸ್ಸಿನವರ ಹೆಸರಿನಲ್ಲಿ ಆರಂಭಿಸುವ ವೈಯಕ್ತಿಕ ಮ್ಯೂಚುವಲ್ ಫಂಡ್ ಖಾತೆಗೆ ಪೋಷಕರು ಅಥವಾ ಪಾಲಕರು ಪ್ರತಿನಿಧಿಯಾಗಬೇಕಾಗುತ್ತದೆ. ಅಪ್ರಾಪ್ತ ವಯಸ್ಸಿನವರ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಜಂಟಿ ಖಾತೆ ಹೊಂದಲು ಅವಕಾಶವಿಲ್ಲ. ಉದಾಹರಣೆಗೆ, ಮಕ್ಕಳ ಉನ್ನತ ಶಿಕ್ಷಣದ ಉದ್ದೇಶಕ್ಕಾಗಿ, ಮದುವೆ ಖರ್ಚಿಗಾಗಿ ಹೀಗೆ ಹಲವು ಕಾರಣಗಳಿಗೆ ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.

18 ತುಂಬಿದ ಮೇಲೆ ಖಾತೆದಾರ ಮೇಜರ್ (ವಯಸ್ಕ) ಎಂದಾಗಲಿ: ನೀವು ಮಗಳು/ಮಗನ ಹೆಸರಿನಲ್ಲಿ ಮ್ಯೂಚುವಲ್ ಫಂಡ್ ಮೂಲಕ ಹೂಡಿಕೆ ಆರಂಭಿಸಿದ್ದರೆ, ಅವರಿಗೆ 18 ವರ್ಷ ತುಂಬಿದ ಬಳಿಕ ವೈಯಕ್ತಿಕ ಮ್ಯೂಚುವಲ್ ಫಂಡ್ ಖಾತೆಯಲ್ಲಿ ಮೈನರ್ (ಅಪ್ರಾಪ್ತ) ಎಂಬುದನ್ನು ಮೇಜರ್ (ವಯಸ್ಕ) ಎಂದು ಬದಲಾಯಿಸಬೇಕು. ಇಲ್ಲದಿದ್ದರೆ ಮ್ಯೂಚುವಲ್ ಫಂಡ್ ಖಾತೆಯ ಚಲಾವಣೆ ಸ್ಥಗಿತಗೊಳ್ಳುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ ಕಂಪನಿಗಳು ಈ ರೂಪಾಂತರದ ವೇಳೆ ಪಾಲಕರು/ಪೋಷಕರು ಮತ್ತು ಮೈನರ್‌ಗೆ (ಅಪ್ರಾಪ್ತ ವಯಸ್ಸಿನ ವ್ಯಕ್ತಿ) ಬದಲಾವಣೆಗೆ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಮುಂಚಿತವಾಗಿ ತಿಳಿಸುತ್ತಾರೆ. ಪಾಲಕರು/ಪೋಷಕರು ಅಪ್ರಾಪ್ತ ವಯಸ್ಸಿನ ವ್ಯಕ್ತಿಯ ಸಹಿಯೊಂದಿಗೆ ಬ್ಯಾಂಕ್ ಅಧಿಕಾರಿಯಿಂದ ದೃಢೀಕರಣದ ಜತೆಗೆ ಖಾತೆಯ ಸ್ಥಿತಿಯನ್ನು ಮೇಜರ್ (ವಯಸ್ಕ) ಎಂದು ಬದಲಾಯಿಸಲು ಕೋರಿಕೆ ಸಲ್ಲಿಸಬೇಕು. ನಂತರ ಮೈನರ್‌ನ (ಅಪ್ರಾಪ್ತ) ಬ್ಯಾಂಕ್ ಖಾತೆ ನೋಂದಣಿ ಅರ್ಜಿ ಮತ್ತು ಕೆವೈಸಿ ದಾಖಲೆಗಳನ್ನು ಅರ್ಜಿಯ ಜತೆಗೆ ಸಲ್ಲಿಸಬೇಕಾಗುತ್ತದೆ. ಗಮನಿಸಿ: ಸ್ವಾಭಾವಿಕ ಪೋಷಕರಿದ್ದವರು 18 ವರ್ಷಕ್ಕೆ ಮೇಜರ್ (ವಯಸ್ಕ) ಆಗುತ್ತಾರೆ. ಆದರೆ ಕೋರ್ಟ್ ನೇಮಿಸಿದ ಪಾಲಕರಿರುವವರು 21 ವರ್ಷಕ್ಕೆ ಮೇಜರ್ (ವಯಸ್ಕ) ಆಗುತ್ತಾರೆ.

ವಯಸ್ಕರಾದ ಮೇಲೆ ವೈಯಕ್ತಿಕ ತೆರಿಗೆ ಅನ್ವಯಿಸುತ್ತದೆ: 18 ವರ್ಷ ತುಂಬಿದ ಬಳಿಕ ನಿರ್ದಿಷ್ಟ ವ್ಯಕ್ತಿಯ ಹೆಸರಿಗೆ ಆದಾಯ ತೆರಿಗೆ ಅನ್ವಯಿಸುತ್ತದೆ. ಮೈನರ್ (ಅಪ್ರಾಪ್ತ) ಆಗಿದ್ದ ಸಂದರ್ಭದಲ್ಲಿನ ಹೂಡಿಕೆಗೆ ಪೋಷಕರು ಅಥವಾ ಪಾಲಕರು ತೆರಿಗೆ ಪಾವತಿಸಬೇಕಾಗುತ್ತದೆ. ಉದಾಹರಣೆಗೆ ನೀವು ನಿಮ್ಮ ಮಗಳ/ಮಗನ ಹೆಸರಿನಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆ ಆರಂಭಿಸಿದಿರಿ ಎಂದಾದಲ್ಲಿ ಅದಕ್ಕೆ ಅನ್ವಯಿಸುವ ತೆರಿಗೆಯನ್ನು ನಿಮ್ಮ ಆದಾಯದ ಸ್ಲ್ಯಾಬ್‌ಗೆ ಅನುಗುಣವಾಗಿ ಪಾವತಿಸಬೇಕಾಗುತ್ತದೆ.

 

*******

ಸತತ ಜಿಗಿತ , ಷೇರುಪೇಟೆಯಲ್ಲಿ ಮುಂದೇನು?

ಷೇರು ಮಾರುಕಟ್ಟೆ ಸೂಚ್ಯಂಕಗಳು ಸತತ ಎರಡನೆಯ ವಾರವೂ ಗಳಿಕೆ ಕಂಡಿವೆ. ನವೆಂಬರ್ 13ಕ್ಕೆ ಕೊನೆಗೊಂಡ ವಾರದಲ್ಲಿ 43,443 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 3.69ರಷ್ಟು ಜಿಗಿತ ಕಂಡರೆ 12,720 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇಕಡ 3.72ರಷ್ಟು ಹೆಚ್ಚಳ ದಾಖಲಿಸಿದೆ. ಸೆನ್ಸೆಕ್ಸ್‌ನ ಲಾರ್ಜ್ , ಮಿಡ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 3.7, ಶೇ 3 ಮತ್ತು ಶೇ 2.7ರಷ್ಟು ಏರಿಕೆ ಕಂಡಿವೆ.

ಜಿಗಿತಕ್ಕೆ ಹಲವು ಕಾರಣ: ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳು ಕಳೆದ ವಾರ ಮುನ್ನೆಲೆಗೆ ಬಂದಿದ್ದವು. ಐ.ಟಿ. ವಲಯಕ್ಕೆಮುನ್ನೆಲೆಗೆ ಬರಲು ಸದ್ಯಕ್ಕೆ ಬಿಡುವುದಿಲ್ಲ ಎನ್ನುವ ಸಂದೇಶವನ್ನು ಆ ವಲಯ ರವಾನಿಸಿದಂತೆ ಕಾಣುತ್ತಿತ್ತು. ಅಮೆರಿಕದ ಹೂಸ ನಾಯಕತ್ವದ ಬಗ್ಗೆ ಸಿಕ್ಕಿರುವ ಸ್ಪಷ್ಟತೆ, ಕೋವಿಡ್–19ಕ್ಕೆ ಸದ್ಯದಲ್ಲೇ ಲಸಿಕೆ ಲಭ್ಯವಾಗಬಹುದು ಎಂಬ
ಭರವಸೆ, ಎರಡನೆಯ ತ್ರೈಮಾಸಿಕದ ಅವಧಿಯಲ್ಲಿ ಕಂಪನಿಗಳ ಫಲಿತಾಂಶಗಳಲ್ಲಿ ಕಂಡುಬಂದಚೇತರಿಕೆ, ಆರ್ಥಿಕ ಸಂಕಷ್ಟದ ಕಾರ್ಮೋಡ ನಿಧಾನವಾಗಿ ಸರಿಯುವ ಆಸೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಖರೀದಿ ಭರಾಟೆ ಸೇರಿ ಅನೇಕ ಅಂಶಗಳು ಮಾರುಕಟ್ಟೆಯ ಉತ್ಸಾಹಕ್ಕೆ ಕಾರಣವಾಗಿವೆ.

ವಿದೇಶಿ ಹೂಡಿಕೆದಾರರ ಬೆಂಬಲ: ನವೆಂಬರ್ 13ಕ್ಕೆ ಕೊನೆಗೊಂಡ ವಾರದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 19,832.94 ಕೋಟಿ ಹೂಡಿಕೆ ಮಾಡಿದ್ದಾರೆ. ದೇಶಿ ಹೂಡಿಕೆದಾರರು ₹ 13,511.21 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ವಲಯವಾರು: ವಲಯವಾರು ಪ್ರಗತಿಯಲ್ಲಿ ನಿಫ್ಟಿ ಲೋಹ ವಲಯ ಮುಂಚೂಣಿಯಲ್ಲಿದ್ದು ಶೇ 7ರಷ್ಟು ಗಳಿಸಿದೆ. ನಿಫ್ಟಿ ರಿಯಲ್ ಎಸ್ಟೇಟ್ ಶೇ 6.5ರಷ್ಟು ಮತ್ತು ಬ್ಯಾಂಕ್ ಶೇ 6ರಷ್ಟು ಹೆಚ್ಚಳ ಕಂಡಿವೆ.

ಏರಿಕೆ-ಇಳಿಕೆ: ನಿಫ್ಟಿ–50ರಲ್ಲಿ ಐಷರ್ ಮೋಟರ್ಸ್ ಶೇ 6.97ರಷ್ಟು, ಬಜಾಜ್ ಫಿನ್‌ಸರ್ವ್ ಶೇ 3.34ರಷ್ಟು, ಕೋಲ್ ಇಂಡಿಯಾ ಶೇ 3.11ರಷ್ಟು, ಟಾಟಾ ಸ್ಟೀಲ್ ಶೇ 2.83ರಷ್ಟು, ಡಿವಿಎಸ್ ಲ್ಯಾಬ್ಸ್ ಶೇ 1.96ರಷ್ಟು, ಐಸಿಐಸಿಐ ಬ್ಯಾಂಕ್ ಶೇ 1.86ರಷ್ಟು, ಎಕ್ಸಿಸ್ ಬ್ಯಾಂಕ್ ಶೇ 1.78ರಷ್ಟು, ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ 1.54ರಷ್ಟು, ಮತ್ತು ಎಸ್‌ಬಿಐ ಶೇ 1.17ರಷ್ಟು ಜಿಗಿದಿವೆ. ಟಾಟಾ ಮೋಟರ್ಸ್ ಶೇ 3.21ರಷ್ಟು, ಲಾರ್ಸನ್ ಶೇ 2.02ರಷ್ಟು, ಎಚ್‌ಡಿಎಫ್‌ಸಿ ಶೇ 1.09ರಷ್ಟು, ಯುಪಿಎಲ್ ಶೇ 0.99, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 0.94ರಷ್ಟು, ಏರ್‌ಟೆಲ್ ಶೇ 0.85ರಷ್ಟು, ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಶೇ 0.70ರಷ್ಟು, ಅದಾನಿ ಪೋರ್ಟ್ ಶೇ 0.69ರಷ್ಟು ಮತ್ತು ಐಒಸಿ ಶೇ 0.64ರಷ್ಟು ಕುಸಿತ ಕಂಡಿವೆ.

ಐಪಿಒ ಆರಂಭ: ಇತ್ತೀಚೆಗೆ ಆರಂಭಿಕ ಸಾರ್ವಜನಿಕ ಬಂಡವಾಳ (ಐಪಿಒ) ಸಂಗ್ರಹಿಸಿ ಉತ್ತಮ ಪ್ರಗತಿ ಸಾಧಿಸಿರುವ ಕಂಪನಿಗಳ ಸಾಲಿನಲ್ಲಿ ಈ ವಾರ ಶೇ 4.42ರಷ್ಟು ಏರಿಕೆಯೊಂದಿಗೆ ಏಂಜಲ್ ಬ್ರೋಕಿಂಗ್ ಅಗ್ರ ಸ್ಥಾನದಲ್ಲಿದ್ದರೆ ಮೆಜಗನ್ ಡಾಕ್ ಶೇ 4.21ರಷ್ಟು, ಈಕ್ವಿಟಾಸ್ ಬ್ಯಾಂಕ್ ಶೇ 2.83ರಷ್ಟು, ಎಂಎಸ್‌ಟಿಸಿ ಶೇ 2.44ರಷ್ಟು, ಮೆಟ್ರೊ ಪಾಲಿಸಿ 1.83ರಷ್ಟು ಮತ್ತು ಹ್ಯಾಪಿಯೆಸ್ಟ್ ಮೈಂಡ್ಸ್ ಶೇ 0.89ರಷ್ಟು ಹೆಚ್ಚಳ ದಾಖಲಿಸಿವೆ. 

ಮುನ್ನೋಟ: ಷೇರು ಮಾರುಕಟ್ಟೆ ಸೂಚ್ಯಂಕಗಳು ಹೊಸ ಎತ್ತರಕ್ಕೆ ತಲುಪಿ ದಾಖಲೆ ನಿರ್ಮಿಸಿವೆ. ಆದರೆ ಇದೇ ಓಟ ಮುಂದುವರಿಯಲಿದೆ ಎಂದು ನಿಚ್ಚಳವಾಗಿ ಹೇಳಲು ಸಾಧ್ಯವಿಲ್ಲ. ಮಾರುಕಟ್ಟೆ ಇನ್ನು ಮುಂದೆ ಹೆಚ್ಚು ಏರಿಳಿತಗಳಿಂದ ಕೂಡಿರಲಿದೆ. ಆರ್ಥಿಕತೆ ಉತ್ತಮ ಚೇತರಿಕೆ ಕಂಡರೆ ಮಧ್ಯಮ ಮತ್ತು ಸಣ್ಣ ಗಾತ್ರದ ಕಂಪನಿಗಳು ಅನಿರೀಕ್ಷಿತ ಸಾಧನೆ ಮಾಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯೊಂದಿಗೆ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳ ಮೇಲೂ ವಿಶ್ವಾಸ ಇಡಬಹುದು. ಕೋವಿಡ್ ನಡುವೆಯೂ ಕಾರ್ಪೊರೇಟ್ ಕಂಪನಿಗಳು ಎರಡನೇ ತ್ರೈಮಾಸಿಕದಲ್ಲಿ ತೋರಿದ ಸಾಧನೆ ಭರವಸೆ ಮೂಡಿಸಿದೆ.


ಪ್ರಮೋದ್ ಬಿ.ಪಿ.

(ಲೇಖಕ ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು