ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ಭಕ್ತಿಯಿಂದ ಕೇಳಿದರೆ ಮುಕ್ತಿ ಪ್ರಾಪ್ತಿ

ಅಕ್ಷರ ಗಾತ್ರ

ಶಿವಕಥಾಶ್ರವಣವು ನಿರ್ವಿಘ್ನವಾಗಿ ನೆರವೇರಲು ಮೊದಲು ಗಣಪತಿಯನ್ನು ಪೂಜಿಸಿ, ಅನಂತರ ಶಿವನನ್ನೂ, ಮಂಗಳಕರ ದೇವತೆಯಾಗಿರುವ ಪುರಾಣದ ಪುಸ್ತಕವನ್ನೂ ಭಕ್ತಿಯಿಂದ ಪೂಜಿಸಬೇಕು. ಶಿವಪೂಜೆಯ ವಿಧಿಯಂತೆ ಸಂಕ್ಷೇಪವಾಗಿ ಪ್ರಾಯಶ್ಚಿತ್ತವನ್ನಾಚರಿಸಿ, ನವಗ್ರಹಗಳ ಪೂಜೆಮಾಡಬೇಕು. ಪೂಜೆಯಾದ ನಂತರ ಅತ್ಯಂತ ಭಕ್ತಿಯಿಂದ ಕೈಗಳನ್ನು ಜೋಡಿಸಿಕೊಂಡು ನಮ್ರವಾಗಿ ನಿಂತು ಶಿವಸ್ವರೂಪವಾಗಿರುವ ಪುಸ್ತಕವನ್ನು ‘ಎಲೈ, ಶಿವಸ್ವರೂಪವಾದ ಗ್ರಂಥವೇ. ನಿನ್ನಲ್ಲಿರುವ ಶಿವಾಮೃತವನ್ನು ಸವಿಯಲು ಬಂದಿರುವೆ. ಪ್ರಸನ್ನನಾಗಿ ಅನುಗ್ರಹಿಸು’ ಅಂತ ಪ್ರಾರ್ಥಿಸಿ, ನಮಸ್ಕರಿಸಬೇಕು.

ಶಿವಪುರಾಣದ ಆಚಾರ-ವಿಚಾರಗಳನ್ನು ತಿಳಿದು, ಶುದ್ಧಚಿತ್ತನಾಗಿ ಕೇಳುವವನು, ಪುರಾಣಿಕನಲ್ಲಿ ಭಕ್ತಿಯಿಟ್ಟು, ಸಂತೋಷಚಿತ್ತನಾಗಿ ಕೇಳಬೇಕು. ಶಿವಪುರಾಣ ಕೇಳುವ ಮುನ್ನ ಪರಶಿವನನ್ನುದ್ದೇಶಿಸಿ ‘ಎಲೈ ಶಂಕರನೇ, ಸಂಸಾರಸಾಗರದಲ್ಲಿ ಮುಳುಗಿ ದೀನನಾಗಿಯೂ, ಪೂರ್ವಾರ್ಜಿತ ಕರ್ಮಗಳೆಂಬ ಮೊಸಳೆಗಳಿಂದ ಹಿಡಿಯಲ್ಪಟ್ಟಿರುವ ನನ್ನನ್ನು ಸಂಸಾರ ಎಂಬ ಸಮುದ್ರದಿಂದ ಪಾರುಮಾಡು. ನನ್ನ ಮನೋರಥವೆಲ್ಲವೂ ಸಫಲವಾಗುವಂತೆ ಮಾಡು ಮತ್ತು ನಿರ್ವಿಘ್ನವಾಗಿ ಸಂಪೂರ್ಣ ಕಥಾಶ್ರವಣವಾಗುವಂತೆ ನನಗೆ ಅನುಗ್ರಹಿಸು’ ಅಂತ ಪ್ರಾರ್ಥಿಸಬೇಕು.
ನಂತರ ಶಿವಪೂಜಾವಿಧಿಯಂತೆ ಪುರಾಣಿಕನನ್ನು ಪುಷ್ಪ, ವಸ್ತ್ರ, ಒಡವೆ, ಧೂಪ, ದೀಪಾದಿ ಸಾಮಗ್ರಿಗಳಿಂದ ಪೂಜಿಸಬೇಕು. ಪುರಾಣಿಕನ ಎದುರಿಗೆ ಶುದ್ಧವಾದ ಮನಸ್ಸಿನಿಂದ ‘ನಾನು ಪುರಾಣ ಮುಗಿಯುವವರೆಗೂ ಪ್ರಯತ್ನಪೂರ್ವಕವಾಗಿ ಇರುತ್ತೇನೆ’ ಎಂದು ಸಂಕಲ್ಪ ಮಾಡಬೇಕು. ಅನಂತರ ಐದು ಜನಗಳಿಗಾಗಲೀ ಅಥವಾ ಒಬ್ಬನಿಗೇ ಆಗಲಿ, ಶಿವಪಂಚಾಕ್ಷರೀಜಪಕ್ಕೋಸ್ಕರ ವರಣವನ್ನು ಕೊಡಬೇಕು. ಅನಂತರ ಅವರು ಶಿವಪಂಚಾಕ್ಷರೀ ಜಪವನ್ನು ಮಾಡುತ್ತಿರಬೇಕು.

ಶಿವಪುರಾಣ ಹೇಳುವವನಾಗಲೀ ಕೇಳುವವನಾಗಲೀ ನಾನಾ ಕೆಲಸಗಳ ಗಡಿಬಿಡಿಯಲ್ಲಿರಬಾರದು. ಕಾಮಾದಿ ವಿಕಾರರಹಿತನಾಗಿರಬೇಕು. ನಾಸ್ತಿಕನಾಗಿರಬಾರದು. ಇದಕ್ಕೆ ವಿರುದ್ಧವಾಗಿದ್ದರೆ, ಹೇಳುವವನಿಗೂ ಕೇಳುವವರಿಗೂ ಯಾವ ಪುಣ್ಯವೂ ಬಾರದು; ಬದಲಿಗೆ ಪಾಪ ಬರುವುದು. ಇದಕ್ಕಾಗಿ ಕೇಳುವವರು ಶುದ್ಧರಾಗಿ, ಪ್ರಸನ್ನಚಿತ್ತರಾಗಿ, ಒಳ್ಳೆ ಬುದ್ಧಿಯುಳ್ಳವರಾಗಿರಬೇಕು. ನೀತಿನಿಯಮದಂತೆ ಆದರದಿಂದ ಶಿವಪುರಾಣವನ್ನು ಕೇಳಬೇಕು. ಲೋಕವ್ಯವಹಾರದ ಚಿಂತೆ, ಧನ-ಮನೆ-ಮಕ್ಕಳ ಇತ್ಯಾದಿ ಲವಲೇಶದ ಯೋಚನೆಯನ್ನೂ ಮಾಡಬಾರದು. ಕೇವಲ ಶಿವಕಥೆಯನ್ನು ಕೇಳುವುದರಲ್ಲಿ ಮಾತ್ರ ಮನಸ್ಸಿಡುವ ಶುದ್ಧಮತಿಗಳಾಗಿರಬೇಕು. ನಿಯಮಬದ್ದರಾಗಿ ಶಿವಪುರಾಣ ಹೇಳುವವರಿಗೆ ಮತ್ತು ಕೇಳುವವರಿಗೆ ಉತ್ತಮವಾದ ಫಲ ದೊರೆವುದು. ಶ್ರದ್ಧಾಭಕ್ತಿಯಿಂದ, ಅನ್ಯಯೋಚನೆಗಳನ್ನು ಬಿಟ್ಟು, ತನು-ಮನ ಶುಚಿಯಾಗಿಟ್ಟುಕೊಂಡು, ಮೌನದಿಂದ ಯಾರು ಶಿವಪುರಾಣ ಕೇಳುವರೋ ಅವರು ಪುಣ್ಯವಂತರಾಗುತ್ತಾರೆ.

ಭಕ್ತಿಯಿಲ್ಲದೆ ಕುಹಕಬುದ್ಧಿಯಿಂದ ಈ ಪುಣ್ಯಕಥೆಯನ್ನು ಕೇಳುವವರಿಗೆ ಶುಭಫಲ ಸಿಗುವುದಿಲ್ಲ. ಅದಕ್ಕೆ ಬದಲು, ಅವರಿಗೆ ಜನ್ಮಜನ್ಮದಲ್ಲೂ ದುಃಖವೇ ಪ್ರಾಪ್ತವಾಗುವುದು. ಶಿವಪುರಾಣವನ್ನು ಹೇಳುತ್ತಿರುವಾಗ ಮಧ್ಯದಲ್ಲಿ ಯಾರಾದರೂ ಎದ್ದುಹೋದರೆ ಅವರ ಎಲ್ಲಾ ಸಂಪತ್ತುಗಳು ನಾಶವಾಗುವುವು. ಯಾರು ಪುರಾಣ ಶ್ರವಣಕಾಲದಲ್ಲಿ ಪೇಟವನ್ನು ಧರಿಸಿ ಕೇಳುತ್ತಾರೋ, ಅವರಿಗೆ ಹುಟ್ಟುವ ಮಕ್ಕಳು ಪಾಪಿಗಳಾಗಿ, ಕುಲದೂಷಕರಾಗುವರು. ಯಾರು ತಾಂಬೂಲ ಮೆಲ್ಲುತ್ತಾ ಪುರಾಣವನ್ನು ಕೇಳುವರೋ ಅವರನ್ನು ಯಮಕಿಂಕರರು ನರಕಕ್ಕೆ ಒಯ್ದು, ಅಲ್ಲಿ ಅವರಿಗೆ ಅವರ ಅಮೇಧ್ಯವನ್ನೇ ತಿನ್ನಿಸುವರು. ಎತ್ತರವಾದ ಆಸನದಲ್ಲಿ ಕುಳಿತು ಶಿವಪುರಾಣವನ್ನು ಕೇಳುವವರು, ನರಕದಲ್ಲಿ ದುಃಖವನ್ನು ಅನುಭವಿಸಿ ಅನಂತರ ಕಾಗೆಗಳಾಗುವರು. ವೀರಾದಿ ಆಸನಗಳನ್ನು ಹಾಕಿಕೊಂಡು ಕುಳಿತು ಈ ಪುರಾಣವನ್ನು ಕೇಳುವವರು, ನರಕವನ್ನನುಭವಿಸಿ ವಿಷವೃಕ್ಷಗಳಾಗುವರು. ರೋಗವಿಲ್ಲದಿದ್ದರೂ ಯಾರು ಮಲಗಿಕೊಂಡು ಪುರಾಣವನ್ನು ಕೇಳುವರೋ ಅವರು ನರಕವನ್ನನುಭವಿಸಿ ಅಜಗರವೇ ಮುಂತಾದ ಸರ್ಪಗಳಾಗಿ ಹುಟ್ಟುವರು.

ಶಿವಪುರಾಣಿಕನನ್ನು ನಮಸ್ಕರಿಸದೆ, ಪುರಾಣವನ್ನು ಕೇಳುವವರು ನರಕಗಳನ್ನು ಅನುಭವಿಸಿ ಮತ್ತೀವೃಕ್ಷವಾಗಿ ಹುಟ್ಟುವರು. ಪುರಾಣಿಕನ ಆಸನಕ್ಕೆ ಸಮನಾಗಿ ಆಸನವನ್ನು ಹಾಕಿಕೊಂಡು ಪುರಾಣ ಕೇಳುವವರಿಗೆ ನರಕಪ್ರಾಪ್ತಿಯಾಗಿ, ಗುರುದ್ರೋಹ ಮಾಡಿದ ಪಾಪವನ್ನು ಪಡೆವರು. ಶಿವಕಥೆಯನ್ನೂ ಶಿವಕಥೆ ಕೇಳುವವರನ್ನೂ ನಿಂದಿಸಿದವರು ನೂರು ಜನ್ಮಗಳ ಕಾಲ ದುಃಖವನ್ನನುಭವಿಸಿ, ನಾಯಿಗಳಾಗಿ ಹುಟ್ಟುವರು. ಶಿವಪುರಾಣವನ್ನು ಹೇಳುತ್ತಿರುವಾಗ ಕೆಟ್ಟ ಮಾತುಗಳನ್ನಾಡುವವರು ಘೋರವಾದ ನರಕವನ್ನು ಅನುಭವಿಸಿ ಕತ್ತೆಗಳಾಗಿ ಹುಟ್ಟುವರು. ಪುರಾಣಕೀರ್ತನೆಗೆ ವಿಘ್ನ ಮಾಡುವವರು ಒಂದು ಕೋಟಿವರ್ಷಗಳ ಕಾಲ ನರಕವನ್ನನುಭವಿಸಿಹಂದಿಗಳಾಗಿ ಹುಟ್ಟುವರು. ಆದ್ದರಿಂದ ಸಾಕ್ಷಾತ್ ಶಿವಸ್ವರೂಪವಾದ ಶಿವಪುರಾಣವನ್ನು ಶ್ರದ್ಧಾ-ಭಕ್ತಿಯಿಂದ ಕೇಳಬೇಕು ಅಂತ ಸೂತಮುನಿಯು ಶಿವಪುರಾಣದ ವಿಧಿ-ವಿಧಾನಗಳನ್ನು ಶೌನಕಮುನಿಗೆ ತಿಳಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT