ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ| ಶಿವನ ಬಲಪಾರ್ಶ್ವದಲ್ಲಿ ಹುಟ್ಟಿದ ಬ್ರಹ್ಮ

ಭಾಗ 84
ಅಕ್ಷರ ಗಾತ್ರ

ಈಗ ಬ್ರಹ್ಮ ತಾನು ವಿಷ್ಣುವಿನ ನಾಭಿಯಿಂದ ಹುಟ್ಟಿದ ಕತೆಯನ್ನು ನಾರದನಿಗೆ ಹೇಳುತ್ತಾನೆ.

‘ಶಿವನ ಇಚ್ಛೆಯಂತೆ ನಾರಾಯಣನು 24 ತತ್ವಗಳೆಲ್ಲವನ್ನೂ ತೆಗೆದುಕೊಂಡು ಬ್ರಹ್ಮರೂಪವಾದ ಆ ನೀರಿನ ಮಲಗಿದ ನಂತರ ಅವನ ನಾಭಿಯಿಂದ ಶ್ರೇಷ್ಠವಾದ, ನಾನಾ ಎಸಳುಗಳು ಕಮಲವೊಂದು ಹೊರ ಬಂದಿತು. ಅದರ ಬಣ್ಣ ಕರ್ಣಿಕಾರವಾಗಿತ್ತು. ಅಂದರೆ ಬೆಟ್ಟದ ತಾವರೆಪುಷ್ಪದಂತೆ ಇತ್ತು. ಅದು ಅನೇಕ ಯೋಜನಗಳಷ್ಟು ಅಗಲವಾಗಿತ್ತು, ಎತ್ತರವಾಗಿತ್ತು. ಅದರ ಪ್ರಭೆಯು ಕೋಟಿ ಸೂರ್ಯರಿಗೆ ಸರಿಸಮವಾಗಿತ್ತು. ಅದು ಬಹು ಸುಂದರವಾಗಿ, ಅತಿ ರಮಣೀಯವಾಗಿ, ಮಹಾದ್ಭುತವಾಗಿ, ಪುನಃ ಪುನಃ ನೋಡಬೇಕು ಎಂದೆನಿಸುವಂತೆಯೂ ಅತ್ಯುತ್ತಮವಾಗಿ ಶೋಭಿಸುತ್ತಿತ್ತು.

‘ಜಗಜ್ಜನನಿಯೊಡಗೂಡಿದ ಪರಮಪುರುಷನಾದ ಆ ಶಂಕರನು ತನ್ನ ಶರೀರದ ಬಲಭಾಗದಿಂದ ಬ್ರಹ್ಮನಾದ ನನ್ನನ್ನು ಸೃಷ್ಟಿಸಿದ. ಮಹೇಶ್ವರನು ನನ್ನನ್ನು ಮಾಯೆಯಿಂದ ಮೋಹಿತನನ್ನಾಗಿ ಮಾಡಿದ. ಒಡನೆಯೇ ನಾನು ಲೀಲಾಮಾತ್ರದಿಂದ ವಿಷ್ಣುವಿನ ನಾಭಿಕಮಲದಿಂದ ಹೊರಗೆ ಬರುವಂತೆ ಮಾಡಿದ. ಈ ರೀತಿಯಾಗಿ ನಾನು ಹುಟ್ಟುವಾಗಲೇ, ಹಿರಣ್ಯಗರ್ಭನೂ ನಾಲ್ಕು ಮುಖಗಳುಳ್ಳವನೂ ಕೆಂಪುಬಣ್ಣವುಳ್ಳವನೂ ಮೂರುಪಟ್ಟೆ ವಿಭೂತಿಯಿಂದ ಭೂಷಿತವಾದ ಲಲಾಟಪ್ರದೇಶವುಳ್ಳವನೂ ಆಗಿದ್ದೆ. ಆ ಶಿವನ ಪುತ್ರನಾದ ನಾನು ಕಮಲದಿಂದ ಕೂಡಿ ವಿಷ್ಣುವಿನ ನಾಭಿಯಿಂದ ಜಗತ್ತಿಗೆ ಬಂದೆ.

‘ನಾನು ಶಿವನ ಮಾಯೆಯಿಂದ ಮೋಹಿತನಾಗಿ ಜ್ಞಾನವಿಲ್ಲದಂತಾಗಿದ್ದೆ. ಕಮಲವನ್ನು ಹೊರತು, ನನ್ನೀದೇಹಕ್ಕೆ ಕಾರಣಭೂತನಾದ ಆ ಜನಕ ಯಾರೆಂದು ಅರಿಯಲಿಲ್ಲ. ನಾನು ಯಾರು? ಎಲ್ಲಿಂದ ಬಂದೆ? ನನ್ನ ಕೆಲಸವಾದರೂ ಏನು? ನಾನು ಯಾರಿಗೆ ಮಗನಾಗಿ ಹುಟ್ಟಿದೆ? ನಾನೀಗ ಏಕೆ ಸೃಷ್ಟಿಸಲ್ಪಟ್ಟೆ? ಈ ಸಂಶಯಗಳಿಂದ ತೊಳಲುತ್ತಿದ್ದ ನನಗೆ ಇದ್ದಕ್ಕಿದ್ದಂತೆಯೇ ಒಂದು ವಿಚಾರ ಹೊಳೆಯಿತು. ನನಗೇಕೆ ಈ ರೀತಿ ಮಂಕು ಕವಿಯಿತು? ಈ ಅಜ್ಞಾನದಿಂದ ಹೊರಬರಲು ಜ್ಞಾನವನ್ನು ಸಂಪಾದಿಸುವುದು ಒಳ್ಳೆಯದಲ್ಲವೇ? ಈ ತಾವರೆಹೂವಿನ ಕೆಳಗಡೆ, ಅಂದರೆ, ಎಲೆಗಳು ಬೆಳೆದಿರುವ ಸ್ಥಳದಲ್ಲಿ ನನ್ನ ಜನಕನು ಇದ್ದೇ ಇರಬೇಕು. ಸಂಶಯವಿಲ್ಲ ಅಂದುಕೊಂಡೆ. ಓ ನಾರದ, ಹೀಗೆ ಬುದ್ಧಿಯುಂಟಾದ ಮೇಲೆ ನಾನು ಕಮಲದಿಂದ ಕೆಳಗಿಳಿದೆ. ನೂರು ವರ್ಷಗಳವರೆಗೂ ಅದರ ಪ್ರತಿಯೊಂದು ನಾಳದಲ್ಲಿಯೂ ಸುತ್ತಾಡಿದೆ.

‘ಆದರೇನು ಫಲ? ನಾನು ಕಮಲದ ಬುಡವನ್ನು ಕಂಡುಹಿಡಿಯಲಾಗಲಿಲ್ಲ. ಪುನಃ ನನ್ನನ್ನು ಸಂಶಯ ಆವರಿಸಿತು. ಆಮೇಲೆ ಕಮಲದ ಮೇಲಿನ ಕೊನೆಯನ್ನು ಕಾಣಬೇಕೆಂದು ಇಚ್ಛೆಯುಂಟಾಯಿತು. ಬಳಿಕ ಆ ಕಮಲದ ದಂಟಿನ ಮಾರ್ಗವಾಗಿ ಮೇಲೇರತೊಡಗಿದೆ. ಮಾಯಾಮೋಹಿತನಾದ ನಾನು ಆ ಕಮಲದ ಮೊಗ್ಗನ್ನೂ ಹೊಂದಲಾಗಲಿಲ್ಲ. ಮತ್ತೆ ನಾನು ನಾನಾ ಮಾರ್ಗದಲ್ಲಿ ಸುತ್ತುತ್ತಿರುವಂತೆಯೇ ನೂರು ವರ್ಷಗಳು ಕಳೆದುಹೋದವು. ಆಗ ನಾನು ಒಂದು ದಿನ ಅಲ್ಲಿಯೇ ಕ್ಷಣಕಾಲ ಮಂಕುಹಿಡಿದವನಂತೆ ನಿಂತುಬಿಟ್ಟಂಥ ಪ್ರಸಂಗ ಜರುಗಿತು.

‘ಎಲೈ ನಾರದಮುನಿಯೇ, ಆಗ ನನಗೆ ಶಿವನ ಇಚ್ಛೆಯಿಂದ, ಮೋಹವನ್ನು ಧ್ವಂಸಗೊಳಿಸುವಂಥ ಪರಮಶುಭಕರವಾದ, ಶ್ರೇಷ್ಠವಾದ, ‘ತಪ’ ಎಂದರೆ ತಪಸ್ಸನ್ನು ಮಾಡು ಎಂಬ ಮಾತು ಕೇಳಿಬಂದಿತು. ನನ್ನ ಜನಕನನ್ನು ಕಾಣಬೇಕೆಂಬ ಹಿರಿಯಾಸೆಯಿಂದ ಮತ್ತೆ ಹನ್ನೆರಡು ವರ್ಷಗಳ ಕಾಲ ಘೋರವಾದ ತಪಸ್ಸನ್ನಾಚರಿಸಿದೆ. ಆಗ ನನ್ನ ಮುಂದೆ ನಾಲ್ಕು ತೋಳುಗಳಿಂದ ಮತ್ತು ಒಳ್ಳೆಯ ಕಣ್ಣುಗಳಿಂದ ಶೋಭಿಸುತ್ತಿದ್ದ ಭಗವಂತನಾದ ನಾರಾಯಣ ಆವಿರ್ಭವಿಸಿದ. ಆತ ತನ್ನ ನಾಲ್ಕು ಕೈಗಳಲ್ಲೂ ಶಂಖ, ಚಕ್ರ, ಗದಾ, ಪದ್ಮಗಳನ್ನು ಧರಿಸಿದ್ದ. ನೀರು ತುಂಬಿದ ಮೇಘದಂತೆ ಆತನ ಶರೀರಕಾಂತಿಯು ಶ್ಯಾಮಲವಾಗಿತ್ತು. ಹೊಂಬಣ್ಣದ ಪಟ್ಟೆಮಡಿಯನ್ನುಟ್ಟಿದ್ದ. ಕಿರೀಟವೇ ಮೊದಲಾದ ಆಭರಣಗಳಿಂದ ಅಲಂಕೃತನಾಗಿದ್ದ. ನಗುತ್ತಿರುವ ಆತನ ಮುಖವು ಕಮಲವನ್ನು ಹೋಲುತ್ತಿತ್ತು. ಸೌಂದರ್ಯದಲ್ಲಿ, ಕೋಟಿ ಮನ್ಮಥರು ಒಟ್ಟಿಗೆ ಬಂದು ನಿಂತರೂ ಆತನನ್ನು ಸರಿಗಟ್ಟಲಾರರು. ಅಂತಹ ವೈಭವದಿಂದ ಮೆರೆಯುತ್ತಿದ್ದ ನಾರಾಯಣನನ್ನು ಶಿವಮಾಯಾಮೋಹಿತನಾದ ನಾನು ಕಂಡೆ’ ಎಂದು ಬ್ರಹ್ಮ ನಾರದನಿಗೆ ತನ್ನ ಹುಟ್ಟಿನ ಕತೆಯನ್ನು ಹೇಳತೊಡಗುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT