ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ| ಬ್ರಹ್ಮನ ರಕ್ಷಣೆಗೆ ಬಂದ ವಿಷ್ಣು

Last Updated 24 ಜೂನ್ 2022, 19:30 IST
ಅಕ್ಷರ ಗಾತ್ರ

ಕಾಮವಿಕಾರಕ್ಕೆ ಸಿಲುಕಿದ್ದ ಬ್ರಹ್ಮ ಹೇಗಾದರೂ ಸತೀದೇವಿಯ ಮುಖ ನೋಡಬೇಕೆಂಬ ಉತ್ಕಟೇಚ್ಛೆಯಿಂದ ಒಂದು ಉಪಾಯ ಮಾಡಿದ. ಹಸಿಯ ಸೌದೆಗಳನ್ನು ವಿವಾಹಾಗ್ನಿಗೆ ಹೆಚ್ಚಾಗಿ ಹಾಕಿ ಆಜ್ಯವನ್ನು ಸ್ವಲ್ಪವೇ ಹೋಮಮಾಡುತ್ತಾ ಹೊಗೆಯನ್ನೆಬ್ಬಿಸಿದ. ಆಗ ಹೊಗೆಯು ಹೆಚ್ಚಾಗಿ, ಯಾರಿಗೂ ಕಣ್ಣು ಕಾಣಿಸದಂತಾಯಿತು. ಹೊಗೆಯಿಂದ ರಕ್ಷಿಸಿಕೊಳ್ಳಲು ಪರಮೇಶ್ವರ ತನ್ನೆರಡು ಕೈಗಳಿಂದ ಕಣ್ಣುಗಳನ್ನು ಮುಚ್ಚಿಕೊಂಡ. ಆಗ ಕಾಮುಕನಾದ ಬ್ರಹ್ಮ ವಧುವಿನ ಉಡುಪಿನಲ್ಲಿದ್ದ ಸತೀದೇವಿಯ ಸೀರೆ ಸೆರಗನ್ನು ಸರಿಸಿ, ಅವಳ ಸುಂದರಮುಖವನ್ನು ನೋಡಿ ಮಹಾಸಂತೋಷದಿಂದ ಸಂಭ್ರಮಿಸಿದ.

ಕಾಮವಿಕಾರಕ್ಕೊಳದ ಬ್ರಹ್ಮನ ವೀರ್ಯವು ಹಿಮದ ತುಂತುರಿನಂತೆ ನೆಲಕ್ಕೆ ಬಿದ್ದಿತು. ಇದನ್ನು ಕಂಡು ಬ್ರಹ್ಮ ಹೆದರಿ ತನ್ನ ರೇತಸ್ಸನ್ನು ಯಾರಿಗೂ ಕಾಣಿಸದಂತೆ ಒರೆಸಿ ಮುಚ್ಚಿಹಾಕಿದ. ಆಗ ಭಗವಾನ್ ಶಂಕರನ ದಿವ್ಯದೃಷ್ಟಿಗೆ ಬ್ರಹ್ಮ ಮಾಡಿದ ಕುಕೃತ್ಯ ತಿಳಿದುಹೋಯಿತು. ಆಗ ರುದ್ರ ಭಯಂಕರ ಕೋಪದಿಂದ ‘ಎಲೈ ಪಾಪಿಯಾದ ಬ್ರಹ್ನನೆ! ಇದೇನು ಮಾಡಿದೆ? ವಿವಾಹದ ಸಂದರ್ಭದಲ್ಲಿ ನನ್ನ ಕಾಂತೆಯ ಮುಖವನ್ನು ಅನುರಾಗದಿಂದ ನೋಡುತ್ತಿರುವೆಯಲ್ಲಾ! ಇಂಥ ನಿಂದಿತವಾದ ಅಸಹ್ಯವಾದ ಕರ್ಮವನ್ನು ಏಕೆ ಮಾಡಿರುವೆ?’ ಎಂದು ಪ್ರಶ್ನಿಸಿದ.

ರುದ್ರದೇವನ ಕೋಪನೋಡಿ ಬ್ರಹ್ಮ ತನ್ನ ತಪ್ಪಿನ ಅರಿವಾಗಿ ನಿರುತ್ತರನಾದ. ಆಗ ಶಿವ ಮತ್ತಷ್ಟು ಕೋಪೋದ್ರಿಕ್ತನಾಗಿ ‘ನೀನು ಮಾಡಿದ ದುಷ್ಕರ್ಮವು ನನಗೆ ತಿಳಿದಿಲ್ಲವೆಂದುಕೊಂಡಿರುವೆಯಾ? ಮೂರು ಲೋಕಗಳಲ್ಲಿ ಶಂಕರನಿಗೆ ತಿಳಿಯದಿರುವುದು ಯಾವುದೂ ಇಲ್ಲ; ನಿನ್ನ ಅವಿವೇಕವು ನನಗೆ ತಿಳಿಯಲಾರದೆ? ಎಳ್ಳಿನಲ್ಲಿ ಹೇಗೆ ಎಣ್ಣೆಯು ಅಡಗಿರುವುದೋ ಅದರಂತೆ ನಾನೂ ಮೂರು ಲೋಕಗಳಲ್ಲಿರುವ ಸ್ಥಿರಚರರೂಪಗಳಲ್ಲಿ ಅಂತರ್ಯಾಮಿಯಾಗಿ ವ್ಯಾಪಿಸಿರುವೆ. ನನಗೆ ತಿಳಿಯದಿರುವ ಸಮಾಚಾರವು ಒಂದೂ ಇಲ್ಲ’ ಎಂದು ಹೇಳಿ, ವಿಷ್ಣುವಿಗೆ ಕೊಟ್ಟ ವಾಗ್ದಾನದಂತೆ ಬ್ರಹ್ಮನನ್ನು ಸಂಹರಿಸಲು ತ್ರಿಶೂಲವನ್ನೆತ್ತಿದ.

ಆಗ ಬ್ರಹ್ಮನ ಮಾನಸಪುತ್ರರಾದ ಮರೀಚಿಮುನಿ ಮೊದಲಾದವರು ಭಯದಿಂದ ಹಾಹಾಕಾರ ಮಾಡಿದರು. ಶಂಕರನನ್ನು ಶಾಂತಗೊಳಿಸಲು ವಿವಿಧ ಸ್ತೋತ್ರ ಮಾಡಿದರು. ‘ಓ ಮಹಾದೇವನೇ, ಶಾಂತನಾಗು. ಅನುಗ್ರಹವನ್ನು ಮಾಡಿ ಬ್ರಹ್ಮನನ್ನು ರಕ್ಷಿಸು. ನೀನು ಜಗತ್ತಿಗೆ ತಂದೆಯಾದರೆ, ಸತಿಯು ನಮಗೆಲ್ಲ ಮಾತೆ. ನೀನು ಅದ್ಬುತವಾದ ಆಕಾರ ಮತ್ತು ಲೀಲೆಯುಳ್ಳವನು. ನಿನ್ನ ಮಾಯೆಯು ಅಮೋಘವಾದದು. ಆ ಮಾಯೆಯು ನಿನ್ನ ಭಕ್ತಿಯಿಲ್ಲದ ಪ್ರಾಣಿಗಳನ್ನೆಲ್ಲಾ ಮೋಹಗೊಳಿಸಿ, ಪಾಠ ಕಲಿಸುವುದು. ಈಗ ಬ್ರಹ್ಮನು ನಿನ್ನ ಮಾಯೆಯಿಂದ ತಪ್ಪು ಮಾಡಿದ್ದಾನೆ. ಆ ತಪ್ಪನ್ನು ಕ್ಷಮಿಸು’ ಎಂದು ಮನವಿ ಮಾಡಿದರು.

ದೇವತೆಗಳು ಮತ್ತು ಮುನಿಗಳು ದೀನತೆಯಿಂದ ಸ್ತುತಿಸಿದರೂ ಕೇಳದ ಮಹೇಶ್ವರ ತನ್ನ ಶೂಲದಿಂದ ಕೊಲ್ಲಲು ಮುಂದಾದಾಗ ಅಡ್ಡಬಂದ ದಕ್ಷಪ್ರಜಾಪತಿ ‘ಬೇಡ ಬೇಡ, ನನ್ನ ತಂದೆಯನ್ನು ಕೊಲ್ಲಬೇಡ’ ಎಂದು ಭಯದಿಂದ ಕೈಗಳನ್ನೆತ್ತಿ ನಮಸ್ಕರಿಸುತ್ತಾ ಶಿವನನ್ನು ತಡೆದ. ಆಗ ಶಿವ ತಾನು ವಿಷ್ಣುವಿಗೆ ಮಾತುಕೊಟ್ಟದ್ದನ್ನು ಎಲ್ಲರಿಗೂ ತಿಳಿಸಲು ‘ಎಲೈ ದಕ್ಷಬ್ರಹ್ಮನೇ, ನನ್ನ ಪ್ರಿಯಭಕ್ತನಾದ ಹರಿಯು ಸತಿಯನ್ನು ಕಾಮಿಸಿದವರನ್ನು ಸಂಹರಿಸು ಎಂದು ಹೇಳಿರುವುದನ್ನು ನಾನು ಅಂಗೀಕರಿಸಿರುವೆ. ಅದನ್ನು ಮೀರಲು ಸಾಧ್ಯವಿಲ್ಲ. ಅದರಂತೆ ಈಗ ಬ್ರಹ್ಮನನ್ನು ಸಂಹರಿಸಿ ಹರಿಯ ಕೋರಿಕೆಯನ್ನು ಈಡೇರಿಸುವೆ’ ಎನ್ನುತ್ತಾನೆ.

ಆಗ ಅಲ್ಲಿ ನೆರೆದಿದ್ದ ದೇವತೆಗಳೂ ಮುನಿಗಳೂ ಭಯದಿಂದ ನಡುಗಿ, ಹಾಹಾಕಾರ ಮಾಡಿದರು. ನಿರಾಶೆಯು ಎಲ್ಲರಲ್ಲಿಯೂ ಮೂಡಿತು. ಬ್ರಹ್ಮ ತುಂಬಾ ಭಯದಿಂದ ದೀನನಾಗಿ ನಡುಗುತ್ತಾ ನಿಂತಿದ್ದ. ಆಗ ಮಧ್ಯ ಪ್ರವೇಶಿಸಿದ ಹರಿಯು, ಅನೇಕ ಸ್ತೋತ್ರಗಳಿಂದ ಶಂಕರನನ್ನು ಸ್ತುತಿಸಿ, ಶಿವನನ್ನು ತಡೆದ. ‘ಓ ಶಂಕರ! ಜಗತ್ತಿಗೆ ಸೃಷ್ಟಿಕರ್ತನಾದ ಈ ವಿಧಿಯನ್ನು ಕೊಲ್ಲಬೇಡ, ಇವನು ನಿನ್ನಲ್ಲೇ ಶರಣು ಹೊಂದಿರುವನು. ನಾನು ನಿನಗೆ ಪ್ರಿಯನಾದ ಭಕ್ತ. ನಿನ್ನ ಭಕ್ತರಲ್ಲಿ ಉತ್ತಮನಾದ ನನ್ನ ವಿಜ್ಞಾಪನೆಯನ್ನು ಮನ್ನಿಸಿ ಬ್ರಹ್ಮನಲ್ಲಿ ಅನುಗ್ರಹವನ್ನು ಮಾಡು’ ಎಂದು ಪ್ರಾರ್ಥಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT