ಸಂವಿಧಾನದ ಪ್ರಸ್ತಾವನೆಯನ್ನು ನಿತ್ಯ ಪಠಣ ಮಾಡಬೇಕೆಂಬ ಆದೇಶ, ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ನಿರ್ಮಾಣ, ಮಾತೆತ್ತಿದರೆ ‘ಸಂವಿಧಾನ ರಕ್ಷಕರು ನಾವೇ’ ಎಂದೆನ್ನುವ ಕರ್ನಾಟಕ ಸರ್ಕಾರದ ನೇತಾರರು ಹಾಗೂ ದೇಶದಾದ್ಯಂತ ‘ಸಂವಿಧಾನ ಸನ್ಮಾನ’ ಅಭಿಯಾನ ನಡೆಸುತ್ತಿರುವ ಬಿಜೆಪಿ ನಾಯಕರು ಈ ಎಲ್ಲರೂ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಷಯದಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್ ಅವಧಿಯು 2020ರ ಸೆಪ್ಟೆಂಬರ್ನಲ್ಲಿ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳ ಸದಸ್ಯರ ಅವಧಿಯು 2021ರ ಏಪ್ರಿಲ್ನಲ್ಲೇ ಮುಕ್ತಾಯವಾಗಿವೆ. ಮೈಸೂರು, ಶಿವಮೊಗ್ಗ, ತುಮಕೂರು ಪಾಲಿಕೆಗಳ ಅವಧಿ ಮುಗಿದು ವರ್ಷ ಕಳೆದಿದೆ. ಅನೇಕ ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನನೆಗುದಿಗೆ ಬಿದ್ದಿದೆ. ರಾಜ್ಯದಲ್ಲಿ ಯಾವುದೇ ಪಕ್ಷದ ನೇತೃತ್ವದ ಸರ್ಕಾರ ಆಡಳಿತ ನಡೆಸಿದರೂ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿಯುವ ಹೊತ್ತಿಗೆ ಚುನಾವಣೆ ನಡೆಸಲು ಒಲವು ತೋರಿದ್ದೇ ಇಲ್ಲ. ಬಿಬಿಎಂಪಿಯು ಶಾಸಕರ ಪಾಲಿಗೆ ಹಾಲು ಕರೆಯುವ ಸೀಮೆಹಸು ಇದ್ದಂತೆ. ಅಲ್ಲಿ ಚುನಾಯಿತ ಸದಸ್ಯರಿದ್ದರೆ, ಶಾಸಕರಿಗೆ ಸಿಗುವುದು ಅತ್ಯಲ್ಪ ಕಪ್ಪ. ಹೀಗಾಗಿ, ಬಿಬಿಎಂಪಿ ಚುನಾವಣೆಗೆ ಎಲ್ಲರದ್ದೂ ಸಾರ್ವಕಾಲಿಕ, ಸಾರ್ವತ್ರಿಕ ವಿರೋಧ.

ಅಧಿಕಾರ ವಿಕೇಂದ್ರೀಕರಣಕ್ಕೆ ಬಲಿಷ್ಠ ಚೌಕಟ್ಟು ಹಾಕಿಕೊಟ್ಟ ಭವ್ಯ ಪರಂಪರೆಯನ್ನು ಕರ್ನಾಟಕ ಹೊಂದಿದೆ. ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾ ಭಿವೃದ್ಧಿ ಸಚಿವರಾಗಿದ್ದ ಅಬ್ದುಲ್ ನಜೀರ್ ಸಾಬ್ ಅವರ ದೂರದೃಷ್ಟಿಯಿಂದಾಗಿ ಈ ಕನಸು ಮೊಳೆತಿತ್ತು. 1987ರಲ್ಲಿ ಜಿಲ್ಲಾ ಪರಿಷತ್ ಹಾಗೂ ಮಂಡಲ ಪಂಚಾಯಿತಿಗಳಿಗೆ ಚುನಾವಣೆ ನಡೆಯಿತು. ರಾಜ್ಯಕ್ಕೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಇರುವಂತೆಯೇ ಜಿಲ್ಲೆಯೂ ಪರ್ಯಾಯ ಅಧಿಕಾರ ಕೇಂದ್ರವಾಗಬೇಕೆಂಬ ಸಂಕಲ್ಪಕ್ಕೆ ಸಾಂವಿಧಾನಿಕ ಶಕ್ತಿಯನ್ನು ಕಾಯ್ದೆ ನೀಡಿತ್ತು. ಪರಿಷತ್ತಿನ ಅಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನದ ಜತೆಗೆ ಪರಿಷತ್ತಿನ ಅಧಿಕಾರಿಗಳ ಕಾರ್ಯವೈಖರಿ ಕುರಿತ ರಹಸ್ಯ ವರದಿ (ಸಿ.ಆರ್) ಬರೆಯುವ ಅಧಿಕಾರವನ್ನೂ ನೀಡಲಾಗಿತ್ತು. ಪರಿಷತ್ತಿನ ಮುಖ್ಯ ಅಧಿಕಾರಿಯನ್ನು ‘ಮುಖ್ಯ ಕಾರ್ಯದರ್ಶಿ’ ಎಂದು ಕರೆದು, ಜಿಲ್ಲಾಧಿಕಾರಿಗೆ ಸಮನಾದ ಅಧಿಕಾರ ನೀಡಲಾಗಿತ್ತು. ಯಾರೊಬ್ಬರೂ ತಮ್ಮ ಕೆಲಸಗಳಿಗಾಗಿ ರಾಜಧಾನಿಗೆ ಬರದೆ, ಸ್ಥಳೀಯ ಹಂತದಲ್ಲೇ ಎಲ್ಲವೂ ಇತ್ಯರ್ಥವಾಗಬೇಕೆಂಬ ಸದಾಶಯ ಇದರ ಹಿಂದಿತ್ತು. ಮಂಡಲ ಪಂಚಾಯಿತಿಯ ಮುಖ್ಯಸ್ಥನನ್ನು ‘ಪ್ರಧಾನ’ ಎಂದು ಉಲ್ಲೇಖಿಸಿ, ‘ಗ್ರಾಮ ಪ್ರಧಾನಿ’ಯಂತೆ ಬಿಂಬಿಸಲಾಗಿತ್ತು.

ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿಗಳನ್ನು ತರುವ ಮೂಲಕ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಂವಿಧಾನಿಕ ಬಲ ಕೊಟ್ಟರು. ಪರಿಶಿಷ್ಟ ಜಾತಿ– ಪಂಗಡದವರಿಗಷ್ಟೇ ಸೀಮಿತವಾಗಿದ್ದ ರಾಜಕೀಯ ಮೀಸಲಾತಿಯನ್ನು ಈ ತಿದ್ದುಪಡಿಯ ಬಲದಲ್ಲಿ 1996ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಮಹಿಳೆಯರು, ಹಿಂದುಳಿದ ವರ್ಗದವರಿಗೂ ವಿಸ್ತರಿಸಿದ್ದರಿಂದ ರಾಜಕೀಯಕ್ಕೆ ಹೊಸ ಸ್ಪರ್ಶ ಸಿಕ್ಕಿ, ನವಪರ್ವಕ್ಕೆ ನಾಂದಿಯಾಗಿತ್ತು. ಎಚ್.ಡಿ. ದೇವೇಗೌಡ ಅವರು ಮುಖ್ಯ ಮಂತ್ರಿಯಾಗಿದ್ದಾಗ, ಮಹಿಳೆಯರಿಗೆ ಶೇಕಡ 50ರಷ್ಟು ಮೀಸಲಾತಿ ಜಾರಿ ಮಾಡುವ ಮೂಲಕ, ಮತ್ತೊಂದು ಕ್ರಾಂತಿಕಾರಕ ಹೆಜ್ಜೆ ಇಟ್ಟರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 2006ರಲ್ಲಿ ಚುನಾವಣೆ ನಡೆಯಬೇಕಿತ್ತು. ಆಗ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ಹೆಚ್ಚಿಸಲು ಮುಂದಾದ ಅವರು, ಬಿಬಿಎಂಪಿ ರಚಿಸಿದರು. ಆಗಲೂ ಚುನಾವಣೆ ನಡೆಯಲಿಲ್ಲ. 2008ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ನಾನಾ ಕಾರಣಗಳನ್ನು ಮುಂದೊಡ್ಡಿ ಚುನಾವಣೆ ಮುಂದೂಡಲು ಯತ್ನಿಸಿತ್ತು. ಕೋರ್ಟ್ ತಪರಾಕಿ ಕೊಟ್ಟ ಬಳಿಕ 2010ರಲ್ಲಿ ಚುನಾವಣೆ ನಡೆಯಿತು.

ಬಳಿಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚುನಾವಣೆ ನಡೆಸದೇ ಇದ್ದುದನ್ನು ಪ್ರಶ್ನಿಸಿ ಕೆಲವರು ಕೋರ್ಟ್ ಮೊರೆ ಹೋದರು. ಚುನಾವಣೆಯಿಂದ ತಪ್ಪಿಸಿಕೊಳ್ಳಲು ಮುಂದಾದ ಸರ್ಕಾರ, ಬಿಬಿಎಂಪಿಯನ್ನು ಪಾಲಿಕೆಗಳಾಗಿ ವಿಭಜಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲು ಮಸೂದೆಯ ಅಂಗೀಕಾರಕ್ಕೆ ವಿಶೇಷ ಅಧಿವೇಶನ ನಡೆಸಿತು. ಈ ಮಸೂದೆಗೆ ರಾಜ್ಯಪಾಲರು ಅನುಮೋದನೆ ನೀಡಲಿಲ್ಲ. ಮೂರು ದಿನಗಳ ಅಂತರದಲ್ಲಿ ಮತ್ತೆ ಅಧಿವೇಶನ ಕರೆದು ಮಸೂದೆಗೆ ಅಂಗೀಕಾರ ಪಡೆಯಿತು. ಅದನ್ನು ಮುಂದಿಟ್ಟು ಕೋರ್ಟ್ ಮೊರೆ ಹೋದರೂ, ಚುನಾವಣೆ ನಡೆಸಲೇಬೇಕು ಎಂದು ಕೋರ್ಟ್ ತಾಕೀತು ಮಾಡಿತು. ಹೀಗಾಗಿ, 2015ರಲ್ಲಿ ಚುನಾವಣೆ ನಡೆಯಿತು.

ಚುನಾಯಿತ ಬಿಬಿಎಂಪಿ ಕೌನ್ಸಿಲ್ ಅವಧಿ 2020ಕ್ಕೆ ಮುಗಿದಾಗ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು. ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯ ಮಂತ್ರಿಯಾದರು. ಈ ಹೊತ್ತಿನೊಳಗೆ, ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವ ಬಗ್ಗೆ ಕೆಲವರು ಕೋರ್ಟ್ ಮೊರೆ ಹೋದರು. ಕಾರಣ ಬದಿಗಿಟ್ಟು ಚುನಾವಣೆ ನಡೆಸಿ ಎಂದು ಕೋರ್ಟ್ ಕಟ್ಟಾಜ್ಞೆ ಮಾಡಿತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜಧಾನಿಯ ಪ್ರಮುಖರ ಸಭೆ ನಡೆಸಿದರು. ‘ಚುನಾವಣೆ ವಿರೋಧಿಸುವವರು ಪಕ್ಷದ್ರೋಹಿಗಳು. ಎಲ್ಲರೂ ಸೇರಿ ಚುನಾವಣೆಗೆ ತಯಾರಾಗಬೇಕು’ ಎಂದು ಸೂಚನೆ ಕೊಟ್ಟರು. ಆಗ ಕೆಲವು ಪ್ರಭಾವಿ ಸಚಿವರು ತಮ್ಮ ಹಿಂಬಾಲಕರ ಮೂಲಕ ಮತ್ತೆ ಕೋರ್ಟ್ನಲ್ಲಿ ಆಕ್ಷೇಪ ಸಲ್ಲಿಸಿದರು. ಅದಕ್ಕೆ ಪೂರಕವೆಂಬಂತೆ ಸರ್ಕಾರವು ವಾರ್ಡ್ ಮರುವಿಂಗಡಣೆಯ ನೆಪದಲ್ಲಿ ಸಮಿತಿ ರಚಿಸಿ ಒಂದೂವರೆ ವರ್ಷ ಕಾಲಹರಣ ಮಾಡಿತು. 198ರಷ್ಟಿದ್ದ ವಾರ್ಡ್ಗಳ ಸಂಖ್ಯೆಯನ್ನು 243ಕ್ಕೆ ಏರಿಸುವಂತೆ ಸಮಿತಿ ಶಿಫಾರಸು ಮಾಡಿತು. ಇದನ್ನೇ ಕೋರ್ಟ್ ಮುಂದಿಟ್ಟು ಕಾಲಾವಕಾಶ ಪಡೆಯುವ ಕಸರತ್ತು ನಡೆಯಿತು.

ಈ ಪ್ರಕ್ರಿಯೆ ಬೆನ್ನಲ್ಲೇ, ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೆ ಮಾಡಿದ್ದ ವಾರ್ಡ್ ವಿಂಗಡಣೆಯನ್ನು ರದ್ದುಪಡಿಸಿ, ಹೊಸದಾಗಿ 225 ವಾರ್ಡ್ಗಳನ್ನು ಮಾಡಲು ನಿರ್ಧರಿಸಿತು. ಏತನ್ಮಧ್ಯೆ, ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್, ಗ್ರೇಟರ್ ಬೆಂಗಳೂರು ರಚನೆ ಹಾಗೂ ಬಿಬಿಎಂಪಿಯನ್ನು ಮೂರಕ್ಕೂ ಹೆಚ್ಚು ಪಾಲಿಕೆಗಳಾಗಿ ವಿಭಜಿಸುವ ಪ್ರಕ್ರಿಯೆ ಆರಂಭಿಸಿದರು. ಚುನಾವಣೆಗೆ ಮಾತ್ರ ಗಳಿಗೆ ಕೂಡಿಬರಲೇ ಇಲ್ಲ.

ಅತ್ತ ಜಿಲ್ಲೆ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರ ಅವಧಿ ಪೂರ್ಣಗೊಳ್ಳುವ ಮೊದಲೇ ಚುನಾವಣೆ ನಡೆಸಲು ಚುನಾವಣಾ ಆಯೋಗವು ಪ್ರಕ್ರಿಯೆ ಶುರು ಮಾಡಿತ್ತು. ಆಗ ಅಧಿಕಾರದಲ್ಲಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ಚುನಾವಣಾ ಆಯೋಗದಿಂದ ಕಿತ್ತುಕೊಂಡು ಹೊಸ ಆಟ ಆಡಿತು. ಅದಕ್ಕಾಗಿ, ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದು ‘ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ’ ರಚಿಸಿತು. ಕ್ಷೇತ್ರಗಳ ಪುನರ್ವಿಂಗಡಣೆ ಹಾಗೂ ಸದಸ್ಯರ ಸಂಖ್ಯೆ ನಿಗದಿಪಡಿಸಲು ರಚನೆಯಾಗಿದ್ದ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿದ್ದ ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು ಈ ಕುರಿತ ಅಧಿಸೂಚನೆಯನ್ನೇನೋ ಹೊರಡಿಸಿದೆ. ಮೀಸಲಾತಿ ಗೊಂದಲ ಮುಂದುವರಿದಿದೆ.

31 ಜಿಲ್ಲಾ ಪಂಚಾಯಿತಿಗಳಲ್ಲಿನ 1,116 ಹಾಗೂ 233 ತಾಲ್ಲೂಕು ಪಂಚಾಯಿತಿಗಳಲ್ಲಿನ 3,621 ಸದಸ್ಯರನ್ನು ಅಧಿಕಾರದಿಂದ ವಂಚಿತರನ್ನಾಗಿಸಲಾಗಿದೆ.ಪಾಲಿಕೆಗಳ ಕತೆಯೂ ಹಾಗೆಯೇ ಇದೆ. ಮೀಸಲಾತಿ, ಸಂವಿಧಾನದ ಬಗ್ಗೆ ಮಾತನಾಡುವವರು ಚುನಾವಣೆ ನಡೆಸದೇ, ಇಷ್ಟೊಂದು ಸಂಖ್ಯೆಯ ಜನಪ್ರತಿನಿಧಿಗಳು ಅಧಿಕಾರದ ಹತ್ತಿರ ಸುಳಿಯದಂತೆ ನೋಡಿಕೊಂಡಿದ್ದಾರೆ. ಸ್ಥಳೀಯ ಸಂಸ್ಥೆಗಳನ್ನೇ ಮೆಟ್ಟಿಲು ಮಾಡಿಕೊಂಡು ವಿಧಾನಸಭೆ ಪ್ರವೇಶಿಸಿದವರ ದೊಡ್ಡ ಪರಂಪರೆಯೇ ಇದೆ.ಆದರೂ ತಮಗೆ ಅಧಿಕಾರ ಸಿಕ್ಕ ಬಳಿಕ ಆ ಏಣಿಯನ್ನೇ ಮುರಿಯುವುದು ಪ್ರಜಾತಂತ್ರಕ್ಕೆ ಬಗೆಯುವ ದ್ರೋಹ. ವಿಧಾನಸಭೆ, ವಿಧಾನಪರಿಷತ್ ಅಥವಾ ಲೋಕಸಭಾ ಕ್ಷೇತ್ರಗಳ ಚುನಾಯಿತ ಸದಸ್ಯರ ಸ್ಥಾನಗಳು ತೆರವಾದರೆ ನಿಗದಿತ ಅವಧಿಗೆ ಚುನಾವಣೆ ನಡೆಸುವಸ್ವಾತಂತ್ರ್ಯವನ್ನು ಕೇಂದ್ರ ಚುನಾವಣಾ ಆಯೋಗ ಹೊಂದಿದೆ. ಅದೇ ಮಾದರಿಯ ಸ್ವಾಯತ್ತತೆಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ನೀಡುವುದೊಂದೇ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ತಡೆಗೆ ಪರಿಹಾರ ಆಗಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.