ಭಾನುವಾರ, ಸೆಪ್ಟೆಂಬರ್ 27, 2020
21 °C
ಇಳಿಗಾಲದಲ್ಲಿ ಸಿಕ್ಕಿದ್ದು ‘ಪವಿತ್ರ’ ಸರ್ಕಾರದ ಉತ್ಸವಮೂರ್ತಿಯೆಂಬ ಪಟ್ಟವಷ್ಟೆ!

ರಾಜಕೀಯ ವಿಶ್ಲೇಷಣೆ | ವರಿಷ್ಠರಿಗೆ ಒಲ್ಲದ ಶಿಶು ಯಡಿಯೂರಪ್ಪ

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಕನ್ನಡ ನಾಡಿನಲ್ಲಿ ‘ಕೇಸರಿ ಪಡೆ’ಯನ್ನು ಮೊದಲ ಬಾರಿಗೆ ಅಧಿಕಾರಕ್ಕೆ ತರುವವರೆಗೆ ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂಬ ಮಾತೊಂದಿತ್ತು. ಅವರು ಯಾವಾಗ ನಾಲ್ಕನೇ ಬಾರಿ ಮುಖ್ಯಮಂತ್ರಿಯಾದರೋ ಆಗಿನಿಂದ ‘ಅಮಿತ್‌ ಶಾ ನೋಡಿದರೆ ಯಡಿಯೂರಪ್ಪ ಅಡಗುವರು’ ಎಂಬ ಮಾತು ಚಾಲ್ತಿಗೆ ಬಂದಂತಿದೆ. ಯಡಿಯೂರಪ್ಪನವರ ಅಂತರಂಗ ಬಲ್ಲವರು ‘ಈ ಮಾತು ದಿಟ’ ಎಂದು ವಿಷಾದ ಯೋಗದಲ್ಲಿ ಉಚ್ಚರಿಸುತ್ತಾರೆ.

‘ನಾನೊಬ್ಬ ಸಾಂದರ್ಭಿಕ ಶಿಶು. ನಾನು ಜನರ ಹಂಗಿನಲ್ಲಿಲ್ಲ, ಕಾಂಗ್ರೆಸ್‌ ಹಂಗಿನಲ್ಲಿದ್ದೇನೆ’ ಎಂದೆಲ್ಲ ಹಿಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೊಂಡಿದ್ದರು. ಕಾಂಗ್ರೆಸ್ ಹಂಗಿನಲ್ಲಿ ಆಡಳಿತ ನಡೆಸಲಾಗದೇ, ಸರ್ಕಾರ ಇದ್ದೂ ಇಲ್ಲದಂತಾಗಿತ್ತು. ಯಾರದ್ದಾದರೂ ಆಗಲಿ; ಸ್ಥಿರ ಸರ್ಕಾರ ಬರಲಿ ಎಂಬ ಅಭಿಮತ ಮೂಡತೊಡಗಿತ್ತು.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ‘ಒಂದು ಮತ ಎರಡು ಸರ್ಕಾರ’ (ಕೇಂದ್ರ–ರಾಜ್ಯ) ಎಂಬ ಕರೆಯನ್ನು ಲೋಕಸಭೆ ಚುನಾವಣೆ ಹೊತ್ತಿಗೆ ಕೊಟ್ಟರು. ಮೈತ್ರಿ ಸರ್ಕಾರದ ಕಚ್ಚಾಟ ನೋಡಿದ್ದ ಮತದಾರರು, ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ‘ನಮ್ಮವರೇ’ ಆಗಿರುವ ಯಡಿಯೂರಪ್ಪ ಅಧಿ ಕಾರಕ್ಕೆ ಬರುತ್ತಾರೆ ಎಂಬ ವಿಶ್ವಾಸದಿಂದ ಕಮಲಕ್ಕೆ ಮತ ಒತ್ತಿದರು. ಬಿಜೆಪಿ ಬೆಂಬಲಿತ ಸುಮಲತಾ ಅಂಬರೀಷ್ ಸೇರಿದಂತೆ 26 ಸಂಸದರು (28ರ ಪೈಕಿ) ಗೆದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಅಭಿವೃದ್ಧಿಯ ವೇಗ ‘ಟ್ರಿಲಿಯನ್‌’ ಲೆಕ್ಕದಲ್ಲಿ ಅಳೆಯಲ್ಪಡುತ್ತದೆ ಎಂಬ ಭ್ರಮೆಯೂ ಆಗ ಇದ್ದೀತು.

ಮೈತ್ರಿಯೊಳಗಿನ ಗೊಂದಲ, ಅದಕ್ಕೆ ಅಂಟಿ ಕೊಂಡಂತೆ ನಡೆದ ‘ಆಪರೇಷನ್ ಕಮಲ’ದಿಂದಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಿದ್ದು ಹೋಯಿತು.

‘ಕುಮಾರಸ್ವಾಮಿ ಅವರದ್ದು ಅಪವಿತ್ರ ಸರ್ಕಾರ’ ಎಂದು ಹಂಗಿಸುತ್ತಿದ್ದ ಯಡಿಯೂರಪ್ಪ, ಕಾಂಗ್ರೆಸ್‌–ಜೆಡಿಎಸ್‌ನ 17 ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದಾಗಿ ಸೃಷ್ಟಿಯಾದ ಶೂನ್ಯದಲ್ಲಿ ‘ಪವಿತ್ರ’ ಸರ್ಕಾರ ರಚಿಸಲು ಅಡಾವುಡಿ ಮಾಡಿದರು. ಆದರೆ, ಆ ಪಕ್ಷದ ವರಿಷ್ಠರು ಸಮ್ಮತಿ ಸೂಚಿಸಲೇ ಇಲ್ಲ. ಯಾವಾಗ ಮುಂಬೈನಲ್ಲಿ ಕೂಡಿಹಾಕಿದ್ದ ಶಾಸಕರು ‘ವಾಪಸ್‌ (ಪಕ್ಷ–ಬೆಂಗಳೂರಿಗೆ) ಹೋಗುವುದಾಗಿ ರಚ್ಚೆ ಹಿಡಿದರೋ ಆಗ ಎಚ್ಚೆತ್ತ ಯಡಿಯೂರಪ್ಪ, ಪ್ರಮಾಣ ವಚನ ಸ್ವೀಕ ರಿಸುವ ‘ದಿಟ್ಟ’ತನ ತೋರಿದರು. ‘ಅಪವಿತ್ರ ಮೈತ್ರಿ’ಯ ಸರ್ಕಾರವನ್ನು ಬೀಳಿಸಲು ಆತುರ ತೋರಿದ್ದ ಬಿಜೆಪಿ ವರಿಷ್ಠರು ‘ಪವಿತ್ರ’ ಸರ್ಕಾರ ರಚನೆಗೆ ಔದಾರ್ಯ ತೋರ ಲಿಲ್ಲ. ಕುಮಾರಸ್ವಾಮಿ ಸಾಂದರ್ಭಿಕ ಶಿಶುವಾದರೆ, ಯಡಿ ಯೂರಪ್ಪ ಅವರು ನರೇಂದ್ರ ಮೋದಿ–ಅಮಿತ್ ಶಾ ಜೋಡಿಗೆ ಒಲ್ಲದ ಶಿಶುವಾದರು.

ಕುಮಾರಸ್ವಾಮಿ, ತೆಲಂಗಾಣದ ಕೆ. ಚಂದ್ರಶೇಖರ ರಾವ್, ಆಂಧ್ರಪ್ರದೇಶದ ಜಗನ್ ಮೋಹನ್‌ ರೆಡ್ಡಿ ಮುಖ್ಯ ಮಂತ್ರಿಯಾದಾಗ ಟ್ವೀಟ್ ಮಾಡಿ ಶುಭ ಹಾರೈಸಿದ್ದ ನರೇಂದ್ರ ಮೋದಿ, ತಮ್ಮದೇ ಪಕ್ಷದ ಹಿರಿಯಜ್ಜ ಯಡಿ ಯೂರಪ್ಪ ಮುಖ್ಯಮಂತ್ರಿಯಾದಾಗ ಬಂದು ಹೂಗುಚ್ಛ ನೀಡುವುದಿರಲಿ, ಟ್ವೀಟ್‌ನಲ್ಲಿ ಶುಭ ಕೋರುವ ಸೌಜನ್ಯ ವನ್ನೂ ತೋರಲಿಲ್ಲ.

ಸಂತೋಷ್‌ ಅವರು ಭರವಸೆ ಕೊಟ್ಟಂತೆ ಒಂದು ಮತ ಎರಡು ಸರ್ಕಾರವೇನೋ ಬಂದಿತು. ಒಕ್ಕೂಟ ವ್ಯವಸ್ಥೆಯೊಳಗೆ ಇರಬೇಕಾದ ಸ್ವಾಯತ್ತ ಅಧಿಕಾರವನ್ನು ಯಡಿಯೂರಪ್ಪನವರಿಗೆ ಕೊಡಲಿಲ್ಲ. ಸಂಪುಟ ವಿಸ್ತರಣೆ ಯಾವಾಗ, ಸಂಪುಟದಲ್ಲಿ ಯಾರಿರಬೇಕು, ಯಾರಿಗೆ ಯಾವ ಖಾತೆ ಎಂಬುದನ್ನು ‘ದಿಲ್ಲಿ ದೊರೆ’ಗಳೇ ನಿಯಂತ್ರಿ ಸಿದರು. ದಿಲ್ಲಿ ಹಂಗಿನಲ್ಲಿ ಸಾಮಂತ ರಾಜ್ಯವಾಳುವ ಉತ್ಸವ ಮೂರ್ತಿಯಾಗುವ ಸೌಭಾಗ್ಯವಷ್ಟೇ ಯಡಿಯೂರ ಪ್ಪನವರಿಗೆ ಅವರ ಇಳಿಗಾಲದಲ್ಲಿ ದಕ್ಕಿತು.

ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಯಾಗಿ ಸಂಪುಟ ಸೇರುತ್ತಾರೆ ಎಂಬುದು ಮುಖ್ಯಮಂತ್ರಿಗೆ ಗೊತ್ತಿಲ್ಲದೇ ನಡೆದುಹೋಯಿತು ಎಂದರೆ, ಕರ್ನಾಟಕವನ್ನು ಬಿಜೆಪಿ ವರಿಷ್ಠರು ಎರಡನೇ ದರ್ಜೆ ರಾಜ್ಯವಾಗಿ ಪರಿಭಾವಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಬೇಕಿಲ್ಲ. 19 ಜಿಲ್ಲೆಗಳಲ್ಲಿ ಮಹಾಪ್ರವಾಹ ಉಕ್ಕಿ ಹರಿದು ಅನ್ನವಿಕ್ಕುತ್ತಿದ್ದ ನೆಲ, ನೆರಳು ಕೊಡುತ್ತಿದ್ದ ನೆಲೆ ಎರಡೂ ಕೊಚ್ಚಿಹೋಗಿ ಜನ ದಿಕ್ಕೆಟ್ಟರು. ಪಾಕಿಸ್ತಾನದ ಹಿಂದಿನ ಪ್ರಧಾನಿ ನವಾಜ್ ಷರೀಫ್‌ ಅವರ ತಾಯಿಯ ಹುಟ್ಟುಹಬ್ಬದ ದಿನ ಶಾಲನ್ನು ಕಳುಹಿಸಿ ‘ಪ್ರೀತಿ’ ತೋರಿದ್ದ ಮೋದಿ ತಮ್ಮದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದ ಜನರ ಕಣ್ಣೀರನ್ನು ಮರೆತಿದ್ದು ಸೋಜಿಗ! 

ಕೊಡಗಿನಲ್ಲಿ ಮಹಾನೆರೆ ಬಂದಾಗ, ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ, ‘ನಾನಿದ್ದೇನೆ’ ಎಂದು ಧೈರ್ಯ ಹೇಳಿದ್ದರು ಮೋದಿ. ಬಿಜೆಪಿಯೇ ಅಧಿಕಾರದಲ್ಲಿದ್ದರೂ ಕನ್ನಡಿಗರ ಬವಣೆಗೆ ಬಾಯಿಮಾತಿನ ಸಾಂತ್ವನವೂ ಅವರಿಂದ ಸಿಗಲಿಲ್ಲ. ನಮ್ಮ ರಾಜ್ಯದಿಂದಲೇ ಆರಿಸಿ ಕಳುಹಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಂದು ಹೋಗಿ, ಸರಿಸುಮಾರು ಎರಡು ತಿಂಗಳಲ್ಲಿ ಅರೆ ಪರಿಹಾರ ಬಂದಿತು. ಅದು ಕೂಡ ಬಿಜೆಪಿ ಶಾಸಕರೇ ಕೂಗು ಹಾಕತೊಡಗಿದ ಮೇಲಷ್ಟೆ!

ಅನ್ಯಾಯ ಕಂಡಾಗ, ದೆಹಲಿಯ ಪಾರುಪತ್ಯ ಹೆಚ್ಚಾದಾಗ ಸಿಡಿದೇಳುವ ಜಾಯಮಾನದವರಾಗಿದ್ದ ಯಡಿಯೂರಪ್ಪ ಈಗ ಅಂಗಲಾಚುವ ಸ್ಥಿತಿಗೆ ತಲುಪಿರುವುದು ಕನ್ನಡಿಗರಿಗೆ ಆಗುತ್ತಿರುವ ಅವ ಮಾನವೂ ಹೌದು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಬಿಜೆಪಿ ಅಧ್ಯಕ್ಷರಾಗಿದ್ದಾಗ ನಡೆದ ಸಭೆಯಲ್ಲಿ ಇದೇ ಯಡಿಯೂರಪ್ಪ ಲ್ಯಾಪ್‌ಟಾಪ್ ತೆಗೆದೆಸೆದು ರೌದ್ರಾವತಾರ ತೋರಿದ್ದರು. ಈಗ ಸಚಿವರಾಗಿರುವ ಧರ್ಮೇಂದ್ರ ಪ್ರಧಾನ್ ಅವರು ಯಡಿಯೂರಪ್ಪ ಎದುರು ತುಟಿಪಿಟಕ್ ಎನ್ನುತ್ತಿರಲಿಲ್ಲ. ನಿತಿನ್ ಗಡ್ಕರಿ ಕೂಡ ಬಿಎಸ್‌ವೈ ಮಾತನ್ನು ನಿರಾಕರಿಸುವ ದಾರ್ಷ್ಟ್ಯ ತೋರಿದವರಲ್ಲ. ಇಂತಿಪ್ಪ ಬಲಶಾಲಿ ಯಡಿಯೂರಪ್ಪ, ತಮಗಿಂತ ಚಿಕ್ಕವಯಸ್ಸಿನವರಾದ ಅಮಿತ್ ಶಾ ಕಾಲಿಗೆ ಬೀಳುವಷ್ಟು ಭೀತರಾಗಿರುವುದು ‘ಅಧಿಕಾರದ ಅಪಾರ ವ್ಯಾಮೋಹ’ವಲ್ಲದೇ ಮತ್ತೇನಲ್ಲ!

ಹಾಗಂತ ಕರ್ನಾಟಕವೇನೂ ಕೇಂದ್ರದ ಎದುರು ಭಿಕ್ಷಾಪಾತ್ರೆ ಹಿಡಿದು ನಿಲ್ಲುವ ದಾರಿದ್ರ್ಯದ ರಾಜ್ಯವಲ್ಲ. ಭಾರತಕ್ಕೆ ಅತಿಹೆಚ್ಚು ಡಾಲರ್‌ಗಳನ್ನು ಒದಗಿಸುವ ಪ್ರಮುಖ ರಾಜ್ಯಗಳಲ್ಲಿ ಒಂದು. ಈಗ ‘ವಿಶ್ವಗುರು’ವಾಗಲು ಹೊರಟಿರುವ ಮೋದಿ ಅವರು, ಇಂಡಿಯಾ ಎಂದಾಗ, ‘ಈಸ್ ಇಟ್ ಬೆಂಗಳೂರ್‌’ ಎಂಬ ಮಾತನ್ನು ವಿದೇಶದಲ್ಲಿ ಕೇಳಿಸಿಕೊಂಡಿರಲಿಕ್ಕೂ ಸಾಕು.  ಏಕೆಂದರೆ, ಇಡೀ ದೇಶದ ಐ.ಟಿ. ಉದ್ಯಮದ ರಫ್ತಿನಲ್ಲಿ ಶೇ 38ರಷ್ಟು ಪಾಲು ಪಡೆದಿರುವ ಕರ್ನಾಟಕ ವಾರ್ಷಿಕ ಸುಮಾರು ₹5.7 ಲಕ್ಷ ಕೋಟಿ ವಹಿವಾಟು ನಡೆಸುತ್ತಿದೆ. ಅಂದರೆ, ನಮ್ಮ ನಾಡಿನ ಸುಮಾರು ಮೂರು ವರ್ಷದ ಬಜೆಟ್‌ನ ಗಾತ್ರದ ಮೊತ್ತ ಇದು. ಜೈವಿಕ ತಂತ್ರಜ್ಞಾನ (ಬಿ.ಟಿ) ವಲಯದ ಆದಾಯದಲ್ಲಿ ಶೇ 35ರಷ್ಟು ಕರ್ನಾಟಕದ ಪಾಲಿದೆ.

ಒಂದೇ ಮಳೆಗಾಲದಲ್ಲಿ ಸರ್ಕಾರದ ಅಂದಾಜಿನ ಪ್ರಕಾರ ಆಗಿರುವ ನಷ್ಟ ₹35 ಸಾವಿರ ಕೋಟಿ. ವಾಸ್ತವ ದುಪ್ಪಟ್ಟು ಇದ್ದೀತು. ಇಷ್ಟೆಲ್ಲ ನಷ್ಟವಾದಾಗಲೂ ಕಣ್ಣರಿ ಯದಿದ್ದರೂ ತಮ್ಮದೇ ಪಕ್ಷದ ಆಡಳಿತ ಇರುವಾಗ ಕರುಳ ರಿಯಬೇಕಾಗಿತ್ತು. ಅದು ಬೇಡ ಹೋಗಲಿ; ರಷ್ಯಾ, ಪೆಸಿಫಿಕ್ ರಾಷ್ಟ್ರಗಳಿಗೆ ಸಾಲ ಕೊಡುವ ಧಾರಾಳತನವನ್ನು ಒಕ್ಕೂಟ ರಾಷ್ಟ್ರದ ಮುಖ್ಯಸ್ಥರಾಗಿ ತಮ್ಮದೇ ನಾಡಿನ ಕನ್ನಡಿಗರಿಗೆ ನೀಡುವ ಕರ್ತವ್ಯಪರತೆಯನ್ನಾದರೂ ಅವರು ಮೆರೆಯಬೇಕಿತ್ತು.

ಈ ಬೆಳವಣಿಗೆಗಳ ಬೆನ್ನಲ್ಲೇ, ಕನ್ನಡದ ಬದಲು ಹಿಂದಿ ಕಲಿಯಿರಿ, ನವೆಂಬರ್ 1ರಂದು ಕನ್ನಡ ಧ್ವಜ ಬೇಡ ಎಂಬ ಮಾತುಗಳು ನಮ್ಮ ಮತಗಳಿಂದಲೇ ಗೆದ್ದುಹೋದ ಸಂಸದರಿಂದ ಬರುತ್ತಲೇ ಇವೆ.

ಇಂತಹ ಹೊತ್ತಿನಲ್ಲಿ ಕುವೆಂಪು ಹೇಳುವ ‘ನುಡಿಯೊಲ್ಮೆಯೊಂದಿದ್ದರೆ ದೇಶದ ದೇವಿಯ ಗುಡಿಯ ಕಟ್ಟಡದ ಕಲ್ಲುಗಳ ಬೆಸುಗೆ ವಜ್ರಗಾರೆಯಾಗುತ್ತದೆ. ಆ ಒಲ್ಮೆ ಮಡಿದಂದು ಕಟ್ಟಡದ ಕಲ್ಲುಗಳು ಸಡಿಲಗೊಂಡು ಗುಡಿಕೆಳಕ್ಕುರುಳಿ ನೆಲಸಮವಾಗುತ್ತದೆ. ನುಡಿಬಿಟ್ಟರೆ ನಾಡು ಬಿಟ್ಟಂತೆ. ಭಾಷೆಗೇಡಿ ದೇಶಗೇಡಿಯೂ ಆಗುತ್ತಾನೆ’ ಎಂಬ ಮಾತು ನೆನಪಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು