ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ | ಎಂಜಿನ್‌ ದಕ್ಷಿಣಕ್ಕೆ, ಬೋಗಿ ಉತ್ತರಕ್ಕೆ

ಡಬಲ್ ಎಂಜಿನ್ ಹೊಗೆ ಕನ್ನಡಿಗರಿಗೆ, ಬೋಗಿಯ ಸರಕು ಅನ್ಯರಿಗೆ!
Last Updated 16 ಫೆಬ್ರುವರಿ 2023, 3:27 IST
ಅಕ್ಷರ ಗಾತ್ರ

ಒಕ್ಕೂಟ ಸರ್ಕಾರದ ಪಾಲಿಗೆ ‘ಡಬಲ್ ಎಂಜಿನ್‌’ನಂತೆ ಇರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ದೃಷ್ಟಿ ದೇಶದ ಗಡಿ ಮತ್ತು ವಿವಿಧ ರಾಜ್ಯಗಳನ್ನು ಬಿಟ್ಟು ಕರ್ನಾಟಕದತ್ತ ನೆಟ್ಟಿದೆ.

ಭಾರತವನ್ನು ‘ವಿಶ್ವಗುರು’ ಪಟ್ಟಕ್ಕೇರಿಸಲು ‘ಶ್ರಮ’ಪಡುತ್ತಿರುವ ಮೋದಿಯವರು ನಮಗೂ ಪ್ರಧಾನಿಯೇ. ಅವರು ಪದೇಪದೇ ಬಂದರೆ ಕನ್ನಡಿಗರಿಗೂ ಖುಷಿ. ಏಕೆಂದರೆ, ಗುಂಡಿ ಬಿದ್ದ ರಸ್ತೆಗಳಿಗೆ ಥಳುಕು ಬರುತ್ತದೆ, ಹದಗೆಟ್ಟಿದ್ದ ಮೂಲ ಸೌಕರ್ಯಗಳು ಓರಣಗೊಳ್ಳುತ್ತವೆ, ಕಟ್ಟಡಗಳು ಚೆಂದಗಾಣುತ್ತವೆ. ನಮ್ಮ ಹೆಮ್ಮೆಯ ಪ್ರಧಾನಿ ದೇಶದ ಬೇರೆ ರಾಜ್ಯಗಳು, ಹೊರದೇಶಗಳನ್ನು ಸುತ್ತುವುದು ಬಿಟ್ಟು, ನಮ್ಮ ಮೇಲೆ ಅಕ್ಕರೆ ತೋರುತ್ತಾರೆ ಎಂದರೆ ಅದಕ್ಕಿಂತ ಸಂಭ್ರಮ ಬೇರೆ ಏನಿದೆ?

ನೆರೆ–ಬರದಿಂದ ನಾಡಿನ ಜನ ಕಂಗೆಟ್ಟಾಗ ಇತ್ತ ಕಾಲಿಡದಿದ್ದವರು, ನಮ್ಮ ಅಳಲಿಗೆ ಕಿವಿಯಾಗದವರು, ನೆರವಿಗೆ ಧಾವಿಸದವರು ಈಗ ಏಕಾಏಕಿ ದೌಡಾಯಿಸಿ, ಇಲ್ಲಿಯೇ ಮೊಕ್ಕಾಂ ಹೂಡಿದ್ದಾರೋ ಎಂಬಂತೆ ತೋರಿಸಿಕೊಳ್ಳುವುದರ ಹಿಂದೆ ವಿಧಾನಸಭೆ ಚುನಾವಣೆಯ ಗೌಲಿದೆ. ‘ಆಪರೇಷನ್ ಕಮಲ’ ನಡೆಸಿ ಅಡ್ಡದಾರಿಯಲ್ಲಿ ಅಟ್ಟಕ್ಕೇರಿಸಿದ ಸರ್ಕಾರವನ್ನು ಮತ್ತೆ ಉಳಿಸಿಕೊಳ್ಳಬೇಕೆಂಬ ತವಕ ಇದರ ಹಿಂದಿರುವುದು ಗುಟ್ಟೇನಲ್ಲ. ಈಗ ನಾಡಿನ ಬಗ್ಗೆ ತೋರಿಸುವ ಮಮಕಾರವನ್ನು ಮೂರೂವರೆ ವರ್ಷಗಳಿಂದಲೂ ತೋರಿದ್ದರೆ, ರಾಜ್ಯಕ್ಕೆ ಬರಬೇಕಾದ ಅನುದಾನ, ನೆರವಿನ ಪಾಲನ್ನು ನೀಡಿದ್ದರೆ ಅವರ ಬರುವಿಕೆಯಲ್ಲಿನ ಆನಂದ ಇಮ್ಮಡಿಯಾಗುತ್ತಿತ್ತು!

ಮೋದಿ, ಅಮಿತ್ ಶಾ ಅವರು ಬಿಜೆಪಿ ಪಕ್ಷಕ್ಕಷ್ಟೇ ಪ್ರಧಾನಿ ಹಾಗೂ ಗೃಹ ಸಚಿವರಲ್ಲ. ಒಕ್ಕೂಟ ವ್ಯವಸ್ಥೆಯಡಿ ಇರುವ ರಾಜ್ಯಗಳಿಗೂ ಅವರು ಪ್ರಧಾನಿ ಮತ್ತು ಗೃಹ ಸಚಿವರು. ಗುಜರಾತ್ ಚುನಾವಣೆಯಲ್ಲಿ ಅವರು ಮೊಕ್ಕಾಂ ಹೂಡಿದ್ದರು. ಒಂದು ರಾಜ್ಯದಲ್ಲಿ ಚುನಾವಣೆ ಬಂತೆಂದರೆ ಆ ರಾಜ್ಯದ ಮೇಲೆ ಗಮನ ಕೇಂದ್ರೀಕರಿಸುವುದು ವಿಶ್ವನಾಯಕರೆಂದು ಕರೆಸಿಕೊಳ್ಳುವ ಮೋದಿಯವರ ಔನ್ನತ್ಯ ಹಾಗೂ ಹಿರಿಮೆಗೆ ತಕ್ಕುದಲ್ಲ.

ಚುನಾವಣೆಯನ್ನು ನಡೆಸಬೇಕಾದುದು ಪಕ್ಷದ ಮುಖಂಡರೇ ವಿನಾ ಪ್ರಧಾನಿ, ಗೃಹ ಸಚಿವರಂಥ ಸಾಂವಿಧಾನಿಕವಾಗಿ ಉನ್ನತ ಹುದ್ದೆಗಳಲ್ಲಿ ಇರುವವರಲ್ಲ. ಹಾಗೆ ಮಾಡಿದಲ್ಲಿ, ತಮ್ಮ ಪಕ್ಷದ ಅಧ್ಯಕ್ಷರು ಹಾಗೂ ಸ್ಥಳೀಯ ನಾಯಕರ ಸಾಮರ್ಥ್ಯ ಹಾಗೂ ಪ್ರಭಾವಳಿ
ಯನ್ನು ಕಡೆಗಣಿಸುವ ಧೋರಣೆಯಾಗಿರುತ್ತದೆ. ಹಾಗೆಯೇ ಅವರಿಗೆ ಪಕ್ಷವನ್ನು ಗೆಲ್ಲಿಸಿಕೊಳ್ಳುವ ವರ್ಚಸ್ಸು ಮತ್ತು ಪ್ರಭಾವ ಇಲ್ಲವೆಂಬುದನ್ನು ಹೇಳಿದಂತಾಗುತ್ತದೆ.

ಬಿಜೆಪಿಯಲ್ಲಿ ನಾಯಕರೇನೂ ಕಮ್ಮಿ ಇಲ್ಲ. ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕರ್ನಾಟಕದ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹಾಗೂ ಸಹ ಉಸ್ತುವಾರಿ ಅಣ್ಣಾಮಲೈ ಇದ್ದಾರೆ. ಇಡೀ ದೇಶದ ಚುನಾವಣೆಯನ್ನು ನಡೆಸಬಲ್ಲ ತಂತ್ರಗಾರಿಕೆಯನ್ನು ಕರತಲಾಮಲಕ ಮಾಡಿಕೊಂಡಿರುವ ಬಿ.ಎಲ್. ಸಂತೋಷ್ ಸಕ್ರಿಯರಾಗಿದ್ದಾರೆ. ಕರ್ನಾಟಕದ ಮಣ್ಣು ಕೂಡ ಬರಡಲ್ಲ; ಬಿಜೆಪಿಗೆ ಹುಲುಸಾದ ನಾಯಕರ ದಂಡನ್ನೇ ಕೊಟ್ಟಿದೆ. ಜನರ ಮಧ್ಯೆ ಈಗಲೂ ತಮ್ಮ ಪ್ರಭಾವವನ್ನು ಉಳಿಸಿಕೊಂಡಿರುವ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ, ಕೆ.ಎಸ್. ಈಶ್ವರಪ್ಪ, ಡಿ.ವಿ. ಸದಾನಂದಗೌಡ, ಆರ್. ಅಶೋಕ ಅವರಂತಹ ನಾಯಕರ ದಂಡೇ ಇದೆ. ಕೇಸರಿ ಬಾವುಟ ಹಾರಿಸಲು ಕಾಲಾಳುಗಳೇ ಇಲ್ಲದ ಕಾಲದಿಂದಲೂ ಪಕ್ಷವನ್ನು ಕಟ್ಟಿದ ಯಡಿಯೂರಪ್ಪ, ಈಶ್ವರಪ್ಪ ಈಗಲೂ ಸಕ್ರಿಯರಾಗಿದ್ದಾರೆ. ಸಾಲು ಸಾಲು ಸಮರ್ಥರಿರುವಾಗ ಮೋದಿ–ಶಾ ಅವರೇ ಮುಂದೆ ನಿಂತು ಚುನಾವಣೆ ನಡೆಸಬೇಕೆಂಬ ಸ್ಥಿತಿ ಇದೆಯೆಂದು ಭಾವಿಸುವುದಾದರೆ, ಪಕ್ಷದ ಇನ್ನಿತರ ನಾಯಕರ ಶಕ್ತಿಯನ್ನೇ ಅಣಕಿಸಿದಂತಲ್ಲವೇ? ಅಥವಾ ಗೆಲ್ಲಿಸುವ ತಾಕತ್ತು ಅವರಿಗೆ ಇಲ್ಲ ಎಂದು ಹೀಗಳೆದಂತಲ್ಲವೇ?

ಅಷ್ಟಕ್ಕೂ ಪ್ರಧಾನಿ, ಗೃಹ ಸಚಿವರೇ ಚುನಾವಣೆ ಮುನ್ನಡೆಸುವುದಾದರೆ, ಬೇರೆ ಯಾರನ್ನಾದರೂ ಪ್ರಧಾನಿ ಸ್ಥಾನದಲ್ಲಿ ಕೂರಿಸಿ, ಪಕ್ಷದ ಲಗಾಮನ್ನು ಇವರಿಬ್ಬರೇ ವಹಿಸಿಕೊಳ್ಳುವುದು ಸೂಕ್ತ.

ಪ್ರಧಾನಿಯಾದವರು ಒಕ್ಕೂಟದ ರಾಜ್ಯಗಳ ಮಧ್ಯೆ ಸಮನ್ವಯ ಸಾಧಿಸುವ, ದೇಶವನ್ನು ಮುನ್ನಡೆಸುವ, ವಿವಿಧ ದೇಶಗಳ ಮಧ್ಯೆ ಸಂಬಂಧವನ್ನು ಉತ್ತಮಗೊಳಿಸಿ ಮಾದರಿ ರಾಷ್ಟ್ರವನ್ನು ನಿರ್ಮಾಣ ಮಾಡುವ ಪರಂಪರೆಯನ್ನು ಮುಂದುವರಿಸಬೇಕು. ಅದರ ಬದಲು ಹಕ್ಕುಪತ್ರ ನೀಡುವುದು, ನಲ್ಲಿ ನೀರಿನ ಉದ್ಘಾಟನೆ ಮಾಡುವಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಪ್ರಧಾನಿ ಹುದ್ದೆಗೆ ಶೋಭೆಯಲ್ಲ. ಹಕ್ಕುಪತ್ರ ವಿತರಿಸಲು ಸಚಿವರು ಕೂಡ ಹೋಗಬಾರದು. ಅದೇನಿದ್ದರೂ ಕಂದಾಯ ಅಧಿಕಾರಿಗಳ ಕೆಲಸ. ಸ್ಥಳೀಯವಾಗಿಯೇ ಮಾಡಬಹುದಾದ ಕೆಲಸಕ್ಕೆ ಸಾರ್ವಜನಿಕರು ತೆರಿಗೆ ರೂಪದಲ್ಲಿ ಕೊಟ್ಟ ಕೋಟಿಗಟ್ಟಲೆ ಹಣ ವ್ಯರ್ಥ ಮಾಡುವುದು ಸಲ್ಲ.

ಡಬಲ್ಎಂಜಿನ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ, 24 ಗಂಟೆಯಲ್ಲೇ ಮಹದಾಯಿ ಯೋಜನೆ ಜಾರಿ ಮಾಡುವುದಾಗಿ ಬಿಜೆಪಿ ನಾಯಕರು 2019ರ ಲೋಕಸಭೆ ಚುನಾವಣೆ ವೇಳೆ ಘೋಷಿಸಿದ್ದರು. ಈಗಲೂ ಅದು ಇತ್ಯರ್ಥವಾಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವ ಪ್ರಸ್ತಾವ ಇನ್ನಷ್ಟೇ ಕೇಂದ್ರ ಸರ್ಕಾರದ ಸಚಿವ ಸಂಪುಟದ ಮುಂದೆ ಬರಬೇಕಿದೆ. ಈ ಯೋಜನೆಗೆ ₹9,600 ಕೋಟಿ ನೆರವು ಸಿಗಬಹುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭರವಸೆಯಿಟ್ಟಿದ್ದರು. ಕೇಂದ್ರ ಬಜೆಟ್‌ನಲ್ಲಿ ₹5,300 ಕೋಟಿ ನೀಡುವುದಾಗಿ ಆಶ್ವಾಸನೆ ನೀಡಲಾಗಿದೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲಾಗಿದೆ. ಇಷ್ಟು ದಿನ ಸುಮ್ಮನಿದ್ದವರು ಮೈಸೂರು–ಬೆಂಗಳೂರು ಹೆದ್ದಾರಿಯ ಉದ್ಘಾಟನೆಯ ಮುಹೂರ್ತ ನಿಗದಿಪಡಿಸುತ್ತಿದ್ದಾರೆ. ಇವೆಲ್ಲವೂ ಚುನಾವಣೆ ಹೊತ್ತಿಗೆ ಮುನ್ನೆಲೆಗೆ ಬಂದಿರುವುದು ಏಕೆ?

ಕರ್ನಾಟಕದಿಂದ ಆದಾಯ ಕೂಡ ಕೇಂದ್ರಕ್ಕೆ ದೊಡ್ಡ ಮಟ್ಟದಲ್ಲಿಯೇ ಇದೆ. ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆ ರೂಪದಲ್ಲಿ ₹ 2.40 ಲಕ್ಷ ಕೋಟಿ, ಜಿಎಸ್‌ಟಿ ಲೆಕ್ಕದಲ್ಲಿ ₹1.20 ಲಕ್ಷ ಕೋಟಿ, ಕಸ್ಟಮ್ಸ್‌ ರೂಪದಲ್ಲಿ ₹45 ಸಾವಿರ ಕೋಟಿ, ಪೆಟ್ರೋಲಿಯಂ ಮೇಲಿನ ಸೆಸ್ ₹35 ಸಾವಿರ ಕೋಟಿ, ಇತರೆ ಸೆಸ್ ₹25 ಸಾವಿರ ಕೋಟಿ ಸಂಗ್ರಹವಾಗುತ್ತದೆ. ಟೋಲ್‌ಗಳಿಂದ ಸುಮಾರು ₹6 ಸಾವಿರ ಕೋಟಿ ವಸೂಲಾಗುತ್ತಿದೆ. ಇದಲ್ಲದೇ, ಐ.ಟಿ–ಬಿ.ಟಿ ರಫ್ತಿನಲ್ಲಿ ಶೇ 58ರಷ್ಟು ಪಾಲು ಕರ್ನಾಟಕದ್ದೇ ಇದೆ. ಇದರಿಂದ ಕೇಂದ್ರಕ್ಕೆ ಬರುವ ವರಮಾನ ಎಷ್ಟೆಂದು ಈವರೆಗೂ ಬಹಿರಂಗಪಡಿಸಿಲ್ಲ. ಜಿಎಸ್‌ಟಿ ಮೊತ್ತ ಕಳೆದರೂ ವರ್ಷಕ್ಕೆ ₹4.5 ಲಕ್ಷ ಕೋಟಿಗೂ ಹೆಚ್ಚು ಮೊತ್ತ ಕೇಂದ್ರದ ಬೊಕ್ಕಸಕ್ಕೆ ಹರಿದು ಹೋಗುತ್ತದೆ. ರಾಜ್ಯಕ್ಕೆ ಬರುವ ನೆರವಿನ ಪಾಲು ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಲೇ ಇದೆ. ಗುಜರಾತ್, ಉತ್ತರಪ್ರದೇಶ, ಮಹಾರಾಷ್ಟ್ರಗಳಿಗೆ ಹೆಚ್ಚಿನ ಪಾಲನ್ನು ನೀಡಲಾಗುತ್ತಿದೆ. ಈ ತಾರತಮ್ಯವನ್ನಾದರೂ ‘ಡಬಲ್ ಎಂಜಿನ್’ ನೇತಾರರು ಹೋಗಲಾಡಿಸಬೇಕಿದೆ.

ಕೇಂದ್ರ ಸರ್ಕಾರದ ಚುಕ್ಕಾಣಿಯನ್ನು ಬಿಜೆಪಿ ಹಿಡಿಯಲು ಕರ್ನಾಟಕದ ಮತದಾರರು 25 ಸಂಸದರನ್ನು ನೀಡಿದ್ದಾರೆ. ಆ ಋಣವನ್ನಾದರೂ ಮೋದಿ–ಶಾ ತೀರಿಸಲಿ. ಅದನ್ನು ಮಾಡದೇ, ಚುನಾವಣೆ ಹೊತ್ತಿನಲ್ಲಿ ಆಗೀಗ ಬಂದು, ‘ನಿಮ್ಮ ನೆರವಿಗೆ ನಾವಿದ್ದೇವೆ’ ಎಂದು ಘೋಷಿಸಿ ಹೋದರೆ, ಅದು ಕನ್ನಡಿಗರಿಗೆ ಮಾಡುವ ಅವಮಾನ. ಮೋದಿ–ಶಾ ಮತ್ತೆ ಬರುವಾಗಲಾದರೂ ಭರವಸೆ ಮೂಟೆಯನ್ನು ಹೊತ್ತು ತಂದು, ಖಾಲಿ ಚೀಲ ತೋರಿಸುವ ಬದಲು ಸಚಿವ ಸಂಪುಟದ ನಿರ್ಣಯ, ಅನುದಾನದ ಹರಿವಿಗೆ ಆದ್ಯತೆ ಕೊಡಲಿ. ಇಲ್ಲದಿದ್ದರೆ ಡಬಲ್ ಎಂಜಿನ್ ಹೊಗೆಯಷ್ಟೇ ನಮ್ಮ ನಾಡಿಗೆ, ಬೋಗಿಯಲ್ಲಿರುವ ಸರಕುಗಳೆಲ್ಲ ಉತ್ತರದ ರಾಜ್ಯಗಳಿಗೆ ಸಾಗಣೆಯಾಗುವುದು ಮುಂದುವರಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT