ಗುರುವಾರ , ಆಗಸ್ಟ್ 6, 2020
28 °C
‘ಶಾಸಕನಾಗಿ ಶ್ರದ್ಧಾಪೂರ್ವಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ’ ಎಂಬ ಪ್ರಮಾಣದ ಅರ್ಥ ಇದೇ ಏನು?

ಮದ್ದಿಲ್ಲದ ರೋಗ; ಮಧ್ಯಂತರ ರಾಗ

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

Prajavani

ರಾಜೀನಾಮೆಯ ಪ್ರಹಸನದಲ್ಲಿ ಪಳಗಿರುವ, ವಶೀಲಿಬಾಜಿಯ ಕುಟಿಲತನಗಳನ್ನೇ ಮೈಗೂಡಿಸಿಕೊಂಡಂತಿರುವ ನಮ್ಮ ಕೆಲವು ಶಾಸಕರ ನಡಾವಳಿಗಳು ‘ಹೈಪರ್‌ ಆ್ಯಕ್ಟಿವ್‌’ (ವಿಪರೀತ ಚೇಷ್ಟೆ) ಎಂಬ ಸಮಸ್ಯೆಯಿಂದ ಬಳಲುವ ಮಕ್ಕಳನ್ನೂ ಮೀರಿಸುವಂತಿವೆ. ಲಕ್ಷಾಂತರ ಮತದಾರರ ಪ್ರತಿನಿಧಿ ತಾನು ಎಂಬ ಅರಿವು, ಜನಪ್ರತಿನಿಧಿಗೆ ಇರಬೇಕಾದ ಸಹಜ ಸಜ್ಜನಿಕೆ, ಸಾರ್ವಜನಿಕ ಲಜ್ಜೆಯೂ ಅವರಿಗೆ ಇದ್ದಂತೆ ಕಾಣಿಸುತ್ತಿಲ್ಲ.

‘ವಿಧಾನಸಭೆಯ ಸದಸ್ಯನಾಗಿ ವಿಧಿ ದ್ವಾರ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ಶ್ರದ್ಧೆಯಿಂದಲೂ ನಿಷ್ಠೆಯಿಂದಲೂ ಕೂಡಿರುತ್ತೇನೆಂದೂ ಭಾರತದ ಪರಮಾಧಿಕಾರವನ್ನು ಮತ್ತು ಸಮಗ್ರತೆಯನ್ನು ಸಮರ್ಥಿಸುತ್ತೇನೆಂದೂ ನಾನು ಈಗ ಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆಂದೂ ಪ್ರಮಾಣ ಮಾಡುತ್ತೇನೆ’ ಎಂದು ಶಾಸಕರು ಪ್ರತಿಜ್ಞಾವಿಧಿ ಸ್ವೀಕರಿಸುತ್ತಾರೆ. ಅಷ್ಟು ಹೇಳಿ ಮುಗಿಸಿ, ಕಲಾಪ ಆರಂಭವಾಗುವ ಹೊತ್ತಿಗೆ ಮೊಗಸಾಲೆಯಲ್ಲಿ ಠಳಾಯಿಸುವುದರಿಂದ ಆರಂಭವಾಗುವ ಇಂತಹ ‘ಶ್ರದ್ಧಾಪೂರ್ವಕ ಕರ್ತವ್ಯಲೋಪ’ ಅವರು ರಾಜೀನಾಮೆ ಕೊಡುವವರೆಗೂ ಅಥವಾ ವಿಧಾನಸಭೆ ಅವಧಿ ಮುಗಿಯುವವರೆಗೂ ಮುಂದುವರಿಯುವುದು ಇತ್ತೀಚೆಗೆ ಸಹಜವಾಗಿಬಿಟ್ಟಿದೆ. ಗೆದ್ದ ಮೇಲೆ ಇರಲೇಬೇಕಾದ ಉತ್ತರದಾಯಿತ್ವವನ್ನು ಶಾಸಕರು ಕಡೆಗಣಿಸುವುದು ಚಾಳಿಯಾಗಿದೆ. 

ಈ ಎಲ್ಲ ಶಾಸಕರ ನಾಯಕರಂತೆ ಇರುವವರು ಕೂಡ ತುಂಬಾ ಭಿನ್ನವಾಗಿಯೇನೂ ನಡೆದುಕೊಳ್ಳುತ್ತಿಲ್ಲ. ಮತ ಹಾಕಿದವರ ಬಗ್ಗೆ ಇರಬೇಕಾದ ಅಂತಃಕರಣ, ರಾಗದ್ವೇಷಗಳಿಲ್ಲದೇ ವರ್ತಿಸುವ ವಿಷಯದಲ್ಲಿ ಮರೆವಿನ ರೋಗಕ್ಕೆ (ಅಪಸ್ಮಾರ) ಪ್ರಜ್ಞಾಪೂರ್ವಕವಾಗಿ ಒಳಗಾಗಿದ್ದಾರೆ. 

2008ರಲ್ಲಿ ಸರಳ ಬಹುಮತ (113ರ ಬದಲಿಗೆ 110 ಸ್ಥಾನ ಪಡೆದಿತ್ತು) ಇಲ್ಲದೇ ಇದ್ದಾಗಲೂ ಬಿಜೆಪಿ ಅಧಿಕಾರಕ್ಕೇರಿತು. ಆ ಹೊತ್ತಿನಲ್ಲಿ, ‘ಆಪರೇಷನ್ ಕಮಲ’ಕ್ಕೆ ಪೊಳ್ಳು ಸಮರ್ಥನೆ ನೀಡಲು, ಕ್ಷೇತ್ರದ ಅಭಿವೃದ್ಧಿಯಾಗಬೇಕಾದರೆ ಆಡಳಿತ ಪಕ್ಷದಲ್ಲಿರಬೇಕು, ಇದ್ದರೂ ಮಂತ್ರಿಯಾಗಿರಬೇಕು ಎಂಬ ಹುಸಿ ವಾದ ಸೃಷ್ಟಿಸಲಾಯಿತು. ಅದು ಈಗಲೂ ಮುಂದುವರಿದಿದೆ. ಬಹುಮತ– ಅಲ್ಪಮತದ ವಾದ ಈಗಲೂ ನಡೆದೇ ಇದೆ. 37 ಶಾಸಕರ ಬಲ ಹೊಂದಿರುವ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿರುವುದಕ್ಕೆ ಬಿಜೆಪಿಯವರು ಕುಟುಕುತ್ತಲೇ ಇದ್ದಾರೆ. 105 ಸ್ಥಾನಬಲ ಹೊಂದಿ, ಅಧಿಕಾರದ ಅಂಚಿನಲ್ಲಿ ನಿಂತಿರುವವರಿಗೆ ಹೀಗನ್ನಿಸುವುದು ಸಹಜ ಕೂಡ. ಹೀಗೆ ‘ಕೂಡಿಕೆ’ ಮಾಡಿಕೊಂಡ ಮೇಲೆ ಒಟ್ಟಾಗಿ ಬಾಳುವುದು, ಮತ ಹಾಕಿದ ಜನರಿಗೆ, ಅನ್ನ–ನೀರು ಕೊಟ್ಟ ನಾಡಿನ ಏಳ್ಗೆಗೆ, ಅಧಿಕಾರದಲ್ಲಿ ಇದ್ದಷ್ಟು ಕಾಲ ಕಾಯಾ ವಾಚಾ ಮನಸಾ ದುಡಿಯುವುದು ಪ್ರಶ್ನಾತೀತ– ಸಂಶಯಾತೀತ ಧ್ಯೇಯವಾಗಬೇಕು. ಆದರೆ, ಒಂದು ವರ್ಷದ ವಿದ್ಯಮಾನಗಳನ್ನು ಕಂಡರೆ, ಬಹುತೇಕ ಶಾಸಕರಿಗೆ ಇಂತಹ ಉದಾತ್ತ ಆಶಯವೇ ಇದ್ದಂತಿಲ್ಲ. ಅಧಿಕಾರ ಹಿಡಿಯಬೇಕು, ಅಧಿಕಾರದಲ್ಲಿ ಉಳಿಯಬೇಕು, ಅಧಿಕಾರ ನಡೆಸಬೇಕು ಎಂಬ ತವಕವಷ್ಟೇ ಗೋಚರಿಸುತ್ತದೆ. ಇದಕ್ಕೆ ಮೂರು ಪಕ್ಷಗಳ ಶಾಸಕರೂ ಹೊರತಲ್ಲ. ಅಧಿಕಾರ ವ್ಯಾಮೋಹವೆಂಬ ಮದ್ದಿಲ್ಲದ ರೋಗ ಎಲ್ಲ ಶಾಸಕರಿಗೆ ಅಮರಿಕೊಂಡಿದೆ. ಇದಕ್ಕೆ ನಾಯಕರೂ ಹೊರತಾಗಿಲ್ಲ.

ಮೈತ್ರಿ ಸರ್ಕಾರ ರಚಿಸುವುದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕರಿಗೆ ಬೇಕಿರಲಿಲ್ಲ; ಹಾಗಾಗಿಯೇ ಸದಾ ಅಸಮಾಧಾನದ ತಟವಟದಲ್ಲೇ ಕಾಲ ಹಾಕುತ್ತಿದ್ದಾರೆ. ಮೈತ್ರಿ ಸುಸೂತ್ರವಾಗಿ ನಡೆಯಲು ರಚಿಸಿದ ಸಮನ್ವಯ ಸಮಿತಿ ಕೂಡದೆ, ಕೂತು ಚರ್ಚಿಸದೆ ತಿಂಗಳುಗಳೇ ಸಂದವು. ‘ಒಳ್ಳೆಯ ಸರ್ಕಾರ ನೀಡಬೇಕು’ ಎಂಬ ಕಾರಣಕ್ಕೆ ಹಿರಿಯ ಕಾಂಗ್ರೆಸ್ಸಿಗ ವೀರಪ್ಪ ಮೊಯಿಲಿ ಅವರ ಅಧ್ಯಕ್ಷತೆಯಲ್ಲಿ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ ರೂಪಿಸಲು ಸಮಿತಿ ರಚನೆಯಾಗಿತ್ತು. ಅದು ವರದಿಯನ್ನೂ ನೀಡಿತು. ಸರ್ಕಾರವೇ ‘ಬೇಡದ ಕೂಸು’ ಎಂಬ ಭಾವನೆ ಗಟ್ಟಿಗೊಳ್ಳುತ್ತಾ ಹೋದಂತೆ, ಸರ್ಕಾರವೆಂಬ ರೈಲಿಗೆ ಹಳಿ ಆಗಬೇಕಾಗಿದ್ದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ‘ಕಾವೇರಿ (ಸಿದ್ದರಾಮಯ್ಯ ನಿವಾಸ)–ಕೃಷ್ಣೆ (ಮುಖ್ಯಮಂತ್ರಿ ಗೃಹ ಕಚೇರಿ)’ಯಲ್ಲಿ ಕರಗಿ ಹೋಯಿತು.   

ತಮಗೆ ಸಚಿವ ಸ್ಥಾನ ಸಿಕ್ಕರೆ ಸರ್ಕಾರ ಇರಲಿ, ಇಲ್ಲವಾದರೆ ಸರ್ಕಾರ ಇದ್ದರೆಷ್ಟು ಹೋದರೆಷ್ಟು ಎಂಬ ಅಸಡ್ಡೆಯೂ ಅನೇಕ ಹಿರಿಯ ಶಾಸಕರಲ್ಲಿದೆ. ಹೀಗಾಗಿಯೇ ಒಂದು ತಿಂಗಳಿನಿಂದೀಚೆಗೆ ಮಧ್ಯಂತರ ಚುನಾ
ವಣೆಯ ರಾಗವನ್ನು ಎಲ್ಲರೂ ನುಡಿಸತೊಡಗಿದ್ದಾರೆ. ಮೈತ್ರಿ ಬಹುಕಾಲ ಬಾಳುವುದಿಲ್ಲ, ಬಾಳಲೂ ಬಾರದು ಎಂಬ ನಿಶ್ಚಯಕ್ಕೆ ಬಂದಂತಿರುವ ಕೆಲವು ನಾಯಕರು ವರ್ಷದೊಪ್ಪತ್ತಿನಲ್ಲೇ ಮತ್ತೊಂದು ಚುನಾವಣೆಗೆ ಬಣ್ಣ ಹಚ್ಚಿಕೊಂಡು ತಾಲೀಮು ಶುರುವಿಟ್ಟಿದ್ದಾರೆ.

ಸರ್ಕಾರ ಬೀಳುತ್ತದೆ ಎಂದು ವಿಧಾನಸೌಧದ ಕಾಂಪೌಂಡಿನ ಮೇಲೆ ಕಾದು ಕುಳಿತಿರುವ ಬಿಜೆಪಿ ರಾಜ್ಯ ನಾಯಕರು, ಈಗ ಶಾಸಕರು ರಾಜೀನಾಮೆ ಕೊಡುತ್ತಾರೆ, 20 ಜನ ಅತೃಪ್ತರು ಕಾಂಗ್ರೆಸ್‌–ಜೆಡಿಎಸ್ ತೊರೆಯುತ್ತಾರೆ ಎಂದು ಹೇಳಿಕೆ ನೀಡುವುದರಲ್ಲಿ ಮಗ್ನರಾಗಿದ್ದಾರೆ. ಈ ಸರ್ಕಾರ ಕೆಡವಿ, ಆಪತ್ತಿನಲ್ಲೇ ಕಾಲ ದೂಡಬೇಕಾದ ತತ್ಕಾಲ ಸರ್ಕಾರ ರಚಿಸುವ ಇರಾದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಅಮಿತ್ ಶಾ ಅವರಿಗೆ ಇದ್ದಂತಿಲ್ಲ. ‘ಜಿಗಿಯುವ ಚಟ ಕಲಿತು ಸದಾ ಬೇಲಿಯ ಮೇಲೆ ಕುಳಿತ ಶಾಸಕರನ್ನು ಕರೆತಂದು ಸರ್ಕಾರ ರಚಿಸಿದರೆ ಏನು ಪ್ರಯೋಜನ? ಕುಮಾರಸ್ವಾಮಿ ಅವರ ಒಂದು ವರ್ಷದ ಆಡಳಿತಕ್ಕಿಂತ ಭಿನ್ನವಾಗಿರುವ ಸರ್ಕಾರವನ್ನು ಹೇಗೆ ನೀಡಲು ಸಾಧ್ಯ? ಮೈತ್ರಿ ಸರ್ಕಾರ ತಂತಾನೇ ಬಿದ್ದು ಹೋಗಲಿ. ಆಗ ರಾಷ್ಟ್ರಪತಿ ಆಳ್ವಿಕೆ ಹೇರಿ ಚುನಾವಣೆಗೆ ಹೋಗೋಣ. ಅನ್ಯ ಪಕ್ಷದ ಸವಕಲು ಮುಖಗಳನ್ನು ಕರೆತರುವ ಬದಲು ಹೊಸ ಮುಖಗಳನ್ನು ಕಣಕ್ಕೆ ಇಳಿಸಿದರೆ, 120ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು. ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲು ಹಾಗೂ ಪಕ್ಷ ಸಂಘಟನೆಗೆ ಮುಂದಾಗಿ’ ಎಂದು ವರಿಷ್ಠರು ರಾಜ್ಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

‘76 ವಯಸ್ಸು ದಾಟಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರು ಅಧಿಕಾರ
ವಿಲ್ಲದೇ ಚಡಪಡಿಸುತ್ತಿದ್ದಾರೆ. ಒಂದು ವೇಳೆ ಚುನಾವಣೆ ನಡೆದು ಬಹುಮತ ಬಂದರೆ, ಮುಖ್ಯಮಂತ್ರಿಯಾಗುವ ಅವಕಾಶ ಸಿಗದೇ ಹೋಗಬಹುದು ಎಂಬ ಆತಂಕವೂ ಅವರಲ್ಲಿದೆ. ಥಕಥೈ ಎಂದು ಕುಣಿದು, ಸರ್ಕಾರವನ್ನು ಅಲ್ಲಾಡಿಸುವ ಯತ್ನ ನಡೆಸುತ್ತಿದ್ದಾರೆ’ ಎಂಬ ಮಾತುಗಳು ಪಕ್ಷದ ವಲಯದಲ್ಲಿ ದಟ್ಟವಾಗಿ ಹರಡಿವೆ. 

ಚುನಾವಣೆಗೆ ಅಣಿಯಾಗುವ ವಿಷಯದಲ್ಲಿ ಕಾಂಗ್ರೆಸ್ ನಾಯಕರೂ ಹಿಂದೆ ಬಿದ್ದಿಲ್ಲ. ಅಧ್ಯಕ್ಷ, ಕಾರ್ಯಾಧ್ಯಕ್ಷರನ್ನು ಉಳಿಸಿಕೊಂಡು, ಉಳಿದ ಕೆಪಿಸಿಸಿಯನ್ನು ವಿಸರ್ಜನೆ ಮಾಡಿರುವ ಹೈಕಮಾಂಡ್‌, ಪಕ್ಷ ಪುನರ್‌ರಚನೆಗೆ ಆದ್ಯತೆ ನೀಡಿದೆ. ಚುನಾವಣೆ ಬಂದೇ ಬರುತ್ತದೆ ಎಂದು ಖಚಿತಪಡಿಸಿಕೊಂಡಂತಿರುವ ಸಿದ್ದರಾಮಯ್ಯ, ತಾವು ಪ್ರತಿನಿಧಿಸುವ ಬಾದಾಮಿ ಕ್ಷೇತ್ರ ಹಾಗೂ ಪುತ್ರ ಪ್ರತಿನಿಧಿಸುವ ವರುಣಾ ಕ್ಷೇತ್ರಕ್ಕೆ ದಂಡಯಾತ್ರೆ ಕೈಗೊಂಡಿದ್ದಾರೆ. ‘ಬಿಜೆಪಿಗೆ ಸರ್ಕಾರ ರಚಿಸುವ ವಿಶ್ವಾಸವಿದ್ದರೆ ರಾಜ್ಯಪಾಲರನ್ನು ಭೇಟಿಯಾಗಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸಲಿ. ನಾವು ಗೌರವಯುತವಾಗಿ ನಿರ್ಗಮಿಸುತ್ತೇವೆ’ ಎಂದು ಹೇಳಿರುವ ಸಿದ್ದರಾಮಯ್ಯ, ಕಮಲ ಪಡೆಗೆ ಪಂಥಾಹ್ವಾನ ಕೊಟ್ಟಿರುವ ಹಿಂದೆ ಬೇರೆಯದೇ ಆದ ಹೊಳಹುಗಳು ಕಾಣಿಸುತ್ತಿವೆ.

ಪಕ್ಷದ ನಾಯಕರಿಗೆ ಮಧ್ಯಂತರ ಚುನಾವಣೆಯ ಸುಳಿವು ಕೊಟ್ಟಿರುವ ಜೆಡಿಎಸ್‌ನ ದೇವೇಗೌಡರು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಜಾತಿವಾರು ಸಮಾವೇಶ ನಡೆಸುತ್ತಿರುವ ಅವರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಪಕ್ಷದ ಪಟ್ಟ ಕಟ್ಟಿ, ಸಂಘಟನೆ ಬಲಪಡಿಸಲು ಪಂಚೆ ಕೊಡವಿ ನಿಂತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸಿರುವುದು ಕೂಡ ಚುನಾವಣೆಯ ಮುನ್ಸೂಚನೆಯಲ್ಲದೆ ಬೇರೇನಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು