ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ: ‘ಹಿಂದುತ್ವ’ದ ಗಾಳ.. ‘ಕುಟುಂಬ’ವೇ ದಾಳ

ಹಿಂದುತ್ವದ ಉಗ್ರ ಪ್ರತಿಪಾದಕರಿಗೆ ಟಿಕೆಟ್ ತಪ್ಪಿಸಿದ್ದೇಕೆ? ಏನಿದು ಮೋದಿ ತಂತ್ರಗಾರಿಕೆ?
Published 16 ಏಪ್ರಿಲ್ 2024, 19:47 IST
Last Updated 16 ಏಪ್ರಿಲ್ 2024, 19:47 IST
ಅಕ್ಷರ ಗಾತ್ರ

ಹಿಂದುತ್ವದ ಉಗ್ರ ಪ್ರತಿಪಾದಕರಿಗೆ ಟಿಕೆಟ್ ತಪ್ಪಿಸಿದ್ದೇಕೆ? ಏನಿದು ಮೋದಿ ತಂತ್ರಗಾರಿಕೆ?ಮೂರನೇ ಬಾರಿ ಪ್ರಧಾನಿಯಾಗಲೇಬೇಕೆಂಬ ಛಲ ತೊಟ್ಟಿರುವ ನರೇಂದ್ರ ಮೋದಿ, ಲೋಕಸಭೆ ಚುನಾವಣೆಯಲ್ಲಿ ದೇಶಕ್ಕೆ ಏಕಬಗೆಯ ಕಾರ್ಯತಂತ್ರದ ಬದಲು, ಆಯಾ ರಾಜ್ಯಗಳ ರಾಜಕೀಯ ಸಮೀಕರಣ ಆಧರಿಸಿ ಪ್ರತ್ಯೇಕ ತಂತ್ರಗಾರಿಕೆ ರೂಪಿಸಿದ್ದಾರೆ. ಹಿಂದುತ್ವ, ರಾಷ್ಟ್ರೀಯವಾದ, ಹಿಂದೂರಾಷ್ಟ್ರ ಈ ತರಹದ ಸಿದ್ಧಮಾದರಿಯನ್ನು ಬಿಟ್ಟು, ರಾಜ್ಯಗಳಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಮತಾಸ್ತ್ರಗಳನ್ನು ಬಳಸುತ್ತಿದ್ದಾರೆ.

ತಮಿಳುನಾಡಿನಲ್ಲಿ ಭಾವನಾತ್ಮಕ ವಿಷಯಗಳನ್ನು ಹರಿಯಬಿಟ್ಟಿದ್ದರೆ, ಕೇರಳದಲ್ಲಿ ಸಿಪಿಎಂ ನೇತೃತ್ವದ ಸರ್ಕಾರದ ಭ್ರಷ್ಟಾಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ. ದೆಹಲಿಯಲ್ಲಿ ಚುನಾಯಿತ ಸರ್ಕಾರದ ನೇತಾರರನ್ನೆಲ್ಲ
ಜೈಲಿಗೆ ತಳ್ಳಿ, ಎಎಪಿಯನ್ನು ಗುಡಿಸಿಹಾಕಿದ್ದಾರೆ. ಉತ್ತರದ ರಾಜ್ಯಗಳಲ್ಲಿ ರಾಮಮಂದಿರ, ರಾಮಾಯಣದ ಸಂಕಥನವನ್ನೇ ಮುಂದುವರಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಸದ್ಯದ ಮಟ್ಟಿಗೆ ಭದ್ರ ನೆಲೆ ಇರುವ ಕರ್ನಾಟಕದಲ್ಲಿ ಕೂಡ ಬಿಜೆಪಿ ಅಥವಾ ಮೋದಿಯವರ ಕಾರ್ಯಶೈಲಿ ಮತ್ತು ಅಭ್ಯರ್ಥಿ ಆಯ್ಕೆಯ ವಿಧಾನ ಹಿಂದಿನ ಮಾದರಿಗಳಂತಿಲ್ಲ.

ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಗೆ ಮುನ್ನ, ‘ಹಿಂದುತ್ವ’ದ ಹೆಸರಿನಲ್ಲಿ ಬಿಜೆಪಿ ಪಡೆ ಭಾವನಾತ್ಮಕ ಯುದ್ಧವನ್ನೇ ಸಾರಿತ್ತು. ಮೋದಿಯವರು ಎಬ್ಬಿಸಿದ ದೂಳಿನಲ್ಲಿ ಕಾಂಗ್ರೆಸ್ ಕಣ್ಮರೆಯಾಗಿ, ಬಿಜೆಪಿ ಮತ್ತೊಮ್ಮೆ ಭಾರಿ ಬಹುಮತದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಬಿಂಬಿಸಲಾಗಿತ್ತು. ಮೋದಿಯವರ ಗಾಢಾಂಧ ಅಭಿಮಾನಿಗಳು ಇದನ್ನೇ ಸತ್ಯವೆಂದು ನಂಬಿದ್ದರು. ಮತದಾರ ತನ್ನ ಸುಪ್ತಾವಸ್ಥೆಯಿಂದ ಜಾಗೃತ ಸ್ಥಿತಿಗೆ ತಲುಪಿದ್ದರಿಂದ, ಬಿಜೆಪಿ ಲೆಕ್ಕಾಚಾರ ಬುಡಮೇಲಾಗಿ ಕಾಂಗ್ರೆಸ್‌ 135ರ ಗಡಿ ದಾಟಿತು.

ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ಪ್ರಯೋಗಗಳು ಮತ್ತು ಮೋದಿಯವರ ಪ್ರಭಾವ ಕೆಲಸ ಮಾಡದೇ ಇದ್ದುದರಿಂದ ಬಿಜೆಪಿಯು ಲೋಕಸಭೆ ಚುನಾವಣೆಯ ಕಾರ್ಯತಂತ್ರವನ್ನೇ ಬದಲಿಸಿಕೊಂಡಂತಿದೆ. ಕರ್ನಾಟಕದಲ್ಲಿ ಪಕ್ಷ ಬೆಳೆಯಲು ಬಿ.ಎಸ್.ಯಡಿಯೂರಪ್ಪ, ಡಿ.ಎಚ್.ಶಂಕರಮೂರ್ತಿ, ವಿ.ಎಸ್.ಆಚಾರ್ಯ, ಎಂ.ಆರ್.ತಂಗಾ, ಬಿ.ಬಿ.ಶಿವಪ್ಪ, ಕೆ.ಎಸ್.ಈಶ್ವರಪ್ಪ, ಎಚ್.ಎನ್.ಅನಂತಕುಮಾರ್ ಅವರ ಶ್ರಮ ಎಷ್ಟು ಪ್ರಮುಖವೋ ಅಷ್ಟೇ ಪ್ರಮುಖವಾದುದು ‘ಸಂಘ’ದ ಕಾರ್ಯಸೂಚಿಯ ಅನುಷ್ಠಾನ.

ಹುಬ್ಬಳ್ಳಿಯ ಈದ್ಗಾ ಮೈದಾನ, ಚಿಕ್ಕಮಗಳೂರಿನ ಬಾಬಾಬುಡನ್‌ ಗಿರಿ ವಿವಾದವನ್ನು ನಿರಂತರವಾಗಿ ಬಳಸಿಕೊಂಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಗೋಸಾಗಣೆ, ‘ಲವ್ ಜಿಹಾದ್’, ಮತೀಯ ಗೂಂಡಾಗಿರಿಯ ಮೂಲಕ ಮತದ್ವೇಷದ ಕಿಚ್ಚು ಹತ್ತಿಸಿ, ಜನವರ್ಗಗಳನ್ನು ವಿಭಜಿಸಿದ್ದು ಕಮಲ ಅರಳಿದ್ದರ ಹಿಂದಿನ ಕಾರಣಗಳು. ಜತೆಗೆ, ಎಸ್‌.ಬಂಗಾರಪ್ಪ, ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಜತೆಗೂಡಿದ್ದರಿಂದ ಅವರ ಹಿಂದಿದ್ದ ಸಮುದಾಯದವರು ‘ಕೇಸರಿ’ ಪಡೆಗೆ ಹಿತವಾದರು. ಹೀಗೆ, ನಾಲ್ಕು ದಶಕಗಳಲ್ಲಿ ರಾಜ್ಯದಲ್ಲಿ ಬಿಜೆಪಿ ನೆಲೆ ಕಂಡುಕೊಂಡಿದ್ದೇ ಕೋಮುವಾದಿ ರಾಜಕೀಯ ಪ್ರಯೋಗದ ಮೂಲಕ ಎಂಬುದು ಸೂರ್ಯಸ್ಪಷ್ಟ.

ಈ ಸಲದ ಲೋಕಸಭೆ ಚುನಾವಣೆಯಲ್ಲಿ ಹಿಂದಣ ಹಾದಿ ತೊರೆದ ಬಿಜೆಪಿ ನಾಯಕರು, ಬೇರೆ ತೆರನ ಹೆಜ್ಜೆ ಇಟ್ಟಿದ್ದಾರೆ. ಹಿಂದುತ್ವ, ಮುಸ್ಲಿಮರ ಮೇಲಿನ ದ್ವೇಷ, ರಾಷ್ಟ್ರೀಯವಾದ, ರಾಮಮಂದಿರ, ಉರಿಗೌಡ–ನಂಜೇಗೌಡ ಇವೆಲ್ಲ ಚುನಾವಣೆಯ ವಿಷಯಗಳಾಗಿಲ್ಲ. ಕಾಂಗ್ರೆಸ್ ‘ಗ್ಯಾರಂಟಿ’ಗಳಿಗೆ ಪರ್ಯಾಯವಾಗಿ ಮೋದಿ ಗ್ಯಾರಂಟಿ, ಇಲ್ಲಿಯತನಕ ವಿರೋಧಿಸಿಕೊಂಡು ಬಂದಿದ್ದ ಕುಟುಂಬ ರಾಜಕಾರಣಕ್ಕೆ ಶರಣಾಗಿದ್ದು ಹೊಸ ವರಸೆ.

ಬಾಯ್ತೆರೆದರೆ ಬೆಂಕಿಯ ಉಂಡೆ ಉಗುಳುತ್ತಿದ್ದವರು, ಸ್ಥಳೀಯ ಹಾಗೂ ವೈಯಕ್ತಿಕ ಜಗಳಗಳನ್ನು ಕೋಮುಗಲಭೆಗಳಾಗಿ, ರಾಷ್ಟ್ರಮಟ್ಟದ ವಿವಾದಗಳಾಗಿ ಪರಿವರ್ತಿಸುತ್ತಿದ್ದವರನ್ನು ಚುನಾವಣೆಯಿಂದ ಹೊರಗಿಡಲಾಗಿದೆ. ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಇದಕ್ಕೆ ಅಪವಾದ ಇರಬಹುದು. ಆದರೆ, ಕೋಮುದ್ವೇಷದ ಕೆಲಸಗಳಿಂದಲೇ ಹೆಸರು ಮಾಡಿದ್ದ, ಜನರನ್ನು ಕೆರಳಿಸುವ ಶಕ್ತಿ ಹೊಂದಿರುವ ಅನಂತಕುಮಾರ್‌ ಹೆಗಡೆ, ನಳಿನ್ ಕುಮಾರ್ ಕಟೀಲ್, ಪ್ರತಾಪ ಸಿಂಹ ಅವರಿಗೆ ಟಿಕೆಟ್ ಕೊಟ್ಟಿಲ್ಲ.

ಕ್ಷೇತ್ರದಲ್ಲಿ ವಿರೋಧಿ ಅಲೆಯಿದೆ ಎಂಬ ಕಾರಣಕ್ಕೆ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸ ಲಾಗಿದೆ. ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಆಕಾಂಕ್ಷಿ ಆಗಿದ್ದ ಸಿ.ಟಿ.ರವಿ ಅವರನ್ನು ಅಲೆದಾಡಿಸಿ, ಕೊನೆಗೆ ಟಿಕೆಟ್ ತಪ್ಪಿಸಲಾಗಿದೆ. ಹಿಂದುತ್ವದ ಉಗ್ರ ಪ್ರತಿಪಾದಕ
ಕೆ.ಎಸ್.ಈಶ್ವರಪ್ಪ ಅವರನ್ನು ನಂಬಿಸಿ ಕೈಕೊಡಲಾಗಿದೆ. 

ಈ ಕ್ಷೇತ್ರಗಳಲ್ಲಿ ಮಾಜಿ ಸೈನಿಕ, ರಾಜವಂಶಸ್ಥ, ವೈದ್ಯ, ಮೃದುಹಿಂದುತ್ವದ ನಾಯಕರನ್ನು ತೆರೆಯ ಮೇಲೆ ನಿಲ್ಲಿಸಲಾಗಿದೆ. ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಸೇರಿ, ಮೋದಿ ಮತ್ತು ಬಿಜೆಪಿಯನ್ನು ಜರಿದಿದ್ದ ಜಗದೀಶ ಶೆಟ್ಟರ್ ಅವರನ್ನು ವಾಪಸ್ ಕರೆತಂದು, ಬೆಳಗಾವಿಯಲ್ಲಿ ಟಿಕೆಟ್ ಕೊಡಲಾಗಿದೆ. ಪಕ್ಷವನ್ನು ತಾಯಿಯೆಂದೇ ಗೌರವಿಸಿದ, ಪಕ್ಷಕ್ಕಾಗಿ ತಮ್ಮ ನಾಲಿಗೆಯನ್ನು ಉದ್ದುದ್ದ ಹರಿಯಬಿಟ್ಟು ದ್ವೇಷ ಹಂಚುವುದರಲ್ಲೇ ಜೀವನ ಕಳೆದ ಈಶ್ವರಪ್ಪ, ಅನಂತಕುಮಾರ್ ಹೆಗಡೆ ಬಿಜೆಪಿಯವರಿಗೆ ಬೇಡವಾದರು. ಅವರ ಬದಲು, ಎಂದೂ ಹಿಂದುತ್ವವನ್ನು ಏರು ಧ್ವನಿಯಲ್ಲಿ ಪ್ರತಿಪಾದಿಸದ, ಕೆಜೆಪಿ ಕಟ್ಟಿ 2013ರಲ್ಲಿ ಪಕ್ಷದ ಸೋಲಿಗೆ ಕಾರಣರಾಗಿದ್ದ ಯಡಿಯೂರಪ್ಪನವರನ್ನು 2019ರಲ್ಲಿ ಮುಖ್ಯಮಂತ್ರಿ ಮಾಡಲಾಯಿತು.

ಕುರ್ಚಿಯಿಂದ ಇಳಿಸಿದ ಬಳಿಕವೂ ಅವರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಲಾಯಿತು. ಯಾವ ವಿಜಯೇಂದ್ರ ಅವರ ಕಾರಣ ಮುಂದಿಟ್ಟು ಯಡಿಯೂರಪ್ಪನವರನ್ನು ಕುರ್ಚಿಯಿಂದ ಇಳಿಸಲಾಗಿತ್ತೋ ಅದೇ ವಿಜಯೇಂದ್ರ ಅವರಿಗೆ ಬಿಜೆಪಿಯ ರಾಜ್ಯ ಚುಕ್ಕಾಣಿಯನ್ನೂ ಕೊಡಲಾಯಿತು. ಹಾಗಾದರೆ, ಹಿಂದುತ್ವಕ್ಕಾಗಿ ಬಡಿದಾಡಿದವರಿಗೆ ಸಿಕ್ಕಿದ್ದೇನು? ಇದನ್ನೇ ಪ್ರಶ್ನಿಸಿ ಈಶ್ವರಪ್ಪ ಸಿಡಿದೆದ್ದಿದ್ದಾರೆ.

ಬಿಜೆಪಿ ಮತ್ತು ಸಂಘದ ಭದ್ರಕೋಟೆಯಾಗಿದ್ದ ಕರಾವಳಿಯ ಮೂರು ಕಡೆ ಅಭ್ಯರ್ಥಿಗಳನ್ನು ಬದಲಿಸಲಾಗಿದೆ. ಅಂದರೆ, ಮೋದಿ ನೇತೃತ್ವದ ಸರ್ಕಾರದ ಕೊಡುಗೆಗಳು, ಮೋದಿ ಗ್ಯಾರಂಟಿ ಕೈ ಹಿಡಿಯದು ಎಂಬುದು ಖಾತರಿಯಾಗಿ ಸಂಸದರಿಗೆ ಟಿಕೆಟ್ ತಪ್ಪಿಸಲಾಯಿತೇ? ಮೋದಿ ಅಲೆಯೇ ಜಯದ ಹಾದಿಯಾಗುತ್ತದೆ ಎಂಬ ನಂಬಿಕೆ ಇದ್ದರೆ ಇಂತಹ ಪ್ರಮೇಯವಾದರೂ ಏನು? ಉತ್ತರ ಸಿಗದ ಪ್ರಶ್ನೆಗಳಿವು!

ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯ ಹಿಂದಿನ ‘ಅರ್ಹತೆ’ಗಳನ್ನು ಗಮನಿಸಿದರೆ, ಹಿಂದುತ್ವ, ಮೋದಿ ಪ್ರಭಾವಕ್ಕಿಂತ ಕುಟುಂಬ ರಾಜಕಾರಣ, ಜಾತಿ ಹಾಗೂ ವೈಯಕ್ತಿಕ ವರ್ಚಸ್ಸೇ ನಿರ್ಣಾಯಕ ಅಂಶಗಳಾಗಿವೆ. ‘ಹಿರಿಯರಿಗೆಲ್ಲ ಟಿಕೆಟ್ ಇಲ್ಲ’ ಎಂದು ವಿಧಾನಸಭೆ ಚುನಾವಣೆ ವೇಳೆ ಜಾರಿಗೊಳಿಸಿದ್ದ ‘ನೀತಿ’ಯನ್ನು ಈ ಬಾರಿ ಕೈಬಿಡಲಾಗಿದೆ. ಯಡಿಯೂರಪ್ಪ, ದೇವೇಗೌಡರ ಕುಟುಂಬ ರಾಜಕಾರಣದ ಆಸರೆಯು ಹಿಂದೆ ಗೆದ್ದಂತಹ 25 ಕ್ಷೇತ್ರಗಳನ್ನು ಉಳಿಸಿಕೊಡುತ್ತದೆಯೇ ಎಂಬುದನ್ನು ಪರೀಕ್ಷೆಗೆ ಒಡ್ಡುವುದು, ಅದರಲ್ಲಿ ಸಫಲರಾಗಲಿಲ್ಲವೆಂದರೆ ಕುಟುಂಬ ರಾಜಕಾರಣವನ್ನು ಕೊನೆಗಾಣಿಸುವುದು, ಆ ಬಳಿಕ, ಹೊಸ ರಾಜಕೀಯ ಸಮೀಕರಣವನ್ನು ಕರ್ನಾಟಕದಲ್ಲಿ ರೂಢಿಸಲು ಚುನಾವಣೆಯನ್ನು ಪ್ರಯೋಗವೆಂಬಂತೆ ಮೋದಿ–ಅಮಿತ್ ಶಾ ಜೋಡಿ ಬಳಸಿಕೊಂಡಿರುವುದಕ್ಕೆ ತೆಳುವಾದ ಕುರುಹುಗಳು ಗೋಚರಿಸುತ್ತವೆ.

ಹಾಗೆಂದು, ಹಿಂದುತ್ವದ ಹಂಗು ಕಳಚಿಕೊಂಡಿದ್ದಕ್ಕೆ ಯಾರೇನೂ ಸಂಭ್ರಮಿಸಬೇಕಾಗಿಲ್ಲ. ಹುಲಿಯೊಂದು ಹಸುಗಳ ಗುಂಪಿನ ಮೇಲೆ ಆಕ್ರಮಣ ಮಾಡದೆ ಹಿಂದೆ ಸರಿದಿದೆ ಎಂದರೆ, ಅದು ‘ಪುಣ್ಯಕೋಟಿ’ಯಾಗಿ ಬದಲಾಗಿದೆ ಎಂದಲ್ಲ. ಎದುರಾಗಬಹುದಾದ ಪ್ರತಿರೋಧ ಮತ್ತು ಅದರಿಂದ ಆಗಬಹುದಾದ ತಾತ್ಕಾಲಿಕ ಹಿನ್ನಡೆಯ ಕಾರಣಕ್ಕಷ್ಟೇ ಹುಲಿ ತನ್ನ ಬೇಟೆಗೆ ಸ್ವಯಂ ತಡೆಹಾಕಿಕೊಂಡಿರುತ್ತದೆ. ಈ ಎಲ್ಲ ನಡೆಗಳು ಆಪತ್ಕಾಲವನ್ನು ಗೆದ್ದ ಮೇಲೆ ಮತ್ತೊಂದು ವಿನಾಶಕಾರಿ ದಾಳಿಗೆ ಹುಲಿರಾಯ ಮಾಡುವ ತಯಾರಿಯೇ ವಿನಾ ತನ್ನ ವ್ಯಾಘ್ರತನವನ್ನು ಕಳಚಿಟ್ಟು ಅದು ಸಾತ್ವಿಕನಾಗಿದೆ ಎಂದರ್ಥವಲ್ಲ. ಕರ್ನಾಟಕದ ಚುನಾವಣೆಗೆ ಈ ರೂಪಕ ಹೆಚ್ಚು ಸಂಗತ ಎನಿಸುತ್ತದೆ.

‘ವಂಶವಾದ’ವನ್ನು ಉಗ್ರ ಕಂಠದಲ್ಲಿ ವಿರೋಧಿಸುತ್ತಲೇ ಬಂದ ಮೋದಿಯವರು ಹಿಂದೆ ಕರ್ನಾಟಕಕ್ಕೆ ಬಂದಾಗಲೆಲ್ಲ ದೇವೇಗೌಡರ ಕುಟುಂಬ ರಾಜಕಾರಣವನ್ನು ಕುಟುಕುತ್ತಿ ದ್ದರು. ಈ ಸಲದ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಮೊದಲ ಬಾರಿಗೆ ಬಂದ ಮೋದಿಯವರು, ಕುಟುಂಬ ರಾಜಕಾರಣವನ್ನೇ ಹೊದ್ದಿರುವ ದೇವೇಗೌಡ, ಅವರ ಮಗ, ಮೊಮ್ಮಗ ಹಾಗೂ ಯಡಿಯೂರಪ್ಪನವರನ್ನು ಎಡಬಲದಲ್ಲಿ ಕೂರಿಸಿಕೊಂಡು ಭಾಷಣ ಮಾಡಿದರು. ತಾವು ಮೂರನೇ ಬಾರಿ ಪಟ್ಟಕ್ಕೇರಲು ‘ಉಗ್ರ ಹಿಂದುತ್ವವಾದಿ’ಗಳನ್ನು ಬದಿಗಟ್ಟಿರುವ ಮೋದಿಯವರು, ಕುಟುಂಬ ರಾಜಕಾರಣವನ್ನೇ ಅರೆದು ಕುಡಿದಿರುವ ಇಬ್ಬರು ನಾಯಕರನ್ನು ಆತುಕೊಂಡಿರುವುದು ಯಾವುದರ ಸೂಚನೆ? ಈ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರ ಇಲ್ಲ.

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT