ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಬೆರ್‌ಮಾಸ್‌ ನೆನಪಿನಲ್ಲಿ ಸ್ವತಂತ್ರ ಚಿಂತನೆ ಕುರಿತು...

ಪ್ರಜಾಪ್ರಭುತ್ವದ ಶುಭಕರ, ಬೋಧಪ್ರದ ಪಾಠಗಳನ್ನು ನಾವು ಮರೆಯಲೇಬಾರದು
Last Updated 30 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ನನ್ನ ತಲೆಮಾರಿನ ಭಾರತದ ಚಿಂತಕರಿಗೆ ಎಡ್ವರ್ಡ್‌ಸೈದ್‍ ಹೀರೊ. ಪೂರ್ವದ ದೇಶಗಳ ಬಗ್ಗೆ ಬರೆದ ಪಶ್ಚಿಮದ ವಿದ್ವಾಂಸರಿಗೆ ಸೈದ್‌ ನೀಡುತ್ತಿದ್ದ ತಿರುಗೇಟುಗಳು, ಯುವ ಎಡಪಂಥೀಯರಾಗಿದ್ದ ನಮ್ಮನ್ನು ಮುದಗೊಳಿಸಿದ್ದವು. ಇಸ್ರೇಲ್‍ ಎಸಗುತ್ತಿದ್ದ ಅಕ್ರಮಗಳ ಭಾವಾವೇಶದ ಖಂಡನೆ ಮತ್ತು ತಮ್ಮ ದೇಶ ಬಾಂಧವ ಪ್ಯಾಲೆಸ್ಟೀನಿಯನ್ನರಿಗೆ ಅವರು ನೀಡುತ್ತಿದ್ದ ಬೆಂಬಲವನ್ನು ತೃತೀಯ ಜಗತ್ತಿನ ಪ್ರತಿಪಾದಕರಾಗಿದ್ದ ನಾವು ಮೆಚ್ಚಿದ್ದೆವು.

ನಂತರದ ದಿನಗಳಲ್ಲಿಯೂ ನನ್ನ ಕೆಲವು ಗೆಳೆಯರು ಸೈದ್‍ ಬಗ್ಗೆ ಅದೇ ದೃಢನಿಷ್ಠೆ ಉಳಿಸಿಕೊಂಡರು. ಆದರೆ, ನನಗೆ ಮಾತ್ರ ನಿಧಾನವಾಗಿ ಭ್ರಮೆ ಕಳಚುತ್ತಾ ಹೋಯಿತು. ಸೈದ್‍ ತೀವ್ರವಾಗಿ ಖಂಡಿಸಿದ (ಕೆಲವೊಮ್ಮೆ ಅಣಕಿಸಿದ) ಸಾಮ್ರಾಜ್ಯವಾದಿ ಬರಹಗಾರರಿಂದ ಹಿಡಿದು ಅವರು ಅಗೌರವದಿಂದ ಕಾಣುತ್ತಿದ್ದ ನಿಜಕ್ಕೂ ರಾಜಕೀಯೇತರವಾಗಿದ್ದು ಸಾಮ್ರಾಜ್ಯವಾದದ ವಿರುದ್ಧವೇ ಇದ್ದ ಬಿಳಿಯ ವಿದ್ವಾಂಸರ ಕೃತಿಗಳನ್ನು ಒಳಗೊಂಡ ಪೌರ್ವಾತ್ಯ ಸಾಹಿತ್ಯವನ್ನು ಹೆಚ್ಚು ಹೆಚ್ಚು ಓದುತ್ತಾ ಹೋದಂತೆ ಇದು ಎಷ್ಟು ಸೂಕ್ಷ್ಮವಾದ ಕ್ಷೇತ್ರ ಎಂಬುದು ನನಗೆ ಅರಿವಾಗುತ್ತಾ ಹೋಯಿತು. ವಸಾಹುತಶಾಹಿ ಬಿಷಪ್‍ ಒಬ್ಬರ ಮಗನಾಗಿದ್ದ ವೆರಿಯರ್‌ ಎಲ್ವಿನ್‍ಅವರ ಜೀವನಚರಿತ್ರೆಯನ್ನು ನಾನು ಬರೆದ ಬಳಿಕ ಸೈದ್‍ ಅವರಿಂದ ನಾನು ಇನ್ನಷ್ಟು ದೂರ ಸರಿದೆ. ಎಲ್ವಿನ್‌ ಅವರು ಗಾಂಧಿಯ ಅನುಯಾಯಿಯಾಗಿದ್ದರು ಮತ್ತು ನೆಹರೂ ಗೆಳೆಯರಾಗಿದ್ದರು. ಮಧ್ಯ ಭಾರತದ ಬುಡಕಟ್ಟು ಜನರ ನಡುವೆಯೇ ಬದುಕಿ ಅವರಿಗಾಗಿ ಎಲ್ವಿನ್‌ ಹೋರಾಡಿದ್ದರು.

ಅಸಾಧಾರಣ ಚಿಂತಕ ಎಡ್ವರ್ಡ್ ಸೈದ್‍ ಅವರು ‘ಅಧಿಕಾರಸ್ಥರ ಮುಂದೆ ಸತ್ಯವನ್ನು ಕೂಗಿ ಹೇಳುತ್ತಿದ್ದರು’ ಎಂದು ನನ್ನ ಗೆಳೆಯರು ಸಂಭ್ರಮಿಸುತ್ತಿದ್ದರು. ಆದರೆ, ಸೈದ್‌ಗೆ ಚಾರಿತ್ರಿಕ ಗ್ರಹಿಕೆಯ ಕೊರತೆ ಇದೆ ಎಂಬುದನ್ನು ನಾನು ಕಂಡುಕೊಂಡಿದ್ದೆ ಮತ್ತು ಅವರ ರಾಜಕೀಯ ಲೇಖನಗಳೂ ನನ್ನ ಮನಮುಟ್ಟುವಲ್ಲಿ ಸಫಲವಾಗಲಿಲ್ಲ. ಇವು ಸೊಕ್ಕು ಮತ್ತು ಸ್ವಪ್ರತಿಷ್ಠೆಯ ಲೇಖನಗಳು ಎಂಬುದು ನನಗೆ ಅರಿವಾಯಿತು. ಜತೆಗೆ, ತಮ್ಮನ್ನು ಸೈದಿಯನ್ನರು ಎಂದು ಕರೆದುಕೊಳ್ಳುವ ಆರಾಧನಾ ಭಾವದ ಅಭಿಮಾನಿ ಗುಂಪುಗಳನ್ನು ಸೈದ್‌ ಅವರು ಕಟ್ಟಿಕೊಂಡದ್ದು ನಾನು ಇನ್ನಷ್ಟು ದೂರ ಸರಿಯುವಂತೆ ಮಾಡಿತು. ತಮ್ಮ ಸುತ್ತ ಪಂಥಗಳನ್ನು ಕಟ್ಟಿಕೊಳ್ಳುವುದು ದೇವಮಾನವರ ಕೆಲಸ. ರಾಜಕಾರಣಿಗಳು ಹಾಗೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ (ನಾನು ತುರ್ತುಪರಿಸ್ಥಿತಿ ಕಾಲದಲ್ಲಿ ಬೆಳೆದವನು) ಎಂಬುದು ನನಗೆ ತಿಳಿದಿತ್ತು. ಮುಖಸ್ತುತಿ ಮತ್ತು ತಮ್ಮನ್ನು ಅಭಿಮಾನಿಗಳು ಆರಾಧಿಸಬೇಕು ಎಂಬುದಕ್ಕೆ ವಿದ್ವಾಂಸರು ಬಲಿಬಿದ್ದರೆ ಅದು ವಿದ್ವತ್ತಿಗೆ ಅನಾರೋಗ್ಯಕರ.

ಮಹಾನ್‍ ವ್ಯಕ್ತಿ ಸೈದ್‍ ನಿಧನರಾದ ಬಳಿಕ ಅವರು ಮತ್ತು ಸೈದಿಯನ್ನರ ಬಗ್ಗೆ ನಾನು ಬರೆದಿದ್ದೆ. ಈಗ, ಜರ್ಮನಿಯ ತತ್ವಜ್ಞಾನಿ ಮತ್ತು ಸಾಮಾಜಿಕ ಚಿಂತಕ ಯೂರ್ಗನ್‍ ಹಾಬೆರ್‌ಮಾಸ್‌ ಅವರ ಹೊಸ ಜೀವನ ಚರಿತ್ರೆಯೊಂದನ್ನು ಓದುತ್ತಾ ಮತ್ತೆ ಸೈದ್‍ ಬಗ್ಗೆ ಯೋಚಿಸುತ್ತಿದ್ದೇನೆ. ಹಾಬೆರ್‌ಮಾಸ್‌ ಕೂಡ ಆಧುನಿಕ ಪಶ್ಚಿಮದ ಬೌದ್ಧಿಕ ಇತಿಹಾಸದಲ್ಲಿ ಬಹಳ ದೊಡ್ಡ ವ್ಯಕ್ತಿ. ಹಾಬೆರ್‌ಮಾಸ್‌ ಹೀಗೆ ಹೇಳುತ್ತಿದ್ದರು ಎಂದು ಜೀವನಚರಿತ್ರೆಯಲ್ಲಿ ಉದ್ಧರಿಸಲಾಗಿದೆ: ‘ಚಿಂತಕನಿಗೆ ಆಕ್ರೋಶಗೊಳ್ಳುವ ಸಾಮರ್ಥ್ಯ ಇರಬೇಕು- ಹಾಗಿದ್ದರೂ ಅದು ಅತಿಯಾಗದಂತೆ ನೋಡಿಕೊಳ್ಳುವ ರಾಜಕೀಯ ಗ್ರಹಿಕೆ ಇರಬೇಕು’. ಇದು ಬಹಳ ಸುಂದರವಾದ ಹೇಳಿಕೆ. ಅನ್ಯಾಯ ಮತ್ತು ಅಸಮಾನತೆಗಳಿಂದ ಕೂಡಿದ ಈ ಜಗತ್ತಿನಲ್ಲಿ ಬದುಕುವಾಗ ಚಿಂತಕರು ಆಗಾಗ ಆಕ್ರೋಶಗೊಳ್ಳದಿರಲು ಸಾಧ್ಯವೇ ಇಲ್ಲ; ಆದರೆ, ತಮ್ಮ ಪ್ರಾಥಮಿಕ ಹೊಣೆಗಾರಿಕೆ ಏನು ಎಂಬುದನ್ನು ಅವರು ಮರೆಯಬಾರದು. ಚಿಂತಕನಾದವನಿಗೆ ಮ್ಯಾನಿಕಿ ಅಭಿವ್ಯಕ್ತಿ ವಿಧಾನ (ಸೈತಾನನೂ ದೇವರಂತೆ ನಿತ್ಯ ಮತ್ತು ಅನಾದಿ ಎಂದು ಭಾವಿಸುವ ಒಂದು ಪಂಥ) ಮತ್ತು ನಿಂದನೆಗಳಿಗಿಂತ ಸೂಕ್ಷ್ಮತೆ ಮತ್ತು ಸತ್ಯವೇ ಮೊದಲು. ಆದರೆ, ಎಡಪಂಥೀಯ ಚಿಂತಕರು- ಮಾರ್ಕ್ಸ್‌ವಾದಿಗಳಿರಲಿ ಅಥವಾ ಸೈದಿಯನ್ನರಿರಲಿ ಅಥವಾ ಇತ್ತೀಚೆಗೆ ಅಂಬೇಡ್ಕರ್‌ವಾದಿಗಳು ಈ ಎಚ್ಚರಿಕೆಯನ್ನು ಕಡೆಗಣಿಸಿದ್ದೇ ಹೆಚ್ಚು.

ಹಾಬೆರ್‌ಮಾಸ್‌ನ ವಿದ್ಯಾರ್ಥಿಯಾಗಿದ್ದ ಸ್ಟೆಫಾನ್‍ ಮುಲ್ಲರ್ ಡೂಮ್‍ ಈ ಜೀವನಚರಿತ್ರೆ ಬರೆದಿದ್ದಾರೆ. ಸ್ಟೆಫಾನ್‍ ಅವರು ಓಲ್ಡೆನ್‍ಬರ್ಗ್ ವಿಶ್ವವಿದ್ಯಾಲಯದಲ್ಲಿಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಸಾಕಷ್ಟು ಸಂಶೋಧನೆ ನಡೆಸಿ ಎಚ್ಚರಿಕೆಯಿಂದ ಈ ಪುಸ್ತಕ ಬರೆದಿದ್ದಾರೆ. ಹಾಬೆರ್‌ಮಾಸ್‌ ಅವರ ಬೌದ್ಧಿಕ ಕೆಲಸಗಳಿಗೆ ಹೆಚ್ಚಿನ ಗಮನ ನೀಡಿದ್ದರೂ ಅವರ ವೈಯಕ್ತಿಕ ಜೀವನವನ್ನು ಇಲ್ಲಿ ನಿರ್ಲಕ್ಷಿಸಲಾಗಿಲ್ಲ. ಹಾಬೆರ್‌ಮಾಸ್‌ ಜನಿಸಿದ್ದು 1929ರಲ್ಲಿ. ಎರಡನೇ ಮಹಾಯುದ್ಧ ಕೊನೆಯಾಗುವ ಹೊತ್ತಿಗೆ ಅವರಿಗೆ 16 ವರ್ಷವಾಗಿತ್ತು. ನಾಝಿ ಸೇನೆಗೆ ಬಲವಂತವಾಗಿ ಸೇರಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ಕಿರಿಯನಾಗಿದ್ದರೂ ಹಿಟ್ಲರ್ ಆಳ್ವಿಕೆಯ ಕ್ರೌರ್ಯ ನೇರವಾಗಿ ಅನುಭವವಾಗುವಷ್ಟು ಬುದ್ಧಿ ಬೆಳೆದಿತ್ತು. ಶ‍್ರೇಷ್ಠ ಚಿಂತಕರಾದ ತಿಯೊಡಾರ್ ಅಡೋರ್ನೊ ಮತ್ತು ಮ್ಯಾಕ್ಸ್ ಹಾರ್‌ಕೈಮರ್‌ ಜತೆಗೆ ಫ್ರಾಂಕ್‍ಫರ್ಟ್‌ನಲ್ಲಿ ಕೆಲಸ ಮಾಡುವ ಮೊದಲು ಅವರು ಗಾಟಿಂಗೆನ್‍ ಮತ್ತು ಬಾನ್‍ನಲ್ಲಿ ಕಲಿತರು. ಮ್ಯೂನಿಕ್‍ನಲ್ಲಿನ ಸಂಶೋಧನಾ ಸಂಸ್ಥೆಯೊಂದರಲ್ಲಿ ಕೆಲಕಾಲ ಸಂಶೋಧನೆಯನ್ನೂ ನಡೆಸಿದರು. ಬಳಿಕ ಫ್ರಾಂಕ್‍ಫರ್ಟ್‌ನಲ್ಲಿ ಬೋಧನಾ ಕೆಲಸ ಮಾಡಿದರು.

ಹಾಬೆರ್‌ಮಾಸ್‌ ಬರೆದ ಪ್ರಮುಖ ಪುಸ್ತಕಗಳನ್ನು ಸ್ಟೆಫಾನ್‍ ಹತ್ತಿರದಿಂದ ಗಮನಿಸಿದ್ದಾರೆ. ಭಾಷಣಗಳು ಮತ್ತು ಪತ್ರಿಕೆಗಳಿಗೆ ಬರೆದ ಲೇಖನಗಳನ್ನೂ ನೋಡಿದ್ದಾರೆ. ಹಾಗಾಗಿ, ಬೌದ್ಧಿಕ ವಲಯದ ಆಚೆಗೂ ಹಾಬೆರ್‌ಮಾಸ್‌ ನಡೆಸಿದ ಸಂವಹನಗಳು ಇಲ್ಲಿ ದಾಖಲಾಗಿವೆ. ಅವರು ನಡೆಸಿದ ಬೌದ‍್ಧಿಕ ಸಂವಾದಗಳನ್ನು ವಿಶ್ಲೇಷಿಸಲಾಗಿದೆ. ಹಾಬೆರ್‌ಮಾಸ್‌ ಅವರ ಜೀವನ ಮತ್ತು ಕೆಲಸದಲ್ಲಿ ಪತ್ನಿ ಯೂಟ್‍ ವೆಸೆಲ್‍ಹಾಫ್ಟ್ ಅವರು ವಹಿಸಿದ್ದ ನಿರ್ಣಾಯಕ ಪಾತ್ರದ ಬಗ್ಗೆಯೂ ವಿವರಗಳಿವೆ. ಹಾಬೆರ್‌ಮಾಸ್‌ ಜೀವನ ಮತ್ತು ಅವರ ಚಿಂತನೆಯ ನಡುವೆ ಇರುವ ಕುತೂಹಲಕಾರಿ ನಂಟಿನ ಕುರಿತೂ ಸ್ಟೆಫಾನ್‍ ಬೆಳಕು ಚೆಲ್ಲಿದ್ದಾರೆ. ಸೀಳು ತುಟಿಯ ಸಮಸ್ಯೆ ಹೊಂದಿದ್ದ ಹಾಬೆರ್‌ಮಾಸ್‌ ಅದನ್ನು ಸರಿಪಡಿಸುವುದಕ್ಕಾಗಿ ಬಾಲ್ಯದಲ್ಲಿ ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ಇದು ಮನುಷ್ಯ ಹೇಗೆ ಇನ್ನೊಬ್ಬರ ಮೇಲೆ ಅವಲಂಬಿತ ಎಂಬುದರ ಬಗ್ಗೆ ಗಾಢವಾಗಿ ಅವರು ಚಿಂತಿಸುವಂತೆ ಮಾಡಿತು. ‘ಮನುಷ್ಯನ ಮನಸ್ಸು ಹಲವು ವಿಚಾರಗಳ ಜೋಡಣೆ’ ಎಂಬುದಕ್ಕೆ ಒತ್ತು ನೀಡಲು ಬಾಲ್ಯದ ಈ ಅನುಭವಗಳೇ ಪ್ರೇರಣೆ ಎಂದು ಹಾಬೆರ್‌ಮಾಸ್‌ ಅವರೇ ಹೇಳಿಕೊಂಡಿದ್ದರು.

ಮಹಾಯುದ‍್ಧ ನಂತರದ ಜಗತ್ತಿನ ಅತ್ಯಂತ ಪ್ರಭಾವಿ ಸಾಮಾಜಿಕ ಚಿಂತಕ ಎಂಬ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಹೆಸರು ಹಾಬೆರ್‌ಮಾಸ್‌ ಅವರದ್ದು (ಫ್ರಾನ್ಸ್‌ನ ಮೈಕೆಲ್ ಫುಕೊ ಅವರ ಪ್ರಮುಖ ಪ್ರತಿಸ್ಪರ್ಧಿ). ‘ಸಾರ್ವಜನಿಕ ವಲಯ’, ‘ಸಂವಹನದಲ್ಲಿ ಕ್ರಿಯೆ’ ಮತ್ತು ‘ಸಾಂವಿಧಾನಿಕ ದೇಶಪ್ರೇಮ’ಗಳಂತಹ ಅವರ ಚಿಂತನೆಗಳು ಜಗತ್ತಿನ ವಿದ್ವತ್ತಿನ ಮೇಲೆ ವ್ಯಾಪಕವಾದ ಪ್ರಭಾವ ಬೀರಿವೆ. ಮಾರ್ಕ್ಸ್, ನೀಷೆ ಮತ್ತು ಹೈಡೆಗರ್ ನಂತರ ಜರ್ಮನಿಯ ಅತ್ಯಂತ ಪ್ರಭಾವಿ ತತ್ವಜ್ಞಾನಿ ಎಂದು 2004ರಲ್ಲಿ ಹಾಬೆರ್‌ಮಾಸ್‌ ಅವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಣ್ಣಿಸಲಾಯಿತು. ದೇಶದ ರಾಜಕೀಯ ಸಂಸ್ಕೃತಿಯ ಸಾರ್ವಜನಿಕ ಆತ್ಮಸಾಕ್ಷಿ ಎಂದು ಅವರನ್ನು ಹೊಗಳಲಾಯಿತು.

ಹಾಬೆರ್‌ಮಾಸ್‌ ದೇಶಪ್ರೇಮಿಯಾಗಿದ್ದರು, ಆದರೆ ಅದು ಅತಿರೇಕದ ಉನ್ಮಾದವಾಗಿರಲಿಲ್ಲ. ಯುದ್ಧಾನಂತರದ ಕಾಲದಲ್ಲಿ ಪಶ್ಚಿಮ ಜರ್ಮನಿಯನ್ನು ಪ್ರಜಾಪ್ರಭುತ್ವವಾಗಿ ಕಟ್ಟುವುದಕ್ಕೆ ಅವರ ಬದ್ಧತೆ ಆಳವಾದುದಾಗಿತ್ತು. ಆದರೆ, ಅಗತ್ಯ ಬಿದ್ದಾಗಲೆಲ್ಲ ಸರ್ಕಾರದ ನೀತಿ ಮತ್ತು ರಾಜಕಾರಣಿಗಳನ್ನು ಟೀಕಿಸುತ್ತಿದ್ದರು. ಮಂದಗಾಮಿ ಎಡಪಂಥೀಯರಾಗಿದ್ದ ಅವರ ವಿರುದ್ಧ ತೀವ್ರವಾದಿ ಗುಂಪುಗಳು ಸದಾ ಸಕ್ರಿಯವಾಗಿದ್ದವು. 1970ರ ದಶಕದ ಉತ್ತರಾರ್ಧದಲ್ಲಿ, ಎಡಪಂಥೀಯ ಒಲವಿರುವವರು ದೇಶದ್ರೋಹಿಗಳು ಎಂದು ಆರೋಪಿಸಿ ಆಕ್ರೋಶಭರಿತ ದಾಳಿಗಳು ನಡೆದಿದ್ದವು. ಹಾಬೆರ್‌ಮಾಸ್‌ ಅವರಂತಹ ಸಾಮಾಜಿಕ ಪ್ರಜಾಪ್ರಭುತ್ವವಾದಿಗಳನ್ನು ಮಾವೋವಾದಿ ಕ್ರಾಂತಿಕಾರಿಗಳು ಎಂದು ಸಂಪ್ರದಾಯವಾದಿಗಳು ಟೀಕಿಸುತ್ತಿದ್ದರು. ‘ಈಗ, ಎಡಪಂಥೀಯ ಚಿಂತಕರನ್ನು ದೇಶದ ವೈರಿಗಳು ಎಂದು ಘೋಷಿಸಿದರೆ, ಸಾರ್ವಜನಿಕವಾಗಿ ಅವರನ್ನು ಅವಮಾನಿಸಿ ನೈತಿಕವಾಗಿ ತಟಸ್ಥರನ್ನಾಗಿ ಮಾಡಿದರೆ, ದೇಶದ ಪ್ರಜಾಪ್ರಭುತ್ವದಲ್ಲಿ ಬಿರುಕುಗಳಾದಾಗ ಅದನ್ನು ಎದುರಿಸುವ ವ್ಯಕ್ತಿಗಳ ಕೂಟವನ್ನು ಗಂಭೀರವಾಗಿ ಶಿಥಿಲಗೊಳಿಸಿದಂತಲ್ಲವೇ?’ ಎಂಬುದು ಹಾಬೆರ್‌ಮಾಸ್‌ ಅವರ ಪ್ರತಿಕ್ರಿಯೆಯಾಗಿತ್ತು. ಈ ಮಾತು ಭಾರತದ ಈಗಿನ ಸ್ಥಿತಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಸ್ವತಂತ್ರ ಚಿಂತಕರಿಗೆ ‘ದೇಶವಿರೋಧಿಗಳು’ ಮತ್ತು ‘ನಗರ ನಕ್ಸಲರು’ ಎಂಬ ಹಣೆಪಟ್ಟಿ ಕಟ್ಟಿ ಅಪಮಾನಿಸಲು ಮೋದಿ ಭಕ್ತರು ಟೊಂಕಕಟ್ಟಿ ನಿಂತಿದ್ದಾರೆ. ಕೆಲವು ಸಭ್ಯ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನು ಶಿಥಿಲಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.

ಇಟಲಿಯ ವಾರಪತ್ರಿಕೆ ಲಾ ಎಕ್ಸ್‌ಪ್ರೆಸ್ಸೊ 1995ರಲ್ಲಿಹಾಬೆರ್‌ಮಾಸ್‌ ಅವರ ಸಂದರ್ಶನ ಮಾಡಿತು. ಸಂದರ್ಶನದ ಒಂದು ಪ್ರಶ್ನೆ ಹೀಗಿತ್ತು: ‘ಜರ್ಮನಿಯ ಪೌರನಾಗಿರುವ ಬಗ್ಗೆ ಈಗಿನ ನಿಮ್ಮ ಅನಿಸಿಕೆ ಏನು?’ ಹಾಬೆರ್‌ಮಾಸ್‌ ಹೀಗೆ ಉತ್ತರ ಹೇಳಿದರು: ‘1989ರ ಶುಭಸೂಚಕ ದಿನವು (ಸೋವಿಯತ್‍ ಒಕ್ಕೂಟ ಪತನವಾದ ವರ್ಷ) 1945ರ ಬೋಧಪ್ರದ ದಿನವನ್ನು (ನಾಝಿಗಳು ಸೋತ ದಿನ) ನಾವು ಮರೆಯದಂತೆ ನೋಡಿಕೊಳ್ಳಬೇಕು’. ಬಹುಶಃ, 1977 ಮತ್ತು 1980 ಭಾರತದ ಪ್ರಜಾಪ್ರಭುತ್ವವಾದಿಗಳಿಗೆ ಅತ್ಯಂತ ಮಹತ್ವದ ದಿನಗಳು. ಪ್ರಜಾಸತ್ತಾತ್ಮಕ ಶಕ್ತಿಗಳ ಕೂಟವು ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಆಳ್ವಿಕೆಯನ್ನು ಕೊನೆಗೊಳಿಸಿದ ಶುಭಕರವಾದ 1977ನೇ ಇಸವಿಯನ್ನು ನಾವು ಮರೆಯಬಾರದು. ಹಾಗೆಯೇ, ಗೊಂದಲದಿಂದಾಗಿ ಆ ಮೈತ್ರಿಕೂಟವು ಕುಸಿದು ಮತ್ತೆ ಇಂದಿರಾ ಗಾಂಧಿ ಅಧಿಕಾರಕ್ಕೆ ಬಂದ 1980ರ ಬೋಧಪ್ರದ ವರ್ಷವನ್ನೂ ನಾವು ಮರೆಯಬಾರದು.

ಈ ಪುಸ್ತಕವನ್ನು ಓದುತ್ತಾ ನನಗೆ ಅನಿಸಿದ್ದು, ಮುಂದೊಂದು ದಿನ ಅಮರ್ತ್ಯ ಸೇನ್‍ ಅವರ ಇಂತಹ ಜೀವನಚರಿತ್ರೆಯೊಂದನ್ನು ಹೀಗೆಯೇ ಓದಬೇಕು. ಈ ಇಬ್ಬರು ವ್ಯಕ್ತಿಗಳ ನಡುವೆ ಗಮನಾರ್ಹವಾದ ಹಲವು ಸಾಮ್ಯಗಳಿವೆ. ಹಾಬೆರ್‌ಮಾಸ್‌ ಮತ್ತು ಸೇನ್‍ ಇಬ್ಬರೂ ಶ್ರೇಷ್ಠ ವ್ಯಕ್ತಿಗಳು ಮತ್ತು ನಿಜವಾಗಿಯೂ ಅಂತರಶಿಸ್ತೀಯ ವಿದ್ವಾಂಸರು. ಇಬ್ಬರೂ ಸಕ್ರಿಯ ಜನಪರ ಚಿಂತಕರು ಮತ್ತು ವಿಚಾರಗಳ ಬಗ್ಗೆ ಸಂವಾದ ನಡೆಸಲು ಸದಾಸಿದ್ಧರಿರುವವರು. ಇಬ್ಬರೂ ತಮ್ಮ ಆರಂಭಿಕ ವರ್ಷಗಳ ವೈಯಕ್ತಿಕ ಮತ್ತು ಸಾಮಾಜಿಕ ಅನುಭವಗಳಿಂದ ರೂಪುಗೊಂಡವರು. ಸೀಳುತುಟಿಯ ಸಮಸ್ಯೆ ಮತ್ತು ನಾಝಿ ಆಳ್ವಿಕೆಯ ಪತನ ಹಾಬೆರ್‌ಮಾಸ್‌ ಅನುಭವವಾದರೆ, ಕ್ಯಾನ್ಸರ್ ಮತ್ತು ಭಾರತದ ವಿಭಜನೆ ಸೇನ್‍ ಅವರನ್ನು ರೂಪಿಸಿವೆ. ತಮ್ಮ ದೇಶಗಳಲ್ಲಿ ಭಾರಿ ಅಭಿಮಾನಿಗಳನ್ನು ಹೊಂದಿರುವ ಈ ಇಬ್ಬರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಾರ ಗೌರವ ಸಂಪಾದಿಸಿದವರು. ಎಡ ಮತ್ತು ಬಲಪಂಥೀಯ ತೀವ್ರವಾದಿಗಳು ದಾಳಿ ನಡೆಸಿದಾಗ ಇಬ್ಬರನ್ನೂ ಅವರ ನಿಷ್ಠ ಅನುಯಾಯಿಗಳು ರಕ್ಷಿಸಿದ್ದಾರೆ.

ಈ ಇಬ್ಬರ ನಡುವೆ ವ್ಯತ್ಯಾಸಗಳೂ ಇವೆ. ಹಾಬೆರ್‌ಮಾಸ್‌ ತತ್ವಜ್ಞಾನಿಯಾಗಿದ್ದು ನಂತರ ಸಮಾಜಶಾಸ್ತ್ರಜ್ಞನಾದವರು; ಅರ್ಥಶಾಸ್ತ್ರಜ್ಞ ಸೇನ್‍ ಬಳಿಕ ತತ್ವಜ್ಞಾನಿಯಾದರು. ಹಾಬೆರ್‌ಮಾಸ್‌ ಜೀವನಪೂರ್ತಿ ಹುಟ್ಟೂರು ಜರ್ಮನಿಯಲ್ಲಿಯೇ ನೆಲೆಸಿ, ಅಲ್ಲಿಯೇ ದುಡಿದವರಾದರೆ, ಸೇನ್‍ ತಮ್ಮ ವಯಸ್ಕ ಜೀವನದ ಬಹುಭಾಗವನ್ನು ತಾಯ್ನಾಡಿನಿಂದ ಹೊರಗೇ ಕಳೆದವರು. ಹಾಬೆರ್‌ಮಾಸ್‌ಗೆ ನೊಬೆಲ್‍ ಪುರಸ್ಕಾರದ ಗರಿಮೆ ಇಲ್ಲ (ಅವರ ಕ್ಷೇತ್ರಕ್ಕೆ ಈ ಪ್ರಶಸ್ತಿ ನೀಡಲಾಗುವುದಿಲ್ಲ); ಈ ಕೊರತೆ ನೀಗುವುದಕ್ಕಾಗಿ ಅವರಿಗೆ ಇತರ ಹಲವು ಪುರಸ್ಕಾರಗಳು ಸಂದಿವೆ.

ಸ್ಟೆಫಾನ್‍ ಬರೆದ ಜೀವನಚರಿತ್ರೆ ಓದಿ ನಾನು ಆನಂದಿಸಿದ್ದೇನೆ ಮತ್ತು ಹಲವು ವಿಚಾರ ಕಲಿತಿದ್ದೇನೆ. ಈ ಪುಸ್ತಕದಲ್ಲಿ ಒಂದು ಲೋಪ ಇದ್ದರೆ ಅದು ಇದು: ಅತ್ಯಂತ ಗೌರವದಿಂದ ಈ ಪುಸ್ತಕ ಬರೆಯಲಾಗಿದೆ, ಪೂಜ್ಯ ಭಾವಕ್ಕೆ ಏರಲು ಅಲ್ಪವಷ್ಟೇ ಬಾಕಿ ಇದೆ. ಬಹುಶಃ, ಲೇಖಕ ಸ್ಟೆಫಾನ್‌ ಅವರು ಹಾಬೆರ್‌ಮಾಸ್‌ ಅವರ ವಿದ್ಯಾರ್ಥಿಯಾಗಿದ್ದುದು, ಒಂದೇ ದೇಶದಲ್ಲಿ ಬದುಕಿದ್ದದ್ದು ಮತ್ತು ಹಾಬೆರ್‌ಮಾಸ್‌ ಬದುಕಿದ್ದಾಗಲೇ ಈ ಕೃತಿ ರಚನೆಯಾದದ್ದು ಇದಕ್ಕೆ ಕಾರಣವಾಗಿರಬಹುದು. ಅಮರ್ತ್ಯ ಸೇನ್‍ ಹಲವು ವರ್ಷ ಉಪಯುಕ್ತ ಬೌದ‍್ಧಿಕ ಜೀವನ ನಡೆಸಲಿ. ಅವರೂ ಒಬ್ಬ ಜೀವನಚರಿತ್ರಕಾರನನ್ನು ಕಂಡುಕೊಳ್ಳಲಿ ಎಂದು ನಾನು ಹಾರೈಸುತ್ತೇನೆ. ಈ ಜೀವನಚರಿತ್ರಕಾರ ಅರ್ಥಶಾಸ್ತ್ರಜ್ಞನಾಗಿದ್ದು ತತ್ವಶಾಸ್ತ್ರದ ಅರಿವಿರುವ ವ್ಯಕ್ತಿಯಾಗಿರಬೇಕು. ಸೇನ್‍
ಅವರ ವಿದ್ಯಾರ್ಥಿಯಾಗಿರಬಾರದು ಮತ್ತು ಬಂಗಾಳದವರೂ ಆಗಿರಬಾರದು ಎಂದು ಬಯಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT