ಶುಕ್ರವಾರ, ಜುಲೈ 23, 2021
20 °C

ಗುರುರಾಜ ಕರಜಗಿ ಅಂಕಣ–ಬೆರಗಿನ ಬೆಳಕು| ಆಪತ್ತಿನ ಮುನ್ಸೂಚನೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಅಚ್ಚುತ ಋಷಿ ಬ್ರಾಹ್ಮಣನನ್ನು ಬೀಳ್ಕೊಡುತ್ತ ಹೇಳಿದ, ‘ಬ್ರಾಹ್ಮಣ, ಇದೇ ದಾರಿಯಲ್ಲಿ ಮುಂದುವರೆದು ಹೋಗು. ಮುಂದೆ ಒಂದು ವಿಶೇಷ ದೃಶ್ಯ ನಿನಗೆ ಕಾದಿದೆ. ಅಲ್ಲಿ ನೆಲ ತುಂಬ ಸುಂದರ. ಅದರ ಮೇಲೆ ಹುಲ್ಲಿನ ಹಸಿರು ಹಾಸು ಇದೆ. ಆ ಹುಲ್ಲು ಎಂದಿಗೂ, ಎಲ್ಲಿಯೂ ನಾಲ್ಕು ಅಂಗುಲಕ್ಕಿಂತ ಉದ್ದವಿರುವುದಿಲ್ಲ. ನವಿಲಿನ ಕತ್ತಿಗೆ ಸಮನಾದ, ಹತ್ತಿಯಂತೆ ಕೋಮಲವಾದ ಹುಲ್ಲು ಎಲ್ಲೆಡೆಯೂ ಇದೆ. ಅಲ್ಲಿ ಮಾವು, ನೇರಳೆ, ಬೇಲ, ಹಣ್ಣಾದ ಅತ್ತಿಯ ಮರಗಳು ನೂರಾರು ಇವೆ. ಅಲ್ಲಿಯೇ ಸ್ಫಟಿಕದ ಬಣ್ಣದ ಮೀನುಗಳಿಂದ ತುಂಬಿದ ಪವಿತ್ರವಾದ, ಸುಗಂಧಿತವಾದ ನದಿ ಹರಿಯುತ್ತದೆ. ಅದರ ಮುಂದೆಯೇ ತುಂಬ ಮನೋಹರವಾದ ಪುಷ್ಕರಿಣಿ ಇದೆ. ಅದು ದೇವತೆಗಳ ನಂದನವನದ ಕಮಲಗಳಿಂದ ಮುಚ್ಚಿ ಹೋಗಿದೆ. ಮುಂದೆ ಸಾಗಿದರೆ ಅಲ್ಲಿ ನಿನಗೆ ಮುಚಲಿಂದ ಸರೋವರ ಗೋಚರವಾಗುತ್ತದೆ. ಆ ಸರೋವರದಲ್ಲಿ ಅರಳಿದ ಕಮಲಗಳಿಗೆ ಲೆಕ್ಕವೇ ಇಲ್ಲ. ಸರೋವರದ ಸುತ್ತಮುತ್ತಲಿನ ಕೆಲವು ಬಳ್ಳಿಗಳ ಗಂಧ ಇಡೀ ದಿನವಿದ್ದರೆ, ಕೆಲವು ಪುಷ್ಟಗಳ ಸುವಾಸನೆ ತಿಂಗಳುಗಟ್ಟಲೆ ಇರುತ್ತದೆ. ಹೀಗಾಗಿ ಇಡೀ ಪ್ರದೇಶವೇ ಸುಗಂಧಮಯವಾಗಿದೆ’.

‘ಸರೋವರದ ಬಲಭಾಗದಲ್ಲಿ ಒಂದು ಕಾಲುದಾರಿ ಇದೆ. ಅದು ನೇರವಾಗಿ ಆಶ್ರಮಕ್ಕೇ ಹೋಗುತ್ತದೆ. ಅಲ್ಲಿಗೆ ಹೋಗುವವನಿಗೆ ಹಸಿವು, ನೀರಡಿಕೆ, ಆಯಾಸವಾಗುವುದೇ ಇಲ್ಲ. ಮಕ್ಕಳು, ಹೆಂಡತಿಯರೊಂದಿಗೆ ವೆಸ್ಸಂತರ ಬೋಧಿಸತ್ವ ಅಲ್ಲಿಯೇ ವಾಸವಾಗಿದ್ದಾನೆ. ಸನ್ಯಾಸಿಯ ವೇಷದಲ್ಲಿರುವ ಆತ ಜಟಾಧಾರಿಯಾಗಿ, ಕರ್ಮಗಳನ್ನು ಮಾಡುತ್ತ, ನೆಲದ ಮೇಲೆ ಚರ್ಮ ಹಾಸಿಕೊಂಡು ಮಲಗುತ್ತಾನೆ’. ಇದನ್ನು ಕೇಳಿ ಬ್ರಾಹ್ಮಣ ಅಚ್ಚುತ ಋಷಿಗೆ ಪ್ರದಕ್ಷಿಣೆ, ನಮಸ್ಕಾರ ಮಾಡಿ ಅಲ್ಲಿಂದ ಹೊರಟ. ಮುಂದೆ ಸರೋವರಕ್ಕೆ ಬರುವ ಹೊತ್ತಿಗೆ ಕತ್ತಲಾಗುತ್ತಿತ್ತು. ಆತ ಯೋಚನೆ ಮಾಡಿದ. ಈಗಲೇ ಆಶ್ರಮಕ್ಕೆ ಹೋದರೆ ವೆಸ್ಸಂತರನ ಪತ್ನಿ ಮಾದ್ರಿ ಅಲ್ಲಿಯೇ ಇರುತ್ತಾಳೆ. ಯಾವಾಗಲೂ ಸ್ತ್ರೀಯರ ಬುದ್ಧಿ, ಮುಂದಾಲೋಚನೆ ಬಹಳ ಚುರುಕು. ನಾನು ಏನಾದರೂ ಬೇಡಲು ಬಂದಿದ್ದೇನೆಂದು ತಿಳಿದು ದಾನ ಕೊಡುವಲ್ಲಿ ಅಡ್ಡಿಯನ್ನುಂಟು ಮಾಡುವಳು. ನಾಳೆ ಆಕೆ ಆಶ್ರಮದಿಂದ ಹೊರಗೆ ಹೋದ ಮೇಲೆ ನಾನು ಆಶ್ರಮವನ್ನು ಸೇರುವುದು ಒಳ್ಳೆಯದು. ಹೀಗೆ ಯೋಚಿಸಿ ಸರೋವರದ ಪಕ್ಕದಲ್ಲೆ ಆರಾಮವಾದ ಜಾಗೆಯನ್ನು ಆರಿಸಿಕೊಂಡು ಮಲಗಿದ. ಅದೇ ದಿನ ರಾತ್ರಿ ಬ್ರಾಹ್ಮೀ ಮುಹೂರ್ತದಲ್ಲಿ ಮಾದ್ರಿದೇವಿಗೆ ಒಂದು ಕನಸು ಬಿತ್ತು. ಅದರಲ್ಲಿ ಒಬ್ಬ ಕಪ್ಪುಬಣ್ಣದ ಮನುಷ್ಯ, ಕಾಷಾಯ ವಸ್ತ್ರಗಳನ್ನು ಧರಿಸಿದ್ದಾನೆ. ಹೂಮಾಲೆಯನ್ನು ಕೊರಳಿಗೆ ಹಾಕಿಕೊಂಡು, ಕತ್ತಿ ಹಿಡಿದು ಬರುತ್ತಿದ್ದಾನೆ. ಆತ ಪರ್ಣಶಾಲೆಗೆ ಬಂದು ಮಾದ್ರಿಯನ್ನು ಹೊರಗಳೆದು, ಆಕೆಯ ಜಟೆಯನ್ನು ಹಿಡಿದು ನೆಲದ ಮೇಲೆ ಕೆಡವಿದ್ದಾನೆ. ಅವಳ ಎರಡೂ ಕಣ್ಣುಗಳನ್ನು ಕಿತ್ತು, ಎರಡೂ ಕೈಗಳನ್ನು ಕತ್ತರಿಸಿದ್ದಾನೆ. ನಂತರ ವಿಕಾರವಾಗಿ ನಗುತ್ತ, ಆಕೆಯ ಎದೆಯನ್ನು ಕತ್ತಿಯಿಂದ ಸೀಳಿ, ರಕ್ತವನ್ನು ಕುಡಿಯುತ್ತ, ಹೃದಯದ ಮಾಂಸವನ್ನು ತೆಗೆದುಕೊಂಡು ಹೊರಟುಹೋದ. ಆ ದೃಶ್ಯದಿಂದ ಎಚ್ಚರಾದ ಆಕೆಗೆ ಭಾರೀ ಹೆದರಿಕೆಯಾಯಿತು. ಈ ಕನಸಿನ ಅರ್ಥವೇನಿದ್ದಿರಬಹುದು? ಕನಸುಗಳ ಅರ್ಥವನ್ನು ಹೇಳುವುದರಲ್ಲಿ ವೆಸ್ಸಂತರನನ್ನು ಮೀರಿಸಿದವರಿಲ್ಲ. ಅವನನ್ನೇ ಕೇಳಿ ಸಮಾಧಾನ ಪಡೆಯಲೆಂದು ಅವನ ಕುಟೀರದೆಡೆಗೆ ನಡೆದಳು ಮಾದ್ರಿದೇವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು