ಬುಧವಾರ, ಫೆಬ್ರವರಿ 19, 2020
17 °C
ಅಜ್ಜಿ ಇಂದಿರಾ ಗಾಂಧಿ ಜೊತೆ ಹೋಲಿಕೆ– ಎಚ್ಚರದ ನಡೆ ಅಗತ್ಯ

ಪ್ರಿಯಾಂಕಾ: ಲಾಭವೆಷ್ಟು, ನಷ್ಟವೆಷ್ಟು?

ಸಂದೀಪ್ ಶಾಸ್ತ್ರಿ Updated:

ಅಕ್ಷರ ಗಾತ್ರ : | |

Prajavani

ಚುನಾವಣಾ ಕಾವು ಹೆಚ್ಚುತ್ತಿರುವ ಹೊತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅಧಿಕೃತ ಸ್ಥಾನವೊಂದನ್ನು ನೀಡಲಾಗಿದೆ. ಇದಕ್ಕೆ ವ್ಯಕ್ತವಾಗಿರುವ ಪ್ರತಿಕ್ರಿಯೆಗಳು ನಿರೀಕ್ಷಿತ ಹಾಗೂ ಧ್ರುವೀಕೃತ. ಪ್ರಿಯಾಂಕಾ ಅವರ ರಾಜಕೀಯ ಪ್ರವೇಶದ ವಿಚಾರದಲ್ಲಿ ವ್ಯಕ್ತಿಯ ನಿಲುವು ಏನು ಎಂಬುದು ಆ ವ್ಯಕ್ತಿಯ ರಾಜಕೀಯ ಒಲವು ಏನೆಂಬುದನ್ನು ನಿರ್ಧರಿಸಿದೆ. ಪ್ರಿಯಾಂಕಾ ಅವರ ರಾಜಕೀಯ ಪ್ರವೇಶವನ್ನು ಕೆಲವರು ‘ಹೊಸತನದ ಪ್ರವೇಶ’ ಎಂದು ಬಣ್ಣಿಸಿದ್ದರೆ, ಇನ್ನು ಕೆಲವರು ‘ಇದು ವಂಶಪಾರಂಪರ್ಯ ರಾಜಕಾರಣವನ್ನು ಪುನಃ ನೆಚ್ಚಿಕೊಳ್ಳಬೇಕಾದ ದಿವಾಳಿತನ’ ಎಂದು ಜರೆದಿದ್ದಾರೆ. ಈ ಬೆಳವಣಿಗೆಗಳನ್ನು ಯಾವುದೇ ಗುಂಪಿನ ಜೊತೆ
ಗುರುತಿಸಿಕೊಳ್ಳಲು ಇಷ್ಟಪಡದ ರಾಜಕೀಯ ವಿದ್ಯಾರ್ಥಿಯ ಕಣ್ಣಿನಿಂದ ನೋಡುವ ಪ್ರಯತ್ನ ಇಲ್ಲಿದೆ.

ಪಕ್ಷಗಳ ಬೆಂಬಲಿಗರ ದೃಷ್ಟಿಯಿಂದ ನೋಡದಿದ್ದರೆ, ಕೆಲವು ಅಂಶಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ದೇಶದ ಬಹುಮುಖ್ಯ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷ ಜಯದ ದಾರಿಗೆ ಮರಳಿದೆ. ಈ ಹೊತ್ತಿನಲ್ಲಿ ಪ್ರಿಯಾಂಕಾ ಅವರಿಗೆ ಪಕ್ಷದಲ್ಲಿ ಹುದ್ದೆ ನೀಡಿರುವುದರ ಹಿಂದೆ ಪಕ್ಷದ ಬೆಂಬಲಿಗರು ಹಾಗೂ ಕಾರ್ಯಕರ್ತರ ಉತ್ಸಾಹ ಹೆಚ್ಚಿಸುವ ಉದ್ದೇಶವಿರುವುದು ಸ್ಪಷ್ಟ. ಪಕ್ಷದಲ್ಲಿ ಅಧಿಕೃತ ಸ್ಥಾನವೊಂದನ್ನು ನೀಡಿರುವುದರ ಹಿಂದಿನ ಪ್ರಧಾನ ಉದ್ದೇಶವೇ ಇದು ಎಂದು ಭಾಸವಾಗುತ್ತಿದೆ. ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿ, ಪೂರ್ವ ಉತ್ತರ ಪ್ರದೇಶದ ಹೊಣೆ ನೀಡಿರುವುದು ಮುಂದೆ ದೊಡ್ಡ ತೀರ್ಮಾನ ತೆಗೆದುಕೊಳ್ಳುವ ಮುನ್ನ ಪ್ರತಿಕ್ರಿಯೆ ಏನು ಬರಬಹುದು ಎಂಬುದನ್ನು ಪರೀಕ್ಷಿಸುವ ದಾರಿ.

ಪ್ರಿಯಾಂಕಾ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂಬ ಬೇಡಿಕೆ ಕಾಂಗ್ರೆಸ್ಸಿನ ಒಳಗಿನಿಂದ ಬಹಳ ಕಾಲದಿಂದಲೂ ಬರುತ್ತಿದೆ. ಹೀಗೆ ಒತ್ತಾಯ ಬರುವುದನ್ನು ‘ರಾಹುಲ್ ಗಾಂಧಿ ನಾಯಕತ್ವವನ್ನು ತಿರಸ್ಕರಿಸಿದಂತೆ’ ಎಂಬಂತೆಯೂ ಗ್ರಹಿಸಲಾಗಿದೆ. ಈಗ ರಾಹುಲ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಗಟ್ಟಿಯಾಗಿ ನೆಲೆ ಕಂಡುಕೊಂಡಿರುವ ಕಾರಣ, ಪ್ರಿಯಾಂಕಾ ಅವರನ್ನು ರಾಜಕೀಯಕ್ಕೆ ಅಧಿಕೃತವಾಗಿ ತರಲು ಇದು ಸಕಾಲ ಎಂದು ಕಾಂಗ್ರೆಸ್ಸಿನವರು ಆಲೋಚಿಸಿರಬಹುದು.

ಪ್ರಿಯಾಂಕಾ ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರ ನೆನಪು ತರಿಸುತ್ತಾರೆ ಎಂದು ಕಾಂಗ್ರೆಸ್ಸಿನ ಅನೇಕ ಬೆಂಬಲಿಗರು ಮುಂದಿಡುವ ವಾದದಲ್ಲಿ ಹುರುಳಿದೆಯೇ? ಒಂದಿಷ್ಟು ಮಟ್ಟಿಗೆ ಹುರುಳಿರಬಹುದು. ಆದರೆ, ಈ ವಾದ ಹಾಗೂ ನಿರೀಕ್ಷೆಯ ಸಕಾರಾತ್ಮಕ ಅಂಶವನ್ನು ಒಂದು ಹಂತಕ್ಕಿಂತ ಹೆಚ್ಚು ವಿಸ್ತರಿಸುವ ವೇಳೆ ಜಾಗರೂಕ ಆಗಿರಬೇಕು. ಈ ಅಂಶ ಪ್ರಸ್ತಾಪಿಸಲು ಎರಡು ಕಾರಣಗಳಿವೆ. ಇಂದಿರಾ ಮತ್ತು ಅವರ ಕಾರ್ಯವೈಖರಿಯನ್ನು 1970ರ ದಶಕಕ್ಕಿಂತ ಮೊದಲು ಜನಿಸಿದವರು ನೆನಪಿಸಿಕೊಳ್ಳಬಹುದು. ಆದರೆ ಒಟ್ಟು ಮತದಾರರ ಸಂಖ್ಯೆಯಲ್ಲಿ ಅವರ ಪ್ರಮಾಣ ಮೂರನೆಯ ಒಂದಕ್ಕಿಂತ ಕಡಿಮೆ. ಇನ್ನುಳಿದವರು ಸಾಮಾಜಿಕವಾಗಿ ತೆರೆದುಕೊಂಡಿದ್ದು ಇಂದಿರಾ ಹತ್ಯೆ ನಂತರದ ಕಾಲಘಟ್ಟದಲ್ಲಿ. ಹಾಗಾಗಿ, ಆ ಇತರರು ಇಂದಿರಾ ಅವರ ಆಡಳಿತವನ್ನು ಅನುಭವಿಸಿದವರೂ ಅಲ್ಲ, ಅವರ ಕಾರ್ಯವೈಖರಿ ಕಂಡವರೂ ಅಲ್ಲ. ಅವರ ಪಾಲಿಗೆ ಪ್ರಿಯಾಂಕಾ ಅವರನ್ನು ‘ಇಂದಿರಾ’ ಎರಕದಲ್ಲಿ ತೋರಿಸುವುದರಿಂದ ಹೆಚ್ಚಿನ ಪ್ರಯೋಜನ ಇಲ್ಲ.

ಇನ್ನೂ ಒಂದು ಅಂಶವನ್ನು ಇಲ್ಲಿ ಗಮನಿಸಬೇಕು. ಪ್ರಿಯಾಂಕಾ ಅವರಲ್ಲಿ ‘ಇಂದಿರಾ ಅವರ ಗುಣಗಳನ್ನು’ ಕಾಣುವ ವ್ಯಕ್ತಿಗಳಲ್ಲಿ ಕೂಡ ಸಕಾರಾತ್ಮಕ ನೆನಪುಗಳೇ ಬರಬೇಕು ಎಂಬುದೇನೂ ಇಲ್ಲ. ಅದರಲ್ಲೂ ಮುಖ್ಯವಾಗಿ, ತುರ್ತು ಪರಿಸ್ಥಿತಿ ಸಂದರ್ಭದ ಅತಿರೇಕಗಳು ಹಾಗೂ ಇಂದಿರಾ ಅವರ ಸರ್ವಾಧಿಕಾರಿ ಮುಖವನ್ನು ಕಂಡವರಿಗೆ ಒಳ್ಳೆಯ ನೆನಪುಗಳೇ ಬರಬೇಕು ಎಂಬುದಿಲ್ಲ. ಹಾಗಾಗಿ, ಈ ವಿಚಾರವು ಕಾಂಗ್ರೆಸ್ಸಿನ ಪಾಲಿಗೆ ಲಾಭ ತಂದುಕೊಡುವ ವಿಚಾರದಲ್ಲಿ ಸೀಮಿತ ತಾಕತ್ತನ್ನು ಮಾತ್ರ ಹೊಂದಿದೆ.

ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರ ಮಟ್ಟದಲ್ಲಿ ಕಾಣಿಸಿಕೊಳ್ಳುವ ನಾಯಕರು ಪಕ್ಷಕ್ಕೆ ಅಗತ್ಯ ಬಂದಾಗ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುವ ಸಾಮರ್ಥ್ಯವು ಪ್ರಿಯಾಂಕಾ ಅವರ ಪ್ರವೇಶದಿಂದ ಇನ್ನಷ್ಟು ಹೆಚ್ಚಲಿದೆ. ತನ್ನಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ಕಾಂಗ್ರೆಸ್ ಪಕ್ಷವು ಗಾಂಧಿ ಕುಟುಂಬವನ್ನು ನೆಚ್ಚಿಕೊಂಡಿದೆ. ಕಳೆದ ಎರಡು ದಶಕಗಳ ಅವಧಿಯ ಚುನಾವಣಾ ಪ್ರಚಾರಗಳಲ್ಲಿ ಪ್ರಿಯಾಂಕಾ ಅವರು ತೋರಿದ ಸೀಮಿತ ಪಾಲ್ಗೊಳ್ಳುವಿಕೆಯು, ಮತದಾರರ ಮನಮುಟ್ಟುವ ಪ್ರಿಯಾಂಕಾ ಸಾಮರ್ಥ್ಯದ ಬಗ್ಗೆ, ಅವರ ಪ್ರಚಾರ ಸಾಮರ್ಥ್ಯದ ಬಗ್ಗೆ ಕಾಂಗ್ರೆಸ್ ಬೆಂಬಲಿಗರಲ್ಲಿ ನಂಬಿಕೆ ತಂದಿದೆ. ತಮ್ಮ ನೆರಳು ತಮ್ಮ ಸಹೋದರನ (ರಾಹುಲ್) ಮೇಲೆ ಅತಿಯಾಗಿ ಆವರಿಸದಿರಲಿ ಎಂದು ಪ್ರಿಯಾಂಕಾ ಅವರು ರಾಜಕೀಯ ವೇದಿಕೆಯ ಒಂದು ಅಂಚಿನಲ್ಲಿ ನಿಂತುಕೊಳ್ಳುವ ಪ್ರಜ್ಞಾಪೂರ್ವಕ ಪ್ರಯತ್ನ ಮಾಡಿದ್ದರು ಎಂದು ಭಾಸವಾಗುತ್ತದೆ. ಈಗ ಅವರ ಸಹೋದರ ಅಧಿಕೃತವಾಗಿ ನಾಯಕ ಆಗಿರುವ ಕಾರಣ, ಪ್ರಿಯಾಂಕಾ ಅವರು ಹೆಚ್ಚು ಅಧಿಕೃತವಾದ ನಾಯಕತ್ವ ನಿಭಾಯಿಸುವುದರಿಂದ ಹೆಚ್ಚಿನ ಅಪಾಯವಿಲ್ಲ ಎಂದು ಕಾಂಗ್ರೆಸ್ ಭಾವಿಸಿರಬಹುದು. ಹೀಗಿದ್ದರೂ, ಮುಂದೆ ಪ್ರಿಯಾಂಕಾ ಅವರು ಸಹೋದರನಿಗಿಂತ ಹೆಚ್ಚಿನ ಪ್ರಭಾವ ಬೆಳೆಸಿಕೊಳ್ಳುವ ಸಾಧ್ಯತೆಯ ಲೆಕ್ಕಾಚಾರವನ್ನೂ ಮಾಡಿಕೊಂಡಿರಬೇಕು. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಸವಾಲು ಕೂಡ ಆಗಬಹುದು.

ಪ್ರಿಯಾಂಕಾ ಅವರಿಗೆ ಪಕ್ಷದಲ್ಲಿ ನೀಡಿರುವ ಜವಾಬ್ದಾರಿಯು ಆ ಪಕ್ಷದ ವಂಶಪಾರಂಪರ್ಯ ಧೋರಣೆ ಕುರಿತು ಆಕ್ಷೇಪ ವ್ಯಕ್ತಪಡಿಸಲು ಟೀಕಾಕಾರರಿಗೆ ಹೆಚ್ಚಿನ ಬಲ ನೀಡಿದಂತೆ ಆಗುತ್ತದೆ. ಪ್ರಿಯಾಂಕಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೇರವಾಗಿ ನೇಮಕ ಮಾಡುವುದಕ್ಕೆ ‘ಗಾಂಧಿ’ ಎಂಬ ಹೆಸರೇ ಸಾಕಾಗಿತ್ತು. ಇದು ಇಂದಿನ ಕಟುಮಾತುಗಳ ರಾಜಕೀಯ ಪ್ರಚಾರದ ಸಂದರ್ಭದಲ್ಲಿ ಟೀಕಿಸಲು, ವಾಗ್ದಾಳಿ ನಡೆಸಲು ಪ್ರಮುಖ ಕಾರಣವಾಗುತ್ತದೆ. ಕುಟುಂಬದ ಇನ್ನೊಬ್ಬ ಸದಸ್ಯರನ್ನು ಪಕ್ಷಕ್ಕೆ ತಂದಿರುವ ಕಾರಣ ಕಾಂಗ್ರೆಸ್ಸಿನಲ್ಲಿ ‘ಪ್ರಜಾತಾಂತ್ರಿಕ ಸಂವೇದನೆಗಳು ಇಲ್ಲ’ ಎಂಬ ಟೀಕೆಗೆ ಇನ್ನಷ್ಟು ಬಲ ಬರಬಹುದು. ಕಾಂಗ್ರೆಸ್ಸಿನ ಕಾರ್ಯಕರ್ತರು ಇದನ್ನು ಸಾರ್ವಜನಿಕವಾಗಿ ನಿರಾಕರಿಸಬಹುದು. ಆದರೆ ಖಾಸಗಿಯಾಗಿ ಇದನ್ನು ಅವರು ಒಪ್ಪಿಕೊಳ್ಳುತ್ತಾರೆ.

ಪ್ರಿಯಾಂಕಾ ಅವರು ಒಂದು ‘ಹೊರೆ’ಯನ್ನೂ ಹೊತ್ತುಕೊಂಡಿದ್ದಾರೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅವರ ಪತಿ ರಾಬರ್ಟ್‌ ವಾದ್ರಾ ಅವರು ಹಲವು ವಿವಾದಗಳ ಕೇಂದ್ರದಲ್ಲಿ ಇದ್ದಾರೆ. ಅದಕ್ಕೆ ಸಂಬಂಧಿಸಿದ ಟೀಕೆಗಳನ್ನು ಪ್ರಿಯಾಂಕಾ ಅವರ ರಾಜಕೀಯ ವಿರೋಧಿಗಳು ಹೆಚ್ಚು ಮಾಡಬಹುದು, ವಾದ್ರಾ ಅವರ ವಿವಾದಾತ್ಮಕ ವಾಣಿಜ್ಯ ವಹಿವಾಟುಗಳ ಬಗ್ಗೆ ತನಿಖೆ ಆಗಬಹುದು. ಇವೆಲ್ಲ ಪ್ರಿಯಾಂಕಾ ಅವರ ಹೆಸರು, ಜನಬೆಂಬಲ ಹಾಗೂ ಜನಪ್ರಿಯತೆಯ ಮೇಲೆ ಪರಿಣಾಮ ಬೀರಬಹುದು. ಪ್ರಿಯಾಂಕಾ ಅವರ ಮೇಲಿನ ವೈಯಕ್ತಿಕ ಟೀಕೆಗಳೂ ಹೆಚ್ಚಲಿವೆ. ಗಾಂಧಿ ಕುಟುಂಬದವರು ತಮ್ಮ ಖಾಸಗಿತನವನ್ನು ಪಟ್ಟುಹಿಡಿದು ಕಾಪಾಡಿಕೊಂಡು ಬರುತ್ತಿದ್ದಾರೆ. ಆದರೆ ಬದಲಾಗುತ್ತಿರುವ ಪರಿಸ್ಥಿತಿ ಹಾಗೂ 24X7 ಮಾಧ್ಯಮಗಳ ಕಾರಣ ಅದು ಮುಂದಿನ ದಿನಗಳಲ್ಲಿ ಕಷ್ಟವಾಗಬಹುದು.

ಪ್ರಿಯಾಂಕಾ ಅವರ ರಾಜಕೀಯ ಪ್ರವೇಶದ ಲಾಭವನ್ನು ಪಡೆಯಲು ಕಾಂಗ್ರೆಸ್ ಬೆಂಬಲಿಗರು ಪ್ರಯತ್ನಿಸುತ್ತಾರೆ. ಇದೇ ವೇಳೆ, ಅವರ ವಿರೋಧಿಗಳಿಗೆ ಕಾಂಗ್ರೆಸ್ಸಿನ ಮೇಲೆ ವಾಗ್ದಾಳಿ ನಡೆಸಲು ಇನ್ನೊಂದು ವಿಚಾರ ಸಿಕ್ಕಂತೆ ಆಗಿದೆ. ಪ್ರಿಯಾಂಕಾ ಅವರ ರಾಜಕೀಯ ಶಕ್ತಿಯನ್ನು ಅಳೆಯಲು, ಅವರು ಕಾಂಗ್ರೆಸ್ ಪಕ್ಷಕ್ಕೆ ಎಷ್ಟರಮಟ್ಟಿಗೆ ಲಾಭ ತಂದುಕೊಡಬಹುದು ಎಂಬುದನ್ನು ಅರಿಯಲು 2019ರ ಲೋಕಸಭಾ ಚುನಾವಣೆ ಪ್ರಮುಖ ಪರೀಕ್ಷೆಯಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು