ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಜಮಾನ್ಯ ಭಾಷೆಯ ಹೇರಿಕೆ?

ಹಿಂದಿ ಬಳಕೆಗೆ ಒತ್ತಾಯಿಸಿದಾಗ ಭಾವನಾತ್ಮಕ ಪ್ರತಿರೋಧ ಎದುರಾಗುತ್ತದೆ
Last Updated 17 ಸೆಪ್ಟೆಂಬರ್ 2019, 20:28 IST
ಅಕ್ಷರ ಗಾತ್ರ

ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಒಪ್ಪಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವರು ನೀಡಿರುವ ಕರೆಯು ಕಾಲಕಾಲಕ್ಕೆ ತಲೆ ಎತ್ತುವ ವಿವಾದವೊಂದರ ಕುರಿತ ಚರ್ಚೆಯನ್ನು ಪುನಃ ಮುನ್ನೆಲೆಗೆ ತಂದಿದೆ. ಈ ವಿಚಾರದಲ್ಲಿ ವ್ಯಕ್ತವಾಗಿರುವ ಪ್ರತಿಕ್ರಿಯೆಗಳು, ಪ್ರತಿವಾದಗಳು ನಿರೀಕ್ಷಿತ ರೀತಿಯಲ್ಲೇ ಇವೆ. ಸ್ಥಳೀಯರ ಭಾವನೆಗಳನ್ನು ಅರ್ಥ ಮಾಡಿಕೊಂಡಿರುವ ದಕ್ಷಿಣ ಭಾರತದ ಬಿಜೆಪಿ ನಾಯಕರು ತಮ್ಮ ನಾಯಕರನ್ನು ಸಮರ್ಥಿಸಿಕೊಳ್ಳುವ ಯತ್ನವನ್ನೂ ಮಾಡಿದ್ದಾರೆ.

ರಾಷ್ಟ್ರಭಾಷೆ ಕುರಿತ ವಿವಾದ ಹೊಸದೇನೂ ಅಲ್ಲ. ಸಂವಿಧಾನ ರಚನಾ ಸಭೆ ಅಂಗೀಕರಿಸಿದ ಕೊನೆಯ ವಿಧಿಯು ಒಕ್ಕೂಟದ ಅಧಿಕೃತ ಭಾಷೆಗೆ ಸಂಬಂಧಿಸಿದ್ದಾಗಿತ್ತು (343ನೇ ವಿಧಿ) ಎಂಬುದು, ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲೂ ಇದು ಎಷ್ಟು ವಿವಾದಾತ್ಮಕ ಆಗಿತ್ತು ಎಂಬುದನ್ನು ವಿವರಿಸುತ್ತದೆ. ಸಂವಿಧಾನದ ಅಂಗೀಕಾರವನ್ನು ಇನ್ನಷ್ಟು ವಿಳಂಬ ಮಾಡಲು ಸಾಧ್ಯವಿಲ್ಲದ ಕಾರಣ, 343ನೇ ವಿಧಿಯ ಅಂಶಗಳು ಅನಿವಾರ್ಯ ಹೊಂದಾಣಿಕೆಯ ರೂಪದಲ್ಲಿದ್ದವು ಎಂಬುದು ಸ್ಪಷ್ಟ. ಒಂದು ಬಗೆಯಲ್ಲಿ, ನಮ್ಮ ಹಿರಿಯರು ಸಮಸ್ಯೆಯನ್ನು ಶೈತ್ಯಾಗಾರದಲ್ಲಿ ಇರಿಸಿ, ಆ ಸಮಸ್ಯೆಯ ಬಗೆಹರಿಸುವಿಕೆಯನ್ನು ಮಂದೂಡಿದರು. ಒಕ್ಕೂಟದ ಅಧಿಕೃತ ಭಾಷೆ ಹಿಂದಿ ಆಗಿರುತ್ತದೆ, ಮೊದಲ ಹದಿನೈದು ವರ್ಷಗಳ ಅವಧಿಗೆ, ಅಂದರೆ ಹಿಂದಿಯು ದೇಶದಲ್ಲಿ ಸ್ವೀಕೃತಿಯ ಹಂತ ತಲುಪುವವರೆಗೆ ಇಂಗ್ಲಿಷ್ ಭಾಷೆ ಕೂಡ ಒಕ್ಕೂಟದ ಅಧಿಕೃತ ಭಾಷೆ ಆಗಿರುತ್ತದೆ ಎಂದು ಈ ವಿಧಿಯಲ್ಲಿ ಹೇಳಲಾಗಿದೆ.

ಮೊದಲ ಹದಿನೈದು ವರ್ಷಗಳ ಅವಧಿ ಪೂರ್ಣಗೊಳ್ಳುವ ಹಂತದಲ್ಲಿ, 1965ರಲ್ಲಿ ಈ ವಿಚಾರವಾಗಿ ವಿವಾದಗಳು ಎದ್ದವು. ಜವಾಹರಲಾಲ್ ನೆಹರೂ ಅವರ ಅಧಿಕಾರಾವಧಿಯ ಕೊನೆಯ ವರ್ಷಗಳಲ್ಲಿ ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ಹಿಂದಿ ವಿರೋಧಿ ಹೋರಾಟಗಳು ಹುಟ್ಟಿಕೊಂಡವು. ಅದರಲ್ಲೂ ಮುಖ್ಯವಾಗಿ ಅಂದಿನ ಮದ್ರಾಸ್ ರಾಜ್ಯದಲ್ಲಿ (ಇಂದಿನ ತಮಿಳುನಾಡು) ಹೋರಾಟಗಳು ತೀವ್ರವಾಗಿ ನಡೆದವು. ಆಗ ಈ ಬಿಕ್ಕಟ್ಟನ್ನು ನಿಭಾಯಿಸಲು ನೆಹರೂ ಅವರು ತಮ್ಮ ನಂಬಿಕಸ್ತ, ಕೇಂದ್ರದಅಂದಿನ ಸಚಿವ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ನಿಯೋಜಿಸಿದರು.

ಈ ವಿಚಾರದಲ್ಲಿ ಶಾಸ್ತ್ರಿ ಅವರು ಸ್ಪಷ್ಟ ಹಾಗೂ ದೃಢ ನಿಲುವು ತಳೆದಿದ್ದರು. ‘ಹಿಂದಿಯ ಬೆಳವಣಿಗೆ ಸಾಕಷ್ಟು ಮಟ್ಟಿಗೆ ಆಗುವವರೆಗೆ, ನಮ್ಮ ದೇಶದ ಜನ ಅದನ್ನು ಚೆನ್ನಾಗಿ ಕಲಿಯುವವರೆಗೆ, ವಾಣಿಜ್ಯಿಕ ಜಗತ್ತಿನಲ್ಲಿ ಹಾಗೂ ಆಡಳಿತಾತ್ಮಕವಾಗಿ ಬಳಕೆ ಮಾಡಲು ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆ ಇಲ್ಲ. ನಮ್ಮ ದೇಶದ ಎಲ್ಲ ರಾಜ್ಯಗಳಲ್ಲೂ ಮಾತನಾಡುವ ಭಾಷೆ ಇಂಗ್ಲಿಷ್’ ಎಂದು ಶಾಸ್ತ್ರಿ ಅವರು 1962ರ ಸೆಪ್ಟೆಂಬರ್‌ ನಲ್ಲಿ ತಿರುಪತಿಯಲ್ಲಿ ನಡೆದ ಅಖಿಲ ಭಾರತ ಯುವ ಸಮಾವೇಶದಲ್ಲಿ ಹೇಳಿದ್ದರು. ತಿರುಪತಿಯಲ್ಲಿ ಆಡಿದ ಮಾತುಗಳಲ್ಲಿ ವ್ಯಕ್ತವಾಗಿದ್ದ ಅಭಿಪ್ರಾಯಗಳು 1963ರ ಅಧಿಕೃತ ಭಾಷೆಗಳ ಕಾಯ್ದೆಗೆ ಅಡಿಪಾಯವಾದವು. ಶಾಸ್ತ್ರಿ ಅವರು ಗೃಹ ಸಚಿವರಾಗಿ ಈ ಮಸೂದೆಗೆ ಸಂಸತ್ತಿನ ಅನುಮೋದನೆ ದೊರೆಯುವಂತೆ ಮಾಡಿದರು. 1965ರ ಜನವರಿ 25ರಿಂದ (343ನೇ ವಿಧಿಯಲ್ಲಿ ಹೇಳಿರುವ, ಹದಿನೈದನೆಯ ವರ್ಷದ ಅಂತ್ಯದ ದಿನ) ಒಕ್ಕೂಟದ ಎಲ್ಲ ಅಧಿಕೃತ ಉದ್ದೇಶಗಳಿಗೆ ಇಂಗ್ಲಿಷ್ ಭಾಷೆಯ ಬಳಕೆಯನ್ನು, ಹಿಂದಿಯ ಜೊತೆ ಹೆಚ್ಚುವರಿಯಾಗಿ ಮುಂದುವರಿಸಬಹುದು ಎಂದು ಈ ಕಾಯ್ದೆ ಹೇಳಿತು.

ಶಾಸ್ತ್ರಿ ಅವರು ನೆಹರೂ ಅವರ ನಂತರ (1964ರಲ್ಲಿ) ಪ್ರಧಾನಿ ಆದರು. 1965ರ ಜನವರಿ 25ನೆಯ ತಾರೀಕು ಹತ್ತಿರವಾದಂತೆ ವಿವಾದ ಮತ್ತೆ ಭುಗಿಲೆದ್ದಿತು. 1965ರ ಜನವರಿ 24ರಂದು ಗೃಹ ಸಚಿವಾಲಯದ ಅಧಿಕಾರಿಗಳು ನಡೆಸಿದ ವಿಸ್ತೃತ ಪತ್ರಿಕಾಗೋಷ್ಠಿಯು ವಿವಾದಕ್ಕೆ ಕಾರಣವಾಯಿತು. ‘ಜನವರಿ 26ರಿಂದ ಆಡಳಿತಾತ್ಮಕ ವಿಚಾರಗಳಲ್ಲಿ ಹಿಂದಿಯನ್ನು ಹೆಚ್ಚುಹೆಚ್ಚಾಗಿ ಬಳಸುವ ಸಾಧ್ಯತೆ ಇದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಇದನ್ನು ಮಾರನೆಯ ದಿನ ಪತ್ರಿಕೆಗಳು ‘ಹಿಂದಿಯ ಹೆಚ್ಚಿನ ಬಳಕೆ’ ಎಂಬ ಅಂಶಕ್ಕೆ ಆದ್ಯತೆ ನೀಡಿ ಪ್ರಕಟಿಸಿದವು. ಅಂದಿನ ಮದ್ರಾಸ್‌ ರಾಜ್ಯದಾದ್ಯಂತ ವಿದ್ಯಾರ್ಥಿಗಳ ಪ್ರತಿರೋಧ ಶುರುವಾಯಿತು, ಇದಕ್ಕೆ ಪ್ರತಿಪಕ್ಷ ಡಿಎಂಕೆಯ ಬೆಂಬಲ ಇತ್ತು. ಇಂಗ್ಲಿಷ್ ಬದಲು ಹಿಂದಿಯನ್ನು ಬಳಸಲಾಗುತ್ತದೆ ಎಂಬ ಸುದ್ದಿಯನ್ನು ಡಿಎಂಕೆ ಹಬ್ಬಿಸಿತು ಎಂದೂ ಕೆಲವು ವರದಿಗಳು ಹೇಳಿವೆ.
ಕೆಲವು ಸುತ್ತೋಲೆಗಳನ್ನು ಇನ್ನು ಮುಂದೆ ಹಿಂದಿಯಲ್ಲಿ ಮಾತ್ರ ಹೊರಡಿಸಲಾಗುವುದು ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ನೀಡಿದ ಸೂಚನೆಯು ಬಿಕ್ಕಟ್ಟು ಇನ್ನಷ್ಟು ಹೆಚ್ಚಲು ಕಾರಣವಾಯಿತು. ‘1965ರಲ್ಲಿ ಸೂಕ್ತ ಮಾನಸಿಕತೆ ನಿರ್ಮಾಣ ಮಾಡುವ ಸೂಕ್ಷ್ಮವನ್ನು ಕೇಂದ್ರ ಸರ್ಕಾರದ ಅಭಿಯಾನ ತೋರದೇ ಇದ್ದದ್ದು ಪ್ರತಿಭಟನೆಗಳಿಗೆ ಕಾರಣವಾಯಿತು’ ಎಂದು ಖ್ಯಾತ ಇತಿಹಾಸಕಾರ ಮೈಕೆಲ್ ಬ್ರೆಷರ್ ಹೇಳಿದ್ದಾರೆ.

ಈ ವಿವಾದ ಕುರಿತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಶಾಸ್ತ್ರಿ, ರಾಜ್ಯ-ರಾಜ್ಯಗಳ ನಡುವಿನ ಸಂವಹನವು ಇಂಗ್ಲಿಷ್‌ನಲ್ಲಿ ಇರುತ್ತದೆ ಅಥವಾ ಇಂಗ್ಲಿಷ್‌ನ ಅಧಿಕೃತ ಅನುವಾದ ಇರುತ್ತದೆ ಎಂದು ಭರವಸೆ ನೀಡಿದರು. ಹಿಂದಿಯೇತರ ರಾಜ್ಯಗಳು ಕೇಂದ್ರದ ಜೊತೆ ಸಂವಹನ ನಡೆಸುವಾಗ ಇಂಗ್ಲಿಷ್ ಬಳಕೆ ಮಾಡಬಹುದು, ಕೇಂದ್ರದಲ್ಲಿನ ವ್ಯವಹಾರ ಗಳಲ್ಲಿ ಇಂಗ್ಲಿಷ್‌ನ ಬಳಕೆ ಮುಂದುವರಿಯಲಿದೆ ಎಂದೂ ಅವರು ಹೇಳಿದರು. ಈ ಭರವಸೆಗಳ ನಂತರ ವಿವಾದ ತಣ್ಣಗಾಯಿತು.

ಹಿಂದಿ ದಿವಸದ ದಿನ ಗೃಹ ಸಚಿವ ಅಮಿತ್‌ ಶಾ ಅವರು ಆಡಿದ ಮಾತು ಮತ್ತೆ ವಿವಾದ ಎಬ್ಬಿಸಿದೆ. ಭಾಷೆಯ ವಿಚಾರದಲ್ಲಿ ತಿಕ್ಕಾಟವು ಕಾಲಕಾಲಕ್ಕೆ ತಲೆ ಎತ್ತುತ್ತಿರುವುದಕ್ಕೂ ಹಿಂದಿ ಭಾಷಿಕ ರಾಜ್ಯಗಳು ಮತ್ತು ಅಲ್ಲಿನ ಜನ, ದೇಶದ ಇತರ ಪ್ರದೇಶಗಳ ಬಗ್ಗೆ ಪ್ರದರ್ಶಿಸುವ ಅಸೂಕ್ಷ್ಮ ಧೋರಣೆಗೂ ಸಂಬಂಧ ಇದೆ. ತಮ್ಮ ಇಚ್ಛೆಗೆ ಅನುಸಾರವಾಗಿ ಬಳಕೆ ಮಾಡಲು ಅವಕಾಶ ನೀಡಿದಾಗ ಹಿಂದಿಯನ್ನು ಜನ ಒಪ್ಪಿಕೊಳ್ಳುವುದು ಆರಂಭವಾಗಿದೆ. ಆದರೆ, ಹಿಂದಿಯಲ್ಲಿ ಮಾತನಾಡುವಂತೆ ಅಥವಾ ಅದರಲ್ಲಿ ಸಂವಹನ ನಡೆಸುವಂತೆ ಜನರನ್ನು ಒತ್ತಾಯಿಸಿದಾಗ ಭಾವನಾತ್ಮಕ ಪ್ರತಿರೋಧ ಎದುರಾಗುತ್ತದೆ.

ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ಕಂಡುಬಂದ ಹಿಂದಿ ವಿರೋಧಿ ಹೋರಾಟವು ವಾಸ್ತವದಲ್ಲಿ ಭಾಷೆಯ ವಿರುದ್ಧ ಅಲ್ಲ, ಅದು ಆ ಭಾಷೆಯು ಪ್ರತಿನಿಧಿಸಿದ ಯಾಜಮಾನ್ಯ ಧೋರಣೆಯ ವಿರುದ್ಧ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈಗಿನ ಪರಿಸ್ಥಿತಿಯಲ್ಲಿ, ಹಿಂದಿಗೆ ‘ಅಖಿಲ ಭಾರತ ಮಟ್ಟದ ಭಾಷೆ’ಯ ಸ್ಥಾನ ನೀಡಲು ಯತ್ನಿಸಿದ್ದನ್ನು ಸರ್ಕಾರದ (ಮತ್ತು ಆಳುವ ಪಕ್ಷದ) ವಿಸ್ತೃತ ಅಜೆಂಡಾವೊಂದರ ಭಾಗವಾಗಿ ಕಾಣಲಾಗುತ್ತಿದೆ.

ಹಿಂದಿಗೆ ಕೊಡಲು ಉದ್ದೇಶಿಸಿರುವ ಸ್ಥಾನಮಾನಕ್ಕೆ ವ್ಯಕ್ತವಾಗಿರುವ ವಿರೋಧವು ‘ಉತ್ತರ ಭಾರತದ ಯಾಜಮಾನ್ಯ’ದ ಪರಿಣಾಮಗಳ ಜೊತೆ ಬೆಸೆದು ಕೊಂಡಿದೆ. ಹಾಗೆಯೇ, ಇದು ಭಾರತದ ಇತರ ಭಾಷೆಗಳಿಗೆ, ಅದರಲ್ಲೂ ಮುಖ್ಯವಾಗಿ ಹಿಂದಿಯ ಜೊತೆ ನೇರ ನಂಟು ಹೊಂದಿಲ್ಲದ ಭಾಷೆಗಳಿಗೆ ಒಡ್ಡುವ ಬೆದರಿಕೆಯ ಜೊತೆಯೂ ತಳಕು ಹಾಕಿಕೊಂಡಿದೆ. ಒಕ್ಕೂಟದ ಅಧಿಕೃತ ಭಾಷೆಯ ವಿಚಾರದಲ್ಲಿ ಇಂಗ್ಲಿಷ್ ಹಾಗೂ ಹಿಂದಿಗೆ ಪ್ರಾಮುಖ್ಯ ನೀಡುವುದನ್ನು ಮುಂದು ವರಿಸುವುದು ಒಳಿತು. ‘ರಾಷ್ಟ್ರಭಾಷೆ’ಯ ವಿಚಾರದಲ್ಲಿ ಸಹಮತ ರೂಪುಗೊಳ್ಳಲು ಇನ್ನಷ್ಟು ಕಾಲಾವಕಾಶ ಬೇಕು. ವಿರೋಧ ಇದ್ದರೂ ಅದನ್ನು ಜನರ ಮೇಲೆ ಹೇರಿದರೆ, ಅದು ಯಶಸ್ಸು ಕಾಣುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT