ಶುಕ್ರವಾರ, ಜೂನ್ 5, 2020
27 °C
ಕಾಂಗ್ರೆಸ್-– ಜೆಡಿಎಸ್ ಮೈತ್ರಿಕೂಟ, ಬಿಜೆಪಿ ಬೆಂಬಲಿತ ಜನವರ್ಗಗಳ ನಡುವೆ ಭಾರಿ ವ್ಯತ್ಯಾಸವಿದೆ

ಚುನಾವಣಾ ಕಣ: ಸಮೀಕ್ಷೆಗೆ ಕಂಡಿದ್ದು

ಸಂದೀಪ್ ಶಾಸ್ತ್ರಿ Updated:

ಅಕ್ಷರ ಗಾತ್ರ : | |

Prajavani

ರಾಜ್ಯದಲ್ಲಿ ಮತದಾನದ ದಿನ ಹತ್ತಿರವಾಗುತ್ತಿರುವಂತೆಯೇ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಹಾಗೂ ಬಿಜೆಪಿ ನಡುವಣ ಚುನಾವಣಾ ಕದನ ಹೆಚ್ಚೆಚ್ಚು ತೀವ್ರವಾಗುತ್ತಿದೆ. ಇಡೀ ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎರಡೇ ಎರಡು ರಾಜಕೀಯ ಗುಂಪುಗಳ ನಡುವೆ (ಮೈತ್ರಿಕೂಟ ಹಾಗೂ ಬಿಜೆಪಿ) ಸ್ಪರ್ಧೆ ಏರ್ಪಟ್ಟಿದ್ದು ಇಲ್ಲವಾಗಿತ್ತು. ಚುನಾವಣಾ ಲೆಕ್ಕಾಚಾರದ ಪ್ರಕಾರ ಈ ಸ್ಥಿತಿಯು ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟಕ್ಕೆ ಲಾಭ ತಂದುಕೊಡಬೇಕು. ಆದರೆ ರಾಜಕೀಯದ ವಾಸ್ತವಗಳು ತೀರಾ ಭಿನ್ನವಾದ ಫಲಿತಾಂಶ ತಂದುಕೊಡಬಹುದು. ಈ ವರ್ಷದ ಮಾರ್ಚ್‌ ತಿಂಗಳಲ್ಲಿ ನಡೆಸಿದ ಸಿಎಸ್‌ಡಿಎಸ್‌-ಲೋಕನೀತಿ ಚುನಾವಣಾಪೂರ್ವ ಸಮೀಕ್ಷೆಯು ಕಂಡುಕೊಂಡ ಅಂಶಗಳ ಆಧಾರದಲ್ಲಿ ಒಂದು ಚಿಕಿತ್ಸಕ ನೋಟ ಇಲ್ಲಿದೆ.

ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ಇರುವುದನ್ನು, ಮತ ಹಂಚಿಕೆ ಪ್ರಮಾಣದಲ್ಲಿ ಮೈತ್ರಿಕೂಟ ತುಸು ಮುಂದಿರುವುದನ್ನು ಸಮೀಕ್ಷೆ ತೋರಿಸಿದೆ. ಆದರೆ, ಕಾಂಗ್ರೆಸ್-ಜೆಡಿಎಸ್ ಬೆಂಬಲಿಗರು ದೊಡ್ಡ ಪ್ರದೇಶದಲ್ಲಿ ಹಂಚಿಹೋಗಿರುವುದು ಹಾಗೂ ಬಿಜೆಪಿ ಬೆಂಬಲಿಗರು ಒಂದೇ ಕಡೆ ಹೆಚ್ಚು ಇರುವುದರ ಕಾರಣ, ಮೈತ್ರಿಕೂಟ ಹೊಂದಿರುವ ಮತ ಗಳಿಕೆ ಪ್ರಮಾಣವು ಸೀಟುಗಳ ಲೆಕ್ಕಾಚಾರದಲ್ಲಿ ದೊಡ್ಡ ಪ್ರಯೋಜನ ತಂದುಕೊಡದೆಯೂ ಇರಬಹುದು. ಸಮೀಕ್ಷೆಯ ವೇಳೆ ಸಂದರ್ಶಿಸಿದ ಕೆಲವರ ಮಾತುಗಳು ಆಸಕ್ತಿಕರ ಅಂಶಗಳನ್ನು ಬಿಟ್ಟುಕೊಡುತ್ತವೆ.

ಈ ಚುನಾವಣೆಯು ನಾಯಕತ್ವದ ಆಯ್ಕೆಯದ್ದಾಗಿದ್ದರೆ, ನರೇಂದ್ರ ಮೋದಿ ಅವರು ರಾಜ್ಯದಲ್ಲಿ ರಾಹುಲ್ ಗಾಂಧಿ ಅವರಿಗಿಂತ ಸ್ಪಷ್ಟವಾಗಿ ಮುಂದಿದ್ದಾರೆ. ಭಾರತದ ಮುಂದಿನ ಪ್ರಧಾನಿಯನ್ನಾಗಿ ಯಾರನ್ನು ನೋಡಲು ಬಯಸುತ್ತೀರಿ ಎಂಬ ಪ್ರಶ್ನೆಗೆ (ಸಮೀಕ್ಷೆ ಮಾಡುವವರು ಇದಕ್ಕೆ ಯಾರ ಹೆಸರನ್ನೂ ಸೂಚಿಸಿರಲಿಲ್ಲ), ಸರಿಸುಮಾರು ಅರ್ಧದಷ್ಟು ಜನ (ಶೇಕಡ 49) ಮೋದಿ ಅವರ ಹೆಸರು ಹೇಳಿದರು. ಶೇ 31ರಷ್ಟು ಜನ ರಾಹುಲ್ ಅವರ ಹೆಸರು ಹೇಳಿದರು. ಮೋದಿ ಮತ್ತು ರಾಹುಲ್ ಪೈಕಿ ಯಾರನ್ನು ಇಷ್ಟಪಡುತ್ತೀರಿ ಎಂದು ಸ್ಪಷ್ಟವಾಗಿ ಕೇಳಿದಾಗ, ಶೇ 39 ರಷ್ಟು ಜನ ರಾಹುಲ್ ಎಂದೂ ಶೇ 51ರಷ್ಟು ಜನ ಮೋದಿ ಎಂದೂ ಹೇಳಿದರು. ಬಿಜೆಪಿಯ 27 ಜನ ಅಭ್ಯರ್ಥಿಗಳೂ ತಮ್ಮ ಅಭಿಯಾನವನ್ನು ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಮ್ಮ ಮತ’ ಎಂಬ ನೆಲೆಯಲ್ಲಿ ಯಾಕೆ ಕೈಗೊಂಡಿದ್ದಾರೆ ಎಂಬುದನ್ನು ಈ ಅಂಕಿ-ಅಂಶಗಳು ವಿವರಿಸಬಲ್ಲವು.

ಮೋದಿ ನೇತೃತ್ವದ ಸರ್ಕಾರ ಹಾಗೂ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು ಅಳೆದಿದ್ದು ಹೇಗೆ? ಮೋದಿ ನೇತೃತ್ವದ ಸರ್ಕಾರದ ಕೆಲಸಗಳು ಶೇ 69ರಷ್ಟು ಜನರಿಗೆ ತೃಪ್ತಿ ತಂದಿವೆ, ಶೇ 31ರಷ್ಟು ಜನರಿಗೆ ತೃಪ್ತಿ ತಂದಿಲ್ಲ. ಹಾಗೆಯೇ, ರಾಜ್ಯದ ಮೈತ್ರಿ ಸರ್ಕಾರದ ಕೆಲಸಗಳು ಶೇ 74ರಷ್ಟು ಜನರಲ್ಲಿ ತೃಪ್ತಿಯನ್ನು, ಶೇ 26ರಷ್ಟು ಜನರಲ್ಲಿ ಅತೃಪ್ತಿಯನ್ನು ತಂದಿವೆ. ಅಂದರೆ, ರಾಜ್ಯ ಸರ್ಕಾರದ ಬಗ್ಗೆ ಇರುವ ತೃಪ್ತಿಯ ಭಾವವು ಕೇಂದ್ರ ಸರ್ಕಾರದ ಕುರಿತು ಇರುವುದಕ್ಕಿಂತ ಹೆಚ್ಚಿದೆ.

ಯಾವ ಪಕ್ಷಕ್ಕೆ ಮತ ಚಲಾಯಿಸುವುದು ಎಂಬುದನ್ನು ತೀರ್ಮಾನಿಸುವಾಗ ಮತದಾರರು ಯಾರ ಸಾಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು? ಈ ವಿಚಾರದಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರ ನಿರ್ಣಯ ಸ್ಪಷ್ಟವಾಗಿ ಇಲ್ಲ. ತಾವು ಯಾರಿಗೆ ಮತ ಚಲಾಯಿಸುತ್ತೇವೆ ಎಂಬುದಕ್ಕೂ ಕೇಂದ್ರ ಸರ್ಕಾರದ ಸಾಧನೆಗಳಿಗೂ ಸಂಬಂಧ ಇರುತ್ತದೆ ಎಂದು ಪ್ರತಿ ಹತ್ತರಲ್ಲಿ ನಾಲ್ಕು ಜನ ಹೇಳಿದ್ದಾರೆ. ರಾಜ್ಯ ಸರ್ಕಾರದ ಕೆಲಸಗಳು ತಮ್ಮ ಮತಗಳು ಯಾರಿಗೆ ಎಂಬುದನ್ನು ತೀರ್ಮಾನಿಸುತ್ತವೆ ಎಂದು ಪ್ರತಿ ಹತ್ತು ಜನರಲ್ಲಿ ಇಬ್ಬರು ಹೇಳಿದ್ದಾರೆ. ಎರಡೂ ಸರ್ಕಾರಗಳ ಸಾಧನೆಗಳು, ಕೆಲಸಗಳು ತಮ್ಮ ಮತದಾನದ ಮೇಲೆ ಪ್ರಭಾವ ಬೀರುತ್ತವೆ ಎಂದು ಇನ್ನುಳಿದವರು ಹೇಳಿದ್ದಾರೆ. ಮೋದಿ ನೇತೃತ್ವದ ಸರ್ಕಾರಕ್ಕೆ ಇನ್ನೊಂದು ಅವಧಿಗೆ ಅವಕಾಶ ನೀಡಬೇಕೇ ಎಂಬ ಪ್ರಶ್ನೆಗೆ ಶೇ 49ರಷ್ಟು ಜನ ‘ಹೌದು’ ಎನ್ನುವ ಉತ್ತರ ನೀಡಿದ್ದಾರೆ. ಇದಕ್ಕಿಂತ ತುಸು ಕಡಿಮೆ ಪ್ರಮಾಣದ, ಅಂದರೆ ಶೇ 43ರಷ್ಟು ಜನ, ಈ ಸರ್ಕಾರಕ್ಕೆ ಇನ್ನೊಂದು ಅವಧಿಗೆ ಅವಕಾಶ ನೀಡುವ ಮನಸ್ಸು ಹೊಂದಿಲ್ಲ. ಕಾಂಗ್ರೆಸ್ -ಜೆಡಿಎಸ್‌ಗೆ ಮತ ನೀಡುವುದಾಗಿ ಹೇಳಿದವರಲ್ಲಿ ಹಲವರು, ಮೋದಿ ನೇತೃತ್ವದ ಸರ್ಕಾರಕ್ಕೆ ಇನ್ನೊಂದು ಅವಕಾಶ ಸಿಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದು ಇಲ್ಲಿ ದಾಖಲಿಸಬೇಕಾದ ಮಹತ್ವದ ಅಂಶ.

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಹಾಗೂ ಬಿಜೆಪಿಗೆ ಬೆಂಬಲ ಸೂಚಿಸುವ ಜನವರ್ಗಗಳ ನಡುವೆ ಗಮನಾರ್ಹ ವ್ಯತ್ಯಾಸಗಳು ಕಂಡುಬಂದಿವೆಯೇ? ಮೊದಲ ಬಾರಿ ಮತದಾನ ಮಾಡುತ್ತಿರುವವರು ಬಿಜೆಪಿಯತ್ತ ಹೆಚ್ಚಿನ ಒಲವು ಹೊಂದಿರುವಂತಿದೆ. ಹೆಚ್ಚಿನ ಶಿಕ್ಷಣ ಪಡೆದವರು ಕೂಡ ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ. ಆರ್ಥಿಕವಾಗಿ ಅಷ್ಟೇನೂ ಉತ್ತಮವಾಗಿಲ್ಲದೆ ಇರುವವರು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದತ್ತ, ಶ್ರೀಮಂತರು ಬಿಜೆಪಿಯತ್ತ ವಾಲಿರುವುದು ಕಂಡುಬಂದಿದೆ.

ಮತದಾರರು ಮಾಧ್ಯಮಗಳಿಗೆ ಎಷ್ಟು ತೆರೆದುಕೊಂಡಿದ್ದಾರೆ ಎಂಬುದು ಕೂಡ ಅವರ ಮತದಾನದ ತೀರ್ಮಾನದಲ್ಲಿ ಪ್ರಮುಖ ಪಾತ್ರ ವಹಿಸಿರುವಂತೆ ತೋರುತ್ತಿದೆ. ಮಾಧ್ಯಮಗಳಿಗೆ ಹೆಚ್ಚು ತೆರೆದುಕೊಂಡವರು ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ. ಸೀಮಿತ ಪ್ರಮಾಣದಲ್ಲಿ ತೆರೆದುಕೊಂಡವರು ಮೈತ್ರಿಕೂಟದ ಪರ ಮತ ಚಲಾಯಿಸುವ ಸಾಧ್ಯತೆ ಹೆಚ್ಚಿದೆ. ಮೇಲ್ಜಾತಿಯ ಜನ ಬಿಜೆಪಿಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ (ಪ್ರತಿ ಹತ್ತು ಜನರಲ್ಲಿ ಎಂಟು ಜನ). ಪ್ರಬಲ ಜಾತಿಗಳ ಮತದಾರರಲ್ಲಿ ಸ್ಪಷ್ಟವಾದ ವಿಭಜನೆಯೊಂದು ಕಾಣಿಸುತ್ತಿದೆ. ಲಿಂಗಾಯತರಲ್ಲಿ ಪ್ರತಿ ಹತ್ತು ಜನರಲ್ಲಿ ಏಳು ಜನ ಬಿಜೆಪಿಯ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ಮತ ಮೈತ್ರಿಕೂಟದ ಅಭ್ಯರ್ಥಿಗೆ ಎಂದು ಒಕ್ಕಲಿಗರಲ್ಲಿ ಮೂರನೆಯ ಎರಡರಷ್ಟು ಜನ ಹೇಳಿದ್ದಾರೆ. ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪೈಕಿ ಪ್ರಬಲರಲ್ಲದ ಜಾತಿಗಳ ಮತದಾರರು ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ಹಂಚಿಹೋಗಿರುವಂತಿದೆ.

ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ದಲಿತ ಸಮುದಾಯದಲ್ಲಿ ಹೆಚ್ಚಿನ ಜನಬೆಂಬಲವನ್ನು, ಬಿಜೆಪಿಯು ಪರಿಶಿಷ್ಟ ಪಂಗಡಗಳ ನಡುವೆ ಹೆಚ್ಚಿನ ಜನಬೆಂಬಲವನ್ನು ಹೊಂದಿರುವಂತಿದೆ. ಅಲ್ಪಸಂಖ್ಯಾತರ ಮತಗಳು (ಹತ್ತರಲ್ಲಿ ಏಳು ಜನ) ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಪರ ಇರುವುದು ಸ್ಪಷ್ಟವಾಗಿದೆ. ಆದರೆ ಅಲ್ಪಸಂಖ್ಯಾತರ ಮತಗಳಿಕೆಯಲ್ಲಿ ಬಿಜೆಪಿಯು 2014ರ ಚುನಾವಣೆಗಿಂತ ತುಸು ಮುಂದಿರುವಂತೆ ಕಾಣಿಸುತ್ತಿದೆ. ನಗರ ಪ್ರದೇಶಗಳಲ್ಲಿ ಬಿಜೆಪಿ ಮುಂದಿರುವಂತೆಯೂ, ಗ್ರಾಮೀಣ ಪ್ರದೇಶಗಳಲ್ಲಿ ಮೈತ್ರಿಕೂಟ ಮುಂದಿರುವಂತೆಯೂ ಭಾಸವಾಗುತ್ತಿದೆ.

ಸ್ಪರ್ಧೆಯು ಬಿರುಸಾಗಿಯೇ ಇರಲಿದೆ ಎಂಬುದನ್ನು ಹೇಳುವ ಆಸಕ್ತಿಕರ ವಿಚಾರವೊಂದಿದೆ. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ತಾವು ಹೇಳಿದ ಪಕ್ಷಕ್ಕೇ ಮತ ಚಲಾಯಿಸುವುದಾಗಿ ಶೇ 57ರಷ್ಟು ಜನ ಹೇಳಿದ್ದಾರೆ. ಪ್ರತಿ ಹತ್ತು ಜನರಲ್ಲಿ ನಾಲ್ಕಕ್ಕೂ ಹೆಚ್ಚು ಜನ, ‘ನಾವು ನಮ್ಮ ತೀರ್ಮಾನ ಬದಲಿಸಬಹುದು. ಚುನಾವಣಾ ಪ್ರಚಾರ ಅಭಿಯಾನವು ನಮಗೆ ತೀರ್ಮಾನ ತೆಗೆದುಕೊಳ್ಳಲು ಸಹಾಯ ಮಾಡಲಿದೆ’ ಎಂದು ಹೇಳಿದ್ದಾರೆ.

ಇದಕ್ಕೆ ಹೊಂದಿಕೊಂಡಿರುವಂತೆ ಇನ್ನೊಂದು ಪ್ರಶ್ನೆ ಕೇಳಲಾಗಿತ್ತು. ‘ನೀವು ಮತಗಟ್ಟೆಗೆ ಹೋಗಿ ಮತ ಚಲಾವಣೆ ಮಾಡುವುದು ಖಂಡಿತವೇ’ ಎಂಬುದಾಗಿತ್ತು ಆ ಪ್ರಶ್ನೆ. ಪ್ರತಿ ಹತ್ತು ಜನರಲ್ಲಿ ಆರು ಜನ ಮಾತ್ರ ತಾವು ಖಂಡಿತವಾಗಿಯೂ ಮತ ಚಲಾಯಿಸುವುದಾಗಿ ಹೇಳಿದರು. ಇನ್ನುಳಿದ ನಾಲ್ಕು ಜನ, ತಾವು ಮತ ಚಲಾವಣೆ ಮಾಡುವುದನ್ನು ಖಾತರಿಯಾಗಿ ಹೇಳಲಾಗದು ಎಂದರು.

ಬಿಜೆಪಿಗೆ ಮತ ಚಲಾಯಿಸುವುದಾಗಿ ಹೇಳಿದವರಲ್ಲಿ, ‘ನಾನು ಮತಗಟ್ಟೆಗೆ ಹೋಗಿ ಖಂಡಿತವಾಗಿಯೂ ಮತ ಹಾಕುತ್ತೇನೆ’ ಎಂದು ಹೇಳಿದವರು ಹೆಚ್ಚಿದ್ದರು. ಆದರೆ ಮೈತ್ರಿಕೂಟದ ಅಭ್ಯರ್ಥಿ ಪರ ಒಲವು ತೋರಿದವರ ಪೈಕಿ, ‘ಮತ ಚಲಾವಣೆ ಮಾಡುವುದು ಖಂಡಿತ’ ಎಂದು ಹೇಳಿದವರ ಪ್ರಮಾಣ ಕಡಿಮೆ ಇತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು