ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನರಾಜಕಾರಣ –ಸಂದೀಪ್‌ ಶಾಸ್ತ್ರಿ ಲೇಖನ: ಅಭಿಯಾನವಾದ ಮಹೋತ್ಸವ

ಇತಿಹಾಸದ ನೆನಪಿನಲ್ಲಿ ಭವಿಷ್ಯಕ್ಕೆ ಸಜ್ಜಾಗುವುದು ಸ್ವಾತಂತ್ರ್ಯ ಸಂಭ್ರಮದ ಉದ್ದೇಶ
Last Updated 14 ಆಗಸ್ಟ್ 2022, 20:27 IST
ಅಕ್ಷರ ಗಾತ್ರ

ಭಾರತವು ರಾಜಕೀಯ ಸ್ವಾತಂತ್ರ್ಯ ಪಡೆದುಕೊಂಡು 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಗಿದೆ. ‘ಪ್ರತೀ ಮನೆಗೂ ತ್ರಿವರ್ಣ ಧ್ವಜ’ ಅಭಿಯಾನದ ಮೂಲಕ ಕಳೆದ ಎರಡು ವಾರಗಳಲ್ಲಿ ಹಬ್ಬದ ಸಂಭ್ರಮವು ಶಿಖರ ತಲುಪಿದೆ. ಈ ಮಹತ್ವಪೂರ್ಣ ಮೈಲಿಗಲ್ಲನ್ನು ‘ಜನ ಅಭಿಯಾನ’ವಾಗಿ ಪರಿವರ್ತಿಸುವ ಪ್ರಯತ್ನ ಮಾಡಲಾಗಿದೆ. ನಮ್ಮ ವರ್ತಮಾನದ ಸಂದರ್ಭದಲ್ಲಿ ಇತಿಹಾಸವನ್ನು ನೆನಪಿಸಿಕೊಂಡು ಭವಿಷ್ಯಕ್ಕೆ ಸಿದ್ಧರಾಗುವುದೇ ಈ ಚಾರಿತ್ರಿಕ ಮತ್ತು ಸ್ಮರಣೀಯ ಕ್ಷಣಗಳ ಸುತ್ತಲೂ ಇರುವ ಸಂಭ್ರಮದ ಉದ್ದೇಶವಾಗಿದೆ.

ಮಹತ್ವದ ದಿನಗಳು ಇತಿಹಾಸದ ಪ್ರಮುಖ ಘಟನೆಗಳನ್ನು ಸ್ಮರಿಸಲು ಅಥವಾ ಸಂಭ್ರಮಿಸಲು ಸದಾ ಅವಕಾಶ ಕೊಡುತ್ತವೆ. ಗಣರಾಜ್ಯ ದಿನ ಮತ್ತು ಸ್ವಾತಂತ್ರ್ಯ ದಿನವು ರಾಷ್ಟ್ರೀಯ ಸಂಭ್ರಮದ ಕ್ಷಣಗಳು. ಈ ವರ್ಷದ ಸ್ವಾತಂತ್ರ್ಯ ದಿನವು ಎಂದಿಗಿಂತಲೂ ಭಿನ್ನ. ಈ ಬಾರಿಯ ಸ್ವಾತಂತ್ರ್ಯ ದಿನವು ಅಮೃತ ಮಹೋತ್ಸವವಾಗಿರುವುದರಿಂದ, ಔಪಚಾರಿಕ ಆಚರಣೆಯ ಬದಲು ಸುಯೋಜಿತ ಪ್ರಕ್ರಿಯೆಯನ್ನಾಗಿ ರೂಪಿಸಲಾಗಿದೆ. ಸರ್ಕಾರದ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಸಾಮೂಹಿಕವಾಗಿ ಮತ್ತು ಸ್ವತಂತ್ರವಾಗಿ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮವನ್ನು ಅಭಿಯಾನವಾಗಿ ಆಚರಿಸುತ್ತಿವೆ. ಚಾರಿತ್ರಿಕ ಘಟನೆಯೊಂದರ ಸೂಕ್ಷ್ಮವಾದ ಮತ್ತು ಮಹತ್ವದ್ದಾದ ಆಚರಣೆಯು ಗಣನೀಯವಾದ ಪರಿಣಾಮಗಳನ್ನು ಹೊಂದಿದೆ.

ಇತಿಹಾಸ, ವರ್ತಮಾನ ಮತ್ತು ಭವಿಷ್ಯ: ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮವು ಏಕೆ ಮಹತ್ವದ್ದಾಗಿದೆ? 2011ರ ಜನಗಣತಿಯ ಆಧಾರದಲ್ಲಿ ಲೆಕ್ಕ ಹಾಕಿದರೆ ಈಗ ನಮ್ಮಲ್ಲಿ ಇರುವವರಲ್ಲಿ ಶೇಕಡ 2ರಷ್ಟಕ್ಕಿಂತ ಕಡಿಮೆ ಜನರು ಮಾತ್ರ ಸ್ವಾತಂತ್ರ್ಯ ಸಿಗುವ ಮೊದಲು ಜನಿಸಿದವರು. ಆರು ಜನರಲ್ಲಿ ಒಬ್ಬರು (ಶೇ 15ರಷ್ಟು) ಸ್ವಾತಂತ್ರ್ಯ ಬಂದ ಬಳಿಕದ ಮೊದಲ ಕಾಲು ಶತಮಾನದಲ್ಲಿ ಜನಿಸಿದವರು (1947ರಿಂದ 1972). ಮೂರನೇ ಒಂದರಷ್ಟು ಜನರು (ಶೇ 34ರಷ್ಟು) ಸ್ವಾತಂತ್ರ್ಯದ 25 ಮತ್ತು 50ನೇ ವರ್ಷದ ಸಂಭ್ರಮಾಚರಣೆ ನಡುವೆ ಜನಿಸಿದವರು (1972ರಿಂದ 1997). ಸುಮಾರು ಅರ್ಧ ಭಾಗದಷ್ಟು ಜನರು (ಶೇ 49ರಷ್ಟು) ಕೊನೆಯ 25 ವರ್ಷಗಳಲ್ಲಿ ಜನಿಸಿದವರು.

ಈಗಿನ ಜನಸಂಖ್ಯೆಯಲ್ಲಿ ಶೇ 98ರಷ್ಟು ಜನರು ಸ್ವಾತಂತ್ರ್ಯ ಬಂದ ನಂತರವೇ ಜನಿಸಿದವರು ಎಂಬುದು ಸ್ವಾತಂತ್ರ್ಯದ 75ನೇ ವರ್ಷಾಚರಣೆಯನ್ನು ಬಹಳ ಮಹತ್ವದ್ದಾಗಿಸಿದೆ. 1947ರಿಂದ 1972ರ ನಡುವೆ ಜನಿಸಿದವರು ಪಲ್ಲಟದ ಕ್ಷಣಗಳಿಗೆ ಸಾಕ್ಷಿಗಳಾಗಿದ್ದ ತಮ್ಮ ಹೆತ್ತವರು ಮತ್ತು ತಾತಂದಿರ ಬಾಯಿಯಿಂದ ಸ್ವಾತಂತ್ರ್ಯ ಹೋರಾಟದ ಸಂಕಷ್ಟದ ಕತೆಗಳನ್ನು ಕೇಳಿಸಿಕೊಂಡಿದ್ದಾರೆ. 1972ರ ನಂತರ ಜನಿಸಿದವರು, ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಗಳಾಗಿದ್ದ ತಮ್ಮ ತಾತಂದಿರಿಂದ ಸ್ವಾತಂತ್ರ್ಯ ಹೋರಾಟದ ಕತೆಗಳನ್ನು ಕೇಳಿಸಿಕೊಂಡಿದ್ದಾರೆ. ತಲೆಮಾರುಗಳು ಕಳೆದಂತೆಲ್ಲ ನಮ್ಮ ಮನೆಗಳಲ್ಲಿನ ಇಂತಹ ಕಥನಗಳನ್ನು ಮೌಖಿಕವಾಗಿ ಕೇಳುವುದು ಕಡಿಮೆಯಾಯಿತು ಮತ್ತು ಅವುಗಳಲ್ಲಿ ಇದ್ದ ವೈಯಕ್ತಿಕ ಆಪ್ತತೆಯೂ ಕಡಿಮೆಯಾಯಿತು. ಸ್ವಾತಂತ್ರ್ಯ ಸಿಕ್ಕ ಬಳಿಕ ಜನಿಸಿದ ತಲೆಮಾರುಗಳ ಜನರು ಇತಿಹಾಸದ ನಂಟಿನೊಂದಿಗೆ ವರ್ತಮಾನದ ಕುರಿತು ಚಿಂತಿಸಿ, ಭವಿಷ್ಯಕ್ಕೆ ಸಜ್ಜಾಗಲು ಸ್ವಾತಂತ್ರ್ಯದ ಅಮೃತ ಮಹೋತ್ಸವವು ಅವಕಾಶ ಒದಗಿಸಿಕೊಟ್ಟಿದೆ.

ಬಹುತ್ವಕ್ಕೆ ಪ್ರಾತಿನಿಧ್ಯ: ಸ್ವಾತಂತ್ರ್ಯದ 75ನೇ ವರ್ಷದ ಆಚರಣೆಯು ‘ಅದ್ಧೂರಿ ಸಂಭ್ರಮದ ಕ್ಷಣ’ವಷ್ಟೇ ಆಗದೆ ‘ಚಿಂತನೆಗೆ ಪ್ರೇರಣೆ ನೀಡುವ ಪ್ರಕ್ರಿಯೆ’ಯಾಗಿ ಅದನ್ನು ಪರಿವರ್ತಿಸುವುದಕ್ಕಾಗಿ ಸ್ವಾತಂತ್ರ್ಯ ಚಳವಳಿಯ ವೈವಿಧ್ಯಮಯ ಆಯಾಮಗಳನ್ನು ಕಟ್ಟಿಕೊಡುವುದಕ್ಕೆ ಬಹಳ ಮಹತ್ವ ಇದೆ. ಸ್ವಾತಂತ್ರ್ಯ ಚಳವಳಿಯ ಕೇಂದ್ರದಲ್ಲಿ ಏನಿತ್ತು ಎಂಬುದರ ಅಭಿವ್ಯಕ್ತಿಯು ಸ್ವಾತಂತ್ರ್ಯ ಹೋರಾಟದ ಬಗೆಗಿನ ನಮ್ಮ ಸಾಮೂಹಿಕ ಕಲ್ಪನೆಯಾಗಿ ಬಿಂಬಿತವಾಗಬೇಕೇ ಹೊರತು ‘ನನ್ನ’ ಅಥವಾ ‘ನಿಮ್ಮ/ಅವರ’ ಕಲ್ಪನೆಯಾಗಿ ಅಲ್ಲ. ಈ ಬಹುತ್ವದ ಧ್ವನಿಗಳಲ್ಲಿಯೇ ನಮ್ಮ ಸ್ವಾತಂತ್ರ್ಯ ಹೋರಾಟದ ಸಮೃದ್ಧಿಯೂ ಸ್ವತಂತ್ರ ಭಾರತದಕಳೆದ 75 ವರ್ಷಗಳ ಪಯಣವೂ ಅಡಗಿದೆ.

ನಮ್ಮ ಇತಿಹಾಸದ ಪಠ್ಯಗಳಲ್ಲಿ ದಾಖಲಾಗದ, ದಿಟ್ಟ ಸ್ವಾತಂತ್ರ್ಯ ಹೋರಾಟಗಾರರ ಕಥನಗಳಿಗೆ ಒತ್ತು ನೀಡುವುದು ಈ ದಿಸೆಯಲ್ಲಿ ಮುಖ್ಯವಾದುದು. ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ, ಆದರೆ ರಾಜಕೀಯ ಬಣ್ಣ ಪಡೆದುಕೊಂಡಿರದ ಸಾಮಾಜಿಕ–ಸಾಂಸ್ಕೃತಿಕ ಚಳವಳಿಗಳ ಕಡೆಯೂ ಗಮನಹರಿಸಿ, ಬಹುತ್ವವನ್ನು ಕಟ್ಟಿಕೊಡಬೇಕಿದೆ.

ಎಲ್ಲ ರಾಜಕೀಯ ಧಾರೆಗಳು, ಸಾಮಾಜಿಕ ದೃಷ್ಟಿಕೋನಗಳು, ಆರ್ಥಿಕ ನಿಲುವುಗಳು, ಸಾಂಸ್ಕೃತಿಕ ವೈವಿಧ್ಯಗಳಿಗೆ ಹಲವು ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಗಳು ತಮ್ಮ ಅಮೃತ ಮಹೋತ್ಸವದ ಸಂಭ್ರಮಾಚರಣೆಯಲ್ಲಿನ್ಯಾಯಯುತ ಒತ್ತು ನೀಡಿವೆ. ವಿವಿಧ ಭಾಗಗಳ ಇಂತಹ ಪ್ರಾಮಾಣಿಕ ಧ್ವನಿಗಳು ದೇಶದೆಲ್ಲೆಡೆ ಅನುರಣಿಸಿದವು. ದೇಶವು ನಿಜವಾಗಿಯೂ ಪ್ರತಿನಿಧಿಸುತ್ತಿರುವ ‘ವಿಶ್ವಾಸಾರ್ಹತೆ, ವೈವಿಧ್ಯ ಮತ್ತು ಬಹುತ್ವ’ದ ವಿಸ್ತಾರ ನೋಟವನ್ನು ಇದು ಯುವ ತಲೆಮಾರಿಗೆ ನೀಡಿದೆ. ಬಹುತ್ವದ ಈ ರೀತಿಯ ಪ್ರಾತಿನಿಧ್ಯವು ಹೆಚ್ಚು ವ್ಯಾಪಕವೂ ಹೆಚ್ಚು ಸುಸ್ಥಿರವೂ ಆಗಬೇಕು ಎಂಬ ಬಯಕೆ ವ್ಯಕ್ತವಾಗಿದೆ.

ಭಾರತವು 21ನೇ ಶತಮಾನದ ಭಾರತಕ್ಕಾಗಿ ಸ್ವಾತಂತ್ರ್ಯದ ಸಂಭ್ರಮಾಚರಣೆ ನಡೆಸುತ್ತಿದೆ; ಇಂತಹ ಆಚರಣೆಯು, ಸ್ವಾತಂತ್ರ್ಯ ಪಡೆದ 50 ವರ್ಷಗಳ ಬಳಿಕ ಹುಟ್ಟಿದವರಿಗೆ ಇತಿಹಾಸದ ದರ್ಶನ ಮಾಡಿಸುತ್ತದೆ (ಈ ವರ್ಗವೇ ದೇಶದ ಜನಸಂಖ್ಯೆಯ ಅರ್ಧದಷ್ಟಿದೆ). ರಾಷ್ಟ್ರೀಯ ಶಿಕ್ಷಣ ನೀತಿ–2020 (ಎನ್‌ಇಪಿ) ಹೊಸ ಮತ್ತು ಸೃಜನಶೀಲ ವಿಧಾನಗಳಿಗೆ ಮುನ್ನುಡಿ ಬರೆದಿದೆ. ಎನ್‌ಇಪಿ–2020 ಅನ್ನು ಸೃಜನಶೀಲವಾಗಿ ಮತ್ತು ಆವಿಷ್ಕಾರಕವಾಗಿ (ಯಾಂತ್ರಿಕವಾಗಿ ಅಲ್ಲದೆ) ಅನುಷ್ಠಾನಕ್ಕೆ ತರುವುದು ನಮ್ಮ ಮುಂದಿರುವ ಸವಾಲು. ಅಮೃತ ಮಹೋತ್ಸವವು ಈ ದಿಸೆಯಲ್ಲಿ ಮೊದಲ ಪ್ರಯತ್ನ. ಇದನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾಗಿದೆ ಮತ್ತುಸುಸ್ಥಿರಗೊಳಿಸಬೇಕಾಗಿದೆ.

ಇಂತಹ ಅಭಿಯಾನಗಳನ್ನು ಸುಸ್ಥಿರಗೊಳಿಸಲು ಎಲ್ಲ ಭಾಗೀದಾರರನ್ನೂ ಒಳಗೊಂಡ ಎಚ್ಚರಿಕೆಯಲ್ಲಿ ರೂಪಿಸಿದ ಯೋಜನೆ ಬೇಕಾಗಿದೆ. ‘ಪ್ರತೀ ಮನೆಗೂ ತ್ರಿವರ್ಣ ಧ್ವಜ’ ಅಭಿಯಾನವು ಭಾರತದ ಎಲ್ಲ ಪೌರರನ್ನೂ ಒಳಗೊಂಡ ಅಭಿಯಾನದಂತೆ ಕಾಣಿಸುತ್ತಿದೆ. ಅದು ಜನ ಅಭಿಯಾನದ ಸ್ವರೂಪ ಪಡೆಯಬೇಕಿದ್ದರೆಸರ್ಕಾರ ಅಥವಾ ಅದನ್ನು ಮೊದಲು ಪ್ರಸ್ತಾ‍ಪಿಸಿದ ರಾಜಕೀಯ ಪಕ್ಷವಷ್ಟೇ ಇದು ತನ್ನದು ಎಂದರೆ ಸಾಲದು. ಇಂತಹ ಅಭಿಯಾನವು ಎಲ್ಲರನ್ನೂ ಒಳಗೊಳ್ಳಬೇಕು, ಇದರ ಯಶಸ್ಸು ಸಮುದಾಯವು ಅದನ್ನು ತನ್ನದೆಂದು ಭಾವಿಸುವುದರ ಮೇಲಿದೆ. ಎಲ್ಲರ ಭಾಗವಹಿಸುವಿಕೆ, ಎಲ್ಲರ ಒಳಗೊಳ್ಳುವಿಕೆ ಮತ್ತು ಎಲ್ಲರೂ ತನ್ನದೆಂದು ಭಾವಿಸುವುದು ಮುಖ್ಯ. ಈ 21ನೇ ಶತಮಾನದಲ್ಲಿ ಒಂದು ಘಟನೆಯು ಪ್ರಕ್ರಿಯೆಯಾಗಿ ಪರಿವರ್ತನೆಯಾಗಲು ಎಲ್ಲರ ಒಳಗೊಳ್ಳುವಿಕೆ ಮತ್ತು ಎಲ್ಲರ ಭಾಗವಹಿಸುವಿಕೆಯ ಅಗತ್ಯ ಇದೆ. ಹಾಗಿದ್ದರೆ ಮಾತ್ರ ಇದು ‘ನಮ್ಮ’ ಅಭಿಯಾನ ಆಗಬಹುದು.

ಇಂತಹ ಚಾರಿತ್ರಿಕ ಸಂದರ್ಭದಲ್ಲಿ ಭಿನ್ನ ಸೈದ್ಧಾಂತಿಕ ದೃಷ್ಟಿಕೋನಗಳು ಮತ್ತು ವ್ಯಕ್ತಿಗತ ನೋಟದಲ್ಲಿ ‘ಇತಿಹಾಸಗಳನ್ನು’ ಧ್ರುವೀಕರಿಸದೆ ‘ನಮ್ಮ ಚಾರಿತ್ರಿಕ ಪರಂಪರೆ’ಯನ್ನು ಬಿಂಬಿಸುವುದೇ ಅರ್ಥಪೂರ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT