ಮೈಸೂರಿನಲ್ಲಿ ನಡೆದ (ನ. 3) 2018–2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮಾತುಗಳ ಕೊನೆಗೆ, ‘ಜೈಹಿಂದ್’, ‘ಜೈ ಕರ್ನಾಟಕ’ ಎನ್ನುವ ಘೋಷಣೆಗಳನ್ನು ಉಚ್ಚರಿಸಿ, ಒಂದೆರಡು ಕ್ಷಣಗಳ ಮೌನದ ನಂತರ ‘ಜೈ ಸಂವಿಧಾನ್’ ಎನ್ನುವ ಘೋಷವಾಕ್ಯಕ್ಕೆ ವಿಶೇಷ ಒತ್ತು ನೀಡಿ ಉದ್ಘರಿಸಿದರು. ತಕ್ಷಣವೇ ಮುಂದಿನ ಸಾಲಿನಲ್ಲಿ ಕುಳಿತಿದ್ದ ಯುವನಟಿಯೊಬ್ಬರು ತಮ್ಮ ಪಕ್ಕದಲ್ಲಿದ್ದವರನ್ನು ಅಚ್ಚರಿಯಿಂದ ಕೇಳಿದರು: ‘ಸಿಎಂ ಕೊನೆಯದಾಗಿ ಹೇಳಿದ್ದು ಏನು?’

‘ಜೈ ಸಂವಿಧಾನ್’ ಎನ್ನುವ ಘೋಷಣೆ ನಟಿಯೊಬ್ಬರನ್ನು ಗೊಂದಲಗೊಳಿಸಿದ್ದು ಎರಡು ಸಂಗತಿಗಳನ್ನು ಸೂಚಿಸುವಂತಿತ್ತು. ಒಂದು, ಸಂವಿಧಾನದ ಬಗ್ಗೆ ಯುವಜನರಿಗೆ ಇರಬಹುದಾದ ಅರಿವಿನ ಕೊರತೆ. ಎರಡನೆಯದು, ಆ ಅರಿವನ್ನು ಮೂಡಿಸಲೇಬೇಕಾದ ಸದ್ಯದ ಅನಿವಾರ್ಯತೆ.

ಭಾರತದ ಸಂವಿಧಾನ ಸಭೆಯು 1950ರ ನವೆಂಬರ್ 26ರಂದು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ಚಾರಿತ್ರಿಕ ಘಟನೆಗೆ ಎಪ್ಪತ್ತೈದು ವರ್ಷಗಳು ತುಂಬಿದರೂ, ಸಂವಿಧಾನದ ಬಗ್ಗೆ ಸಾರ್ವಜನಿಕಪ್ರಜ್ಞೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎನ್ನುವುದು ನಿಜಕ್ಕೂ ಕಳವಳ ಹುಟ್ಟಿಸುವಂತಹದ್ದು. ‘ಸಂವಿಧಾನ ದಿನ’ದ ಆಸುಪಾಸಿನಲ್ಲಿ ನಾಡಿನಲ್ಲಿ ನಡೆದ ಕೆಲವು ಸಂಗತಿಗಳನ್ನು ಗಮನಿಸಿದರೆ, ನಮ್ಮ ಸಂವಿಧಾನಪ್ರಜ್ಞೆ ಅಳ್ಳಕವಾಗಿರುವುದು ಅರಿವಿಗೆ ಬರುತ್ತದೆ.

‘ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ’ ಎನ್ನುವ ವಿಚಾರಸಂಕಿರಣದ ‘ಆತಿಥ್ಯ’ವನ್ನು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ವಹಿಸಿಕೊಂಡಿದ್ದು ಚರ್ಚೆಗೆ ಕಾರಣವಾಯಿತು. ಈ ಕಾರ್ಯಕ್ರಮದ ನೆಪದಲ್ಲಿ ವಿಶ್ವವಿದ್ಯಾಲಯ ಮತೀಯವಾದಕ್ಕೆ ಇಂಬು ನೀಡುತ್ತಿದೆ ಎಂದು ಕೆಲವರು ಆತಂಕಪಟ್ಟರೆ, ಎಲ್ಲ ವಿಚಾರಗಳ ಮುಕ್ತ ಚರ್ಚೆಗೆ ವಿಶ್ವವಿದ್ಯಾಲಯಗಳು ತೆರೆದುಕೊಳ್ಳಬೇಕು ಎನ್ನುವ ಅರ್ಥದಲ್ಲಿ ವಿ.ವಿ. ಕುಲಪತಿ ಶರತ್ ಅನಂತಮೂರ್ತಿ ಮಾತನಾಡಿದ್ದರು. ಈ ಪರ–ವಿರೋಧದ ವಾದಗಳನ್ನು ಹೊರತುಪಡಿಸಿ ಶೀರ್ಷಿಕೆಯನ್ನು ಗಮನಿಸಿದರೆ, ಅದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗಿ ಕಾಣಿಸುವಂತಿದೆ. ಭಗವದ್ಗೀತೆ ಅಥವಾ ಬೇರೊಂದು ಧರ್ಮಗ್ರಂಥದಿಂದ ಅಪರಾಧ ನಿಯಂತ್ರಣ ಆಗುತ್ತದೋ ಇಲ್ಲವೋ ಎನ್ನುವುದು ಸಾರ್ವಜನಿಕ ಚರ್ಚೆಯ ವಿಷಯವೇ ಆಗಬಾರದು. ಏಕೆಂದರೆ, ಅಪರಾಧಕ್ಕೆ ಕಡಿವಾಣ ಹಾಕುವುದು ಕಾನೂನಿನ ಕೆಲಸ. ಸಾಮಾಜಿಕ ಸ್ವಾಸ್ಥ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ಕಾನೂನುಗಳಿಗೆ ಇರುವ ಸಾರ್ವತ್ರಿಕತೆ ಧರ್ಮಗ್ರಂಥಗಳಿಗೆ ಇಲ್ಲ. ಹಾಗಾಗಿ, ಭಗವದ್ಗೀತೆಯ ಮೂಲಕ ಅಪರಾಧ ನಿಯಂತ್ರಣದ ಸಾಧ್ಯತೆಗಳ ಕುರಿತು ಸಾರ್ವಜನಿಕ ಚರ್ಚೆ ನಡೆಸುವುದನ್ನು ಸಂವಿಧಾನವನ್ನು ಗೌಣಗೊಳಿಸುವ ಪ್ರಯತ್ನವೆಂದೇ ಭಾವಿಸಬೇಕಾಗುತ್ತದೆ. ಸಮುದಾಯಗಳ ಚೌಕಟ್ಟಿನಿಂದ ಹೊರತಂದು ಸಾರ್ವತ್ರಿಕಗೊಳಿಸುವ ಪ್ರಯತ್ನ ಧರ್ಮಗ್ರಂಥಗಳಿಗೆ ಗೌರವ ತರುವಂತಹದ್ದಲ್ಲ; ಅದು ಸಾಂವಿಧಾನಿಕ ನಡೆಯೂ ಅಲ್ಲ. ಸಂವಿಧಾನದ ಆಶಯಗಳನ್ನು ಗೌಣಗೊಳಿಸುವ ಚಟುವಟಿಕೆಗಳಿಗೆ ವೇದಿಕೆ ಆಗುವುದನ್ನು ಅನುಮಾನದಿಂದ ನೋಡಬೇಕೇ ಹೊರತು, ಅಲ್ಲಿ ವೈಚಾರಿಕತೆಯ ಪ್ರಶ್ನೆಯೇ ಬರುವುದಿಲ್ಲ.

ಸಂವಿಧಾನಕ್ಕೆ ಪರ್ಯಾಯವಾಗಿ ಧಾರ್ಮಿಕ ಸಂಗತಿಗಳನ್ನು ಚಲಾವಣೆಗೆ ತರುವ ಪ್ರಯತ್ನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎನ್ನುವುದಕ್ಕೆ ಇತ್ತೀಚಿನ ನಿದರ್ಶನಗಳು: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಡೆದ ಆರ್ಎಸ್ಎಸ್ ಪಥಸಂಚಲನ ಹಾಗೂ ಮೋಹನ್ ಭಾಗವತ್ರ ‘ಹಿಂದೂರಾಷ್ಟ್ರ’ದ ಪರಿಕಲ್ಪನೆ. ಸಾಮಾಜಿಕ ಶಾಂತಿಪಾಲನೆಗೆಂದೇ ಪೊಲೀಸ್ ವ್ಯವಸ್ಥೆಯಿರುವಾಗ, ಕಾನೂನುಬದ್ಧವಾಗಿ ನೋಂದಣಿಯೂ ಆಗದ ಸಂಸ್ಥೆಯೊಂದಕ್ಕೆ ಸೇರಿದವರು ಎನ್ನಲಾದ ಕೆಲವರು ಸಾರ್ವಜನಿಕವಾಗಿ ದೊಣ್ಣೆಗಳನ್ನು ಠಳಾಯಿಸುತ್ತಾ ನಡೆಯುವುದು ಏನನ್ನು ಸೂಚಿಸುತ್ತದೆ? ಸುರಕ್ಷತೆಗೆ ಪರ್ಯಾಯ ಎನ್ನುವ ಚಿತ್ರಣ ನೀಡುವ, ಕಾನೂನುಬದ್ಧವಲ್ಲದ, ಯಾವುದೇ ವ್ಯವಸ್ಥೆ ಸಂವಿಧಾನಬಾಹಿರ. ಈ ಅರಿವು ಮುನ್ನೆಲೆಗೆ ಬಂದಾಗ, ಪಥಸಂಚಲನ ವಿವಾದವೋ ಪ್ರತಿಷ್ಠೆಯೋ ಹಟವೋ ಆಗುವುದಿಲ್ಲ. ಸಾರ್ವಜನಿಕ ಪ್ರದರ್ಶನವೊಂದು ಸಮೂಹದಲ್ಲಿ ಸಂಭ್ರಮ ಮೂಡಿಸಬೇಕಷ್ಟೆ. ಪಥಸಂಚಲನದ ವೈಖರಿ ಕೆಲವರಿಗೆ ಅಸುರಕ್ಷತೆಯ ಭಾವನೆ ಮೂಡಿಸುತ್ತದೆ ಎನ್ನುವುದಾದಲ್ಲಿ, ಆ ನಡವಳಿಕೆಯನ್ನು ಪರಿಶೀಲಿಸಿಕೊಳ್ಳುವ ವಿನಯ ಅಗತ್ಯ. ಯಾವ ಧರ್ಮವೇ ಆಗಿರಲಿ, ಭಕ್ತಿ ಅಥವಾ ಶಕ್ತಿ ಸಾರ್ವಜನಿಕ ಪ್ರದರ್ಶನದ ವಿಷಯವಾದಾಗ, ಸಮಸ್ಯೆಗಳು ಶುರುವಾಗುತ್ತವೆ. ಧಾರ್ಮಿಕ ವಿಚಾರಗಳನ್ನು ಬೀದಿಗೆ ತರುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ಸಂವಿಧಾನದಲ್ಲಿ ನಂಬಿಕೆಯುಳ್ಳವರು ಮಾಡಬೇಕಾದ ಕೆಲಸ. ಇದರ ಬದಲಾಗಿ, ಧಾರ್ಮಿಕ ವಿಷಯಗಳನ್ನು ಜಿದ್ದಾಗಿ ಪರಿವರ್ತಿಸಲು ಪ್ರಯತ್ನಿಸುವುದು ಸಂವಿಧಾನವನ್ನು ಬಲಪಡಿಸುವ ನಡೆಯಲ್ಲ.

‘ಭಾರತವು ಹಿಂದೂ ರಾಷ್ಟ್ರವಾಗಿದ್ದು, ಈ ರಾಷ್ಟ್ರದ ಹೊಣೆ ಹಿಂದೂಗಳ ಮೇಲಿದೆ’ ಎನ್ನುವುದು ಆರ್ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಬೆಂಗಳೂರಿನಲ್ಲಿ ಇತ್ತೀಚೆಗೆ ನೀಡಿದ ಉಪನ್ಯಾಸದಲ್ಲಿನ (‘ಸಂಘದ 100 ವರ್ಷದ ಪಯಣ: ನವ ಕ್ಷಿತಿಜ’) ಬೀಜವಾಕ್ಯಗಳಲ್ಲೊಂದು. ಭಾಗವತ್ರ ಈ ಅಭಿಪ್ರಾಯ, ಆರ್ಎಸ್ಎಸ್ ಹಾಗೂ ಅದರ ಒಡಹುಟ್ಟುಗಳು ಮತ್ತೆ ಮತ್ತೆ ಚಲಾವಣೆಗೆ ತರುತ್ತಿರುವ ‘ಭಾರತ ಹಿಂದೂರಾಷ್ಟ್ರ’ ಎನ್ನುವ ಪರಿಕಲ್ಪನೆಯೇ ಆಗಿದೆ ಹಾಗೂ ಅದು ಸಂವಿಧಾನದ ಅರಿವಿನ ಕೊರತೆಯಿಂದ ಅಥವಾ ಸಂವಿಧಾನದ ಕುರಿತ ಅವಜ್ಞೆಯಿಂದ ರೂಪುಗೊಂಡಿರುವಂತಹದ್ದಾಗಿದೆ. ಭಾರತವನ್ನು ಗುರ್ತಿಸಬೇಕಿರುವುದು ಸಂವಿಧಾನ ಗುರ್ತಿಸಿರುವ ಬಹುತ್ವದ ಚಹರೆಗಳ ಮೇಲೆಯೇ ಹೊರತು, ಧಾರ್ಮಿಕ ನೆಲೆಗಟ್ಟಿನಲ್ಲಲ್ಲ. ‘ಹಿಂದೂರಾಷ್ಟ್ರ’ ಎಂದು ಗುರ್ತಿಸುವುದು ಈ ದೇಶದ ಉಳಿದ ಧರ್ಮಗಳನ್ನು ನಿರ್ಲಕ್ಷ್ಯದಿಂದ ನೋಡುವ ಕ್ರಮವಷ್ಟೇ ಆಗಿರದೆ, ಸಂವಿಧಾನದ ಬಗೆಗಿನ ನಿರ್ಲಕ್ಷ್ಯವೂ ಆಗಿದೆ.

ನೂರು ವರ್ಷಗಳು ತುಂಬಿದ ಸಂಸ್ಥೆಯೇ ಈಗಲೂ ಸ್ವಾತಂತ್ರ್ಯೋತ್ತರ ಮನಃಸ್ಥಿತಿಯಲ್ಲಿಯೇ ಉಳಿದಿರುವಾಗ, ಜನಸಾಮಾನ್ಯರಿಗೆ ಸಂವಿಧಾನಪ್ರಜ್ಞೆಯ ಕೊರತೆ ಇದ್ದರೆ ಅಚ್ಚರಿಯೇನಿಲ್ಲ. ಹಾಗೆನೋಡಿದರೆ, ಈ ದೇಶದ ಜನಸಾಮಾನ್ಯರು ಅಪ್ರಜ್ಞಾಪೂರ್ವಕವಾಗಿ ಸಂವಿಧಾನದ ಆಶಯಗಳನ್ನು ತಮ್ಮ ಬಾಳ್ವೆಯ ಬೆಳಕಾಗಿಸಿಕೊಂಡಿದ್ದಾರೆ. ಜನಪದರ ಬದುಕಿನಲ್ಲಿಯೇ ಸಂವಿಧಾನದ ಸಾಮರಸ್ಯದ ಬಿತ್ತಗಳಿವೆ. ಸಮಸ್ಯೆಯಿರುವುದು, ಕೆಲವರಿಗೆ ಕಲಿತಪಿತ್ತ ಗಂಟಲಿಗೂ ನೆತ್ತಿಗೂ ಏರಿರುವುದರಲ್ಲಿ.

ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಒಂದು ಗುಂಪು, ತಮ್ಮ ಪ್ರಯತ್ನಗಳಿಗೆ ಪೂರಕವಾಗಿ ಸಂವಿಧಾನ ಹಾಗೂ ಅದರ ಜೀವರೂಪವಾದ ಅಂಬೇಡ್ಕರ್ ಅವರನ್ನೇ ಬಳಸಿಕೊಳ್ಳುವ ನಿರ್ಲಜ್ಜಜಾಣತನ ಪ್ರದರ್ಶಿಸುತ್ತದೆ. ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ, ‘ಸಂವಿಧಾನ ದಿನ’ದ ಸಂದರ್ಭದಲ್ಲಿ ಹತ್ತು ದಿನಗಳ ‘ಭೀಮನಡೆ’ ಹೆಸರಿನ ಕಾರ್ಯಕ್ರಮ ಸಂಘಟಿಸಿ, ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿದ ದ್ರೋಹಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದ್ದಾರೆ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿತು ಎಂದು ಆರೋಪಿಸುವ ಅಶೋಕರಂಥವರು ಗಮನಿಸಬೇಕಾದ ಸೂಕ್ಷ್ಮವೊಂದಿದೆ. ಬಾಬಾಸಾಹೇಬರು ನೆಹರೂ ನೇತೃತ್ವದ ಸರ್ಕಾರದ ಭಾಗವಾಗಿದ್ದಾಗಲೂ, ಸರ್ಕಾರದ ವಿರೋಧಿಯಾಗಿದ್ದಾಗಲೂ, ಅವರೆಂದೂ ಕಾಂಗ್ರೆಸ್ಸಿಗರಾಗಿರಲಿಲ್ಲ. ಕಾಂಗ್ರೆಸ್, ನೆಹರೂ ಹಾಗೂ ಗಾಂಧೀಜಿ ಅವರನ್ನು ಅಂಬೇಡ್ಕರ್ ಅವರಂತೆ ವಿಮರ್ಶೆಯ ನಿಕಷಕ್ಕೆ ಒಳಪಡಿಸಿದವರು ಮತ್ತೊಬ್ಬರಿಲ್ಲ. ಈ ವಿರೋಧವನ್ನು ನೆನಪಿನಲ್ಲಿರಿಸಿಕೊಂಡರೆ, ಬಾಬಾಸಾಹೇಬರಿಗೆ ಕಾಂಗ್ರೆಸ್ನಿಂದ ನ್ಯಾಯ ದೊರಕಲಿಲ್ಲ ಎನ್ನುವ ರಾಜಕೀಯ ವಿದ್ಯಮಾನವನ್ನು ಅರ್ಥ ಮಾಡಿಕೊಳ್ಳುವ ದಾರಿ ಕಾಣಿಸುತ್ತದೆ. ರಾಜಕೀಯ ವಿರೋಧಿಯಾಗಿದ್ದಾಗಲೂ ಅಂಬೇಡ್ಕರ್ ಅವರ ವಿದ್ವತ್ತನ್ನು ಕಾಂಗ್ರೆಸ್ ಗೌರವದಿಂದಲೇ ಕಂಡಿತ್ತು ಎನ್ನುವುದಕ್ಕೆ ಅಂಬೇಡ್ಕರ್ ಅವರನ್ನು ಸಂವಿಧಾನದ ಶಿಲ್ಪಿಯ ರೂಪದಲ್ಲಿ ಇತಿಹಾಸ ಗುರ್ತಿಸುತ್ತಿರುವುದೇ ನಿದರ್ಶನವಾಗಿದೆ. ಚರಿತ್ರೆಯ ಈ ಸಹಜ ವಿರೋಧಾಭಾಸಗಳನ್ನು ಬಿಜೆಪಿ ತನ್ನ ರಾಜಕೀಯ ಲಾಭಗಳಿಗಾಗಿ ತಪ್ಪಾಗಿ ಚಿತ್ರಿಸುತ್ತಿದೆ. ಬಿಜೆಪಿಯ ರಾಜಕೀಯಶಕ್ತಿಯೇ ಆದ ಸಂಘ ಪರಿವಾರದ ಹಿಂದೂರಾಷ್ಟ್ರದ ಪರಿಕಲ್ಪನೆಯೇ ಅಂಬೇಡ್ಕರ್ಪ್ರಣೀತ ಭಾರತಕ್ಕೆ ವಿರುದ್ಧವಾದುದು. ‘ನನಗೆ ದೇಶವಿಲ್ಲ, ನನಗೆ ಮಾತೃಭೂಮಿಯಿಲ್ಲ’ ಎಂದು ಅಂಬೇಡ್ಕರ್ ನೋವಿನಿಂದ ಹೇಳಿರುವುದಿದೆ. ಆ ಮಾತನ್ನು ಈಗ ಬಿಜೆಪಿ ನಿಜಗೊಳಿಸುತ್ತಿದೆ. ಸಮಾಜದ ನೆಮ್ಮದಿಯ ಬದುಕಿಗೆ ಅತ್ಯವಶ್ಯವಾದ ನೀರಿನ ದೊಣೆಯ ರೂಪದಲ್ಲಿ ಬಳಸಿಕೊಳ್ಳುವ ಬದಲು, ಎದುರಾಳಿಗಳನ್ನು ಬಗ್ಗುಬಡಿಯಲು ಬೇಕಾದ ದೊಣ್ಣೆಯಂತೆ ಅಂಬೇಡ್ಕರ್ ಅವರನ್ನು ಸಂಘ ಪರಿವಾರ ಬಳಸಿಕೊಳ್ಳುತ್ತಿದೆ. ಅಂಬೇಡ್ಕರರಿಗೆ ಕಾಂಗ್ರೆಸ್ ದ್ರೋಹ ಎಸಗಿತು ಎಂದು ಹೇಳುತ್ತಲೇ, ಸಂವಿಧಾನದ ಆಶಯಗಳನ್ನು ಮುಕ್ಕಾಗಿಸುತ್ತ ಬಾಬಾಸಾಹೇಬರನ್ನು ತಾತ್ವಿಕವಾಗಿ ಅಪ್ರಸ್ತುತವಾಗಿಸುವ ಪ್ರಯತ್ನಗಳು ನಡೆಯುತ್ತಿವೆ.

ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಹೆಸರಿನಲ್ಲಿ ಸಾಂವಿಧಾನಿಕ ವಿರೋಧಿ ಮನಃಸ್ಥಿತಿಯನ್ನು ರೂಪಿಸುವ ಪ್ರಯತ್ನಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಎಳೆಯರು ಹಾಗೂ ಯುವಜನರನ್ನು ಕೇಂದ್ರವನ್ನಾಗಿಸಿಕೊಂಡು ಸಂವಿಧಾನಪ್ರಜ್ಞೆ ರೂಪಿಸುವ ಪ್ರಯತ್ನ ತೀವ್ರಗೊಳ್ಳಬೇಕಾಗಿದೆ. ವರ್ತಮಾನದ ಬಹುತೇಕ ಬಿಕ್ಕಟ್ಟುಗಳಿಗೆ ಸಂವಿಧಾನ ನಮ್ಮ ಜೀವನವಿಧಾನ ಆಗದಿರುವುದೇ ಕಾರಣವಾಗಿದೆ. ಸರ್ಕಾರದ ಕಾರ್ಯನಿರ್ವಹಣೆಗೆ ಅಗತ್ಯವಾದ ನೀತಿನಿಯಮಗಳ ಸಂಕಲನದ ರೂಪದಲ್ಲಿ ಸಂವಿಧಾನವನ್ನು ನೋಡುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅದು ನಮ್ಮ ಅನುದಿನದ ಬದುಕಿಗೆ ಅಗತ್ಯವಾದ ಸಂಹಿತೆಯೂ ಹೌದು. ಸಂವಿಧಾನದ ಪಠ್ಯ ಜೀವನಪಠ್ಯವೂ ಆಗುವುದು, ಧರ್ಮ ಮತ್ತು ವಿಚಾರದ ಹೆಸರಿನಲ್ಲಿ ಅಸಹನೆಯಿಂದ ವರ್ತಿಸುವುದು ನಿಲ್ಲುವುದಕ್ಕೆ ಔಷಧಿಯಾಗಿದೆ.

ಮೊಬೈಲ್ಫೋನ್ ಸಾಕ್ಷರತೆಯ ಸಂದರ್ಭದಲ್ಲಿ ಜನಸಾಮಾನ್ಯರ ರಾಜಕೀಯಪ್ರಜ್ಞೆ ಪ್ರಖರಗೊಂಡಂತೆ ಕಾಣಿಸುತ್ತದೆ. ಆದರೆ, ಸಂವಿಧಾನದ ವಿವೇಕ ಒಳಗೊಳ್ಳದ ರಾಜಕೀಯಪ್ರಜ್ಞೆ ಅಪಾಯಕರ. ರಾಜಕೀಯಪ್ರಜ್ಞೆ ರೂಪುಗೊಳ್ಳಬೇಕಾದುದು ವಾಟ್ಸ್ಆ್ಯಪ್ ಅಥವಾ ಬೇರಾವುದೋ ಸಾಮಾಜಿಕ ಜಾಲತಾಣದಲ್ಲಿ ಅಲ್ಲ; ಅದು ನಮ್ಮದಾಗಬೇಕಾದುದು ಸಂವಿಧಾನದೊಂದಿಗಿನ ಅನುಸಂಧಾನದ ಅನುದಿನದ ಅನುಭವಮಂಟಪದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.