ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ವಾಸ್ತವ್ಯ: ‘ಶಂಖನಾದ’ದ ಮಾದರಿ

Last Updated 26 ಜೂನ್ 2019, 18:59 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬಹುದಾದ ಅರ್ಥಪೂರ್ಣ ಸಿನಿಮಾ ಉಮೇಶ ಕುಲಕರ್ಣಿ ನಿರ್ದೇಶನದ ‘ಶಂಖನಾದ’. ‘ಅತ್ಯುತ್ತಮ ಕನ್ನಡ ಚಿತ್ರ’ (1986) ರಾಷ್ಟ್ರಪ್ರಶಸ್ತಿ ಗೌರವಕ್ಕೆ ಪಾತ್ರವಾಗಿರುವ ಈ ಸಿನಿಮಾ, ಸಮಕಾಲೀನ ರಾಜಕಾರಣದ ಹಿನ್ನೆಲೆಯಲ್ಲಿ ಹೆಚ್ಚು ಪ್ರಸ್ತುತವೆನ್ನಿಸುತ್ತದೆ. ಹಿಂದುಳಿದವರು, ಮಹಿಳೆಯರ ಕೈಗೆ ಅಧಿಕಾರ ಕೊಡುವ ಅಗತ್ಯವನ್ನು ಪ್ರತಿಪಾದಿಸುವ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯಗಳ ಪ್ರಯೋಗಶಾಲೆಯ ಅಭಿವ್ಯಕ್ತಿಯಂತೆ ಕಾಣಿಸುತ್ತದೆ.

ಜನಸಾಮಾನ್ಯರ ಬಳಿಗೆ ಹೋಗಿ ಅವರ ಕಷ್ಟಸುಖ ಅರಿಯುವುದು ಹಾಗೂ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವುದು ಮುಖ್ಯಮಂತ್ರಿ ಅವರ ಗ್ರಾಮ ವಾಸ್ತವ್ಯದ ಉದ್ದೇಶ. ಕಾರ್ಯಕ್ರಮದ ಉದ್ದೇಶ, ಮುಖ್ಯಮಂತ್ರಿ ಅವರ ಕಾಳಜಿ ಮೆಚ್ಚತಕ್ಕಂತಹದ್ದು. ಆದರೆ, ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ ಅವರ ಒಂದು ದಿನದ ಗ್ರಾಮ ವಾಸ್ತವ್ಯಕ್ಕೆ ₹ 1 ಕೋಟಿಗೂ ಅಧಿಕ ವೆಚ್ಚವಾಗಿರುವುದು ಹಾಗೂ ಕಲಬುರ್ಗಿ ಜಿಲ್ಲೆಯ ಹೇರೂರ ಗ್ರಾಮದಲ್ಲಿ ಮಳೆಯಿಂದಾಗಿ ರದ್ದಾದ ಕಾರ್ಯಕ್ರಮದ ಸಿದ್ಧತೆಗಾಗಿ ₹ 50 ಲಕ್ಷ ಖರ್ಚಾಗಿರುವುದು ಇವತ್ತಿನ ರಾಜಕಾರಣ ಎಷ್ಟು ತುಟ್ಟಿಯಾಗಿದೆ ಎನ್ನುವುದಕ್ಕೆ ಉದಾಹರಣೆಗಳಾಗಿವೆ. ಮುಖ್ಯಮಂತ್ರಿ ಜನಸಾಮಾನ್ಯರ ಬಳಿಗೆ ಹೋಗಬೇಕೆನ್ನುವುದು ಸರಿ. ಆದರೆ, ಆ ಪ್ರಕ್ರಿಯೆ ತುಂಬಾ ದುಬಾರಿ ಎನ್ನುವುದನ್ನು ಅರಗಿಸಿಕೊಳ್ಳುವುದು ಕಷ್ಟ. ಉದ್ದೇಶಿತ ಕಾರ್ಯಕ್ರಮ ಉದಾತ್ತವಾಗಿದ್ದರಷ್ಟೇ ಸಾಲದು, ಮೂಲದಲ್ಲದು ಸರಳವಾಗಿರಬೇಕು ಎನ್ನುವುದು ನೈತಿಕ ರಾಜಕಾರಣದ ಬಹುಮುಖ್ಯವಾದ ಅಪೇಕ್ಷೆ. ಮುಖ್ಯಮಂತ್ರಿಯಾದರೂ ಸರಿ, ಗ್ರಾಮ ಪಂಚಾಯಿತಿ ಸದಸ್ಯನಾದರೂ ಸರಿ, ಜನರ ತೆರಿಗೆಯ ಹಣವನ್ನು ಬಳಸುವಾಗ ಮೈಯೆಲ್ಲ ಕಣ್ಣಾಗಿರಬೇಕು. ಖರ್ಚಾಗುವ ಪ್ರತಿ ರೂಪಾಯಿಗೂ ಉತ್ತರದಾಯಿತ್ವ ಹೊಂದಿರಬೇಕು. ಅಂಥ ಉತ್ತರದಾಯಿತ್ವದ ಕೊರತೆ ಪ್ರಸಕ್ತ ಗ್ರಾಮ ವಾಸ್ತವ್ಯದಲ್ಲಿ ಎದ್ದುಕಾಣುವಂತಿದೆ.

ಪ್ರಜಾಪ್ರತಿನಿಧಿ ಜನರ ಬಳಿಗೆ ಹೋಗುವ ಚಿತ್ರಣ ‘ಶಂಖನಾದ’ ಚಿತ್ರದಲ್ಲೂ ಇದೆ. ಕಥಾನಾಯಕ ದಾಸಯ್ಯ ಗ್ರಾಮ ಪಂಚಾಯಿತಿಯ ಕಾಗದಪತ್ರ, ಮೊಹರುಮುದ್ರೆಗಳನ್ನು ಜೋಳಿಗೆಯಲ್ಲಿ ಇಟ್ಟುಕೊಂಡು ಜನರ ಬಳಿಗೆ ಹೋಗುತ್ತಾನೆ. ದಾಸಯ್ಯನದು ಹೇಳಿಕೇಳಿ ಭಿಕ್ಷಾಟನೆಯ ವೃತ್ತಿ. ಭಿಕ್ಷೆ ಬೇಡುವಾಗ, ಆಯಾ ಮನೆಗಳವರ ಸುಖದುಃಖಗಳನ್ನು ಅರಿಯುತ್ತಾನೆ. ಅವರ ಕೆಲಸವೇನಾದರೂ ಇದ್ದರೆ ಸ್ಥಳದಲ್ಲಿಯೇ ಮಾಡಿಕೊಡುತ್ತಾನೆ. ಪ್ರಜಾಪ್ರತಿನಿಧಿಗಳು ಜನರ ಬಳಿಗೆ ಬರುವುದೆಂದರೆ ಹೀಗಲ್ಲವೇ?

ಬಡವನಿಗೆ ಎರಡು ಹೊತ್ತು ಊಟ, ಮೈ ತುಂಬ ಬಟ್ಟೆ ದೊರೆಯಬೇಕು. ಇರೋಕೆ ಒಂದು ಮನೆ ಬೇಕು – ಹೀಗೆ ಊರಿನ ಚೇರ್ಮನ್‌ ಆಗಿ ಆಶಿಸುವ ದಾಸಯ್ಯ, ‘ಎಲ್ಲರೂ ಮರ್ಯಾದೆಯಿಂದ ಬದುಕಬೇಕು’ ಎನ್ನುವ ಆರ್ಥಿಕ ಸ್ವಾವಲಂಬನೆಯ, ತರತಮಗಳಿಲ್ಲದ ಸಮಾಜದ ಕನಸು ಕಾಣುತ್ತಾನೆ. ಊರ ಹಿತದ ರಾಜಕಾರಣ ಹಿಂದಾಗಿ, ಜಾತಿಕಾರಣ ಮುಂದಾದಾಗ ‘ಹಿಂದುಳಿದ ಜಾತಿಯನ್ನು ತುಳಿವ ನೀಚಬುದ್ಧಿ ನಾಶವಾಗ್ಲಿ’ ಎಂದು ಸಾತ್ವಿಕ ಆಕ್ರೋಶ ವ್ಯಕ್ತಪಡಿಸುತ್ತಾನೆ. ದಾಸಯ್ಯನ ಈ ನಡವಳಿಕೆಯಲ್ಲಿ ಗಾಂಧಿಯೂ ಇದ್ದಾರೆ, ಅಂಬೇಡ್ಕರ್‌ ಕೂಡ ಇದ್ದಾರೆ. ದಲಿತರ ಕೈಗೆ ಅಧಿಕಾರ ದೊರೆಯುವ ಮೂಲಕ ಸಮ ಸಮಾಜದ ಅಂಬೇಡ್ಕರ್‌ ಮಾದರಿಯನ್ನು ಮುಂದಿಡುವ ‘ಶಂಖನಾದ’, ಆ ಆದರ್ಶಕ್ಕೆ ಧಕ್ಕೆಯುಂಟಾದಾಗ ಗಾಂಧೀಜಿಯ ಸತ್ಯಾಗ್ರಹದ ಮಾದರಿಯನ್ನೂ ಒಳಗೊಳ್ಳುತ್ತದೆ. ಅಧಿಕಾರ ದೊರೆತರೂ, ಅದನ್ನು ಚಲಾಯಿಸಲಿಕ್ಕೆ ಹೆಜ್ಜೆ ಹೆಜ್ಜೆಗೂ ಅಡಚಣೆ ಎದುರಾದರೂ, ಜೀವಕ್ಕೆ ಬೆದರಿಕೆ ಉಂಟಾದಾಗಲೂ ದಾಸಯ್ಯ ಧೃತಿಗೆಡುವುದಿಲ್ಲ. ತನ್ನನ್ನು ನಂಬಿ ವೋಟು ಹಾಕಿದ ಜನರ ವಿಶ್ವಾಸ ಉಳಿಸಿಕೊಳ್ಳುವುದಕ್ಕಾಗಿ ಎಂಥ ಸವಾಲಿಗೂ ಎದೆಯೊಡ್ಡುವ ನೈತಿಕ ಸ್ಥೈರ್ಯ ಮೆರೆಯುತ್ತಾನೆ.

ಮುರುಕು ಮನೆಯಲ್ಲಿ ವಾಸಿಸುತ್ತ, ತೇಪೆ ಹಾಕಿದ ಉಡುಪು ತೊಟ್ಟು, ಮನೆ ಮನೆಗೆ ಹೋಗಿ ಊರ ಕೆಲಸ ಮಾಡಿಕೊಡುವ ದಾಸಯ್ಯನ ಜನಸೇವೆಯ ಸಂಕಲ್ಪದೊಂದಿಗೆ ಸಮಕಾಲೀನ ರಾಜಕಾರಣಿಗಳ ನಡವಳಿಕೆಯನ್ನು ಪರಿಶೀಲಿಸಿದರೆ, ನಮಗೆ ಬೇಕಾದ ರಾಜಕಾರಣ ಯಾವ ಬಗೆಯದು ಎನ್ನುವುದು ಸ್ಪಷ್ಟವಾಗುತ್ತದೆ. ಚಂಡರಕಿಯಲ್ಲಿ ಮುಖ್ಯಮಂತ್ರಿ ಅವರು ಸಾಮಾನ್ಯ ಹಾಸಿನ ಮೇಲೆ ಮಲಗಿದ್ದು ಚಿತ್ರಸಮೇತ ಸುದ್ದಿಯಾಗಿತ್ತು. ಇದನ್ನು ಸರಳತೆ ಎನ್ನುವುದಾದರೆ, ಅಭಿವೃದ್ಧಿ ಕಾರ್ಯಗಳನ್ನು ಹೊರತುಪಡಿಸಿಯೇ ಒಂದು ದಿನದ ಗ್ರಾಮ ವಾಸ್ತವ್ಯದ ಆಯೋಜನೆಯ ಸಂಭ್ರಮಕ್ಕೆ ಒಂದು ಕೋಟಿ ರೂಪಾಯಿ ಖರ್ಚು ಮಾಡುವುದನ್ನು ಏನೆಂದು ಹೇಳಬೇಕು?

ಆಡಳಿತ ಪಕ್ಷದ್ದು ಈ ವೈಭವವಾದರೆ, ವಿರೋಧಪಕ್ಷಗಳ ಸಂಭ್ರಮವೇನೂ ಕಡಿಮೆಯಿಲ್ಲ. ರಾಜ್ಯ ಸರ್ಕಾರದ ಆಡಳಿತ ವೈಖರಿ ವಿರೋಧಿಸಿ ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಇತ್ತೀಚೆಗೆ ಬಿಜೆಪಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ, ವಿರೋಧ ಪಕ್ಷದ ನಾಯಕರಿಗೆ ಸತ್ಯಾಗ್ರಹ ನಡೆಸಲು ಹಂಸತೂಲಿಕಾ ತಲ್ಪದಂಥ ಹಾಸಿಗೆ ಬೇಕಾಯಿತು. ಗಾಂಧೀಜಿಯ ಸತ್ಯಾಗ್ರಹದ ಪರಿಕಲ್ಪನೆಯನ್ನೇ ಅಣಕಿಸುವಂತಹ ಆ ಚಿತ್ರಗಳೂ ಮಾಧ್ಯಮದಲ್ಲಿ ಪ್ರಕಟವಾದವು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ, ಹೋಟೆಲ್ ಕೊಠಡಿಯಂತಹ ಕೃತಕ ಗುಹೆಯಲ್ಲಿ ಪ್ರಧಾನಮಂತ್ರಿ ಧ್ಯಾನ ಮಾಡಿದ ಕ್ಷಣಗಳನ್ನು ಮಾಧ್ಯಮಗಳು ಜನರ‌ ಮುಂದಿಟ್ಟವು. ಈ ಎಲ್ಲ ಪ್ರಕರಣಗಳು ರಾಜಕಾರಣಿ ಹಾಗೂ ರಾಜಕಾರಣವು ಪ್ರದರ್ಶನದ ವಸ್ತುಗಳಾಗಿರುವುದನ್ನು ಸೂಚಿಸುವುದರ ಜೊತೆಗೆ, ಸಾರ್ವಜನಿಕ ಲಜ್ಜೆ ಮತ್ತು ಸರಳತೆಯು ಕಿಮ್ಮತ್ತು ಕಳೆದುಕೊಂಡಿರುವುದರ ನಿದರ್ಶನಗಳೂ ಆಗಿವೆ.

ದಲಿತ ವ್ಯಕ್ತಿ ಮುಖ್ಯಮಂತ್ರಿಯಾಗಬೇಕು ಎನ್ನುವುದು ರಾಜ್ಯ ರಾಜಕಾರಣದಲ್ಲಿ ಆಗಾಗ ಕೇಳಿಸುವ ಮಾತು. ದಲಿತರು– ಹಿಂದುಳಿದವರ ಕೈಗೆ ಅಧಿಕಾರ ದೊರೆಯಬೇಕು ಎನ್ನುವುದು ಈ ಮಾತಿನ ಆಶಯ. ಆದರೆ, ವರ್ತಮಾನದ ಜಾತಿ ಸಮೀಕರಣಗಳ ಲೆಕ್ಕಾಚಾರದಲ್ಲಿ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಕುರ್ಚಿ ಮರೀಚಿಕೆಯಾಗಿಯೇ ಕಾಣುತ್ತಿದೆ. ಈ ವ್ಯಂಗ್ಯದ ಹಿನ್ನೆಲೆಯಲ್ಲಿಯೂ ‘ಶಂಖನಾದ’ ಚಿತ್ರವನ್ನು ಗಮನಿಸಬಹುದು. ಹಿಂದುಳಿದವರ ಕೈಗೆ ಅಧಿಕಾರ ದೊರೆಯುವ ಅಗತ್ಯ ಹಾಗೂ ಹಾಗೆ ಅಧಿಕಾರ ದೊರೆತಾಗ ಬಲಿಷ್ಠ ಕೋಮಿನ ಜನ ಅಧಿಕಾರಕ್ಕಾಗಿ ನಿರ್ಲಜ್ಜರಾಗಿ ಕ್ರೂರಿಗಳಾಗಿ ವರ್ತಿಸುವುದನ್ನು ಸಿನಿಮಾ ವಿಡಂಬನಾತ್ಮಕವಾಗಿ ಕಟ್ಟಿಕೊಡುತ್ತದೆ. ಸಮಯದ ಗೊಂಬೆಯ ರೂಪದಲ್ಲಿ ದಾಸಯ್ಯ ಊರಿನ ಚೇರ್ಮನ್ನನಾದರೂ ಕಚೇರಿಯ ಬೀಗ ಅವನಿಗೆ ತೆರೆದುಕೊಳ್ಳುವುದಿಲ್ಲ. ದಾಸಯ್ಯ ನಿರಾಶನಾಗುವುದಿಲ್ಲ. ಕಚೇರಿಯ ಹಂಗನ್ನೇ ನಿರಾಕರಿಸಿ, ನೇರವಾಗಿ ಜನರ ಬಳಿಗೆ ಹೋಗುತ್ತಾನೆ. ಈ ನಡವಳಿಕೆ, ರಾಜಕಾರಣಿಗೆ ಕುರ್ಚಿ ಮುಖ್ಯವಲ್ಲ, ಸೇವಾ ಮನೋಭಾವ ಮುಖ್ಯ ಎನ್ನುವುದರ ಸೂಚನೆಯಾಗಿದೆ.

‘ಶಂಖನಾದ’ದ ಅಂತ್ಯ ಮತ್ತಷ್ಟು ಉಜ್ವಲವಾದುದು. ಹೊಸದಾಗಿ ನಡೆಯುವ ಪಂಚಾಯಿತಿ ಚುನಾವಣೆಯಲ್ಲಿ ದಾಸಯ್ಯನ ಮಧ್ಯಸ್ಥಿಕೆಯ ಮೂಲಕ ಊರಿನ ಬಸವಿ ಹೆಣ್ಣುಮಗಳು ಆರಿಸಿಬರುತ್ತಾಳೆ. ಆಕೆ ಚೇರ್ಮನ್‌, ದಾಸಯ್ಯ ವೈಸ್ ಚೇರ್ಮನ್ ಆಗುವುದು– ಮಾದರಿ ರಾಜಕಾರಣದಲ್ಲಿ ಮಹಿಳೆ ಹಾಗೂ ಹಿಂದುಳಿದವರ ಪ್ರಾತಿನಿಧ್ಯದ ಅಗತ್ಯವನ್ನು ಸಿನಿಮಾ ಸೂಚಿಸುತ್ತದೆ. ವಿಪರ್ಯಾಸವೆಂದರೆ, ಈ ಹೊತ್ತಿನ ರಾಜಕಾರಣದಲ್ಲಿ ಹಿಂದುಳಿದವರು ಹಾಗೂ ಮಹಿಳೆಯರು ಆಟಿಕೆಗಳಾಗಿ, ಮೆಟ್ಟಿಲುಗಳಾಗಿಯಷ್ಟೇ ಬಳಕೆಯಾಗುತ್ತಿದ್ದಾರೆ.

ರಾಜಕಾರಣ– ರಾಜಕಾರಣಿಗೆ ಬೇಕಿರುವುದು ಅಂತಃಕರಣ, ಸರಳತೆ, ಪ್ರಾಮಾಣಿಕತೆ, ಕರ್ತವ್ಯದ ಬದ್ಧತೆ ಎನ್ನುವುದನ್ನು ‘ಶಂಖನಾದ’ ಸಿನಿಮಾಪಠ್ಯ ಸಂಯಮದಿಂದ ನಮ್ಮ ಮುಂದಿಡುತ್ತದೆ. ವಿರೋಧಾಭಾಸ ನೋಡಿ: ಅಂತಃಕರಣದ ಜಾಗದಲ್ಲಿ ಅಹಂಕಾರ, ಸರಳತೆಯ ಜಾಗದಲ್ಲಿ ದೌಲತ್ತು, ಪ್ರಾಮಾಣಿಕತೆಗೆ ಪರ್ಯಾಯವಾಗಿ ಸಮಯಸಾಧಕತನ, ಕರ್ತವ್ಯದ ಬದ್ಧತೆಗೆ ಬದಲಾಗಿ ಅಧಿಕಾರ ಚಲಾವಣೆಯ ದರ್ಪ ಇಂದಿನ ರಾಜಕಾರಣದಲ್ಲಿ ಸ್ಥಾನ ಪಡೆದಿವೆ. ಇಂಥ ಸಂಕ್ರಮಣದ ಸಂದರ್ಭದಲ್ಲಿ ‘ಶಂಖನಾದ’ ಚಿತ್ರವು ಪ್ರಜೆಗಳಿಗೆ ಹಾಗೂ ಪ್ರಜಾ ಪ್ರತಿನಿಧಿಗಳಿಗೆ ಪಠ್ಯದಂತೆ ಮುಖ್ಯವೆನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT