ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎದೆಯ ಗಡಿಯಾರ ಕರಗುವ ಸಮಯ

ನಮ್ಮ ಕಾಲದ ಬದುಕಿನ ದ್ವಂದ್ವಗಳಿಗೆ ಕನ್ನಡಿ ಹಿಡಿಯುತ್ತದೆ ಡಾಲಿಯ ಈ ಕಲಾಕೃತಿ
Last Updated 19 ಜನವರಿ 2021, 19:30 IST
ಅಕ್ಷರ ಗಾತ್ರ

‘ದಿ ಪರ್ಸಿಸ್ಟೆನ್ಸ್‌ ಆಫ್‌ ಮೆಮೊರಿ’ (1931) ಸಾಲ್ವಡಾರ್‌ ಡಾಲಿಯ ವಿಶ್ವಪ್ರಸಿದ್ಧ ಪೇಂಟಿಂಗ್‌. ಸರ‍್ರಿಯಲಿಸಂನ ಪ್ರಸಿದ್ಧ ಕೃತಿಗಳಲ್ಲೊಂದಾದ ಈ ಪೇಂಟಿಂಗ್‌ ಪ್ರಸ್ತುತ ನ್ಯೂಯಾರ್ಕ್‌ನ ‘ಮ್ಯೂಸಿಯಂ ಆಫ್‌ ಮಾಡರ್ನ್‌ ಆರ್ಟ್‌’ನಲ್ಲಿದೆ. ಕರಗುತ್ತಿರುವ ಗಡಿಯಾರಗಳನ್ನು ಒಳಗೊಂಡ ಈ ಕಲಾಕೃತಿ, ನಮ್ಮ ಕಾಲದ ಬದುಕಿನ ದ್ವಂದ್ವಗಳನ್ನು ಅತ್ಯಂತ ಮಾರ್ಮಿಕವಾಗಿ ಅಭಿವ್ಯಕ್ತಿಸುತ್ತಿರುವಂತೆ ಕಾಣಿಸುತ್ತಿದೆ. ‘ನೆನಪುಗಳ ಹಟಮಾರಿತನ’ ಅಥವಾ ‘ನೆನಪುಗಳ ನಿರಂತರತೆ’ ಎಂದು ಡಾಲಿಯ ಕಲಾಕೃತಿಯನ್ನು ಕನ್ನಡದಲ್ಲಿ ಹೇಳಬಹುದೇನೊ? ಆದರೆ, ನಿರ್ದಿಷ್ಟ ವ್ಯಾಖ್ಯಾನವನ್ನು ಮೀರಿ ಬೆಳೆಯುವ ಕವಿತೆಯಂತೆ ಡಾಲಿಯ ಕರಗುತ್ತಿರುವ ಗಡಿಯಾರಗಳು ನಮ್ಮೊಳಗೂ ಬೆಳೆಯುತ್ತ ಕರಗುತ್ತ ಟಿಕ್‌ ಟಿಕ್‌ನ ಕ್ಷೀಣ ಸದ್ದುಗಳನ್ನು ಮಿಡುಕಿಸುವಂತಿವೆ.

ಡಾಲಿಯ ಕಲಾಕೃತಿಯಲ್ಲಿನ ಗಡಿಯಾರಗಳನ್ನು ಗಮನಿಸಿ. ತಂತಿಗೆ ನೇತು ಹಾಕಿದ ಬಟ್ಟೆಯಂತೆ ಕಾಣಿಸುವ ಒಂದು ಗಡಿಯಾರ, ಎಲೆಗಳಿಲ್ಲದ ಬೋಳುಕೊಂಬೆಗೆ ಮಗುಚಿಕೊಂಡಿದೆ. ಗಾಢನಿದ್ದೆಯಲ್ಲಿ ಮುಳುಗಿದ ಮನುಷ್ಯನೊಬ್ಬನನ್ನು ತೆಕ್ಕೆ ಹಾಕಿಕೊಂಡಂತೆ ಮತ್ತೊಂದು ಗಡಿಯಾರ ಕಾಣಿಸುತ್ತಿದೆ. ಮತ್ತೊಂದು ಗಡಿಯಾರ ಕಟ್ಟೆಗೆ ಮಗುಚಿಕೊಂಡಿದ್ದರೆ, ಕಿತ್ತಲೆ ಬಣ್ಣದ ಗಡಿಯಾರವನ್ನು ಮೃಷ್ಟಾನ್ನವೆನ್ನುವಂತೆ ಇರುವೆಗಳು ಮುಕುರಿಕೊಂಡಿವೆ. ಈ ಗಡಿಯಾರಗಳ ಹಿನ್ನೆಲೆಯಲ್ಲಿ ಇರುವುದು ಬಂಜರುಭೂಮಿ. ಮರಳುಗಾಡಿನ ದಿಗಂತದ ಸೂರ್ಯನ ತಾಪಕ್ಕೆ ಗಡಿಯಾರಗಳೆಲ್ಲ ಮೆದುವಾಗಿವೆ. ಆಕಾರವನ್ನು ಕಳೆದುಕೊಂಡಿರುವ ಈ ಗಡಿಯಾರಗಳೆಲ್ಲ ಏನನ್ನು ಸೂಚಿಸುತ್ತವೆ? ಕರಗುತ್ತಿರುವ ಗಡಿಯಾರಗಳನ್ನು ಚಿತ್ರಿಸುವಾಗ ಡಾಲಿಯ ಮನಸ್ಸಿನಲ್ಲೇನಿತ್ತು?

ಡಾಲಿಯ ಬಹುತೇಕ ಪೇಂಟಿಂಗ್‌ಗಳು ಆತ ಕಂಡ ಕನಸುಗಳ ಅಭಿವ್ಯಕ್ತಿಗಳು ಎಂದು ಹೇಳಲಾಗುತ್ತದೆ. ನಮ್ಮ ಸಮಯಪಾಲನೆಯ ಸಾಧನಗಳಾದ ಈ ಗಡಿಯಾರಗಳು ಪ್ರಾಚೀನ ಕಾಲಕ್ಕೆ ಸೇರಿದವು, ತೀರಾ ಹಳೆಯವು ಹಾಗೂ ದುರ್ಬಲವಾದವು ಎನ್ನುವ ಅರ್ಥಗಳನ್ನು ಕಲಾಮೀಮಾಂಸಕರು ಡಾಲಿಯ ಪೇಂಟಿಂಗ್‌ನಲ್ಲಿ ಕಂಡಿದ್ದಾರೆ.

ಡಾಲಿಯ ಗಡಿಯಾರಗಳ ಬಗೆಗೆ ಕಲಾ ವಯ್ಯಾಕರಣಿಗಳ ಒಕ್ಕಣೆಗಳೇನೇ ಇರಲಿ, ಜನಸಾಮಾನ್ಯರಾದ ನಮ್ಮ ಕಣ್ಣಿಗೆ ಈ ಗಡಿಯಾರಗಳು ವರ್ತಮಾನದ ಬದುಕಿನ ಪ್ರತಿಕೃತಿಗಳಂತೆ ಕಾಣಿಸಿದರೆ ಆಶ್ಚರ್ಯವೇನಿಲ್ಲ. ಕಾಲದ ಕ್ಷಣಿಕತೆಯನ್ನು ಗಾಢವಾಗಿಸಲಿಕ್ಕೆ ಕೊರೊನಾ ವೈರಾಣುವಿಗಿಂತ ಬೇರೆ ರೂಪಕ ಬೇಕೇನು? ಡಾಲಿಯೇನೊ ತನ್ನ ಸ್ವಪ್ನಗಳನ್ನು ಕಲಾಕೃತಿಗಳಾಗಿಸಿದ. ನಮಗೋ ಕನಸು ಕಾಣುವ ತೊಂದರೆಯೇ ಇಲ್ಲ. ನಮ್ಮ ದೈನಿಕದ ವಾಸ್ತವವು ಡಾಲಿಯ ಸ್ವಪ್ನಗಳಿಗಿಂತ ಹಲವು ಪಟ್ಟು ದಾರುಣ.

‘ಕರಗುವಿಕೆ’ಯ ಪರಿಕಲ್ಪನೆಯನ್ನೇ ಉದಾಹರಣೆ ಯಾಗಿ ನೋಡೋಣ. ನಮ್ಮ ಪೂರ್ವಸೂರಿಗಳು ಯಾವುದೆಲ್ಲ ಕರಗುವುದಿಲ್ಲ ಎಂದು ಭಾವಿಸಿದ್ದರೋ ಅದೆಲ್ಲವೂ ಕರಗುತ್ತಿರುವ ಸಂದರ್ಭ ಇಂದಿನದು, ಕರಗಿಸುತ್ತಿರುವ ಸಾಧನೆ ನಮ್ಮದು. ‘ಕಲ್ಲು ಕರಗುವ ಸಮಯ’ ಎನ್ನುವ ಕವಿಸಮಯವೀಗ ಕ್ಲೀಷೆ. ಕಲ್ಲು ಕರಗುವುದೇನು ಮಹಾ, ಬೆಟ್ಟಗುಡ್ಡಗಳನ್ನೇ ಕರಗಿಸುತ್ತಿದ್ದೇವೆ. ಅಕ್ಷಯಪಾತ್ರೆಗಳಂತಿದ್ದ ಕಾಡುಗಳನ್ನು ಕರಗಿಸುತ್ತಿದ್ದೇವೆ. ಅಮೆಜಾನ್‌ನಂಥ ಕಗ್ಗಾಡನ್ನೇ ತುಣುಕು ತುಣುಕಾಗಿ ಕರಗಿಸುತ್ತಿದ್ದೇವೆ. ನದಿಗಳನ್ನು, ಸಾಗರಗಳನ್ನು ನಮ್ಮ ಕೈಲಾದಷ್ಟುಮಟ್ಟಿಗೆ ಆಪೋಶನ ತೆಗೆದುಕೊಳ್ಳುತ್ತಿದ್ದೇವೆ. ಈ ಕಬಂಧಹಸ್ತಗಳು, ನೆಲದಿಂದ ಮುಗಿಲಿನತ್ತಲೂ ಚಾಚಿ ಓಜೋನ್‌ ಗೋಡೆಗಳಲ್ಲೂ ಹಸ್ತಕ್ಷೇಪ ನಡೆಸಿ ಮೆದುವಾಗಿಸಿವೆ. ‘ಭಸ್ಮಾಸುರ ಹಸ್ತ’ ಎನ್ನುವ ಪುರಾಣ ಪಾತ್ರ ಅದೆಷ್ಟು ಸಮಕಾಲೀನ ಅಂದರೆ, ನಾವೆಲ್ಲ ಒಂದಲ್ಲಾ ಒಂದು ರೂಪದಲ್ಲಿ ಭಸ್ಮಾಸುರನ ವಾರಸುದಾರರೇ ಆಗಿ ಕರಗಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದೇವೆ.

ಕರಗಿಸುವಿಕೆಯ ವಿದ್ಯೆ ಕರತಲಾಮಲಕ ಆಗಿರುವ ಸಂದರ್ಭದಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ: ಈ ಕಾಲದಲ್ಲಿ ನಮ್ಮಿಂದ ಕರಗಿಸಲಾಗದ ವಸ್ತು ಯಾವುದಾದರೂ ಇದೆಯೇ? ‘ಇಲ್ಲ’ ಎಂದು ನಾವು ಭುಜ ತಟ್ಟಿಕೊಳ್ಳುವಂತಿಲ್ಲ. ಕರಗಲಾರದ್ದೂ ಇದೆ. ಅದು ನಮ್ಮ ಮನಸ್ಸು, ಅಂತಃಕರಣ, ಹೃದಯವಂತಿಕೆ.

ನಮ್ಮ ಹಿರಿಯರ ನಂಬಿಕೆಗಳು ಹೇಗೆ ಕರಗಿಹೋಗಿವೆಯೆಂದರೆ, ಯಾವುದು ಕರಗಲಿಕ್ಕೆ ಸಾಧ್ಯವಿಲ್ಲ ಎಂದವರು ನಂಬಿದ್ದರೋ ಅವೆಲ್ಲವೂ ಕಾಠಿಣ್ಯ ಕಳೆದುಕೊಂಡು ಮೆದುವಾಗುತ್ತಿವೆ, ಕರಗಿಹೋಗುತ್ತಿವೆ. ಕೆಲವಂತೂ ಕರಗಿ ಕರಗಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಈ ಬದಲಾವಣೆಯ ಇನ್ನೊಂದು ತುದಿಯಲ್ಲಿ, ಯಾವುದು ಅತ್ಯಂತ ಮೃದು–ಸೂಕ್ಷ್ಮ ಎಂದು ಹಿರಿಯರು ನಂಬಿದ್ದರೋ ಅಂಥ ಸಂಗತಿಗಳೆಲ್ಲ ಊಹಾತೀತವಾಗಿ ಕಠಿಣವಾಗುತ್ತಿವೆ. ಆತ್ಮಸಾಕ್ಷಿ, ಅಂತಃಕರಣ, ಮಾನವೀಯತೆ, ಮಾತೃತ್ವ – ಇವೆಲ್ಲವೂ ನಮ್ಮ ಹಿರಿಯರ ಪಾಲಿಗೆ ಅತ್ಯಂತ ಆರ್ದ್ರವಾದ ಹಾಗೂ ಬದುಕಿನ ಚೆಲುವನ್ನು ಹೆಚ್ಚಿಸುವ ಸಂಗತಿಗಳಾಗಿದ್ದವು. ಕಾಲಚಕ್ರದಲ್ಲಿ ಆ ಆರ್ದ್ರತೆಯೆಲ್ಲ ಕಾಲವಶವಾದಂತಿದೆ. ಉದಾಹರಣೆ ಬೇಕೆ? ದೆಹಲಿಯ ಗಡಿಯಲ್ಲಿ ಬೀಡುಬಿಟ್ಟಿರುವ ರೈತರನ್ನು ನೆನಪಿಸಿಕೊಳ್ಳಿ. ಸರ್ಕಾರದ ಹೊಸ ಕೃಷಿ ನೀತಿಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಗದಗುಟ್ಟಿಸುವ ಚಳಿಗೆ ರೈತರ ಪ್ರತಿಭಟನೆಯ ಕಾವನ್ನು ಕರಗಿಸುವುದು ಸಾಧ್ಯವಾಗಿಲ್ಲ. ಬದಲಾಗಿ, ಒಳಗಣ ಕಿಚ್ಚೇ ಹೊರಗಣ ಚಳಿಯನ್ನು ಕರಗಿಸುತ್ತಿರಬೇಕು. ರೈತರ ಪ್ರತಿಭಟನೆ ಅಪೂರ್ವ ಸಂಯಮದೊಂದಿಗೆ ‘ಸತ್ಯಾಗ್ರಹ’ದ ರೂಪು ಪಡೆದುಕೊಂಡಿರುವುದು ಈ ಕಾಲಕ್ಕೆ ತೀರಾ ಅಪರೂಪದ ಸಂಗತಿ. ಈ ಪ್ರತಿಭಟನೆಗೆ ವ್ಯಕ್ತವಾಗುತ್ತಿರುವ ಸ್ಪಂದನವನ್ನು, ನಮ್ಮ ಕಾಲದ ಕರಗುವಿಕೆಗೆ ಅತೀತವಾದ ಮನಃಸ್ಥಿತಿಯ ರೂಪಕವನ್ನಾಗಿ ನೋಡಬಹುದು.

ಸಾವಿರಾರು ರೈತರು ರಾಜಧಾನಿಯ ಸರಹದ್ದುಗಳಲ್ಲಿ ಬೀಡುಬಿಟ್ಟಿರುವಾಗ, ನಗರದ ಸೌಧಗಳಲ್ಲಿ ಬೆಚ್ಚಗಿರುವವರ ಹೃದಯಗಳು ಕರಗಬೇಕಿತ್ತು. ಅಧಿಕಾರದ ಕೇಂದ್ರದಲ್ಲಿರುವ ವ್ಯಕ್ತಿ ಖುದ್ದು ಓಡಿಬಂದು ರೈತರ ಮಾತುಗಳನ್ನು ಆಲಿಸಬೇಕಿತ್ತು. ಪ್ರತಿಭಟನೆಯ ಸ್ಥಳದಲ್ಲಿ ಸಾವುನೋವುಗಳು ಸಂಭವಿಸಿದಾಗಲಾದರೂ ರೈತರ ಬಳಿಗೆ ಪ್ರಧಾನಿ ಖುದ್ದು ಬರಬೇಕಾಗಿತ್ತು. ಇದಾವುದೂ ಆಗಿಲ್ಲ. ಯಾಕೆ ಹೀಗೆ? ದೆಹಲಿಯ ಚಳಿ ಅಧಿಕಾರದಲ್ಲಿ ಇರುವವರ ಹೃದಯಗಳನ್ನು ಮರಗಟ್ಟಿಸಿರಬಹುದೇ? ಇರಲಿಕ್ಕಿಲ್ಲ. ಹೃದಯಗಳ ಆರ್ದ್ರತೆಯನ್ನು ಅಧಿಕಾರವೇ ಕಸಿದುಕೊಂಡಿರಬೇಕು. ಇಲ್ಲದೇ ಹೋಗಿದ್ದರೆ, ಪ್ರತಿಭಟನೆಯಲ್ಲಿ ತೊಡಗಿಕೊಂಡಿರುವ ರೈತರು ನಕ್ಸಲರಂತೆ, ಪ್ರತ್ಯೇಕತಾವಾದಿಗಳಂತೆ ಕಾಣುತ್ತಿದ್ದರೇ?

ಕವಿ ಬೇಂದ್ರೆ ತಮ್ಮ ‘ನರಬಲಿ’ ಕವಿತೆಯಲ್ಲಿ ಉದ್ಗರಿಸುತ್ತಾರೆ: ಮುಕ್ಕಣ್ಣನ ಆ ಮೂರೂ ಕಣ್ಣುಗಳು / ಕುರುಡೇ ಕುರುಡೇ? / ಭೂ–ಶ್ರೀಪತಿಯಾ ನಾಲ್ಕೂ ಕೈಗಳು / ಮೊಂಡೇ ಮೊಂಡೇ? / ವೇದವುಸಿರಿದವನ ನಾಲ್ಕೂ ಮುಖಗಳು / ಮೂಕೇ ಮೂಕೇ. ಕವಿಯ ಪ್ರಶ್ನೆಗಳನ್ನು, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರತಿನಿಧಿಗಳಿಗೆ ಕೇಳೋಣವೆಂದರೆ, ಅವರು ಕುರುಡು ಕಿವುಡಾಗಿರುವುದಷ್ಟೇ ಅಲ್ಲ, ಪಾಷಾಣ ಹೃದಯಿಗಳೂ ಆಗಿದ್ದಾರೆ.

ಕರಗದಿರುವ ಮನಸ್ಸುಗಳನ್ನು ನೋಡಿ ಕಾಲವೇ (ಗಡಿಯಾರವೇ) ಕರಗತೊಡಗುವುದು ಈ ಯುಗದ ಲಕ್ಷಣವಿದ್ದರೂ ಇದ್ದೀತು. ಡಾಲಿಯ ಕಲಾಕೃತಿಗಳನ್ನು ನೋಡಿ: ದುಃಸ್ವಪ್ನಗಳೇ ಬಿಂಬಗಳಾಗಿ ಮೂಡಿದ್ದರೂ ಅವು ನೋಡುಗರನ್ನು ಬೆಚ್ಚಿಬೀಳಿಸುವುದಿಲ್ಲ. ಸಹೃದಯರನ್ನು ಬೆಚ್ಚಿಬೀಳಿಸುವ ಕಾಲ ಕರಗುವ ಕಲ್ಪನೆ, ಕೆಲವರ ಕಣ್ಣಿಗೆ ಮೋಹಕವಾಗಿ ಕಾಣಬಹುದು. ‘ಬೆರಳುಗಳ ನಡುವೆ ಕಾಲ ಸೋರಿಹೋಗುತ್ತಿದೆ. ಸಮಯವನ್ನು ವ್ಯರ್ಥ ಮಾಡಬೇಡಿ ಹುಚ್ಚಪ್ಪಗಳಿರಾ’ ಎಂದು ಡಾಲಿಯ ಕರಗುತ್ತಿರುವ ಗಡಿಯಾರಗಳನ್ನು ಕೆಲವರು ಅರ್ಥೈಸಬಹುದು. ರೈತರು ಹಾಗೂ ಮಹಿಳೆಯರ ಬಗ್ಗೆ ಭಾರತೀಯ ಸಂಸ್ಕೃತಿಗೆ ಅಪಾರ ಗೌರವ. ರೈತರು, ಹೆಣ್ಣುಮಕ್ಕಳು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಜನಸಾಮಾನ್ಯರ ಸಂಕಷ್ಟಗಳೆಲ್ಲ ರಾಜಕಾರಣದ ನಶೆಯ ಕಣ್ಣುಗಳಿಗೆ ಕ್ಷುಲ್ಲಕವಾಗಿ ಕಾಣಿಸುತ್ತಿರುವಾಗ, ಕಲಾಕೃತಿಯ ಅಂತರಂಗದ ತಲ್ಲಣಗಳು ಮೋಹಕವಾಗಿ ಕಾಣಿಸಿದರೆ ಆಶ್ಚರ್ಯವೇನು?

ಮಕ್ಕಳು ಅತ್ತಾಗ ಅಮ್ಮ ಹಾಲೂಡಿಸುವುದು ಲೋಕಧರ್ಮವಷ್ಟೆ. ಈ ಹೊತ್ತಿನ ತಾಯ್ತನ ಹೇಗಿದೆಯೆಂದರೆ, ಮಗು ಅಳುತ್ತಲೇ ಇದೆ. ಅಮ್ಮ ತನ್ನ ಪಾಡಿಗೆ ಯಾವುದೋ ದಂದುಗದಲ್ಲಿ ಮುಳುಗಿದ್ದಾಳೆ. ಕೆಲವು ಅಮ್ಮಂದಿರಂತೂ ಮಗು ಎಲ್ಲೋ ಅಳುತ್ತಿದೆಯೆಂದು ಭಾವಿಸಿ, ಶೃಂಗಾರದಲ್ಲಿ ಮೈಮರೆತಿರುವಂತಿದೆ. ಕಾಲ ಬದಲಾಗಿದೆ ಎಂದು ಹೇಳಿದರೆ, ಅದು ‘ಕಾಲ’ಕ್ಕೆ ಹತ್ತಿರವಾದವರ ಗೊಣಗಾಟ ಎಂದು ಈಗ ಹೇಳುವಂತಿಲ್ಲ. ಏಕೆಂದರೆ, ನಾವು ನೋಡುತ್ತಿರುವುದು ಬದಲಾಗುತ್ತಿರುವ ಕಾಲವನ್ನಲ್ಲ, ಕರಗುತ್ತಿರುವ ಕಾಲವನ್ನು. ಕರಗುತ್ತಿರುವ ಕಾಲದೊಂದಿಗೆ ಮನುಷ್ಯತ್ವವೂ ಕರಗುತ್ತಿರುವಂತಿದೆ. ಹೀಗಾದರೆ ಉಳಿವುದೇನು? ಮನುಷ್ಯರೂಪಿ ಯಂತ್ರಗಳಷ್ಟೆ. ಗಡಿಯಾರವೊಂದು ಮನುಷ್ಯನನ್ನು ಆವರಿಸಿಕೊಂಡಿರುವ ಡಾಲಿಯ ಕಲಾಕೃತಿ, ಅಂತಃಕರಣದ ಅಂತರ್ಜಲ ಬರಿದಾಗಿರುವ ಮನುಷ್ಯನನ್ನೂ ಸೂಚಿಸುತ್ತಿರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT