ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಸಾಲೆ | ವಿಲಕ್ಷಣ ಕಾಲಕ್ಕೊಂದು ‘ವಿರಾಗಿ’ ಪಠ್ಯ

ಸಮಾಜದ ಸಂಕಟಗಳಿಗೆ ಸ್ಪಂದಿಸುವಲ್ಲಿ ಸನ್ಯಾಸದ ಸಾರ್ಥಕತೆ ಎನ್ನುವ ಜೀವಪರ ತತ್ವ
Last Updated 9 ಜನವರಿ 2023, 19:45 IST
ಅಕ್ಷರ ಗಾತ್ರ

ಧಾರ್ಮಿಕ ಸಂಸ್ಥೆಗಳು ಹಾಗೂ ಸನ್ಯಾಸಿಗಳು ಹೇಗಿರ ಬಾರದು ಎನ್ನುವುದಕ್ಕೆ ನಿದರ್ಶನಗಳನ್ನು ಒದಗಿಸಲು ಈ ಹೊತ್ತಿನ ಮಠಗಳು ಹಾಗೂ ಮಠಾಧೀಶರು ಪೈಪೋಟಿ ನಡೆಸುತ್ತಿರುವ ಸಂದರ್ಭದಲ್ಲಿ, ಮಠ–ಮಠಾಧೀಶರು ಹೇಗಿರಬೇಕು ಎನ್ನುವುದರ ಮಾದರಿಯೊಂದನ್ನು ಬಿ.ಎಸ್‌. ಲಿಂಗದೇವರು ನಿರ್ದೇಶನದ ‘ವಿರಾಟಪುರ ವಿರಾಗಿ’ ಸಿನಿಮಾ ನೆನಪಿಸುತ್ತಿದೆ. ಹಾನಗಲ್‌ನ ವಿರಕ್ತ ಮಠದ ಕುಮಾರಸ್ವಾಮಿಗಳ ಜೀವನವೃತ್ತಾಂತದ ನಿರೂಪಣೆಯಾದ ಈ ಸಿನಿಮಾ ಕಥನ, ಭಾರತದ ಅನನ್ಯತೆಯಾದ ಬಹುತ್ವದ ದರ್ಶನವನ್ನೂ, ಬಸವ, ಗಾಂಧಿ ಮಾರ್ಗಗಳಲ್ಲಿನ ನಡಿಗೆಯನ್ನೂ ಪ್ರತಿಪಾದಿಸುತ್ತದೆ. ವರ್ತಮಾನದ ಬಹುತೇಕ ಸ್ವಾಮೀಜಿಗಳು ಧರ್ಮರಕ್ಷಣೆಯ ಯೋಧರಂತೆ ವೀರಾವೇಶದ ಪೋಷಾಕು ತೊಟ್ಟುಕೊಂಡಿರುವಾಗ, ಜನಸಾಮಾನ್ಯರ ಕಷ್ಟಗಳಿಗೆ ಮರುಗುವ ಹಾನಗಲ್‌ ಸ್ವಾಮೀಜಿಯ ಕಥನ ಆಪ್ತವೂ ಹೌದು, ಈ ಹೊತ್ತಿಗೆ ಅಗತ್ಯವಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪಠ್ಯವೂ ಹೌದು.

ಕುಮಾರಸ್ವಾಮಿ ಅವರ ಬದುಕಿನ ಕಥನ ಗಾಂಧೀಜಿ ಅವರನ್ನು ನೆನಪಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿನ ಪ್ಲೇಗ್‌ ಪೀಡಿತರ ಬಿಡಾರಗಳಲ್ಲಿ, ಗಾಂಧೀಜಿ ಜೀವದ ಹಂಗು ತೊರೆದು ರೋಗಿಗಳ ಶುಶ್ರೂಷೆ ಮಾಡುತ್ತಾರೆ. ಅದೇರೀತಿ, ಊರಿನಲ್ಲಿ ಕಾಲರಾ ಕಾಣಿಸಿಕೊಂಡಾಗ ಕುಮಾರಸ್ವಾಮಿಗಳು ಬಾಧೆಗೊಳಗಾದವರಿಗೆ ಚಿಕಿತ್ಸೆ ನೀಡುತ್ತಾರೆ. ಗಾಂಧಿಯವರ ಆಶ್ರಮ ಎಲ್ಲ ವರ್ಗದವರಿಗೂ ಮುಕ್ತವಾಗಿದ್ದಂತೆ, ಕುಮಾರಸ್ವಾಮಿ ಅವರು ಕೂಡ ತಮ್ಮ ಮಠವನ್ನು ಎಲ್ಲರಿಗೂ ಮುಕ್ತವಾಗಿರಿಸಿದ್ದರು. ಗಾಂಧಿಯವರ ಆಶ್ರಮ ಸಮ ಸಮಾಜದ ಪ್ರಯೋಗಶಾಲೆ ಆಗಿದ್ದಂತೆ, ಕುಮಾರಸ್ವಾಮಿಗಳ ಮಠ ಹಾಗೂ ವಿದ್ಯಾಮಂದಿರಗಳು ಸಮಾನ ಅವಕಾಶಗಳನ್ನು ಒದಗಿಸುವ ಹಂಬಲ ಹೊಂದಿದ್ದವು.

ಗಾಂಧೀಜಿ ತಮ್ಮ ಆಶ್ರಮದಲ್ಲಿ ಅಸ್ಪೃಶ್ಯರಿಗೆ ಆಶ್ರಯ ಕಲ್ಪಿಸಿದ್ದನ್ನು ವಿರೋಧಿಸಿ, ಅವರ ಆಶ್ರಮಕ್ಕೆ ಬರುತ್ತಿದ್ದ ನೆರವು ನಿಂತುಹೋಗುತ್ತದೆ. ಆಶ್ರಮ ಮುಚ್ಚುವ ಸಂದರ್ಭ ತಲೆದೋರಿ, ಅಪರಿಚಿತ ವ್ಯಕ್ತಿಯೊಬ್ಬರು ಉದಾರ ನೆರವು ನೀಡಿ ಗಾಂಧಿಯವರನ್ನು ಧರ್ಮಸಂಕಟದಿಂದ ಪಾರುಮಾಡುತ್ತಾರೆ. ಅಂತಹುದೇ ಸನ್ನಿವೇಶ ಸಿನಿಮಾದಲ್ಲೂ ಇದೆ. ಭೀಕರ ಬರ ತಲೆದೋರಿ, ಮಠದಲ್ಲಿನ ಸಂಪನ್ಮೂಲಗಳು ಬರಿದಾಗಿ, ‘ಮುಂದೇನು?’ ಎನ್ನುವ ಪ್ರಶ್ನೆಗೆ ಉತ್ತರ ಕಾಣದೆ ಸ್ವಾಮೀಜಿ ತೊಳಲಾಡುತ್ತಿರುವಾಗ, ವ್ಯಕ್ತಿಯೊಬ್ಬ ಆರ್ಥಿಕ ನೆರವು ನೀಡುತ್ತಾನೆ. ಗಾಂಧಿ ಆಶ್ರಮದೊಂದಿಗಿನ ಹೋಲಿಕೆಯಾಚೆಗೂ ಈ ಪ್ರಸಂಗಕ್ಕೆ ಮಹತ್ವವಿದೆ. ಬರದ ಸಂದರ್ಭದಲ್ಲಿ ಮಠದ ದಾಸೋಹಕ್ಕೆ ನೆರವಾಗಲೆಂದು ಆ ವ್ಯಕ್ತಿ ತನ್ನ ಪಿತ್ರಾರ್ಜಿತ ಏಳು ಎಕರೆ ಭೂಮಿಯನ್ನು ಮಾರಾಟ ಮಾಡಿರುತ್ತಾನೆ. ಮಠಕ್ಕೆ ಒಳ್ಳೆಯ ದಿನಗಳು ಮರಳಿದ ನಂತರ, ಆ ವ್ಯಕ್ತಿಯ ಮನೆಗೆ ಹೋಗಿ ಹಣ ಹಿಂದಿರುಗಿಸುವ ಸ್ವಾಮೀಜಿ, ಮಾರಾಟ ಮಾಡಿದ ಭೂಮಿಯನ್ನು ಮರಳಿ ಖರೀದಿಸುವಂತೆ ಹೇಳುತ್ತಾರೆ. ಹಾನಗಲ್‌ ಮಠದ ಪರಂಪರೆ ಎಷ್ಟು ಘನವಾದದ್ದು ಎಂದು ಹೇಳುವುದಕ್ಕೆ ಇದೊಂದು ಸನ್ನಿವೇಶ ಸಾಕು. ಈ ಸನ್ನಿವೇಶ, ಕುಮಾರಸ್ವಾಮಿಗಳ ವ್ಯಕ್ತಿತ್ವದ ಚೆಲುವನ್ನಷ್ಟೇ ಕಾಣಿಸುವುದಿಲ್ಲ; ಇಂದಿನ ಸರ್ಕಾರಿ ಪೋಷಿತ ಮಠಗಳ ದಾಹಕ್ಕೂ ಕನ್ನಡಿ ಹಿಡಿಯುತ್ತದೆ.

ಸ್ವಾಮೀಜಿಯ ಜೀವನವೃತ್ತಾಂತವಾಗಿದ್ದರೂ ಲಿಂಗದೇವರು ಅವರ ಸಿನಿಮಾ ಯಾವ ಸಂದರ್ಭದಲ್ಲೂ ಪವಾಡದ ಮೊರೆಹೋಗುವುದಿಲ್ಲ. ಕುಮಾರಸ್ವಾಮಿ ಅವರನ್ನು ದೈವವನ್ನಾಗಿಸದೆ, ಮನುಷ್ಯಮಾತ್ರರನ್ನಾಗಿ ಚಿತ್ರಿಸಿರುವುದು ಸಿನಿಮಾದ ಅಗ್ಗಳಿಕೆ. ಚಿಕಿತ್ಸೆಯ ನಂತರವೂ ಕಾಲರಾ ತೀವ್ರತೆಯಿಂದ ಜನ ಸಾಯುವಾಗ ಸ್ವಾಮೀಜಿ ಸಂಕಟ‍ಪಡುತ್ತಾರೆ. ಬರದ ದವಡೆಗೆ ಸಿಲುಕಿ ಜನ ಹಸಿವಿನಿಂದ ಒದ್ದಾಡುವಾಗ, ಜಾನುವಾರುಗಳು ನೀರು–ಮೇವಿಲ್ಲದೆ ಸಾಯುವಾಗ ಅಸಹಾಯಕರಾಗಿ ಚಡ ಪಡಿಸುತ್ತಾರೆ. ಹೀಗೆ ನೋವಿಗೆ ಮಿಡಿಯುವ ಭಾವತೀವ್ರತೆ ಮತ್ತು ನೋವನ್ನು ಪರಿಹರಿಸಲಾಗದ ಅಸಹಾಯಕತೆ, ವಿರಾಗದ ವ್ಯಾಖ್ಯಾನವನ್ನೇ ಬದಲಿಸಲು ಒತ್ತಾಯಿಸುವಂತಿದೆ. ವಿರಾಗವೆಂದರೆ ಸಮಾಜದ ತವಕತಲ್ಲಣಗಳಿಗೆ ಕುರುಡಾಗುವುದಲ್ಲ; ಸಮಾಜದ ಸಂಕಟಗಳಿಗೆ ಸ್ಪಂದಿಸುವಲ್ಲಿ ಸನ್ಯಾಸದ ಸಾರ್ಥಕತೆಯಿದೆ ಎನ್ನುವುದನ್ನು ಕುಮಾರಸ್ವಾಮಿಗಳು ತಮ್ಮ ಬದುಕಿನುದ್ದಕ್ಕೂ ಸಾಧಿಸಿ ತೋರಿಸಿದವರು. ‘ಮನುಷ್ಯ ಮಹಾದೇವ ಆಗೋದು ಬೇಡ. ಮನುಷ್ಯನಾಗಿದ್ದರೆ ಸಾಕು. ಭೂಮಿ ಕೈಲಾಸ ಆಗೋದು ಬೇಡ. ಕಲ್ಯಾಣ ಆದರೆ ಸಾಕು’ ಎನ್ನುವ ಮಾತುಗಳ ಹಿನ್ನೆಲೆಯಲ್ಲಿರುವುದು ಒಳಿತನ್ನು ಕೇಂದ್ರವಾಗಿಸಿಕೊಂಡ ಅಪ್ಪಟ ಕರ್ಮಸಿದ್ಧಾಂತ.

ಸ್ವಾಮೀಜಿಯೊಬ್ಬರ ಜೀವನವೃತ್ತಾಂತವನ್ನಾಗಿಯಷ್ಟೇ ನೋಡಿದರೆ, ‘ವಿರಾಟಪುರ ವಿರಾಗಿ’ ಸಿನಿಮಾ ಅಷ್ಟೇನೂ ಮಹತ್ವದ್ದನ್ನಿಸುವುದಿಲ್ಲ. ನೂರೈವತ್ತು ವರ್ಷಗಳ ಹಿಂದೆ ಜೀವಿಸಿದ್ದ ಸ್ವಾಮೀಜಿಯ ಬದುಕಿನ ಸಂಗತಿಗಳಲ್ಲಿ ನಮ್ಮ ಕಾಲದ ವಾಸ್ತವಗಳಿಗೆ ಪ್ರತಿಕ್ರಿಯೆ ಇರುವ ಕಾರಣದಿಂದಲೇ ಈ ಸಿನಿಮಾ ಮಹತ್ವ ಪಡೆದು ಕೊಳ್ಳುತ್ತದೆ. ಕಥಾನಾಯಕನ ಬೆನ್ನಿಗೆ ಸಮುದಾಯದ ಪ್ರಭಾವಳಿಯಿದ್ದರೂ, ಅಂತಿಮವಾಗಿ ಈ ಸಿನಿಮಾ ಪ್ರತಿಪಾದಿಸುವುದು ವಿಶ್ವಮಾನವ ಸಂದೇಶವನ್ನು.

ಕುಮಾರಸ್ವಾಮಿಗಳ ಜೀವನಮಾರ್ಗ ಮೂರು ಕಾರಣಗಳಿಂದಾಗಿ ಎಲ್ಲ ಕಾಲಕ್ಕೂ ಮಾದರಿಯಾದುದು. ಜನರನ್ನು ತಲುಪಲು ಸ್ವಾಮೀಜಿ ಆರಿಸಿಕೊಂಡ ಅನ್ನ ಹಾಗೂ ಅರಿವಿನ ದಾರಿ, ಮೊದಲೆರಡು ಕಾರಣಗಳು. ಮೂರನೆಯದು, ತಾನು ನೆಚ್ಚಿದ ದಾರಿಗಳಲ್ಲಿ ಸಾಗಲು ಅನುಸರಿಸಿದ ಜಾತ್ಯತೀತ ಮನೋಧರ್ಮ. ಹೊಟ್ಟೆಯ ಹಸಿವು ಹಾಗೂ ಮನಸಿನ ಹಸಿವು – ಎರಡನ್ನೂ ತಣಿಸುವ ನಿಟ್ಟಿನಲ್ಲಿ ಸ್ವಾಮೀಜಿ ತಮ್ಮ ಮಠವನ್ನು ಸಜ್ಜುಗೊಳಿಸಿದ್ದರು. ಹಸಿದು ಬಂದವರ ಜಾತಿ ಕೇಳದೆ ಅನ್ನದಾಸೋಹ ನಡೆಸಿದಂತೆ, ಅಕ್ಷರದ ಹಸಿವುಳ್ಳ ಎಲ್ಲ ಜಾತಿಯವರಿಗೂ ಮಠ ಪೋಷಿಸುತ್ತಿದ್ದ ವಿದ್ಯಾಸಂಸ್ಥೆಗಳಲ್ಲಿ ಕಲಿಯಲು ಅವಕಾಶ ಕಲ್ಪಿಸಿದರು. ಮನಸ್ಸು ಪಕ್ವವಾಗುವುದರೊಂದಿಗೆ ದೇಹ ದೃಢವಾಗಬೇಕು ಎನ್ನುವ ಉದ್ದೇಶದಿಂದ, ಯೋಗದ ಕಲಿಕೆಗೆ ಒತ್ತುನೀಡಿದರು. ಗೋಶಾಲೆ ತೆರೆದರು. ಕಾಯಕದಿಂದ ದೂರವಾದ ಜ್ಞಾನಮಾರ್ಗದ ಬಗ್ಗೆ ಅವರಿಗೆ ನೆಚ್ಚುಗೆಯಿರಲಿಲ್ಲ. ವಿದ್ಯಾಸಂಸ್ಥೆಗಳನ್ನು ಆರಂಭಿಸುವಂತೆ ತಮ್ಮ ಹಣವಂತ ಶಿಷ್ಯರನ್ನು ಸ್ವಾಮೀಜಿ ಹುರಿದುಂಬಿಸಿದರು. ಇದರ ಫಲವಾಗಿ ಗ್ರಾಮೀಣ ಪ್ರದೇಶ ಗಳಲ್ಲಿ ಸದ್ದಿಲ್ಲದೆ ಶಿಕ್ಷಣ ಕ್ರಾಂತಿ ನಡೆಯಿತು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸ್ವಾಮೀಜಿ ಒತ್ತು ನೀಡಿದ್ದರು.

ಸಿನಿಮಾದ ಆಶಯವನ್ನು ಅನುರಣಿಸುವಂತೆ ಸಿನಿಮಾದುದ್ದಕ್ಕೂ ವಚನಗಳು ಬಳಕೆಯಾಗಿವೆ. ಗದಿಗೆಯ್ಯನೆಂಬ ಬಾಲಕ ಪಂಚಾಕ್ಷರಿ ಗವಾಯಿಯಾಗುವ ರೂಪಾಂತರ ವೃತ್ತಾಂತವೂ ಇದೆ. ಇದರಿಂದಾಗಿ ಸಿನಿಮಾಕ್ಕೆ ಸಂಗೀತದ ಸಖ್ಯ ಅನಾಯಾಸವಾಗಿ ದೊರೆತಿದೆ. ಆದರೆ, ನಿರ್ದೇಶಕರ ಗಮನ ತಮ್ಮ ಕೃತಿಯನ್ನು ಸಂಗೀತಪ್ರಧಾನವನ್ನಾಗಿಸುವುದೋ ಭಾವುಕ ಕಥನವನ್ನಾಗಿಸುವುದೋ ಅಲ್ಲ. ಸ್ವಾಮೀಜಿಯ ವಿಚಾರಧಾರೆಯನ್ನು ಕಾಣಿಸುವುದಷ್ಟೇ ಅವರ ಪ್ರಮುಖ ಗುರಿಯಾಗಿದೆ. ಇದರಿಂದ ಸಿನಿಮಾ ‍ಪಡೆದುಕೊಂಡಿದ್ದೇನು ಹಾಗೂ ಬಿಟ್ಟುಕೊಟ್ಟಿದ್ದೇನು ಎನ್ನುವುದು ಬೇರೆಯದೇ ಚರ್ಚೆ. ಆದರೆ, ಕನ್ನಡದ ಬಹುತ್ವ ಪರಂಪರೆಗೆ ಪೂರಕವಾಗಿದ್ದ ‘ಧಾರ್ಮಿಕ ಮಾದರಿ’ಯನ್ನು ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿರುವುದು ನಿರ್ದೇಶಕರ ಬಹು ದೊಡ್ಡ ಸಾಧನೆ.

ಪಂಚಾಕ್ಷರಿ ಗವಾಯಿಗಳು ಕುಮಾರಸ್ವಾಮಿಗಳ ಶಿಷ್ಯರು. ಪುಟ್ಟರಾಜ ಗವಾಯಿಗಳು ಪಂಚಾಕ್ಷರಿ ಅವರ ಶಿಷ್ಯರು. ಸಂಗೀತವನ್ನೇ ಕಣ್ಣುಗಳನ್ನಾಗಿಸಿಕೊಂಡಿದ್ದ ಇಬ್ಬರು ಗವಾಯಿಗಳ ಬಗ್ಗೆಯೂ ಈಗಾಗಲೇ ಸಿನಿಮಾಗಳು ನಿರ್ಮಾಣವಾಗಿವೆ. ಈಗ ಗುರುಗಳ ಸರದಿ. ತಡವಾಗಿಯಾದರೂ ಕುಮಾರಸ್ವಾಮಿಗಳ ಬಗ್ಗೆ ಸಿನಿಮಾ ರೂಪುಗೊಂಡಿದೆ. ಮೇಲ್ನೋಟಕ್ಕೆ ಈ ಸಿನಿಮಾ ಲಿಂಗಾಯತ– ವೀರಶೈವ ಸಮುದಾಯದ ಆಚಾರ್ಯಪುರುಷನ ಕಥನದಂತೆ ಕಾಣಿಸುತ್ತದೆ. ‘ಅಖಿಲ ಭಾರತ ವೀರಶೈವ ಮಹಾಸಭಾ’, ‘ಶಿವಯೋಗ ಮಂದಿರ’ಗಳು ಕುಮಾರಸ್ವಾಮಿ ಅವರ ವಿವೇಕ ಮತ್ತು ದೂರದೃಷ್ಟಿಯ ಫಲಶ್ರುತಿಗಳು. ಈ ಸಂಸ್ಥೆಗಳು ಕೂಡ ಕುಮಾರಸ್ವಾಮಿ ಅವರನ್ನು ಲಿಂಗಾಯತ–ವೀರಶೈವ ಧರ್ಮದ ಚೌಕಟ್ಟಿನಲ್ಲಿ ನೋಡಲು ಒತ್ತಾಯಿಸುತ್ತವೆ. ಆದರೆ, ಸಮಾಜದ ಜ್ಞಾನವಿಕಾಸದ ಉದಾತ್ತ ಉದ್ದೇಶದಿಂದ ಆರಂಭಗೊಂಡ ಈ ಕೇಂದ್ರಗಳು ಮೂಲದಲ್ಲಿ ಎಲ್ಲರನ್ನೂ ಒಳಗೊಳ್ಳುವ ಬಹುತ್ವದ ಗುಣ ಹೊಂದಿದ್ದವು. ಕಾಯಕ ದಲ್ಲಿ ನಂಬಿಕೆಯುಳ್ಳ ಎಲ್ಲರನ್ನೂ ಒಳಗೊಳ್ಳುವ ಬಸವ ಪ್ರಜ್ಞೆಯನ್ನು ಆಧರಿಸಿ ಕುಮಾರಸ್ವಾಮಿಯವರು ಸಂಸ್ಥೆ ಗಳನ್ನು ರೂಪಿಸಿದ್ದರು. ಈಗ ಆ ಸಂಸ್ಥೆಗಳಲ್ಲಿ ಕುಮಾರಸ್ವಾಮಿಗಳು ಹಂಬಲಿಸಿದ ಬಸವಪ್ರಜ್ಞೆ ಎಷ್ಟರಮಟ್ಟಿಗೆ ಉಳಿದಿದೆ ಎನ್ನುವುದರ ಅವಲೋಕನಕ್ಕೂ ‘ವಿರಾಟಪುರ ವಿರಾಗಿ’ ಸಿನಿಮಾ ಒತ್ತಾಯಿಸುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT