ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಡಸಾಲೆ | ಮಾತು ಮರೆತವರ ಜನ ಮರೆಯುವರೇ?

ಜನರ ಮರೆವೆಯ ಕುರಿತ ಅಪಾರ ನಂಬಿಕೆಯೇ ಜನಪ್ರತಿನಿಧಿಗಳ ಭ್ರಷ್ಟತೆಗೆ ಸ್ಫೂರ್ತಿ
Published : 14 ಫೆಬ್ರುವರಿ 2024, 0:30 IST
Last Updated : 14 ಫೆಬ್ರುವರಿ 2024, 0:30 IST
ಫಾಲೋ ಮಾಡಿ
Comments

ಹಾನಾ ರಾವಿಟಿ ಕರೆಯಾರಿಕಿ ಮೈಪಿ–ಕ್ಲಾರ್ಕ್‌ (Hana Rawhiti Kareariki Maipi-Clarke) ನ್ಯೂಜಿಲೆಂಡ್‌ನ ಅತ್ಯಂತ ಕಿರಿಯ ಸಂಸದೆ. ಇಪ್ಪತ್ತೊಂದು ವರ್ಷದ ಈ ಯುವತಿ ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಸದನದಲ್ಲಿ ಮಾಡಿದ ಭಾಷಣ ಸಹೃದಯರ ಗಮನಸೆಳೆದಿದೆ. ಮಾವೊರಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಹಾನಾ ಅವರ ಚೊಚ್ಚಿಲ ಭಾಷಣ ಭಾವೋದ್ವೇಗ ಹಾಗೂ ಔಪಚಾರಿಕ ಮಾತು ಗಳಿಗೆ ಸೀಮಿತವಾಗಿರದೆ, ಬುಡಕಟ್ಟು ಜನರ ತವಕತಲ್ಲಣಗಳನ್ನು ಜನರ ಗಮನಕ್ಕೆ ತರುವ ವಿಶಿಷ್ಟ ಪ್ರಯತ್ನವೂ ಆಗಿತ್ತು. ಹಾನಾ ಹಾವಭಾವಗಳು ಮಾವೊರಿ ಸಮುದಾಯದ ಸಂಸ್ಕೃತಿ ಮತ್ತು ಭಾಷೆಯ
ಪ್ರದರ್ಶನದಂತಿದ್ದವು. ‘ನಿಮಗಾಗಿ ಸಾಯಲು ಸಿದ್ಧವಿ ದ್ದರೂ, ನಿಮ್ಮ ಸಲುವಾಗಿಯೇ ಬದುಕಲು ಬಯಸುವೆ’ ಎನ್ನುವ ಸಂಸದೆಯ ಮಾತುಗಳು ನ್ಯೂಜಿಲೆಂಡ್‌ನ ಬುಡಕಟ್ಟು ಜನರಲ್ಲಿ ರೋಮಾಂಚನ ಮೂಡಿಸಿರಬೇಕು. ಸದನದಲ್ಲಿದ್ದ ಹಿರಿಯ ಸದಸ್ಯರ ಮುಖಗಳಲ್ಲಿ ಕಿರಿಯ ಸಹೋದ್ಯೋಗಿಯ ಬಗ್ಗೆ ಹೆಮ್ಮೆ ಎದ್ದುಕಾಣಿಸುತ್ತಿತ್ತು. ಕಾಳಜಿ, ಭಾವುಕತೆ ಹಾಗೂ ಬದ್ಧತೆ ಮಿಳಿತಗೊಂಡ ಹಾನಾಳ ಮಾತುಗಳು ಜನರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವಂತಹವು.

ಬುಡಕಟ್ಟು ಸಂಸ್ಕೃತಿ–ಭಾಷೆ ಉಳಿಯಬೇಕು; ಜನಾಂಗೀಯ ನಿಂದನೆ ನಿಂತು ಬುಡಕಟ್ಟು ಜನಾಂಗಗಳಿಗೆ ಅವರ ಹಕ್ಕುಗಳು ದಕ್ಕಬೇಕು ಎಂದು ಹಾನಾ ಮಾತನಾಡಿದ ಕೆಲ ದಿನಗಳಲ್ಲೇ, ಭಾರತದ ಕೆಲವು ಸಂಸದರು ಮಾತು ಕಳೆದುಕೊಂಡಿರುವ ವರದಿ ಪ್ರಕಟಗೊಂಡಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಕರ್ನಾಟಕದ ನಾಲ್ವರು ಸೇರಿದಂತೆ ಒಂಬತ್ತು ಸಂಸದರು ಸಂಸತ್‌ನಲ್ಲಿ ಬಾಯಿಯೇ ಬಿಟ್ಟಿಲ್ಲ ಎನ್ನುವುದು ವರದಿಯ ಮುಖ್ಯಾಂಶ. ಸಂಸತ್‌ನಲ್ಲಿ ಮೂಕರಾಗಿರುವ ಸದಸ್ಯರಲ್ಲಿ ಸಿನಿಮಾಗಳಲ್ಲಿ ದೊಡ್ಡ ದೊಡ್ಡ ಡೈಲಾಗ್‌ ಹೊಡೆಯುವ ಕಲಾವಿದರೂ ಇದ್ದಾರೆ. ಮಾತಿನ ವಿಷಯವಿರಲಿ, ಒಂದೇ ಒಂದು ಪ್ರಶ್ನೆಯನ್ನು ಪ್ರಸ್ತಾಪಿಸುವ ಪ್ರಯತ್ನವನ್ನೂ ಕೆಲವು ಸಂಸದರು ಮಾಡಿಲ್ಲ. ಈ ಮೌನ ಏನನ್ನು ಸೂಚಿಸುತ್ತದೆ?

ತಮ್ಮ ಕ್ಷೇತ್ರ ಹಾಗೂ ಮತದಾರರ ಆಶೋತ್ತರಗಳ ಬಗ್ಗೆ ಮಾತನಾಡಲು ಜನಪ್ರತಿನಿಧಿಗಳಿಗೆ ಸಂಸತ್‌ಗಿಂತಲೂ ಮಿಗಿಲಾದ ವೇದಿಕೆ ಮತ್ತೊಂದಿಲ್ಲ. ಸಂಸತ್‌ನಲ್ಲಿ ಆಡುವ ಪ್ರತಿ ಮಾತೂ ಜನರ ಆಶೋತ್ತರವನ್ನು ದೇಶದ–ಸರ್ಕಾರದ ಗಮನಕ್ಕೆ ತರುವ ಪ್ರಯತ್ನವಾಗಿರುತ್ತದೆ. ಇಂಥ ಅಪೂರ್ವ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಜನಪ್ರತಿನಿಧಿ ಗಳು ಪ್ರಯತ್ನ ನಡೆಸಿಲ್ಲ ಎಂದಾದರೆ, ಪ್ರತಿನಿಧಿಸುವ ಕ್ಷೇತ್ರಕ್ಕೆ ಹಾಗೂ ಮತದಾರರಿಗೆ ಅವರು ಅನ್ಯಾಯವೆಸಗಿದ್ದಾರೆ ಎಂದೇ ಅರ್ಥ.

ಪ್ರಜಾಪ್ರತಿನಿಧಿಗಳ ಹೊಣೆಗೇಡಿತನದಲ್ಲಿ ಮತದಾರರ ಪಾತ್ರವೂ ಇದೆ. ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಯನ್ನು ಆರಿಸುವುದು ಮತದಾರರ ಕೈಯಲ್ಲೇ ಇದೆ. ತಮ್ಮ ಹಕ್ಕನ್ನು ವಿವೇಚನೆಯಿಂದ ಚಲಾಯಿಸುವುದರ ಬದಲು, ಯಾರದೋ ಮುಖ ನೋಡಿ ಮತ್ತ್ಯಾರನ್ನೋ ಆರಿಸುವ ಪ್ರವೃತ್ತಿ ಇತ್ತೀಚಿನ ಚುನಾವಣೆಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಬೇರೆ ಯಾರಿಗೋ ಬಲ ತುಂಬಲಿಕ್ಕಾಗಿ ಅಸಮರ್ಥ ಅಭ್ಯರ್ಥಿಯನ್ನು ಚುನಾಯಿಸುವುದು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಆತ್ಮಹತ್ಯಾಘಾತುಕ ನಡವಳಿಕೆ. ಇದರ ಪರಿಣಾಮವಾಗಿ, ಆರಿಸಿಹೋದವರು ಪ್ರಜೆಗಳ ಹಿತವನ್ನು ಲೆಕ್ಕಿಸದೆ, ತಮಗೆ ಮತ ದೊರಕಿಸಿಕೊಟ್ಟ ನಾಯಕಮಣಿಯ ವರ್ಚಸ್ಸನ್ನು ಹೆಚ್ಚಿಸಲು ತಮ್ಮೆಲ್ಲ ಚಾತುರ್ಯವನ್ನು ಬಳಸತೊಡಗುತ್ತಾರೆ. ಅಧಿಕಾರದ ಕೇಂದ್ರಗಳಲ್ಲಿ ಇರುವವರಿಗೂ ತಮ್ಮ ಮಾತುಗಳಿಗೆ ಗೋಣಾಡಿಸುವ ಕೋಡಂಗಿಗಳು ಪ್ರಿಯವೇ ಹೊರತು, ಜನರ ಪರವಾಗಿ ಧ್ವನಿ ಎತ್ತುವವರಲ್ಲ.

ರಾಜಕೀಯ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಪಕ್ಷಗಳೊಂದಿಗೆ ಗುರುತಿಸಿಕೊಳ್ಳುವುದು ಸಹಜ. ಆದರೆ, ಜನರಿಗೆ ಬೆನ್ನುಮಾಡಿ, ಪಕ್ಷದ ನಾಮಬಲದಿಂದಲೇ ರಾಜಕಾರಣ ಮಾಡಬಹುದೆನ್ನುವ ಪ್ರವೃತ್ತಿ ವ್ಯಾಪಾರವೇ ಹೊರತು ರಾಜಕಾರಣವಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಸ್ಥಳೀಯ ವ್ಯಕ್ತಿಯ ಗುಣಾವಗುಣಗಳಿಗಿಂತಲೂ ಆ ಅಭ್ಯರ್ಥಿ ಪ್ರತಿನಿಧಿಸುವ ಪಕ್ಷ ಹಾಗೂ ಪಕ್ಷದ ಮುಖಂಡರು ಮುಖ್ಯ ಎನ್ನುವ ಸ್ಥಿತಿ ಸದ್ಯದ ರಾಜಕಾರಣದ್ದು. ಜೀವಮಾನದಲ್ಲಿ ಒಮ್ಮೆಯೂ ಭೇಟಿಯಾಗದ ವ್ಯಕ್ತಿಯನ್ನು ಕುರುಡಾಗಿ ಆರಾಧಿಸುತ್ತ, ಸ್ಥಳೀಯ ಅದಕ್ಷ ವ್ಯಕ್ತಿಯನ್ನು ಚುನಾವಣೆಯ ಮೂಲಕ ಮೌಲ್ಯಯುತಗೊಳಿಸುವ ಪ್ರಹಸನಗಳಿಗೆ ವರ್ತಮಾನ ಸಾಕ್ಷಿಯಾಗಿದೆ. ಶಾಸನಸಭೆಗಳಲ್ಲಿ ಸರಿಯಾದ ಚರ್ಚೆಗಳು ನಡೆಯದಿರುವುದಕ್ಕೆ ಹಾಗೂ ಸರ್ಕಾರ ನಡೆಸುವವರು ಶಾಸನಸಭೆಗಳನ್ನು ದುರ್ಬಲಗೊಳಿಸಿರುವು ದಕ್ಕೆ ಮತದಾರರು ತಮ್ಮ ಹಕ್ಕುಗಳನ್ನು ಸಮರ್ಪಕವಾಗಿ ಬಳಸದಿರುವುದೂ ಕಾರಣವಾಗಿದೆ.

ವಿದ್ವಜ್ಜನರ, ಜನಪರ ಕಾಳಜಿಯ ನಾಯಕರ ಅನುಭವ ಮಂಟಪಗಳಾಗಬೇಕಿದ್ದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ತುಗಳು ಹೊಗಳುಭಟ್ಟರ ಒಡ್ಡೋಲಗ ಗಳಾಗಿವೆ. ಜನಪರ ಮನೋಭಾವ ಹೊಂದಿದ್ದೂ ಚುನಾವಣೆಗಳಲ್ಲಿ ಆಯ್ಕೆಯಾಗುವ ಸಾಮರ್ಥ್ಯ ಅಥವಾ ಆಸಕ್ತಿ ಇಲ್ಲದವರಿಗೆ ಸಮಾಜಸೇವೆಯ ಅವಕಾಶ ಕಲ್ಪಿಸುವುದು ಹಾಗೂ ಸಮಾಜದ ವಿವಿಧ ವರ್ಗಗಳ ಪ್ರತಿಭಾವಂತರಿಗೆ ಶಾಸನಸಭೆಗಳಲ್ಲಿ ಸ್ಥಾನ ಕಲ್ಪಿಸುವುದು ಮೇಲ್ಮನೆಗಳ ಉದ್ದೇಶವಾಗಿದೆ. ಆದರೆ, ರಾಜ್ಯಸಭೆಯೂ ಸೇರಿದಂತೆ ರಾಜ್ಯಗಳಲ್ಲಿನ ವಿಧಾನ ಪರಿಷತ್ತುಗಳಲ್ಲಿನ ಸದ್ಯದ ಸದಸ್ಯರ ಹಿನ್ನೆಲೆ ಗಮನಿಸಿದರೆ, ಅವರು ಪಕ್ಷದ ಖಜಾನೆ ತುಂಬಿಸುವ ಉದ್ಯಮಿಗಳೋ ಕುಬೇರರೋ ಆಗಿದ್ದಾರೆ; ಚುನಾವಣೆಗಳಲ್ಲಿ ನೇರವಾಗಿ ಗೆಲ್ಲಲಾಗದ ಹೌದಪ್ಪ, ಹೌದಮ್ಮಂದಿರನ್ನು ಅಧಿಕಾರದ ಮೊಗಸಾಲೆಗೆ ಹಿಂಬಾಗಿಲಿನಿಂದ ಕರೆತರುವ ಪ್ರಯತ್ನಗಳ ಉತ್ಪನ್ನಗಳಾಗಿದ್ದಾರೆ. ಕಲಾವಿದರು ಸೇರಿದಂತೆ ವಿವಿಧ ವರ್ಗ ಗಳಿಂದ ಮೇಲ್ಮನೆಗಳಿಗೆ ನಾಮಕರಣ ಮಾಡಲು ಕಣ್ಣು ಕಿವಿ ನಾಲಿಗೆ ಇಲ್ಲದವರನ್ನೇ ಆರಿಸಿಕೊಳ್ಳಲಾಗುತ್ತಿದೆ.

ಜನಪ್ರತಿನಿಧಿಗಳು ಶಾಸನಸಭೆಗಳಲ್ಲಿ ಮಾತನಾಡುತ್ತಿಲ್ಲ ಎಂದಮಾತ್ರಕ್ಕೆ ಅವರು ಮಾತುಬಾರದ ವರೋ ಅಥವಾ ಮಾತನಾಡುವ ಕಲೆ ಗೊತ್ತಿಲ್ಲದವರೋ ಎಂದರ್ಥವಲ್ಲ. ಶಾಸನಸಭೆಗಳಲ್ಲಿ ಮೂಕರಾಗಿಯೂ ಹೌದಪ್ಪಗಳಾಗಿಯೂ ಗುರುತಿಸಿಕೊಂಡಿರುವ ಕರ್ನಾಟಕದ ಪ್ರತಿನಿಧಿಗಳ ಸಾರ್ವಜನಿಕ ಜೀವನವನ್ನು ಗಮನಿಸಿದರೆ, ಈ ಪ್ರತಿನಿಧಿಗಳು ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕುವ ಪ‍್ರಯತ್ನದಲ್ಲಿ ಮತ್ತೆ ಮತ್ತೆ ನಾಲಿಗೆಯಿಂದ ನಂಜು ಕಾರಿದ್ದಾರೆ. ಕೆಲವು ರಾಜಕಾರಣಿಗಳಂತೂ ಧರ್ಮರಕ್ಷಣೆಯ ಹೆಸರಿನಲ್ಲಿ, ನಾಲಿಗೆ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಸಾಮಾಜಿಕ ಸೌಹಾರ್ದ ಕದಡುವ  ಮಾತುಗಳನ್ನಾಡಿದ್ದಾರೆ. ದಕ್ಷಿಣ ಕನ್ನಡದ ಶಾಸಕರೊಬ್ಬರು, ಕ್ರಿಶ್ಚಿಯನ್‌ ಆಡಳಿತದ ಶಾಲೆಗಳನ್ನು ಹಿಂದೂ ವಿದ್ಯಾರ್ಥಿಗಳು ಬಹಿಷ್ಕರಿಸ
ಬೇಕು ಎಂದು ಇತ್ತೀಚೆಗಷ್ಟೇ ಕರೆ ನೀಡಿದ್ದಾರೆ. ಜನರ ಬಗ್ಗೆ ಕಾಳಜಿಯಿರುವ ಯಾವುದೇ ಮನುಷ್ಯ ಇಷ್ಟು
ಬೇಜವಾಬ್ದಾರಿಯಿಂದ ಮಾತನಾಡುವುದು ಸಾಧ್ಯವೇ? ಹೀಗೆ ಮಾತನಾಡುವ ಶಾಸಕನನ್ನು ಪ್ರತಿನಿಧಿಸುವ ಪಕ್ಷಕ್ಕೆ ಕಿಂಚಿತ್‌ ಮುಜುಗರವೂ ಆಗದಿರುವ, ಆತ್ಮಸಾಕ್ಷಿಗೆ ಅರ್ಥವೇ ಇಲ್ಲದಿರುವ ರಾಜಕೀಯ ಸಂದರ್ಭ ಇಂದಿನದಾಗಿದೆ. ಮಾತು ಆಡಬೇಕಾದ ಸ್ಥಾನದಲ್ಲಿ ಮೌನವಾಗಿರುವುದು, ಸುಮ್ಮನಿರಬೇಕಾದಲ್ಲಿ ಅಬ್ಬರಿಸಿ ಮಾತಿನ ಕಿಮ್ಮತ್ತು ಕಳೆಯುವುದರಲ್ಲಿ ರಾಜಕಾರಣಿಗಳು ಸ್ಪರ್ಧೆ ನಡೆಸುತ್ತಿರುವಂತಿದೆ.

ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಜನರಿಗೆ ‘ಮಾತು’ ನೀಡುತ್ತಾರೆ. ಗೆದ್ದ ನಂತರ ಸಂವಿಧಾನದ ಹೆಸರಿ ನಲ್ಲಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಮತದಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದಿರುವುದು ಹಾಗೂ ಸಂವಿಧಾನದ ಹೆಸರಿನಲ್ಲಿ ಸ್ವೀಕರಿಸಿದ ವಚನಕ್ಕೆ ಬದ್ಧರಾಗ ದಿರುವುದು ಈ ಹೊತ್ತಿನ ರಾಜಕಾರಣದ ಸಹಜ ಲಕ್ಷಣ ಎನ್ನುವಂತಾಗಿದೆ. ಆಡುವ ಮಾತಿಗೊಂದು ಧ್ವನಿ–ಮೌಲ್ಯವಿರುತ್ತದೆ ಎನ್ನುವುದನ್ನು ತಿಳಿಯದ ಅರಿವು ಗೇಡಿಗಳ ಪಾಲಿಗೆ ಮಾತೆನ್ನುವುದು ಶಬ್ದಾಡಂಬರ ಹಾಗೂ ಜನರನ್ನು ಮರುಳು ಮಾಡುವ ಒಂದು ಸಲಕರಣೆಯಷ್ಟೇ.

ವಚನಭ್ರಷ್ಟತೆ ಎನ್ನುವುದು ಒಪ್ಪಿತ ಮೌಲ್ಯ ಎನ್ನುವಂತಾ ಗಿರುವ ರಾಜಕೀಯ ಸಂದರ್ಭದಲ್ಲಿ ಹಾನಾಳಂಥ ಸಂಸದೆ ಬದುಕಲು ತಿಳಿಯದ ಅವಿವೇಕಿಯಂತೆ ಯಾರಿಗಾದರೂ ಕಾಣಿಸಿದರೆ, ಭಾರತದ ಪ್ರಜಾಪ್ರಭುತ್ವ ಗಂಡಾಂತರ ಎದುರಿಸುತ್ತಿದೆ ಎನ್ನುವ ಆತಂಕವು ದೇಶದ್ರೋಹದಂತೆ ಭಾಸವಾದರೆ ಆಶ್ಚರ್ಯದ ಸಂಗತಿಯೇನಲ್ಲ. ಆದರೆ, ನಿಜವಾದ ದುರಂತ ಇರುವುದು ರಾಜಕಾರಣಿಗಳ ಮರೆವೆ ಯಲ್ಲಲ್ಲ; ವಚನಭ್ರಷ್ಟ ರಾಜಕಾರಣಿಗಳನ್ನು ಮತ್ತೆ ಮತ್ತೆ ಕ್ಷಮಿಸುವ ಜನರ ಮರೆವೆಯಲ್ಲಿ. ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವ ಈಗಿನ ಸಂದರ್ಭವನ್ನೇ ಗಮನಿಸಿ: ಈವರೆಗೆ ಅಜ್ಞಾತವಾಸದಲ್ಲಿದ್ದ ಕೆಲವರು ನಿದ್ದೆಯಿಂದ ತಿಳಿದೆದ್ದವರಂತೆ ಮಾತು ಮಸೆಯುತ್ತ ತಮ್ಮ ಅಸ್ತಿತ್ವ ಪ್ರಕಟ ಪಡಿಸುತ್ತಿದ್ದಾರೆ. ಮತದಾರರ ಮರೆವೆಯ ಬಗ್ಗೆ ಇರುವ ಅಪಾರ ನಂಬಿಕೆಯೇ ರಾಜಕಾರಣಿಗಳ ಹೊಣೆಗೇಡಿತನ ಹದ್ದುಮೀರುವುದಕ್ಕೆ ಕಾರಣವಾದಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT