‘ದಲಿತರು ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ದೇಶದಲ್ಲಿ ಹೆಚ್ಚುತ್ತಿವೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನುಹತ್ತಿಕ್ಕಲಾಗುತ್ತಿದೆ ಎನ್ನುವ ಮಾತುಗಳೆಲ್ಲ, ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಕಳಾಹೀನಗೊಳಿಸುವ ಕೆಲಸದಲ್ಲಿ ತೊಡಗಿಕೊಂಡಿರುವ ವರ್ಗ ಹರಿಬಿಟ್ಟಿರುವ ಕಾಲ್ಪನಿಕ ಸಿದ್ಧಾಂತಗಳು’ ಎನ್ನುವ ಮಾತುಗಳನ್ನು ಕನ್ನಡದ ಹಿರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಆಡಿದ್ದಾರೆ. ಅವರ ಮಾತುಗಳ ಹಿನ್ನೆಲೆಯಲ್ಲಿ ಹರಿಣಾಕ್ಷಿ ನೆನಪಾಗುತ್ತಾಳೆ. ಸಿನಿಮಾ ಪಾತ್ರವಾದುದರಿಂದ ಹರಿಣಾಕ್ಷಿಯನ್ನು ಕೂಡ ಕಾಲ್ಪನಿಕ ಪಾತ್ರ ಎನ್ನಬಹುದಾದರೂ ಆಕೆಯ ಪಾತ್ರ ನೋಡುಗರ ಅಂತಃಕರಣವನ್ನು ಕಲಕುವಂತಿದೆ ಹಾಗೂ ಹರಿಣಾಕ್ಷಿಯನ್ನೊಳಗೊಂಡ ಚಿತ್ರದ ಕಥೆ ನೈಜ ಘಟನೆಯನ್ನು ಆಧರಿಸಿದ್ದು ಎಂದು ಚಿತ್ರತಂಡ ಹೇಳಿಕೊಂಡಿದೆ.

‘ಜೀ5’ ಒಟಿಟಿ ವೇದಿಕೆಯಲ್ಲಿ ಅಕ್ಟೋಬರ್ನಲ್ಲಿ ತೆರೆಕಂಡಿರುವ, ಕನ್ನಡಕ್ಕೂ ಡಬ್ ಆಗಿರುವ ತಮಿಳು ಚಿತ್ರ ‘ಕಾ ಪೆ ರಣಸಿಂಗಂ’ ಸಂವೇದನಾರಹಿತ ರಾಜಕಾರಣ ಮತ್ತು ಕಾರ್ಪೊರೇಟ್ ಸಂಸ್ಥೆಯೊಂದರ ಕ್ರೌರ್ಯದಿಂದ ಜನಸಾಮಾನ್ಯರ ಬದುಕು ನಲುಗುತ್ತಿರುವುದನ್ನು ಅಪರೂಪದ ಸಂಯಮದಲ್ಲಿ ಚಿತ್ರಿಸಿದೆ. ದುಬೈಗೆ ಹೋಗಿ ಸಾವಿಗೀಡಾಗುವ ಪತಿಯ ದೇಹವನ್ನು ಊರಿಗೆ ತರಿಸಿಕೊಂಡು ಗೌರವಯುತ ಅಂತ್ಯಸಂಸ್ಕಾರ ನಡೆಸಲು ಹಂಬಲಿಸಿ ಹೋರಾಡಿ, ತನ್ನ ಪ್ರಯತ್ನದಲ್ಲಿ ವಿಫಲಳಾಗುವ ನತದೃಷ್ಟ ಹೆಣ್ಣೊಬ್ಬಳ ಕಥೆ ಚಿತ್ರದ್ದು. ಹರಿಣಾಕ್ಷಿಯ ಹೋರಾಟ ಹಾಗೂ ಅದರ ಪರಿಣಾಮ, ಸಮಕಾಲೀನ ವಿದ್ಯಮಾನಗಳನ್ನು ನೆನಪಿಸುವಂತಿದ್ದು, ಜನಸಾಮಾನ್ಯರ ಭಾವನೆಗಳಿಗೆ ವ್ಯವಸ್ಥೆಯಲ್ಲಿ ಚಿಕ್ಕಾಸಿನ ಕಿಮ್ಮತ್ತೂ ಇಲ್ಲದಿರುವುದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. ವಾಸ್ತವ ಕಲೆಯಾಗುವುದು ಅಥವಾ ಕಲ್ಪನೆ ವಾಸ್ತವವಾಗುವುದಕ್ಕೆ ‘ಕಾ ಪೆ ರಣಸಿಂಗಂ’ ಉತ್ತಮ ಉದಾಹರಣೆ.

ಸಿನಿಮಾ ಬಿಚ್ಚಿಕೊಳ್ಳುವುದು ರಣಸಿಂಗ ಎನ್ನುವ ವ್ಯಕ್ತಿಯ ಮಗಳಿಗೆ ಕಿವಿ ಚುಚ್ಚುವ ಶಾಸ್ತ್ರದ ಸಂಭ್ರಮದೊಂದಿಗೆ. ವಿದೇಶದಲ್ಲಿರುವ ರಣಸಿಂಗನ ಅನುಪಸ್ಥಿತಿಯಲ್ಲಿ ನಡೆಯುವ ಕೌಟುಂಬಿಕ ಕಾರ್ಯ, ಊರ ಸಂಭ್ರಮವೂ ಆಗಿದೆ. ಅದಕ್ಕೆ ಕಾರಣ, ರಣಸಿಂಗ ಊರಿನಲ್ಲಿ ಎಲ್ಲರಿಗೂ ಬೇಕಾದ ಮನುಷ್ಯನಾಗಿರುವುದು. ಬರದ ದವಡೆಗೆ ಸಿಲುಕಿದ ಬಂಜರು ಭೂಮಿಯ ಗ್ರಾಮವೊಂದಕ್ಕೆ ಸೇರಿದ ರಣಸಿಂಗನ ಕೆಲಸ, ನೆಲದಲ್ಲಿನ ಜಲದ ಕಣ್ಣುಗಳನ್ನು ಹುಡುಕುವುದು. ತಲೆಮಾರುಗಳಿಂದ ಬಂದ ಅಂತರ್ಜಲ ಪತ್ತೆಹಚ್ಚುವ ವಿದ್ಯೆಯನ್ನು ನೆಚ್ಚಿಕೊಂಡ ರಣಸಿಂಗ, ಜನರ ಎದೆಗಳಲ್ಲೂ ಮಾನವೀಯತೆಯ ಒರತೆ ಕಾಣಲು ಹಂಬಲಿಸುವವ. ಊರಿನ ಬಾಯಾರಿಕೆಗೆ ಉತ್ತರ ಹುಡುಕುತ್ತ, ನೀರಿಗಾಗಿ ಹೋರಾಟ ಸಂಘಟಿಸುವ ಅವನು ಸಹಜವಾಗಿಯೇ ವ್ಯವಸ್ಥೆಯ ವಿರೋಧ ಕಟ್ಟಿಕೊಳ್ಳುತ್ತಾನೆ.

ನೀರಿಗಾಗಿ ನಡೆಯುವ ಹೋರಾಟವನ್ನು ಹತ್ತಿಕ್ಕಲು ವಿಧಿಸಲಾದ ಕಾನೂನು ನಿರ್ಬಂಧಗಳ ಸಂದರ್ಭದಲ್ಲಿ, ರಣಸಿಂಗ ಮತ್ತು ಹರಿಣಾಕ್ಷಿಯರ ಮದುವೆ ತೀರಾ ಖಾಸಗಿಯಾಗಿ ನಡೆಯುತ್ತದೆ. ಇದರಿಂದಾಗಿ, ಪತಿಯ ದೇಹವನ್ನು ಪಡೆಯುವ ಪ್ರಯತ್ನದಲ್ಲಿ ಹರಿಣಾಕ್ಷಿ ತನ್ನ ಮದುವೆಯನ್ನು ಸಾಬೀತುಪಡಿಸಲು ದಾಖಲೆಗಳನ್ನು ಕೊಡಲು ಹೆಣಗಾಡಬೇಕಾಗುತ್ತದೆ. ಮೃತದೇಹವನ್ನು ಪಡೆಯಲು ಸ್ಥಳೀಯ ರಾಜಕಾರಣಿಯಿಂದ ಹಿಡಿದು ಕೇಂದ್ರ ಸಚಿವರವರೆಗೆ ಅಧಿಕಾರದ ವಿವಿಧ ಕೇಂದ್ರಗಳನ್ನು ಕಂಕುಳಲ್ಲಿ ಕೂಸು ಸಿಕ್ಕಿಸಿಕೊಂಡ ಹರಿಣಾಕ್ಷಿ ಭೇಟಿಯಾಗುತ್ತಾಳೆ. ಹತ್ತು ತಿಂಗಳ ದೀರ್ಘ ಹೋರಾಟದ ಕೊನೆಯಲ್ಲಿ, ಮಗುವಿನೊಂದಿಗೆ ಅಣೆಕಟ್ಟೆಯೊಂದರ ಮೇಲೇರುತ್ತಾಳೆ. ಆಕೆಯ ಸಾವಿನ ಬೆದರಿಕೆ ಅಧಿಕಾರಶಾಹಿಯನ್ನು ಕಂಗಾಲಾಗಿಸುತ್ತದೆ. ಹರಿಣಾಕ್ಷಿಯ ಹೋರಾಟ ಪ್ರಧಾನಿಯ ಗಮನಸೆಳೆಯುತ್ತದೆ. ಅವಳ ಕೋರಿಕೆ ನೆರವೇರುವವರೆಗೂ ಸ್ಥಳ ಬಿಟ್ಟುಹೋಗುವುದಿಲ್ಲವೆಂದು ಪ್ರಧಾನಿ ಮಾತು ಕೊಡುತ್ತಾರೆ. ಪ್ರಧಾನಿಯ ಪಾತ್ರ ನರೇಂದ್ರ ಮೋದಿಯವರನ್ನು ಹೋಲುವುದು ಚಿತ್ರಕಥೆ ತನ್ನ ಸಮಕಾಲೀನತೆಯನ್ನು ನೈಜಗೊಳಿಸಲು ನಡೆಸಿರುವ ಪ್ರಯತ್ನದಂತೆ ಕಾಣಿಸುತ್ತದೆ. ಪ್ರಧಾನಿ ಮಾತು ತಪ್ಪುವುದುಂಟೇ? ಅವರ ಪ್ರಭಾವದಿಂದಾಗಿ ರಾಜತಾಂತ್ರಿಕ ಚಟುವಟಿಕೆಗಳು ಒಮ್ಮೆಗೇ ಚುರುಕಾಗಿ, ಹರಿಣಾಕ್ಷಿಯ ಪತಿಯ ದೇಹ ಭಾರತಕ್ಕೆ ಬರುತ್ತದೆ.

ರಣಸಿಂಗನ ಅಂತ್ಯಸಂಸ್ಕಾರಕ್ಕೆ ಊರೇ ನೆರೆಯುತ್ತದೆ. ಸೂತಕದ ಮನೆಯಲ್ಲಿ, ದೇಹವನ್ನು ಹಸ್ತಾಂತರಿಸಿದ ಪತ್ರಕ್ಕೆ ಕುಟುಂಬದ ಸದಸ್ಯರಿಂದ ರುಜು ಪಡೆಯುವ ಆತುರ ಅಧಿಕಾರಿಗಳದು. ಹರಿಣಾಕ್ಷಿಯೂ ಸಹಿ ಹಾಕುತ್ತಾಳೆ. ಕೊನೆಗೂ ರಣಸಿಂಗನ ದೇಹಕ್ಕೆ ಘನತೆಯ ಅಂತ್ಯಸಂಸ್ಕಾರ ಸಾಧ್ಯವಾಯಿತು, ಹರಿಣಾಕ್ಷಿಗೆ ನ್ಯಾಯ ದೊರೆಯಿತು ಎಂದು ಪ್ರೇಕ್ಷಕ ನಿಟ್ಟುಸಿರುಬಿಡುವಷ್ಟರಲ್ಲಿ, ಹರಿಣಾಕ್ಷಿಯ ಮನಸ್ಸನ್ನು ಸುಡುತ್ತಿರುವ ಚಿತೆಯ ಬೆಂಕಿ ಕಾಣಿಸುತ್ತದೆ. ಗಂಡನ ಫೋಟೊದ ಮುಂದೆ, ‘ನಿನಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗಲಿಲ್ಲ, ಕ್ಷಮಿಸು’ ಎಂದು ರೋದಿಸುತ್ತಿದ್ದಾಳೆ. ಗಂಡನ ಕೈಮೇಲಿದ್ದ ಹಚ್ಚೆ, ಅಂತ್ಯಸಂಸ್ಕಾರ ನಡೆದ ವ್ಯಕ್ತಿಯಲ್ಲಿ ಇಲ್ಲದಿರುವುದನ್ನು ಹರಿಣಾಕ್ಷಿ ಗಮನಿಸಿದ್ದಾಳೆ. ಆದರೂ ಆಕೆ ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದಾಳೆ. ಅತ್ತ ಸೌದಿಯ ಸಮುದ್ರದಲ್ಲಿ ಹೆಣವೊಂದು ತೇಲುತ್ತಿದೆ.

ಜನಸಾಮಾನ್ಯರ ಪಾಲಿಗೆ ನ್ಯಾಯವೆನ್ನುವುದು ಮರೀಚಿಕೆಯಾಗಿ ಉಳಿಯುವ ವಿಪರ್ಯಾಸಕ್ಕೆ ಸಂಕೇತವಾಗಿ ಹರಿಣಾಕ್ಷಿ ಉಳಿಯುತ್ತಾಳೆ. ತಾನು ಮೋಸಹೋದುದು, ತನ್ನ ಗಂಡನಿಗೆ ಘನತೆಯ ಅಂತ್ಯಸಂಸ್ಕಾರ ಮಾಡಲು ವಿಫಲವಾದುದು ತಿಳಿದರೂ ಆಕೆ ಮೌನವಾಗಿ ಉಳಿಯುವುದು ಏಕೆ? ಪ್ರಧಾನಿಯ ಬಳಿಗೆ ಹೋದರೂ ನ್ಯಾಯ ಸಿಗದೆ ಹೋದಮೇಲೆ ತನ್ನ ಹೋರಾಟಕ್ಕೆ ಯಾವ ಅರ್ಥವೂ ಇಲ್ಲವೆನ್ನುವುದುಅವಳಿಗೆ ಮನವರಿಕೆಯಾದುದರ ಪರಿಣಾಮವೇ ಆ ಮೌನ. ಕಲ್ಲು ಗುದ್ದಿ ನೀರು ತರಿಸಬಹುದೇನೊ; ಮಾನವೀಯತೆಯ ಪಸೆಯೂ ಇಲ್ಲದ ಮನಸ್ಸುಗಳೊಂದಿಗೆ ಗುದ್ದಾಡುವುದರಿಂದ ಫಲವೇನು?

ಕಲಾವಿದರು ಮರೆತುಹೋಗಿ ಪಾತ್ರಗಳ ತವಕತಲ್ಲಣಗಳು ನೋಡುಗರ ಮನಸ್ಸಿನಲ್ಲಿ ಉಳಿಯುವಂತೆ, ರಣಸಿಂಗ ಮತ್ತು ಹರಿಣಾಕ್ಷಿಯಾಗಿ ವಿಜಯ್ ಸೇತುಪತಿ ಹಾಗೂ ಐಶ್ವರ್ಯಾ ರಾಜೇಶ್ರ ಪಾತ್ರ ನಿರ್ವಹಣೆ ಪಕ್ವವಾಗಿದೆ. ಪಿ. ವಿರುಮಾಂಡಿ ಅವರಿಗಿದು ಚೊಚ್ಚಿಲ ನಿರ್ದೇಶನ. ಮೊದಲ ಪ್ರಯತ್ನದಲ್ಲೇ ಸವಾಲಿನ ಕಥನವೊಂದನ್ನು ಆರಿಸಿಕೊಂಡಿರುವುದು ಅಚ್ಚರಿ ಹುಟ್ಟಿಸುವಂತಹದ್ದು ಹಾಗೂ ಮೆಚ್ಚುಗೆಗೆ ಅರ್ಹವಾದುದು.

ಮೂರು ತಾಸುಗಳ ಸಿನಿಮಾ ನೋಡುಗರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಎನ್ನುವುದು ಇಂಗ್ಲಿಷ್ ಪತ್ರಿಕೆಗಳ ವಿಮರ್ಶೆಗಳಲ್ಲಿರುವ ಸಾಮಾನ್ಯ ಅಭಿಪ್ರಾಯ. ಇದನ್ನು ಹೀಗೂ ನೋಡಬಹುದು. ನ್ಯಾಯದ ಹೋರಾಟ ದೀರ್ಘವಾದುದು; ಸಿನಿಮಾದ ಲಂಬಿಸುವಿಕೆಯನ್ನು ಹರಿಣಾಕ್ಷಿಯ ಸುದೀರ್ಘ ಹೋರಾಟದ ರೂಪಕವಾಗಿ ಭಾವಿಸಬಹುದು. ಹೋರಾಟದ ಪಯಣಗಳು, ನೋವಿನ ಸಂಕಥನಗಳು ಕೊನೆಯಿಲ್ಲದ ಗೋಳಿನಂತೆ ಕಾಣಿಸಿದ ಸಂದರ್ಭದಲ್ಲಿ, ನಾವು ತಾಳ್ಮೆಯ ಬಗ್ಗೆ ಹಾಗೂ ಕಲಾಕೃತಿಯ ಸೌಂದರ್ಯದ ಬಗ್ಗೆ ಮಾತನಾಡತೊಡಗುತ್ತೇವೆ. ಇಂಥ ಸೌಂದರ್ಯಪ್ರಜ್ಞೆಗೆ ಹಾಗೂ ಅವಸರದ ಮನೋಭಾವಕ್ಕೆ ಹರಿಣಾಕ್ಷಿ ಸವಾಲೊಡ್ಡುತ್ತಾಳೆ. ಹಾಗೆಂದು ಇಲ್ಲಿ ಚಿತ್ರದ ಕಟ್ಟುವಿಕೆ ವಾಚ್ಯವಾಗಿಲ್ಲ, ಶಿಲ್ಪ ಶಿಥಿಲವಾಗಿಲ್ಲ. ಸಂಗೀತ, ಛಾಯಾಗ್ರಹಣ, ಸಂಕಲನ ಎಲ್ಲವೂ ಚಿತ್ರದ ಆಶಯಕ್ಕೆ ಪೂರಕವಾಗಿಯೇ ಇವೆ.

ವಾಸ್ತವ ಹಾಗೂ ಕಲ್ಪನೆಯ ಮಾತನ್ನು ಮತ್ತೆ ನೆನಪಿಸಿಕೊಳ್ಳೋಣ. ವರ್ತಮಾನದ ಘಟನಾವಳಿಗಳನ್ನು ನೋಡಿದರೆ ಕಾಲ್ಪನಿಕ ಎನ್ನುವಂತಹದ್ದೇ ಒಂದು ಕಲ್ಪನೆ ಎನ್ನುವಂತಿದೆ. ಅಥವಾ ಸಮಾಜದ ಕಹಿವಾಸ್ತವಗಳಿಗೆ ಬೆನ್ನು ಹಾಕಿ ರಮ್ಯ ಕಲ್ಪನೆಯಲ್ಲಿ ಬದುಕುವುದನ್ನೇ ನಾವು ಸುಖಿಸುತ್ತಿರಬಹುದು. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಯುವತಿಯೊಬ್ಬಳ ಕೈಕಾಲು, ಬೆನ್ನುಮೂಳೆ ಗಾಸಿಗೊಂಡು ನಾಲಗೆ ತುಂಡಾಗುತ್ತದೆ. ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಆರು ವರ್ಷದ ಕಂದಮ್ಮಳ ಶ್ವಾಸಕೋಶವನ್ನು ಬಗೆಯಲಾಗುತ್ತದೆ. ಲಾಕ್ಡೌನ್ ವೇಳೆ ಲಕ್ಷ ಲಕ್ಷ ಕಾರ್ಮಿಕರು ನಡೆದು ಊರು ಸೇರುತ್ತಾರೆ. ಕಾಲುಗಳಲ್ಲಿ ರಕ್ತ ಜಿನುಗಿದರೂ, ಹಸಿವಿನಿಂದ ಕಂಗೆಟ್ಟರೂ ಅವರನ್ನು ಊರ ಕನಸು ಕಾಡುತ್ತದೆ. ಬೀದಿಪಾಲಾದ ಕಾರ್ಮಿಕರಿಗೆ ವಾಹನ ವ್ಯವಸ್ಥೆ ಮಾಡದ ಸರ್ಕಾರ, ವಿದೇಶಗಳಲ್ಲಿ ನೆಲೆಸಿದವರನ್ನು ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡುತ್ತದೆ. ಯಾವುದು ವಾಸ್ತವ? ಯಾವುದು ಕಲ್ಪನೆ? ತುಂಡಾಗಿ ಹೋಗಿರುವುದು, ಜರ್ಝರಿತಗೊಂಡಿರುವುದು ಯುವತಿಯ ನಾಲಗೆ, ಪುಪ್ಪುಸವಷ್ಟೇ ಅಲ್ಲ; ಸಮಾಜದ ನಾಲಗೆ, ಪುಪ್ಪುಸಗಳೂ ಜಜ್ಜಿಹೋಗಿವೆ. ಆದರೂ, ‘ಇವೆಲ್ಲವೂ ಕಾಲ್ಪನಿಕ’ ಎಂದು ಎಗ್ಗಿಲ್ಲದೆ ಹೇಳುತ್ತಿದ್ದೇವೆ. ಆತ್ಮವಂಚನೆ ಎನ್ನುವುದಕ್ಕೆ ಇದಲ್ಲದೆ ಬೇರೆ ಅರ್ಥವಿದೆಯೇ?

ರಘುನಾಥ ಚ.ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.