ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳಕಿನ ಮಸಿ ನಮ್ಮ ಮುಖದಲ್ಲಿಲ್ಲವೇ?

ಪೆನ್‌ಡ್ರೈವ್‌ ಪ್ರಕರಣ ಕರ್ನಾಟಕದ ರಾಜಕಾರಣ ತಲುಪಿರುವ ಅಧಃಪತನದ ಪ್ರತೀಕದಂತಿದೆ
Published 23 ಮೇ 2024, 23:30 IST
Last Updated 23 ಮೇ 2024, 23:30 IST
ಅಕ್ಷರ ಗಾತ್ರ

ಬೆಳುಗೊಳದ ಗೊಮ್ಮಟ ಕರ್ನಾಟಕದ ಮೂಲಕ ವಿಶ್ವಕ್ಕೆ ಸಂದಿರುವ ವಿರಾಗದ ಬಹು ದೊಡ್ಡ ಸಂಕೇತ. ಗೊಮ್ಮಟನಿಗೆ ವಿರುದ್ಧ ಪದದಂತೆ, ಕೊಳಕು, ಕ್ರೌರ್ಯವನ್ನೊಳಗೊಂಡ ವಿಕೃತ ಭೋಗದ ಶೃಂಗ ಮಾದರಿಯೂ ಕನ್ನಡದ ಮಣ್ಣಿನಿಂದಲೇ ಪ್ರಕಟಗೊಂಡಿದೆ– ಹಾಸನದ ಸಂಸದನ ಮೂಲಕ.

ಹುಯಿಲಗೋಳ ನಾರಾಯಣ ರಾಯರ ‘ಉದಯ ವಾಗಲಿ ನಮ್ಮ ಚೆಲುವ ಕನ್ನಡನಾಡು’ ಕವಿತೆಯಲ್ಲಿ ‘ಓಜೆಯಿಂ ಮೆರೆದರಸುಗಳ ಸಾಹಸದ ಸೂಡು’ ಎನ್ನುವ ಸಾಲಿದೆ. ‘ಓಜೆ’ ಎಂದರೆ ‘ಕ್ರಮ’ವೂ ಹೌದು, ಶಕ್ತಿ–ಸಾಮರ್ಥ್ಯವೂ ಹೌದು. ಹಾಸನದ ಸಂಸದನ ಕಾಮಕಾಂಡ ಪ್ರಕರಣದ ಹಿನ್ನೆಲೆಯಲ್ಲಿ ‘ಓಜೆಯ ಸಾಹಸ ಪ್ರದರ್ಶನ’ದ ಸಮಕಾಲೀನತೆಯನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?

ಯುವ ಸಂಸದ ತನ್ನ ಅಧಿಕಾರ ಮತ್ತು ಕುಟುಂಬದ ವರ್ಚಸ್ಸನ್ನು ದುರುಪಯೋಗ ಮಾಡಿಕೊಂಡು ಎಸಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯಗಳ ಆರೋಪವನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ನೋಡಬೇಕೆನ್ನುವ ಅಭಿಪ್ರಾಯವಿದೆ. ಇದಕ್ಕೆ ತಕ್ಕನಾಗಿ, ‘ಪ್ರಜ್ವಲ್‌ಗೂ ನನಗೂ ಸಂಬಂಧವಿಲ್ಲ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಸ್ವಂತ ಚಿಕ್ಕಪ್ಪನೇ ಹೀಗೆ ಹೇಳುವಾಗ, ಪ್ರಜ್ವಲ್‌ ಪಾಪಕೃತ್ಯದ ನೈತಿಕ ಹೊಣೆಗಾರಿಕೆಯನ್ನು ಕುಟುಂಬ, ಸಮುದಾಯ ಇಲ್ಲವೇ ನಾಡಿನ ನೆಲೆಗಟ್ಟಿನಲ್ಲಿ ನೋಡುವುದು ಸಾಧ್ಯವಿಲ್ಲ. ಕಳಂಕದ ಹೊಣೆಗಾರಿಕೆಗೆ ಅಪ್ಪಂದಿರಿರುವುದಿಲ್ಲ ಎನ್ನುವುದನ್ನು ಕುಮಾರಸ್ವಾಮಿ ಅವರು ಸಾಬೀತುಪಡಿಸಿದಂತಿದೆ. ಆದರೆ, ಪ್ರಜ್ವಲ್‌ಗೇನಾ ದರೂ ಒಲಿಂಪಿಕ್‌ ಪದಕ ಬಂದಿದ್ದಲ್ಲಿ ಕುಮಾರಸ್ವಾಮಿ ಹೀಗೆಯೇ ಹೇಳುತ್ತಿದ್ದರೆ? ಕುಮಾರಸ್ವಾಮಿ ಮಾತನ್ನು ಹಿಂಜಿ ನೋಡಿದರೆ, ದೇವೇಗೌಡರ ಕುಟುಂಬಕ್ಕೂ ತಮಗೂ ಸಂಬಂಧವಿಲ್ಲ ಎನ್ನುವ ಅರ್ಥವನ್ನೂ ಅವರ ಹೇಳಿಕೆಗೆ ಹಚ್ಚಲು ಸಾಧ್ಯವಿದೆ. ಆದರೆ, ಯಾರೊಬ್ಬರೂ ಹೊಣೆಗಾರಿಕೆಯಿಂದ ಇಷ್ಟು ಸುಲಭವಾಗಿ ನುಣುಚಿಕೊಳ್ಳುವುದು ಸಾಧ್ಯವಿಲ್ಲ. ಕುಮಾರಸ್ವಾಮಿ ಮಾತ್ರವಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರು ಹೀಗೆ ಹೇಳಿದರೂ ಅದನ್ನು ಒಪ್ಪುವುದು ಸಾಧ್ಯವಿಲ್ಲ. ಪ್ರಜ್ವಲ್‌ ಎಸಗಿದ್ದಾರೆನ್ನಲಾದ ಪಾಪಕೃತ್ಯ
ಗಳಲ್ಲಿ ಇವರುಗಳ ನೇರ ಪಾತ್ರವಿಲ್ಲದಿರಬಹುದು. ಆದರೆ, ಅದರ ಮಸಿ ಅವರ ಮುಖಕ್ಕೂ ಅಂಟಿಕೊಂಡಿರುವುದನ್ನು ನಿರಾಕರಿಸುವುದು ಸಾಧ್ಯವಿಲ್ಲ.

ಪ್ರಜ್ವಲ್‌ ಪ್ರಕರಣದಲ್ಲಿ ಎಲ್ಲ ಪಕ್ಷಗಳ ರಾಜಕಾರಣಿ ಗಳೂ ಸೋಗಲಾಡಿತನದಿಂದ ವರ್ತಿಸಿದ್ದಾರೆ. ಈ ಸೋಗಲಾಡಿತನ ಬಿಜೆಪಿಯಿಂದಲೇ ಆರಂಭವಾಗುತ್ತದೆ. ಪ್ರಜ್ವಲ್‌ರ ಕೊಳಕುತನದ ಬಗ್ಗೆ ಚುನಾವಣೆಗೆ ಮೊದಲೇ ಪಕ್ಷದ ವರಿಷ್ಠರಿಗೆ ಪತ್ರ ಬರೆದು ತಿಳಿಸಿದ್ದುದಾಗಿಯೂ ಕಳಂಕಿತನ ಜೊತೆಗೆ ರಾಜಕೀಯವಾಗಿ ಗುರುತಿಸಿಕೊಳ್ಳು ವುದು ಬೇಡವೆಂದು ಸಲಹೆ ನೀಡಿದ್ದಾಗಿಯೂ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ. ಹೀಗಿದ್ದೂ ಪ್ರಜ್ವಲ್‌ ಜೊತೆ ಬಿಜೆಪಿ ಗುರುತಿಸಿಕೊಂಡಿದ್ದು ಮಾತ್ರವಲ್ಲ, ಕಳಂಕಿತ ವ್ಯಕ್ತಿಯ ಪರವಾಗಿ ಖುದ್ದು ಪ್ರಧಾನಿಯೇ ಮತ ಕೇಳಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ, ಪ್ರಜ್ವಲ್‌ ಜೊತೆ ತಮಗೆ ಸಂಬಂಧವಿಲ್ಲವೆಂದು ಬಿಜೆಪಿ ಹೇಳಿದರೆ ಅದನ್ನು ಯಾರಾದರೂ ನಂಬುವುದು ಸಾಧ್ಯವೇ? ಪ್ರಕರಣ ವನ್ನು ನಿಭಾಯಿಸುವಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಮುಖಂಡರ ವರ್ತನೆಯೂ ಪ್ರಶ್ನಾರ್ಹ. ಸಂತ್ರಸ್ತೆಯರ ಹಿತಾಸಕ್ತಿ ರಕ್ಷಣೆಗಿಂತಲೂ ರಾಜಕೀಯ ಎದುರಾಳಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದರಲ್ಲೇ ಅಧಿಕಾರದಲ್ಲಿ ಇರುವವರಿಗೆ ಹೆಚ್ಚು ಉತ್ಸಾಹ ಇರುವಂತಿದೆ.

ಬಿಜೆಪಿ, ಕಾಂಗ್ರೆಸ್‌ಗಿಂತಲೂ ಪೆನ್‌ಡ್ರೈವ್‌ ಪ್ರಕರಣ ಹೆಚ್ಚು ಬಾಧಿಸಬೇಕಾದುದು ಜೆಡಿಎಸ್‌ ನಾಯಕರನ್ನು. ಜೆಡಿಎಸ್‌ ಕೌಟುಂಬಿಕ ಪಕ್ಷ ಎನ್ನುವುದನ್ನು ಆ ಪಕ್ಷದ ಕೇಂದ್ರದಲ್ಲಿರುವವರೇ ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ. ಹಾಗಾಗಿ, ಮನೆಯ ಸದಸ್ಯನೊಬ್ಬ ಕಳಂಕ ಮೆತ್ತಿಕೊಂಡಾಗ ಆತನನ್ನು ದೂರ ಇಡುವ ಮೂಲಕ ಕುಟುಂಬದ ಪಾವಿತ್ರ್ಯ ಕಾಪಾಡಿಕೊಳ್ಳುವುದು ಸಾಧ್ಯವಿಲ್ಲ. ಪೆನ್‌ಡ್ರೈವ್‌ನಲ್ಲಿರುವ ದೃಶ್ಯಗಳು ಎರಡು- ಮೂರು ವರ್ಷಗಳಷ್ಟು ಹಳೆಯವು ಎಂದು ಆರೋಪಿಯ ತಂದೆ ಹೇಳಿದರು. ‘ಪ್ರಜ್ವಲ್‌ ವಿದೇಶಿ ಯಾತ್ರೆ ನನಗೆ ತಿಳಿದಿರಲಿಲ್ಲ ಎನ್ನುವುದನ್ನು ನಾನು ಜನರಿಗೆ ಅರ್ಥ ಮಾಡಿಸುವುದು ಸಾಧ್ಯವಿಲ್ಲ. ನಾನು ನನ್ನ ಆತ್ಮಸಾಕ್ಷಿಗೆ ಮಾತ್ರ ಉತ್ತರಿಸಬಲ್ಲೆ’ ಎಂದು ತಾತ ಹೇಳಿದ್ದಾರೆ. ಪ್ರಸಕ್ತ ಘಟನೆಯ ಹಿಂದೆ ಕುಟುಂಬವನ್ನು ಗುರಿಯಾಗಿಸಿಕೊಂಡ ರಾಜಕೀಯ ಷಡ್ಯಂತ್ರವಿದೆ ಎನ್ನುವ ಅರ್ಥದಲ್ಲೂ ಮಾತನಾಡಿದ್ದಾರೆ. ಈ ಮಾತುಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಸಾರ್ವಜನಿಕ ಜೀವನದಲ್ಲಿ ತೊಡಗಿಕೊಂಡ ವ್ಯಕ್ತಿಗೆ ಜನರಿಗಿಂತಲೂ ಮಿಗಿಲಾದ ಆತ್ಮಸಾಕ್ಷಿ ಅಥವಾ ದೈವವುಂಟೆ?

ಪ್ರಜ್ವಲ್‌ ಪ್ರಕರಣವನ್ನು ಲೈಂಗಿಕ ದೌರ್ಜನ್ಯದ ಪ್ರಕರಣ ವಾಗಿಯಷ್ಟೇ ನೋಡಲಾಗದು. ಅದು, ಕಳೆದೊಂದು ದಶಕದಲ್ಲಿ ಕರ್ನಾಟಕದ ರಾಜಕಾರಣ ತಲುಪಿರುವ ಅಧಃಪತನದ ಆಳವೂ ಹೌದು. ಕೊಳಕು ಮೆತ್ತಿಕೊಳ್ಳು ವುದನ್ನು ಕರ್ನಾಟಕದ ರಾಜಕಾರಣ ಇತ್ತೀಚಿನ ವರ್ಷಗಳಲ್ಲಿ ರೂಢಿ ಮಾಡಿಕೊಂಡಂತಿದೆ. ಅಧಿಕಾರ ಪಡೆಯುವ ಉದ್ದೇಶವೇ ಹಣ ಮಾಡುವುದು ಹಾಗೂ ತೆವಲುಗಳನ್ನು ತೀರಿಸಿಕೊಳ್ಳುವುದು ಎನ್ನುವಂತಾಗಿದೆ. ಐಪಿಎಲ್‌ ಕ್ರಿಕೆಟಿಗರೇ ನಾಚಿಕೊಳ್ಳುವಂತೆ ಜನಪ್ರತಿ ನಿಧಿಗಳು ತಮ್ಮನ್ನು ತಾವು ಬಿಕರಿಗಿಟ್ಟುಕೊಂಡ ನಾಡಿದು. ಒಂದು ಪಕ್ಷದಿಂದ ಚುನಾಯಿತರಾದ ಶಾಸಕರನ್ನು ಮತ್ತೊಂದು ಪಕ್ಷ ‘ಆಪರೇಷನ್‌’ ಹೆಸರಿನಲ್ಲಿ ಕೊಂಡುಕೊಳ್ಳುವುದು ಸಾಧ್ಯ ಎನ್ನುವುದಕ್ಕೂ  ಕರ್ನಾಟಕ ಪ್ರಯೋಗಶಾಲೆಯಾಯಿತು. ವಿಧಾನಸಭೆಯು ಅಸಭ್ಯ ಚಿತ್ರಗಳನ್ನು ನೋಡುವ ತಾಣವಾಯಿತು. ಸಚಿವರೊಬ್ಬರ ಲೈಂಗಿಕ ಸಾಹಸದ ವಿಡಿಯೊ ಬಹಿರಂಗಗೊಂಡಿತು. ಧರ್ಮವನ್ನು ಕಾರಣವಾಗಿಟ್ಟುಕೊಂಡು ಹೆಣ್ಣುಮಕ್ಕಳನ್ನು
ಶಾಲೆಯಿಂದ ದೂರವಿಡಲಾಯಿತು; ವ್ಯಾಪಾರಿಗಳ ಹಕ್ಕನ್ನು ಧರ್ಮ ಸಂರಕ್ಷಣೆ ಹೆಸರಿನಲ್ಲಿ ಕಸಿದುಕೊಳ್ಳಲಾಯಿತು. ಪರಧರ್ಮ ಪರವಿಚಾರ ಸಹಿಷ್ಣು ಪರಂಪರೆಯ ಈ ಹೊತ್ತಿನ ಸಾಹಸಗಳು ಒಂದೇ ಎರಡೇ... ಈ ಪಟ್ಟಿಗೆ ಹೊಸ ಸೇರ್ಪಡೆ: ಕೊಲೆಗೀಡಾದ ಯುವತಿಯರ ಸಾವುಗಳು ಉಂಟುಮಾಡಬಹುದಾದ ಸ್ಪಂದನಗಳೂ ಧರ್ಮಾಧಾರಿತ ಎನ್ನುವಂತಾಗಿರುವುದು.

ಧರ್ಮದಲ್ಲಿ ತ್ಯಾಗವನ್ನೂ ರಾಜಕಾರಣದಲ್ಲಿ ನೀತಿಯನ್ನೂ ಗಾಂಧೀಜಿ ಅಪೇಕ್ಷಿಸುತ್ತಾರೆ. ನೈತಿಕತೆ ಹಾಗೂ ಮೌಲ್ಯ ವ್ಯವಸ್ಥೆಯನ್ನು ಸಮಾಜದಲ್ಲಿ ನೆಲೆಗೊಳಿಸುವ ದಿಸೆಯಲ್ಲಿ ಧರ್ಮ ಮತ್ತು ರಾಜಕಾರಣಕ್ಕೆ ವಿಶೇಷ ಸ್ಥಾನವಿದೆ. ಪ್ರತ್ಯೇಕ ನೆಲೆಗಳಲ್ಲಿ ಕಾರ್ಯನಿರ್ವಹಿಸಬೇಕಾದ ಇವೆರಡರ ಅಂತಿಮ ಉದ್ದೇಶ ಸಮಾಜದ ಆರೋಗ್ಯವಾಗಿದೆ. ದುರದೃಷ್ಟವಶಾತ್, ಧರ್ಮ ಹಾಗೂ ರಾಜಕಾರಣದ ನಡುವಿನ ಗೆರೆ ದೇಶದಲ್ಲಿ ಹೆಚ್ಚೂಕಡಿಮೆ ಅಳಿಸಿಹೋಗಿದೆ ಹಾಗೂ ಎರಡೂ ಕ್ಷೇತ್ರಗಳು ತಮ್ಮದಲ್ಲದ ಕಾರ್ಯವನ್ನು ನಿರ್ವಹಿಸಲು ಉತ್ಸಾಹ ತೋರುತ್ತಿರು ವುದಕ್ಕಾಗಿ ಜನರ ಗೌರವ ಕಳೆದುಕೊಳ್ಳುತ್ತಿವೆ. ಈ ಕುಖ್ಯಾತಿಗೆ ಕರ್ನಾಟಕ ಮಾದರಿಗಳನ್ನು ಒದಗಿಸಿರುವುದು ಕನ್ನಡಿಗರ ಭಾಗ್ಯವಿಶೇಷವೆಂದೇ ತಿಳಿಯಬೇಕಾಗಿದೆ. ಚಿತ್ರದುರ್ಗ ಬೃಹನ್ಮಠದ ಸ್ವಾಮೀಜಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ, ರಾಜಕಾರಣಿಯ ಲೈಂಗಿಕ ಹಗರಣ ಬೆಳಕಿಗೆ ಬಂದಿದೆ. ಈ ಎರಡು ಪ್ರಕರಣಗಳು ಸಾಲವೇ ಕನ್ನಡಿಗರು ತಲೆ ತಗ್ಗಿಸಲು, ನಾಡಿನ ಮಾನ ನೆರೆಹೊರೆಯವರ ಎದುರು ಹಗುರಾಗಲು.

ವೈಯಕ್ತಿಕ ಬದುಕಿನಲ್ಲೂ, ಸಾರ್ವಜನಿಕ ಬದುಕಿನಲ್ಲೂ ಲಜ್ಜೆಯನ್ನು ಹೊರದೂಡಿ, ಸಿ.ಡಿ.–ಪೆನ್‌ಡ್ರೈವ್‌ಗಳನ್ನು ಜೊತೆಗಿಟ್ಟುಕೊಂಡು ಓಡಾಡುತ್ತಿರುವ ರಾಜಕಾರಣಿಗಳು ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆ. ಒಬ್ಬರ ಬೆತ್ತಲೆಯನ್ನು ನೋಡಿ ಮತ್ತೊಬ್ಬರು ನಗುತ್ತಾ, ಜನರಿಗೆ ವಿಶ್ವಾಸದ್ರೋಹ ಎಸಗುತ್ತಿದ್ದಾರೆ. ತನ್ನ ಕೊಳಕು ಹೊರಬರಬಾರದೆಂದು ಮತ್ತೊಬ್ಬರ ಕೊಳಕನ್ನು ಗುಟ್ಟಾಗಿಡುವವರೇ ಹೆಚ್ಚಾಗಿ ರುವ ರಾಜಕಾರಣದಲ್ಲಿ ಯಾರೂ ಸುಭಗರಿದ್ದಂತಿಲ್ಲ. ಯಾರು ಯಾರನ್ನು ಯಾವಾಗ ಬೆತ್ತಲು ಮಾಡುವರೋ ತಿಳಿಯದು. ಗಂಡಸರ ಈ ಬೆತ್ತಲೆಯಾಟದಲ್ಲಿ ಅಸಹಾಯಕ ಹೆಣ್ಣುಮಕ್ಕಳು ಬಲಿಪಶುಗಳಾಗುತ್ತಿರುವುದು ಯಾವ ರಾಜಕಾರಣಿಯನ್ನೂ ಕಸಿವಿಸಿಗೊಳಿಸಿದಂತಿಲ್ಲ.

ಪ್ರಜ್ವಲ್‌ ಪ್ರಕರಣ ಬೆಳಕಿಗೆ ಬಂದ ತಕ್ಷಣ ಅವರ ಕುಟುಂಬ ರಾಜ್ಯದ ಕ್ಷಮೆ ಕೇಳಬೇಕಿತ್ತು. ಎದೆಯೊಳಗೆ ಕೊಂಚವಾದರೂ ಮಾನವೀಯತೆಯ ಪಸೆ ಉಳಿಸಿಕೊಂಡಿರುವ ರಾಜಕಾರಣಿ ಇದ್ದಿದ್ದಲ್ಲಿ ಲಜ್ಜೆಯಿಂದ ತಲೆ ತಗ್ಗಿಸಬೇಕಾಗಿತ್ತು. ಆದರೆ, ಪಾಪಪ್ರಜ್ಞೆಯ ಸುಳಿವೇ ಎಲ್ಲೂ ಕಾಣಿಸುತ್ತಿಲ್ಲ. ರಾಜಕಾರಣಿಗಳು ನಾಡಿನ ಕ್ಷಮೆ ಕೇಳುವುದಿರಲಿ, ಇಂಥವರನ್ನು ಚುನಾಯಿಸಿದ್ದಕ್ಕಾಗಿ ಚುನಾಯಿಸುತ್ತಿರುವುದಕ್ಕಾಗಿ ನಾಗರಿಕರು ಲಜ್ಜೆಯಿಂದ ತಲೆ ತಗ್ಗಿಸಬೇಕಾಗಿದೆ; ತಮ್ಮ ಮನಸ್ಸಾಕ್ಷಿಯ ಕ್ಷಮೆ ಕೋರಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT