ಬುಧವಾರ, ಸೆಪ್ಟೆಂಬರ್ 22, 2021
28 °C
ನವಿಲಿನೊಂದಿಗೆ ಪ್ರಧಾನಿ ನಲಿವಿನ ಕ್ಷಣ

ಆತ್ಮನಿರ್ಭರ ಭಾರತದ ರೂಪಕ: ಪೌಡ್ರು ಹಾಕ್ಕೊಳ್ಳೊ, ತಲೆ ಬಾಚ್ಕೊಳ್ಳೊ...

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ಪ್ರಧಾನಿ ನರೇಂದ್ರ ಮೋದಿ ಅವರು ನವಿಲಿಗೆ ಕಾಳು ತಿನ್ನಿಸುವ ಹಾಗೂ ನವಿಲಿಗೆ ಅವರು ಏನನ್ನೋ ಓದಿ ಹೇಳುತ್ತಿರುವಂತೆ ತೋರುವ ಸುಂದರ ವಿಡಿಯೊ ನೋಡಿದಾಗ ತಕ್ಷಣ ನೆನಪಾದುದು ಶ್ರೀಕೃಷ್ಣ ಪರಮಾತ್ಮ. ಅಷ್ಟಮಹಿಷಿಯರನ್ನೂ ಸಹಸ್ರಾರು ಸಖಿಯರನ್ನೂ ಹೊಂದಿದ್ದ ಕೃಷ್ಣ, ತನ್ನನ್ನು ‘ನಿತ್ಯ ಬ್ರಹ್ಮಚಾರಿ’ ಎಂದು ಕರೆದು
ಕೊಳ್ಳುತ್ತಾನೆ. ಅವಕಾಶ ಸಿಕ್ಕಾಗ ಹೊಟ್ಟೆ ಬಿರಿಯುವಂತುಣ್ಣುವ ಋಷಿ ದೂರ್ವಾಸ ‘ನಿತ್ಯ ಉಪವಾಸಿ’. ಏಕೆಂದರೆ, ಕೃಷ್ಣ ಮತ್ತು ದೂರ್ವಾಸರು ತಮ್ಮ ದೇಹ ಮತ್ತು ಆತ್ಮಗಳ ನಡುವೆ ಅಂತರ ಸಾಧಿಸಿದ ಮಹಾನುಭಾವರು. ಭೋಗ ಹಾಗೂ ಆಹಾರ ದೇಹಕ್ಕೇ ಹೊರತು ಆತ್ಮಕ್ಕೆ ಅಲ್ಲವಾದ ಕಾರಣ, ಬ್ರಹ್ಮಚರ್ಯ ಹಾಗೂ ಉಪವಾಸ ಸಾಧನೆ ಅವರಿಗೆ ಸಾಧ್ಯವಾಯಿತಂತೆ. ದೇಶದಲ್ಲಿ ದಿನವೊಂದಕ್ಕೆ ಸುಮಾರು ಐವತ್ತು ಸಾವಿರ ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವ ಸಂದರ್ಭದಲ್ಲೂ ‘ನವಿಲಿನೊಂದಿಗೆ ಪ್ರಧಾನಿ ನಲಿವಿನ ಕ್ಷಣಗಳನ್ನು’ ನೋಡಿದರೆ, ದೇಹ ಮತ್ತು ಆತ್ಮದ ಪ್ರತ್ಯೇಕತೆಯ ಸಿದ್ಧಿ ಮೋದಿ ಅವರಿಗೂ ಸಾಧ್ಯವಾಗಿರಬಹುದು.

ಪ್ರಧಾನಿಯವರು ಏನನ್ನೋ ಓದುತ್ತಿರುವ ಹಾಗೂ ಅದನ್ನು ನವಿಲು ಆಲಿಸುತ್ತಿರುವ ಬಿಂಬವನ್ನು ಈ ಹೊತ್ತಿನ ಸಾಹಿತ್ಯಕ್ಷೇತ್ರದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲೂ ಬಳಸಿಕೊಳ್ಳಬಹುದು. 

ಕೊರೊನಾ ವೈರಾಣು ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ಹೇರಿರುವ ನಿರ್ಬಂಧ, ಸಾಹಿತ್ಯ ಕ್ಷೇತ್ರವನ್ನೂ ಉಸಿರುಗಟ್ಟಿಸಿತಷ್ಟೆ. ‘ಕೋವಿಡ್‌–19’ರ ಪೂರ್ವದಲ್ಲಿ ರಾಜ್ಯದ ಒಂದಲ್ಲಾ ಒಂದು ಕಡೆ ಪ್ರತಿನಿತ್ಯ ಪುಸ್ತಕ ಬಿಡುಗಡೆ ಸಂಭ್ರಮ ನಡೆಯುತ್ತಿತ್ತು. ಬೆಂಗಳೂರಿನಲ್ಲಂತೂ ಶನಿವಾರ–ಭಾನುವಾರಗಳಂದು ಏಳೆಂಟು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಲ್ಲದೆ, ವಿಚಾರಸಂಕಿರಣ, ಸನ್ಮಾನ–ಸಂವಾದ, ಕವಿಗೋಷ್ಠಿಯಂತಹ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕೊರೊನಾ ಕಾರಣದಿಂದಾಗಿ ಆ ಎಲ್ಲ ಸಂಭ್ರಮಕ್ಕೆ ತೆರೆಬಿದ್ದಿರುವಾಗ, ಸಾಹಿತ್ಯ ಕ್ಷೇತ್ರಕ್ಕೆ ವೆಂಟಿಲೇಟರ್‌ನಂತೆ ಕಾಣಿಸಿದ್ದು ಅಂತರ್ಜಾಲ. ಕೊರೊನಾಪೂರ್ವ ಸಮಯದಲ್ಲೂ ಕನ್ನಡ ಲೇಖಕರು ಹಾಗೂ ಸಾಹಿತ್ಯವು ಅಂತರ್ಜಾಲದ ನಂಟು ಹೊಂದಿದ್ದರೂ ಆ ಬಂಧ ಅನಿವಾರ್ಯ ಅನ್ನಿಸಿರುವುದು ಲಾಕ್‌ಡೌನ್‌ ಸಮಯದಲ್ಲಿ. ಸಭಾಂಗಣಗಳಲ್ಲಿ ನಡೆಯುತ್ತಿದ್ದ ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಸಂವಾದ ಕಾರ್ಯಕ್ರಮಗಳು ಮೊಬೈಲ್‌ ಕ್ಯಾಮೆರಾದ ಎದುರು, ಫೇಸ್‌ಬುಕ್‌ ಅಂಗಳದಲ್ಲಿ ನಡೆಯುತ್ತಿರುವುದು ಈ ಹೊತ್ತಿನ ವಿದ್ಯಮಾನ.

ನಾಡಿನ ಬೇರೆ ಬೇರೆ ಭಾಗಗಳ ಕವಿಗಳು ಫೇಸ್‌ಬುಕ್‌ ಅಂಗಳದಲ್ಲಿ ಒಟ್ಟಾಗಿ ತಂತಮ್ಮ ಕವಿತೆಗಳನ್ನು ಓದುವ ಸಂದರ್ಭವು ಪ್ರಾದೇಶಿಕ ತಾರತಮ್ಯ ನಿವಾರಣೆಯ ಪ್ರಯತ್ನವಾಗಿಯೂ ಸಾಹಿತ್ಯದ ಪ್ರಜಾಪ್ರಭುತ್ವೀಕರಣದ ರೂಪದಲ್ಲಿಯೂ ಮುಖ್ಯವಾದುದು. ಅಂಬೇಡ್ಕರ್‌ ಜಯಂತಿಯಂದು ನಡೆದ ಬಾಬಾಸಾಹೇಬರ ಪಠ್ಯಗಳ ದಿನವಿಡೀ ಓದು ಹಾಗೂ ಕಿ.ರಂ. ನಾಗರಾಜರ ಜನ್ಮದಿನದಂದು ಇಡೀ ರಾತ್ರಿ ಬೆಳಗಿದ ಕಾವ್ಯದೀವಿಗೆಯ ಕಾರ್ಯಕ್ರಮಗಳನ್ನು ಕನ್ನಡ ನಾಡು–ನುಡಿಯನ್ನು ಸಮಗ್ರವಾಗಿ ಪ್ರತಿನಿಧಿಸುವ ಮಾದರಿಗಳಾಗಿ ನೋಡಬಹುದು. ವಾರಾಂತ್ಯದಲ್ಲಂತೂ ಒಂದರ ಹಿಂದೊಂದು ಸಾಹಿತ್ಯಿಕ–ಸಾಂಸ್ಕೃತಿಕ ‘ಫೇಸ್‌ಬುಕ್‌ ಲೈವ್‌’ ಕಾರ್ಯಕ್ರಮಗಳು ನಡೆಯುತ್ತಿದ್ದು, ಅವುಗಳನ್ನು ಧಾರಾವಾಹಿಗಳಂತೆ ವೀಕ್ಷಿಸುವವರೂ ಇದ್ದಾರೆ.

ಕಾರ್ಯಕ್ರಮಗಳು ಮಾತ್ರವಲ್ಲ, ಕೃತಿಗಳು  ಡಿಜಿಟಲ್‌ ರೂಪ ಪಡೆದುಕೊಳ್ಳುವ ಪ್ರಕ್ರಿಯೆಗೆ ಲಾಕ್‌ಡೌನ್‌ ಸಮಯ ವೇಗವರ್ಧಕವಾಗಿ ಪರಿಣಮಿಸಿರುವುದು ಗಮನಾರ್ಹ ಸಾಹಿತ್ಯಿಕ ವಿದ್ಯಮಾನ. ಕನ್ನಡ ಪುಸ್ತಕಗಳನ್ನು ವೃತ್ತಿಪರವಾಗಿ ಪ್ರಕಟಿಸುತ್ತಿರುವ ‘ಮೈಲ್ಯಾಂಗ್‌’, ಕೃತಿ–ಸಾಹಿತಿ ಪರಿಚಯ ಹಾಗೂ ಪ್ರಚಾರಕ್ಕೆ ವೇದಿಕೆಯಾಗಿರುವ ‘ಬುಕ್‌ಬ್ರಹ್ಮ’, ಡಿಜಿಟಲ್ ಪುಸ್ತಕದೊಂದಿಗೆ ಆನ್‌ಲೈನ್‌ ಸಾಹಿತ್ಯಿಕ ಪತ್ರಿಕೆಯ ರೂಪದಲ್ಲೂ ಮುಖ್ಯವೆನ್ನಿಸುವ ‘ಋತುಮಾನ’– ಲಾಕ್‌ಡೌನ್‌ ಪೂರ್ವದಲ್ಲೂ ಸಕ್ರಿಯವಾಗಿದ್ದ ಈ ಬಳಗಗಳು, ಕೊರೊನಾ ನಿರ್ಬಂಧದ ಸಮಯದಲ್ಲಿ ಕನ್ನಡ ಸಾಹಿತ್ಯ ಮತ್ತು ಬರಹಗಾರರಿಗೆ ಉತ್ಸಾಹ–ಉಲ್ಲಾಸ ಹಂಚುವ ಪ್ರಯತ್ನದಲ್ಲಿ ಪರಿಣಾಮಕಾರಿಯಾಗಿ ತೊಡಗಿಕೊಂಡಿವೆ.

‘ಬುಕ್‌ಬ್ರಹ್ಮ’ ಬಳಗವಂತೂ ನಾಡಿನ ನೂರಾರು ಹಿರಿಯ– ಕಿರಿಯ ಬರಹಗಾರರು, ಕಲಾವಿದರಿಗೆ ತಮ್ಮ ಸೃಜನಶೀಲತೆಯ ಹಿಂದಿನ ಪ್ರೇರಣೆಗಳ ಬಗ್ಗೆ ಮಾತನಾಡಲು, ಕಥೆ–ಕವಿತೆ ಓದಲು ಅವಕಾಶ ಕಲ್ಪಿಸಿದೆ. ಮುದ್ದು ತೀರ್ಥಹಳ್ಳಿ ಎನ್ನುವ ಯುವ ಕವಯಿತ್ರಿ, ಮಗಳನ್ನು ಕವಿಯಾಗಿಸಬೇಕೆನ್ನುವ ಅಮ್ಮನ ಮಹತ್ವಾಕಾಂಕ್ಷೆಗೆ ತನ್ನ ಬಾಲ್ಯ ಬಲಿಯಾದುದು ಹಾಗೂ ಅಮ್ಮನಿಂದ ಅನುಭವಿಸಿದ ದೈಹಿಕ–ಮಾನಸಿಕ ಹಿಂಸೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದು ಸಹೃದಯರನ್ನು ಬೆಚ್ಚಿಬೀಳಿಸುವಂತಿತ್ತು. ಪರೀಕ್ಷೆಗಳಲ್ಲಿ ಅಂಕಗಳಿಗಾಗಿ ಮಕ್ಕಳನ್ನು ಗೋಳು ಹೊಯ್ದುಕೊಳ್ಳುವ ಪೋಷಕರಿದ್ದಾರೆ. ಸಾಹಿತ್ಯವಲಯದಲ್ಲೂ ಅಂತಹವರು ಇರುವುದಕ್ಕೆ ಮುದ್ದು ಮಾತುಗಳು ಉದಾಹರಣೆಯಾಗಿವೆ.

ಕನ್ನಡ ಸಾಹಿತ್ಯ ಪಡೆದುಕೊಳ್ಳುತ್ತಿರುವ ಡಿಜಿಟಲ್‌ ಪ್ರಭೆಯ ಬಗ್ಗೆ ಮಾತನಾಡುವಾಗ ಅದರ ನೆರಳಿನ ಬಗ್ಗೆಯೂ ಯೋಚಿಸಬೇಕು. ಪುಸ್ತಕ ಬಿಡುಗಡೆ, ಕವಿಗೋಷ್ಠಿಯ ನೆಪದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ಸಾಹಿತ್ಯದ ಜೊತೆಗೆ ನಡೆಯುತ್ತಿದ್ದ ಸ್ನೇಹಸಮ್ಮಿಲನದ ರೂಪವೂ ಇತ್ತು. ಆ ಬಗೆಯ ಸಂಬಂಧಗಳ ಸ್ಪರ್ಶವನ್ನು ಡಿಜಿಟಲ್‌ ಕಾರ್ಯಕ್ರಮಗಳಿಂದ ನಿರೀಕ್ಷಿಸುವಂತಿಲ್ಲ. ಆಯೋಜಕರು ಮತ್ತು ಸಹೃದಯರು ಇಬ್ಬರಿಂದಲೂ ಸಮಯ, ಶ್ರಮ ಹಾಗೂ ಹಣ ಬಯಸುತ್ತಿದ್ದ ಕಾರಣದಿಂದಾಗಿ, ಸಭಾಂಗಣಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ತಂತಾನೇ ಒಂದು ಬದ್ಧತೆ ಒದಗುತ್ತಿತ್ತು. ಅಂಥ ಬದ್ಧತೆಯನ್ನು ಡಿಜಿಟಲ್‌ ಪ್ರಭಾವಳಿಯಲ್ಲಿ ಕಾಣುವುದು ಕಷ್ಟ.

ಡಿಜಿಟಲ್‌ ಸಾಹಿತ್ಯ ಕಾರ್ಯಕ್ರಮಗಳ ಬಗ್ಗೆ ಗಮನಿಸಬೇಕಾದ ಮತ್ತೊಂದು ಅಂಶ, ಅವು ಪಡೆದುಕೊಳ್ಳುತ್ತಿರುವ ಪ್ರದರ್ಶನಪ್ರಿಯತೆಯ ರೂಪ. ಮೊಬೈಲ್‌ ಬಳಕೆ ಸುಲಭಸಾಧ್ಯವಾದುದರಿಂದ, ತಂತಮ್ಮ ಕಥೆ–ಕವಿತೆ ವಾಚನಗಳ ವಿಡಿಯೊ ಮಾಡಿ, ಅವುಗಳನ್ನು ಯುಟ್ಯೂಬ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌‌ಗಳಲ್ಲಿ ತೂರಿಬಿಡುತ್ತಿದ್ದಾರೆ. ಕೆಲವರಂತೂ ತಾವು ಬರೆಯದ, ಬರೆಯಬೇಕಾದ ಕಥೆಗಳನ್ನು ಫೇಸ್‌ಬುಕ್‌–ಯುಟ್ಯೂಬ್‌ಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳಲಿಕ್ಕೆ ಅವರು ನಡೆಸುವ ತಯಾರಿ ನೋಡುಗರ ಗಮನಸೆಳೆಯುವಂತಿರುತ್ತದೆ. ಸಾಲಂಕೃತ ಬರಹಗಾರರ ಜೊತೆಗೆ, ಅವರ ಹಿನ್ನೆಲೆಯಲ್ಲಿನ ಪುಸ್ತಕಸಾಲೂ ವಿಡಿಯೊದಲ್ಲಿ ಮಹತ್ವ ಪಡೆಯುತ್ತದೆ. ತಮ್ಮ ಸಾಹಿತ್ಯಕ್ಕಿಂತಲೂ ವಿಡಿಯೊದ ಬಾಳಿಕೆಯೇ ಹೆಚ್ಚು ಎಂದು ನಂಬಿದಂತೆ ಕಾಣಿಸುವವರು, ‘ಪೌಡ್ರು ಹಾಕ್ಕೊಳ್ಳೊ, ತಲೆ ಬಾಚ್ಕೊಳ್ಳೊ’ ಸಿನಿಮಾ ಹಾಡನ್ನು ನೆನಪಿಸುತ್ತಾರೆ. ಇನ್ನು ಕೆಲವರಿರುತ್ತಾರೆ, ಒಂದೇ ‘ಕೊಂಡಿ’ಯನ್ನು ಸಿಕ್ಕ ಸಿಕ್ಕ ಗೋಡೆಗಳಿಗೆಲ್ಲ ಅಂಟಿಸಿ, ಸಹೃದಯರ ಸಹನೆಗೆ ಸವಾಲೊಡ್ಡುವವರು. ಗೋಡೆ ಕಂಡಲ್ಲೆಲ್ಲ ಹಾರುವ ಇವರ ನಡವಳಿಕೆಯನ್ನು ವ್ಯಸನವೋ ಪ್ರದರ್ಶನಪ್ರಿಯತೆಯೋ ಸ್ಪಷ್ಟವಾಗಿ ಹೇಳುವುದು ಕಷ್ಟ.

ಕೆಲವು ಲೇಖಕರು ತಮ್ಮ ಪುಸ್ತಕಗಳ ಬಗ್ಗೆ ಬಂದ ಪ್ರತಿಕ್ರಿಯೆಗಳನ್ನೆಲ್ಲ ಫೇಸ್‌ಬುಕ್‌ ಗೋಡೆಯ ಮೇಲೆ ಅಂಟಿಸುವುದು, ಅವುಗಳಿಂದ ಪ್ರೇರಿತರಾಗಿ ಮತ್ತಷ್ಟು ವೆಬ್ಬಿಗರು ಕಬ್ಬಿಗರಾಗಿ ಪ್ರತಿಕ್ರಿಯಿಸುವ ‘ಪ್ರಶಂಸಾ ವಿಮರ್ಶೆ’ ಪ್ರವೃತ್ತಿಯೂ ಕೊರೊನಾ ಸಾಹಿತ್ಯ ಸಂಸ್ಕೃತಿ ಸಂದರ್ಭದ ಲಕ್ಷಣಗಳಲ್ಲೊಂದಾಗಿದೆ. ಇವುಗಳಿಂದ ಸೃಷ್ಟಿಯಾಗುತ್ತಿರುವ ‘ಡಿಜಿಟಲ್ ಕಸ’ದ ಪ್ರಮಾಣ ಅಲಕ್ಷಿಸುವಂತಹದ್ದಲ್ಲ. ಈ ಕಸ ತಂತ್ರಜ್ಞಾನದ ಅಪಬಳಕೆಯಾಗಿರುವುದರ ಜೊತೆಗೆ, ಸತ್ವಯುತ ಡಿಜಿಟಲ್ ಕೃತಿಗಳ ಬಗ್ಗೆಯೂ ಸಹೃದಯರು ನಿರಾಸಕ್ತಿ ತಾಳಲು ಕಾರಣವಾಗುವಂತಿದೆ.

ಸಾಹಿತ್ಯಕ್ಷೇತ್ರದ ‘ನವಿಲು ವಿಹಾರ’ದ (ಷಣ್ಮುಖ ವಿಹಾರದ) ಕೊನೆಗೆ ದೇಹ–ಆತ್ಮದ ಜಿಜ್ಞಾಸೆಯನ್ನು ಮತ್ತೆ  ನೆನಪಿಸಿಕೊಳ್ಳೋಣ. ‘ಆತ್ಮನಿರ್ಭರ ಭಾರತ’ ಎನ್ನುವುದು ಈಗ ಚಾಲ್ತಿಯಲ್ಲಿರುವ ಜನಪ್ರಿಯ ಪರಿಕಲ್ಪನೆ. ಏನಿದು ಆತ್ಮನಿರ್ಭರ? ಶಬ್ದಕೋಶಗಳ ನೆರವಿನಿಂದ ‘ಆತ್ಮದ ಉನ್ನತೀಕರಣದ ಸ್ಥಿತಿ’ ಎನ್ನಬಹುದೇನೊ? ಉಂಡು ಉಪವಾಸಿಗಳೂ ಸುಖಿಸಿ ಬ್ರಹ್ಮಚಾರಿಗಳೂ ಆದ ಪುರಾಣ ಪರಂಪರೆಯ ನೆಲೆಗಟ್ಟಿನಲ್ಲಿ, ದೇಹ ಮತ್ತು ಆತ್ಮವನ್ನು ಪ್ರತ್ಯೇಕಿಸಿ ನೋಡುವುದು ಎಂದು ಅರ್ಥ ಮಾಡಿಕೊಳ್ಳಬಹುದೇನೊ? ಮತ್ತೂ ಸರಳವಾಗಿ ಹೀಗೆ ಹೇಳುವುದಾದರೆ: ದೇಶದ ಬಹುಸಂಖ್ಯಾತರಾದ ಜನಸಾಮಾನ್ಯರು ತಮ್ಮ ಭೌತಿಕ ದೇಹಗಳು ನೂರೆಂಟು ಪಡಿಪಾಟಲುಗಳಲ್ಲಿ ಒದ್ದಾಡುತ್ತಿದ್ದರೂ ಅದನ್ನು ಲೆಕ್ಕಿಸದೆ, ದಿವ್ಯವಾದ ಆತ್ಮವನ್ನು ಉನ್ನತೀಕರಿಸಿಕೊಳ್ಳಲು ಪ್ರಯತ್ನಿಸುವುದು ಹಾಗೂ ಆ ಔನ್ನತ್ಯದ ಬಗ್ಗೆ ಸಂಭ್ರಮಿಸುವುದು. ಈ ಆತ್ಮನಿರ್ಭರ ಭಾರತದ ಅಪೂರ್ವ ರೂಪಕವಾಗಿ ನವಿಲಿನೊಂದಿಗೆ ಪ್ರಧಾನಿಯವರ ನಲಿವಿನ ಚಿತ್ರಪಟವನ್ನು ನೋಡಬಹುದು.

ರಘುನಾಥ ಚ.ಹ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು