ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ| ಬೇವು, ಬೆಲ್ಲ ಮತ್ತು ಸಾಮರಸ್ಯ

ಹಳೆಯ ಗಾಯದ ಉರಿ ಮತ್ತು ನಂಜು ಮರೆಯಾಗಿ ನವಿಲುಗರಿ ಮರಿ ಹಾಕಲಿ
Last Updated 21 ಮಾರ್ಚ್ 2023, 22:01 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದ ಬಹುಭಾಗಗಳಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಒಂದು ವಿಶೇಷ ಸಿಹಿ ಸಿದ್ಧವಾಗುತ್ತದೆ. ಈ ಸಿಹಿ ಪದಾರ್ಥದ ಹೆಸರು ‘ಬೇವು’. ಇದರಲ್ಲಿ ಬೇವು ಮತ್ತು ಬೆಲ್ಲ ಎರಡೂ ಬೇರ್ಪಡಿಸಲಾಗದಂತೆ ಹದವಾಗಿ ಬೆರೆತಿರುತ್ತವೆ. ಆದರೂ ಈ ‘ಸಿಹಿ’ ಪದಾರ್ಥವನ್ನು ಬೇವು ಎಂದೇ ಕರೆಯುವುದು ವಾಡಿಕೆ. ಹಾಗೆಂದು ‘ಬೆಲ್ಲ’ ಸೆಟಗೊಳ್ಳುವುದಿಲ್ಲ.

ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿಲ್ಲವೆಂದು ಸಭೆಯನ್ನು ಬಹಿಷ್ಕರಿಸುವ ಸಾಹಿತಿ ಅಥವಾ ರಾಜಕಾರಣಿ ಯಂತೆ, ಅಕಸ್ಮಾತ್ ಬೆಲ್ಲ ಏನಾದರೂ ಅಸಮಾಧಾನ ದಿಂದ ತನ್ನ ಸಿಹಿ ಬಚ್ಚಿಟ್ಟುಕೊಂಡರೆ ಆಗಬಹುದಾದ ಅನಾ ಹುತವನ್ನು ಊಹಿಸಿ. ಹೊಸವರ್ಷದುದ್ದಕ್ಕೂ ಬೇವಿನ ಸಂಗದಲ್ಲಿ ಕಹಿಯನ್ನು ಅನುಭವಿಸಬೇಕಾಗಿತ್ತು! ಬೆಲ್ಲ ಮತ್ತು ಬೇವಿನ ಸೌಹಾರ್ದ ನಡೆ ನಮ್ಮನ್ನು ಈ ಅಪಾಯದಿಂದ ಕಾಪಾಡಿದೆ ಎಂಬುದು ಇಲ್ಲಿ ಗಮನಿಸಬೇಕಾದ ನೀತಿ.

ಗೋಡಂಬಿ, ಬಾದಾಮಿ, ಗೇರುಬೀಜ, ಅಕ್ರೋಟು, ಚಾರುವಾಳದಂತಹ ಡ್ರೈ ಫ್ರೂಟ್ಸ್‌ನಿಂದ ಸಮೃದ್ಧಗೊಂಡ ಬೇವು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹಳ ಪ್ರಸಿದ್ಧ. ಬಹುಶಃ ನಿಜಾಮರ ಕಾಲದ ಇಸ್ಲಾಂ ಆಹಾರ ಸಂಸ್ಕೃತಿಯ ಪ್ರಭಾವವಿರಬೇಕು. ತಾಜಾ ಬೇವಿನ ಹೂವು, ಬೆಲ್ಲ, ಪುಠಾಣಿ ಹಿಟ್ಟು, ಹೊಸ ಮಾವಿನಕಾಯಿ ತುರಿ, ಹುಣಸೆಹುಳಿ ಕೂಡ ಇದರಲ್ಲಿ ಮಿಶ್ರಣಗೊಂಡಿ ರುತ್ತವೆ. ಇವೆಲ್ಲಾ ಸಾಮಗ್ರಿಗಳು ಎಲ್ಲೆಲ್ಲಿಂದಲೋ ಬಂದು ಇಲ್ಲಿ ಯುಗಾದಿ ದಿನ ಒಂದಾಗುವ ಪರಿ ಹೇಗೆಂದು ನಾನರಿಯೆ… ವಿಶಾಲವಾಗಿ ಬೇವಿನಲ್ಲಿ ಎರಡು ಬಗೆ. ಒಂದು, ಪುಡಿಬೇವು. ಇದನ್ನು ಒಣಬೇವು ಎಂದೂ ಕರೆಯಲಾಗುತ್ತದೆ. ಇನ್ನೊಂದು, ನೀರುಬೇವು. ಇದರ ಇತರ ಹೆಸರುಗಳು- ದ್ರವಬೇವು, ಕುಡಿಯುವ ಬೇವು, ಪಾನಕ ಬೇವು. ಕಲ್ಯಾಣ ಕರ್ನಾಟಕದಲ್ಲಿ ಎರಡೂ ನಮೂನೆಯ ಬೇವುಗಳು ಜನರ ನಾಲಗೆಯ ಮೇಲೆ ನಲಿದರೆ, ಕಿತ್ತೂರು ಕರ್ನಾಟಕದ ಮಂದಿ ಪುಡಿಬೇವನ್ನಷ್ಟೇ ಚಪ್ಪರಿಸುತ್ತಾರೆ.

ಉರಿ ಬೇಸಿಗೆ ಕಾಲದಲ್ಲಿ ಮರಳಿ ಮರಳಿ ಬರುವ ಯುಗಾದಿ ದಿನದಂದು ಸಿದ್ಧಗೊಂಡ ನೀರುಬೇವನ್ನು ತೊಯ್ದ ಹತ್ತಿಬಟ್ಟೆ ಸುತ್ತಿದ ಹೊಸ ಮಣ್ಣಿನ ಮಡಕೆಯಲ್ಲಿ ತಣ್ಣಗೆ ಕಾಯ್ದಿರಿಸಲಾಗುತ್ತದೆ. ಮಣ್ಣಿನ ಮಡಕೆಯನ್ನು ಹಸಿ ಉಸುಕಿನ ಮೇಲಿರಿಸಿದಾಗ ಒಳಗೆ ತಂಪು ತಂಗು
ವುದು ಸಹಜ ಕ್ರಿಯೆ. ಫ್ರಿಜ್‌ಗಳು ಬಂದ ನಂತರ ಕೆಲವು ಮಾರ್ಪಾಡುಗಳಾಗಿದ್ದರೂ ಮೂಲ ಪದ್ಧತಿಗಳು ಹಾಗೆಯೇ ಉಳಿದಿವೆ. ಯುಗಾದಿಬೇವನ್ನು ಬಸಿದ ಸಪ್ಪೆ ಶ್ಯಾವಿಗೆಯೊಂದಿಗೆ ಅಥವಾ ಹೂರಣದ ಹೋಳಿಗೆ ಜೊತೆಗೆ ಸವಿಯಬಹುದು.

ಹೋಳಿಗೆ ಮತ್ತು ಯುಗಾದಿಬೇವು ಎರಡೂ ಸಿಹಿ ಖಾದ್ಯಗಳನ್ನು ಕಲೆಸಿ ಉಣ್ಣುವುದು ತುಸು ವಿಚಿತ್ರವಾಗಿ ಕಾಣುತ್ತದೆ. ಇದನ್ನು ಹೂರಣದ ಹೋಳಿಗೆ ಮತ್ತು ಮಾವಿನಹಣ್ಣಿನ ಸೀಕರಣೆ ಕಾಂಬಿನೇಷನ್ ಜೊತೆ ಸಮೀಕರಿಸಬಹುದು.

ನಾಡಿನ ಸಿಹಿ ಕೂಡ ಕಾಡಿನ ಹಸಿರಿನಂತೆ, ಒಂದೇ ಬಗೆಯಲ್ಲಿ ಇರುವುದಿಲ್ಲ. ಕುವೆಂಪು ಅವರ ಕಾದಂಬರಿ ಲೋಕದಲ್ಲಿ ಒಂದು ಪ್ರದಕ್ಷಿಣೆ ಹಾಕಿದರೆ, ಹಸಿರಿನಲ್ಲಿ ಎಷ್ಟೊಂದು ವಿಧ ಎಂಬುದು ಮನವರಿಕೆಯಾಗುತ್ತದೆ.

ಯುಗಾದಿಬೇವು, ಉಣ್ಣುವುದಕ್ಕಷ್ಟೇ ಸೀಮಿತವಲ್ಲ. ಅದು ಪಾಯಸದಂತೆ ಸೇವಿಸಲೂ ಹಿತವಾಗಿರುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಯುಗಾದಿ ಮುಗಿದು ವಾರಗಳು ಉರುಳಿದರೂ ಮನೆಗೆ ಬರುವ ಅತಿಥಿಗಳಿಗೆ ನೀರುಬೇವಿನ ಸಮಾರಾಧನೆ ನಿಲ್ಲುವುದಿಲ್ಲ. ತಂಪು, ಪೌಷ್ಟಿಕತೆ, ಜೊತೆಗೆ ಆತಿಥೇಯರ ಪ್ರೀತಿಯನ್ನೂ ಒಳಗೊಂಡ ಬೇವು ಸವಿಯುವವರ ರುಚಿಮೊಗ್ಗುಗಳನ್ನು ಬೇರೆ ರೀತಿಯಲ್ಲೇ ಅರಳಿಸುತ್ತದೆ.

ಯುಗಾದಿಬೇವಿನ ಸೇವನೆಯ ಸಂಭ್ರಮ ಒಂದು ಬಗೆಯದಾದರೆ ಅದನ್ನು ಹಂಚುವ ಉಮೇದಿಗೆ ಎರಡು ಕಾಲು ಸಾಲದಷ್ಟು ಸಡಗರ. ಹಬ್ಬಕ್ಕೆ ಬಂದ ನೆಂಟರಿಷ್ಟರು ಮನೆಯಲ್ಲಿ ಉಂಡರಷ್ಟೇ ಸಾಲದು, ಬಂದವರು ಊರಿಗೆ ಹೊರಟಾಗ ಅವರಿಗೆಲ್ಲ ಪುಡಿಬೇವಿನ ಪ್ಯಾಕೆಟ್ಟು
ಗಳನ್ನು ಕಟ್ಟಿ ಕಳಿಸಲಾಗುತ್ತದೆ. ನಾನಾ ಕಾರಣಗಳಿಂದ ಹಬ್ಬಕ್ಕೆ ಬಾರದ ಬಂಧುಗಳಿಗೆ, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಮನೆಗಳಿಗೆ ಬೇವು ಪ್ರಯಾಣ ಬೆಳೆಸುವುದು ಕಡ್ಡಾಯ! ಊರಲ್ಲೂ ಆಪ್ತರ ಮನೆಗಳಿಗೆ ಬೇವಿನ ವಿತರಣೆ ತಪ್ಪುವಂತಿಲ್ಲ.

‘ಬಾಡೇ ನಮ್ಮ ಗಾಡು’ ಅಭಿಯಾನಿಗಳು ಬೇಕಾ ದರೆ ಬೇವನ್ನು ಶಾಕಾಹಾರಿಗಳ ಬಿರಿಯಾನಿ ಎಂದು ಪರಿಗಣಿ ಸುವ ಔದಾರ್ಯ ತೋರಬಹುದು. ಏಕೆಂದರೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಮಿತ್ರರ ಮನೆಯಿಂದ ಹಿಂದೂಗಳಿಗೆ ರವಾನೆಯಾಗುವ ಬಿರಿಯಾನಿಯಂತೆಯೇ ಯುಗಾದಿ ಹಬ್ಬದಲ್ಲಿ ಬೇವು ಅನ್ಯಧರ್ಮಗಳ ಬಂಧು ಗಳಿಗೆ ವಿತರಣೆಯಾಗುವುದನ್ನು ಕಲ್ಯಾಣ ಕರ್ನಾಟಕದಲ್ಲಿ ಕಾಣುತ್ತೇವೆ.

ಬೇವು ಹೆಸರಿನ ಈ ಸಿಹಿ ತಯಾರಿಕೆಯ ವಿಧಾನ, ಬಳಸುವ ಸಾಮಗ್ರಿಗಳು, ಸಂಗ್ರಹಣೆಯ ತಂತ್ರ, ತಿನ್ನುವಿಕೆಯ ಕ್ರಮ ಮತ್ತು ಹಂಚುವಿಕೆಯ ಹಂಬಲ… ಈ ಎಲ್ಲ ವೈವಿಧ್ಯದಲ್ಲಿ ಒಂದು ಪ್ಯಾಟರ್ನ್ ಇರುವುದನ್ನು ಗಮನಿಸಬೇಕು. ಅದುವೇ ಸೌಹಾರ್ದ- ಸಮನ್ವಯ!

ಯುಗಾದಿ ಆಹಾರದ ರೂಪದಲ್ಲಷ್ಟೇ ಅಲ್ಲ, ಅದು ಬದುಕಿನಲ್ಲಿ, ಪ್ರಕೃತಿಯಲ್ಲಿ ಆಗಮಿಸುವ ಬಗೆಗಳನ್ನು ಗಮನಿಸುವುದು ಉಲ್ಲಾಸದಾಯಕ. ಯುಗಾದಿಯ ಹೊಂಗಿರಣ ಸಸ್ಯಲೋಕವನ್ನಷ್ಟೇ ಸ್ಪರ್ಶಿಸಿ ಹೊಸತನದ ಬೆಳಕಿನಲ್ಲಿ ಹೊಳೆಯಿಸಬೇಕಿಲ್ಲ, ನಿಸರ್ಗವೊಂದೇ ಹಳೆಯದನ್ನು ಕಳಚಿಕೊಂಡು ಕಳೆಗಟ್ಟಬೇಕಿಲ್ಲ. ಅದು ಮಾನವ ಪ್ರಪಂಚದಲ್ಲೂ ಇಣುಕುವ ಅಗತ್ಯವಿದೆ.

ವರಕವಿ ಅಂಬಿಕಾತನಯದತ್ತರು ಸಾಧನಕೇರಿ ಯಲ್ಲಿ ಉಲಿದಂತೆ, ಯುಗಾದಿ: ‘ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ… ಹೊಂಗೆ ಹೂವ ತೊಂಗಲಲ್ಲಿ/ ಭೃಂಗದ ಸಂಗೀತ ಕೇಲಿ/ ಮತ್ತೆ ಕೇಳ ಬರುತಿದೆ/ ಬೇವಿನ ಕಹಿ ಬಾಳಿನಲ್ಲಿ/ ಹೂವಿನ ನಸುಗಂಪು ಸೂಸಿ/ ಜೀವಕಳೆಯ ತರುತಿದೆ’.

ಹೀಗೆ ಹೊಸತನವನ್ನು ಮೊಗೆಮೊಗೆದು ಕೊಡುವ ಪ್ರಕೃತಿಯಲ್ಲಿ ನಮಗೂ ಒಂದಿಷ್ಟು ಪಾಠದ ಪಾಲು ಇರಲೇಬೇಕಲ್ಲವೇ? ಹಳೆಯ ವರ್ಷದುದ್ದಕ್ಕೂ ಜನರ ಬಾಳಿನಲ್ಲಿ ಜೀವಕಳೆ ತುಂಬುವ ಹೂವಿನ ನಸುಗಂಪು ಬದಲು ಜೀವ ಕಳೆಯುವ ಕೆಂಪು ಸೂಸಿದ್ದೇ ಹೆಚ್ಚು. ಅದಕ್ಕೆ ಕಾರಣವೇನು, ಕಾರಣರಾರು ಎಂದು ಮತ್ತೆ ತಗಾದೆ ತೆಗೆದು ಹಳೆಯ ವೃತ್ತದಲ್ಲಿಯೇ ಸುತ್ತುವ ಅಗತ್ಯವಿಲ್ಲ. ವರುಷ ವರುಷ ಇಡೀ ಪ್ರಕೃತಿಯೇ ಹೊಸತನ ಹೊದ್ದು ತೊನೆಯುವಾಗ ಮಾನವನೇಕೆ ಹಳೆಯ ಕೊಳೆಯಲ್ಲಿ ಉರುಳಿ ಉರುಳಿ ತೊಳಲಾಡಬೇಕು?

ಯುಗಾದಿಯ ಹೊಸಬಟ್ಟೆ, ಜೂಜುಕಟ್ಟೆ ಮತ್ತು ಒಬ್ಬಟ್ಟಿನ ತಟ್ಟೆಯ ಸಂಭ್ರಮದಲ್ಲಿ ಹಳೆಯ ವರ್ಷದು ದ್ದಕ್ಕೂ ಸಂಚಯಗೊಂಡಿರುವ ವೈಯಕ್ತಿಕ, ಸಾಮಾಜಿಕ, ಸಾರ್ವಜನಿಕ ಹೊಣೆಗಾರಿಕೆಯ ‘ಉಗಾದಿ ಉದ್ರಿ’ ಮರೆಯುವಂತಿಲ್ಲ! ಚುಕ್ತಾ ಮಾಡಲೇಬೇಕಿರುವ ಬಾಧ್ಯತೆಗಳ ಗುಡ್ಡೆ ಕರಗಿಸಬೇಕಿದೆ.

ಹಾಗೆಯೇ ಹೊಸ ವರ್ಷದಲ್ಲಿ ರಾಜ್ಯವು ಚುನಾವಣೆಗೆ ತುಸು ರಭಸದಿಂದಲೇ ಸಜ್ಜಾಗುತ್ತಿದೆ. ಅಧಿಕಾರದಲ್ಲಿರುವ ರಾಜಕಾರಣಿಗಳು ತಮ್ಮ ಹೆಗಲ ಮೇಲಿನ ಆರೋಪಗಳ ಹೊರೆಯನ್ನು ಒಂದಿಷ್ಟಾದರೂ ಕೆಳಗಿಳಿಸಲು, ಅಧಿಕಾರಕ್ಕೆ ಕಾತರಿಸಿರುವ ವಿರೋಧ ಪಕ್ಷಗಳು ಮತದಾರರ ದುಃಖದ ಭಾರ ಹೊತ್ತುಕೊಳ್ಳಲು ಮನಸು ಮಾಡಿದರೆ ಯುಗಾದಿ ನಿಜವಾಗಿ ಹೊಸಯುಗದ ಆದಿ ಆಗಲೂಬಹುದು!

ಚುನಾವಣೆಯಲ್ಲಿ ರಣಕಹಳೆ ಮೊಳಗದೆ, ಮತಬೇಟೆ ನಡೆಸದೆ, ಹಣಾಹಣಿ ಸಂಭವಿಸದೆ, ರಣರಂಗ ಏರ್ಪ ಡದೆ, ಪ್ರಜೆಗಳು ಮತ ‘ದಾನ’ ಮಾಡದೆ ಸ್ಥಿತಪ್ರಜ್ಞೆಯಿಂದ ಶಾಂತವಾಗಿ ಮತಾಧಿಕಾರ ‘ಚಲಾವಣೆ’ ಮಾಡಲು ಸಾಧ್ಯವಾದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕವಿವಾಣಿಯ ‘ಜೀವಕಳೆ’ ತುಂಬೀತು.

ಒಟ್ಟಾರೆ, ಹೊಸ ವರ್ಷದಲ್ಲಿ ಹಳೆಯ ಗಾಯದ ಉರಿ ಮತ್ತು ನಂಜು ಮರೆಯಾಗಲಿ, ದೈನಂದಿನ ಸಹಜೀವನದ ಪುಟಗಳಲ್ಲಿ ಕಾಯ್ದಿಟ್ಟ ನವಿಲುಗರಿ ಮರಿ ಹಾಕಲಿ ಎಂದು ಹಾರೈಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT