ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ | ಮನೆ ಕಟ್ಟಲು ಎಷ್ಟು ಗೃಹ ಸಾಲ ಸಿಗಬಹುದು

Last Updated 5 ಮೇ 2020, 20:15 IST
ಅಕ್ಷರ ಗಾತ್ರ

1992ರಲ್ಲಿ ನನ್ನ ಹೆಂಡತಿ ಹೆಸರಿನಲ್ಲಿ ನಿವೇಶನವೊಂದನ್ನು ₹ 40 ಸಾವಿರಕ್ಕೆ ಖರೀದಿಸಿದ್ದೇನೆ. ಅದನ್ನುಈಗ ಮಾರಾಟ ಮಾಡಿದರೆ ₹ 50 ಲಕ್ಷ ಬರಬಹುದು. ನನ್ನ ಪ್ರಶ್ನೆ, ಪತ್ನಿಯ ಹೆಸರಿನಲ್ಲಿರುವ ನಿವೇಶನ ಮಾರಾಟ ಮಾಡಿ ಬರುವ ಹಣ ನನ್ನ ಹೆಸರಿನಲ್ಲಿರುವ ಮನೆಯ ಮೇಲೆ ಮೂರು ಅಂತಸ್ತಿನ ಮನೆ ಕಟ್ಟಲು ಬಳಸಿದರೆ ಅವಳಿಗೆ ಯಾವ ಯಾವ ತೆರಿಗೆಗಳಿಂದ ವಿನಾಯಿತಿ ದೊರೆಯುತ್ತದೆ. ವಿನಾಯಿತಿ ಸಿಗದಿದ್ದರೆ ನನ್ನ ಮನೆಯನ್ನು ಅವಳಿಗೆ ಉಡುಗೊರೆ ನೀಡಿ ಅವಳು ಅದರ ಮೇಲೆ ಮನೆ ಕಟ್ಟಲು ಬಯಸಿದರೆ ಅವಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಇದೆಯೇ? ಸದರಿ ಹಣವನ್ನು ಕೃಷಿ ಭೂಮಿ ಖರೀದಿಸಿದರೆ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದೇ?

ರಮೇಶ್, ಬೆಂಗಳೂರು

ಉತ್ತರ: ನಿಮ್ಮ ಪತ್ನಿ ನಿಮ್ಮ ಹೆಸರಿನಲ್ಲಿರುವ ಮನೆಯ ಮೇಲೆ ಮನೆ ಕಟ್ಟಿದರೂ ಅಥವಾ ಕೃಷಿ ಜಮೀನು ಖರೀದಿಸಿದರೂ ನಿವೇಶನ ಮಾರಾಟ ಮಾಡಿ ಬರುವ ಲಾಭಕ್ಕೆ ಬಂಡವಾಳ ವೃದ್ಧಿ ತೆರಿಗೆ ತುಂಬಲೇಬೇಕು. ನೀವು ಬಯಸಿದಂತೆ ನಿಮ್ಮ ಹೆಸರಿನಲ್ಲಿರುವ ಮನೆ, ನೀವು ದಾನಪತ್ರ ಮೂಖಾಂತರ ಹೆಂಡತಿಗೆ ವರ್ಗಾಯಿಸಿದರೆ ಮಾತ್ರ ನಿಮ್ಮ ಹೆಂಡತಿ ಆ ಮನೆಯ ಮೇಲೆ ಮನೆ ಕಟ್ಟಿಸಿ ತೆರಿಗೆ ವಿನಾಯಿತಿ ಪಡೆಯಬಹುದು. ಗಿಫ್ಟ್ ಡೀಡ್‌ ಅನ್ನು ನೋಂದಾಯಿಸಬೇಕು.

ಬೆಸ್ಕಾಂ ಉದ್ಯೋಗಿ. ವಯಸ್ಸು 27. ನನಗೆ ಪ್ರಸ್ತುತ ₹ 3 ಲಕ್ಷ ಸಾಲವಿದೆ. ನಾನು ನಮ್ಮ ಹಳೆ ಮನೆ ಇರುವ ಜಾಗದಲ್ಲಿ ಹೊಸ ಮನೆ ಕಟ್ಟಲು ಎಷ್ಟು ಗೃಹಸಾಲ ಸಿಗಬಹುದು ಹಾಗೂ ತೆರಿಗೆ ಬಗ್ಗೆ ತಿಳಿಸಿ. ನನ್ನ ಉಳಿತಾಯದ ಬಗ್ಗೆ ಕೂಡಾ ತಿಳಿಸಿ. ನಿವ್ವಳ ತಿಂಗಳ ವೇತನ ₹40 ಸಾವಿರ ಇದೆ.

ಶಿವಸಾಗರ, ಬಾದಾಮಿ

ಉತ್ತರ: ನಿಮಗೆ ನೀವು ಸಂಬಳ ಪಡೆಯುವ ಬ್ಯಾಂಕ್‌ನಲ್ಲಿ ಗರಿಷ್ಠ ₹ 20 ಲಕ್ಷ ಗೃಹ ಸಾಲ ದೊರೆಯಬಹುದು. ನಿಮ್ಮ ವಯಸ್ಸು 27 ಇರುವುದರಿಂದ ಗರಿಷ್ಠ 30 ವರ್ಷಗಳ, (360 ಕಂತುಗಳ) ಅವಧಿಗೆ ಸಾಲ ತೀರಿಸಲು ಪಡೆಯಬಹುದು) ₹ 20 ಲಕ್ಷ ಗೃಹ ಸಾಲ ಪಡೆದಲ್ಲಿ ಮೂವತ್ತು ವರ್ಷಗಳ ಅವಧಿ ಆದಲ್ಲಿ ನೀವು ತಿಂಗಳಿಗೆ ₹ 16 ಸಾವಿರ ಇಎಂಐ ಅಂದರೆ ತಿಂಗಳ ಕಂತು ಕಟ್ಟಬೇಕಾದೀತು. ಸದ್ಯ ನಿಮಗೆ ಆದಾಯ ತೆರಿಗೆ ಭಯವಿಲ್ಲವಾದರೂ ಮುಂದೆ ತೆರಿಗೆಗೆ ಒಳಗಾಗುವಾಗ ಸಾಲಕ್ಕೆ ತುಂಬಿದ ಕಂತು ಹಾಗೂ ಬಡ್ಡಿಯಲ್ಲಿ ಕ್ರಮವಾಗಿ ಸೆಕ್ಷನ್‌ 80 ಸಿ –24 ಬಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು.

ಇನ್ನು ಉಳಿತಾಯದ ವಿಚಾರದಲ್ಲಿ ಮನೆ ಸಾಲ ಪಡೆಯುವ ತನಕ ಗರಿಷ್ಠ ₹ 15 ಸಾವಿರದಂತೆ ಒಂದು ವರ್ಷಕ್ಕೆ ಆರ್‌.ಡಿ ಮಾಡಿರಿ. ಮುಂದೆ ವಾರ್ಷಿಕ ಇನ್‌ಕ್ರಿಮೆಂಟ್ ಹಾಗೂ ತುಟ್ಟಿ ಭತ್ಯೆ ಬಂದಾಗಲೆಲ್ಲಾ ಅಂತಹ ಹಣದ ಕನಿಷ್ಠ ಶೇ 50ರಷ್ಟು ದೀರ್ಘಾವಧಿ ಆರ್‌.ಡಿ (10 ವರ್ಷ) ಮಾಡಿ. ಈ ಪ್ರಕ್ರಿಯೆ ನಿರಂತರವಾಗಿರಲಿ.

(ಲೇಖಕರು: ಬ್ಯಾಂಕಿಂಗ್ ಮತ್ತು ಹಣಕಾಸು ತಜ್ಞರು. ಸಂಪರ್ಕಕ್ಕೆ ಮೊಬೈಲ್– 94480 15300)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT