ಶನಿವಾರ, ಏಪ್ರಿಲ್ 1, 2023
33 °C

ಪ್ರಶ್ನೋತ್ತರ| ಬ್ಯಾಂಕ್‌ನವರ ಅಸಹಜ ವಿನಂತಿಯ ಬಗ್ಗೆ ಜಾಗೃತವಾಗಿರಿ...

ಪ್ರಮೋದ ಶ್ರೀಕಾಂತ ದೈತೋಟ Updated:

ಅಕ್ಷರ ಗಾತ್ರ : | |

ಪುಂಡಳೀಕ ರಾವ್, ಊರು ಬೇಡ

l ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ನೌಕರ. ವಯಸ್ಸು 83 ವರ್ಷ. ಸಂಬಳದಲ್ಲಿ ಉಳಿತಾಯ ಮಾಡಿದ ಹಣವನ್ನು ಎಫ್.ಡಿ. ಮಾಡಲು ಬ್ಯಾಂಕಿಗೆ ಹೋಗಿದ್ದೆ. ಆದರೆ ಅಲ್ಲಿನ ಸಿಬ್ಬಂದಿ, ಮ್ಯಾನೇಜರ್‌ರನ್ನು ಭೇಟಿ ಮಾಡಲು ತಿಳಿಸಿದರು. ಎಫ್.ಡಿ.ಗೆ ಶೇ 5.5ರಷ್ಟು ಬಡ್ಡಿ ಇದೆ. ಅದರ ಬದಲು ತಮ್ಮ ಮ್ಯೂಚುವಲ್ ಫಂಡ್‌ನಲ್ಲಿ ಹಣ ತೊಡಗಿಸಿದರೆ ಶೇ 7ರಿಂದ ಶೇ 8ರಷ್ಟು ಲಾಭ ಬರುತ್ತದೆ ಎಂದು ಮ್ಯಾನೇಜರ್ ಸಲಹೆ ನೀಡಿದರು. ಒಂದು ಮುದ್ರಿತ ಬಾಂಡ್ ಕೊಟ್ಟರು. ತದನಂತರ ಬ್ಯಾಂಕಿನ ಮ್ಯಾನೇಜರ್ ಫೋನ್ ನಂಬರ್ ಕೊಟ್ಟು ಒಟಿಪಿ ಬಂದರೆ ತಿಳಿಸಬೇಕೆಂದೂ ಬೇರಾವುದೇ ಕಡೆಯಿಂದ ಕರೆ ಬಂದರೆ ಒಟಿಪಿ ಹೇಳಬಾರದಾಗಿಯೂ ಸೂಚಿಸಿದರು. ಇದರಿಂದ ಮೋಸವಿಲ್ಲವೆಂದು ತಿಳಿದಿದ್ದೇನೆ. ಒಂದು ವರ್ಷದೊಳಗೆ ನಾನು ಹಣ ವಾಪಸ್ ಪಡೆಯಬಹುದೇ? ಇದರ ಬಗ್ಗೆ ಮತ್ತಷ್ಟು ಮಾಹಿತಿ ನೀಡಿ.

ಉತ್ತರ: ಬ್ಯಾಂಕ್ ಅಧಿಕಾರಿಗಳು ನಿಮಗೆ ಅನುಕೂಲವಾಗುವ ಹೊಸದೊಂದು ಹೂಡಿಕೆ ಉತ್ಪನ್ನ ಪರಿಚಯಿಸಿದ್ದಾರೆ. ಹೂಡಿಕೆಗೆ ಅನೇಕ ಉತ್ಪನ್ನಗಳಿವೆ. ಹೀಗಾಗಿ ವ್ಯವಹಾರದ ದೃಷ್ಟಿಯಿಂದ ಎಲ್ಲ ಬ್ಯಾಂಕ್ ಅಧಿಕಾರಿಗಳು ಅಥವಾ ಹೂಡಿಕೆ ದಲ್ಲಾಳಿಗಳು ಅವನ್ನು ಪ್ರಚಾರ ಮಾಡುತ್ತಾರೆ, ಸಲಹೆ ನೀಡುತ್ತಾರೆ. ಇಂತಹ ಉತ್ಪನ್ನಗಳನ್ನು ನಾವು ಖರೀದಿಸುವ ಮುನ್ನ ಕೆಲವು ಮಾಹಿತಿ ಹೊಂದುವುದು ಅಗತ್ಯ. ಕೆಲವು ಸಾಮಾನ್ಯ ಮಾಹಿತಿ ಮೇಲ್ನೋಟಕ್ಕೆ ಅವಗಾಹನೆಗೆ ಬರದಿರಬಹುದು. ಆದರೆ, ಅವೂ ಬಹಳ ಮುಖ್ಯ. ಉದಾಹರಣೆಗೆ, ಹೂಡಿಕೆ ಹಿಂಪಡೆಯಲು ಇರುವ ಸಮಯ ನಿರ್ಬಂಧ, ಹೆಚ್ಚುವರಿ ಆದಾಯಕ್ಕಿರುವ ಹೆಚ್ಚುವರಿ ಅಪಾಯಗಳು, ಬಡ್ಡಿ ದರದ ಏರಿಳಿತದ ಪ್ರಭಾವ, ಅಸಲು ಮೊತ್ತದ ಭದ್ರತೆ ಇತ್ಯಾದಿ.

ನಿಮ್ಮ ವಿಚಾರದಲ್ಲಿ, ನಿಮ್ಮ ಬಾಂಡ್ ಯಾವ ಮಾಹಿತಿ ಹೊಂದಿದೆ ಹಾಗೂ ಅದರ ಮುಕ್ತಾಯ ದಿನಾಂಕ ಏನೆಂದು ಪರಿಶೀಲಿಸಿ ಹಣ ಮರಳಿ ಪಡೆಯುವುದನ್ನು ತಿಳಿದುಕೊಳ್ಳಿ. ನಿಮ್ಮ ಹೂಡಿಕೆ ಮೊತ್ತ ಭದ್ರವಾಗಿಯೇ ಇರಬಹುದು. ಆದರೆ ಶಾಖೆಗೆ ಖುದ್ದಾಗಿ ಭೇಟಿ ನೀಡಿ ಮುಕ್ತವಾಗಿ ಮಾತುಕತೆ ನಡೆಸಿ ಸಂದೇಹ ಬಗೆಹರಿಸಿಕೊಳ್ಳಿ. ಇನ್ನು ಒಟಿಪಿ ವಿಚಾರ. ಯಾವುದೇ ಬ್ಯಾಂಕ್ ಅಧಿಕಾರಿ ಗ್ರಾಹಕರಿಂದ ಒಟಿಪಿ ನೀಡಲು ಸಲಹೆ ಕೊಡುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಹಾಗೂ ಆಯಾ ಬ್ಯಾಂಕ್‌ಗಳು ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಿರುತ್ತವೆ. ಒಂದು ವೇಳೆ ಅಸಹಜ ವಿನಂತಿಯೆಂದು ಕಂಡುಬಂದರೆ ಜಾಗೃತರಾಗಿರಿ.

ಬಿ.ವಿ. ವೆಂಕಟೇಶ ಮೂರ್ತಿ, ಹಾರೋಹಳ್ಳಿ, ರಾಮನಗರ ಜಿಲ್ಲೆ

l ಪ್ರಶ್ನೆ: ನಾನು ಹಿರಿಯ ನಾಗರಿಕ. ವಯಸ್ಸು 67 ವರ್ಷ. ನಾನು ಬೆಂಗಳೂರು ಜಲಮಂಡಳಿಯಲ್ಲಿ ಅಟೆಂಡರ್ ಆಗಿದ್ದೆ ಹಾಗೂ 2016ರಲ್ಲಿ ನಿವೃತ್ತಿ ಹೊಂದಿದೆ. ನನಗೀಗ ಪಿಂಚಣಿಯಾಗಿ ₹ 48,451 ಬರುತ್ತಿದೆ (ವಾರ್ಷಿಕ ಸುಮಾರು ₹ 5.83 ಲಕ್ಷ). ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ₹ 6 ಲಕ್ಷದ ತನಕ ಇರುವುದಿಲ್ಲ ಎಂದು ಈ ಹಿಂದೆ ಓದಿದ್ದೆ. ಅಂದರೆ ₹ 5 ಲಕ್ಷದ ತನಕ ಮೂಲ ಆದಾಯದ ನೇರ ರಿಯಾಯಿತಿ, ₹ 50,000ದ ಸ್ಟ್ಯಾಂಡರ್ಡ್ ಡಿಡಕ್ಷನ್ ಹಾಗೂ ಬಡ್ಡಿ ಆದಾಯಕ್ಕೆ ₹ 50,000 ರಿಯಾಯಿತಿ.

ಇತ್ತೀಚೆಗೆ ನನ್ನ ಲೆಕ್ಕ ಪರಿಶೋಧಕರು ತೆರಿಗೆ ಕಟ್ಟಬೇಕೆಂದು ಸೂಚಿಸಿರುತ್ತಾರೆ ಹಾಗೂ ಅದರಂತೆ ನಾನು ₹ 16,130 ತೆರಿಗೆ ರೂಪದಲ್ಲಿ ಕಟ್ಟಿರುತ್ತೇನೆ. ನಾನು ₹ 10 ಲಕ್ಷದ ಬ್ಯಾಂಕ್ ಠೇವಣಿ ಹೊಂದಿದ್ದೇನೆ. ನನ್ನ ಸಮಸ್ಯೆ ಎಂದರೆ, ಕೆಲವರು ನನಗಿರುವ ಆದಾಯಕ್ಕೆ ತೆರಿಗೆ ಕಟ್ಟಬೇಕೆನ್ನುತ್ತಾರೆ, ಇನ್ನು ಕೆಲವರು ಈ ಮೊತ್ತದ ಆದಾಯಕ್ಕೆ ತೆರಿಗೆ ಕಟ್ಟುವುದು ಬೇಡ ಎನ್ನುತ್ತಾರೆ. ಈ ಗೊಂದಲ ಪರಿಹರಿಸಿ.

ಉತ್ತರ: ನೀವು 60ರಿಂದ 80ರ ವರ್ಷದ ನಡುವಿನ ವಯೋಮಾನದಲ್ಲಿರುವುದರಿಂದ ನಿಮ್ಮ ಗರಿಷ್ಠ ತೆರಿಗೆ ವಿನಾಯಿತಿ ಮೊತ್ತ ₹ 3 ಲಕ್ಷ. ಇದಕ್ಕೂ ಮಿಕ್ಕ ಮೊತ್ತಕ್ಕೆ ಯಾವುದೇ ವಿನಾಯಿತಿಗಳಿಲ್ಲದಿದ್ದರೆ, ನೀವು ತೆರಿಗೆ ಕಟ್ಟಬೇಕು. ಹೀಗಾಗಿ ಎಲ್ಲ ವಿನಾಯಿತಿಗಳನ್ನು ‘ಒಟ್ಟು ಆದಾಯ’ದಿಂದ ಕಳೆದು ಕೊನೆಗೆ ತೆರಿಗೆಗೆ ಒಳಪಡುವ ಮೊತ್ತ ‘ನಿವ್ವಳ ತೆರಿಗೆ ಆದಾಯ’ವಾಗಿರುತ್ತದೆ. ಹೀಗೆ ನಿವ್ವಳ ತೆರಿಗೆ ಆದಾಯ ಲೆಕ್ಕ ಹಾಕಲು ಸೆಕ್ಷನ್ 16ರ ಅಡಿ ವೇತನ/ಪಿಂಚಣಿದಾರರಿಗೆ ಸಿಗುವ ₹ 50,000ದ ಸ್ಟ್ಯಾಂಡರ್ಡ್ ಡಿಡಕ್ಷನ್ ಹಾಗೂ ಬಡ್ಡಿ ಆದಾಯಕ್ಕೆ ಸಂಬಂಧಿಸಿದ ವಿನಾಯಿತಿ ಇತ್ಯಾದಿಗಳನ್ನೂ ಒಳಗೊಂಡಂತೆ, ಸೆಕ್ಷನ್ 80ಸಿ ಇಂದ 80ಯು ತನಕ ಸಿಗುವ ಇತರ ಎಲ್ಲ ವಿನಾಯಿತಿಗಳನ್ನೂ ನೀಡಿ ಉಳಿದ ಮೊತ್ತ ತೆರಿಗೆಗೆ ಒಳಪಡುತ್ತದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87ಎ ಪ್ರಕಾರ, ಯಾವುದೇ ವ್ಯಕ್ತಿಗೆ ತೆರಿಗೆಗೊಳಪಡುವ ನಿವ್ವಳ ಆದಾಯ ₹ 5 ಲಕ್ಷಕ್ಕಿಂತ ಹೆಚ್ಚಿಲ್ಲದಿದ್ದರೆ, ಅಂಥವರು ವಿಶೇಷ ತೆರಿಗೆ ವಿನಾಯಿತಿಯಾಗಿ, ಸಂಪೂರ್ಣ ತೆರಿಗೆ ಅಥವಾ ₹ 12,500, ಇವೆರಡರಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ವಿನಾಯಿತಿಯಾಗಿ ಪಡೆಯಲು ಅರ್ಹರು. ಆದರೆ ತೆರಿಗೆಗೊಳಪಡುವ ನಿವ್ವಳ ಆದಾಯ ₹ 5 ಲಕ್ಷಕ್ಕಿಂತ ಹೆಚ್ಚಿಗೆ ಇದ್ದಾಗ ಈ ವಿಶೇಷ ವಿನಾಯಿತಿ ದೊರಕುವುದಿಲ್ಲ. ಈ ವಿಶೇಷ ಸೌಲಭ್ಯವು ‘ಕಡಿಮೆ ಆದಾಯ ವರ್ಗ’ದವರಿಗಾಗಿ ಇರುವಂಥದ್ದು.

ನಿಮ್ಮ ತೆರಿಗೆ ಲೆಕ್ಕ ಹಾಕಲು, ಮೊದಲ ಹಂತದಲ್ಲಿ ಮೇಲಿನ ಎಲ್ಲ ವಿನಾಯಿತಿಗಳನ್ನು ನೀಡಿ ತೆರಿಗೆಗೊಳಪಡುವ ಆದಾಯ ₹ 3 ಲಕ್ಷಕ್ಕಿಂತ ಅಧಿಕವಿದ್ದಾಗ, ₹ 3 ಲಕ್ಷದಿಂದ ₹ 5 ಲಕ್ಷದವರೆಗಿನ ಆದಾಯಕ್ಕೆ ಶೇ. 5ರಷ್ಟು ಹಾಗೂ ₹ 5 ಲಕ್ಷದಿಂದ ₹ 10 ಲಕ್ಷದವರೆಗಿನ ಆದಾಯಕ್ಕೆ ಶೇ. 20ರ ಮೂಲ ತೆರಿಗೆ ದರದಲ್ಲಿ ಒಟ್ಟು ತೆರಿಗೆ ಲೆಕ್ಕ ಹಾಕಲಾಗುತ್ತದೆ. ನೀವು ₹ 3 ಲಕ್ಷಕ್ಕಿಂತ ಅಧಿಕ ಆದಾಯವುಳ್ಳ ವರ್ಗದ ಹಿರಿಯ ನಾಗರಿಕ. ಸೆಕ್ಷನ್ 87ಎ ಅಡಿ ಎಲ್ಲ ವರ್ಗದ ತೆರಿಗೆದಾರರಿಗೂ ಖಚಿತ ವಿನಾಯಿತಿ ಸಿಗುವುದಿಲ್ಲ.

ನೀವು ನೀಡಿರುವ ಮಾಹಿತಿಯಂತೆ, ಬಡ್ಡಿ ಆದಾಯ ಸಂಪೂರ್ಣ ವಿನಾಯಿತಿಯೊಳಗೆ ಬರಬಹುದೆಂದು ತಿಳಿದು ಉಳಿದ ಪಿಂಚಣಿ ಆದಾಯ ಲೆಕ್ಕ ಹಾಕಿದರೂ, ₹ 50,000ದ ಸ್ಟ್ಯಾಂಡರ್ಡ್ ಡಿಡಕ್ಷನ್ ನೀಡಿದ ಮೇಲೂ ₹ 5 ಲಕ್ಷಕ್ಕಿಂತ ಅಧಿಕ ಆದಾಯವಿದೆ. ಹೀಗಾಗಿ ಮೇಲೆ ಉಲ್ಲೇಖಿಸಿದ ತೆರಿಗೆ ಲೆಕ್ಕ ಹಾಕುವ ಹಂತಗಳನ್ನು ಮತ್ತೊಮ್ಮೆ ತಿಳಿಯಲೆತ್ನಿಸಿ ನಿಮ್ಮಲ್ಲಿರುವ ರಿಟರ್ನ್ಸ್ ಮತ್ತೊಮ್ಮೆ ಪರಿಶೀಲಿಸಿ. ಮೇಲ್ನೋಟಕ್ಕೆ ನೀವು ಸಂಪೂರ್ಣ ತೆರಿಗೆಯಿಂದ ಮುಕ್ತರಲ್ಲ, ಕಟ್ಟಿರುವ ತೆರಿಗೆ ಸರಿಯಾಗಿಯೇ ಇರಬಹುದು. ನೀವು ಯಾವುದೇ ತೆರಿಗೆ ಉಳಿತಾಯ ಖಾತೆಗಳಲ್ಲಿ ಪ್ರತಿ ವರ್ಷ ಹೂಡಿಕೆ ಮಾಡಿದಾಗ ಸೆಕ್ಷನ್ 80ಸಿ ಅಡಿ ₹ 1.50 ಲಕ್ಷದ ತನಕ ವಿನಾಯಿತಿ ಪಡೆದು ತೆರಿಗೆ ಪ್ರಮಾಣವನ್ನು ಸಂಪೂರ್ಣ ಉಳಿಸಲು ಅವಕಾಶ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು