ಶನಿವಾರ, ಜೂನ್ 6, 2020
27 °C
ಈ ದೇಶ ಈಗ ಕೊರೊನಾಪೀಡಿತ ಐರೋಪ್ಯ ರಾಷ್ಟ್ರಗಳತ್ತ ನೋಡುತ್ತಿರುವುದಕ್ಕೂ ಕಾರಣವಿದೆ

ಜಗತ್ತನ್ನು ದಿಕ್ಕುತಪ್ಪಿಸಿತೇ ಚೀನಾ?

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

Prajavani

ಜಗತ್ತನ್ನು ಆತಂಕಕ್ಕೆ ದೂಡಿರುವ ಕೊರೊನಾ, ಅನುಮಾನದ ಕಣ್ಣುಗಳಿಂದಲೇ ಎಲ್ಲವನ್ನೂ ನೋಡಬೇಕಾದ ಅನಿವಾರ್ಯಕ್ಕೆ ಸಿಲುಕಿಸಿದೆ. ಜಗತ್ತಿನ ಬಲಾಢ್ಯ ರಾಷ್ಟ್ರಗಳು ಎಂದು ಗುರುತಿಸಿಕೊಂಡಿರುವ ಅಮೆರಿಕ ಮತ್ತು ಚೀನಾ ಎದುರು ಪ್ರಶ್ನೆಗಳು ಸಾಲುಗಟ್ಟಿ ನಿಂತಿವೆ. ಚೀನಾ ಎದುರಿಸುತ್ತಿರುವ ಪ್ರಶ್ನೆ, ನೈತಿಕತೆಯ ಕುರಿತಾದದ್ದು. ಅಮೆರಿಕದ ಮುಂದಿರುವ ಪ್ರಶ್ನೆ, ಅದರ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು.

ವುಹಾನ್ ಪ್ರಾಂತ್ಯವನ್ನು ಕೊರೊನಾಮುಕ್ತ ಎಂದು ಹೇಳುವಾಗ ‘ಕಡಿಮೆ ಅವಧಿಯಲ್ಲಿ ಸೋಂಕನ್ನು ನಿಗ್ರಹಿಸಿ ಗೆದ್ದಿದ್ದೇವೆ’ ಎಂದು ಚೀನಾ ಹೇಳಿತ್ತು. ಚೀನಾದಲ್ಲಿ ಸೋಂಕಿಗೆ ಒಳಗಾದವರ ಮತ್ತು ಸತ್ತವರ ಸಂಖ್ಯೆಯನ್ನೂ ಉಲ್ಲೇಖಿಸಿತ್ತು. ಜಗತ್ತಿನ ವಿವಿಧೆಡೆ ಕೊರೊನಾ ಸೋಂಕು ಪ್ರಕರಣಗಳು ಏರುಗತಿ ಕಂಡಾಗ, ಚೀನಾ ನೀಡಿದ್ದ ಈ ಸಂಖ್ಯೆಯ ಬಗ್ಗೆ ಸಂಶಯದ ಮಾತು ಬಂತು. ವೈರಾಣುವಿನ ಬಗ್ಗೆ ಹೊಸ ಸಂಗತಿಗಳು ತಿಳಿದಂತೆ, ಸೋಂಕಿನ ತೀವ್ರತೆಯನ್ನು ಜಗತ್ತಿನಿಂದ ಮುಚ್ಚಿಡಲು ಚೀನಾ ಯತ್ನಿಸಿತೇ? ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಚೀನಾದ ಅಂಕೆಗೆ ಒಳಪಟ್ಟಿದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡವು.

ಇಲ್ಲಿ ಕೆಲವು ಸಂಗತಿಗಳನ್ನು ಗಮನಿಸಬೇಕು. ಷಿ ಜಿನ್‌ಪಿಂಗ್ ಚೀನಾದ ಅಧ್ಯಕ್ಷರಾದ ಬಳಿಕ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯ ಹೊಂದುವತ್ತ ಚೀನಾ ಹೆಜ್ಜೆ ಇರಿಸಿತು. 2017ರಲ್ಲಿ ಡಾ. ಟೆಡ್ರೋಸ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಆಗಿ ಆಯ್ಕೆಯಾಗುವಲ್ಲಿ ಚೀನಾದ ಪಾತ್ರ ಮಹತ್ವದ್ದಿತ್ತು. ಇಥಿಯೋಪಿಯಾದಲ್ಲಿ ಆರೋಗ್ಯ ಸಚಿವರಾಗಿ, ನಂತರ ವಿದೇಶಾಂಗ ಮಂತ್ರಿಯಾಗಿದ್ದ ಟೆಡ್ರೋಸ್, ಕಾಲರಾ ಹಬ್ಬುವಿಕೆಯನ್ನು ಮರೆಮಾಚಿದ್ದರು ಎಂಬ ಆರೋಪವಿತ್ತು ಮತ್ತು ಚೀನಾ ಈ ವೇಳೆಯಲ್ಲಿ ಇಥಿಯೋಪಿಯಾದಲ್ಲಿ ಹೆಚ್ಚಿನ ಹೂಡಿಕೆ ಮಾಡಿತ್ತು. ತಾವು ಡಬ್ಲ್ಯುಎಚ್‌ಒ ಮುಖ್ಯಸ್ಥರಾಗಿ ಆಯ್ಕೆಯಾದ ಮರುದಿನವೇ ‘ಒಂದು ಚೀನಾ’ ನಿಲುವಿಗೆ ಡಬ್ಲ್ಯುಎಚ್‌ಒ ಬೆಂಬಲವನ್ನು ಮುಂದುವರಿಸುತ್ತದೆ ಎಂಬ ಹೇಳಿಕೆಯನ್ನು ಟೆಡ್ರೋಸ್ ನೀಡಿದ್ದರು. ಅಮೆರಿಕದಷ್ಟು ಅಲ್ಲದಿದ್ದರೂ ಡಬ್ಲ್ಯುಎಚ್‌ಒಗೆ ತನ್ನ ದೇಣಿಗೆಯನ್ನು ಚೀನಾ ಹೆಚ್ಚಿಸಿತು. ಚೀನಾದ ಸಾಂಪ್ರದಾಯಿಕ ಔಷಧಗಳನ್ನು ಮುನ್ನೆಲೆಗೆ ತರಲು ವಿಶ್ವ ಆರೋಗ್ಯ ಸಂಸ್ಥೆಯನ್ನು ಬಳಸಿಕೊಳ್ಳುವುದು ಚೀನಾದ ಯೋಜನೆಯಾಗಿತ್ತು. ಚೀನಾದ ಸಾಂಪ್ರದಾಯಿಕ ಔಷಧಕ್ಕೆ ಡಬ್ಲ್ಯುಎಚ್‌ಒ ಕಳೆದ ವರ್ಷ ಅಧಿಕೃತ ಮುದ್ರೆ ಒತ್ತಿತು. ಇದನ್ನು ಪ್ರಾಣಿ ಹಕ್ಕು ಪರ ಸಂಸ್ಥೆಗಳು ವಿರೋಧಿಸಿದವು. ‘ಚೀನಾದ ಔಷಧ ಪದ್ಧತಿಯಲ್ಲಿ ಕೆಲವು ಕಾಡುಪ್ರಾಣಿಗಳ ದೇಹಭಾಗಗಳನ್ನು ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಇದರಿಂದ ಪ್ರಾಣಿಗಳ ಅಕ್ರಮ ಸಾಗಾಣಿಕೆ ಹೆಚ್ಚುತ್ತದೆ’ ಎಂಬುದು ಪ್ರಾಣಿಪರ ಸಂಘಗಳ ಕಳವಳವಾಗಿತ್ತು.

ಈ ವಿರೋಧಕ್ಕೆ ಸೊಪ್ಪುಹಾಕದ ಚೀನಾವು ಔಷಧಿ ಕೇಂದ್ರಗಳನ್ನು ಪೋಲೆಂಡ್, ಯುಎಇ, ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ತೆರೆಯಲು ಸಜ್ಜಾಯಿತು. ಮೊದಲಿಗೆ ಕೊರೊನಾ ಸೋಂಕು ಕಾಣಿಸಿಕೊಂಡಾಗ ಚೀನಾ ತನ್ನ ಸಾಂಪ್ರದಾಯಿಕ ಔಷಧವನ್ನು ಚಿಕಿತ್ಸೆಗೆ ಬಳಸಲು ಮುಂದಾಗಿತ್ತು. ಹೊಸ ಬಗೆಯ ವೈರಲ್ ನ್ಯುಮೋನಿಯಾದ ತೀವ್ರತೆಯ ಬಗ್ಗೆ ಎಚ್ಚರಿಕೆ ನೀಡಿದ್ದ ಡಾ. ಲೀ ವೆನ್ಲಿಯಾಂಗ್ ಅವರಿಂದ, ತಮ್ಮ ಹಿಂದಿನ ಹೇಳಿಕೆ ನಿರಾಧಾರವಾದುದು ಎಂಬ ಹೇಳಿಕೆಯೊಂದನ್ನು ಬರೆಸಿಕೊಳ್ಳಲಾಯಿತು.

ಜನವರಿ ಎರಡನೆಯ ವಾರದ ಹೊತ್ತಿಗೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಯಿತು. ಆಗಲೂ ಚೀನಾ ‘ಇದು ನಿಯಂತ್ರಿಸಬಹುದಾದ ಸೋಂಕು. ದೊಡ್ಡ ಮಟ್ಟದಲ್ಲಿ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ’ ಎಂಬ ತಪ್ಪು ಮಾಹಿತಿಯನ್ನು ರವಾನಿಸಿತು. ಜನವರಿ 14ರಂದು ಡಬ್ಲ್ಯುಎಚ್‌ಒ ಹೇಳಿಕೆಯೊಂದನ್ನು ಹೊರಡಿಸಿ ‘ಚೀನಾ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಈ ಸೋಂಕು ಮನುಷ್ಯನಿಂದ ಮನುಷ್ಯನಿಗೆ ಹರಡಬಹುದು ಎಂಬುದಕ್ಕೆ ಪುರಾವೆ ಸಿಕ್ಕಿಲ್ಲ’ ಎಂಬುದಾಗಿ ಚೀನಾ ಹೇಳಿಕೆಯನ್ನು ಸಮರ್ಥಿಸಿಕೊಂಡಿತು. ಅಮೆರಿಕ ತನ್ನ ನಾಗರಿಕರನ್ನು ವುಹಾನ್ ಪ್ರಾಂತ್ಯದಿಂದ ಸ್ಥಳಾಂತರಿಸುವ ಕೆಲಸ ಆರಂಭಿಸಿದಾಗ ‘ಇದೊಂದು ಅತಿಯಾದ ಪ್ರತಿಕ್ರಿಯೆ’ ಎಂದು ಚೀನಾ ಜರೆದಿತ್ತು. ಕೊರೊನಾವನ್ನು ಮಾರ್ಚ್ 11ರಂದು ಡಬ್ಲ್ಯುಎಚ್‌ಒ ‘ಜಾಗತಿಕ ಸೋಂಕು’ ಎಂದು ಘೋಷಿಸುವ ಹೊತ್ತಿಗೆ ಈ ಸೋಂಕು 114 ದೇಶಗಳಿಗೆ ಹಬ್ಬಿತ್ತು!

ಇದೀಗ ಚೀನಾ ತಾನು ಚೇತರಿಸಿಕೊಂಡು, ಕೊರೊನಾಪೀಡಿತ ಐರೋಪ್ಯ ರಾಷ್ಟ್ರಗಳತ್ತ ನೋಡುತ್ತಿದೆ. ಅದಕ್ಕೂ ಕಾರಣವಿದೆ. ತನ್ನ ಮಹತ್ವಾಕಾಂಕ್ಷೆಯ ‘ಬೆಲ್ಟ್ ಅಂಡ್ ರೋಡ್’ ಯೋಜನೆಗೆ ಐರೋಪ್ಯ ರಾಷ್ಟ್ರಗಳನ್ನು ಜೋಡಿಸಿಕೊಳ್ಳಲು ಚೀನಾ ಬಯಸಿದಾಗ ಮೊದಲು ಇಟಲಿಯ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಕೊರೊನಾ ಸೋಂಕಿನಿಂದ ಇಟಲಿ ಹೈರಾಣಾದಾಗ ಚೀನಾ 30 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಇಟಲಿಗೆ ರವಾನಿಸಿತು. ಒಂದು ಹಂತದಲ್ಲಿ ಇಟಲಿಯ ಜನ, ಕೊರೊನಾ ಸೋಂಕಿನ ಕಾರಣಕ್ಕೆ ಚೀನಾವನ್ನು ಶಪಿಸುತ್ತಿದ್ದರು. ಆದರೆ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸುವುದರ ಜೊತೆಗೆ ಕೊರೊನಾ ವೈರಾಣು ಪ್ರಸರಣಕ್ಕೆ ಚೀನಾ ಕಾರಣ ಎನ್ನುವ ಭಾವವನ್ನೇ ಚೀನಾ ವ್ಯವಸ್ಥಿತವಾಗಿ ಅಳಿಸಿಹಾಕಿತು. ಷಿ ಜಿನ್‌ಪಿಂಗ್ ಒಂದು ಹೆಜ್ಜೆ ಮುಂದೆ ಹೋಗಿ ‘ಹೆಲ್ತ್ ಸಿಲ್ಕ್ ರೋಡ್’ ಯೋಜನೆ ಬಗ್ಗೆ ಮಾತನಾಡಿದರು. ಐರೋಪ್ಯ ಒಕ್ಕೂಟದ ಏಕತೆಯನ್ನು ಮುರಿಯಲು ‘ರಾಜಕೀಯ ಔದಾರ್ಯ’ವನ್ನು ಚೀನಾ ಬಳಸುತ್ತಿದೆ ಎಂದು ಐರೋಪ್ಯ ಒಕ್ಕೂಟ ಆರೋಪಿಸಿತು.

ಇದಿಷ್ಟು ಚೀನಾ ಬಗ್ಗೆಯಾದರೆ, ಅಮೆರಿಕದ ಮುಂದೆ ಇರುವ ಪ್ರಶ್ನೆಯು ಅದರ ಸಾಮರ್ಥ್ಯದ ಕುರಿತಾದ್ದು. ಕೊರೊನಾ ಸೋಂಕು ಅಮೆರಿಕದ ಆರೋಗ್ಯ ವ್ಯವಸ್ಥೆಯ ನ್ಯೂನತೆಯನ್ನು ಎತ್ತಿ ತೋರಿಸಿದೆ. ಅಮೆರಿಕ 1918ರ ಸ್ಪ್ಯಾನಿಷ್ ಫ್ಲೂನಿಂದ ಆರಂಭವಾಗಿ ಹಲವಾರು ಸಾಂಕ್ರಾಮಿಕಗಳನ್ನು ಎದುರಿಸಿದೆ. ಆದರೆ ಪಾಠ ಕಲಿತಿಲ್ಲ. ಜಾಗತಿಕ ಸೋಂಕುಗಳ ಕುರಿತು ಬುಷ್ ಜೂನಿಯರ್ ಅವಧಿಯಲ್ಲಿ ಹೆಚ್ಚಿನ ನಿಗಾ ಇಡಲಾಗಿತ್ತು ಮತ್ತು 2005ರಲ್ಲಿ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ರಾಷ್ಟ್ರೀಯ ನೀತಿಯನ್ನು ರೂಪಿಸಲಾಗಿತ್ತು. ಆದರೆ ನಂತರದ ಸರ್ಕಾರಗಳು ಆ ಬಗ್ಗೆ ಕಾಳಜಿ ತೋರಲಿಲ್ಲ. ಪೂರ್ವತಯಾರಿ ಇಲ್ಲದಿದ್ದದ್ದು, ಆಂತರಿಕ ರಾಜಕಾರಣ, ಸಶಕ್ತ ಗುಪ್ತಚರ ಜಾಲವಿದ್ದರೂ ಜಾಗತಿಕ ಆರೋಗ್ಯ ವಿಪತ್ತಿನ ಕುರಿತು ನಿಗಾ ಇಡಲು ಸೋತಿದ್ದು ಮತ್ತು ಬಿಕ್ಕಟ್ಟನ್ನು ಪದೇ ಪದೇ ತಳ್ಳಿಹಾಕಿದ ಅಮೆರಿಕದ ಅಧ್ಯಕ್ಷರ ಬೇಜವಾಬ್ದಾರಿತನವು ಅಮೆರಿಕವನ್ನು ಇಂದಿನ ಸ್ಥಿತಿಗೆ ತಂದು ನಿಲ್ಲಿಸಿದೆ. ವೈದ್ಯಕೀಯ ಪರಿಕರಗಳ ಅಭಾವದಿಂದ ಅಮೆರಿಕ ಕಂಗೆಟ್ಟಿದೆ. ತಾನೇ ಬೆಳೆಸಿದ ಜಾಗತಿಕ ಪೂರೈಕೆ ಜಾಲ, ಇದೀಗ ಚೀನಾ ಕೇಂದ್ರಿತವಾಗಿ ಅಮೆರಿಕವನ್ನು ಅಸಹಾಯಕತೆಗೆ ದೂಡಿದೆ. ಚೀನಾ ವಿರುದ್ಧ ಮಾತನಾಡದಂತೆ ಮಾಡಿದೆ.

ಕೊರಿಯಾ ಯುದ್ಧದ ಸಂದರ್ಭದಲ್ಲಿ ತರಲಾಗಿದ್ದ ಡಿಪಿಎ (ಡಿಫೆನ್ಸ್‌ ಪ್ರೊಡಕ್ಷನ್‌ ಆ್ಯಕ್ಟ್‌) ಬಳಸಿ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಕಂಪನಿಗಳಿಂದ ಪಡೆದುಕೊಳ್ಳುವ ಕೆಲಸಕ್ಕೆ ಅಮೆರಿಕ ಮುಂದಾಗಿದೆ. ಕೊರೊನಾದಂತಹ ಸಂಕಷ್ಟದ ಸಮಯದಲ್ಲೂ ‘ಅಮೆರಿಕ ಮೊದಲು’ ಎಂಬ ಧೋರಣೆ ತಳೆದಿರುವುದರಿಂದ ಮಿತ್ರ ರಾಷ್ಟ್ರಗಳು ಸಿಟ್ಟಾಗಿವೆ. ಅಮೆರಿಕದ ಈ ನಡವಳಿಕೆ ಅದರ ಅಸಹಾಯಕತೆಯನ್ನು ಸೂಚಿಸುತ್ತಿದೆ. ಹಾಗಾಗಿ ಅಮೆರಿಕ ತನ್ನ ಮೊದಲಿನ ಸಾಮರ್ಥ್ಯ ಉಳಿಸಿಕೊಂಡಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಇತ್ತ ಚೀನಾ, ಎದುರಾದ ನೈತಿಕ ಪ್ರಶ್ನೆಗಳನ್ನು ಬದಿಗಿಟ್ಟು ‘ಹೆಲ್ತ್ ಸಿಲ್ಕ್ ರೋಡ್’ ಕಲ್ಪನೆಗೆ ಕಾವು ಕೊಡುತ್ತಿದೆ. ಮೊದಲನೇ ವಿಶ್ವ ಯುದ್ಧದ ದಿನಗಳಲ್ಲಿ ‘ಸ್ಪ್ಯಾನಿಷ್ ಫ್ಲೂ’ ಲಕ್ಷಾಂತರ ಜನರ ಪ್ರಾಣ ಕಸಿದುಕೊಂಡಾಗ, ಯುದ್ಧದಲ್ಲಿ ತಟಸ್ಥವಾಗಿ ಉಳಿದಿದ್ದ ಸ್ಪೇನ್ ಮಾತ್ರ ಸತ್ತವರ ಸಂಖ್ಯೆಯನ್ನು ನಿರ್ಭಿಡೆಯಿಂದ ಹೇಳಿತ್ತು. ಸತ್ತವರ ಸಂಖ್ಯೆಯನ್ನು ಬಹಿರಂಗಪಡಿಸಿದರೆ ಅಶಕ್ತರಂತೆ ಕಾಣುತ್ತೇವೆ ಎಂದು ಉಳಿದ ದೇಶಗಳು ಆ ಮಾಹಿತಿ ಪ್ರಕಟಿಸುವುದಕ್ಕೆ ನಿರ್ಬಂಧ ಹೇರಿದ್ದವು. ಕೊರೊನಾ ವಿಷಯದಲ್ಲಿ ಚೀನಾ ಕೂಡ ಹಾಗೆಯೇ ವರ್ತಿಸಿತೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು