ಬುಧವಾರ, ಏಪ್ರಿಲ್ 8, 2020
19 °C
ಇವರ ಮಧ್ಯೆ ಸಹಮತದ ಕೂಡುಬಿಂದುಗಳಿದ್ದವೇ ಎಂದು ವಿವೇಚಿಸುವುದು ಯಾರಿಗೂ ಬೇಡವಾಗಿದೆ!

ಗಾಂಧಿ-ಸಾವರ್ಕರ್: ಸಮನ್ವಯ ಸಾಧ್ಯವೇ?

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

Prajavani

ಇತ್ತೀಚಿನ ವರ್ಷಗಳಲ್ಲಿ ಹೊಸ ಚಾಳಿಯೊಂದು ಆರಂಭವಾಗಿದೆ. ಭಾರತ ಸ್ವಾತಂತ್ರ್ಯ ಸಂಗ್ರಾಮದ ಘಟನಾವಳಿಗಳನ್ನು ಅವಲೋಕಿಸುವಾಗ ಗಾಂಧಿ- ಸಾವರ್ಕರ್ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಹೆಚ್ಚು ಪ್ರಸ್ತಾಪವಾಗುತ್ತವೆ. ಯಾರ ಬಲಿದಾನ ಹೆಚ್ಚು ಎಂದು ಮೂಗಿನ ನೇರಕ್ಕೆ ಅಳೆಯುವ, ಸಾವರ್ಕರ್ ಬಿಡುಗಡೆಗೆ ಗಾಂಧಿ ಪ್ರಯತ್ನಿಸಲಿಲ್ಲ ಎಂದು ಆರೋಪಿಸುವ, ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರವನ್ನು ಚಿತ್ರಿಸುವ ಪ್ರಯತ್ನ ನಡೆಯುತ್ತಿದೆ. ಈ ಮೇರು ನಾಯಕರ ನಡುವೆ ಸಂವಾದ ಹಾಗೂ ಸಹಮತದ ಕೂಡು ಬಿಂದುಗಳು ಇದ್ದವೇ ಎಂದು ವಿವೇಚಿಸುವುದು ಯಾರಿಗೂ ಬೇಡದ ಸಂಗತಿಯಾಗಿದೆ.

ಹಾಗೆ ನೋಡಿದರೆ, ಈ ನಾಯಕರು ಮೊದಲು ಭಾರತದ ಹೊರಗೆ ತಮ್ಮ ನಾಯಕತ್ವ ಗುಣವನ್ನು ಒರೆಗೆ ಹಚ್ಚಿದವರು. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಹೊಸ ಮಾದರಿ ಹೋರಾಟವನ್ನು ರೂಪಿಸಿ ಜಗತ್ತಿಗೆ ಪರಿಚಯಿ
ಸಿದರು. ಸಾವರ್ಕರ್‌, ಲಂಡನ್ನಿನಲ್ಲಿ ತರುಣ ಪಡೆಗೆ ಸ್ಫೂರ್ತಿ ಸ್ರೋತವಾಗಿ ಸಂಚಲನ ಉಂಟುಮಾಡಿದರು.

1906ರಲ್ಲಿ ಗಾಂಧೀಜಿ ಲಂಡನ್ನಿನ ‘ಇಂಡಿಯಾ ಹೌಸ್’ನಲ್ಲಿ ಸಾವರ್ಕರ್ ಅವರನ್ನು ಭೇಟಿಯಾಗಿದ್ದರು. ಸಾವರ್ಕರ್ ಅಡುಗೆ ಕೆಲಸದಲ್ಲಿ ತೊಡಗಿದ್ದಾಗ ಅವರನ್ನು ಗಾಂಧಿ ಮಾತಿಗೆಳೆಯಲು ಪ್ರಯತ್ನಿಸಿದ್ದರು. ಚಿತ್ಪಾವನ ಬ್ರಾಹ್ಮಣನೊಬ್ಬ ಮಾಂಸಾಹಾರ ತಯಾರಿಸುತ್ತಿದ್ದದ್ದು ಕಂಡು ಗಾಂಧೀಜಿ ಆಶ್ಚರ್ಯಪಟ್ಟಿದ್ದರು. ತಮ್ಮ ಆಹಾರದ ಮಿತಿಯಿಂದಾಗಿ ಊಟ ನಿರಾಕರಿಸಿದಾಗ ಅವರನ್ನು ಅಣಕಿಸುವಂತೆ ಸಾವರ್ಕರ್ ‘ನಮ್ಮೊಂದಿಗೆ ಊಟಕ್ಕೇ ನೀವು ಸಿದ್ಧರಿಲ್ಲ, ಒಟ್ಟಾಗಿ ಕೆಲಸ ಮಾಡುವುದು ಹೇಗೆ?’ ಎಂದಿದ್ದರು. ನಂತರ ವಿಜಯದಶಮಿ ಉತ್ಸವದಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಮಾತನಾಡಿದ್ದರು. ರಾಮನ ತ್ಯಾಗ ಮತ್ತು ಪ್ರಜಾಪೋಷಣೆಯ ಬಗ್ಗೆ ಗಾಂಧಿ ಮಾತನಾಡಿದರೆ, ದುಷ್ಟ ಸಂಹಾರಿಣಿ ದುರ್ಗೆಯ ಬಗ್ಗೆ ಸಾವರ್ಕರ್ ಮಾತನಾಡಿದ್ದರು.

ಗಾಂಧಿ ‘ಹಿಂದ್ ಸ್ವರಾಜ್’ ಬರೆದ ಸಮಯದಲ್ಲೇ ಸಾವರ್ಕರ್ ‘ದಿ ಇಂಡಿಯನ್‌ ವಾರ್‌ ಆಫ್‌ ಇಂಡಿಪೆಂಡೆನ್ಸ್‌–1857’ ಪುಸ್ತಕ ಪ್ರಕಟಿಸಿದರು. ಲಂಡನ್ ಭೇಟಿಯ ವೇಳೆ ತಮಗೆ ಎದುರಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಗಾಂಧೀಜಿ ‘ಹಿಂದ್ ಸ್ವರಾಜ್’ ಮೂಲಕ ಮಾಡಿದರು. ಅದರ ಕೆಲವು ಪ್ರಶ್ನೆಗಳು ಸಾವರ್ಕರ್ ಚಿಂತನೆಗಳೊಂದಿಗೆ ಗಾಂಧಿ ನಡೆಸಿದ ಪರೋಕ್ಷ. ಸಂವಾದದಂತಿತ್ತು. ಗಾಂಧಿ ಚಿಂತನೆಗಳಿಗೆ ಅಧ್ಯಾತ್ಮ ಮೂಲವಾಗಿತ್ತು. ಸಾವರ್ಕರ್ ಚಿಂತನೆಗಳು ಇತಿಹಾಸದ ತಳಹದಿಯ ಮೇಲೆ ಬೆಳೆದಿದ್ದವು. ಮಹಾಭಾರತದಲ್ಲಿ
ಕೃಷ್ಣ ಅನುಸರಿಸಿದ ನೀತಿ; ಚಾಣಕ್ಯ, ಶಿವಾಜಿ ರೂಪಿಸಿದ ತಂತ್ರಗಳಿಂದ ಸಾವರ್ಕರ್ ಪ್ರಭಾವಿತರಾಗಿದ್ದರು. 1910ರಲ್ಲಿ ಸಾವರ್ಕರ್ ಅವರನ್ನು ಬಂಧಿಸಲಾಯಿತು. ಎರಡು ಅವಧಿಗೆ ಕರಿನೀರಿನ ಶಿಕ್ಷೆ ವಿಧಿಸಲಾಯಿತು. ಸಾವರ್ಕರ್ ಹೀಗೆ ಶಿಕ್ಷೆಗೆ ಒಳಗಾದಾಗ ಸ್ವಾತಂತ್ರ್ಯ ಹೋರಾಟದ ಮುಖ್ಯ ವೇದಿಕೆಗಿನ್ನೂ ಗಾಂಧಿ ಬಂದಿರಲಿಲ್ಲ.

ಖಿಲಾಫತ್ ಚಳವಳಿಗೆ ಗಾಂಧಿ ಬೆಂಬಲವಾಗಿ ನಿಂತಾಗ ಸಾವರ್ಕರ್ ಅದನ್ನು ವಿರೋಧಿಸಿದ್ದರು. 1926ರಲ್ಲಿ ಸ್ವಾಮಿ ಶ್ರದ್ಧಾನಂದರನ್ನು ಅಬ್ದುಲ್ ರಶೀದ್ ಎಂಬಾತ ಹತ್ಯೆ ಮಾಡಿದಾಗ ಅದನ್ನು ಗಾಂಧೀಜಿ ಗಟ್ಟಿ
ಧ್ವನಿಯಲ್ಲಿ ಖಂಡಿಸಲಿಲ್ಲ ಎಂಬ ಅಸಮಾಧಾನ ಸಾವರ್ಕರ್ ಅವರಲ್ಲಿತ್ತು. 1927ರಲ್ಲಿ ಸಾವರ್ಕರ್ ಅವರನ್ನು ಭೇಟಿಯಾಗಲು ರತ್ನಗಿರಿಗೆ ಗಾಂಧಿ ಬಂದಿದ್ದರು. ಇಬ್ಬರೂ ಹಲವು ವಿಚಾರಗಳನ್ನು ಚರ್ಚಿಸಿ ಸಹಮತ, ಭಿನ್ನನಿಲುವು ಪ್ರಕಟಿಸಿದರು. ಆದರೆ ಕಹಿ ಮಾತು ವಿನಿಮಯ ಆಗಲಿಲ್ಲ.

1921ರ ಮೇ 18ರ ‘ಯಂಗ್ ಇಂಡಿಯಾ’ ಸಂಚಿಕೆಯಲ್ಲಿ ಗಾಂಧೀಜಿಯು ಸಾವರ್ಕರ್ ವಿಚಾರ
ಪ್ರಸ್ತಾಪಿಸಿದ್ದರು. ‘ಸಾವರ್ಕರ್ ಧೈರ್ಯವಂತ, ಚತುರ, ರಾಷ್ಟ್ರಪ್ರೇಮಿ ಮತ್ತು ಕ್ರಾಂತಿಕಾರಿ. ಬ್ರಿಟಿಷ್ ಆಳ್ವಿಕೆಯ ಕ್ರೌರ್ಯವನ್ನು ನನಗಿಂತ ಮೊದಲೇ ಮನಗಂಡಿದ್ದರು. ಭಾರತವನ್ನು ಅತಿಹೆಚ್ಚು ಪ್ರೀತಿಸಿದ ಕಾರಣಕ್ಕೆ ಆತ ಅಂಡಮಾನ್ ಜೈಲಿನಲ್ಲಿದ್ದಾನೆ. ನ್ಯಾಯಯುತ ಸರ್ಕಾರ ಇದ್ದಿದ್ದರೆ ಆತ ಉನ್ನತ ಹುದ್ದೆ ಅಲಂಕರಿಸಬೇಕಿತ್ತು’
ಎಂದು ಗಾಂಧೀಜಿ ಬರೆದಿದ್ದರು. ‘ಸಾವರ್ಕರ್ ಸಹಕೈದಿಗಳು ‘ರಾಯಲ್ ಕ್ಲೆಮೆನ್ಸಿ’ಯ ಲಾಭ ಪಡೆಯುತ್ತಿದ್ದರೂ ರಾಜಕೀಯ ಕೈದಿಗಳಾದ ಸಾವರ್ಕರ್ ಸಹೋದರರಿಗೆ ಮಾತ್ರ ಅದನ್ನು ನಿರಾಕರಿಸಲಾಗುತ್ತಿದೆ’ ಎಂಬ ಅಸಮಾಧಾನ ಹೊರಹಾಕಿದ್ದರು.

ಸಾವರ್ಕರ್ ಬಿಡುಗಡೆಗಾಗಿ ಆಗ್ರಹಿಸಿ ಬರೆದ ಪತ್ರಕ್ಕೆ ಗಾಂಧೀಜಿ ಸಹಿ ಹಾಕಲಿಲ್ಲ ಎಂಬ ಆರೋಪ ಇತ್ತು. ಈ ಕುರಿತು ಶಂಕರರಾವ ದೇವು ಅವರಿಗೆ ಬರೆದ ಪತ್ರದಲ್ಲಿ ‘ನೂತನ ಕಾಯ್ದೆಯನ್ವಯ ಸಾವರ್ಕರ್ ಬಿಡುಗಡೆಯಾಗುವ ಖಾತರಿ ಇದ್ದಿದ್ದರಿಂದ ಈ ಪತ್ರದ ಅಗತ್ಯವಿಲ್ಲವೆಂದು ಸಹಿ ಹಾಕಲಿಲ್ಲ’ ಎಂಬುದಾಗಿ ತಮ್ಮ ನಿಲುವನ್ನು ಗಾಂಧಿ ಸ್ಪಷ್ಟಪಡಿಸಿದ್ದರು. ಜೊತೆಗೆ ‘ಲೋಕಮಾನ್ಯ ತಿಲಕರೊಂದಿಗೆ ಭಿನ್ನಾಭಿಪ್ರಾಯ
ಗಳಿದ್ದರೂ ಅವ್ಯಾವುವೂ ನಮ್ಮಿಬ್ಬರ ಸ್ನೇಹಕ್ಕೆ ಚ್ಯುತಿ ತರಲಿಲ್ಲ. ನನ್ನ ಮಿತಿಯಲ್ಲಿ, ಸಾವರ್ಕರ್ ಸಹೋದರರ ಬಿಡುಗಡೆಗೆ ಪ್ರಯತ್ನಿಸಿದ್ದೇನೆ. ಲಂಡನ್ ನಗರದಲ್ಲಿ ನಮ್ಮಿಬ್ಬರ ನಡುವೆ ಉಂಟಾದ ಸೌಹಾರ್ದ ಸಂಬಂಧವನ್ನು ಸಾವರ್ಕರ್ ಮೆಲುಕು ಹಾಕುತ್ತಾರೆ ಎಂದು ಭಾವಿಸುತ್ತೇನೆ’ ಎಂದು ಬರೆದಿದ್ದರು.

1924ರಿಂದ 37ರವರೆಗೆ ಸಾವರ್ಕರ್ ಅವರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಿ ರತ್ನಗಿರಿಯಲ್ಲಿ ಇರಿಸಲಾಗಿತ್ತು. ಆ ಸಮಯದಲ್ಲಿ ಸಾವರ್ಕರ್ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡರು. ‘ಗೋಮೂತ್ರ ಕುಡಿಯುತ್ತೀರಿ. ಆದರೆ ಕೆಳಜಾತಿಗೆ ಸೇರಿದ ಮನುಷ್ಯ ನೀಡಿದ ನೀರು ಕುಡಿಯಲಾರಿರಿ’ ಎಂದು ಹಿಂದೂ ಸಮಾಜಕ್ಕೆ ಚಾಟಿ ಬೀಸಿದರು. ದಲಿತರೊಂದಿಗೆ ದೇವಾಲಯ ಪ್ರವೇಶ, ಸಹಭೋಜನ, ಅಂತರ್ಜಾತಿ ವಿವಾಹ, ವಿಧವಾ ವಿವಾಹಕ್ಕೆ ಪೂರಕವಾಗಿ ಕೆಲಸ ಮಾಡಿದರು. ಇದರ ಬಗ್ಗೆ ಗಾಂಧೀಜಿಗೆ ಮೆಚ್ಚುಗೆ ಇತ್ತು. ‘ಜನತಾ’ ಪತ್ರಿಕೆಯ 1933ರ ಏಪ್ರಿಲ್ ವಿಶೇಷ ಸಂಚಿಕೆಯಲ್ಲಿ ಸಾವರ್ಕರ್ ಅವರ ಸಮಾಜ ಸುಧಾರಣೆಯ ಕೆಲಸವನ್ನು ಅಂಬೇಡ್ಕರ್ ಶ್ಲಾಘಿಸಿದ್ದರು.

ಹಿಂದೂ ಸಭಾ ನಾಯಕರಾದ ನಂತರವೂ ಗಾಂಧಿ- ಸಾವರ್ಕರ್ ನಡುವೆ ಸೌಹಾರ್ದ ಸಂಬಂಧವಿತ್ತು. 1941ರ ಡಿಸೆಂಬರ್‌ನಲ್ಲಿ ಆಯೋಜನೆಯಾಗಿದ್ದ ಹಿಂದೂ ಮಹಾಸಭಾದ ಸಭೆಗೆ ಅನುಮತಿ ನೀಡದೇ ಬಿಹಾರದ ಆಡಳಿತವು ಸಾವರ್ಕರ್ ಮತ್ತು ಡಾ. ಮುಂಜೆ ಅವರನ್ನು ಬಂಧಿಸಿತ್ತು. ಈ ಕ್ರಮದ ವಿರುದ್ಧ ಗಾಂಧಿ, ಪತ್ರಿಕಾ ಹೇಳಿಕೆ ನೀಡಿದ್ದರು. 1945ರ ಮಾರ್ಚ್ 22ರಂದು ಸಹೋದರನ ಮರಣಕ್ಕೆ ಸಾಂತ್ವನ ಹೇಳಲು ಸಾವರ್ಕರ್ ಅವರಿಗೆ ಗಾಂಧಿ ಪತ್ರ ಬರೆದಿದ್ದರು. ಅದರ ಒಕ್ಕಣೆ ‘ಸಹೋದರ ಸಾವರ್ಕರ್’ ಎಂಬುದಾಗಿತ್ತು. ವಿಪರ್ಯಾಸವೆಂದರೆ, ಗಾಂಧಿ ಹತ್ಯೆಯ ನಂತರ ಸಾವರ್ಕರ್ ವಿರುದ್ಧ ದೋಷಾರೋಪಣೆ ಸಲ್ಲಿಸಲಾಯಿತು. ಸಾವರ್ಕರ್ ಬಂಧನವಾದಾಗ ‘ಕೇವಲ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಸಾವರ್ಕರ್ ಬಂಧನ ಮಾಡಲಾಗಿದೆ’ ಎಂದು ಅಂಬೇಡ್ಕರ್ ಅವರು ಸಾವರ್ಕರ್ ಪರ ವಕೀಲ ಎಲ್.ಬಿ. ಬೋಪಟ್ಕರ್ ಅವರಿಗೆ ಹೇಳಿದ್ದರು. ಈ ಸಂಗತಿಯನ್ನು ಪತ್ರಕರ್ತ ಮನೋಹರ ಮಳಗಾಂವಕರ ತಮ್ಮ ಕೃತಿ ‘ದಿ ಮೆನ್‌ ಹೂ ಕಿಲ್ಡ್‌ ಗಾಂಧಿ’ಯಲ್ಲಿ ಉಲ್ಲೇಖಿಸಿದ್ದಾರೆ.

ಒಟ್ಟಿನಲ್ಲಿ ಇಬ್ಬರ ಗುರಿ ಸ್ವರಾಜ್ಯವೇ ಆಗಿತ್ತು. ಮಾರ್ಗಗಳು ಭಿನ್ನವಾಗಿದ್ದವು. ಆತ್ಮಶುದ್ಧಿ ಮತ್ತು ನೈತಿಕ ಬಲವಷ್ಟೇ ಮನುಷ್ಯನನ್ನು ಸಂಕೋಲೆಗಳಿಂದ ಬಿಡಿಸಬಲ್ಲದು ಎಂಬ ಅಧ್ಯಾತ್ಮದ ಅನುಸಂಧಾನವನ್ನು ರಾಜಕೀಯ ಪ್ರಯೋಗಕ್ಕೆ ಒಡ್ಡಲು ಗಾಂಧೀಜಿ ಮುಂದಾದರು. ಅಹಿಂಸೆಯನ್ನು ಬದುಕಿನ ಧ್ಯೇಯವಾಗಿಸಿಕೊಂಡರು. ಇತಿಹಾಸದ ಮಹಾಪುರುಷರಿಂದ ಪ್ರೇರಣೆ ಪಡೆದಿದ್ದ ಸಾವರ್ಕರ್ ಶೌರ್ಯ, ಸಾಹಸ, ಚತುರೋಪಾಯಗಳನ್ನು ಮೈಗೂಡಿಸಿಕೊಂಡರು. ಅಸಂಖ್ಯ ತರುಣ ಹೋರಾಟಗಾರರು, ಸೈದ್ಧಾಂತಿಕವಾಗಿ ಮತ್ತೊಂದು ದಡದಲ್ಲಿದ್ದ ಭಗತ್ ಸಿಂಗ್, ಎಂ.ಎನ್. ರಾಯ್ ಕೂಡ ಸಾವರ್ಕರ್ ಪ್ರಭಾವಕ್ಕೆ ಒಳಗಾಗಿದ್ದರು. ಸಮಾಜವು ಗಾಂಧೀಜಿಯನ್ನು ‘ಮಹಾತ್ಮ’ ಎಂದು ಕರೆಯಿತು. ಸಾವರ್ಕರ್ ಹೆಸರು ಹೇಳುವಾಗ ‘ವೀರ’ ಎಂಬ ವಿಶೇಷಣ ಸೇರಿಸಿಕೊಂಡಿತು. ಹಾಗಾಗಿ ಕೆಲವು ಕಾರಣಗಳನ್ನಷ್ಟೇ ಮುಂದೆ ಮಾಡಿ ಈ ನಾಯಕರ ಬಗ್ಗೆ ಅಪದ್ಧ ನುಡಿಯುವುದು ನಾವು ಇತಿಹಾಸಕ್ಕೆ ಬಗೆಯುವ ದ್ರೋಹವಲ್ಲದೆ ಮತ್ತೇನು?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು