ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕರಿಸುತ್ತಲೇ ಜಾಗತಿಕ ರಾಜಕೀಯದ ಅಂಗಳದಲ್ಲಿ ಸಣ್ಣ ಸುನಾಮಿ ಎದ್ದಿದೆ.

ಟ್ರಂಪ್ ಅವರು ಅಧ್ಯಕ್ಷರಾದ ತರುವಾಯ ನೀಡಿದ ಹೇಳಿಕೆ ಮತ್ತು ಹೊರಡಿಸಿದ ಕಾರ್ಯನಿರ್ವಾಹಕ ಆದೇಶಗಳನ್ನು ನೋಡಿದರೆ, ಅದರಲ್ಲಿ ಅಚ್ಚರಿಯ ಅಂಶಗಳೇನೂ ಇಲ್ಲ. ಅಕ್ರಮ ವಲಸಿಗರನ್ನು ಪತ್ತೆ ಮಾಡುವ ಮತ್ತು ಹಿಂದಕ್ಕೆ ಕಳುಹಿಸುವ, ಪೌರತ್ವ ನಿಯಮಗಳನ್ನು ಬಿಗಿಗೊಳಿಸುವ ಮಾತನ್ನು ಅವರು ಚುನಾವಣಾ ಸಂದರ್ಭದಲ್ಲೇ ಆಡಿದ್ದರು. ಅಕ್ರಮ ವಲಸೆಯನ್ನು ಯಾವುದೇ ಜವಾಬ್ದಾರಿಯುತ ಸರ್ಕಾರ ಗಂಭೀರವಾಗಿಯೇ ತೆಗೆದುಕೊಳ್ಳಬೇಕು. ಶ್ರೀಮಂತ ರಾಷ್ಟ್ರಗಳಲ್ಲಿ ನೆಲೆ ಕಂಡುಕೊಳ್ಳುವ ದಿಸೆಯಲ್ಲಿ ವ್ಯಾಪಕ ವಾಗಿರುವ ‘ಬರ್ತ್ ಟೂರಿಸಂ’ ಅಮೆರಿಕದ ಮಟ್ಟಿಗೆ ದಂಧೆಯಾಗಿದೆ. ಅಮೆರಿಕದಲ್ಲಿ ಮಗುವಿಗೆ ಜನ್ಮ ಕೊಡಲು ಹಾತೊರೆಯುವ ಭಾರತ ಮೂಲದವರೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಟ್ರಂಪ್ ಅವರ ನಿಲುವು ಈ ವರ್ಗಕ್ಕೆ ಅಸಮಾಧಾನ ಉಂಟುಮಾಡಿದ್ದರೆ, ಅದನ್ನು ಭಾರತಕ್ಕೆ ಆದ ಹಿನ್ನಡೆ ಎಂದುಕೊಳ್ಳುವಂತಿಲ್ಲ.

ಬೈಡನ್ ಅವರ ಜನಪ್ರಿಯತೆಯನ್ನು ಕುಂದಿಸಿದ, ಕಮಲಾ ಹ್ಯಾರಿಸ್ ಅವರಿಗೆ ಹಿನ್ನಡೆ ಉಂಟುಮಾಡಿದ ಅಂಶಗಳಲ್ಲಿ ಪ್ರಮುಖವಾದದ್ದು ಹಣದುಬ್ಬರ. ಈ ಸಮಸ್ಯೆಗೆ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಉತ್ತರ ಕಂಡುಕೊಳ್ಳಲು ಟ್ರಂಪ್ ಹೊರಟಂತಿದೆ. ಹಾಗಾಗಿಯೇ ತಮ್ಮ ಭಾಷಣದಲ್ಲಿ ‘ಅಮೆರಿಕ ಮತ್ತೊಮ್ಮೆ ಉತ್ಪಾದನಾ ರಾಷ್ಟ್ರವಾಗಲಿದೆ. ನಮ್ಮ ಕಾಲುಗಳ ಕೆಳಗೆ ಇರುವ ದ್ರವರೂಪದ ಚಿನ್ನದಿಂದ ಅದು ಸಾಧ್ಯವಾಗುತ್ತದೆ. ಅತಿದೊಡ್ಡ ತೈಲ ಮತ್ತು ಅನಿಲ ಸಂಪತ್ತು ನಮ್ಮಲ್ಲಿದೆ, ನಾವು ಅದನ್ನು ಬಳಸಲಿದ್ದೇವೆ’ ಎಂದಿದ್ದಾರೆ. ಈ ನಿಲುವು ರಷ್ಯಾದ ತೈಲ ಗ್ರಾಹಕ ರಾಷ್ಟ್ರಗಳನ್ನು ತನ್ನತ್ತ ಸೆಳೆಯುವ, ಅಷ್ಟರಮಟ್ಟಿಗೆ ರಷ್ಯಾಕ್ಕೆ ಆರ್ಥಿಕ ಆಘಾತ ನೀಡುವ ಕ್ರಮವೂ ಹೌದು. ಮುಂದಿನ ದಿನಗಳಲ್ಲಿ ಹೆಚ್ಚಿನ ತೈಲವನ್ನು ಅಮೆರಿಕದಿಂದಲೇ ಕೊಂಡುಕೊಳ್ಳಬೇಕು ಎಂಬ ಒತ್ತಡ ಭಾರತದ ಮೇಲೂ ಬೀಳಬಹುದು.

ಜೊತೆಗೆ, ಟ್ರಂಪ್ ಅಮೆರಿಕದ ವ್ಯಾಪ್ತಿಯನ್ನು ಹಿರಿದು ಮಾಡುವ ಮಾತನ್ನಾಡಿದ್ದಾರೆ. ಗ್ರೀನ್ ಲ್ಯಾಂಡ್ ಅಪರೂಪದ ಲೋಹಗಳ ದೊಡ್ಡ ನಿಕ್ಷೇಪಗಳನ್ನು ಹೊಂದಿರುವ ಭೂಪ್ರದೇಶ. ಹಾಗಾಗಿ, ಗ್ರೀನ್ ಲ್ಯಾಂಡ್ ತನ್ನದಾಗಬೇಕು ಎಂದು ಅಮೆರಿಕ ಬಯಸುತ್ತಿದೆ. ಈ ಹಿಂದೆ, 2019ರಲ್ಲೂ ಗ್ರೀನ್ ಲ್ಯಾಂಡ್ ಬಗ್ಗೆ ಟ್ರಂಪ್ ಮಾತನಾಡಿದ್ದರು. ಗ್ರೀನ್ ಲ್ಯಾಂಡ್ ಮಾರಾಟಕ್ಕಿಲ್ಲ ಎಂದು ಡೆನ್ಮಾರ್ಕ್ ಪ್ರತಿಕ್ರಿಯಿಸಿತ್ತು.

ಅಂತೆಯೇ, ಪನಾಮ ಕಾಲುವೆಯ ವಿಷಯ. ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳನ್ನು ಸಂಪರ್ಕಿಸಲು ಪನಾಮ ಕಾಲುವೆಯನ್ನು ಅಮೆರಿಕ 1914ರಲ್ಲಿ ನಿರ್ಮಿಸಿತ್ತು. 1977ರ ಒಪ್ಪಂದದ ಅನ್ವಯ ಕಾಲುವೆಯ ನಿಯಂತ್ರಣವನ್ನು ಪನಾಮಕ್ಕೆ ಬಿಟ್ಟು ಕೊಡಲಾಗಿತ್ತು. ಇದೀಗ ಚೀನಾವು ಪನಾಮ ಕಾಲುವೆಯಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುವತ್ತ ಹೆಜ್ಜೆಯಿರಿಸಿದೆ. ಹಾಗಾಗಿಯೇ ಟ್ರಂಪ್, ಪನಾಮ ಕಾಲುವೆಯ ನಿಯಂತ್ರಣವನ್ನು ಅಮೆರಿಕ ಮರಳಿ ಪಡೆಯುತ್ತದೆ ಎಂದಿದ್ದಾರೆ. ಇದೊಂದು ಬೆದರಿಕೆಯ ಮಾತು. ಇಂತಹ ಬೆದರಿಕೆಗಳನ್ನು ಹಾಕುವುದರಲ್ಲಿ ಟ್ರಂಪ್ ಅವರು ನಿಸ್ಸೀಮ. ಕೆನಡಾವನ್ನು ಅಮೆರಿಕದ ಭಾಗವಾಗಿಸಿಕೊಳ್ಳುವ ಅವರ ಮಾತನ್ನು ಈ ವರ್ಗಕ್ಕೇ ಸೇರಿಸಬಹುದು. ಅಮೆರಿಕದ ಸರ್ಕಾರಿ ಕಡತಗಳಲ್ಲಿನ ‘ಗಲ್ಫ್ ಆಫ್ ಮೆಕ್ಸಿಕೊ’ ಉಲ್ಲೇಖಗಳನ್ನು ‘ಗಲ್ಫ್ ಆಫ್ ಅಮೆರಿಕ’ ಎಂದು ತಿದ್ದುವ ಅವರ ಆದೇಶ ಹೆಚ್ಚಿನದೇನನ್ನೂ ಸಾಧಿಸಲಾರದು.

ಟ್ರಂಪ್ ತಮ್ಮ ಭಾಷಣದಲ್ಲಿ, ‘ಶಾಂತಿ ಸ್ಥಾಪನೆ ಮತ್ತು ಏಕೀಕರಣದ ರೂವಾರಿಯಾಗಿ ನನ್ನನ್ನು ಗುರುತಿಸಬೇಕು. ಆ ದಿಸೆಯಲ್ಲಿ ಕೆಲಸ ಮಾಡುತ್ತೇನೆ’ ಎಂದಿದ್ದಾರೆ. ಈ ಮಾತು ಮುಂದಿನ ನಾಲ್ಕು ವರ್ಷಗಳಲ್ಲಿ ಜಾಗತಿಕವಾಗಿ ಅವರು ಏನನ್ನು ಸಾಧಿಸಬಯಸಿದ್ದಾರೆ ಎಂಬುದನ್ನು ಸೂಚ್ಯವಾಗಿ ಹೇಳುತ್ತಿದೆ. ಹಿಂದಿನ ಅವಧಿಯಲ್ಲಿ ಟ್ರಂಪ್ ಅವರ ವಿದೇಶಾಂಗ ನೀತಿಯು ಮಧ್ಯಪ್ರಾಚ್ಯವನ್ನು ಕೇಂದ್ರೀಕರಿಸಿಕೊಂಡಿತ್ತು. ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳನ್ನು ಬೆಸೆಯುವ ಪ್ರಯತ್ನಗಳು ನಡೆದಿದ್ದವು. ಈ ಬಾರಿ ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಹೊತ್ತಿಗೆ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನವಿರಾಮ ಏರ್ಪಟ್ಟಿತು. ಈ ವಿಷಯವನ್ನು ಟ್ರಂಪ್ ಅವರು ಪ್ರಸ್ತಾಪಿಸಿದಾಗ ಸ್ವತಃ ಬೈಡನ್ ಮತ್ತು ಕಮಲಾ ಹ್ಯಾರಿಸ್ ಎದ್ದುನಿಂತು ಕರತಾಡನ ಮಾಡಿದ್ದು ಟ್ರಂಪ್ ಅವರ ತಂಡದ ಶ್ರಮವನ್ನು ಅನುಮೋದಿಸುವಂತಿತ್ತು.

ಟ್ರಂಪ್ ಅವರು ಮಧ್ಯಪ್ರಾಚ್ಯದ ವಿಷಯದಲ್ಲಿ ತಾವು ಅಂದುಕೊಂಡಿದ್ದನ್ನು ಸಾಧಿಸಬೇಕಾದರೆ ಬಹುದೂರ ಸಾಗಬೇಕು. ಇಸ್ರೇಲ್ ಮತ್ತು ಪ್ಯಾಲೆಸ್ಟೀನಿಯನ್ನರ ನಡುವೆ ಶಾಂತಿ ಸ್ಥಾಪನೆ ಸಾಧ್ಯವಾಗಬೇಕು. ಲೆಬನಾನ್ ಮತ್ತು ಸಿರಿಯಾವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಬೇಕು. ಇರಾನ್ ಪರಮಾಣು ಬಾಂಬ್ ಹೊಂದುವ ಮೊದಲು ಅದನ್ನು ಒಪ್ಪಂದದ ಪರಿಧಿಯೊಳಗೆ ತರಬೇಕು.

ನಿಜ, ಮಧ್ಯಪ್ರಾಚ್ಯಕ್ಕೆ ಹೊಸ ರೂಪ ನೀಡಲು ಪರಿಸ್ಥಿತಿಯೂ ಪೂರಕವಾಗಿದೆ. ಲೆಬನಾನ್ ಮೇಲೆ ಹಿಡಿತ ಸಾಧಿಸಿದ್ದ ಹಿಜ್ಬುಲ್ಲಾ ತನ್ನ ಅಗ್ರನಾಯಕನನ್ನು ಕಳೆದುಕೊಂಡಿದೆ. ಅಪಾರ ಜನಮನ್ನಣೆಯೊಂದಿಗೆ
ಜೋಸೆಫ್ ಔನ್ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಅಮೆರಿಕ ಮನಸ್ಸು ಮಾಡಿದರೆ ವಿಶ್ವಸಂಸ್ಥೆ ಗುರುತಿಸಿರುವ ಇಸ್ರೇಲ್ - ಲೆಬನಾನ್ ಗಡಿಯನ್ನು ಉಭಯ ದೇಶಗಳೂ ಒಪ್ಪಿಕೊಳ್ಳುವಂತೆ ಮಾಡಬಹುದು. ಅತ್ತ ಸಿರಿಯಾದಲ್ಲಿ 2011ರಿಂದ ನಡೆಯುತ್ತಿದ್ದ ಅಂತರ್ಯುದ್ಧ ನಿರ್ಣಾಯಕ ಹಂತಕ್ಕೆ ಬಂದು, ಬಷರ್ ಅಲ್ ಅಸಾದ್ ಆಡಳಿತ ಕೊನೆಗೊಂಡಿದೆ. ನೂತನ ಆಡಳಿತವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ಕೆಲಸ ಆಗಬೇಕಿದೆ.

ಆದರೆ ಇರಾನ್ ದೇಶವನ್ನು ಸಂಭಾಳಿಸುವುದು ಕೊಂಚ ಕಷ್ಟದ ಕೆಲಸ. ಏಕೆಂದರೆ ಚೀನಾ ಮತ್ತು ರಷ್ಯಾ ಮಧ್ಯಪ್ರಾಚ್ಯದಲ್ಲಿ ತಮ್ಮ ಪ್ರಭಾವ ಉಳಿಸಿಕೊಳ್ಳಲು ಆ ದೇಶವನ್ನು ದಾಳವಾಗಿ ಬಳಸಿಕೊಳ್ಳುತ್ತಿವೆ. ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಕೆಲವು ದಿನಗಳ ಮುನ್ನ ರಷ್ಯಾ ಮತ್ತು ಇರಾನ್ ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದವು. ಈ ಹಿಂದೆ, 2023ರ ಮಾರ್ಚ್ 10ರಂದು ಚೀನಾ ಮಧ್ಯಸ್ಥಿಕೆಯಲ್ಲಿ ಬೀಜಿಂಗ್ನಲ್ಲಿ ಸೌದಿ ಮತ್ತು ಇರಾನ್ ನಡುವೆ ಒಪ್ಪಂದ ಏರ್ಪಟ್ಟಿತ್ತು. ಆ ಕಾರಣದಿಂದಲೇ 2024ರ ನವೆಂಬರ್ನಲ್ಲಿ ರಿಯಾದ್ನಲ್ಲಿ ನಡೆದ ಅರಬ್ ಇಸ್ಲಾಮಿಕ್ ಶೃಂಗಸಭೆಯಲ್ಲಿ ಸೌದಿಯ ಯುವರಾಜ, ಇರಾನ್ ಮೇಲೆ ದಾಳಿ ಮಾಡದಂತೆ ಇಸ್ರೇಲಿಗೆ ಎಚ್ಚರಿಕೆ ನೀಡಿದ್ದರು. ಹಾಗಾಗಿ, ಇಸ್ರೇಲ್ ಮತ್ತು ಸೌದಿ ಅರೇಬಿಯಾವನ್ನು ಅಮೆರಿಕ ಜೊತೆಯಾಗಿ ಕರೆದೊಯ್ಯಬೇಕಾದರೆ, ದ್ವಿರಾಷ್ಟ್ರ ಪ್ರತಿಪಾದನೆಗೆ ಇಸ್ರೇಲ್ ಅನ್ನು ಒಪ್ಪಿಸಬೇಕಾಗುತ್ತದೆ. ಅದನ್ನು ಟ್ರಂಪ್ ಹೇಗೆ ನಿರ್ವಹಿಸುತ್ತಾರೆ ನೋಡಬೇಕು.

ಉಳಿದಂತೆ ವಿದೇಶಿ ವಸ್ತುಗಳಿಗೆ ಹೆಚ್ಚಿನ ತೆರಿಗೆ ವಿಧಿಸುವ ಕ್ರಮ ಅನಿರೀಕ್ಷಿತವಲ್ಲ. ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಹೋಗುವ ನಿರ್ಧಾರ ಹಿರಿಯಣ್ಣನಿಗೆ ಭೂಷಣವಲ್ಲ. ಈ ಕುರಿತ ತಮ್ಮ ನಿಲುವನ್ನು ಟ್ರಂಪ್ ಬದಲಿಸಿಕೊಂಡರೆ ಅಚ್ಚರಿಯಿಲ್ಲ. ಬ್ರಿಕ್ಸ್ ಒಕ್ಕೂಟದ ಭಾಗವಾಗಿರುವ ಭಾರತದ ಉತ್ಪನ್ನಗಳಿಗೆ ಸುಂಕ ಹೆಚ್ಚಿಸುವ ಮಾತನಾಡುವ ಟ್ರಂಪ್, ಮರುಕ್ಷಣದಲ್ಲೇ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ, ಪ್ರಧಾನಿ ಮೋದಿ ಅವರು ಫೆಬ್ರುವರಿಯಲ್ಲಿ ಅಮೆರಿಕಕ್ಕೆ ಭೇಟಿ ನೀಡುತ್ತಾರೆ ಎಂದಿದ್ದಾರೆ. ಇಂತಹ ಟ್ರಂಪ್ ಅವರೊಂದಿಗೆ ಭಾರತ ಹೇಗೆ ನಾಜೂಕಿನಿಂದ ವ್ಯವಹರಿಸಲಿದೆ ಎನ್ನುವುದೂ ಮುಂದಿನ ದಿನಗಳನ್ನು ಕುತೂಹಲಕಾರಿಯಾಗಿಸುತ್ತದೆ.

ಕೊನೆಯದಾಗಿ, ಟ್ರಂಪ್ ಅವರು ತಮ್ಮ ಮೇಲಾದ ಹತ್ಯೆಯ ಪ್ರಯತ್ನವನ್ನು ಉಲ್ಲೇಖಿಸಿ, ‘ಅಮೆರಿಕವನ್ನು ಉನ್ನತ ಸ್ಥಾನಕ್ಕೆ ಏರಿಸುವ ಸಲುವಾಗಿ ದೇವರು ನನ್ನನ್ನು ಉಳಿಸಿದ್ದಾನೆ’ ಎಂಬ ಮಾತನ್ನು ಆಡಿದ್ದಾರೆ. ವಯಸ್ಸಿನ ದೃಷ್ಟಿಯಿಂದಲೂ ಅಧ್ಯಕ್ಷ ಅವಧಿಯ ಮಿತಿಯ ಕಾರಣಕ್ಕೂ ಇದು ಟ್ರಂಪ್ ಅವರಿಗೆ ಸಿಕ್ಕಿರುವ ಕೊನೆಯ ಅವಕಾಶ. ಅಮೆರಿಕದ ಅಧ್ಯಕ್ಷರ ಸಾಲಿನಲ್ಲಿ ಸಾಧಕನಾಗಿ ನಿಲ್ಲಬೇಕು, ನೊಬೆಲ್ ಶಾಂತಿ ಪುರಸ್ಕಾರಕ್ಕೂ ಭಾಜನನಾಗಬೇಕು ಎಂಬ ಆಸೆ ಟ್ರಂಪ್ ಅವರಿಗೆ ಇದ್ದಂತಿದೆ. ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಎನ್ನುತ್ತಾ ಚುನಾವಣೆ ಗೆದ್ದ ಟ್ರಂಪ್, ಅಮೆರಿಕವನ್ನು ಮಹಾನ್ ರಾಷ್ಟ್ರವಾಗಿಸುವ ಉಮೇದಿನಲ್ಲಿ ಅವಸರದ ಹೆಜ್ಜೆಯಿರಿಸುತ್ತಿದ್ದಾರೆ. ಅವಸರದ ಹೆಜ್ಜೆ ಕೆಲವೊಮ್ಮೆ ಮುಗ್ಗರಿಸುವಂತೆ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.