ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೀಮೋಲ್ಲಂಘನ| ಅಮೆರಿಕ ಸಖ್ಯ, ಎಷ್ಟಿದ್ದರೆ ಸೌಖ್ಯ?

ಸ್ನೇಹಕ್ಕೆ ಕೈ ಚಾಚಿದಷ್ಟೇ ಸರಾಗವಾಗಿ ದೂರ ತಳ್ಳಲೂ ಗೊತ್ತಿದೆ ದೊಡ್ಡಣ್ಣನಿಗೆ!
Published 27 ಜೂನ್ 2023, 23:34 IST
Last Updated 27 ಜೂನ್ 2023, 23:34 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಮೆರಿಕದ ಅತಿಥಿಯಾಗಿ ಶ್ವೇತಭವನಕ್ಕೆ ಭೇಟಿಯಿತ್ತಾಗ ಅವರಿಗೆ ಕೆಂಪುಹಾಸಿನ ಸ್ವಾಗತ ದೊರೆಯಿತು. ಔತಣಕೂಟದಲ್ಲಿ ಮೋದಿ ಅವರ ಅಭಿರುಚಿಗೆ ತಕ್ಕಂತೆ ಆಹಾರವನ್ನು ಸಿದ್ಧಪಡಿಸಲಾಗಿತ್ತು. ಅವರನ್ನು ಓಲೈಸಲೋ ಎಂಬಂತೆ ಊಟದ ಮೇಜನ್ನು ಕೇಸರಿ ಹೂಗುಚ್ಛದಿಂದ ಅಲಂಕರಿಸಲಾಗಿತ್ತು. ವ್ಯಾಪಾರ, ಪಾಲುದಾರಿಕೆ ಮತ್ತು ರಕ್ಷಣಾ ಒಪ್ಪಂದಗಳ ಹೊರತಾಗಿ ಅಮೆರಿಕದ ಅಧ್ಯಕ್ಷರು ಬೇರಾವ ವಿಷಯವನ್ನೂ ಪ್ರಸ್ತಾಪಿಸಲಿಲ್ಲ. ಅಮೆರಿಕ ಮತ್ತು ಭಾರತದ ನಡುವಿನ ಬಾಂಧವ್ಯಕ್ಕೆ ಬೇರಾವ ಸಂಗತಿಯೂ ಧಕ್ಕೆ ತರಬಾರದು ಎಂದು ಜೋ ಬೈಡನ್ ಅವರು ನಿರ್ಧರಿಸಿದಂತಿತ್ತು.

ಸುಧೀಂದ್ರ ಬುಧ್ಯ
ಸುಧೀಂದ್ರ ಬುಧ್ಯ

ಅಧ್ಯಕ್ಷ ಬೈಡನ್ ಪ್ರಜಾತಂತ್ರ ರಾಷ್ಟ್ರಗಳ ನಡುವೆ ಸ್ನೇಹ, ಸಹಕಾರ ಮತ್ತು ಪಾಲುದಾರಿಕೆ ಏಕೆ ಮುಖ್ಯ ಎನ್ನುವುದನ್ನು ಪುನರುಚ್ಚರಿಸಿದರು. ಒಟ್ಟಾಗಿ ಮುಂದಡಿಯಿಡುವ ವಾಗ್ದಾನ ಮಾಡಿದರು.

ಸೋಜಿಗ ಎಂದರೆ, 1947ರಲ್ಲಿ ನಾವು ಸ್ವಾತಂತ್ರ್ಯ ಪಡೆದು ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದಾಗ, ಅಮೆರಿಕಕ್ಕೆ ಭಾರತದಂತಹ ಪ್ರಜಾತಂತ್ರ ರಾಷ್ಟ್ರದೊಂದಿಗೆ ಸ್ನೇಹ ಸಾಧಿಸಬೇಕು ಎಂಬ ಒತ್ತಾಸೆ ಇರಲಿಲ್ಲ. ಅಮೆರಿಕ ಮತ್ತು ಸೋವಿಯತ್ ನಡುವೆ ಶೀತಲ ಸಮರ ಆರಂಭವಾದಾಗ, ಭಾರತ ಅಲಿಪ್ತ ನೀತಿಗೆ ಅಂಟಿಕೊಂಡಿತು. ಅಮೆರಿಕದ ಅಧ್ಯಕ್ಷ ಟ್ರೂಮನ್, ಅಲಿಪ್ತ ದೇಶಗಳನ್ನು ಅನುಮಾನದಿಂದಲೇ ನೋಡುತ್ತಿದ್ದರು. ನೆಹರೂ ಒಬ್ಬ ಕಮ್ಯುನಿಸ್ಟ್‌ ಎಂಬುದು ಅವರ ಅಭಿಪ್ರಾಯವಾಗಿತ್ತು. ಭಾರತವನ್ನು ಆ ಕಾರಣದಿಂದಲೇ ಉಪೇಕ್ಷಿಸಿದರು. ಅಲಿಪ್ತ ಒಕ್ಕೂಟದ ನಾಯಕತ್ವವನ್ನು ನೆಹರೂ ವಹಿಸಿಕೊಂಡರಾದರೂ, ಸೋವಿಯತ್ ಬಗೆಗೆ ಅವರಿಗೆ ವಿಶೇಷ ಮಮಕಾರವಿತ್ತು. ಭಾರತವನ್ನು ‘ಸೋವಿಯತ್ ಏಜೆಂಟ್’ ಎಂಬಂತೆ ಅಮೆರಿಕ ನೋಡಲು ಆರಂಭಿಸಿತು.

ಐಸೆನ್ ಹೋವರ್ ಅವರ ಅವಧಿಯಲ್ಲಿ, ಅಮೆರಿಕದ ವಿದೇಶಾಂಗ ಸಚಿವ ಜಾನ್ ಡಲ್ಲಸ್ ‘ನೀವು ನಮ್ಮೊಂದಿಗಿದ್ದೀರಿ ಇಲ್ಲವೇ ನಮ್ಮ ವಿರುದ್ಧ ಇದ್ದೀರಿ’ ಎಂಬ ಗೆರೆ ಎಳೆದು ಅಮೆರಿಕದ ಸ್ನೇಹ ವಲಯವನ್ನು ಗುರುತಿಸಿದರು. ಆಗಷ್ಟೇ ಸ್ವತಂತ್ರಗೊಂಡು ಮಂದಗತಿಯ ಹೆಜ್ಜೆ ಇಡುತ್ತಿದ್ದ ಭಾರತಕ್ಕೆ ಸಂಪನ್ಮೂಲಗಳ ಅವಶ್ಯಕತೆ ಇತ್ತು. ಅಭಿವೃದ್ಧಿ ಹೊಂದಿದ ಪ್ರಬಲ ಪ್ರಜಾತಂತ್ರ ರಾಷ್ಟ್ರ ಅಮೆರಿಕ, ಅಭಿವೃದ್ಧಿ ಹೊಂದುತ್ತಿರುವ ಪ್ರಜಾತಂತ್ರ ರಾಷ್ಟ್ರದ ಜೊತೆ ನಿಲ್ಲಬೇಕು ಎಂದು ನೆಹರೂ ಬಯಸಿದ್ದರು. ಆದರೆ ಅಮೆರಿಕ ಪ್ರತಿಲಾಭ ನಿರೀಕ್ಷಿಸಿತು. ಆರ್ಥಿಕ ಸಹಾಯಕ್ಕೆ ಪ್ರತಿಯಾಗಿ ಅಮೆರಿಕದ ನಿಲುವುಗಳನ್ನು ವಿಶ್ವಸಂಸ್ಥೆಯಲ್ಲಿ ಭಾರತ ಬೆಂಬಲಿಸಬೇಕು ಎಂದಿತು. ಗೆಳೆತನ ಸಾಧ್ಯವಾಗಲಿಲ್ಲ.

ಇಂದಿರಾ ಗಾಂಧಿ ಅವರ ಆಡಳಿತದ ಅವಧಿಯಲ್ಲೂ ಭಾರತ ಮತ್ತು ಅಮೆರಿಕದ ನಡುವೆ ಸ್ನೇಹ ಚಿಗುರಲಿಲ್ಲ. 1966ರಲ್ಲಿ ನಾವು ಭೀಕರ ಬರಗಾಲ ಎದುರಿಸಿದಾಗ, ಇಂದಿರಾ ಅವರು ಅಮೆರಿಕದತ್ತ ಸಹಾಯಕ್ಕಾಗಿ ನೋಡಿದ್ದರು. ಅಮೆರಿಕದ ವಿಯೆಟ್ನಾಂ ನೀತಿಯನ್ನು ಇಂದಿರಾ ಟೀಕಿಸಿದ್ದರು ಎಂಬುದನ್ನೇ ನೆಪವಾಗಿ ಇಟ್ಟುಕೊಂಡ ಲಿಂಡನ್ ಜಾನ್ಸನ್, ನೆರವು ವಿಳಂಬವಾಗುವಂತೆ ನೋಡಿಕೊಂಡರು. ಆಗ ಭಾರತವು ಪ್ರಜಾಪ್ರಭುತ್ವ ರಾಷ್ಟ್ರ, ಸಂಕಷ್ಟದ ಸಮಯದಲ್ಲಿ ಅದರ ಜೊತೆಗೆ ನಾವು ನಿಲ್ಲಬೇಕು ಎಂದು ಅಮೆರಿಕಕ್ಕೆ ಅನ್ನಿಸಿರಲಿಲ್ಲ!

ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಕ್ಕಟ್ಟು ಏರ್ಪಟ್ಟಾಗಲೆಲ್ಲಾ, ಅರೆ ಪ್ರಜಾಪ್ರಭುತ್ವ ಮತ್ತು ಸೇನಾ ಸರ್ವಾಧಿಕಾರದ ನಡುವೆ ಜೀಕುತ್ತಿದ್ದ ಪಾಕಿಸ್ತಾನವೇ ಅಮೆರಿಕದ ಆಯ್ಕೆಯಾಯಿತು!

ಬಾಂಗ್ಲಾ ವಿಮೋಚನಾ ಯುದ್ಧದ ಸಮಯದಲ್ಲಿ ನಿಕ್ಸನ್ ಮತ್ತು ಕಿಸ್ಸಿಂಜರ್ ಜೋಡಿ ಭಾರತದ ಕುರಿತು ಅಪಶಬ್ದಗಳನ್ನು ನುಡಿದಿತ್ತು. ತಮ್ಮ ಹಿತಾಸಕ್ತಿಗೆ ಪೂರಕವಾಗಿ ಕಮ್ಯುನಿಸ್ಟ್‌ ಚೀನಾದ ಜೊತೆ ಸ್ನೇಹಕ್ಕೆ ಅವರು ಹಾತೊರೆದಿದ್ದರು!

90ರ ದಶಕದಲ್ಲಿ ಭಾರತದಲ್ಲಿ ಹೊಸ ಗಾಳಿ ಬೀಸಿತು. ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಮತ್ತು ಅಂದಿನ ಹಣಕಾಸು ಸಚಿವ ಮನಮೋಹನ್ ಸಿಂಗ್, ಆರ್ಥಿಕ ಬೆಳವಣಿಗೆಗೆ ವೇಗ ತಂದರು. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದಾಗಿ ಭಾರತೀಯರ ಕನಸುಗಳಿಗೆ ರೆಕ್ಕೆ ಬಂತು. ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಪೋಕ್ರಾನ್‌ನಲ್ಲಿ ನಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿದಾಗ ಮೊದಲಿಗೆ ಅಮೆರಿಕ ಸಿಟ್ಟಾಯಿತು. ದಿಗ್ಬಂಧನ ಹೇರಿತು. ಆದರೆ ನಂತರ ಬಿಲ್‌ ಕ್ಲಿಂಟನ್ ಭಾರತಕ್ಕೆ ಭೇಟಿಯಿತ್ತರು. ಸಂಬಂಧ ಚಿಗುರಲಾರಂಭಿಸಿತು. ಮನಮೋಹನ್ ಸಿಂಗ್ ಮತ್ತು ಜಾರ್ಜ್ ಬುಷ್ ನಾಗರಿಕ ಪರಮಾಣು ಒಪ್ಪಂದಕ್ಕೆ ಶ್ರೀಕಾರ ಬರೆದರು. ಮನಮೋಹನ್ ಸಿಂಗ್ ಅವರಿಗೆ ಒಬಾಮ ಆಡಳಿತ ಕೆಂಪುಹಾಸಿನ ಸ್ವಾಗತ ಕೋರಿ ಸತ್ಕರಿಸಿತು.

2014ರಲ್ಲಿ ಮೋದಿ ಅವರು ಪ್ರಧಾನಿಯಾದ ಮೇಲೆ ಅಮೆರಿಕ ಮತ್ತು ಭಾರತದ ನಡುವಿನ ಸ್ನೇಹಕ್ಕೆ ಹೊಸ ಅರ್ಥ ಬಂತು. ಪ್ರಬಲ ರಾಷ್ಟ್ರಗಳ ಜೊತೆ ಏಕರೀತಿಯ ಸಂಬಂಧ ಕಾಯ್ದುಕೊಳ್ಳುವ, ಆದರ್ಶಕ್ಕೆ ಜೋತು ಬೀಳದೆ ಭಾರತದ ಹಿತಾಸಕ್ತಿಯನ್ನಷ್ಟೇ ಗಮನದಲ್ಲಿ ಇಟ್ಟುಕೊಂಡು ಜಾಗತಿಕವಾಗಿ ಹೆಜ್ಜೆಯಿಡುವ ಪ್ರಕ್ರಿಯೆ ಆರಂಭವಾಯಿತು. 2016ರಲ್ಲಿ ಟ್ರಂಪ್ ಅವರು ಅಧ್ಯಕ್ಷರಾದ ಬಳಿಕವಂತೂ, ಮೋದಿ ಮತ್ತು ಟ್ರಂಪ್ ಅವರು ಎರಡು ದೇಶಗಳ ನಡುವಿನ ಸಖ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ದರು. ಅಮೆರಿಕದ ಪ್ರತಿಸ್ಪರ್ಧಿ ಚೀನಾವೇ ವಿನಾ ರಷ್ಯಾ ಅಲ್ಲ ಎಂಬುದು ಟ್ರಂಪ್ ಅವರಿಗೆ ಮನವರಿಕೆಯಾಗಿತ್ತು. ಇತ್ತ ಭಾರತದ ಗಡಿಯಲ್ಲಿ ಚೀನಾದ ಉಪಟಳ ತಡೆಯಲು ಅಮೆರಿಕದೊಂದಿಗೆ ಗುರುತಿಸಿಕೊಳ್ಳುವ ಜರೂರು ನಮಗಿತ್ತು. ಮೋದಿ ಮತ್ತು ಟ್ರಂಪ್ ಅವರ ಆಲಿಂಗನವು ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿತು. ಹೌಡಿ ಮೋದಿ ಸಮಾರಂಭ ಅಮೆರಿಕದಲ್ಲಿ ಕಳೆಕಟ್ಟಿತು.

ಅದಾಗ ಒಂದಿಷ್ಟು ಟೀಕೆಗಳೂ ಬಂದಿದ್ದವು. ಪ್ರಧಾನಿ ಮೋದಿ ಅಮೆರಿಕದ ರಾಜಕೀಯವನ್ನು ಪ್ರಭಾವಿಸುವ ನಡೆ ಪ್ರದರ್ಶಿಸುತ್ತಿದ್ದಾರೆ. ಒಂದೊಮ್ಮೆ ಟ್ರಂಪ್ ಅವರು ಸೋತು, ಡೆಮಾಕ್ರಟಿಕ್ ಪಕ್ಷ ಅಧಿಕಾರಕ್ಕೆ ಬಂದರೆ, ಭಾರತ ಮತ್ತು ಅಮೆರಿಕದ ಸಂಬಂಧಕ್ಕೆ ಧಕ್ಕೆ ಆಗಲಿದೆ ಎನ್ನಲಾಗಿತ್ತು. ಚುನಾವಣೆಯಲ್ಲಿ ಟ್ರಂಪ್ ಸೋತರು. ಬೈಡನ್ ಅಧ್ಯಕ್ಷರಾದರು. ಆದರೆ ಭಾರತ- ಅಮೆರಿಕದ ನಡುವಿನ ಸಂಬಂಧ ಕೆಡಲಿಲ್ಲ. ಅಸಲಿಗೆ ಯಾವುದೇ ಎರಡು ದೇಶಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದು ಅಥವಾ ಟೊಳ್ಳಾಗಿಸುವುದು ಆಯಾ ಸಂದರ್ಭ ಮತ್ತು ಹಿತಾಸಕ್ತಿಗಳೇ ವಿನಾ ಬೇರೇನೂ ಅಲ್ಲ.

ಹಾಗಾಗಿಯೇ ನಾವು ರಷ್ಯಾದಿಂದ ಎಸ್- 400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿದರೂ, ಉಕ್ರೇನ್ ಯುದ್ಧದ ವಿಷಯದಲ್ಲಿ ಅಮೆರಿಕದ ಒತ್ತಡಕ್ಕೆ ಮಣಿಯದಿದ್ದರೂ, ರಷ್ಯಾದ ಜೊತೆ ವಾಣಿಜ್ಯಿಕ ವ್ಯವಹಾರವನ್ನು ಮುಂದುವರಿಸಿದರೂ ಅಮೆರಿಕಕ್ಕೆ ಸಿಟ್ಟು ಬರಲಿಲ್ಲ. ಕಾರಣ, ಚೀನಾ ಮತ್ತು ರಷ್ಯಾವನ್ನು ಎದುರಿಸಲು, ಇಂಡೊ ಪೆಸಿಫಿಕ್ ಪ್ರಾಂತ್ಯದಲ್ಲಿ ಹಿತಾಸಕ್ತಿ ಕಾಯ್ದುಕೊಳ್ಳಲು, ಬೆಳೆಯುತ್ತಿರುವ ಆರ್ಥಿಕತೆಯಾದ, ಸೇನೆಯ ದೃಷ್ಟಿಯಿಂದಲೂ ಬಲಿಷ್ಠವಾದ ಭಾರತದೊಂದಿಗಿನ ಸ್ನೇಹ ಅಗತ್ಯ ಎಂಬುದು ಅಮೆರಿಕಕ್ಕೆ ತಿಳಿದಿತ್ತು. ಹಾಗಾಗಿ ಮೋದಿ ಅವರಿಗೆ ಕೆಂಪುಹಾಸಿನ ಸ್ವಾಗತ ಕೋರಲು ಬೈಡನ್ ಬಯಸಿದರು.

ಹಾಗಾದರೆ ಭಾರತ ಈ ಸಂದರ್ಭವನ್ನು ಹೇಗೆ ನೋಡಬೇಕು? ಭಾರತದ ಮಟ್ಟಿಗಂತೂ ನಾವು ಆರ್ಥಿಕವಾಗಿ ಬೆಳೆಯಲು, ಆತ್ಮನಿರ್ಭರವಾಗಲು ಇದು ಸುಸಂದರ್ಭ. ಭಾರತ ಮತ್ತು ಅಮೆರಿಕದ ನಡುವೆ ರಕ್ಷಣೆ, ಬಾಹ್ಯಾಕಾಶ, ಸೆಮಿಕಂಡಕ್ಟರ್ ವಲಯಕ್ಕೆ ಸಂಬಂಧಿಸಿದಂತೆ ಪ್ರಮುಖ ಒಪ್ಪಂದಗಳಾಗಿವೆ. ಎಫ್ 414 ಎಂಜಿನ್ ತಂತ್ರಜ್ಞಾನದ ವರ್ಗಾವಣೆ ನಮ್ಮನ್ನು ಇನ್ನಷ್ಟು ಸಬಲಗೊಳಿಸಲಿದೆ. ಚೀನಾ ಕೇಂದ್ರಿತ ಪೂರೈಕೆ ಜಾಲಕ್ಕೆ ಪರ್ಯಾಯ ಹುಡುಕಲು ಅಮೆರಿಕವು ಭಾರತದತ್ತ ನೋಡುತ್ತಿದೆ. ಈ ಅವಕಾಶವನ್ನು ಭಾರತ ತ್ವರಿತ ಅನುಷ್ಠಾನಗಳ ಮೂಲಕ ಎರಡೂ ಕೈಗಳಿಂದ ಬಾಚಿಕೊಳ್ಳಬೇಕಿದೆ.

ಆದರೆ ಒಂದು ಅಂಶ ನೆನಪಿರಬೇಕು. ಅಮೆರಿಕ ತನ್ನನ್ನು ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆದುಕೊಂಡರೂ, ಮೌಲ್ಯಗಳ ಬಗ್ಗೆ ಮಾತನಾಡಿದರೂ, ಅದು ತನ್ನ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡೇ ಪ್ರತಿ ಹೆಜ್ಜೆ ಇಡುತ್ತದೆ. ಸ್ನೇಹಕ್ಕೆ ಕೈ ಚಾಚಿದಷ್ಟೇ ಸರಾಗವಾಗಿ ಸಂದರ್ಭ ಬದಲಾದಾಗ ದೂರ ತಳ್ಳುತ್ತದೆ. ವ್ಯಾವಹಾರಿಕವಾಗಿ ಮತ್ತು ಶತ್ರು ರಾಷ್ಟ್ರಗಳಿಗೆ ಸಂದೇಶ ರವಾನಿಸಲು ಅಮೆರಿಕದ ಜೊತೆ ನಾವು ಎಷ್ಟೇ ಗುರುತಿಸಿಕೊಂಡರೂ, ನ್ಯಾಟೊ ಪ್ಲಸ್ ಅಥವಾ ಇನ್ನಾವುದೇ ಬಗೆಯ ಸೇನಾ ಒಕ್ಕೂಟದ ಭಾಗವಾಗಿ ತನ್ನದಲ್ಲದ ಯುದ್ಧದಲ್ಲಿ ಭಾರತ ಭಾಗಿಯಾಗುವಂತೆ ಆಗಬಾರದು. ಆ ಎಚ್ಚರವಂತೂ ನಮ್ಮಲ್ಲಿ ಇರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT