ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಎಸ್‌. ಪಿ. ಬಾಲಸುಬ್ರಹ್ಮಣ್ಯಂ ಅಮರ ಗಾಯನ

Last Updated 26 ಸೆಪ್ಟೆಂಬರ್ 2020, 5:01 IST
ಅಕ್ಷರ ಗಾತ್ರ

ಸಹೃದಯತೆ, ಕೃತಜ್ಞತೆ ಮತ್ತು ರಸಜ್ಞತೆಗಳಿಗೆ ಶರೀರರೂಪ ಒದಗಿ, ಅದಕ್ಕೆ ಶಾರೀರವೂ ಸಿದ್ಧಿಸಿ ಎಸ್‌. ಪಿ. ಬಾಲಸುಬ್ರಹ್ಮಣ್ಯಂ ಎಂಬ ಗಾಯನಮೂರ್ತಿ ನಮ್ಮ ನಡುವೆ ಪ್ರಕಟವಾಯಿತೆನಿಸುತ್ತದೆ.

ಕಲಾಸೃಷ್ಟಿಯ ರಸೋತ್ಕರ್ಷಕಾಲದಲ್ಲಿ ರಾಗದ್ವೇಷಗಳಿಂದ ಮುಕ್ತವಾದ ಶುದ್ಧಚಿತ್ತಕಲಾವಿದನಲ್ಲಿ ಜಾಗರಿತವಾಗಿರುತ್ತದೆ ಎಂಬ ಒಕ್ಕಣೆಯುಂಟು. ಆದರೆ ಈ ಸ್ಥಿತಿ ಕ್ಷಣಿಕವಾದುದು; ಕಲಾನಿರ್ಮಾಣದ ರಸಸಮಯ ಮುಗಿದ ಕೂಡಲೇ ಕಲಾವಿದ ಮತ್ತೆ ತನ್ನ ನಿತ್ಯಜಗತ್ತಿಗೆ ಹಿಂದಿರುಗುತ್ತಾನೆ; ಅವನ ರಾಗ–ದ್ವೇಷಗಳು ಅವನ ತಲೆಯನ್ನು ಏರುತ್ತವೆ; ‘ಅವನೇ ಇವನಾ?’ ಎಂದು ಬೆರಗಾಗುವಷ್ಟು ಈಗ ಕಲೆಗೂ ಕಲಾವಿದನಿಗೂ ಬಿರುಕು ಕಾಣಿಸಿಕೊಂಡಿರುತ್ತದೆ. ಅವನ ಕಲೆ ಮಾತ್ರ ಇರಲಿ, ಅವನು ಬೇಡ – ಎಂಬ ನಿರ್ಧಾರಕ್ಕೆ ನಾವು ಬರಬೇಕಾದಂಥ ವಾಸ್ತವದ ದರ್ಶನ ನಮಗೆ ಆಗಿರುತ್ತದೆ. ಆದರೆ ಕೆಲವೇ ಕೆಲವರಲ್ಲಿ ಮಾತ್ರ ಕಲೆಯ ಎತ್ತರ ಮತ್ತು ವ್ಯಕ್ತಿತ್ವದ ಘನತೆ – ಎರಡೂ ತಾದಾತ್ಮ್ಯವನ್ನು ಸಾಧಿಸಿರುತ್ತದೆ. ಕಲಾನಿರ್ಮಾಣದ ಭಾವಲೋಕದಲ್ಲೂ ವ್ಯಕ್ತಿನಿರ್ಮಾಣದ ಭವಲೋಕದಲ್ಲೂ ಅವರು ಒಂದೇ ಸ್ಥಾಯಿಭಾವದಲ್ಲಿರುತ್ತಾರೆ; ಸಹೃದಯತೆಯೇ ಅವರ ಕಲೆಗೂ ಜೀವನಕ್ಕೂ ಆಧಾರಶ್ರುತಿಯಾಗಿರುತ್ತದೆ; ಕೃತಜ್ಞತೆಯೇ ಇವೆರಡರ ತಾಳಗಳಾಗಿರುತ್ತವೆ. ರಸನಿಷ್ಠೆಯೊಂದೇ ಭಾವಕ್ಕೂ ಜೀವಕ್ಕೂ ಭೂಮಿಕೆಯಾಗಿರುತ್ತದೆ. ಇಂಥದೊಂದು ಶಿವಮಯವೂ ಕಲಾಮಯವೂ ಆದ ಸಾರ್ಥಕ ಜೀವನವನ್ನು ನಡೆಸಿದವರು ಎಸ್‌. ಪಿ. ಬಾಲಸುಬ್ರಹ್ಮಣ್ಯಂ.

‘ಎಸ್‌ಪಿಬಿ’ ಎಂದೂ ‘ಬಾಲು’ ಎಂದೂ ಆತ್ಮೀಯ ಕರೆಗೆ ಒಗ್ಗಿದ ಎಸ್‌. ಪಿ. ಬಾಲಸುಬ್ರಹ್ಮಣ್ಯಂ ತೆಲುಗು, ಕನ್ನಡ, ತಮಿಳು, ಹಿಂದಿ ಚಲನಚಿತ್ರಗಳ ಹಿನ್ನೆಲೆ ಗಾಯಕರಾಗಿ ಮಾತ್ರವೇ ಅಲ್ಲ, ಇಡಿಯ ಭಾರತೀಯ ಚಿತ್ರರಂಗ, ಅಷ್ಟೇಕೆ ಜಗತ್ತಿನ ಚಲನಚಿತ್ರರಂಗದ ಇತಿಹಾಸದಲ್ಲಿಯೇ ಅಪೂರ್ವ ಸಾಧನೆಯನ್ನು ಮಾಡಿದ ಮೇರುಸದೃಶ ವ್ಯಕ್ತಿ. ಸುಮಾರು ಹದಿನಾರು ಭಾಷೆಗಳಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವುದು ಕಡಿಮೆಯ ಸಾಧನೆಯಲ್ಲ; ನೂರಾರು ಪ್ರಶಸ್ತಿಗಳ ಗರಿಯೂ ಅವರ ಮುಡಿಯನ್ನು ಏರಿದ್ದವು; ಹಲವರು ನಟರು ಸ್ಟಾರ್‌ಗಳಾಗಿಯೂ, ಸ್ಟಾರ್‌ಗಳು ಸೂಪರ್‌ ಸ್ಟಾರ್‌ಗಳಾಗಿಯೂ ನೆಲೆಗೊಳ್ಳಲು ಅವರ ಹಿನ್ನೆಲೆಗಾಯನ ನೀಡಿರುವ ಕೊಡುಗೆಯನ್ನು ಯಾವ ಸಹೃದಯನೂ ನಿರಾಕರಿಸಲಾರ. ಗಾಯನದಲ್ಲಿಯೇ ಅಭಿನಯವನ್ನೂ ‘ಕೇಳಿಸುತ್ತಿದ್ದ‘ ಅಪೂರ್ವ ಭಾವಶ್ರೀಮಂತಿಕೆಯ ಅವರ ಗಾನಶೈಲಿ ಹಿನ್ನೆಲೆಗಾಯನದ ಪ್ರಕಾರಕ್ಕೆ ವಿಶ್ವಕೋಶ ಎಂದರೂ ತಪ್ಪಾಗಲಾರದು. ಅವರ ಗಾಯನಕ್ಕೆ ನಟಿಸುವುದು ಕೂಡ ನಟರಿಗೆ ಸವಾಲಿನ ಕಾರ್ಯವೇ ಆಗುತ್ತಿತ್ತು, ದಿಟ; ಆದರೆ ನಟಿಸದಿದ್ದರೂ ಅವರ ಗಾಯನವೇ ನಟನ ಪಾಲಿನ ಕೆಲಸವನ್ನು ಬಹುಪಾಲು ನೆರವೇರಿಸಿಬಿಡುತ್ತಿತ್ತೆನ್ನಿ! ಎಷ್ಟೋ ಹಾಡುಗಳಲ್ಲಂತೂ ಅವರ ಗಾಯನವೇ ನಿಜವಾದ ನಾಯಕನಾಗಿ ಮಿಂಚಿರುವುದು ಸ್ಪಷ್ಟ. ನಟನೆ, ಸಂಗೀತನಿರ್ದೇಶನ, ಕಂಠದಾನ – ಈ ಕ್ಷೇತ್ರಗಳಲ್ಲೂ ಅವರ ಸಾಧನೆಯೇನೂ ಕಡಿಮೆಯಿಲ್ಲ.

ಇಷ್ಟೆಲ್ಲ ಸಾಧನೆಗಳಿಗಿಂತ ಇನ್ನೂ ಹೆಚ್ಚಿನ ತೂಕವನ್ನು ಗಳಿಸಿದ್ದುದು ಅವರ ವ್ಯಕ್ತಿತ್ವ ಸಾಧಿಸಿದ್ದ ಘನತೆ; ಪರಿಪಾಕ. ಶಿಖರವನ್ನು ಏರಿದವರು ಜಗತ್ತಿನ ನೋಟದಲ್ಲಿ ಬೇಗನೇ ಕುಬ್ಜರಾಗಿಬಿಡುವ ಅಪಾಯವುಂಟು; ಆದರೆ ಎಸ್‌ಪಿಬಿ ಮಾತ್ರ ಶಿಖರದಲ್ಲಿ ನಿಂತಿದ್ದರೂ ಕಲಾಜಗತ್ತಿಗೆ ಅವರು ಭವ್ಯಮೂರ್ತಿಯಾಗಿಯೇ ಉಳಿದುಕೊಂಡರು; ದಿನೇ ದಿನೇ ಇನ್ನಷ್ಟು ಎತ್ತರವನ್ನು ಸಾಧಿಸುತ್ತ, ಅವರ ಹೃದಯದಲ್ಲಿದ್ದ ರಸಕಳಶದ ಗಾನಾಮೃತದ ಮೂಲಕ ಸಾವಿರ ಸಾವಿರ ಜನರಿಗೆ ಕಲಾನಂದದ ಅನುಭೂತಿಯನ್ನು ಒದಗಿಸಿದರು. ಅವರು ಜೀವನದಲ್ಲಿ ಸಾಗಿಬಂದ ದಾರಿಯನ್ನೂ ಮರೆಯಲಿಲ್ಲ; ಅವರನ್ನು ಕೈಹಿಡಿದು ನಡೆಸಿದವರನ್ನೂ ಮರೆಯಲಿಲ್ಲ. ಇಷ್ಟು ಮಾತ್ರವಲ್ಲ, ಕಲಾಯಾತ್ರೆಗೆ ಹೊರಟ ಎಷ್ಟೋ ಕಿರಿಯರಿಗೆ ಅವರು ದಾರಿಬುತ್ತಿಯಾದರು, ನೆರಳಾಗಿ ಆಶ್ರಯ ಕೊಟ್ಟರು. ಬೃಹತ್‌ ವೃಕ್ಷದ ನೆರಳಿನಲ್ಲಿ ಹುಲ್ಲು ಕೂಡ ಬೆಳೆಯದು ಎಂಬ ಲೋಕವಿದ್ಯಮಾನಕ್ಕೆ ವಿರುದ್ಧವಾಗಿ ಅವರು ಎಷ್ಟೋ ಗಿಡ–ಮರಗಳನ್ನು ಬೆಳೆಸಿದರು; ‘ಎಸ್‌ಪಿಬಿ’ ಎಂಬ ಈ ಕಲಾವಿದ್ಯಾಲಯದಲ್ಲಿ ಬೆಳೆದ ಹೂವು–ಹಣ್ಣುಗಳು ಈಗ ಚಿತ್ರರಂಗದ ನಿತ್ಯಕಲ್ಯಾಣೋತ್ಸವದ ಗಾನಯಜ್ಞದಲ್ಲಿ ಸಮರ್ಪಿತವಾಗುತ್ತಿವೆ.

ನಮಗೆ ಅನ್ನ ನೀಡಿದವರನ್ನು, ಅಕ್ಷರ ಕಲಿಸಿದವರನ್ನು, ಆಶ್ರಯ ಒದಗಿಸಿದವರನ್ನು ಜೀವನದಲ್ಲಿ ನಾವು ಒಮ್ಮೆ ನೆನೆದೇವು, ಎರಡು ಬಾರಿ ನೆನೆದೇವು, ಮೂರನೆಯ ಬಾರಿಯೂ ನೆನೆದೇವು; ಆದರೆ ದಿನಕ್ಕೆ ನೂರು ಬಾರಿ ಎಂಬಂತೆ, ಅವರ ಏಳಿಗೆಗೆ ರವೆಯಷ್ಟೆ ಕಾರಣವಾದವರನ್ನೂ ಪ್ರತಿ ಮಾತಿನ ಓಂಕಾರವಾಗಿ, ಪ್ರತಿ ಹಾಡಿನ ಪಲ್ಲವಿಯಾಗಿ, ಪ್ರತಿ ನಡೆಯ ಬಲವಾಗಿ ಸ್ಮರಿಸಿಕೊಳ್ಳುತ್ತಲೇ ಸಾಧನೆಯ ಪಥದಲ್ಲಿ ಸಾಗುತ್ತಿದ್ದ ಎಸ್‌ಪಿಬಿ ಮಾತ್ರ, ಅವರ ವಿಜಯಯಾತ್ರೆಯ ಎಲ್ಲ ಕೊಡುಗೆಗಳನ್ನೂ ಕೃತಜ್ಞತೆಯ ಪತಾಕೆಯ ಮುಂದೆ ಕೈಮುಗಿದು ಅರ್ಪಿಸುತ್ತ ಧನ್ಯತೆಯನ್ನು ಪಡೆಯುತ್ತಿದ್ದರು. ಅವರಲ್ಲಿ ಕಾಣುತ್ತಿದ್ದುದು ಬರಿಯ ಕೃತಜ್ಞತೆಯ ಮಾತುಗಳು ಅಷ್ಟೆ ಅಲ್ಲ; ಅದು ಆ ಭಾವಸ್ಥಿತಿಯ ಪರಾಕಾಷ್ಠೆ. ಎಸ್‌. ಜಾನಕಿ, ಎಂ. ಎಸ್‌. ವಿಶ್ವನಾಥನ್‌, ಇಳೆಯರಾಜ, ಭಾರತೀರಾಜ, ಕೆ. ಬಾಲಚಂದರ್‌, ವಿಷ್ಣುವರ್ಧನ್‌ – ಹೀಗೆ ನೂರಾರು ಮಂದಿಯನ್ನು ಕೃತಜ್ಞತೆಯಿಂದ ಅವರು ಸ್ಮರಿಸಿಕೊಂಡಿರುವುದನ್ನು ಲೆಕ್ಕ ಹಾಕಿದರೆ ಪ್ರಾಯಶಃ ಅದು ಅವರ ಒಟ್ಟು ಉಸಿರಾಟದ ಉಚ್ಛ್ವಾಸ–ನಿಃಶ್ವಾಸಗಳ ಸಂಖ್ಯೆಯನ್ನೂ ಮೀರಿಸೀತು!

ಇಲ್ಲಿ ಎರಡು ನಿದರ್ಶನಗಳನ್ನು ಸ್ಮರಿಸಿಕೊಳ್ಳಬಹುದು.

ನಮ್ಮಲ್ಲೊಂದು ರೂಢಿಯಿದೆ. ನಾವು ಯಾವ ವ್ರತವನ್ನು ಮಾಡುತ್ತಿರುತ್ತೇವೆಯೋ ಅದನ್ನೇ ವ್ರತಗಳಲ್ಲಿ ಶ್ರೇಷ್ಠ ಎಂದು ಹೇಳುವುದು: ಗಣಪತಿಯ ವ್ರತ ಮಾಡುತ್ತಿದ್ದರೆ ಅದೇ ಶ್ರೇಷ್ಢ, ಸತ್ಯನಾರಾಯಣನ ವ್ರತವಾಗಿದ್ದರೆ ಅದೇ ಶ್ರೇಷ್ಠ ಎಂಬಂತೆ! ಇಂಥದೇ ಅನುಕೂಲಸಿಂಧುಬುದ್ಧಿ ಕಲಾಜಗತ್ತಿನಲ್ಲೂ ಸಾಮಾನ್ಯವಾಗಿರುತ್ತದೆ; ಕರ್ನಾಟಕದಲ್ಲಿ ಕಾರ್ಯಕ್ರಮಕ್ಕೆ ಬಂದರೆ ಇಲ್ಲಿಯವರೇ ಇಂದ್ರರು ಚಂದ್ರರು ದೇವೇಂದ್ರರು; ಕಾಶ್ಮೀರಕ್ಕೆ ಹೋದರೇ ಅಲ್ಲಿಯವರೇ ಎಲ್ಲವೂ, ಹೀಗೆ. ಆದರೆ ಎಸ್‌ಪಿಬಿ ಅವರು ಮಾತ್ರ ಕನ್ನಡಿಗರ ಸಹೃದಯತೆಯನ್ನು ಜಪದಂತೆ ಎಲ್ಲಿ ಹೋದರೂ ಕೊಂಡಾಟ ಮಾಡುತ್ತಿದ್ದರು; ಅದು ಬೆಂಗಳೂರಿನಲ್ಲಾಗಲೀ ಚೆನ್ನೈನಲ್ಲಾಗಲೀ ಹೈದರಾಬಾದ್‌ನಲ್ಲಾಗಲೀ – ಅವರ ಈ ಕೃತಜ್ಞತೆಯ ಭಾವಗಾಯನದಲ್ಲಿ ರಾಗ–ತಾಳಗಳು ತಪ್ಪುತ್ತಲೇ ಇರಲಿಲ್ಲ; ’ನನಗೆ ಇನ್ನೊಂದು ಜನ್ಮ ಇದ್ದರೆ ನಾನು ಕರ್ನಾಟಕದಲ್ಲಿಯೇ ಹುಟ್ಟುವೆ‘ ಎಂಬ ಸಂಕಲ್ಪಮಂತ್ರವನ್ನು ಅವರು ಅಸ್ತುದೇವತೆಗಳು ‘ತಥಾಸ್ತು’ ಎನ್ನುವವರೆಗೂ ಹೇಳುವುದನ್ನು ಬಿಡಬಾರದು ಎಂಬಂಥ ವ್ರತಬುದ್ಧಿಯಿಂದ ಎಷ್ಟು ಸಲ ಅದನ್ನು ಉದ್ಗಾರಿಸಿದ್ದಾರೋ!

ಇನ್ನೊಂದು ನಿದರ್ಶನ: ಕೆ.ಜೆ. ಜೇಸುದಾಸ್‌ ಅವರಿಗೆ ಎಸ್‌ಪಿಬಿ ದಂಪತಿಗಳು ಸಲ್ಲಿಸಿದ ಪಾದಪೂಜೆ. ಎಸ್‌ಪಿಬಿ ಅವರು ತಾವು ಹಲವರಿಂದ ಕಲಿತ ಸಂಗೀತವಿದ್ಯೆಗೆ ಗುರುದಕ್ಷಿಣೆಯೋ ಋಷಿಋಣದ ಸಂದಾಯವೋ ಎಂಬಂತೆ ಭಕ್ತಿಯಿಂದ ಜೇಸುದಾಸ್‌ ಅವರ ಪಾದವನ್ನು ತೊಳೆದು, ಪೂಜೆ ಸಲ್ಲಿಸಿದ್ದು ನಮ್ಮ ಕಾಲಧರ್ಮಕ್ಕಂತೂ ವಿಸ್ಮಯದಲ್ಲಿ ವಿಸ್ಮಯ ಎನಿಸುವುದು ಸಹಜ.

ಹ್ಞಾ! ಇಲ್ಲಿ ಇನ್ನೊಂದು ವಿಷಯ: ಮಹಮ್ಮದ್‌ ರಫಿ. ಎಸ್‌ಪಿಬಿಗೆ ಅತ್ಯಂತ ಇಷ್ಟವಾದ, ಅಲ್ಲ ಪ್ರಾಣಸಮನಾದ ಹಿನ್ನೆಲೆ ಗಾಯಕರೆಂದರೆ ರಫಿ; ಅವರನ್ನು ಕೇವಲ ಗಾಯಕ ಎಂದರೆ ಎಸ್‌ಪಿಬಿ ದೃಷ್ಟಿಯಲ್ಲಿ ತಪ್ಪಾಗುತ್ತದೆ; ಅವರ ಪಾಲಿಗೆ ಸಾಕ್ಷಾತ್‌ ದೇವರು! ಎಷ್ಟೊಂದು ಸಂದರ್ಭಗಳಲ್ಲಿ ಅವರ ಗಾಯನಶೈಲಿಯನ್ನು ಹೊಗಳಿದ್ದಾರೆ! ಹೊಗಳಿ ಭಾವುಕರಾಗಿದ್ದಾರೆ!! ಆದರೆ ಆಶ್ಚರ್ಯ ಎಂದರೆ ಒಮ್ಮೆಯೂ ಅವರೊಂದಿಗೆ ಇವರು ಮಾತನಾಡಿಲ್ಲ, ಎಂದೋ ಒಮ್ಮೆ ಒಂದು ಕ್ಷಣವಷ್ಟೇ ಅವರನ್ನು ನೋಡಿದ್ದು; ಆದರೆ ಅವರೇ ಇವರ ಪಾಲಿಗೆ ಗಾಯನಗುರು, ಗಾನದೇವತೆ! ಯಾರಲ್ಲಿಯೇ ಗುಣ ಇರಲಿ, ಅವರನ್ನು ಕೊಂಡಾಡಲು ಯಾವುದೇ ಸಂಕೋಚವಿಲ್ಲ, ಆರಾಧಿಸಲು ಯಾವುದೇ ಬಿಂಕ ಇಲ್ಲ, ಪೂಜಿಸಲು ಯಾವುದೇ ಅಡ್ಡಿ–ಆತಂಕಗಳಿಲ್ಲ. ಎಸ್‌ಪಿಬಿಯಂಥ ವಿರಾಭಿಮಾನಿಯನ್ನು ಪಡೆದ ರಫಿ ಅವರು ಎಷ್ಟು ಪುಣ್ಯವಂತರಲ್ಲವೆ?

ಎಸ್‌ಪಿಬಿ ಅವರು ನಡೆಸಿಕೊಡುತ್ತಿದ್ದ ರಿಯಾಲಿಟಿ ಶೋಗಳು ಮತ್ತು ಟಿವಿ ಶೋಗಳು ಅತ್ಯಂತ ಜನಪ್ರಿಯ. ‘ಪಾಡುತಾ ತೀಯಗಾ’ ಎಷ್ಟೊಂದು ಹಿನ್ನೆಲೆ ಗಾಯಕರನ್ನು ಚಿತ್ರರಂಗಕ್ಕೆ ನೀಡಿದೆ! ಹೀಗೆಯೇ ‘ಸ್ವರಾಭಿಷೇಕಂ’ ಕಾರ್ಯಕ್ರಮದ ಮೂಲಕ ತೆಲುಗು ಸಿನಿಮಾರಂಗದ ಸಂಗೀತದ ಇತಿಹಾಸವನ್ನೇ ಅನಾವರಣಗೊಳಿಸುತ್ತಿದ್ದರು. ನನ್ನಂಥ ಸಾವಿರಾರು ಜನರಿಗೆ ಈ ಟಿವಿಶೋಗಳು ತ್ರಿವೇಣಿಸಂಗಮದಂತೆ; ರಾಗ–ಭಾವ–ತಾಳಗಳ ಅಮೃತವರ್ಷಿಣಿಯ ಜೊತೆಗೆ ಸಂಗೀತಪಾಠ, ಅದರ ಜೊತೆಗೆ ಜೀವನಪಾಠವೂ ಒದಗುತ್ತಿತ್ತು. ಅವರ ಲೋಕಸಂಗ್ರಹಬುದ್ಧಿ, ಸಾಮಾಜಿಕ ಕಾಳಜಿ, ಸಹೃದಯತೆ, ಕೃತಜ್ಞತೆ, ವಿನಯವಂತಿಕೆ, ಧೀಮಂತಿಕೆ – ಹೀಗೆ ಅವರ ಗುಣಸಾಗರದಿಂದ ಆರ್ದ್ರಗೊಂಡ ಕಂಠಶ್ರೀಯಿಂದ ಹಲವರ ಭಾವ–ಬುದ್ಧಿಗಳು ಸಂಸ್ಕಾರಗೊಂಡು ಶ್ರೀಮಂತವಾಗಿರುವುದು ಸುಳ್ಳಲ್ಲ. ಅವರು ನಿರ್ವಹಿಸುತ್ತಿದ್ದ ಸಾಂಸ್ಕೃತಿಕ ಹೊಣೆಗಾರಿಕೆಯನ್ನು, ಅದರಲ್ಲೂ ಸಿನಿಮಾಕ್ಷೇತ್ರದಲ್ಲಿ, ನಿರ್ವಹಿಸಬಲ್ಲ ಇನ್ನೊಬ್ಬ ಕಲಾಚಾರ್ಯ ನಮ್ಮ ನಡುವೆ ಈಗ ಯಾರಾದರೂ ಇದ್ದಾರೆಯೆ?

ಎಸ್‌ಪಿಬಿ ಅವರು ತಮ್ಮ ಸಂಪರ್ಕಕ್ಕೆ ಬಂದ ಹೆಚ್ಚುಕಡಿಮೆ ಎಲ್ಲರನ್ನೂ ಯಾವುದೋ ಒಂದು ಬಾಂಧವ್ಯದ ಸೂತ್ರದ ಮೂಲಕವೇ ವ್ಯವಹರಿಸುತ್ತಿದ್ದರು; ಅವರ ಪಾಲಿಗೆ ಸಂಗೀತಕ್ಷೇತ್ರ ಎನ್ನುವುದು ಒಂದು ಕುಟುಂಬ. ಹೀಗಾಗಿ ಈ ಕ್ಷೇತ್ರದಲ್ಲಿ ಅವರಿಗೆ ಹಲವರು ತಂದೆಸಮಾನರು, ಹಲವರು ಅಣ್ಣಂದಿರು–ತಮ್ಮಂದಿರು, ಗುರುಗಳು, ಸಹೋದರಿಯರು. ಈ ಆತ್ಮೀಯತೆ ಕೇವಲ ಕಾರ್ಯಕ್ರಮಗಳ ಸಂದರ್ಭದಲ್ಲಿ ವೇದಿಕೆಯ ಮೇಲಷ್ಟೆ ತೋರಿಕೊಳ್ಳುತ್ತಿದ್ದ ತುಟಿಯಂಚಿನ ಉದ್ಗಾರಗಳಾಗಿರಲಿಲ್ಲ; ಅದು ಅವರ ಭಾವಕೋಶದ ಸಹಜವಾದ ಮಿಡಿತವಾಗಿತ್ತು. ಹೀಗಾಗಿಯೇ ಪ್ರತಿಯೊಬ್ಬರ ಸಾಧನೆಯ ಬಗ್ಗೆ ಅವರ ಮನಸ್ಸಿನಲ್ಲಿ ಕುಣಿತವೂ ಇರುತ್ತಿತ್ತು; ಬೆಳವಣಿಗೆಯ ಬಗ್ಗೆ ತುಡಿತವೂ ಇರುತ್ತಿತ್ತು. ಅವರಲ್ಲಿ ಈ ಪ್ರಾಮಾಣಿಕತೆ ಇದ್ದದ್ದರಿಂದಲೇ ಅವರು ಎಲ್ಲರಿಗೂ ಪ್ರೀತಿಯನ್ನು ಹಂಚುವುದರ ಜೊತೆಗೆ ಸಲಹೆ–ಸೂಚನೆ–ಎಚ್ಚರಿಕೆಗಳನ್ನೂ ನೇರವಾಗಿಯೇ ಕೊಡಬಲ್ಲ ಧೀಮಂತಿಕೆಯನ್ನೂ ದಕ್ಕಿಸಿಕೊಂಡಿದ್ದರು. ಉದಾಹರಣೆಗೆ ಹೇಳುವುದಾದರೆ, ಚಿರಂಜೀವಿಯಂಥ ಸ್ಟಾರ್‌ ನಟನಿಗೂ ಅವರು ಹಲವು ಸಂದರ್ಭಗಳಲ್ಲಿ ಹೇಳಿದ್ದರು: ’ನೀನೊಬ್ಬ ಒಳ್ಳೆಯ ನಟ. ನಿನ್ನ ಸಾಮರ್ಥ್ಯಕ್ಕೆ ಸರಿಹೊಂದುವ ಕಲಾತ್ಮಕ ಚಿತ್ರಗಳನ್ನು ಆರಿಸಿಕೊ. ಎಷ್ಟು ಕಾಲ ಅಭಿಮಾನಿಗಳಿಗಾಗಿಯೇ ಚಿತ್ರ ಮಾಡುವೆ?’

ಎಸ್‌ಪಿಬಿ ಅವರ ಹಿನ್ನೆಲೆ ಗಾಯನದ ಬಗ್ಗೆ ಏನು ಹೇಳಲಾದೀತು? ಎಷ್ಟು ಹೇಳಲಾದೀತು? ನಮಗೆ ನಲವತ್ತು ಸಾವಿರ ಹಾಡುಗಳನ್ನು ಕೇಳುವುದಕ್ಕಾದರೂ ಈ ಜನ್ಮ ಸಾಕಾಗುವುದೋ? ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಅವರು ಹಾಡುಗಳನ್ನು ಹಾಡಿದ್ದಾರೆ. ಮೂರು ಪೀಳಿಗೆಯ ಸಂಗೀತರಸಿಕರ ಶ್ರವಣಾನಂದಕ್ಕೆ ಕಾರಣವಾಗಿದ್ದಾರೆ. ಎಷ್ಟೋ ವಿಧದ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಂತೆಂಥ ಪ್ರತಿಭಾಶಾಲಿಗಳಾದ ಸಂಗೀತನಿರ್ದೇಶಕರ ಸ್ವರಸಂಚಾರಗಳಿಗೆ ಜೀವ ತುಂಬಿದ್ದಾರೆ. ಯಾವ ಸಿನಿಮಾದ ಯಾವ ಹಾಡನ್ನು ಕುರಿತು ಮಾತನಾಡುವುದು? ಕ್ರಾಂತಿಯನ್ನೇ ಉಂಟುಮಾಡಿದ ’ಶಂಕರಾಭರಣಂ‘ ಚಿತ್ರದ ಹಾಡುಗಳೇ? ಅಥವಾ ‘ಅನ್ನಮಯ್ಯ’? ‘ಗೀತಾಂಜಲಿ’? ’ಗಾನಯೋಗಿ ಪಂಚಾಕ್ಷರಗವಾಯಿ’? ’ಏಕ್‌ ದುಜೇ ಕೆ ಲಿಯೆ’? ’ಗೀತಾ’? ’ಸಾಗರಸಂಗಮಂ’? ’ದಳ‍ಪತಿ’? ‘ರೋಜಾ’? ’ಅಮೃತವರ್ಷಿಣಿ’? – ಇಂಥ ನೂರಾರು ಚಿತ್ರಗಳು ನಮ್ಮ ಮುಂದೆ ಬರುತ್ತವೆ. ಯಾವ ನಟನಿಗೆ ಹಾಡಿದ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳೋಣ? ಯಾರಿಗೆ ಮಾಡಿದ ಕಂಠದಾನದ ಬಗ್ಗೆ ಮಾತನಾಡೋಣ? ಅಥವಾ ಅವರು ಹಾಡಿದ ಭಕ್ತಿಗೀತೆ–ಸ್ತೋತ್ರಗಳ ಬಗ್ಗೆ ಮಾತನಾಡುವುದೆ? ಎಲ್ಲಿಂದ ಆರಂಭಿಸುವುದು, ಎಲ್ಲಿಗೆ ಮುಗಿಸುವುದು? ಒಬ್ಬನಿಂದ ಇರಲಿ, ಒಬ್ಬನ ಜೀವನಮಾನದಲ್ಲಾದರೂ ಅವುಗಳ ಬಗ್ಗೆ ಸಮಗ್ರವಾಗಿ ಮಾತನಾಡಲು ಆಗುವುದೇ? ಹಿಂದೆ ಒಮ್ಮೆ ಯಾರೋ ಉದ್ಗರಿಸಿದ್ದರು: ‘ಎಸ್‌ಪಿಬಿ – ಎನ್ನುವುದರ ಅರ್ಥವೇ ಸೂಪರ್‌ ಪ್ಲೇ ಬ್ಯಾಕ್‌ ಸಿಂಗರ್‌ ಸುಬ್ರಹ್ಮಣ್ಯಂ ಎಂದು’.ಹಾಡುಗಾರಿಕೆಯಲ್ಲಿ ಸಾಹಿತ್ಯಶುದ್ಧಿಯ ಬಗ್ಗೆ ಅತಿಶಯವಾದ ಎಚ್ಚರಿಕೆ, ಸಾಹಿತ್ಯವನ್ನು ಆಸ್ವಾದಿಸುತ್ತ ಹಾಡಿಗೆ ಜೀವ ತುಂಬವ ಅವರ ತವಕಗಳು ಅವರಿಗೇ ಸ್ವಂತ ಎನಿಸುವಷ್ಟು ವಿಶಿಷ್ಟವಾಗಿದ್ದವು. ಹೌದು, ಹಿನ್ನೆಲೆ ಗಾಯನದ ಸಾಗರ ಎನ್ನಿ, ವಿಶ್ವಕೋಶ ಎನ್ನಿ, ವಿಶ್ವವಿದ್ಯಾಲಯ ಎನ್ನಿ; ಅವೆಲ್ಲವೂ ಎಸ್‌ಪಿಬಿ ಆಗಿದ್ದರು ಎನ್ನುವುದು ದಿಟ.

ಎಸ್‌ಪಿಬಿ ಭೌತಿಕವಾಗಿ ಕಣ್ಮರೆಯಾಗಿರುವುದನ್ನು ಹಲವರು ಮನೆಯ ಹಿರಿಯರೊಬ್ಬರನ್ನು ಕಳೆದುಕೊಂಡಂಥ ಭಾವಶೂನ್ಯವನ್ನಾಗಿ ಅನುಭವಿಸುತ್ತಿರುವುದು ಎದ್ದುಕಾಣುವ ವಿವರ. ಇದಕ್ಕೆ ಕಾರಣ ಏನೆಂದು ಹೇಳುವುದು ಕಷ್ಟ. ಹೌದು, ಅವರ ಹಾಡುಗಳನ್ನೇ ಕೇಳುತ್ತ ಬೆಳೆದವರು ಲಕ್ಷಾಂತರ ಸಹೃದಯರಿದ್ದಾರೆ. ಆದರೆ ಇದು ಮಾತ್ರವೇ ಈ ಖಾಲಿತನಕ್ಕೆ ಕಾರಣವಾಗಿರಲಾರದು. ಅವರು ಕೇವಲ ತಮ್ಮ ಹಾಡುಗಳ ಮೂಲಕವೇ ನಮ್ಮ ಮನೆಗಳನ್ನು ಪ್ರವೇಶಿಸಿದವರಲ್ಲ; ಅವರ ನಡೆ–ನುಡಿಗಳ ಮೂಲಕ ನಮ್ಮ ಮನಗಳನ್ನು ಪ್ರವೇಶಿಸಿದ್ದಾರೆ. ಅವರು ನಮ್ಮ ಪ್ರೀತಿಗೂ ವಿರಹಕ್ಕೂ ಸಂತೋಷಕ್ಕೂ ಕೋಪಕ್ಕೂ ಭಕ್ತಿಗೂ ದನಿಯಾಗುವ ಮೂಲಕ ನಮ್ಮ ಬದುಕಿನ ಭಾಗ್ಯವೇ ಆಗಿದ್ದವರು. ’ಅದ್ವೈತದ ಸಿದ್ಧಿಗೂ ಅಮರತ್ವದ ಗಳಿಕೆಗೂ ಗಾನವೇ ಮೆಟ್ಟಿಲು’ ಎಂಬ ಸಾಲನ್ನು ಅವರೇ ಹಾಡಿದ್ದಾರೆ. ಅವರ ಹಾಡುಗಳ ದೆಸೆಯಿಂದ ನಾವು ಕೂಡ ಅದ್ವೈತದ ಅನುಭವವನ್ನು ಕ್ಷಣಕಾಲವಾದರೂ ಅನುಭವಿಸಿದ್ದೇವೆ; ಆನಂದಾನುಭವದಲ್ಲಿ ವಿಹರಿಸಿದ್ದೇವೆ. ಅವರ ಶರೀರ ನಮ್ಮೊಂದಿಗೆ ಇಂದು ಇಲ್ಲ; ಆದರೆ ಎಸ್‌ಪಿಬಿ ಅವರ ಶಾರೀರ ಮಾತ್ರ ಈ ಜಗತ್ತಿನಲ್ಲಿ ಉಚ್ಛ್ವಾಸ–ನಿಃಶ್ವಾಸಗಳು ಇರುವವರೆಗೂ ಅಮರವಾಗಿರುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಜಯಂತಿ ತೇ ಸುಕೃತಿನೋ ರಸಸಿದ್ಧಾಃ ಕವೀಶ್ವರಾಃ ।

ನಾಸ್ತಿ ಯೇಷಾಂ ಯಶಃಕಾಯೇ ಜರಾಮರಣಜಂ ಭಯಮ್‌ ।।

(ಪುಣ್ಯವಂತರಾದ ರಸಸಿದ್ಧರು, ಕವೀಶ್ವರರು ಎಂದಿಗೂ ಬೆಳಗುತ್ತಲೇ ಇರುತ್ತಾರೆ. ಏಕೆಂದರೆ ಅವರ ಯಶಸ್ಸು ಎಂಬ ದೇಹಕ್ಕೆ ಮುಪ್ಪು ಮತ್ತು ಸಾವುಗಳ ಭಯ ಇರುವುದಿಲ್ಲ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT