ಶುಕ್ರವಾರ, ಜುಲೈ 1, 2022
22 °C

ಆರೋಪಿಗೇ ‘ಜೈ’ ಎಂದ ಮಾಲಿವುಡ್‌!

ಟಿ. ಎಸ್. ಸುಧೀರ್‌ Updated:

ಅಕ್ಷರ ಗಾತ್ರ : | |

ಮಲಯಾಳ ಚಿತ್ರೋದ್ಯಮ ಈಗ ಇಬ್ಭಾಗ ಆಗಿರುವುದು ಎದ್ದು ಕಾಣುತ್ತಿರುವ ಸತ್ಯ. ನಟ ದಿಲೀಪ್‌ ಅವರಿಗೆ ಮತ್ತೆ ಸದಸ್ಯತ್ವವನ್ನು ನೀಡಲು ಮಲಯಾಳ ಚಿತ್ರ ಕಲಾವಿದರ ಸಂಘ (ಅಮ್ಮ) ಮೊನ್ನಿನ ಭಾನುವಾರ ತೀರ್ಮಾನಿಸಿದೆ. ಕಳೆದ ವರ್ಷದ ಫೆಬ್ರುವರಿಯಲ್ಲಿ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಅವರ ಮೇಲಿತ್ತು. ಹೀಗಾಗಿ ಅದೇ ವರ್ಷ ಜುಲೈನಲ್ಲಿ ಅವರನ್ನು ಸಂಘದಿಂದ ಹೊರಹಾಕಲಾಗಿತ್ತು. ಹನ್ನೊಂದು ತಿಂಗಳುಗಳ ಬಳಿಕ ಪುನಃ ಅವರಿಗೆ ಸಂಘದ ಬಾಗಿಲು ತೆರೆಯಲಾಗಿದೆ. ಎರಡೂವರೆ ದಶಕಗಳ ವೃತ್ತಿ ಬದುಕಿನಲ್ಲಿ 130 ಮಲಯಾಳ ಸಿನಿಮಾಗಳನ್ನು ನೀಡಿರುವ ದಿಲೀಪ್‌, ಲೈಂಗಿಕ ದೌರ್ಜನ್ಯದ ಆರೋಪ ಹೊತ್ತು 85 ದಿನಗಳನ್ನು ಜೈಲಿನಲ್ಲಿ ಕಳೆದಿದ್ದರು. ಬಳಿಕ ಜಾಮೀನು ಪಡೆದು ಹೊರಬಂದಿದ್ದರು.

ಮಲಯಾಳ ಚಿತ್ರ ಜಗತ್ತಿನ ಸೂಪರ್‌ಸ್ಟಾರ್‌ ಎನಿಸಿದ ದಿಲೀಪ್‌ ಅವರ ಸದಸ್ಯತ್ವ ಮಾನ್ಯ ಮಾಡಲು ಮುಂದಾಗಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲಾವಿದರ ಸಂಘ ತಮ್ಮ ಹಿತರಕ್ಷಣೆ ಕಾಯುವಲ್ಲಿ ವಿಫಲವಾಗಿದೆ ಎಂಬ ಸಂದೇಶ ಸಾರಲು ನಾಲ್ವರು ನಟಿಯರು ಬುಧವಾರ ‘ಅಮ್ಮ’ದಿಂದ ಹೊರಬಂದಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯೇ ಮೊದಲಿಗರಾಗಿ ರಾಜೀನಾಮೆ ಕೊಟ್ಟಿದ್ದಾರೆ.

‘ಮೊದಲು ನನಗೆ ಒಲಿದುಬಂದಿದ್ದ ಅವಕಾಶಗಳು ನನ್ನ ಕೈತಪ್ಪುವಂತೆ ಮಾಡಿದ್ದು ಇದೇ ನಟ. ಈ ಕುರಿತು ನಾನು ದೂರು ಕೊಟ್ಟಾಗ ಅದನ್ನು ‘ಅಮ್ಮ’ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಬಳಿಕ ಗಂಭೀರ ಅಪರಾಧ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಅದೇ ವ್ಯಕ್ತಿಯ ರಕ್ಷಣೆಗೆ ಸಂಘ ನಿಂತುಕೊಂಡಿತು. ಇಂತಹ ಸಂಘದ ಸದಸ್ಯೆಯಾಗಿದ್ದುಕೊಂಡು ಯಾವುದೇ ಪ್ರಯೋಜನವಿಲ್ಲ ಎಂಬುದು ಮನವರಿಕೆಯಾಗಿದೆ. ಹೀಗಾಗಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ಸಂತ್ರಸ್ತ ನಟಿ ವಿವರಿಸಿದ್ದಾರೆ.

ಮಲಯಾಳ ಚಿತ್ರರಂಗದ ದಿಗ್ಗಜ ಎನಿಸಿದ ಮೋಹನಲಾಲ್‌ ಅವರು ‘ಅಮ್ಮ’ ಅಧ್ಯಕ್ಷರಾಗಿ ಇತ್ತೀಚೆಗಷ್ಟೆ ಆಯ್ಕೆಯಾಗಿದ್ದಾರೆ. ಅವರು ನಡೆಸಿದ ಮೊದಲ ಸಭೆಯಲ್ಲೇ ದಿಲೀಪ್‌ ಅವರ ಮೇಲಿನ ಅಮಾನತು ಆದೇಶವನ್ನು ರದ್ದುಪಡಿಸಿರುವುದು ಕಾಕತಾಳೀಯವಾಗಿದೆ.

ಕಾನೂನಿನ ದೃಷ್ಟಿಯಿಂದ ನೋಡಿದಾಗ ಸಂಘದ ಈ ನಿರ್ಧಾರದಲ್ಲಿ ಯಾವುದೇ ತಪ್ಪು ಇಲ್ಲ. ಅಪರಾಧ ಮಾಡಿರುವುದು ಸಾಬೀತು ಆಗುವವರೆಗೆ ಆರೋಪಿಯನ್ನು ತಪ್ಪಿತಸ್ಥ ಎನ್ನಲಾಗುವುದಿಲ್ಲ. ಆದರೆ, ಸನ್ನಿವೇಶದ ಗ್ರಹಿಕೆ ಹಾಗೂ ರಾಜಕೀಯವಾಗಿ ಸರಿಯಾದ ನಿಲುವು ತಾಳಬೇಕೆನ್ನುವ ದೃಷ್ಟಿಯಿಂದ ಈ ತೀರ್ಮಾನ ದೋಷಪೂರಿತ.

ದಿಲೀಪ್‌ ಅವರಿಗೆ ಮತ್ತೆ ಬಾಗಿಲು ತೆರೆಯುವ ಮೂಲಕ ‘ಅಮ್ಮ’, ತಾನು ಅವರ ಪರವಾಗಿಯೇ ಇರುವುದು ಎಂಬ ಸಂದೇಶವನ್ನು ರವಾನಿಸಿದೆ. ತೀರ್ಪುಗಾರನ ಸ್ಥಾನದಲ್ಲಿ ನಿಂತುಕೊಂಡ ಸಂಘಕ್ಕೆ ನಟನಿಗೆ ಕೊಟ್ಟ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಅಮಾನತು ಶಿಕ್ಷೆ ಸಾಕೆನಿಸಿರಬೇಕು.

‘ಅಮ್ಮ’ ಕೈಗೊಂಡ ಈ ನಿರ್ಧಾರ ಮಾಲಿವುಡ್‌ ಕುರಿತು ಏನನ್ನು ಹೇಳುತ್ತಿದೆ? ಚಿತ್ರೋದ್ಯಮ ಮಹಿಳೆಯರ ಪರ ಇಲ್ಲ. ಆಳವಾಗಿ ಬೇರೂರಿದ ಪುರುಷಪ್ರಧಾನ ಹಾಗೂ ಸ್ತ್ರೀದ್ವೇಷಿ ಗುಂಪೇ ಅದನ್ನು ಆಳುತ್ತಿದೆ. ನಟಿಯರೆಲ್ಲ ಅಸಹಾಯಕರಾಗಿದ್ದು, ದಿಲೀಪ್‌ ಅವರಂತಹ ಬಲಿಷ್ಠ ಪುರುಷರೇ ಉದ್ಯಮದ ಮೇಲೆ ಹಿಡಿತ ಸಾಧಿಸಿದ್ದಾರೆ. ಅಲ್ಲದೆ ಸಂತ್ರಸ್ತರ ಪರ ಸಂಘಟನೆ ನಿಲ್ಲುವುದಿಲ್ಲ ಎಂಬುದನ್ನು ಅದರ ತೀರ್ಮಾನ ಸ್ಪಷ್ಟವಾಗಿ ಹೇಳುತ್ತದೆ.

‘ನಟಿಯರು ಹಾಗೂ ತಂತ್ರಜ್ಞೆಯರೆಲ್ಲ ಸುರಕ್ಷಿತ ಭಾವದಿಂದಿರಲು ಮಾಡಿದ್ದೇನು’ ಎಂಬ ಪ್ರಶ್ನೆಯನ್ನು ‘ಅಮ್ಮ’ನ ಮುಂದೆ ಇಡಬೇಕಿದೆ. ಶೂಟಿಂಗ್‌ ಮುಗಿಸಿಕೊಂಡು ವಾಪಸ್‌ ಬರುವಾಗಲೇ ನಟಿ ದೌರ್ಜನ್ಯಕ್ಕೆ ಒಳಗಾಗಿರುವುದು ಗಮನಿಸಬೇಕಾದ ಅಂಶವಾಗಿದೆ. ದುರದೃಷ್ಟಕರ ಘಟನೆ ಬಳಿಕ ಮಲಯಾಳ ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಜನ್ಮ ತಾಳಿರುವ ‘ವಿಮೆನ್‌ ಇನ್‌ ಸಿನಿಮಾ ಕಲೆಕ್ಟಿವ್‌’ (ಡಬ್ಲ್ಯುಸಿಸಿ) ಸಂಘಟನೆಯನ್ನೂ ‘ಅಮ್ಮ’ನ ತೀರ್ಮಾನ ಅಣಕಿಸಿದೆ.

ದಿಲೀಪ್‌ ಅವರ ವಿರುದ್ಧ ಕೈಗೊಂಡಿದ್ದ ನಿರ್ಧಾರವನ್ನು ಹಿಂಪಡೆಯುವ ಮಾಲಿವುಡ್‌ನ ನಿರ್ಧಾರದಲ್ಲಿ ಅಂತಹ ಸೋಜಿಗವೇನೂ ಇಲ್ಲ. ಏಕೆಂದರೆ, ಅವರು ಬೇಡಿಕೆಯ ನಟ, ನಿರ್ಮಾಪಕ; ಮಾತ್ರವಲ್ಲ, ಪ್ರಭಾವೀ ಪ್ರದರ್ಶಕ. ಬಂಧನಕ್ಕಿಂತ ಮುನ್ನ ಅವರು ‘ಅಮ್ಮ’ನ ಮುಖ್ಯ ಸದಸ್ಯರಾಗಿದ್ದರು. ಅಲ್ಲದೆ, ಕೇರಳ ಚಿತ್ರ ಪ್ರದರ್ಶಕರ ಒಕ್ಕೂಟದ ಅಧ್ಯಕ್ಷರೂ ಆಗಿದ್ದರು. ಇಡೀ ಚಿತ್ರೋದ್ಯಮ ಈ ಎರಡು ಸಂಘಟನೆಗಳ ಜತೆ ಜತೆಗೆ ಕೇರಳ ಚಲನಚಿತ್ರ ಉದ್ಯೋಗಿಗಳ ಒಕ್ಕೂಟದಿಂದ ನಿಯಂತ್ರಿಸಲ್ಪಡುತ್ತದೆ. ಮಲಯಾಳ ಚಿತ್ರೋದ್ಯಮದ ಸಣ್ಣಗಾತ್ರವು ಅದರ ‘ಶಕ್ತಿ’ ಕೆಲವರಲ್ಲೇ ಕೇಂದ್ರೀಕೃತವಾಗಲು ಕಾರಣವಾಗಿದೆ.

ಪ್ರತಿಭಾನ್ವಿತ ಕಲಾವಿದರಾಗಿದ್ದ ದಿವಂಗತ ತಿಲಕನ್‌, ಈ ಮೂರೂ ಸಂಘಟನೆಗಳು ಮಾಫಿಯಾದಂತೆ ವರ್ತಿಸುತ್ತಿದ್ದು, ಸೂಪರ್‌ಸ್ಟಾರ್‌ಗಳ ನಿಯಂತ್ರಣಕ್ಕೆ ಒಳಪಟ್ಟಿವೆ ಎಂದೊಮ್ಮೆ ಕಿಡಿಕಾರಿದ್ದರು. ಈ ಹೇಳಿಕೆಗಾಗಿ ಇಡೀ ಚಿತ್ರೋದ್ಯಮ ಒಂದಾಗಿ ಅವರ ಮೇಲೆ ನಿಷೇಧ ಹೇರಿತ್ತು. ಹೀಗಾಗಿ 2012ರಲ್ಲಿ ಅವರು ನಿಧನರಾಗುವ ಮುಂಚೆ ಎರಡು ವರ್ಷ ಕೆಲಸವಿಲ್ಲದೆ ಕಾಲ ಕಳೆಯಬೇಕಾಯಿತು.

ಕಳೆದ ವರ್ಷ ದೌರ್ಜನ್ಯದ ಘಟನೆ ವರದಿಯಾದಾಗ ಮಾಲಿವುಡ್‌ನ ಹಲವು ಜನ ದಿಲೀಪ್‌ ಅವರಿಗೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದರು. ‘ಅಮ್ಮ’ ಉಪಾಧ್ಯಕ್ಷರೂ ಆಗಿರುವ ಎಲ್‌ಡಿಎಫ್‌ ಶಾಸಕ ಕೆ.ಬಿ. ಗಣೇಶ ಕುಮಾರ್‌ ಅದರಲ್ಲಿ ಪ್ರಮುಖರು. ಆರೋಪಕ್ಕೆ ಒಳಗಾದ ನಟನ ಸದಸ್ಯತ್ವ ರದ್ದತಿ ನಿರ್ಧಾರವನ್ನೇ ಅವರು ವಿರೋಧಿಸಿದ್ದರು. ನಟನಿಂದ ಅನುಕೂಲ ಪಡೆದವರೆಲ್ಲ ಅವರ ಜತೆ ನಿಲ್ಲಬೇಕು ಎಂದೂ ಕರೆಕೊಟ್ಟಿದ್ದರು. ‘ಅಮ್ಮ’ ಈಗ ಕೈಗೊಂಡ ತೀರ್ಮಾನ ಬಲಿಷ್ಠ ವ್ಯಕ್ತಿಗೆ ಇಡೀ ಉದ್ಯಮ ಮಣಿದಿದೆ ಎಂಬುದನ್ನು ಎತ್ತಿ ತೋರುತ್ತದೆ.

ದಿಲೀಪ್‌ ಅವರು ಜೈಲಿಗೆ ಹೋದ ಬಳಿಕ ಬಿಡುಗಡೆಯಾದ ಅವರ ಎರಡು ಚಿತ್ರಗಳಾದ ‘ರಾಮಲೀಲಾ’ ಮತ್ತು ‘ಕಮ್ಮಾರ ಸಂಭವಂ’ ತಕ್ಕಮಟ್ಟಿಗೆ ಗಳಿಕೆ ಕಂಡಿದ್ದನ್ನೇ ಅವರಿಗಿರುವ ಸಾರ್ವಜನಿಕ ಬೆಂಬಲಕ್ಕೆ ಸಾಕ್ಷಿ ಎಂಬಂತೆ ಬಿಂಬಿಸಲಾಗಿತ್ತು. ಅವರು ಬಂಧನಕ್ಕೆ ಒಳಗಾದ ಮೇಲೆ ಅವರ ಧರ್ಮಾರ್ಥ ಕಾರ್ಯಗಳ ಕುರಿತು ಟಿವಿಗಳಲ್ಲಿ ಪುಂಖಾನುಪುಂಖವಾಗಿ ಕಾರ್ಯಕ್ರಮಗಳು ಬರುತ್ತಿದ್ದವು. ಸಲ್ಮಾನ್‌ ಖಾನ್‌ ಅವರು ಸಲ್ಮಾನ್‌ ಭಾಯ್‌ ಆದಂತೆಯೇ ದಿಲೀಪ್‌ ಅವರು ದಿಲೀಪ್‌ ಇಟ್ಟನ್‌ (ಅಣ್ಣ) ಆಗಿದ್ದರು.

‘ನಾಯಕರ ಯಾವುದೇ ನಿರ್ಧಾರಗಳನ್ನು ಪ್ರಶ್ನೆ ಮಾಡದೆ ಒಪ್ಪಿಕೊಳ್ಳುವಂತಹ ಜನ ‘ಅಮ್ಮ’ನಿಗೆ ಬೇಕಾಗಿದ್ದಾರೆ. ನಮ್ಮ ಧ್ವನಿಗಳು ಅಲ್ಲಿ ಯಾರಿಗೂ ಕೇಳುವುದಿಲ್ಲ’ ಎಂದು ನಟಿ–ನಿರ್ದೇಶಕಿ ಗೀತು ಮೋಹನದಾಸ್‌ ಬರೆದಿದ್ದಾರೆ. ದಿಲೀಪ್‌ ಮರು ಸೇರ್ಪಡೆ ವಿರೋಧಿಸಿ ರಾಜೀನಾಮೆ ಕೊಟ್ಟವರಲ್ಲಿ ಅವರೂ ಒಬ್ಬರು.

ಹೌದು, ಭಿನ್ನ ಸಿನಿಮಾಗಳಿಗೆ ಹೆಸರಾದ ಮಲಯಾಳ ಚಿತ್ರೋದ್ಯಮ ತನ್ನತ್ತ ತಿರುಗಿ ನೋಡಿಕೊಳ್ಳಲು ಇದು ಸಕಾಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು