ಗುರುವಾರ , ಜೂನ್ 30, 2022
22 °C
ಶಾಹೀನ್‌ಬಾಗ್‌ನಲ್ಲಿ ಆಂದೋಲನದ ಕಿಡಿ ಹೊತ್ತಿಸಿದವರನ್ನು ಬಾಧಿಸುತ್ತಿರುವ ಭೀತಿ ಯಾವುದು?

ಮಹಿಳೆ, ಮನೋಬಲ ಮತ್ತು ಸರ್ಕಾರ

ರೇಣುಕಾ ನಿಡಗುಂದಿ Updated:

ಅಕ್ಷರ ಗಾತ್ರ : | |

ದೆಹಲಿ ಹೊರವಲಯದ ನೊಯಿಡಾದಿಂದ ಡಿ‍ಎನ್‍ಡಿ ಸೇತುವೆ ಹತ್ತಿ, ಮಹಾರಾಣಿಬಾಗ್ ಕಡೆ ಹೊರಟರೆ, ಸೇತುವೆಯ ಇಕ್ಕೆಲದಲ್ಲಿ ಯುಗದ ಕಣ್ಣಂಚಿನ ಕಪ್ಪು ಕಾಡಿಗೆಯಂತೆ ಹರಿಯುವ ಯಮುನೆ ಕಾಣುತ್ತಾಳೆ. ಎಡಬದಿಗೆ ಕಣ್ಣುಹಾಯಿಸಿದರೆ, ನದಿ ದಂಡೆಯನ್ನು ನೂಕಿ ನಿಂತಂತೆ ಬಹುಮಹಡಿಯ ಮನೆಗಳು ಕಾಣುತ್ತವೆ. ಆ ಪ್ರದೇಶವೇ ಶಾಹೀನ್‌ಬಾಗ್. ಅಲ್ಲಿಂದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಕ್ಕೆ ಹೋಗಬಹುದಾದ ಒಳದಾರಿ ಇದೆ. ಶಾಹೀನ್‌ಬಾಗ್, ಮುಸ್ಲಿಂ ಬಾಹುಳ್ಯವಿರುವ ಪ್ರದೇಶ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‌ಸಿ) ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಡಿ. 15ರಂದು ನಡೆದ ಪ್ರತಿಭಟನೆಯ ನಂತರ ಶಾಹೀನ್‍ಬಾಗ್‌ನಲ್ಲಿ ಆರಂಭವಾದ ಆಂದೋಲನವು ರಾಷ್ಟ್ರದ ಗಮನಸೆಳೆದಿದೆ.

ಗೃಹಿಣಿಯರು ಹಾಗೂ ಮಕ್ಕಳು ಪ್ರತಿಭಟನೆಯ ಕಿಡಿ ಆರದಂತೆ ನೋಡಿಕೊಂಡಿದ್ದಾರೆ. ಈ ಪ್ರತಿಭಟನಕಾರರ ರಸ್ತೆತಡೆಯಿಂದ ಉಂಟಾಗಿರುವ ಅವ್ಯವಸ್ಥೆಯ ವಿರುದ್ಧ ದಾಖಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ಕಾಲಿಂದಿಕುಂಜ್– ಶಾಹೀನ್‌ಬಾಗ್ ಮಾರ್ಗವನ್ನು ತೆರವುಗೊಳಿಸುವ, ಅಲ್ಲಿನ ದಟ್ಟಣೆಯನ್ನು ಶಾಂತಿಯುತವಾಗಿ, ಸುವ್ಯವಸ್ಥಿತವಾಗಿ ನಿಯಂತ್ರಿಸುವ ಜವಾಬ್ದಾರಿ ಪೊಲೀಸರದು ಎಂದು ಹೇಳಿ ಕೈತೊಳೆದುಕೊಂಡಿದೆ.

118 ವರ್ಷಗಳ ದಾಖಲೆಯನ್ನು ಮುರಿದಿರುವ ದಿಲ್ಲಿಯ ಚಳಿಯು ಜನಜೀವನವನ್ನು ನಡುಗಿಸಿದೆ. ಆದರೂ ಶಾಹೀನ್‌ಬಾಗ್‌ನ ಮಹಿಳೆಯರು ಎಲುಬು ಸೀಳುವ ಚಳಿಯನ್ನೂ ಲೆಕ್ಕಿಸದೆ ಹಗಲೂ ರಾತ್ರಿ ಪ್ರತಿಭಟನೆಯನ್ನು ಜೀವಂತವಾಗಿ ಇಟ್ಟಿದ್ದಾರೆ. 70 ವರ್ಷದ ಮಹಿಳೆಯಿಂದ ಹಿಡಿದು ಕೈಗೂಸಿರುವ ತಾಯಂದಿರವರೆಗೆ ಸರದಿಯಲ್ಲಿ ಭಾಗವಹಿಸುತ್ತಿದ್ದಾರೆ.

ಸುತ್ತಮುತ್ತಲಿನ ಜನಜೀವನವೆಲ್ಲ ಅಸ್ತವ್ಯಸ್ತಗೊಂಡು ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವುದರಿಂದ ಆಂದೋಲನವನ್ನು ತಕ್ಷಣ ನಿಲ್ಲಿಸುವಂತೆ ಸೂಚಿಸಿ ಸ್ಥಳೀಯ ಠಾಣಾಧಿಕಾರಿ ನೋಟಿಸ್ ಜಾರಿಗೊಳಿಸಿದ್ದರು. ‘ಸಿಎಎ ಅನ್ನು ಹಿಂಪಡೆಯುವವರೆಗೂ ನಾವು ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಮತ್ತು ಈ ಜಾಗವನ್ನೂ ತೊರೆಯುವುದಿಲ್ಲ’ ಎನ್ನುವುದು ಪ್ರತಿಭಟನಕಾರರ ಖಡಕ್‌ ಮಾತು. ನಿರಂತರ ಪ್ರತಿಭಟನೆಯ ಮೂಲಕ ರಾಷ್ಟ್ರದ ಸಾಮಾಜಿಕ ಪ್ರಜ್ಞೆಯನ್ನು ಜಾಗೃತವಾಗಿ ಇಟ್ಟಿರುವ ಇಲ್ಲಿನ ಮಹಿಳೆಯರ ಮಾತುಗಳನ್ನು ಸರ್ಕಾರ ಆಲಿಸಬೇಕಿತ್ತು. ಆದರೆ, ಜನಸಾಮಾನ್ಯರನ್ನು ಸಂತೈಸುವ ಮೂಲಕ ಗಳಿಸಬಹುದಾದ ಜನರ ನಂಬಿಕೆಯನ್ನು, ಸಾಧ್ಯವಾಗಬಹುದಾದ ಸಂವಾದದ ಒಂದು ಅವಕಾಶವನ್ನು ಸರ್ಕಾರ ಕಳೆದುಕೊಳ್ಳುತ್ತಿದೆ.

ಈ ಪರಿ ಪ್ರತಿಭಟನೆ ನಡೆಸುವಂತಹ ಯಾವ ಭೀತಿ ಈ ಮಹಿಳೆಯರನ್ನು ಬಾಧಿಸುತ್ತಿದೆ? ಕೋಮುದ್ವೇಷದ ಗುಂಪುದಾಳಿ ಈಗಾಗಲೇ ಎಷ್ಟೊಂದು ಮಹಿಳೆಯರ ಮಡಿಲುಗಳನ್ನು ಬರಿದಾಗಿಸಿದೆ. ಎಂದೂ ದನಿಯೆತ್ತದ, ನಕಾಬ್, ಬುರ್ಖಾ, ಬಾಗಿಲ ಪರದೆ ದಾಟದ ಮಹಿಳೆಯರೂ ಈ ಪ್ರತಿಭಟನೆಗಾಗಿ ಕಟ್ಟುಪಾಡುಗಳನ್ನು ಕಳಚಿಟ್ಟು ಹೊರಬಂದಿದ್ದಾರೆ. ಸ್ವಾತಂತ್ರ್ಯಪೂರ್ವದಿಂದಲೂ ಭಾರತದಲ್ಲಿ ವಾಸಿಸುತ್ತಿರುವವರು, ‘ನಾವು ಇಲ್ಲಿನ ನಿವಾಸಿಗಳು. ಈ ಭಾರತ ನಮ್ಮದೂ ಹೌದು. ನಾವು ಇಲ್ಲಿಂದ ಎಲ್ಲೂ ಹೋಗುವುದಿಲ್ಲ’ ಎನ್ನುತ್ತಾರೆ.

ನೊಯಿಡಾದಿಂದ ಫರೀದಾಬಾದ್, ಮಥುರಾ ರೋಡ್, ಅಪೊಲೊ ಆಸ್ಪತ್ರೆ ಹಾಗೂ ದಿಲ್ಲಿಗೆ ಹೋಗಲು ಇರುವ ಕಾಲಿಂದಿಕುಂಜ್ ಹೆದ್ದಾರಿಯು ಒಂದು ತಿಂಗಳಿನಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಶಾಹೀನ್‌ಬಾಗ್‌ನಲ್ಲಿ ಅನೇಕ ಬ್ರ್ಯಾಂಡಿನ ಷೋರೂಮುಗಳಿವೆ. ಆದರೆ ವ್ಯಾಪಾರವೇ ಇಲ್ಲದೆ ಅಂಗಡಿಕಾರರು ಪ್ರತಿಭಟನೆಯನ್ನು ನಿಲ್ಲಿಸುವಂತೆ ಒತ್ತಡ ಹೇರುತ್ತಿದ್ದಾರೆ. ಜೆಎನ್‌ಯು ಮಾದರಿಯ ಅನಪೇಕ್ಷಿತ ಘಟನೆಗಳು ಜರುಗದಿರಲೆಂಬ ದೃಷ್ಟಿಯಿಂದ ಕೆಲ ಸಂಘಟನೆಗಳು ಪ್ರತಿಭಟನೆಯನ್ನುಸ್ಥಗಿತಗೊಳಿಸಿವೆ. ಆದರೆ ಪ್ರತಿಭಟನಾನಿರತ ಮಹಿಳೆಯರ ಆತ್ಮವಿಶ್ವಾಸ ಮಾತ್ರ ಬತ್ತಿಲ್ಲ. ಅವರ ದುಮ್ಮಾನಗಳನ್ನು ಕೇಳಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್  ಇದುವರೆಗೂ ಇತ್ತ ಬಂದಿಲ್ಲ. ಶಶಿ ತರೂರ್, ಎನ್‌ಡಿಟಿವಿಯ ರವೀಶ್ ಕುಮಾರ್, ಸ್ವರಾ ಭಾಸ್ಕರ್, ಸ್ವಯಂ ಸೇವಾ ಸಂಸ್ಥೆಗಳು, ಸುದ್ದಿವಾಹಿನಿಗಳನ್ನು ಬಿಟ್ಟರೆ ಇನ್ಯಾರೂ ಇತ್ತ ಸುಳಿದಿಲ್ಲ.

ಖಾಸಗಿ ಕಂಪನಿಯೊಂದರ ಗುತ್ತಿಗೆದಾರ ಇತ್ತೀಚೆಗೆ, ಶಾಹೀನ್‌ಬಾಗ್‌ನ ಪ್ರತಿಭಟನಕಾರರಿಗೆ ಕಂಬಳಿ ಹಂಚಲಿಕ್ಕೆ ಹೋಗುವುದಿದೆ ಅಂತಿದ್ದ. ಬೆಳಿಗ್ಗೆ ಎದುರಾದ ಗೆಳತಿ, ಸಂಜೆ ಶಾಹೀನ್‌ಬಾಗ್‍ ಜನರಿಗೆ ಸಮೋಸ, ಚಾಯ್ ಹಂಚಲು ಹೋಗುವುದಾಗಿ ಹೇಳಿದಳು. ಶಾಹೀನ್‍ಬಾಗ್‍ನ ಸಂಘಟನಾಶಕ್ತಿ ಅಚ್ಚರಿ ಹುಟ್ಟಿಸುತ್ತದೆ. ಸಣ್ಣ ಸಣ್ಣ ಸಂದಿಗೊಂದಿಗಳಿರುವ, ಬಡಗಿ, ರಿಕ್ಷಾವಾಲ, ಠೇಲಾವಾಲ, ಕಬಾಡಿವಾಲ, ಹಕೀಮರು– ಹಲಾಲರನ್ನು ತುಂಬಿಕೊಂಡಿರುವ ಶಾಹೀನ್‌ಬಾಗ್, ಯಮುನೆಯ ದಂಡೆಗುಂಟ ಸಾಗಿ ಜಾಮಿಯಾಕ್ಕೆ ಹೋಗುವ ಒಳದಾರಿ ಮಾತ್ರ ಆಗಿತ್ತು. ಈಗ ಶತಮಾನದ ಕೋಪವನ್ನೂ ಅವಮಾನವನ್ನೂ ತೀರಿಸಿಕೊಳ್ಳುವಂತೆ ಪುಟಿದೆದ್ದ ಈ ಮಹಿಳೆಯರ ಮನೋಬಲ, ಉತ್ಸಾಹ ರಾಷ್ಟ್ರವನ್ನು ದಂಗುಬಡಿಸಿದೆ. ವಿಶೇಷವೆಂದರೆ, ಈ ಮಹಿಳೆಯರ ಪ್ರತಿಭಟನೆಗೆ ಸೂಕ್ತ ನಾಯಕತ್ವವೇ ಇಲ್ಲ, ಅವರವರೇ ನಾಯಕರು!

ಭಾರತದಾದ್ಯಂತ ಯಾವುದೇ ಸ್ಥಳವಿರಲಿ, ಸಿಎಎ ವಿರುದ್ಧ ನಡೆದಿರುವ ಪ್ರತಿಭಟನೆಗಳಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. ಹಲ್ಲೆಕೋರರನ್ನು ಬೆದರಿಸಿ ಪುರುಷ ಸಹಪಾಠಿಯ ರಕ್ಷಣೆಗೆ ಧಾವಿಸಿದ ಜಾಮಿಯಾ ಯುವತಿಯ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರತಿಭಟನೆಯ ಸ್ವರೂಪ ಹೇಗೆ ಮಹಿಳಾ ಕೇಂದ್ರಿತವಾಗಿದೆ ಎಂಬುದಕ್ಕೆ ಒಂದು ನಿದರ್ಶನ. ಇತ್ತೀಚಿನ ವರ್ಷಗಳಲ್ಲಿ  ಮಹಿಳೆಯರ ಕೌಟುಂಬಿಕ ಸ್ಥಿತಿಗತಿಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಾರದಿದ್ದರೂ ವಿದ್ಯಾವಂತರು, ಅವಿದ್ಯಾವಂತರು, ಗೃಹಿಣಿಯರು, ವಯಸ್ಸಾದವರು, ಬಡವ– ಬಲ್ಲಿದರೆನ್ನದೇ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರಾಗಿದ್ದಾರೆ. ಶಾಹೀನ್‍ಬಾಗ್‌ನ ಮಹಿಳೆಯರು ಈ 35 ದಿನಗಳಲ್ಲಿ ತಮ್ಮ ಅಸ್ತಿತ್ವವನ್ನು, ಅಸ್ಮಿತೆಯನ್ನು ಹೇಗೆ ಬದಲಾಯಿಸಿಕೊಂಡರು ಎಂಬುದರ ಕುರಿತು ಮುಂದಿನ ಪೀಳಿಗೆ ಅರಿಯುವ ಉತ್ಸಾಹ ತೋರಬಹುದು.

ಬಿಜೆಪಿಯು ಈಗಾಗಲೇ ನಗರದಲ್ಲಿ ಮನೆ ಮನೆಗೆ ಹೋಗಿ, ವಿವಾದಾತ್ಮಕ ಕಾಯ್ದೆಗೆ ಬೆಂಬಲ ಹೆಚ್ಚಿಸುವ ಅಭಿಯಾನವನ್ನು ಆರಂಭಿಸಿದೆ. ದೆಹಲಿಯ ಲಾಜಪತ್ ನಗರದಲ್ಲಿ ಗೃಹ ಸಚಿವರ ರ‍್ಯಾಲಿ ಹೊರಟ ಮಾರ್ಗದಲ್ಲಿ ಇಬ್ಬರು ಮಹಿಳೆಯರು ಬಾಲ್ಕನಿಯಲ್ಲಿ ಪ್ರತಿಭಟನೆಯ ಬ್ಯಾನರ್ ಹಾಕಿದ್ದರು. ಜನಸಮೂಹ ಅವರಿಗೆ ಬೆದರಿಕೆಯೊಡ್ಡಿ, ಬಾಡಿಗೆ ಮನೆಯಿಂದ ಅವರನ್ನು ಹೊರಹಾಕಿಸಿದೆ.

ಜನಸಮುದಾಯದ ಮೇಲೆ ವ್ಯಾಪಕ ಪರಿಣಾಮ ಬೀರಬಹುದಾದ ಕಾಯ್ದೆ, ನಿರ್ಧಾರಗಳನ್ನು ಹೆಚ್ಚಿನ ಚರ್ಚೆಯಿಲ್ಲದೆ ತಮ್ಮಷ್ಟಕ್ಕೇ ತೀರ್ಮಾನಿಸಿಬಿಡುವ ಪ್ರವೃತ್ತಿ ಈ ಸರ್ಕಾರದ ಅವಧಿಯಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಕಾಶ್ಮೀರದ ವಿಷಯವೊಂದೇ ಅಲ್ಲ, ನಮ್ಮೆಲ್ಲರ ಭವಿಷ್ಯದ ಎಲ್ಲ ನಿರ್ಧಾರಗಳನ್ನೂ ನಮ್ಮ ಪರವಾಗಿ, ನಮಗೆ ಮನವರಿಕೆ ಮಾಡಿಸದೆ ಅವರೇ ತೆಗೆದುಕೊಳ್ಳುತ್ತಿದ್ದಾರೆ.

2013ರಲ್ಲಿ ಮುಜಫ್ಫರ್‌ನಗರ- ಶಾಮ್ಲಿಯಲ್ಲಿ ಘಟಿಸಿದ ಕೋಮು ದಂಗೆಯಲ್ಲಿ 50 ಸಾವಿರ ಜನ ಮನೆ–ಮಠ ತೊರೆದು ಗುಳೆ ಹೋದರು. ನಡೆದ ಬಲಾತ್ಕಾರಗಳ ಸಂತ್ರಸ್ತೆಯರಿಗೆ ನ್ಯಾಯ ಇನ್ನೂ ಸಿಕ್ಕಿಲ್ಲ. ಕಗ್ಗೊಲೆ, ಹಿಂಸೆ, ಅತ್ಯಾಚಾರದ ವಿಷಯದಲ್ಲಿ ಪೊಲೀಸರು ನೊಂದವರ ಪರ ನಿಲ್ಲಲಿಲ್ಲ ಎಂಬ ಆರೋಪಗಳು ಇವೆ. ಈಗಲೂ ಅಂತಹುದೇ ಆರೋಪಗಳು ಕೇಳಿಬರುತ್ತಿವೆ.

ಶಾಹೀನ್‌ಬಾಗ್‌ನ ಮಹಿಳೆಯರು ಈ ಒಂದು ತಿಂಗಳಲ್ಲಿ ಬಹಳಷ್ಟನ್ನು ಕಲಿತಿದ್ದಾರೆ. ಬಾಬಾ ಸಾಹೇಬರನ್ನು, ತ್ರಿವರ್ಣ ಧ್ವಜವನ್ನು ಎದೆಗೊತ್ತಿಕೊಂಡು ಕ್ರಾಂತಿ ಗೀತೆಗಳನ್ನು ಹಾಡುತ್ತಾ ಆಂದೋಲನಕ್ಕೆ ಜೀವ ತುಂಬಿದ್ದಾರೆ. ಅವರ ಬೇಡಿಕೆಯನ್ನು ಒಪ್ಪುವುದು, ಬಿಡುವುದು ಬೇರೆ ಮಾತು. ಆದರೆ, ಅವರ ಬಳಿ ಹೋಗಿ ಅವರ ಮಾತುಗಳನ್ನು ಆಲಿಸುವ, ಅವರ ಸಂಶಯಗಳನ್ನು ನಿವಾರಿಸುವ ಅಗತ್ಯ ಇದೆ. ‘ಬೇಟಿ ಬಚಾವೋ’ ಎಂದು ಪಠಿಸುವ ಸರ್ಕಾರಕ್ಕೆ ಈ ಮಹಿಳೆಯರ ದನಿ ಕೇಳುವುದಿಲ್ಲವೇ?  


ರೇಣುಕಾ ನಿಡಗುಂದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು