ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ: ಬಾಣಂತಿ ಊಟದಲ್ಲಿ ನೀರು–ನಾರಿನಂಶ ಇರಲಿ

Last Updated 10 ಮಾರ್ಚ್ 2023, 19:30 IST
ಅಕ್ಷರ ಗಾತ್ರ

* ನನಗೆ 26 ವರ್ಷ. ಮೊದಲನೆಯ ಹೆರಿಗೆಯಾಗಿ 28 ದಿನ ಆಗಿದೆ. ಸಹಜ ಹೆರಿಗೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಲವಿಸರ್ಜನೆಗೆ ತ್ರಾಸವಾಗುತ್ತಿದೆ. ಗುದದ್ವಾರದಲ್ಲಿ ತುಂಬಾ ನೋವು, ಉರಿಯಾಗುತ್ತಿದೆ. ಬಾಣಂತಿ ಮದ್ದು, ಲೇಹ್ಯ ತೆಗೆದುಕೊಂಡಿದ್ದೆ. ಹೀಗಾದ ತಕ್ಷಣ ನಿಲ್ಲಿಸಿಬಿಟ್ಟಿದ್ದೇನೆ. ಇದೇನು ಮೂಲವ್ಯಾಧಿಯೇ? ಇದಕ್ಕೆ ಪರಿಹಾರವೇನು?

-ನಾಗರತ್ನ, ಸಾಗರ

ಉತ್ತರ: ನಿಮ್ಮ ವಿವರಣೆಯ ಪ್ರಕಾರ ಗುದದ್ವಾರದಲ್ಲಿ ಬಿರುಕು ಹುಣ್ಣಾಗಿರಬಹುದು. ಇದು ಒಂದು ಬಗೆಯ ಮೂಲವ್ಯಾಧಿ. ಮಹಿಳೆಯರಲ್ಲಿ ಸಹಜ ಹೆರಿಗೆಯ ನಂತರ ಪೆರಿನಿಯಂ ಸ್ನಾಯುಗಳು ದುರ್ಬಲಗೊಂಡು (ಶೇ 30ರಷ್ಟು ಸಂದರ್ಭದಲ್ಲಿ ಮಾತ್ರ) ಗುದದ್ವಾರದ ಮುಂಭಾಗದಲ್ಲಿ ಬಿರುಕು ಉಂಟಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಮಲಬದ್ಧತೆಯಿಂದ ಈ ಸಮಸ್ಯೆ ಉಂಟಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಬಾಣಂತಿಯರಿಗೆ ನೀರು, ಸೊಪ್ಪು, ತರಕಾರಿಯನ್ನು ನೀಡಬೇಕು.

ಹೆಚ್ಚಿನ ಜನರು ಬಾಣಂತಿಯರಿಗೆ ನೀರು ನಿಷಿದ್ಧ ಎಂಬ ರೀತಿಯಲ್ಲಿ ವರ್ತಿಸುತ್ತಾರೆ. ನೀವೇನೂ ಮನೆಮದ್ದು ನಿಲ್ಲಿಸಬೇಕಿಲ್ಲ. ಆದರೆ, ಪ್ರತಿ ದಿನ ಕನಿಷ್ಠ 3 ರಿಂದ 4 ಲೀಟರ್‌ ನೀರು ಕುಡಿಯಬೇಕು. ನಾರಿನಂಶವುಳ್ಳ ಸೊಪ್ಪು, ತರಕಾರಿ, ಹಣ್ಣುಗಳನ್ನು ಕಡ್ಡಾಯವಾಗಿ ತಿನ್ನಬೇಕು. ಗುದದ್ವಾರದಲ್ಲಿ ತೀವ್ರ ನೋವು ಎನಿಸಿದರೆ ಹೀಗೆ ಮಾಡಿ. ಅಗಲವಾದ ಟಬ್‌ನಲ್ಲಿ ಬೆಚ್ಚಗಿನ ನೀರು ಹಾಕಿ ಸ್ವಲ್ಪ ಉಪ್ಪು ಹಾಕಿ ಗುದದ್ವಾರ ನೆನೆಯುವ ಹಾಗೇ ಹದಿನೈದು ನಿಮಿಷ ಕುಳಿತುಕೊಳ್ಳಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿ. ನಿತ್ಯ ಎರಡು ಚಮಚ ಇಸಾಬ್‌ಗೋಲ್‌ ಪುಡಿಯನ್ನು ಕುದಿಯುವ ನೀರಿಗೆ ಹಾಕಿ ಸೇವಿಸಿರಿ. ಇದರಿಂದ ಮಲವಿಸರ್ಜನಾ ಕ್ರಿಯೆ ಸುಲಭವಾಗುತ್ತದೆ. ನೋವು ಸುಧಾರಿಸುತ್ತದೆ. ಕಡಿಮೆಯಾಗದಿದ್ದರೆ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ.

*ವಯಸ್ಸು 25. ಮುಟ್ಟಾದಾಗ ತೀವ್ರ ನೋವಾಗುತ್ತದೆ. ಮುಟ್ಟು ಆರಂಭವಾಗುವ ಮೂರು ದಿವಸದ ಮುಂಚೆ ಸಹಿಸಲಾಗದ ನೋವಿರುತ್ತದೆ. ನಂತರವೂ ನೋವಿರುತ್ತದೆ. ಈ ನೋವಿನಿಂದ ಬಳಲಿ ಹೋಗಿದ್ದೇನೆ. ನೋವು ನಿವಾರಕ ಮಾತ್ರೆ ತೆಗೆದುಕೊಂಡರೆ ಸ್ವಲ್ಪ ಹೊತ್ತು ಆರಾಮವೆನಿಸುತ್ತದೆ. ಮತ್ತೆ ಅದೇ ನೋವು. ಇದಕ್ಕೇನಾದರೂ ಆಯುವೇರ್ದ ಪದ್ಧತಿಯಲ್ಲಿ ಪರಿಹಾರವಿದೇಯೇ?

-ನಿಶಾ, ಶಿವಮೊಗ್ಗ

ಉತ್ತರ: ಇದು ತೀವ್ರತರದ ನೋವಿನ ಮುಟ್ಟು. ಗರ್ಭಕೋಶದ ರಚನೆಯಲ್ಲಿ ವ್ಯತ್ಯಾಸವಿದ್ದರೂ ಈ ತರಹ ನೋವಿನ ಮುಟ್ಟಾಗಬಹುದು. ಅತಿಯಾದ ನೋವು ತಡೆಯಲು ನೋವುನಿವಾರಕ ಮಾತ್ರೆಗಳನ್ನ ದಿನಕ್ಕೆ 2 ಅಥವಾ 3 ಬಾರಿ ತೆಗೆದುಕೊಳ್ಳಬಹುದು. ನಿಯಮಿತ ವ್ಯಾಯಾಮ ಚಟುವಟಿಕೆ ಮಾಡುತ್ತೀರಿ. ಪ್ರತಿದಿನ ಬದ್ಧಕೋನಾಸಾನ, ಜಾನುಶೀರ್ಶಾಸನ, ಸೂರ್ಯ ನಮಸ್ಕಾರ ಇವುಗಳನ್ನು ತಜ್ಞರಿಂದ ಕಲಿತು ಮಾಡಿದರೆ ಸಹಾಯವಾಗುತ್ತದೆ.

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು.
ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ.
ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT