ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪಂದನ | ಗರ್ಭಕೋಶದಲ್ಲಿ ಗಡ್ಡೆ: ಏನು ಮಾಡಲಿ?

–ಡಾ. ವೀಣಾ ಎಸ್. ಭಟ್
Published 31 ಮೇ 2024, 18:33 IST
Last Updated 31 ಮೇ 2024, 18:55 IST
ಅಕ್ಷರ ಗಾತ್ರ

ನನ್ನ ವಯಸ್ಸು 43, ಸಂಗೀತ, ಮದುವೆಯಾಗಿ 25 ವರ್ಷಗಳು, ಎರಡು ವರ್ಷದ ಹಿಂದೆ ಗರ್ಭಕೋಶದಲ್ಲಿ ಗಡ್ಡೆ ಇತ್ತು ಎಂದು ಗರ್ಭಕೋಶವನ್ನು ತೆಗೆದಿರುತ್ತಾರೆ. ಈಗ ನನಗೆ ತುಂಬಾ ಸುಸ್ತಿನ ಅನುಭವ, ಬೆವರು ಸೆಕೆ ಸೆಕೆ. ನನ್ನ ಪತಿಯೊಡನೆ ಲೈಂಗಿಕ ಸಂಪರ್ಕದಲ್ಲೂ ನೋವಿನ ಅನುಭವ, ಉರಿ. ಏನು ಮಾಡಲಿ?

ಬಹುಶಃ ನಿಮಗೆ ಗರ್ಭಕೋಶದ ಜೊತೆಗೆ ಅಂಡಾಶಯವನ್ನು ತೆಗೆದಿರುವುದರಿಂದ ಕೃತಕ ಋತುಬಂಧದಿಂದಾಗುವ ಪರಿಣಾಮಗಳು ಆಗುತ್ತಿವೆ. ಮೆನೋಪಾಸ್/ಋತುಬಂಧ ಕೃತಕವಾಗಲೀ (ಗರ್ಭಕೋಶ ಹಾಗೂ ಅಂಡಾಶಯ ಶಸ್ತ್ರಚಿಕಿತ್ಸೆ ಮಾಡಿಸುವುದರಿಂದ) ಅಥವಾ ಸಹಜವಾಗಲೀ ಹೆಣ್ತನದ ಹಾರ್ಮೋನಾದ ಈಸ್ಟ್ರೋಜನ್‌ ಮಟ್ಟ ಕಡಿಮೆಯಾಗುತ್ತಾ ಬರುತ್ತದೆ. ಇದರಿಂದ ಸೂಕ್ಷ್ಮರಕ್ತನಾಳಗಳ ಪರಿಚಲನೆಯಲ್ಲಿ ವ್ಯತ್ಯಾಸವಾದ ಹಾಗೆ ಮುಖ ಬಿಸಿ ಏರಿದ ಹಾಗಾಗುವುದು, ಸೆಕೆ ಸೆಕೆ-ಬೆವರು, ಕೆಲವೊಮ್ಮೆ ಚಳಿಯಾದ ಹಾಗೆ ಆಗಬಹುದು.

ನೀವು ಕಾಫಿ, ಟೀ ಸೇವನೆ ಕಡಿಮೆ ಮಾಡಿ. ದಿನಕ್ಕೆ 3-4 ಲೀಟರ್ ನೀರನ್ನು ಕುಡಿಯಿರಿ. ಸಹಜವಾಗಿ ಶರೀರದಲ್ಲಿ ಈಸ್ಟ್ರೋಜನ್‌ ಅಂಶ ಹೆಚ್ಚಿಸುವ ಫೈಟೋ ಈಸ್ಟ್ರೋಜನ್‌ ಸುವರ್ಣಗಡ್ಡೆ, ಕುಂಬಳಬೀಜ, ಸೋಯಾ, ಹಸಿರು ಸೊಪ್ಪು ತರಕಾರಿ, ಇತ್ಯಾದಿಗಳನ್ನು ಹೆಚ್ಚು ಸೇವಿಸಿ. ನಿಧಾನವಾಗಿ ನಿಮಗೆ ಆ ಸಮಸ್ಯೆ ಸರಿಹೋಗುತ್ತದೆ ಮತ್ತು ಈಸ್ಟ್ರೋಜನ್‌ ಹಾರ್ಮೋನು ಮಟ್ಟ ಕಡಿಮೆಯಾಗುವುದರಿಂದಲೇ ಯೋನಿ ಮಾರ್ಗದಲ್ಲಿ ಶುಷ್ಕತೆಯುಂಟಾಗಿ ನಿಮಗೆ ಲೈಂಗಿಕ ಸಂಪರ್ಕದಲ್ಲಿ ಉರಿ-ನೋವಾಗುತ್ತಿರುವುದು.

ನೀವು ಅದಕ್ಕಾಗಿ ಬೇಸರ ಪಡದೇ ಉತ್ತಮ ಲುಬ್ರಿಕೇಟಿಂಗ್ ಜೆಲ್‌ ಅನ್ನು ಲೈಂಗಿಕ ಸಂಪರ್ಕದಲ್ಲಿ ಮೊದಲು ಬಳಸಿ. ಇಷ್ಟಕ್ಕೆ ಸರಿಹೋಗದಿದ್ದಲ್ಲಿ ಕೆಲವೊಮ್ಮೆ ಈಸ್ಟ್ರೋಜನ್‌ ಇರುವ ಮುಲಾಮು ಅಥವಾ ಮಾತ್ರೆಗನ್ನು ಅಲ್ಪಾವಧಿ (4 ರಿಂದ 6 ವಾರಗಳು) ಮಾತ್ರ ತೆಗೆದುಕೊಳ್ಳಬೇಕಾಗಬಹುದು.

ನಿಮಗೆ ಶಸ್ತ್ರಚಿಕಿತ್ಸೆ ಮಾಡಿದ ತಜ್ಞರಿಂದಲೇ ಸಲಹೆ ಪಡೆದು ಅವರ ಮೇಲ್ವಿಚಾರಣೆಯಲ್ಲಿಯೇ ಅವುಗಳನ್ನು ಬಳಸಿ.ಅಂಡಾಶಯವಿಲ್ಲದಿದ್ದರೂ ಶರೀರದಲ್ಲಿ ಸಂಗ್ರಹವಾದ ಕೊಬ್ಬಿನಿಂದಲೂ ಈಸ್ಟ್ರೋಜನ್‌ ಹಾರ್ಮೋನು ಸ್ವಲ್ಪ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಲೇ ಇರುತ್ತದೆ. ಸೂಕ್ತ ಪೌಷ್ಟಿಕ ಆಹಾರ ಸೇವನೆಯ ಜೊತೆಗೆ ಉತ್ತಮ ಚಟುವಟಿಕೆಯುಳ್ಳ ಜೀವನ ನಡೆಸಿದರೆ, ನಂದೆಲ್ಲಾ ಮುಗಿದೇ ಹೋಯಿತು ಎಂದು ನಕಾರಾತ್ಮಕ ಭಾವನೆ ಹೊಂದದೇ, ಒತ್ತಡ ಮಾಡಿಕೊಳ್ಳಬೇಡಿ. ಇದರಿಂದ ಧೈರ್ಯವಾಗಿ ನಿಮಗೆ ಮುಂದೆ ಕೃತಕ ಋತುಬಂಧದಿಂದಾಗುವ ತೊಂದರೆಗಳನ್ನು ಎದುರಿಸಲು ಸಹಾಯವಾಗುತ್ತದೆ.

ಋತುಬಂಧದಿಂದ ಕೇವಲ ಲೈಂಗಿಕ ತೊಂದರೆಯಷ್ಟೇ ಅಲ್ಲಾ ಮೂಳೆ ಮತ್ತು ಸ್ನಾಯು ಸವೆತ, ಮೂತ್ರ ಸೋರುವಿಕೆ ಇತ್ಯಾದಿಗಳೆಲ್ಲಾ ಉಂಟಾಗುತ್ತದೆ. ಬೇಸರಪಡಬೇಡಿ.

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT