ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತೆ: ಜೀವನಸಂಗ್ರಾಮದ ಕೈಪಿಡಿ

Last Updated 3 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಸನಾತನಧರ್ಮವು ಯಾವುದೇ ಒಂದು ನಿರ್ದಿಷ್ಟ ಗ್ರಂಥದ ವಿಚಾರಗಳ ಆಧಾರದ ಮೇಲೆ ನಿಂತಿಲ್ಲ; ಹೀಗೆಯೇ ಒಬ್ಬ ವ್ಯಕ್ತಿಯ ಜೀವನ–ದರ್ಶನಗಳ ಮೇಲೂ ನಿಂತಿಲ್ಲ. ಎಷ್ಟೋ ಸಾವಿರಾರು ವರ್ಷಗಳಿಂದ ಈ ಧರ್ಮ ಹಲವು ನೆಲೆಗಳಲ್ಲಿ, ಆಯಾಮಗಳಲ್ಲಿ ಅರಳುತ್ತಬಂದಿದೆ. ಹೀಗಿದ್ದರೂ ಆಗಾಗ ಭಗವದ್ಗೀತೆಯನ್ನು ಸನಾತನಧರ್ಮದ ಮೂಲಗ್ರಂಥ ಎಂಬಂತೆ ಕೆಲವರು ಅಭಿಪ್ರಾಯಿಸುವುದೂ ಉಂಟು. ಹೀಗೆ ಒಂದು ಗ್ರಂಥವನ್ನು ಸನಾತನಧರ್ಮದ ಮೂಲಗ್ರಂಥವನ್ನಾಗಿ ಕರೆಯುವುದು ಎಷ್ಟು ಸರಿಯಾದೀತು ಎಂಬ ತಾತ್ತ್ವಿಕ ಜಿಜ್ಞಾಸೆ ಸದ್ಯದ ನಮ್ಮ ಉದ್ದೇಶವಲ್ಲ; ಆದರೆ ತುಂಬ ಸಂಕೀರ್ಣವೂ ವಿಶಾಲವೂ ವಿಶಿಷ್ಟವೂ ಎನಿಸಿರುವ ಪ್ರಾಚೀನ ಸನಾತನಧರ್ಮದ ವಾರಸಿಕೆಯ ಸಂದರ್ಭದಲ್ಲಿ ಭಗವದ್ಗೀತೆಯ ಹೆಸರು ಮುನ್ನೆಲೆಗೆ ಬರುತ್ತಿದೆ ಎಂಬುದು ಗಮನಾರ್ಹ.

ಸನಾತನಧರ್ಮ ಪ್ರತಿಪಾದಿಸುವ ಪ್ರಧಾನ ಜೀವನಮೌಲ್ಯಗಳನ್ನು ಭಗವದ್ಗೀತೆ ತುಂಬ ಸಮರ್ಥವಾಗಿ ಎತ್ತಿಹಿಡಿಯುತ್ತದೆ ಎಂಬುದು ನಿರ್ವಿವಾದ. ಹೀಗಾಗಿಯೇ ಸನಾತನಧರ್ಮದ ಮೂಲತತ್ತ್ವಗಳ ನಿರೂಪಣೆಯ ಸಂದರ್ಭದಲ್ಲಿ ಭಗವದ್ಗೀತೆಯ ಉಲ್ಲೇಖಗಳು ಸಹಜವಾಗಿಯೇ ಕಾಣಿಸಿಕೊಳ್ಳುತ್ತವೆ. ಪ್ರಾಯಶಃ ಇದೇ ಕಾರಣದಿಂದಲೇ ಈ ಗ್ರಂಥದ ಹೆಸರಿನಲ್ಲಿಯೇ ಜಯಂತಿಯೊಂದನ್ನು ಸನಾತನಧರ್ಮದ ಸಂಸ್ಕೃತಿ ಸೃಷ್ಟಿಸಿಕೊಂಡಿರುವುದು ಉಚಿತವಾಗಿದೆಯೆನ್ನಬಹುದು.

ಪ್ರತಿವರ್ಷವೂ ನಮ್ಮ ದೇಶದಲ್ಲಿ ‘ಗೀತಾಜಯಂತಿ’ಯನ್ನು ಭಗವದ್ಗೀತೆಯ ಹೆಸರಿನಲ್ಲಿ ಉತ್ಸವವನ್ನಾಗಿ ಆಚರಿಸಿಕೊಂಡುಬರುತ್ತಿದ್ದೇವೆ. ಈ ಸಂದರ್ಭದಲ್ಲಿ ಭಗದ್ಗೀತೆಯ ಪ್ರಸ್ತುತತೆಯ ಬಗ್ಗೆ ನಾವು ಮೆಲುಕು ಹಾಕಬಹುದು.

ಇಲ್ಲೊಂದು ಸ್ವಾರಸ್ಯವುಂಟು. ಭಗವದ್ಗೀತೆ ತಾನೇ ಒಂದು ಸ್ವತಂತ್ರ ಗ್ರಂಥವಲ್ಲ; ಇದು ಮಹಾಭಾರತ ಎಂಬ ಇತಿಹಾಸಮಹಾಕಾವ್ಯದ ಒಂದು ಸಣ್ಣ ಭಾಗವಷ್ಟೆ. ಆದರೆ ಇದು ನಮ್ಮ ಸಂಸ್ಕೃತಿಯಲ್ಲಿ ಪಡೆದುಕೊಂಡ ಸ್ಥಾನ ಒಂದು ಸ್ವತಂತ್ರ ಗ್ರಂಥಕ್ಕಿಂತಲೂ ಹೆಚ್ಚಿನದು. ಇಂಥದೊಂದು ಅರ್ಹತೆ ಹೇಗೆ ಈ ‘ಸಣ್ಣ’ ಕೃತಿಗೆ ಒದಗಿತು ಎಂಬುದರ ಅವಲೋಕನವೇ ನಮ್ಮ ಸಂಸ್ಕೃತಿಯ ಹಲವು ಆಯಾಮಗಳನ್ನು ನಮ್ಮೆದುರಿಗೆ ಅನಾವರಣಮಾಡುತ್ತದೆ. ಗೀತೆಯು ಮಹಾಭಾರತದಲ್ಲಿ ಯಾವ ಸಂದರ್ಭದಲ್ಲಿ ಕಾಣಿಸಿಕೊಂಡದ್ದು? ಯುದ್ಧಭೂಮಿಯಲ್ಲಿ ತಾನೆ! ಹೀಗೆ ಯುದ್ಧಭೂಮಿಯಲ್ಲಿ ಕಾಣಿಸಿಕೊಂಡ, ಅದೂ ಯುದ್ಧವನ್ನು ಮಾಡುವಂತೆ ಮನಸ್ಸನ್ನು ಸಿದ್ಧಗೊಳಿಸಿದ ‘ಯುದ್ಧಸಂಹಿತೆ’ಯೊಂದನ್ನು ನಮ್ಮ ಜೀವನಕ್ಕೆ ಒದಗುವ ಮೌಲ್ಯಸಂಹಿತೆಯನ್ನಾಗಿ ಸ್ವೀಕರಿಸಿದ ನಮ್ಮ ಸಂಸ್ಕೃತಿಯ ಮಾನಸಿಕತೆ ತುಂಬ ವಿಶಿಷ್ಟವಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಮಹಾಭಾರತದ ಯುದ್ಧ ಹದಿನೆಂಟು ದಿನಗಳಲ್ಲಿ ಮುಕ್ತಾಯವಾಯಿತು, ದಿಟ. ಆದರೆ ನಮ್ಮ ಜೀವನ ಎಂಬ ‘ಭಾರತಯುದ್ಧ’ ಹೀಗೆ ಹದಿನೆಂಟು ದಿನಗಳಲ್ಲಿ ಮುಕ್ತಾಯವಾಗುವಂಥದ್ದಲ್ಲ. ಯುದ್ಧದ ಜಯಕ್ಕೆ ಅತ್ಯಂತ ಮುಖ್ಯವಾಗಿರುವುದು ಏನು? ನಮ್ಮ ಬಲ, ಸೈನ್ಯ, ತಂತ್ರ – ಹೀಗೆ ಏನೇನನ್ನೋ ನಾವಿಲ್ಲಿ ಕಲ್ಪಿಸಿಕೊಳ್ಳಲಾದೀತು. ಇವೆಲ್ಲವೂ ಬೇಕು, ದಿಟ. ಆದರೆ ಇವೆಲ್ಲಕ್ಕೂ ಮುಖ್ಯವಾಗಿ ಬೇಕಾಗಿರುವುದು ಸದಾ ಎಚ್ಚರವಾಗಿರಬೇಕಾದ ನಮ್ಮ ಅರಿವು: ನಾವು ಯುದ್ಧಭೂಮಿಯಲ್ಲಿದ್ದೇವೆ ಎಂಬ ಅರಿವು. ಹೀಗಾಗಿ ಗೀತೆಯ ಸ್ಮರಣೆ ಎಂದರೆ ಜೀವನಸಂಗ್ರಾಮದ ನಿರಂತರ ಸ್ಮರಣೆಯೇ ಹೌದು. ಇದನ್ನು ಡಿವಿಜಿ ಅವರು ಸೊಗಸಾಗಿ ಕಾಣಿಸಿದ್ದಾರೆ: ‘ಜಗದ್ರಣಾಂಗಣೇ ಯಸ್ಯಸ್ಮರಣಂ ಜಯಕಾರಣಮ್‌’. ಇಲ್ಲಿ ನಾವು ಗೀತೆಗೂ ಗೀತಾಚಾರ್ಯನಿಗೂ ಇರುವ ಏಕತೆಯನ್ನು ಗಮನಿಸಬೇಕು.

‘ಜೀವನವನ್ನು ಯುದ್ಧವನ್ನಾಗಿ ಸ್ವೀಕರಿಸೋಣ. ಆದರೆ ಮಹಾಭಾರತದಲ್ಲಿ ಯುದ್ಧ ನಡೆದದ್ದು ಕೌರವ ಮತ್ತು ಪಾಂಡವರ ಮಧ್ಯೆ; ಧರ್ಮ ಮತ್ತು ಅಧರ್ಮಗಳ ನಡುವೆಯಷ್ಟೆ. ನಮ್ಮ ಜೀವನಯುದ್ಧ ಯಾರ ವಿರುದ್ಧ? ನಾವು ಕೌರವರೋ? ಅಥವಾ ಪಾಂಡವರೋ? ನಮ್ಮದು ಧರ್ಮಪಕ್ಷವೋ? ಅಧರ್ಮಪಕ್ಷವೋ?’ – ಹೀಗೂ ನಮ್ಮಲ್ಲಿ ಪ್ರಶ್ನೆಗಳು ಹುಟ್ಟಿಕೊಳ್ಳಬಹುದು. ಇದಕ್ಕೆ ಗೀತೆಯ ಉಪದೇಶ: ಕೌರವರು–ಪಾಂಡವರು ಎಲ್ಲೋ ಹೊರಗೆ ಇಲ್ಲ; ನಿನ್ನಲ್ಲಿಯೇ ಇದ್ದು ಕದನ ಮಾಡುತ್ತಿದ್ದಾರೆ. ಹೀಗೆಯೇ ಧರ್ಮಾಧರ್ಮಗಳೂ ನಿನ್ನ ಅಂತರಂಗದಲ್ಲಿಯೇ ಹಗರಣ ಮಾಡುತ್ತಿವೆ. ಹೀಗಾಗಿ ಯಾರನ್ನು ಗೆಲ್ಲಿಸಬೇಕು, ಯಾವುದನ್ನು ಮಣಿಸಬೇಕು – ಎಂಬುದು ನಿನ್ನ ಬಲ, ಬುದ್ಧಿ, ತಂತ್ರ, ನಡೆ–ನುಡಿಗಳನ್ನೇ ಅವಲಂಬಿಸಿದೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT