ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಧವ್ಯಾಸರ ಶಿವಪುರಾಣ ಸಾರ| ಬ್ರಹ್ಮನನ್ನು ಪ್ರಾರ್ಥಿಸಿದ ನಾರದ

ಭಾಗ 80
ಅಕ್ಷರ ಗಾತ್ರ

ವಿಷ್ಣುವಿನ ಸಲಹೆಯಂತೆ ನಾರದಮುನಿ ಶಿವಲಿಂಗದರ್ಶನವನ್ನ ಮಾಡುತ್ತಾ ಶಿವನ ತೀರ್ಥಕ್ಷೇತ್ರ ಸುತ್ತಿದ ವಿಷಯ ಶ್ರೀ ಶಿವಮಹಾ ಪುರಾಣದ ರುದ್ರ ಸಂಹಿತೆಯ ಐದನೇ ಅಧ್ಯಾಯದಲ್ಲಿ ಬರುತ್ತೆ. ನಾರದಮುನಿ ಭೂಪರ್ಯಟನೆ ಮಾಡಿ, ನಾನಾವಿಧವಾಗಿರುವ, ಭಕ್ತಿ ಮುಕ್ತಿಪ್ರದಾಯಕಗಳಾದ ಶಿವನ ಮೂರ್ತಿಗಳನ್ನು ಸಂದರ್ಶಿಸುವ ಸಂದರ್ಭ ದಲ್ಲಿ, ಶ್ರೀಮತಿ ಸ್ವಯಂವರದಲ್ಲಿ ನಾರದನಿಂದ ಶಾಪಕ್ಕೊಳಗಾದ ಶಿವಗಣಗಳಿಬ್ಬರೂ, ಆತನ ಕಾಲಿಗೆ ನಮಸ್ಕರಿಸಿ, ತಮ್ಮನ್ನು ಶಾಪದಿಂದ ಬಿಡುಗಡೆ ಮಾಡಬೇಕೆಂದು ಕೋರುತ್ತಾರೆ.

ಆಗ ಶಿವಗಣಗಳಿಬ್ಬರನ್ನು ಸಮಾಧಾನಿಸಿದ ನಾರದ, ‘ನಿಮ್ಮ ತಪ್ಪು ಗಳೇನೂ ಇಲ್ಲ. ಶಿವನ ಮಾಯಾ ಇಚ್ಛೆಯಂತೆ ನನಗೆ ಬುದ್ಧಿ ನಷ್ಟವಾಗಿತ್ತು. ಸಂಪೂರ್ಣವಾಗಿ ಮೋಹಪಾಶಕ್ಕೆ ಸಿಕ್ಕಿ ದುಷ್ಟಬುದ್ಧಿಯವನಾಗಿ ನಿಮ್ಮೀ ರ್ವರನ್ನೂ ಶಪಿಸಿಬಿಟ್ಟೆ. ನಾನು ಏನು ನುಡಿದೆನೋ ಆರೀತಿ ಆಗಿಯೇ ಆಗುತ್ತದೆ. ಇದರಲ್ಲಿ ಯಾವ ಸಂಶಯವಿಲ್ಲ. ಆದರೂ ಚಿಂತೆಯಿಲ್ಲ. ನಿಮಗೆ ಶಾಪದಿಂದ ಬಿಡುಗಡೆ ಹೊಂದುವ ಬಗೆಯನ್ನು ಹೇಳುವೆನು. ನನ್ನೀ ತಪ್ಪನ್ನು ಆಗ ಮನ್ನಿಸಿರಿ ಎಂದ ನಾರದ ಮುಂದೆ, ಶಿವಗಣಗಳಿಬ್ಬರೂ ರಾವಣ-ಕುಂಭಕರ್ಣರಾಗಿ ಜನಿಸಿ, ಮುನಿಶ್ರೇಷ್ಠನೊಬ್ಬನ ತೇಜಸ್ಸಿನಿಂದ ರಾಕ್ಷಸತ್ವವನ್ನು ಪಡೆದು, ನೀವೀರ್ವರೂ ವಿಭವದಿಂದ ಕೂಡಿದವರೂ ಬಲಿಷ್ಠರೂ ಪ್ರತಾಪಶಾಲಿಗಳೂ ಆಗುವಿರಿ. ಎಲ್ಲ ಬ್ರಹ್ಮಾಂಡಗಳಿಗೂ ಅಧಿಪತಿಗಳಾಗಿ, ಶಿವಭಕ್ತರಾಗಿ, ಜಿತೇಂದ್ರಿಯರಾಗಿಯೂ ಇರುವಿರಿ. ಶಿವನ ಬೇರೊಂದು ರೂಪವನ್ನು ಧರಿಸಿದವನಿಂದಲೇ ಹತವಾದ ನಂತರ ನಿಮ್ಮ ಪೂರ್ವಜನ್ಮಕ್ಕೆ ಮತ್ತೆ ತೆರಳುವಿರಿ’ ಎಂದು ನಾರದ ಭರವಸೆ ನೀಡುತ್ತಾನೆ.

ನಂತರ ನಾರದಮುನಿಯು ಎಲ್ಲ ಕ್ಷೇತ್ರಗಳಿಗಿಂತಲೂ ಮಿಗಿಲಾದ, ಶಿವನಿಗೆ ಇಷ್ಟವಾದ ಕಾಶಿಗೆ ಹೋಗಿ ವಿಶ್ವೇಶ್ವರನನ್ನು ಪೂಜಿಸಿ, ಒಳ್ಳೆಯ ಬುದ್ಧಿ ಪಡೆಯುತ್ತಾನೆ. ನಂತರ ಸವಿವರವಾಗಿ ಶಿವತತ್ತ್ವವನ್ನು ತಿಳಿಯಬೇಕೆಂದು ಬ್ರಹ್ಮಲೋಕಕ್ಕೆ ಹೋಗಿ ‘ಓ ಬ್ರಹ್ಮದೇವ, ನೀನು ಪರಬ್ರಹ್ಮಸ್ವರೂಪವನ್ನು ತಿಳಿದವನು. ಜಗದೊಡೆಯನು ನೀನು. ನಿನ್ನ ಅನುಗ್ರಹದಿಂದ ಶ್ರೇಷ್ಠವಾದ ವಿಷ್ಣುವಿನ ಮಾಹಾತ್ಮ್ಯವೆಲ್ಲವನ್ನೂ ನಾನು ತಿಳಿದುಕೊಂಡುದಲ್ಲದೆ, ಭಕ್ತಿಮಾರ್ಗವನ್ನೂ ಜ್ಞಾನಮಾರ್ಗವನ್ನೂ ಕಷ್ಟ ಸಾಧ್ಯವಾದ ತಪಃಕ್ರಮವನ್ನೂ ದಾನಮಾಡುವ ಬಗೆಯನ್ನೂ ತೀರ್ಥ ಯಾತ್ರಾಕ್ರಮವನ್ನೂ ಕೇಳಿ ತಿಳಿದುಕೊಂಡಿದ್ದೇನೆ. ಆದರೆ ಶಿವತತ್ತ್ವವನ್ನು ನಾನು ತಿಳಿದಿಲ್ಲ. ಆದುದರಿಂದ ಶಿವನನ್ನು ಪೂಜಿಸುವ ಬಗೆಯನ್ನೂ ಮತ್ತು ಅವನ ನಾನಾವಿಧವಾದ ಚರಿತ್ರವನ್ನೂ ನನಗೆ ತಿಳಿಸು’ ಎಂದು ಕೋರುತ್ತಾನೆ.

‘ಎಲೈ ತಂದೆಯೇ, ನಿರ್ಗುಣನಾದ ಆ ಶಿವನು, ಸಗುಣನಾದ ಬಗೆ ಹೇಗೆ? ಶಿವನ ಮಾಯೆಯಿಂದ ಮೋಹಿತನಾದ ನಾನು ಶಿವತತ್ತ್ವವನ್ನು ತಿಳಿಯಲಾರೆ. ಆ ಶಂಭುವು ಈ ಸೃಷ್ಟಿಯಾಗುವ ಮೊದಲು ಯಾವ ಸ್ವರೂಪದಲ್ಲಿದ್ದ? ಸೃಷ್ಟಿಯಾದ ನಂತರ ಯಾವ ರೀತಿ ವಿಹರಿಸುತ್ತಿ ರುವನು. ಸೃಷ್ಟಿಯ ಅನಂತರದಲ್ಲಿಯೂ ಎಂತಿರುವನು? ಲೋಕಕ್ಕೆಲ್ಲಾ ಮಂಗಳವನ್ನುಂಟುಮಾಡುವ ಆ ಶಂಕರನು ಪ್ರಸನ್ನನಾಗುವ ಬಗೆಯಾ ದರೂ ಹೇಗೆ? ಸಂತುಷ್ಟನಾದ ಆ ಮಹೇಶ್ವರ ತನ್ನ ಭಕ್ತರಿಗೂ ಇತರರಿಗೂ ಯಾವ ಫಲವನ್ನು ನೀಡುತ್ತಾನೆ? ತ್ರಿಮೂರ್ತಿಗಳು ಶಿವನ ಅಂಶದಿಂದ ಹುಟ್ಟಿದವರು. ಅವರಲ್ಲಿ ಪೂರ್ಣಾಂಶದಿಂದ ಹುಟ್ಟಿದ ಆ ಮಹೇಶ್ವರನು ಪರಮಾತ್ಮನಾದ ಎರಡನೆಯ ಶಿವನೇ ಆಗಿರುವನು. ಆ ಶಿವನು ಜಗತ್ತಿಗೆ ಹೇಗೆ ಆವಿರ್ಭವಿಸಿದನೆಂಬುದನ್ನ ವಿವರವಾಗಿ ತಿಳಿಸು.’

‘ಹಾಗೆಯೇ, ಪಾರ್ವತಿ ಜನ್ಮ ತಾಳಿದ್ದು, ಮತ್ತು ಪಾರ್ವತಿ-ಪರಮೇಶ್ವರರ ವಿವಾಹ ಹೇಗೆ ನಡೆಯಿತು ಎಂಬುದನ್ನೂ ತಿಳಿಸು. ಅವರೀರ್ವರ ದಾಂಪತ್ ಜೀವನವನ್ನೂ ಲೀಲಾವಿಲಾಸಗಳನ್ನೂ ನೀನು ಹೇಳಬೇಕು. ಆ ಶಿವನ ಉತ್ಪತ್ತಿಯನ್ನೂ, ಮಂಗಳಸ್ವರೂಪಳಾದ ಪಾರ್ವತಿಯನ್ನು ಮದುವೆಯಾಗಿದ್ದನ್ನೂ, ಕುಮಾರಸ್ವಾಮಿಯ ಜನನವನ್ನೂ ನನಗೆ ವಿಸ್ತಾರವಾಗಿ ತಿಳಿಸು. ನಾನು ಈ ವಿಷಯವನ್ನು ಹಿಂದೆಯೇ ಅನೇಕರಿಂದ ಕೇಳಿ ತಿಳಿದಿದ್ದರೂ, ನನಗೆ ತೃಪ್ತಿಯಿಲ್ಲವಾಗಿದೆ. ಆದುದರಿಂದ ನಿನ್ನ ಮೊರೆಹೊಕ್ಕಿದ್ದೇನೆ. ನನ್ನ ಮೇಲೆ ದಯೆಯನ್ನಿಟ್ಟು ಹೇಳು’ ಎಂದು ನಾರದ ಬ್ರಹ್ಮನಲ್ಲಿ ಪ್ರಾರ್ಥಿಸಿದ. ಇದಕ್ಕೆ ಬ್ರಹ್ಮನು ನಾರದನಿಗೆ ಉತ್ತರ ಹೇಳಲು ಪ್ರಾರಂಭಿಸಿದ ಎಂಬಲ್ಲಿಗೆ ಶ್ರೀ ಶಿವಮಹಾಪುರಾಣದಲ್ಲಿ, ಎರಡನೆಯದಾದ ರುದ್ರಸಂಹಿತೆಯ, ಮೊದಲನೆ ಖಂಡವಾದ ಸೃಷ್ಟಿಖಂಡದಲ್ಲಿ ನಾರದ ಪ್ರಶ್ನವರ್ಣನ ಎಂಬ ಐದನೆ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT