ಸೋಮವಾರ, ಸೆಪ್ಟೆಂಬರ್ 21, 2020
25 °C
ಕಾಂಗ್ರೆಸ್‌ ಸದಸ್ಯರು 1964ರಲ್ಲಿ ಬಯಸಿದ್ದನ್ನು ಮೋದಿ ಸಾಧ್ಯವಾಗಿಸಿದ್ದಾರೆ

ಪರಿಹಾರ ಕಾಣದ್ದನ್ನು ಪರಿಹರಿಸಿದ ಜೋಡಿ!

ಎ. ಸೂರ್ಯ ಪ್ರಕಾಶ್ Updated:

ಅಕ್ಷರ ಗಾತ್ರ : | |

ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ, ಆ ರಾಜ್ಯವನ್ನು ಭಾರತದ ಜೊತೆ ಸಂಪೂರ್ಣವಾಗಿ ವಿಲೀನ ಮಾಡುವ ಮಹತ್ವದ ತೀರ್ಮಾನವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ನಂತರ ಕಾಂಗ್ರೆಸ್ಸಿನ ನಾಯಕರೆಲ್ಲ ಗಾಬರಿಗೊಂಡಂತೆ ಕಾಣುತ್ತಿದೆ.

ಕಾಂಗ್ರೆಸ್ಸಿನ ವರಿಷ್ಠರ ಹಂತದಲ್ಲಿ ಉಂಟಾಗಿರುವ ಗೊಂದಲವು ಆ ಪಕ್ಷ ಈಗ ‘ರಾಷ್ಟ್ರೀಯ’ವಾಗಿ, ‘ರಾಷ್ಟ್ರೀಯವಾದಿ’ಯಾಗಿ ಉಳಿದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದರೆ ಆ ಪಕ್ಷ ಹಿಂದೆ ಹೀಗಿರಲಿಲ್ಲ. ಗಟ್ಟಿ ನಿಲುವಿನ, ದೇಶಭಕ್ತ ನಾಯಕರು ಪಕ್ಷದಲ್ಲಿದ್ದರು. ಹೀಗೆ ಹೇಳಲು ಸಾಕಾಗುವಷ್ಟು ಆಧಾರಗಳು ನಮ್ಮ ಸಂಸದೀಯ ದಾಖಲೆಗಳಲ್ಲಿ ದೊರೆಯುತ್ತವೆ. 370ನೇ ವಿಧಿ ರದ್ದತಿಯ ಬಗ್ಗೆ, ಕಾಂಗ್ರೆಸ್‌ ಪಕ್ಷ ಧೈರ್ಯ ತೋರದಿದ್ದರಿಂದ ತಮಗಾಗಿರುವ ಭ್ರಮನಿರಸನದ ಬಗ್ಗೆ ಪಕ್ಷದ ಹಿರಿಯ ನಾಯಕ, ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಸೇರಿದಂತೆ ಹಲವರು 1964ರ ಸೆಪ್ಟೆಂಬರ್‌ 11ರಂದು ಲೋಕಸಭೆಯಲ್ಲಿ ಹೇಳಿದ್ದ ಮಾತುಗಳು ಇಲ್ಲಿವೆ.

ಹನುಮಂತಯ್ಯ (ಕಾಂಗ್ರೆಸ್): ಕಾಶ್ಮೀರದ ಸಂಸದರು ಮಾತ್ರವೇ ಅಲ್ಲ, ಈ ಸದನದ ಬಲಭಾಗದಿಂದ ಎಡತುದಿಯವರೆಗಿನ ಎಲ್ಲ ಸದಸ್ಯರು, ಈ ಮಸೂದೆಯು (370ನೇ ವಿಧಿ ರದ್ದುಪಡಿಸುವ ಮಸೂದೆ) ಕಾನೂನಾಗಿ ಹೊರಬರಬೇಕು ಎಂದು ಬಯಸುತ್ತಿದ್ದಾರೆ. ಇದರ ವಿರುದ್ಧವಾಗಿ ನಡೆಯುವುದು ಅಥವಾ ಸದನದ ಈ ಒಕ್ಕೊರಲ ಅಭಿಪ್ರಾಯದ ವಿರುದ್ಧ ಏನಾದರೂ ಹೇಳುವುದು ಸಾಂವಿಧಾನಿಕ ಜವಾಬ್ದಾರಿಯಿಂದ ಜಾಣತನದಿಂದ ತಪ್ಪಿಸಿಕೊಂಡಂತೆ. ಸಂಪೂರ್ಣ ಏಕತೆಗೆ 370ನೇ ವಿಧಿಯು ಅಡ್ಡಿಯಾಗಿ ನಿಂತಿದೆ.

ಜಗತ್ತು ಏನು ಹೇಳಬಹುದು ಎಂಬ ಬಗ್ಗೆ ಸರ್ಕಾರಕ್ಕೆ ಇದ್ದ ಭೀತಿಯ ಬಗ್ಗೆಯೂ ಹನುಮಂತಯ್ಯ ಮಾತನಾಡಿದ್ದರು. ಪಾಶ್ಚಿಮಾತ್ಯ ರಾಷ್ಟ್ರ
ಗಳನ್ನು ಗುರಿಯಾಗಿಸಿ ಅವರು, ‘ಆ ದೇಶಗಳು ನಮ್ಮ ಪ್ರಭುಗಳಲ್ಲ. ಈ ವಿಚಾರದಲ್ಲಿ ನಮಗೆ ಆದೇಶಿಸಬೇಕಿರುವವರು ಅವರಲ್ಲ’ ಎಂದಿದ್ದರು. ‘ವಿಶ್ವ ವ್ಯಕ್ತಪಡಿಸುವ ಅಭಿಪ್ರಾಯದ ಬಗ್ಗೆ ಭಯ ಬೇಡ’ ಎಂದು ಸರ್ಕಾರಕ್ಕೆ ಹೇಳಿದ್ದರು. ಕೀಳರಿಮೆ ತೊಡೆದುಹಾಕಿ ಎಂದಿದ್ದರು. ‘ನಾವು ಬದ್ಧತೆ ಮತ್ತು ಧೈರ್ಯವನ್ನು ಸಮಾನವಾಗಿ ತೋರಲು, ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಇದೊಂದು ಅವಕಾಶ’ ಎಂದು ಹೇಳಿದ್ದರು.

ವಿಶೇಷ ಸ್ಥಾನಮಾನವನ್ನು ರದ್ದು ಮಾಡುವಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತೋರಿಸಿದ ಸದ್ದುಗದ್ದಲವಿಲ್ಲದ ಬದ್ಧತೆ, ಜಗತ್ತಿನ ಹಲವು ದೇಶಗಳು ಈ ನಿರ್ಧಾರಕ್ಕೆ ವ್ಯಕ್ತಪಡಿಸಿದ ಪರೋಕ್ಷ ಬೆಂಬಲ ಗಮನಿಸಿದರೆ ಮೋದಿ– ಶಾ ಅವರು ಹನುಮಂತಯ್ಯ ತಮ್ಮ ಪಕ್ಷದವರಿಗೆ 55 ವರ್ಷಗಳ ಹಿಂದೆ ನೀಡಿದ್ದ ಸಲಹೆಯನ್ನು ಅನುಸರಿಸಿದ್ದಾರೆ ಎಂದು ಅನಿಸುತ್ತದೆ.

ಹನುಮಂತಯ್ಯ ಅವರು ಅಂದು ಆಡಿದ್ದ ಮಾತುಗಳಲ್ಲಿ ಕೆಲವು, 2019ರ ಆಗಸ್ಟ್‌ 5ರಂದು ಆಡಿದವುಗಳೇನೋ ಎಂದನಿಸುವಂತೆ ಇವೆ! ‘ಇದು ಈ ಸದನದ ಒಕ್ಕೊರಲ ಅಭಿಪ್ರಾಯ (370ನೇ ವಿಧಿ ರದ್ದುಗೊಳಿಸುವುದು), ಇದನ್ನು ಇಡೀ ದೇಶ ಮೆಚ್ಚುತ್ತದೆ. ಹಾಗಾಗಿ, ಸರ್ಕಾರವು ನಿರ್ಣಾಯಕ ನಿಲುವು ತಾಳಬೇಕು ಎಂದು ನಾನು ಬಯಸುವೆ...’ ಎಂದಿದ್ದರು.

ಮಾತು ಮುಗಿಸುವಾಗ ಹನುಮಂತಯ್ಯ ಅವರು ಪ್ರಕಾಶವೀರ ಶಾಸ್ತ್ರಿ ಅವರಿಗೆ ಧನ್ಯವಾದ ಸಮರ್ಪಿಸಿದರು. 370ನೇ ವಿಧಿಯನ್ನು ರದ್ದುಮಾಡುವ ಖಾಸಗಿ ಮಸೂದೆಯನ್ನು ಶಾಸ್ತ್ರಿ ಮಂಡಿಸಿದ್ದರು. ಇದಕ್ಕೆ ಎಲ್ಲ ಪಕ್ಷಗಳ ಸದಸ್ಯರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. 370ನೇ ವಿಧಿ ರದ್ದುಪಡಿಸುವಂತೆ ಕಾಂಗ್ರೆಸ್ಸಿನ ಅನೇಕ ಹಿರಿಯರು ಮಸೂದೆ ಕುರಿತ ಚರ್ಚೆಯ ವೇಳೆ ಬಲವಾಗಿ
ಆಗ್ರಹಿಸಿದ್ದರು.

ಭಾಗವತ್ ಝಾ ಆಜಾದ್ (ಕಾಂಗ್ರೆಸ್): ಕಾಶ್ಮೀರದ ವಿಚಾರದಲ್ಲಿ ಸರ್ಕಾರವು ತನ್ನ ನೀತಿಯನ್ನು ನಿರ್ಭಯವಾಗಿ ಘೋಷಿಸಬೇಕು. ಸಂಪೂರ್ಣ ವಿಲೀನವು ಜನರ ಬಯಕೆ. ಜನರ ಇಚ್ಛೆಗೆ ವಿರುದ್ಧವಾಗಿ ಯಾವುದೇ ಸರ್ಕಾರ, ಯಾವುದೇ ಪಕ್ಷ ಸಾಗಲು ಸಾಧ್ಯವಿಲ್ಲ.

ಜಮ್ಮು ಮತ್ತು ಕಾಶ್ಮೀರವು ಭಾರತದ ಜೊತೆ ವಿಲೀನ ಆದ ನಂತರ, ಅಲ್ಲಿಗೆ ಪಾಕಿಸ್ತಾನದ ಸೈನಿಕರು ನುಗ್ಗಿದ್ದಾರೆ ಎಂಬ ದೂರನ್ನು ವಿಶ್ವಸಂಸ್ಥೆಗೆ ಸಲ್ಲಿಸಿದ್ದಕ್ಕೆ ರಾಮ್‌ ಸಹಾಯ್‌ ಪಾಂಡೆ (ಕಾಂಗ್ರೆಸ್) ಅವರು, ಜವಾಹರಲಾಲ್‌ ನೆಹರೂ ಅವರನ್ನು ದೂಷಿಸಿದರು. ವಿಶ್ವಸಂಸ್ಥೆಯ ಮಧ್ಯಪ್ರವೇಶ ಕೋರುವ ಮೂಲಕ, ಅದು ನೀಡಿದ ಕದನ ವಿರಾಮ ಆದೇಶ ಒಪ್ಪಿಕೊಳ್ಳುವ ಮೂಲಕ ನೆಹರೂ ಅವರು ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡ ಪ್ರದೇಶಗಳನ್ನು ಮರುವಶಪಡಿಸಿಕೊಳ್ಳುವ ಉತ್ತಮ ಅವಕಾಶ ಹಾಳುಮಾಡಿದರು ಎಂದಿದ್ದರು ಪಾಂಡೆ. ಈ ಪ್ರದೇಶಗಳನ್ನು ಮರುವಶಪಡಿಸಿಕೊಳ್ಳಲು ಎರಡು ದಿನಗಳ ಅವಕಾಶ ಕೊಡಿ ಎಂದು ಆಗ ಸೈನಿಕ ಕಾರ್ಯಾಚರಣೆ ನೋಡಿಕೊಳ್ಳುತ್ತಿದ್ದ ಜನರಲ್ ತಿಮ್ಮಯ್ಯ ಅವರು ಸರ್ಕಾರದ ಬಳಿ ಕೇಳಿಕೊಂಡಿದ್ದರು. ಆದರೆ, ನೆಹರೂ ಅವರ ನಡೆ ಹಾಗೂ ಕದನ ವಿರಾಮವು ಸೇನೆಯ ಯೋಜನೆಯನ್ನು ಹಾಳುಗೆಡವಿತು.

ಗೋಪಾಲ್ ದತ್ತ ಮೆಂಗಿ (ಕಾಂಗ್ರೆಸ್): ನಾನು ಈ ಮಸೂದೆಯನ್ನು ಬೆಂಬಲಿಸುವೆ. ಜಮ್ಮು ಮತ್ತು ಕಾಶ್ಮೀರವು ದೇಶದ ಜೊತೆ ಸಂಪೂರ್ಣವಾಗಿ ವಿಲೀನವಾಗಬೇಕು ಎಂದು ದೇಶದೆಲ್ಲೆಡೆ ಜನ ಬಯಸುತ್ತಾರೆ.

ಇಂದರ್ ಜೆ. ಮಲ್ಹೋತ್ರಾ (ಕಾಂಗ್ರೆಸ್): 370ನೇ ವಿಧಿಯನ್ನು ಕೈಬಿಡಬೇಕು ಎಂಬುದನ್ನು ನಾನು ಒಪ್ಪುವೆ. ರಾಜ್ಯದ ಜನರಿಗೆ 370ನೇ ವಿಧಿಯ ಜೊತೆ ವಿಶೇಷ ನಂಟೇನೂ ಇಲ್ಲ. ಇದನ್ನು ಎಷ್ಟು ಬೇಗ ಕೈಬಿಡಲಾಗುತ್ತದೋ ನಮಗೆ ಅಷ್ಟು ಸಂತೋಷವಾಗುತ್ತದೆ.

ಈ ಭಾವನೆಯನ್ನು ಎಚ್.ವಿ. ಕಾಮತ್ (ಪಿಎಸ್‌ಪಿ) ಮತ್ತು ರಾಮ ಮನೋಹರ ಲೋಹಿಯಾ (ಸಮಾಜವಾದಿ ಪಕ್ಷ) ಅವರೂ ವ್ಯಕ್ತಪಡಿಸಿದ್ದರು.

ನಿರ್ಣಾಯಕ ಮಾತುಗಳನ್ನು ಆಡಿದವರು ಪಕ್ಷೇತರ ಸದಸ್ಯ ಡಿ.ಸಿ. ಶರ್ಮಾ. 370ನೇ ವಿಧಿಯು ಸಂವಿಧಾನವನ್ನು ವಿರೂಪಗೊಳಿಸಿದೆ ಎಂದು ಅವರು ಹೇಳಿದ್ದರು. ಈ ವಿಧಿಯನ್ನು ತಕ್ಷಣವೇ ಕಿತ್ತೆಸೆಯಬೇಕು ಎಂದಿದ್ದರು.

ಶರ್ಮಾ ಅವರು ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ 1964ರಲ್ಲಿ ನೀಡಿದ್ದ ಸಲಹೆ, ಇಂತಹ ಸಂಕೀರ್ಣ ವಿಚಾರಗಳನ್ನು ನಿಭಾಯಿಸುವಲ್ಲಿ ಇಂದಿನ ಸರ್ಕಾರ ಹೊಂದಿರುವ ಸ್ಪಷ್ಟತೆ, ಈ ವಿಚಾರವನ್ನು ಮೋದಿ ಮತ್ತು ಶಾ ಅವರು ನಿಖರವಾಗಿ ನಿಭಾಯಿಸಿದ ಬಗೆಯನ್ನು ಗಮನಿಸಿದರೆ, ದೇಶದ ಏಕತೆ ಹಾಗೂ ಭದ್ರತೆಗೆ ಸಂಬಂಧಿಸಿದ ವಿಚಾರಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಇಂದಿನ ಆಡಳಿತಾರೂಢರ ನಡುವೆ ಇರುವ ಅಜಗಜ ಅಂತರ ಗೊತ್ತಾಗುತ್ತದೆ. ಇನ್ನೊಂದು ಉದಾಹರಣೆ ನೋಡೋಣ:

ಶರ್ಮಾ: ಪರಿಹಾರ ಕಾಣದವುಗಳನ್ನು ಪರಿಹರಿಸುವಲ್ಲಿ ಪಾಂಡಿತ್ಯ ಅಡಗಿದೆ. ಮುತ್ಸದ್ದಿತನ ಅಂದರೆ ಎದೆಗಾರಿಕೆ, ದೃಢತೆ ಮತ್ತು ನಿರ್ಣಾಯಕ ಗುಣಗಳನ್ನು ಪ್ರದರ್ಶಿಸುವುದು. ಆದರೆ ನನ್ನ ದೇಶಕ್ಕೆ ಏನಾಗಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಪರಿಹಾರ ಕಾಣದವುಗಳಿಗೆ ಪರಿಹಾರ ಕಾಣಿಸುವ ಬದಲು, ಪರಿಹರಿಸಿರುವುದನ್ನು ಪುನಃ ಸಮಸ್ಯೆಯಾಗಿ ಪರಿವರ್ತಿಸುತ್ತಿದ್ದೇವೆ.

‘370ನೇ ವಿಧಿ ಎಂಬುದು ಗೋಡೆಯಲ್ಲ. ಇದು ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ನಡುವೆ ಇರುವ ದೊಡ್ಡ ಪರ್ವತ. ಇದನ್ನು ಸದಾಶಯ, ದೃಢತೆ ಎಂಬ ಡೈನಮೈಟ್‌ ಬಳಸಿ ಸ್ಫೋಟಿಸಬೇಕು. ಭಾರತದ ಪಾಪನಾಶಿನಿ ಮಾರ್ಗ ಅದು. ಜಮ್ಮು ಮತ್ತು ಕಾಶ್ಮೀರದ ಜನರ ಒಳಿತು ಹಾಗೂ ಕಲ್ಯಾಣದ ಮಾರ್ಗ ಕೂಡ ಅದೇ.’

ಮೋದಿ ಅವರ ಕಾರಣದಿಂದಾಗಿ ಭಾರತ ಇಂದು ಕೀಳರಿಮೆ ಹೊಂದಿಲ್ಲ. ಕಾಂಗ್ರೆಸ್ ಸರ್ಕಾರವು 1964ರಲ್ಲಿ ತೋರಬೇಕು ಎಂದು ಅಂದಿನ ಸಂಸದರು ಬಯಸಿದ್ದ ದೃಢತೆ, ನಿರ್ಣಾಯಕ ಮನೋಭಾವವನ್ನು ಮೋದಿ ಮತ್ತು ಶಾ ಜೋಡಿ ಪ್ರದರ್ಶಿಸಿದೆ– ಪರಿಹಾರ ಕಾಣದ್ದನ್ನು ಪರಿಹರಿಸುವುದಕ್ಕಾಗಿ!

ಲೇಖಕ: ಪ್ರಸಾರ ಭಾರತಿ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು