ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ– ನಮಸ್ಕಾರ: ಭಾಗವತ್ ವಿವೇಕದ ಮಾತು ಆಲಿಸಿ

ಸಾಮಾಜಿಕ ಸಂಘರ್ಷ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ, ಆರ್‌ಎಸ್‌ಎಸ್‌ ಮುಖ್ಯಸ್ಥರ ಮಾತು ಗಮನಾರ್ಹ
Last Updated 6 ಜೂನ್ 2022, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್ ಭಾಗವತ್ ಅವರು ಹಿಂದೂ ಗಳನ್ನು ಉದ್ದೇಶಿಸಿ ವಿವೇಕದ ಹಾಗೂ ಎಚ್ಚರಿಕೆಯ ಮಾತುಗಳನ್ನು ಬಹಳ ಸೂಕ್ತವಾದ ಹೊತ್ತಿನಲ್ಲಿ ಆಡಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಕೋಮು ಭಾವನೆಯು ಹಿಂದೆಂದೂ ಇಲ್ಲದ ರೀತಿಯಲ್ಲಿ ಕೆರಳುತ್ತಿದೆ. ಹಿಂದೂ ಬಹುಸಂಖ್ಯಾತರಲ್ಲಿನ ಒಂದು ವರ್ಗವು ಇತಿಹಾಸದಲ್ಲಿ ಆಗಿರುವ ತಪ್ಪುಗಳನ್ನು ನ್ಯಾಯಾಲಯಗಳು, ಆಡಳಿ ತಾತ್ಮಕ ಪ್ರಕ್ರಿಯೆಗಳು ಮತ್ತು ಪ್ರತಿಭಟನೆಗಳ ಮೂಲಕ ಸರಿಪಡಿಸಲು ಮುಂದಾಗಿದೆ. ವಾರಾಣಸಿಯ ಜ್ಞಾನವಾಪಿ ಮಸೀದಿ ಹಾಗೂ ಮಥುರಾದಲ್ಲಿನ ಶ್ರೀಕೃಷ್ಣನ ಜನ್ಮ ಸ್ಥಾನದ ಪಕ್ಕದ ಮಸೀದಿಯ ವಿಚಾರದಲ್ಲಿ ಇಂತಹ ಬೆಳವಣಿಗೆ ಕಂಡುಬಂದಿದೆ. ಹಿಂದಿನ ಇಸ್ಲಾಮಿಕ್ ಆಡಳಿತಗಾರರ ತಪ್ಪುಗಳನ್ನು ಅನಾವರಣಗೊಳಿಸಲು, ತಮ್ಮ ಪೂಜಾ ಸ್ಥಳಗಳ ಮೇಲೆ ಹೊಸದಾಗಿ ಹಕ್ಕು ಸ್ಥಾಪಿಸಲು ಹಿಂದೂಗಳು ಮುಂದಾದ ಹೊತ್ತಿನಲ್ಲಿ ಹಲವು ರಾಜ್ಯಗಳಲ್ಲಿ ಘರ್ಷಣೆಗಳು ನಡೆದಿವೆ.

ಈ ಎಲ್ಲ ಬೆಳವಣಿಗೆಗಳ ಕಾರಣದಿಂದಾಗಿ ಮಾಧ್ಯಮ ಗಳಲ್ಲಿ, ಅದರಲ್ಲೂ ಮುಖ್ಯವಾಗಿ ಟಿ.ವಿ. ವಾಹಿನಿಗಳಲ್ಲಿ ಎಗ್ಗಿಲ್ಲದ ಚರ್ಚೆಗಳು ನಡೆಯುತ್ತಿವೆ. ಚರ್ಚೆಗಳಲ್ಲಿ ಭಾಗಿಯಾದ ಕೆಲವರು ಬೇಜವಾಬ್ದಾರಿಯಿಂದ ಹೇಳಿಕೆ ಗಳನ್ನು ನೀಡಿದ್ದೂ ಆಗಿದೆ.

ಟಿ.ವಿ. ವಾಹಿನಿಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಪಾಲ್ಗೊಳ್ಳುವವರು ಮಾಡುವ ಕಿವಿಗಡಚಿಕ್ಕುವ ಮಾತಿನ ದಾಳಿ, ಪ್ರತಿದಾಳಿಗಳನ್ನು ಗಮನಿಸಿದರೆ, ಕಾನೂನಿಗೆ ಅನುಗುಣವಾಗಿ ನಡೆಯಬೇಕಿರುವ ಆಡಳಿತ ವ್ಯವಸ್ಥೆ ಕುಸಿದುಬಿದ್ದಿದೆಯೇನೋ ಅನ್ನಿಸುತ್ತದೆ. ಈ ಚರ್ಚೆಗಳಲ್ಲಿ ನಾಗರಿಕ ಪ್ರಜ್ಞೆಯೇ ಕಾಣಿಸುತ್ತಿಲ್ಲ. ಅಷ್ಟೇ ಅಲ್ಲ, ಬೀದಿಗಳಲ್ಲಿ ಘರ್ಷಣೆಯನ್ನು ಪ್ರಚೋದಿಸುವ ಪ್ರಯತ್ನಗಳೂ ಅಲ್ಲಿವೆ. ಟಿ.ವಿ. ವಾಹಿನಿಗಳಲ್ಲಿ ನಡೆದ ಚರ್ಚೆಗಳ ವಿಚಾರವಾಗಿ ಕಾನ್ಪುರ ಹಾಗೂ ಇತರ ಕೆಲವು ನಗರಗಳಲ್ಲಿ ಆಗಿರುವ ಸಂಘರ್ಷವನ್ನು ಕಂಡಾಗ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಭಾರತದ ಬಹುತ್ವ ಹಾಗೂ ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಸಂಪೂರ್ಣ ಅಸ್ತವ್ಯಸ್ತವೂ ಅನಿಯಂತ್ರಿತವೂ ಆಗಿರುವುದನ್ನು ಗಮನಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ನ್ಯಾಯಾಲಯಗಳು ಮಧ್ಯಪ್ರವೇಶಿಸಬೇಕು. ಈಗಿನ ಸಂಘರ್ಷಮಯ ವಾತಾ ವರಣವು ಕೈಮೀರದಂತೆ ನೋಡಿಕೊಳ್ಳಬೇಕು.

ಭಾಗವತ್ ಅವರು ಸರಿಯಾದ ಹೊತ್ತಿನಲ್ಲಿ ಎಚ್ಚರಿಕೆಯ ಮಾತು ಆಡಿದ್ದಾರೆ. ‘ಪ್ರತೀ ಮಸೀದಿ ಯಲ್ಲಿಯೂ ಶಿವಲಿಂಗ ಪತ್ತೆ ಮಾಡಲು ಏಕೆ ಮುಂದಾಗ ಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ. ಈ ವಿಚಾರಗಳಿಗೆ ಸಂಬಂಧಿಸಿದಂತೆ ಇನ್ನೊಂದು ಅಭಿಯಾನ ಆರಂಭಿಸುವ ಒಲವು ಸಂಘಕ್ಕೆ ಇಲ್ಲ ಎಂದು ಅವರು ಆರ್‌ಎಸ್‌ಎಸ್‌ ತರಬೇತಿ ಪಡೆಯುತ್ತಿರುವವರನ್ನು ಉದ್ದೇಶಿಸಿ ಹೇಳಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಸಾಮಾಜಿಕ ಸಂಘರ್ಷ ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಭಾಗವತ್ ಅವರ ಮಾತುಗಳನ್ನು ಗಮನಿಸಬೇಕಿರುವುದು ಮಹತ್ವದ್ದು. ಜ್ಞಾನವಾಪಿಯ ಇತಿಹಾಸವನ್ನು ಈಗ ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಇಂದಿನ ಮುಸ್ಲಿಮರಾಗಲೀ ಹಿಂದೂಗಳಾಗಲೀ ಈ ಐತಿಹಾಸಿಕ ಸತ್ಯಕ್ಕೆ ಹೊಣೆಗಾರರಲ್ಲ. ಆಕ್ರಮಣಕಾರರ ಮೂಲಕ ಇಸ್ಲಾಂ ಭಾರತಕ್ಕೆ ಬಂತು, ಹಿಂದೂಗಳ ನೈತಿಕ ಸ್ಥೈರ್ಯ ಮುರಿಯುವ ಉದ್ದೇಶದಿಂದ ದೇವಸ್ಥಾನಗಳನ್ನು ನಾಶಪಡಿಸಲಾಯಿತು. ನಿಜ, ಇದು ನಮ್ಮ ಇತಿಹಾಸದ ಭಾಗ. ಆದರೆ, ವಿಷಯವನ್ನು ಹಿಗ್ಗಿಸಿ ಪ್ರತೀ ಮಸೀದಿಯಲ್ಲಿಯೂ ಒಂದು ಶಿವಲಿಂಗ ಅರಸುವ ಕೆಲಸ ಶುರುಮಾಡುವುದು ಏಕೆ?

ಪ್ರತಿದಿನವೂ ಒಂದು ಹೊಸ ವಿಚಾರವನ್ನು ಮೇಲಕ್ಕೆ ತರುವ ಕೆಲಸ ಬೇಡವೆಂದು ಭಾಗವತ್ ಹೇಳಿದ್ದಾರೆ. ನ್ಯಾಯಾಲಯದ ಕದ ತಟ್ಟುವವರು ಅದು ನೀಡುವ ಆದೇಶವನ್ನು ಒಪ್ಪಿಕೊಳ್ಳಬೇಕು. ದೇಶದ ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆ ಪವಿತ್ರ. ಅವುಗಳಿಗೆ ಗೌರವ ನೀಡಬೇಕು.

ಸಾಮಾಜಿಕ ಜಾಲತಾಣಗಳಲ್ಲಿನ ಕೆಲವು ‍ಪೋಸ್ಟ್‌ಗಳ, ಟಿ.ವಿ. ವಾಹಿನಿಗಳಲ್ಲಿನ ಕೆಲವು ಚರ್ಚೆಗಳಲ್ಲಿನ ಅಶ್ಲೀಲ ಹಾಗೂ ನಿಂದನಾತ್ಮಕ ಧಾಟಿಯನ್ನು ಗಮನಿಸಿದರೆ, ಪೋಸ್ಟ್‌ ಹಾಕುವವರು ಹಾಗೂ ಚರ್ಚೆಗಳಲ್ಲಿ ಪಾಲ್ಗೊಳ್ಳು ವವರಿಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳು ಹಾಗೂ ಪ್ರಚೋದನಕಾರಿ ಮಾತುಗಳನ್ನು ನಿರ್ಬಂಧಿಸುವ ಇತರ ಕಾನೂನುಗಳ ಬಗ್ಗೆ ಅರಿವೇ ಇಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇಂತಹ ವ್ಯಕ್ತಿಗಳ ವಿಚಾರವಾಗಿ ಸರ್ಕಾರ ಏನು ಮಾಡಬೇಕು ಎಂಬುದನ್ನು ದಂಡ ಸಂಹಿತೆಯು ಬಹಳ ಸ್ಪಷ್ಟವಾಗಿ ಹೇಳಿದೆ. ಐಪಿಸಿಯ ಸೆಕ್ಷನ್ 295 (ಎ) ಹೀಗೆ ಹೇಳಿದೆ:

‘ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಹೇಳನ ಮಾಡುವ ಮೂಲಕ ಧಾರ್ಮಿಕ ಭಾವನೆ ಗಳನ್ನು ಕೆರಳಿಸುವ ಉದ್ದೇಶಪೂರ್ವಕ ಹಾಗೂ ಕೆಟ್ಟ ಕೃತ್ಯ: ಯಾವುದೇ ವ್ಯಕ್ತಿಯು ಭಾರತದ ಯಾವುದೇ ವರ್ಗದ ಪ್ರಜೆಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ, ಕೆಟ್ಟ ಕೆಲಸವನ್ನು, ಮಾತಿನ ಮೂಲಕ, ಬರಹದ ಮೂಲಕ, ಸಂಜ್ಞೆಗಳ ಮೂಲಕ, ಚಿತ್ರಗಳ ಮೂಲಕ, ಧರ್ಮವನ್ನು ಅಥವಾ ಧಾರ್ಮಿಕ ನಂಬಿಕೆ ಗಳನ್ನು ಅವಹೇಳನ ಮಾಡಿದರೆ ಅಥವಾ ಅವಹೇಳನ ಮಾಡಲು ಯತ್ನಿಸಿದರೆ, ಆ ವ್ಯಕ್ತಿಗೆ ಗರಿಷ್ಠ ಮೂರು ವರ್ಷಗಳ ಅವಧಿಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು’.

ದೇಶದಲ್ಲಿ ಇಂದು ಟಿ.ವಿ. ವಾಹಿನಿಗಳ ಮೂಲಕ ನಡೆಯುವ ಚರ್ಚೆಗಳಿಗೆ ಯಾವುದೇ ಚೌಕಟ್ಟು ಇಲ್ಲ, ಯಾವ ನಿಯಂತ್ರಣವೂ ಇಲ್ಲ. ದೇಶದಲ್ಲಿನ ಕೋಮು ಸೌಹಾರ್ದ ಕುಸಿಯುವುದಕ್ಕೆ ಈ ಚರ್ಚೆಗಳು ದೊಡ್ಡ ಮಟ್ಟದಲ್ಲಿ ಕಾರಣವಾಗುತ್ತಿವೆ. ಇಂತಹ ಟಿ.ವಿ. ಚರ್ಚೆ ಗಳಲ್ಲಿ ಲಕ್ಷ್ಮಣ ರೇಖೆಯನ್ನು ದಾಟುವ ವ್ಯಕ್ತಿಗಳ ವಿರುದ್ಧ ದಂಡ ಸಂಹಿತೆಯ ಈ ಸೆಕ್ಷನ್‌ ಅನ್ನು ಬಳಸಿ ಪ್ರಕರಣ ದಾಖಲಿಸದೇ ಇದ್ದರೆ ಪರಿಸ್ಥಿತಿ ಕೈಮೀರಿ ಹೋಗಬಹುದು.

ಭಾಗವತ್ ಅವರು ನೀಡಿದ ವಿವೇಚನೆಯುಳ್ಳ ಸಲಹೆಗಳ ನಂತರದಲ್ಲಿ, ಭಾರತೀಯ ಜನತಾ ಪಕ್ಷವು (ಬಿಜೆಪಿ) ಮೊದಲ ದೃಢ ಹೆಜ್ಜೆಯನ್ನು ಇರಿಸಿದೆ. ತನ್ನ ಕಾರ್ಯಕರ್ತರು ಶಿಸ್ತಿನಿಂದ ವರ್ತಿಸುವಂತೆ ಮಾಡುವಲ್ಲಿ ಮೊದಲ ಹೆಜ್ಜೆ ಇದು. ಪಕ್ಷವು ಇಬ್ಬರು ವಕ್ತಾರರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ.

ಶಿಸ್ತು ಕ್ರಮಕ್ಕೆ ಗುರಿಯಾದ ಇಬ್ಬರ ಪೈಕಿ ಒಬ್ಬರು ಹೇಳಿರುವಂತೆ, ಚರ್ಚೆಯೊಂದರಲ್ಲಿ ಶಿವನನ್ನು ಗುರಿ ಯಾಗಿಸಿಕೊಂಡು ನಿರಂತರ ವಾಗ್ದಾಳಿ ನಡೆಯುತ್ತಿತ್ತು. ಆ ಕಾರಣಕ್ಕಾಗಿ ಆಕೆ ಪ್ರತಿಕ್ರಿಯಿಸಬೇಕಾಯಿತು. ಚರ್ಚೆಗಳನ್ನು ಇಡಿಯಾಗಿ ಪರಿಶೀಲಿಸಿ, ಐಪಿಸಿಯ ಸೆಕ್ಷನ್ನುಗಳನ್ನು ಯಾರು ಉಲ್ಲಂಘಿಸಿದ್ದಾರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಯಾರು ಮಾತನಾಡಿದ್ದಾರೆ ಎಂಬುದನ್ನು ಕಾನೂನು ಜಾರಿ ಸಂಸ್ಥೆಗಳು ಕೂಲಂಕಷವಾಗಿ ಪರಿಶೀಲಿಸ ಬೇಕು. ಇಸ್ಲಾಂ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಪ್ರಾಯ ಹೇಳಿದ್ದ ಇನ್ನೊಬ್ಬ ವಕ್ತಾರನನ್ನೂ ಪಕ್ಷವು ಉಚ್ಚಾಟಿಸಿದೆ.

ಆರ್‌ಎಸ್‌ಎಸ್‌ ಮುಖ್ಯಸ್ಥರು ಹೇಳಿರುವ ಮಾತುಗಳ ಸಾರವನ್ನು ಅರಿತು, ಬಿಜೆಪಿಯು ತನ್ನ ವಕ್ತಾರರ ವಿರುದ್ಧ ಕೈಗೊಂಡಿರುವ ಶಿಸ್ತು ಕ್ರಮವನ್ನು ಪರಿಗಣಿಸಿ, ಕೋಮು ಸೌಹಾರ್ದ ಪುನರ್‌ಸ್ಥಾಪಿಸುವ ದಿಸೆಯಲ್ಲಿ ಕೆಲಸ ಮಾಡಬೇಕಿರುವುದು ಈಗ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಹಾಗೂ ಇತರ ಮುಸ್ಲಿಂ ಸಂಘಟನೆಗಳ ಕೆಲಸ. ಸ್ವಾತಂತ್ರ್ಯ ಬಂದ ನಂತರದಲ್ಲಿ ದೇಶದಲ್ಲಿ ನೆಲೆ ಕಂಡ ಧರ್ಮನಿರಪೇಕ್ಷ, ಪ್ರಜಾತಾಂತ್ರಿಕ ಮೌಲ್ಯಗಳನ್ನು ಅವು ಗೌರವಿಸುವುದೇ ಆದಲ್ಲಿ, ತಮ್ಮ ಕಡೆ ಇರುವ, ಉಗ್ರವಾಗಿ ಮಾತನಾಡುವ ವ್ಯಕ್ತಿಗಳನ್ನು ಹದ್ದುಬಸ್ತಿನಲ್ಲಿ ಇರಿಸಬೇಕು ಮತ್ತು ಕೋಮು ಸೌಹಾರ್ದ ಪುನರ್‌ಸ್ಥಾ‍ಪನೆಗೆ ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT