ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಗಾಳಿಗೆ ಬಾಗುವ ಮರ ಬಾಳುತ್ತದೆ

ಮೈತ್ರಿಕೂಟದ ಮಾರುತಗಳಿಗೆ ಹಾಯಿಯನ್ನು ಹೊಂದಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿ
Published : 10 ಸೆಪ್ಟೆಂಬರ್ 2024, 23:28 IST
Last Updated : 10 ಸೆಪ್ಟೆಂಬರ್ 2024, 23:28 IST
ಫಾಲೋ ಮಾಡಿ
Comments

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಮರಳಿದ ನಂತರ ಕೈಗೊಂಡ ಕೆಲವು ನಿರ್ಧಾರಗಳನ್ನು ಹಿಂಪಡೆದುಕೊಂಡಿದ್ದನ್ನು ಉಲ್ಲೇಖಿಸಿ ಅವರ ವಿರೋಧಿಗಳ ಪೈಕಿ ಹಲವರು ಅಣಕವಾಡುತ್ತಿದ್ದಾರೆ. ಆದರೆ, ಮೋದಿ ಅವರು ಹೊಸ ಮೈತ್ರಿ ಸರ್ಕಾರದ ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣವನ್ನು ತೋರಿಸುತ್ತಿರುವಂತೆ ಕಾಣುತ್ತಿದೆ.

ಮೂರನೆಯ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಮೋದಿ ನೇತೃತ್ವದ ಸರ್ಕಾರವು ತನ್ನ ನೀತಿಗಳನ್ನು ಹಿಂಪಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸುತ್ತಿರುವವರು ಒಂದು ಸಂಗತಿಯನ್ನು ಮರೆಯುತ್ತಿರುವಂತೆ ಕಾಣುತ್ತಿದೆ. ಅಂದರೆ, ಮೋದಿ ಅವರು ಹಲವು ಸಂದರ್ಭಗಳಲ್ಲಿ ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸುತ್ತಿದ್ದರೂ 2014ರಿಂದ 2024ರ ವರೆಗೆ ಸ್ಪಷ್ಟವಾದ ಬಹುಮತ ಇದ್ದಾಗಲೂ ಭಿನ್ನ ಅಭಿಪ್ರಾಯಗಳಿಗೆ ತಲೆಬಾಗುವ ಕೆಲಸವನ್ನೂ ಮಾಡಿದ್ದರು. ಮೈತ್ರಿ ರಾಜಕಾರಣದ ವಾಸ್ತವವನ್ನು ಮೋದಿ ಅವರು ಒಪ್ಪಿಕೊಳ್ಳುತ್ತಾರೆ, ಸರ್ಕಾರವನ್ನು ಸಹಮತದ ನೆಲೆಯಲ್ಲಿ ಮುನ್ನಡೆಸುತ್ತಾರೆ ಎಂಬುದನ್ನು ವಿರೋಧ ಪಕ್ಷಗಳ ನಾಯಕರು ನಿರೀಕ್ಷಿಸಿರಲಿಲ್ಲ ಎಂಬುದು ಅವರ ಪ್ರತಿಕ್ರಿಯೆಗಳನ್ನು ಕಂಡಾಗ ಅನಿಸುತ್ತದೆ. ಆದರೆ, ಕಳೆದ ನಾಲ್ಕು ವಾರಗಳ ಘಟನೆಗಳು ವಿರೋಧ ಪಕ್ಷಗಳ ನಿರೀಕ್ಷೆಗಳನ್ನು ಹುಸಿಯಾಗಿಸಿವೆ.

ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆಯನ್ನು ಹಿಂಪಡೆಯುವುದಾಗಿ ಕೇಂದ್ರ ಸರ್ಕಾರವು ಆಗಸ್ಟ್‌ ಆರಂಭದಲ್ಲಿ ಹೇಳಿತು. ಅದಾದ ನಂತರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಮಸೂದೆಯ ಮೊದಲ ಕರಡಿನ ಬಗ್ಗೆ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ.

ಆಗಸ್ಟ್‌ ತಿಂಗಳಲ್ಲಿ ಕೇಂದ್ರವು ಲ್ಯಾಟರಲ್ ಎಂಟ್ರಿ ವಿಚಾರದಲ್ಲಿ ಹಿಂದಡಿ ಇರಿಸಬೇಕಾಯಿತು. 2018ರಲ್ಲಿಯೂ ಕೇಂದ್ರ ಸರ್ಕಾರವು ಈ ಬಗೆಯ ನೇಮಕಾತಿಗಳನ್ನು ನಡೆಸಿತ್ತಾದರೂ, ಎನ್‌ಡಿಎ ಮೈತ್ರಿಕೂಟದ ಪಾಲುದಾರರ ವಿರೋಧದ ಕಾರಣಕ್ಕೆ ಸರ್ಕಾರವು ಈ ಬಾರಿ ಈ ಪ್ರಯತ್ನವನ್ನು ಕೈಬಿಡಬೇಕಾಯಿತು. 45 ಮಂದಿ ‘ಪ್ರತಿಭಾನ್ವಿತ ಹಾಗೂ ಪ್ರೇರಣಾದಾಯಿಗಳಾದ ಭಾರತೀಯ ಪ್ರಜೆಗಳನ್ನು’ ಲ್ಯಾಟರಲ್ ಎಂಟ್ರಿ ಮೂಲಕ ನೇಮಕ ಮಾಡಿಕೊಳ್ಳುವ ಕೇಂದ್ರ ಲೋಕಸೇವಾ ಆಯೋಗದ ಪ್ರಸ್ತಾವವನ್ನು ಲೋಕ ಜನಶಕ್ತಿ ಪಕ್ಷದ (ರಾಮ್‌ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ಪ್ರಶ್ನಿಸಿದರು. ಈ ಬಗೆಯ ನೇಮಕಾತಿಗಳ ಪರವಾಗಿ ತಾವು ಇಲ್ಲ ಎಂದು ಅವರು ಘೋಷಿಸಿದರು. ‘ಸರ್ಕಾರಿ ನೇಮಕಾತಿಗಳು ನಡೆಯುವಾಗಲೆಲ್ಲ ಮೀಸಲಾತಿಯನ್ನು ಪಾಲಿಸಬೇಕು, ಈ ವಿಚಾರದಲ್ಲಿ ಆದರೆ ಹೋದರೆ ಎಂಬ ಮಾತುಗಳು ಸಲ್ಲ’ ಎಂದು ಸ್ಪಷ್ಟಪಡಿಸಿದರು. ಜೆಡಿಯು ಕೂಡ ಈ ನೇಮಕಾತಿಗೆ ಆಕ್ಷೇಪ ವ್ಯಕ್ತಪಡಿಸಿತು.

ಮಿತ್ರಪಕ್ಷಗಳಿಂದ ಆಕ್ಷೇಪ ಬಂದ ನಂತರ, ಲ್ಯಾಟರಲ್ ಎಂಟ್ರಿ ಕುರಿತ ಜಾಹೀರಾತನ್ನು ಹಿಂಪಡೆಯುವಂತೆ ಯುಪಿಎಸ್‌ಸಿಗೆ ಸೂಚಿಸಲು ಕೇಂದ್ರವು ತಡಮಾಡಲಿಲ್ಲ. ಯುಪಿಎಸ್‌ಸಿಗೆ ಬರೆದ ಪತ್ರದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು, ಲ್ಯಾಟರಲ್ ಎಂಟ್ರಿ ಪ್ರಕ್ರಿಯೆಯು ‘ಸಂವಿಧಾನದಲ್ಲಿ ಹೇಳಿರುವ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಕ್ಕೆ ಬದ್ಧವಾಗಿರಬೇಕು, ಅದರಲ್ಲೂ ಮುಖ್ಯವಾಗಿ ಮೀಸಲಾತಿಗೆ ಬದ್ಧವಾಗಿರಬೇಕು’ ಎಂಬುದು ಪ್ರಧಾನಿಯವರ ದೃಢವಾದ ನಂಬಿಕೆ ಎಂದು ಹೇಳಿದರು.

ಮೈತ್ರಿಕೂಟದ ಪಕ್ಷಗಳ ಆಕ್ಷೇಪದ ಕಾರಣದಿಂದಾಗಿ ಮುಂದಕ್ಕೆ ಸಾಗದೆ ಉಳಿದ ಇನ್ನೊಂದು ಕ್ರಮವೆಂದರೆ, ವಕ್ಫ್ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದ್ದು. ಕೇಂದ್ರ ಹಾಗೂ ರಾಜ್ಯ ವಕ್ಫ್‌ ಮಂಡಳಿಗಳ ಸ್ವರೂಪವನ್ನು ಇನ್ನಷ್ಟು ವಿಸ್ತೃತಗೊಳಿಸುವ ಉದ್ದೇಶವು ಈ ಮಸೂದೆಗೆ ಇದೆ. ಮಂಡಳಿಗಳಲ್ಲಿ ಮಹಿಳೆಯರಿಗೆ, ಬೊಹ್ರಾ, ಆಘಾಖಾನಿ ಸಮುದಾಯದವರಿಗೆ ಮತ್ತು ಮುಸ್ಲಿಮರಲ್ಲಿನ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶವು ಈ ಮಸೂದೆಗೆ ಇದೆ. ಮೈತ್ರಿಕೂಟದ ಸದಸ್ಯ ಪಕ್ಷಗಳು ಇಡೀ ಮಸೂದೆಗೆ ವಿರೋಧ ವ್ಯಕ್ತಪಡಿಸಿಲ್ಲವಾದರೂ, ಮಸೂದೆಯನ್ನು ಸಂಸತ್ತಿನ ಜಂಟಿ ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು ಎಂದು ಅವು ಆಗ್ರಹಿಸಿದ್ದವು. ಟಿಡಿಪಿ, ಜನಸೇನಾ ಪಕ್ಷ ಮತ್ತು ಲೋಕ ಜನಶಕ್ತಿ ಪಕ್ಷ ಈ ಮಸೂದೆ ಬಗ್ಗೆ ವಿಸ್ತೃತ ಚರ್ಚೆ ಬೇಕು ಎಂದವು. ಕಾಂಗ್ರೆಸ್ ಹಾಗೂ ಇತರ ಕೆಲವು ಪಕ್ಷಗಳು ಕೂಡ ಮಸೂದೆಯನ್ನು ವಿರೋಧಿಸಿದವು. ಈ ಆಗ್ರಹಕ್ಕೆ ಮಣಿದ ಕೇಂದ್ರ ಸರ್ಕಾರವು ಮಸೂದೆಯ ಪರಿಶೀಲನೆಗೆ ಸಂಸತ್ತಿನ ಜಂಟಿ ಸದನ ಸಮಿತಿಯನ್ನು (ಜೆಪಿಸಿ) ರಚಿಸಿತು.

ಆದರೆ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಹೆಚ್ಚಿನ ಬಲ ಹೊಂದಿದ್ದ ಸಂದರ್ಭದಲ್ಲಿಯೂ ವಿರೋಧ ಪಕ್ಷಗಳ ಆಗ್ರಹಕ್ಕೆ ಮಣಿದಿದ್ದ ಸಂದರ್ಭಗಳು ಇವೆ ಎಂಬುದನ್ನು ಮರೆಯುವಂತಿಲ್ಲ. ಜನರು ಬಹಳ ದೀರ್ಘ ಅವಧಿಗೆ ಎಲ್ಲವನ್ನೂ ನೆನಪಿಟ್ಟುಕೊಳ್ಳುವುದಿಲ್ಲ. ಹೀಗಿದ್ದರೂ, ಹಿಂದೆ ಸಂಖ್ಯಾಬಲ ಹೊಂದಿದ್ದಾಗಲೂ ಮೋದಿ ಅವರು ವಿರೋಧ ಪಕ್ಷಗಳ ದನಿಗೆ ಓಗೊಟ್ಟಿದ್ದ ನಿದರ್ಶನಗಳನ್ನು ಉಲ್ಲೇಖಿಸುವುದು ಮೈತ್ರಿಕೂಟ ಸರ್ಕಾರದ ಈ ಅವಧಿಯಲ್ಲಿ‌ ಉಪಯುಕ್ತವಾಗುತ್ತದೆ. ಮೋದಿ ಅವರು ಬಹಳ ಮುತುವರ್ಜಿಯಿಂದ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದಿದ್ದರು. 2020ರಲ್ಲಿ ಸಂಸತ್ತು ಈ ಮೂರು ಕಾಯ್ದೆಗಳಿಗೆ ಸಂಬಂಧಿಸಿದ ಮಸೂದೆಗಳಿಗೆ ಅಂಗೀಕಾರ ನೀಡಿತ್ತು. ಇದಾದ ನಂತರ ರೈತ ಸಂಘಟನೆಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ, ಕಾಯ್ದೆಗೆ ತಡೆಯಾಜ್ಞೆ ತಂದವು. ನಂತರ, ದೆಹಲಿಯ ಗಡಿಯಲ್ಲಿ ನಡೆದ ದೀರ್ಘ ಅವಧಿಯ ಪ್ರತಿಭಟನೆ ಹಾಗೂ ಅದರ ಜೊತೆಯಲ್ಲೇ ಉಂಟಾದ ಹಿಂಸಾಚಾರವು ಈ ಮೂರು ಕಾಯ್ದೆಗಳನ್ನು ಸರ್ಕಾರವು 2021ರ ನವೆಂಬರ್‌ನಲ್ಲಿ ಹಿಂಪಡೆಯುವಂತೆ ಮಾಡಿದವು. ಆ ಸಂದರ್ಭದಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು ಲೋಕಸಭೆಯಲ್ಲಿ 350ಕ್ಕೂ ಹೆಚ್ಚು ಸದಸ್ಯರ ಬೆಂಬಲ ಹೊಂದಿತ್ತು.

ದತ್ತಾಂಶ ಸುರಕ್ಷತೆ ಮಸೂದೆಯ ವಿಚಾರವಾಗಿ ಕೇಂದ್ರವು 2022ರ ಆಗಸ್ಟ್‌ನಲ್ಲಿ ಹಿಂದಡಿ ಇರಿಸುವ ನಿರ್ಧಾರ ಮಾಡಿತು. ಸಂಸತ್ತಿನ ಸಮಿತಿಯೊಂದು ಈ ಮಸೂದೆಯಲ್ಲಿ ಭಾರಿ ಸಂಖ್ಯೆಯಲ್ಲಿ ತಿದ್ದುಪಡಿಗಳು ಆಗಬೇಕಿವೆ ಎಂದು ಶಿಫಾರಸು ಮಾಡಿದ ನಂತರ, ಕೇಂದ್ರವು ಈ ತೀರ್ಮಾನಕ್ಕೆ ಬಂದಿತ್ತು. ಅದನ್ನು ಪರಿಶೀಲಿಸಿದ ನಂತರ ಕೇಂದ್ರವು ಪರಿಷ್ಕೃತ ಮಸೂದೆಯನ್ನು ಮಾರನೆಯ ವರ್ಷ ಸಂಸತ್ತಿನಲ್ಲಿ ಮಂಡಿಸಿತು. ವಿರೋಧ ಪಕ್ಷಗಳ ಕಡೆಯಿಂದ ಸಂಸತ್ತಿನಲ್ಲಿ ವಿರೋಧ ವ್ಯಕ್ತವಾದ ಕಾರಣಕ್ಕೆ, ಭೂಸ್ವಾಧೀನಕ್ಕೆ ಸಂಬಂಧಿಸಿದ ಮಸೂದೆಯೊಂದನ್ನು ಹಿಂದಕ್ಕೆ ಪಡೆಯಲು ಕೂಡ ಕೇಂದ್ರ ಸರ್ಕಾರ ನಿರ್ಧರಿಸಿದ ನಿದರ್ಶನ ಇದೆ.

ಸರ್ಕಾರದ ಉಳಿವಿಗಾಗಿ ಬೇರೆ ಪಕ್ಷಗಳ ಬೆಂಬಲ ಅಗತ್ಯವಿರುವಾಗ, ಸರ್ಕಾರದ ನೇತೃತ್ವ ವಹಿಸಿರುವವರು ಸಮಾಲೋಚನೆಗಳ ಮೂಲಕ ಕೆಲಸ ಮಾಡುವುದನ್ನು ಕಲಿಯುತ್ತಾರೆ; ಹಾಗೆಯೇ ಮೈತ್ರಿಕೂಟದ ಧರ್ಮ ಏನೆಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. 1999ರಿಂದ 2004ರವರೆಗೆ ಹಲವು ಪಕ್ಷಗಳ ಮೈತ್ರಿಕೂಟವನ್ನು ಯಶಸ್ವಿಯಾಗಿ ಮುನ್ನಡೆಸಿದ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಮಾಡಿದ್ದು ಇದನ್ನೇ.

ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆ ಆದ ಮೊದಲ ಮೂರು ತಿಂಗಳಲ್ಲಿ ಮೋದಿ ಅವರ ಪ್ರತಿಕ್ರಿಯೆಗಳು, ಈ ವಿಚಾರವಾಗಿ ಅವರಿಗೆ ಅರಿವಿದೆ ಎಂಬುದನ್ನು, ಅವುಗಳನ್ನು ಬಹಳ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ ಎಂಬುದನ್ನು ತೋರಿಸುತ್ತಿರುವಂತಿವೆ. ಹಾಗೆಯೇ, ಈ ಹಿಂದೆಯೇ ಉಲ್ಲೇಖಿಸಿರುವಂತೆ, ಮೋದಿ ಅವರು ಸಂಖ್ಯಾಬಲ ಹೊಂದಿದ್ದ ಸಂದರ್ಭದಲ್ಲಿಯೂ ಈ ಬಗೆಯ ಕೆಲಸಗಳನ್ನು ಮಾಡಿದ್ದಾರೆ.

ಮೋದಿ ಅವರು ತಮ್ಮ ನೌಕೆಯ ಹಾಯಿಯನ್ನು ಮೈತ್ರಿಕೂಟದ ಗಾಳಿಗೆ ಅನುಗುಣವಾಗಿ ಹೊಂದಿಸಿ
ಕೊಳ್ಳುತ್ತಿರುವುದು ಸ್ಪಷ್ಟ. ಮೋದಿ ಅವರ ವಿರೋಧಿಗಳು, ಮೋದಿ ನೇತೃತ್ವದ ಸರ್ಕಾರವು ಈಚಿನ ವಾರಗಳಲ್ಲಿ ಕೆಲವು ವಿಚಾರಗಳಲ್ಲಿ ಹಿಂದಡಿ ಇರಿಸಿರುವುದರ ಬಗ್ಗೆ ಹಿಗ್ಗಿನಿಂದ ಮಾತನಾಡುತ್ತಿದ್ದಾರೆ. ಆದರೆ, ನಿಸರ್ಗವು ನಮಗೆಲ್ಲರಿಗೂ ಹೇಳಿಕೊಡುವ ಪಾಠವೊಂದನ್ನು ಅವರೆಲ್ಲ ಮರೆಯುತ್ತಿರುವಂತೆ ಕಾಣುತ್ತಿದೆ. ಬಿರುಸಾದ ಗಾಳಿಗೆ ಬಾಗುವ ಮರಗಳು ಮಾತ್ರ ಉಳಿದುಕೊಳ್ಳುತ್ತವೆ. ಮಾರುತಗಳಿಗೆ ಹೊಂದಿಕೊಳ್ಳಲು ಆಗದವು, ತೀರಾ ದೃಢವಾಗಿ ನಿಲ್ಲಲು ಯತ್ನಿಸುವವು ಬುಡಮೇಲಾಗುತ್ತವೆ. ಹೀಗಾಗಿ, ಮುಂಬರುವ ದಿನಗಳಲ್ಲಿ ಮೋದಿ ನೇತೃತ್ವದ ಸರ್ಕಾರದ ಉಳಿವಿನ ವಿಚಾರದಲ್ಲಿ ಹೊಂದಾಣಿಕೆಯು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT