ಬುಧವಾರ, ಅಕ್ಟೋಬರ್ 28, 2020
28 °C
ಚರಿತ್ರೆಯ ಹೆಬ್ಬಂಡೆಯಲ್ಲಿ ವಜ್ರ, ಗೋಮೇಧಿಕಗಳನ್ನು ಹುಡುಕುವವರಿಗೆ ವಿಜ್ಞಾನ ಎಟುಕೀತೆ?

ಮರೀಚಿಕೆಯೂ ಕಾಣದಷ್ಟು ಮಬ್ಬುಮಬ್ಬು

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಪ್ರತೀ ಅಕ್ಟೋಬರ್‌ನ ಈ ದಿನಗಳಲ್ಲಿ ಕಂತು ಕಂತಿನಲ್ಲಿ ನೊಬೆಲ್‌ ವಿಜ್ಞಾನ ಪ್ರಶಸ್ತಿಗಳ ಘೋಷಣೆಯಾಗುತ್ತಿರುತ್ತದೆ. ಪ್ರತಿಬಾರಿ ಈ ಸುದ್ದಿಗಳು ಭಾರತೀಯರಲ್ಲಿ ವಿಷಾದದ ಛಾಯೆಯನ್ನು ಮೂಡಿಸುತ್ತವೆ. ವಿಜ್ಞಾನಿಗಳ ಸಂಖ್ಯೆಯ ದೃಷ್ಟಿಯಿಂದ ನಮ್ಮದು ಜಗತ್ತಿನಲ್ಲಿ ಮೂರನೆಯ ಅತಿ ದೊಡ್ಡ ಪಡೆ. ಬಾಹ್ಯಾಕಾಶ ಸಾಧನೆಯ ಐದು ಬಲಾಢ್ಯ ದೇಶಗಳಲ್ಲಿ ನಮ್ಮ ಸ್ಥಾನವಿದೆ. ಸಂಶೋಧನ ಪ್ರಬಂಧಗಳ ಸಂಖ್ಯೆಯಲ್ಲೂ ನಾವು ಮೊದಲ ಹತ್ತು ರಾಷ್ಟ್ರಗಳ ಸಾಲಿನಲ್ಲಿದ್ದೇವೆ. ಆದರೆ ನೊಬೆಲ್‌ ಪ್ರಶಸ್ತಿ ಮಾತ್ರ ನಮಗಿನ್ನೂ ದಕ್ಕಿಲ್ಲ. ಒಲಿಂಪಿಕ್ಸ್‌ ಕ್ರೀಡೆಗಳಲ್ಲೇನೊ ಅಲ್ಲೊಂದು ಇಲ್ಲೊಂದು ಪದಕಗಳು ಬರತೊಡಗಿವೆ. ವಿಜ್ಞಾನದ ನೊಬೆಲ್‌ ಪದಕಗಳ ಮರೀಚಿಕೆಯೂ ಕಾಣದಾಗಿದೆ.

ಈ ಖಿನ್ನತೆಯ ನಡುವೆ ಇದೀಗ ಇನ್ನೊಂದು ಅಪ್ರಿಯ ಸಂಗತಿ ಪ್ರಕಟವಾಗಿದೆ: ವಿಶ್ವಮಟ್ಟದ 200 ವಿಜ್ಞಾನ ನಗರಗಳನ್ನು ಗುರುತಿಸಿ ‘ನೇಚರ್‌ ಸೈನ್ಸ್‌ ಶ್ರೇಯಾಂಕ’ಗಳ ಪಟ್ಟಿ ಈಚೆಗೆ ಪ್ರಕಟವಾಗಿದ್ದು, ಅದರಲ್ಲಿ ಕೂಡ ಭಾರತದ ಸ್ಥಾನ ಶೋಚನೀಯವಾಗಿದೆ. ನಮ್ಮ ಕೇವಲ ಎರಡು ನಗರಗಳು ಮೊದಲ ನೂರರ ಪಟ್ಟಿಯಲ್ಲಿ- ಅದೂ ಕಟ್ಟಕಡೆಯಲ್ಲಿ ಸೇರ್ಪಡೆಯಾಗಿವೆ. ಬೆಂಗಳೂರು ಈ ದೇಶದ ವಿಜ್ಞಾನ ನಗರ ಎಂದು ನಾವು ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಸರಿ. ಅದರ ಶ್ರೇಯಾಂಕ ಕಳೆದ ವರ್ಷ 93ನೆಯದಾಗಿತ್ತು. ಈ ವರ್ಷ ಅದು ಮತ್ತೂ ಕೆಳಕ್ಕೆ ಕುಸಿದು 97ಕ್ಕೆ ಬಂದಿದೆ. ಕೋಲ್ಕತ್ತ 99ನೇ ಸ್ಥಾನ ಪಡೆದಿದೆ.

ಈ ಶ್ರೇಯಾಂಕದಲ್ಲಿ ಮೊದಲ ಐದು ಸ್ಥಾನ ಪಡೆದ ನಗರಗಳೆಂದರೆ ಬೀಜಿಂಗ್‌, ನ್ಯೂಯಾರ್ಕ್‌, ಬಾಸ್ಟನ್‌, ಸಾನ್‌ಫ್ರಾನ್ಸಿಸ್ಕೊ ಮತ್ತು ಶಾಂಘಾಯ್‌. ಚೀನಾದ ರಾಜಧಾನಿ ಜಗತ್ತಿನಲ್ಲೇ ಮೊದಲ ಸ್ಥಾನ ಪಡೆದಿದ್ದಷ್ಟೇ ಅಲ್ಲ, ಅದರ ಇತರ ಐದು ನಗರಗಳು (ಶಾಂಘೈ, ನಾನ್‌ಜಿಂಗ್‌, ವುಹಾನ್‌, ಗ್ವಾಂಶು ಮತ್ತು ಹೇಫೇ) ಮೊದಲ 20 ಶ್ರೇಷ್ಠ ನಗರಗಳ ಪಟ್ಟಿಯಲ್ಲಿವೆ.

ನಗರಗಳನ್ನು ವೈಜ್ಞಾನಿಕ ಸಂಶೋಧನೆಗಳ ಶ್ರೇಷ್ಠತೆಯ ಅಳತೆಗೋಲಾಗಿ ಹಿಡಿಯಲಾಗದು ನಿಜ. ವೈದ್ಯಕೀಯ ಸಂಶೋಧನೆಯನ್ನು ಪರಿಗಣಿಸಿದರೆ ಬೆಂಗಳೂರಿಗಿಂತ ಹೈದರಾಬಾದ್‌ ಅಥವಾ ಪುಣೆಯಲ್ಲಿ ಹೆಚ್ಚಿನ ಸಂಶೋಧನೆ ನಡೆಯುತ್ತಿರಬಹುದು. ಪರಮಾಣು ಸಂಬಂಧಿ ಸಂಶೋಧನೆಗಳನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಂಡರೆ, ಜಗತ್ತಿನ ಮೊದಲ 50 ನಗರಗಳಲ್ಲಿ ಮುಂಬೈ ಕೂಡ ಬರಬಹುದು. ಬಾಹ್ಯಾಕಾಶ ಸಂಶೋಧನೆಯೊಂದನ್ನೇ ಪರಿಗಣಿಸಿದರೆ ಬೆಂಗಳೂರು ಮೊದಲ 20 ಸ್ಥಾನಗಳಲ್ಲೇ ಒಂದನ್ನು ಪಡೆಯಬಹುದು. ಆದರೂ ನಗರಗಳನ್ನೇ ಶ್ರೇಷ್ಠತೆಯ ಘಟಕವಾಗಿ ಪರಿಗಣಿಸುವುದರಲ್ಲಿ ಒಂದು ಉದ್ದೇಶವಿದೆ: ಜಗತ್ತಿನ ಎಳೆ ಪ್ರತಿಭೆಗಳನ್ನು ಸೆಳೆಯುವಲ್ಲಿ ಸಂಶೋಧನಾ ಸಂಸ್ಥೆಗಿಂತ ನಗರ ಸಂಕೀರ್ಣಗಳು (ಒಂದರ್ಥದಲ್ಲಿ ಸಂಸ್ಥೆಗಳ ಸಂತೆಗಳು) ಮುಖ್ಯಪಾತ್ರ ವಹಿಸುತ್ತವೆ. ಬೆಂಗಳೂರು ಈ ಪಟ್ಟಿಯಲ್ಲಿ ತುದಿಯಲ್ಲಾದರೂಸೇರ್ಪಡೆಗೊಳ್ಳಲು ಕಾರಣ ಏನೆಂದರೆ, ಇಲ್ಲಿ ರಾಷ್ಟ್ರಮಟ್ಟದ ಖ್ಯಾತಿ ಪಡೆದ ಐಐಎಸ್‌ಸಿ, ಇಸ್ರೊ, ಡಿಆರ್‌ಡಿಓ, ಖಭೌತ ಸಂಸ್ಥೆ, ಬೆಲ್‌, ಭೆಲ್‌, ಹಾರ್ಟಿಕಲ್ಚರ್‌, ಎಚ್‌ಎಎಲ್‌, ಐಟಿ-ಬಿಟಿ, ಜೆಎನ್‌ಸಿಎಎಸ್ಸಾರ್‌ ಎಲ್ಲ ಇವೆ. ವಿಜ್ಞಾನ-ತಂತ್ರಜ್ಞಾನ ಸಂಶೋಧನೆಗಳಿಗೆ ಪರಸ್ಪರ ಪೂರಕವಾದ ಬಹುಮುಖೀ ಆಯಾಮ ಸಿಕ್ಕಿದೆ. ಇಂಥ ವಿಜ್ಞಾನಸಂಕೀರ್ಣದಲ್ಲಿ ನಡೆಯುವ ಸಂಶೋಧನೆಗಳ ಗುಣಮಟ್ಟ, ಒಟ್ಟೂಮೊತ್ತ, ವೈವಿಧ್ಯ, ಪೇಟೆಂಟ್‌ ಗಳಿಕೆಯ ಸಂಖ್ಯೆ, ಪ್ರತಿಭಾವಂತರನ್ನು ಆಕರ್ಷಿಸುವ ಸಾಮರ್ಥ್ಯ ಎಲ್ಲವನ್ನೂ ಅಳೆದು ತೂಗಿ ಈ ಶ್ರೇಯಾಂಕವನ್ನು ರೂಪಿಸಲಾಗುತ್ತಿದೆ. ಉನ್ನತ ಶಿಕ್ಷಣವನ್ನು ಬಯಸುವ ವಿದ್ಯಾರ್ಥಿಗಳು ಸಹಜವಾಗಿಯೇ ಈ ಶ್ರೇಯಾಂಕವನ್ನು ಆಧರಿಸಿ ತಮ್ಮ ಪಯಣದ ಮುಂದಿನ ನಿಲ್ದಾಣವನ್ನು ನಿರ್ಧರಿಸುತ್ತಾರೆ. ನಮ್ಮ ಪ್ರತಿಭಾವಂತ ಎಳೆಯರಿಗಂತೂ ದೂರದೇಶಗಳ ನಿಲ್ದಾಣಗಳದ್ದೇ ಕನಸು.

ವಿಜ್ಞಾನದ ಮಹತ್ವವನ್ನು ಸಂವಿಧಾನದಲ್ಲೇ ಸೇರ್ಪಡೆ ಮಾಡಿಕೊಂಡ ಅಪರೂಪದ ದೇಶ ನಮ್ಮದು. ಸ್ವಾತಂತ್ರ್ಯ ಬಂದ ಹೊಸದರಲ್ಲೇ ದೇಶದುದ್ದಕ್ಕೂ ಸಂಶೋಧನ ಸಂಸ್ಥೆಗಳನ್ನೂ ಐಐಟಿಗಳ ಸರಮಾಲೆಯನ್ನೂ ಕಟ್ಟಿದ ದೇಶ ಇದು. ವಿಜ್ಞಾನಿಗಳ ಬೃಹತ್‌ ಪಡೆಯನ್ನೇ ಕಟ್ಟಿ, ಪ್ರತಿವರ್ಷವೂ ವಿಧ್ಯುಕ್ತವಾಗಿ ವಿಜ್ಞಾನಿಗಳ ಕುಂಭಮೇಳವನ್ನೇ ನಡೆಸುವವರು ನಾವು. ಎಳೆಯರ ಪ್ರತಿಭಾಶೋಧಕ್ಕೆಂದೇ ರಾಷ್ಟ್ರವ್ಯಾಪಿ ಯೋಜನೆಗಳಿವೆ. ಜಗತ್ತಿನಲ್ಲಿ ಮೂರನೆಯ ಅತಿ ಹೆಚ್ಚು ಸಂಖ್ಯೆಯ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವವರ ದೇಶ ನಮ್ಮದು. ಆದರೆ ನಮ್ಮ ಸಂಶೋಧನೆಗಳ ಗುಣಮಟ್ಟ ಮಾತ್ರ ಏರಲೇ ಇಲ್ಲ. ವಿಶ್ವವಿದ್ಯಾಲಯಗಳ ಸಂಶೋಧನೆಗಳನ್ನಂತೂ ತೂಕಕ್ಕೂ ಕೇಳಬೇಡಿ. ಕಳೆದ 50 ವರ್ಷಗಳ ನಮ್ಮ ವಿಜ್ಞಾನ ಸಂಶೋಧನಾ ಚರಿತ್ರೆಯಲ್ಲಿ ಹೆಮ್ಮೆ ಪಡಬೇಕಾದುದು ಅದೆಷ್ಟೇ ಇದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಕಳಪೆಮಟ್ಟದ, ವಂಚನೆಯ, ಕೃತಿಚೌರ್ಯದ ಪ್ರಸಂಗಗಳೇ ಎದ್ದು ಕಾಣುತ್ತವೆ. ಕುಲಾಂತರಿ ಸಸ್ಯಗಳ ಸತ್ಯಶೋಧನೆ ಗೆಂದು ರಾಷ್ಟ್ರದ ಐದು ಮಹಾನ್‌ ಸಂಶೋಧನಾ ಸಂಸ್ಥೆಗಳ ಆಯ್ದ ವಿಜ್ಞಾನಿಗಳ ಸಮಿತಿಯನ್ನು ರಚಿಸಿ ವರದಿ ತರಿಸಿಕೊಂಡಾಗ, ಅದರಲ್ಲಿ ಮಾನ್ಸಾಂಟೊ ಕಂಪನಿಯ ಪುಟಪುಟಗಳನ್ನೇ ಕದ್ದು ಇಳಿಸಿದ್ದು ಪತ್ತೆಯಾಗಿತ್ತು. ಇನ್ನೂ ಲಜ್ಜಾಸ್ಪದ ಪ್ರಸಂಗ ಏನೆಂದರೆ ‘ಸ್ವತಂತ್ರ ಸಂಶೋಧನೆ’ ಮಾಡಿದ ವಿಜ್ಞಾನಿಯೊಬ್ಬ ಬೇರೊಬ್ಬ ಕಳ್ಳನ ವರದಿಯನ್ನೇ ಲಪಟಾಯಿಸಿದ್ದ! ‘ಇದು ಗಟಾರ ವಿಜ್ಞಾನ’ ಎಂದು ವಿಶ್ಲೇಷಕ ಡಾ. ದೇವಿಂದರ್‌ ಶರ್ಮಾ ಚೀರಿದ್ದರು. ಈಗಿನ ಕೊರೊನಾ ಭರಾಟೆಯಲ್ಲಂತೂ ನಮ್ಮ ದೇಶದ ಅಷ್ಟಿಷ್ಟು ಖ್ಯಾತಿಯನ್ನೂ ಮಣ್ಣುಪಾಲು ಮಾಡುವ ಅದೆಷ್ಟೊ ನಾಲಾಯಕ್‌ ಸಂಶೋಧನ ಪ್ರಸಂಗಗಳು ಬೆಳಕಿಗೆ ಬಂದಿವೆ.

ಚೀನಾಕ್ಕೆ ಹೋಲಿಸಿದರೆ ನಾವು ವಿಜ್ಞಾನಕ್ಕೆ ಹೂಡುವ ಬಂಡವಾಳ ತೀರಾ ಕಡಿಮೆ. ಸಂಶೋಧನೆಯ ಪೇಟೆಂಟ್‌ಗಳ ಸಂಖ್ಯೆ ನೋಡಿದರೆ ಚೀನಾದ್ದು ನಮಗಿಂತ 30 ಪಟ್ಟು ಹೆಚ್ಚಿಗೆ ಇದೆ. ಆದರೂ ಚೀನೀ ಪ್ರಧಾನಿ ತಮ್ಮ ವಿಜ್ಞಾನಿಗಳ ಬೆನ್ನು ತಟ್ಟುವ ಬದಲು, ‘ಸಾಲದು, ಇನ್ನೂ ಚುರುಕಾಗಬೇಕು’ ಎನ್ನುತ್ತಿರುತ್ತಾರೆ. ನಮ್ಮಲ್ಲಿ ಸರ್ಕಾರಿ ಹೂಡಿಕೆಯನ್ನು ಹೆಚ್ಚಿಸುವ ಬದಲು ಖಾಸಗಿ ಉದ್ಯಮಿಗಳೇ ವಿಜ್ಞಾನ, ತಂತ್ರಜ್ಞಾನವನ್ನು ಮುನ್ನಡೆಸಬೇಕೆಂದು ಸರ್ಕಾರ ಬಯಸುತ್ತಿದೆ. ವಿಜ್ಞಾನಿಗಳು ಹೈರಾಣಾಗಿದ್ದಾರೆ. ಸಂಶೋಧನೆಗೆ ಪ್ರಾಯೋಜಕರನ್ನು ಹುಡುಕುವುದೇ ಅನೇಕರಿಗೆ ದೊಡ್ಡ ಕೆಲಸವಾಗಿದೆ. ಉದ್ಯಮಪತಿಗಳನ್ನು ಮೆಚ್ಚಿಸುವ ಅಥವಾ ಅವರ ತಾಳಕ್ಕೆ ಕುಣಿಯುವ ಅವಸರದಲ್ಲಿ ಇನ್ನಷ್ಟು ಕಳಪೆ ಸಂಶೋಧನೆಗಳು ಇತಿಹಾಸದ ಪುಟಗಳಿಗೆ ಸೇರುತ್ತಿವೆ.

‘ನಾವು ಇತಿಹಾಸದಿಂದ ಪಾಠ ಕಲಿಯಬೇಕಾಗಿಲ್ಲ; ಬದಲಿಗೆ ಅದರಿಂದ ಬಿಡುಗಡೆ ಪಡೆಯಲು ಯತ್ನಿಸುತ್ತಿರಬೇಕು’ ಎಂದು ಪ್ರಖರ ಚಿಂತಕ ಯುವಾಲ್‌ ಹರಾರಿ ಹೇಳುತ್ತಾರೆ. ಆದರೆ ನಮ್ಮಲ್ಲಿ ಇತಿಹಾಸವನ್ನೇ ಇನ್ನಷ್ಟು ಮತ್ತಷ್ಟು ಗಟ್ಟಿಯಾಗಿ ಅಪ್ಪಿಕೊಳ್ಳುವ ಯತ್ನಗಳು ವಿಜ್ಞಾನ ವೇದಿಕೆಗಳಲ್ಲೇ ನಡೆಯುತ್ತಿವೆ. ಭಾರದ್ವಾಜ ಮಹರ್ಷಿಯ ವಿಮಾನಗಳು, ಪ್ಲಾಸ್ಟಿಕ್‌ ಸರ್ಜರಿ, ಜೆನೆಟಿಕ್‌ ತಂತ್ರಜ್ಞಾನ ಎಲ್ಲವೂ ನಮ್ಮಲ್ಲಿದ್ದುವೆಂದು ಎದೆ ತಟ್ಟಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ರಾಷ್ಟ್ರದ ಉನ್ನತ ಶಿಕ್ಷಣ ಸಚಿವರಾಗಿದ್ದ ಸತ್ಯಪಾಲ್‌ ಸಿಂಗ್‌ (ಕೆಮಿಸ್ಟ್ರಿ ಎಮ್‌ಎಸ್‌ಸಿ) ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಕಾಸವಾದವೇ ಸುಳ್ಳೆಂದೂ ಯಾವ ಮಂಗವೂ ಮನುಷ್ಯರಿಗೆ ಜನ್ಮ ಕೊಟ್ಟಿದ್ದನ್ನು ನಮ್ಮ ಪೂರ್ವಜರು ಕಂಡಿರಲಿಲ್ಲವೆಂದೂ ಹೇಳಿ ವಿಜ್ಞಾನಿಗಳಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಕೊರೊನಾ ಕಾಲದಲ್ಲಂತೂ ವೈರಾಣುಗಳನ್ನು ಓಡಿಸಲು ಸೆಗಣಿ- ಗಂಜಳ ಬೇರು- ಬೊಗಟೆ, ಗಂಟೆ- ಜಾಗಟೆಗಳು ಅದೆಷ್ಟು ಗದ್ದಲ ಎಬ್ಬಿಸಿಲ್ಲ? ಚರಿತ್ರೆಯ ಹೆಬ್ಬಂಡೆಯನ್ನೇ ಹೊತ್ತಿರುವ ನಾವು ಆ ಬಂಡೆಯಲ್ಲಿ ವಜ್ರ, ಗೋಮೇಧಿಕ, ಚಿನ್ನದ ಪದಕಗಳನ್ನು ಹುಡುಕುತ್ತಿದ್ದೇವೆ ವಿನಾ ಬಂಡೆಯನ್ನು ಕೊಡವಿ ಮೇಲೇಳಲು ಯತ್ನ ನಡೆಸಲೇ ಇಲ್ಲ.

ಕೊನೆಯದಾಗಿ, ಭಾರತದ ವೈಜ್ಞಾನಿಕ ಸಾಧನೆಗಳನ್ನು ಚೀನಾದೊಂದಿಗೆ ಹೋಲಿಸಿಕೊಳ್ಳುವ ಬದಲು ಪಾಕಿಸ್ತಾನದೊಂದಿಗೆ ಹೋಲಿಸಿ ಹೆಮ್ಮೆ ಪಡುವವರಿಗೆ ಇಲ್ಲೊಂದು ಖುಷಿಸುದ್ದಿ ಇದೆ: ಪಾಕಿಸ್ತಾನದ ಯಾವ ನಗರವೂ ‘ಶ್ರೇಷ್ಠತಾ ಸೂಚ್ಯಂಕ’ದ 200ರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಲ್ಲ. ಆದರೆ ನಿಲ್ಲಿ; ಈಚಿನ ವರ್ಷಗಳಲ್ಲಿ ಸಂಶೋಧನಾ ಪ್ರಬಂಧಗಳ ಸಂಖ್ಯೆಯಲ್ಲಿ ಅತಿ ತೀವ್ರ ಏರಿಕೆಗೊಳ್ಳುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ನಂತರ ಈಜಿಪ್ಟ್‌, ನಂತರ ಚೀನಾ. ಭಾರತದ ಸ್ಥಾನ ಇನ್ನೂ ಕೆಳಕ್ಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು